Search This Blog

Thursday 12 April 2018

ಸಿಂಧೂ ಕೊಳ್ಳದ ನಾಗರಿಕರು ಮತ್ತು “ವೃಷೋ ಹಿ ಭಗವಾನ್ಧರ್ಮಃ ಖ್ಯಾತೋ ಲೋಕೇಷು ಭಾರತ”


ಸಿಂಧೂ ಸರಸ್ವತೀ ನದೀ ತೀರದ ನಾಗರಿಕ ಜನ ಪುರಾಣಗಳನ್ನು ವೇದಾದಿಗಳ ದೃಷ್ಟಾಂತಗಳನ್ನು ಅರ್ಥವತ್ತಾಗಿ ನಮಗೆ ಕಟ್ಟಿಕೊಡದಿದ್ದರೆ ನಾವಿಂದು ಕಲ್ಪಿತ ಘಟನೆಗಳು ಎಂದು ತಿಪ್ಪೇ ಸಾರಿಸಿ ಬಿಡುತ್ತಿದ್ದೆವೇನೋ. ಆದರೆ ನಮ್ಮಲ್ಲಿ ಅರ್ಥೈಸಿಕೊಳ್ಳುವ ವಿಧಾನ ಮತ್ತು ನಾವು ಯಾವುದೋ ಸಿದ್ಧಾಂತಗಳೆಡೆ ವಾಲಿಕೊಂಡು ನಮ್ಮ ಅಸ್ತಿತ್ವವನ್ನು ಪುರಾತನ ಕಾಲದಿಂದ ಆಧುನಿಕ ಕಾಲಕ್ಕೆ ತರುತ್ತಿದ್ದೇವೆ. ಇನ್ನೂ ಸಹ ನಮ್ಮ ಇತಿಹಾಸದ ಆರಂಭ ಕಾಲದ ನಿರ್ಧಾರವನ್ನು ಹೇಳಲು ನಾಚುತ್ತಿದ್ದೇವೆ.
ವಿ ಹಿ ಸೋತೋರಸೃಕ್ಷತ ನೇಂದ್ರಂ ದೇವಮಮಂಸತ |
ಯತ್ರಾಮದದ್ವೃಷಾಕಪಿರರ್ಯಃ ಪುಷ್ಟೇಷು ಮತ್ಸಖಾ ವಿಶ್ವಸ್ಮಾದಿಂದ್ರ ಉತ್ತರಃ || ಋಗ್ವೇದ 10: 86 : 1
ಇಂದ್ರನಾದ ನಾನು ಸಕಲ ಜಗತ್ತಿಗಿಂತಲೂ ಶ್ರೇಷ್ಟನು, ನನ್ನನ್ನು ಮೀರಿಸಿದವರಿಲ್ಲ. ಆದರೂ ನನ್ನಿಂದಲೇ ಆಜ್ಞಪ್ತರಾದ ಋತ್ವಿಕ್ಕುಗಳು ನನ್ನ ಪುತ್ರನಾದ ವೃಷಾಕಪಿಯು ಮಾಡುತ್ತಿದ್ದ ಯಜ್ಞದಲ್ಲಿ ಸೋಮಾಭಿಷವವನ್ನು ಮಾಡಿದಾಗ ಯಜ್ಞದ ಮುಖ್ಯನಾಯಕನಾದ ನನ್ನನ್ನೇ ಸ್ತುತಿಸಲಿಲ್ಲ. ವೃಷಾಕಪಿಯನ್ನು ಮಾತ್ರ ಸ್ತುತಿಸಿದರು ಇದು ಬಹಳ ಅನುಚಿತವಾದುದು ಎಂದು ಇಂದ್ರನು ವ್ಯಥಿಸಿದ್ದಾನೆ.
ಒಂದಾನೊಂದು ಕಾಲದಲ್ಲಿ ಇಂದ್ರಾಣೀ ದೇವತೆಗಾಗಿ ಸಿದ್ಧ ಮಾಡಿದ್ದ ಹಚಿಸ್ಸನ್ನು ಇಂದ್ರಪುತ್ರನಾದ ವೃಷಾಕಪಿಯ ರಾಜ್ಯದಲ್ಲಿದ್ದ ಒಂದು ಮೃಗವು ಹಾಳು ಮಾಡಿ ಕೆಡಿಸಿತು. ಆ ಸಂದರ್ಭದಲ್ಲಿ ಇಂದ್ರಾಣಿಯು ಇಂದ್ರನನ್ನು ಕುರಿತು ಹೇಳಿರುವುದನ್ನು ಈ ಋಕ್ಕಿನಲ್ಲಿ ಹೇಳಿದೆ. ಯಜ್ಞದಲ್ಲಿ ಸೋಮರಸವನ್ನು ಹಿಂಡುವ ಕಾರ್ಯದಲ್ಲಿ ಪ್ರವೃತ್ತರಾದ ಯಜಮಾನರು ಸೋಮರಸವನ್ನು ಹಿಂಡುವ ಕಾರ್ಯದಲ್ಲಿ ಪ್ರವೃತ್ತರಾದ ಯಜಮಾನರು ಸೋಮರಸವನ್ನು ಹಿಂಡಿದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಒಂದು ದುಷ್ಟ ಪ್ರಾಣಿಯು ಹಿಂಡಿಟ್ಟಿದ್ದ ಸೋಮರಸವನ್ನು ಹಾಳು ಮಾಡಿತು. ಮತ್ತು ಆ ಯಜ್ಞದಲ್ಲಿ ರತ್ವಿಗ್ ಯಜಮಾನರು ನನ್ನ ಪತಿಯನ್ನು ಸ್ತುತಿಸಲೇ ಇಲ್ಲ. ಇದೆಲ್ಲಾ ನಡೆದದ್ದು ವೃಷಾಕಪಿಯ ರಾಜ್ಯದಲ್ಲಿಯೇ. ವೃಷಾಕಪಿಯ ರಾಜ್ಯ ಸುಭಿಕ್ಷದಿಂದ ಸಂಪತ್ಸಮೃದ್ಧಿಯಿಂದ ಕೂಡಿತ್ತು. ಇಂತಹ ವೃಷಾಕಪಿಯು ಇಂದ್ರನಿಗೆ ಆಪ್ತನಾಗಿದ್ದನು ಎಂದು ಹೇಳುವುದಲ್ಲದೇ ಇಂದ್ರನೇ ಸರ್ವ ಶ್ರೇಷ್ಟ ಎಂದು ಬಣ್ಣಿಸುತ್ತದೆ.
ಕಿಮಯಂ ತ್ವಾಂ ವೃಷಾಕಪಿಶ್ಚಕಾರ ಹರಿತೋಮೃಗಃ |
ಯಸ್ಮಾ ಇರಸ್ಯ ಸೀದು ನ್ವ ರ್ಯೋ ವಾ ಪುಷ್ಟಿಮದ್ವಸು ವಿಶ್ವಸ್ಮಾದ್ರಿಂದ್ರ ಉತ್ತರಃ || 10 : 86 : 3
ವೃಷಾಕಪಿಗೆ ನೀನು ಉದಾರತೆಯಿಂದ ದಾನಿಯಾಗಿ ಪುಷ್ಟಿಹೊಂದಿದ ಸಂಪತ್ತನ್ನು ಕೊಟ್ಟೆಯೋ ಹರಿದ್ವರ್ಣದ ಮೃಗರೂಪಿಯಾದ ವೃಷಾಕಪಿಯು ನಿನಗೆ ಒಳ್ಳೆಯದಾದುದೇನನ್ನು ಮಾಡಿದನು . ಎನ್ನುವುದು ಈ ಮಂತ್ರಾರ್ಥ. ಅಲ್ಲಿಗೆ ವೃಷಾಕಪಿ ಎನ್ನುವ ವ್ಯಕ್ತಿ ಮೃಗರೂಪ ಧರಿಸಿದ್ದ ಎನ್ನುವುದು ತಿಳಿದು ಬರುತ್ತದೆ. ಅದನ್ನೇ ಮಹಾಭಾರತದಲ್ಲಿ ವಿಸ್ತೃತವಾಗಿ ಹೇಳಲಾಗಿದೆ. ಅದನ್ನೇ ಈ ಸಿಂಧೂಕೊಳ್ಳದ ಹಲಗೆಯು ಪ್ರತಿಪಾದಿಸುತ್ತದೆ.
ಮಹಾಭಾರತದ ಶಾಂತಿಪರ್ವದ 342ನೇ ಅಧ್ಯಾಯದಲ್ಲಿ ಒಂದು ಮಾತು ಬರುತ್ತದೆ. ಇದನ್ನು ಯಥಾವತ್ತಾಗಿ ಹಲಗೆಗಳಲ್ಲಿ ಬರೆಯಲಾಗಿದೆ
ವೃಷೋ ಹಿ ಭಗವಾನ್ಧರ್ಮಃ ಖ್ಯಾತೋ ಲೋಕೇಷು ಭಾರತ |
ನೈಘಣ್ಟುಕಪದಾಖ್ಯಾನೇ ವಿದ್ಧಿ ಮಾಂ ವೃಷಮುತ್ತಮಮ್ || 88 ||
ಭಗವಂತನಾದ ಧರ್ಮನು ಎಲ್ಲ ಲೋಕಗಳಲ್ಲಿಯೂ ವೃಷನೆಂದು ವಿಖ್ಯಾತನಾಗಿದ್ದಾನೆ. ವೈದಿಕಶಬ್ದಾರ್ಥಬೋಧಕವಾದ ಕೋಶದಲ್ಲಿ ವೃಷಎಂಬ ಪದಕ್ಕೆ ಧರ್ಮವೆಂದೇ ಅರ್ಥಮಾಡಿರುತ್ತಾರೆ. ಆದುದರಿಂದ ಉತ್ತಮ ಧರ್ಮಸ್ವರೂಪನಾದ ನನ್ನನ್ನು ವೃಷನೆಂದು ತಿಳಿ. ಅಂದರೆ ವಿಷ್ಣುವಿನ ಅವತಾರವಾದ ಕೃಷ್ಣನನ್ನು ವೃಷಭೋತ್ತಮನೆಂದು ಭಾವಿಸು ಎನ್ನುವ ಅರ್ಥದೊಂದಿಗೆ ಶ್ರೇಷ್ಟವಾದ ಧರ್ಮದ ಪ್ರತೀಕ ಎನ್ನುವುದಾಗಿ ತಿಳಿ ಎನ್ನುವುದು ಕಂಡು ಬರುತ್ತದೆ. ಕೃಷ್ಣ ಧರ್ಮದ ಪ್ರತೀಕವೂ ಹೌದು ತನ್ನನ್ನು ತಾನು ವೃಷಭೋತ್ತಮನೆಂದು ಕರೆದುಕೊಂಡಿರುವುದೂ ಅವನಲ್ಲಿ ಕಂಡು ಬರುತ್ತದೆ. ವೇದದ ವೃಷ ಅಥವಾ ವೃಷಭ ಎನ್ನುವ ಶಬ್ದಕ್ಕೆ ಇಂದ್ರ ಎನ್ನುವ ಅರ್ಥವಿದೆ. ಅಂದರೆ ವೈದಿಕ ಇಂದ್ರನಿಗೆ ಸಲ್ಲುತ್ತಿದ್ದ ಗೌರವಗಳನ್ನು ಕೃಷ್ಣನಿಗೆ ಕ್ರಮೇಣ ಕೊಟ್ಟು ವಿಷ್ಣು ಮತ್ತು ಕೃಷ್ಣನ ಆರಾಧನೆ ಆ ಪಂಥೀಯರಲ್ಲಿ ಆಗಲೇ ಚಿಗುರೊಡೆಯಿತು.
ಮಹಾಭಾರತದ ವನಪರ್ವ ಅಧ್ಯಾಯ-3 ರಲ್ಲಿ ವೃಷಾ ಕಪಿಯ ಕುರಿತಾಗಿ ಹೇಳುವಾಗ ರೀತಿಯಾಗಿ ಸಂಪತ್ತಿನ ಅಧಿಪತಿ ಎನ್ನಲಾಗಿದೆ.
ತ್ವಂ ಹಂಸಃ ಸವಿತಾ ಭಾನುರಂಶುಮಾಲೀ ವೃಷಾಕಪಿಃ |
ವಿವಸ್ವಾನ್ಮಿಹಿರಃ ಪೂಷಾ ಮಿತ್ರೋ ಧರ್ಮಸ್ತಥೈವ || 61 ||
ಸಹಸ್ರರಶ್ಮಿರಾದಿತ್ಯಸ್ತಪನಸ್ತ್ವಂ ಗವಾಮ್ಪತಿಃ |
ಮಾರ್ತಣ್ಡೋಽರ್ಕೋ ರವಿಃ ಸೂರ್ಯಃ ಶರಣ್ಯೋ ದಿನಕೃತ್ತಥಾ || 62 ||
ದಿವಾಕರಃ ಸಪ್ತಸಪ್ತಿರ್ಧಾಮಕೇಶೀ ವಿರೋಚನಃ |
ಆಶುಗಾಮೀ ತಮೋಘ್ನಶ್ಚ ಹರಿತಾಶ್ವಶ್ಚ ಕೀರ್ತ್ಯಸೇ || 63 ||
ಸಪ್ತಮ್ಯಾಮಥವಾ ಷಷ್ಠ್ಯಾಂ ಭಕ್ತ್ಯಾ ಪೂಜಾಂ ಕರೋತಿ ಯಃ |
ಅನಿರ್ವಿಣ್ಣೋಽನಹಂಕಾರೀ ತಂ ಲಕ್ಷ್ಮೀರ್ಭಜತೇ ನರಮ್ || 64 ||
ಹಂಸ, ಸವಿತಾ, ಭಾನು, ಅಂಶುಮಾಲೀ, ವೃಷಾಕಪಿ, ವಿವಸ್ವಂತ, ಮಿಹಿರ, ಪೂಷಾ, ಮಿತ್ರ, ಧರ್ಮ, ಸಹಸ್ರರಶ್ಮಿ, ಆದಿತ್ಯ, ತಪನ, ಗವಾಂಪತಿ, ಮಾರ್ತಂಡ, ಅರ್ಕ, ರವಿ, ಸೂರ್ಯ, ಶರಣ್ಯ, ದಿನಕೃತ್, ದಿವಾಕರ, ಸಪ್ತಸಪ್ತಿ, ಧಾಮಕೇಶೀ, ವಿರೋಚನ, ಆಶುಗಾಮೀ, ತಮೋಘ್ನ, ಹರಿತಾಶ್ವ ಈ ಪವಿತ್ರನಾಮ ಗಳಿಂದಲೂ ನಿನ್ನನ್ನು ಕೀರ್ತನೆಮಾಡುತ್ತಾರೆ. ಸಪ್ತಮಿಯ ದಿನ ಅಥವಾ ಷಷ್ಠಿಯ ದಿನ ಖೇದರಹಿತನಾಗಿ, ಯಾರು ನಿನ್ನನ್ನು ನಿರಹಂಕಾರದಿಂದ ಭಕ್ತಿಯಿಂದ ಪೂಜಿಸುವರೋ ಅಂತಹವನಲ್ಲಿ ಲಕ್ಷ್ಮಿಯು ನೆಲೆಸಿ ಸಂಪತ್ತು ಕೂಡಿ ಬರುತ್ತದೆ.
ಭೀಷ್ಮಪರ್ವ ಅಧ್ಯಾಯ-34 ರಲ್ಲಿ ಏಕಾದಶ ರುದ್ರರ ಸಾಲಿನಲ್ಲಿ ಸೇರಿಸಲಾಗಿದೆ
"ರುದ್ರಾ ಣಾಂ ಶಂಕರಶ್ಚಾಸ್ಮಿ" ಏಕಾದಶರುದ್ರರು ಅಜೈಕಪಾತ್, ಅಹಿರ್ಬುಧ್ನ್ಯ, ಪಿನಾಕೀ, ಅಪರಾಜಿತ, ಋತ, ಪಿತೃರೂಪ, ತ್ರ್ಯಂಬಕ, ವೃಷಾಕಪಿ, ಶಂಭು, ಹವನ, ಈಶ್ವರ.
ಮಹಾಭಾರತ ದ್ರೋಣಪರ್ವ ಅಧ್ಯಾಯ 202ರಲ್ಲಿ
ಕಪಿಃ ಶ್ರೇಷ್ಠ ಇತಿ ಪ್ರೋಕ್ತೋ ಧರ್ಮಶ್ಚ ವೃಷ ಉಚ್ಯತೇ |
ದೇವದೇವೋ ಭಗವಾನ್ಕೀರ್ತ್ಯತೇಽತೋ ವೃಷಾಕಪಿಃ || 136 ||
ಕಪಿಃ ಎಂದರೆ ಶ್ರೇಷ್ಠ ಎಂಬ ಅರ್ಥವನ್ನು ಹೇಳಲಾಗಿದೆ. ವೃಷಃ ಎಂದರೆ ಧರ್ಮ ಎಂದರ್ಥ. ಶ್ರೇಷ್ಠವಾದ ಧರ್ಮಸ್ವರೂಪನೇ ಭಗವಂತನಾದ ದೇವದೇವನಾದ ಪರಮೇಶ್ವರ. ಆದುದರಿಂದ ವಿಶ್ವೇಶ್ವರನನ್ನು ವೃಷಾಕಪಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಶಾಂತಿಪರ್ವ ಅಧ್ಯಾಯ-43 ರಲ್ಲಿ
ಕೃಷ್ಣಧರ್ಮಸ್ತ್ವಮೇವಾದಿರ್ವೃಷದರ್ಭೋ ವೃಷಾಕಪಿಃ |
ಸಿನ್ಧುರ್ವಿಧರ್ಮಸ್ತ್ರಿಕಕುಸ್ತ್ರಿಧಾಮಾ ತ್ರಿದಿವಾಚ್ಚ್ಯುತಃ || 10 ||
ನೀನು ಕೃಷ್ಣಧರ್ಮನು ಅಥವಾ ಯಜ್ಞಸ್ವರೂಪನು. ಎಲ್ಲಕ್ಕೂ ಮೊದಲಿಗನು ನೀನೇ ಆಗಿರುವೆ. ಇಂದ್ರನ ದರ್ಪವನ್ನು ಮುರಿದ ವೃಷದರ್ಭನೂ ನೀನೇ. ಹರಿ ಮತ್ತು ಹರರೂಪಿಯಾದ ವೃಷಾಕಪಿಯೂ ನೀನೇ ಆಗಿರುವೆ. ಸಮುದ್ರವೂ ನಿನ್ನ ರೂಪವೇ ಆಗಿದೆ. ಪರಮಾತ್ಮನು ನೀನು. ಕರ್ಮಮಾಡಲು ಯೋಗ್ಯವಾದ ಪೂರ್ವೋತ್ತರ ಮತ್ತು ಈಶಾನ್ಯ ದಿಕ್ ಸ್ವರೂಪನಾದ ತ್ರಿಕಕುಭನೂ ನೀನೇ. ಸೂರ್ಯ ಚಂದ್ರಾಗ್ನಿಗಳ ತೇಜಸ್ಸನ್ನು ಹೊಂದಿರುವ ತ್ರಿಧಾಮನಾಗಿರುವೆ. ಅಂತಹ ನೀನು ಸ್ವರ್ಗದಿಂದ ಚ್ಯುತನಾಗಿ ಶ್ರೀಕೃಷ್ಣನ ರೂಪದಲ್ಲಿ ಇಲ್ಲಿ ಅವತರಿಸಿರುವೆ. ಎನ್ನುತ್ತದೆ.
ಅನುಶಾಸನಪರ್ವ ಅಧ್ಯಾಯ-66 ಅಗಸ್ತ್ಯ, ಕಣ್ವ, ಭೃಗು, ಅತ್ರಿ, ವೃಷಾಕಪಿ, ಅಸಿತ, ದೇವಲಇವರೆಲ್ಲರೂ ದೇವತೆಗಳ ಆ ಮಹಾಯಜ್ಞದಲ್ಲಿ ಭಾಗ ವಹಿಸಿದರು. ಎಂದು ಋ‌ಷಿಗಳ ಸಾಲಿನಲ್ಲಿ ಸೇರಿಸಲಾಗಿದೆ.
ಅನುಶಾಸನಪರ್ವ ಅಧ್ಯಾಯ-149ರಲ್ಲಿ ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ | ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಃಸೃತಃ ಎನ್ನುವ ಶ್ಲೋಕ ಬರುತ್ತದೆ. ಇಲ್ಲಿ ಅಜಃ ಎಂದರೆ ಶಂಕರ ಭಾಷ್ಯದಂತೆ ಹುಟ್ಟು ಇಲ್ಲದವನು. ಜನ್ಮವಿಲ್ಲದವನು. ವೃಷಾಕಪಿಃ ಎನ್ನುವುದಕ್ಕೆ ಧರ್ಮಸ್ವರೂಪಿಯು ಮತ್ತು ಯಜ್ಞವರಾಹಸ್ವರೂಪಿಯು ಅಥವಾ ಆದಿತ್ಯಸ್ವರೂಪಿಯು. ವೃಷಸ್ತು ಭಗವಾನ್ಧರ್ಮಃ ಎಂದು ವೃಷಾಕಪಿಶಬ್ದವು ಶಿವ ಮತ್ತು ವಿಷ್ಣು ಇಬ್ಬರಿಗೂ ವಾಚಕವಾಗಿದೆ ಎನ್ನುತ್ತದೆ.
ಹೀಗೇ ವೃಷಾಕಪಿಯು ವೇದಗಳಲ್ಲಿ ಮೃಗರೂಪಿಯಾಗಿ ಕಂಗೊಳಿಸುತ್ತಾನೆ. ಐಶ್ವರ್ಯವಂತ ರಾಜನಾಗುತ್ತಾನೆ. ಪುರಾಣಗಳಲ್ಲಿ ಏಕಾದಶ ರುದ್ರರ ಸ್ಥಾನ ಪಡೆಯುತ್ತಾನೆ ಮತ್ತು ದ್ವಾದಶಾದಿತ್ಯರಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಋಷಿಯಾಗಿಯೂ ಹರಿಹರ ಸ್ವರೂಪಿಯಾಗಿಯೂ ಗೋಚರಿಸುವ ಈತನ ಚಿತ್ರವನ್ನು ವೇದದಲ್ಲಿ ಹೇಳಿರುವಂತೆ ಚಿತ್ರಿಸಿದಂತೆ ಕಾಣಿಸುತ್ತದೆ.
ಇನ್ನೊಂದು ದೃಷ್ಟಾಂತ : ಮಹಾಭಾರತದ ಶಾಂತಿ ಪರ್ವದ 342ನೇ ಅಧ್ಯಾಯದಲ್ಲಿ ಬರುತ್ತದೆ ಧರ್ಮಸ್ವರೂಪನಾದ ನನ್ನನ್ನು ವೃಷನೆಂದು ತಿಳಿ. ಎನ್ನುವ ಮಾತು ಬರುತ್ತದೆ.
ಕಪಿರ್ವರಾಹಃ ಶ್ರೇಷ್ಠಶ್ಚ ಧರ್ಮಶ್ಚ ವೃಷ ಉಚ್ಯತೇ |
ತಸ್ಮಾದ್ವೃಷಾಕಪಿಂ ಪ್ರಾಹ ಕಶ್ಯಪೋ ಮಾಂ ಪ್ರಜಾಪತಿಃ || 89 ||
ಕಪಿಶಬ್ದಕ್ಕೆ ವರಾಹ ಮತ್ತು ಶ್ರೇಷ್ಠಎಂಬ ಅರ್ಥಗಳಿವೆ ಮತ್ತು ಧರ್ಮವನ್ನು ವೃಷವೆಂದು ಕರೆಯುತ್ತಾರೆ. ನಾನು ಧರ್ಮನೂ ಮತ್ತು ಶ್ರೇಷ್ಠವರಾಹಸ್ವರೂಪನೂ ಆಗಿದ್ದೇನೆ. ಈ ಕಾರಣದಿಂದ ಪ್ರಜಾಪತಿಯಾದ ಕಶ್ಯಪನು ನನ್ನನ್ನು ವೃಷಾಕಪಿಎಂದು ಕರೆದನು. ಎಂದು ಹೇಳಿರುವುದು ಗಮನಿಸಿದರೆ ಅತ್ಯಂತ ಪ್ರಾಚೀನವಾದ ನೈಘಂಟುಕ ಪದಾಖ್ಯಾನ ಕೋಶದ ಕರ್ತೃ ಇರಬಹುದು ಅನ್ನಿಸುತ್ತದೆ. ಇಲ್ಲಿ ಕಪಿ ಮತ್ತು ವೃಷಾಕಪಿ ಎನ್ನುವುದು ಋಗ್ವೇದದಲ್ಲಿ ಬರತಕ್ಕ ಪದಗಳು. ಮೇಲಿನ ಶ್ಲೋಕವನ್ನು ಗಮನಿಸಿದರೆ ವೈದಿಕ ಕೃಷ್ಣ ವಿಷ್ಣುವಿಗೆ ಹೇಳಲಾಗಿದೆ ಅನ್ನಿಸುತ್ತದೆ. ವೃಷಾಕಪಿಯೇ ಕೃಷ್ಣ ಮತ್ತು ವಿಷ್ಣು ಎಂದು ಆ ಕಾಲದಲ್ಲಿಯೇ ಭಾವಿಸಿದ್ದರು ಅನ್ನಿಸುತ್ತದೆ.
ಇಲ್ಲಿ ಕಪಿರ್ವರಾಹಃ ಎನ್ನುವ ಶಬ್ಪ ಬಳಕೆಯಾಗಿದೆ. ಅದನ್ನು ಮುಂದಕ್ಕೆ ನೋಡೋಣ :
ಏಕಶೃಙ್ಗಃ ಪುರಾ ಭೂತ್ವಾ ವರಾಹೋ ನನ್ದಿವರ್ಧನಃ |
ಇಮಾಂ ಚೋದ್ಧೃತವಾನ್ಭೂಮಿಮೇಕಶೃಙ್ಗಸ್ತತೋ ಹ್ಯಹಮ್ || 92 ||
ಹಿಂದೆ ನಾನು ಒಂದು ಕೋಡುಳ್ಳ ವರಾಹನಾಗಿ ಅವತರಿಸಿ ಪ್ರಳಯಕಾಲದಲ್ಲಿ ಈ ಭೂಮಿಯನ್ನು ನೀರಿನಿಂದ ಮೇಲೆತ್ತಿ ಜಗತ್ತಿನ ಆನಂದವನ್ನು ಹೆಚ್ಚಿಸಿದೆನು. ಈ ಕಾರಣದಿಂದ ನನ್ನನ್ನು ಏಕಶೃಂಗನೆಂದು ಕರೆಯುತ್ತಾರೆ. ಹೀಗೇ ಸಿಂಧೂ ಕೊಳ್ಳದ ಜನರು ಚಿತ್ರಗಳ ಮೂಲಕ ಇಡೀ ಪುರಾಣದ ಕಥೆಗಳನ್ನು ನಮಗೆ ಕಟ್ಟಿಕೊಟ್ಟದ್ದಂತೂ ನಿಜ.

No comments:

Post a Comment