Search This Blog

Friday 27 April 2018

ಲಂಚ, ಭೃಷ್ಟಾಚಾರ, ಎಲ್ಲವೂ ಪರಂಪರಾನುಗತವಾದ ಬಳುವಳಿಯೇ ಹೊರತು ಈಗಿನದ್ದಲ್ಲ - ಕ್ಷೇಮೇಂದ್ರ.(ಬನವಾಸಿ ಕದಂಬರ ಸಾಹಿತ್ಯಿಕ ಸಾಂಸ್ಕೃತಿಕ ಕೊಂಡಿ ಕ್ಷೇಮೇಂದ್ರ)



ಮುನಿಮತ ಮೀಮಾಂಸಾ ಎನ್ನುವುದು ಹತ್ತು ಹನ್ನೊಂದನೇ ಶತಮಾನದ ವಿಶಿಷ್ಟಗ್ರಂಥ ಎಂದು ಹೇಳಬಹುದು. ಇದರಲ್ಲಿ ಪ್ರಾಚೀನ ಋಷಿಗಳೆಲ್ಲರ ಜನ್ಮಜಾಲಾಡಲಾಗಿದೆ. ಪ್ರಾಚೀನ ಋಷಿುಗಳ ದೂಷಣೆಯೇ ಈ ಗ್ರಂಥದ ಮುಖ್ಯಾಂಶ. ಈ ಗ್ರಂಥದಲ್ಲಿ ಬರುವ ಕೆಲವು ವರ್ಣನೆಗಳು ಭಟ್ಟನಾರಾಯಣನ ವೇಣಿಸಂಹಾರವನ್ನೂ, ಭವಭೂತಿಯ ಶೈಲಿಯನ್ನು ಹೋಲುತ್ತದೆ. ಶಬ್ದ, ಅಲಂಕಾರ ಉಪಮಾನೋಪಮೇಯಗಳು ಇವನಿಗೆ ಕರತಲಾಮಲಕವಾಗಿದ್ದು ಯಾವುದನ್ನೂ ಹೇಗೆ ವರ್ಣಿಸಿದರೂ ಅದು ಈಗಷ್ಟೇ ಸಂಭವಿಸಿತೇನೋ ಎನ್ನುವಷ್ಟು ಮತ್ತು ತಾನೇ ಪ್ರತ್ಯಕ್ಷ ನೋಡಿದಷ್ಟು ಚೆನ್ನಾಗಿ ವರ್ಣಿಸುವ ಕಲೆ ಕ್ಷೇಮೇಂದ್ರನಿಗೆ ಒಲಿದಿತ್ತು. ಮೂಲ ವಿಷಯಕ್ಕೆ ಚ್ಯುತು ಬರದಂತೆ ವರ್ಣಿಸುವ ಕುಶಲತೆ ಅವನಿಗಿತ್ತು. ತನ್ನ ಬಾಲ್ಯದಲ್ಲಿಯೇ ಕವಿಯಾಗುವುದಕ್ಕೆ ಬೇಕಾದ ವಿದ್ಯೆ ಪಡೆದುದಾಗಿ ಸರಸ್ವತೀ ಕಂಠಾಭರಣದಲ್ಲಿ ಹೇಳಿಕೊಂಡಿದ್ದಾನೆ. ಕವಿತೆಯೂ ಪ್ರಕೃತಿಯನ್ನು ಹೋಲುತ್ತದೆ. ಅದಕ್ಕೆ ವಿದ್ಯೆ ಕೇವಲ ಸಹಾಯಕ ಮಾತ್ರ ಎಂದು ಅದೇ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ನೀರಸವಾದ ತರ್ಕ ಮತ್ತು ವ್ಯಾಕರಣಗಳನ್ನು ಈತ ಹೀಯಾಳಿಸುತ್ತಿದ್ದ. ಸರಳವಾದ ಹೃದಯ ವೈಶಾಲ್ಯತೆ, ಸೌಂದರ್ಯದ ಆಸ್ವಾದನೆಯಲ್ಲಿ ಸ್ವಾಭಾವಿಕವಾದ ಆಸಕ್ತಿ ಇರದೇ ಕವಿತೆಯ ಮಾಧುರ್ಯದ ಆಸ್ವಾದನೆ ಯಾರಿಗೆ ಹಿಡಿಸುವುದಿಲ್ಲವೋ ಅಂತವರು ತರ್ಕ ವ್ಯಾಕರಣ ಎಂದು ಅರಚುತ್ತಿರಲಿ ಎಂದು ಹೇಳಿದ್ದಾನೆ. ಅಂತವರ ವಿದ್ಯೆಯು ಕುರುಡನು ಸೂರ್ಯನನ್ನು ನೋಡಿದಷ್ಟೇ ಎಂದು ಹೇಳಿದ್ದಾನೆ. ಈತ ಚಿಕ ಚಿಕ್ಕ ಗ್ರಂಥಗಳನ್ನು ಬರೆದು ದೂಷಣೆ ಮಾಡುವುದರಲ್ಲಿಯೇ ನಿಸ್ಸೀಮನಾಗಿದ್ದನು. ಇಂತಹ ಚಿಕ್ಕ ಗ್ರಂಥಗಳಲ್ಲಿ ದರ್ಪಣ ವಿಲಾಸ ಪ್ರಾಮುಖ್ಯವನ್ನು ಪಡೆಯುತ್ತದೆ. ತನ್ನ ಕಾಲದಲ್ಲಿ ಬಂದ ಅವ್ಯವಹಾರಗಳನ್ನೆಲ್ಲಾ ಖಂಡಿಸಿದ್ದಾನೆ. ಲೋಕಾನುಭವವನ್ನು ತಿಳಿಸುವ ಇವನ 'ಕಲಾವಿಲಾಸ' ಎನ್ನುವ ಗ್ರಂಥದಲ್ಲಿ ಮೋಹ, ಡಂಭಾಚಾರ, ಕಾಮ ಜೀವನ, ಮೊದಲಾದ ಕೆಟ್ತ ಲಕ್ಷಣಗಳನ್ನು ವಿವರಿಸುತ್ತಾ ಹತ್ತನೇ ಅಧ್ಯಾಯದಲ್ಲಿ ರಾಜನ ಆಸ್ಥಾನದಲ್ಲಿದ್ದ ಕರಣಿಕರ ದುರ್ವ್ಯವಹಾರವನ್ನು ವರ್ಣಿಸಿದ್ದಾನೆ. ಅವರ ಲಂಚಕೋರತನ, ಸುಳ್ಳು ಹೇಳುವುದು ಕಪಟವ್ಯವಹಾರ, ಮೋಸ, ಅಕ್ಷರಸ್ಖಾಲಿತ್ಯಮಾಡಿ ಮೋಸಗೊಳಿಸುವುದು. ಬೇಕೆಂತಲೇ ಬರಹದಲ್ಲಿ ಕಳ್ಳತನಮಾಡುವುದು, ಜನರು ತೆರಿಗೆ ಪಾವತಿಸಿದ್ದರಲ್ಲಿ ಸಹಿತ ಎನ್ನುವಲ್ಲಿ ರಹಿತ ಎಂದುಇ ಬರೆದು ರಹಿತ ಇರುವಲ್ಲಿ ಸಹಿತ ಎಂದು ಅಕ್ಷರಗಳನ್ನು ತಿದ್ದುವುದು. ಕಡತಗಳನ್ನು ಸುಟ್ಟುಹಾಕುವುದು, ಅನೇಕವೇಳೆ ಹಿರಿಯ ಅಧಿಕಾರಿಗಳಿಗೆ ವೇತನವೇ ಪಾವತಿಯಾಗದಂತೆ ಮಾಡುವುದು. ಇಂತವುಗಳನ್ನು ತಾನೇ ಅನುಭವಿಸಿದಂತೆ ವರ್ಣಿಸಿರುವನು. 
ಹೌದು ಈ ವಿಷಯಗಳೆಲ್ಲಾ ಸಮಕಾಲೀನ ಪ್ರಪಂಚದಲ್ಲಿ ಇಂದು ನಾವು ಈಗ ಘಟಿಸಿದೆ ಮತ್ತು ಈಗ ನಾವು ಲೋಕ ಕೆಟ್ಟಿದೆ ಲಂಚಗುಳಿತನ ಭ್ರಷ್ಟಾಚಾರ ಎಂದೆಲ್ಲಾ ಬೊಬ್ಬಿಡುತ್ತೇವೆ . ಆದರೆ ಇವು ಎಲ್ಲಾ ಕಾಲದಲ್ಲೂ ನಡೆದುಕೊಂಡು ಬಂದ ವ್ಯವಸ್ಥೆ ಎನ್ನಬಹುದು. 
ಈತ ತನ್ನ ಕಾಲಕ್ಕು ಮೊದಲಿನ ಕವಿಗಳ ಬರಹಗಳನ್ನು ವಿಶ್ಲೇಷಿಸಿದ್ದಾನೆ. ಔಚಿತ್ಯ ವಿಚಾರ ಚರ್ಚಾ ಎನ್ನುವ ಗ್ರಂಥ ಅದಕ್ಕಾಗಿಯೇ ಮೀಸಲಿಟ್ಟಿದ್ದಾನೆ. ಈಗ ಉಪಲಬ್ದವಿರದ ಗ್ರಂಥಗಳ ಹೆಸರು ಮತ್ತು ಅದರಲ್ಲಿನ ತಿರುಳು. ಈತನ ಈ ಗ್ರಂಥದಿಂದ ತಿಳಿಯುತ್ತದೆ. ಇದು ಆತ ನಮಗೆ ಕೊಟ್ಟ ಬಹುದೊಡ್ಡ ಉಡುಗೊರೆ. ಆತ ಔಚಿತ್ಯ ವಿಚಾರ ಚರ್ಚಾ ಎನ್ನುವ ಗ್ರಂಥದಲ್ಲಿ ಕರ್ನಾಟಕದ ಕುರಿತಾಗಿ ಬರೆಯುತ್ತಾ ಕದಂಬರ ರಾಜ್ಯದ ಔನ್ನತ್ಯ ವಿವರಿಸುತ್ತಾನೆ. ಅದನ್ನು ನಾನಿಲ್ಲಿ ಹೇಳುವುದಿಲ್ಲ. ಆದರೆ ಅದ್ಭುತ ವಿವರಣೆ ನೀಡುತ್ತಾನೆ. ಅದಕ್ಕಾಗಿ ಕನ್ನದದ ಜನ ಕ್ಷೇಮೇಂದ್ರನಿಗೆ ಶರಣೆಲ್ಲಲೇ ಬೇಕು. ಔಚಿತ್ಯವಿಚಾರಚರ್ಚೆಯಲ್ಲಿ ಕ್ಷೇಮೇಂದ್ರ 'ಔಚಿತ್ಯಂ ರಸಸಿದ್ಧಸ್ಯ ಸ್ಥಿರಂ ಕಾವ್ಯಸ್ಯ ಜೀವಿತಂ' ಎಂಬ ಔಚಿತ್ಯ ಸಂಪ್ರದಾಯವನ್ನು ಪ್ರತಿಪಾದಿಸಿದ್ದಾನೆ. ಕಾವ್ಯಕ್ಕೆ ಉತ್ಕರ್ಷವುಂಟಾಗುವುದು ಅದರಲ್ಲಿನ ಪದ, ವಾಕ್ಯ, ಅರ್ಥ, ಗುಣ ಅಲಂಕಾರ, ರಸ ಮುಂತಾದವುಗಳಲ್ಲೆಲ್ಲ ಇರುವ ಔಚಿತ್ಯದಿಂದಲೇ ಎಂದು ಸಮರ್ಥಿಸಿ ಪ್ರಸಿದ್ಧ ಕವಿಗಳ ಪ್ರಯೋಗಗಳಲ್ಲೂ ಈತ ದೋಷಗಳನ್ನು ತೋರಿಸಿದ್ದಾನೆ. ಉದಾಹರಣೆಗಳನ್ನು ತನ್ನ ಮತ್ತು ಇತರರ ಕೃತಿಗಳಿಂದ ಆರಿಸಿಕೊಟ್ಟಿದ್ದಾನೆ. ಔಚಿತ್ಯ ಸಂಪ್ರದಾಯಕ್ಕೆ ಸಿದ್ಧಾಂತಸ್ವರೂಪವನ್ನು ಕೊಟ್ಟ ಕೀರ್ತಿ ಕ್ಷೇಮೇಂದ್ರನಿಗೆ ಮೀಸಲು. ಕುಂತೇಶ್ವರದೌತ್ಯವೆಂಬುದು ಕಾಳಿದಾಸ ವಿರಚಿತವೆಂದು ಈ ಗ್ರಂಥದಲ್ಲಿ ಹೇಳಿದೆ.
“ಕವಿಕಂಠಾಭರಣ”ಗಳಲ್ಲಿ ಕ್ಷೇಮೇಂದ್ರನೇ ಹೇಳಿಕೊಂಡಿರುವಂತೆ ಇವನ ತಂದೆ ಪ್ರಕಾಶೇಂದ್ರ, ತಾತ ಸಿಂಧು, ಸಹೋದರ ಚಕ್ರಪಾಲ. ಕ್ಷೇಮೇಂದ್ರನ ಮಗ ಸೋಮೇಂದ್ರ ತನ್ನ ತಂದೆ ರಚಿಸಿದ್ದ ಅವದಾನ ಕಲ್ಪತೆಗೆ 108ನೆಯ ಪಲ್ಲವವನ್ನು ಬರೆದು ಸೇರಿಸಿ ಉಪೋದ್ಘಾತದಲ್ಲಿ ತನ್ನ ವಂಶ ವೃಕ್ಷವನ್ನು ಈ ರೀತಿ ಕೊಟ್ಟಿದ್ದಾನೆ.
ಬೃಹತ್ಕಥಾಮಂಜರಿಯಲ್ಲಿ ಕ್ಷೇಮೇಂದ್ರನೇ ಹೇಳಿಕೊಳ್ಳುವಂತೆ ತನ್ನ ತಂದೆಯಾದ ಪ್ರಕಾಶೇಂದ್ರನು ದಾನಶೀಲನೆಂದೂ ಅವನ ಮನೆ ದೊಡ್ದ ಅನ್ನಸತ್ರವೇ ಆಗಿತ್ತೆಂದೂ ಆತ ದೇವದ್ವಿಜಮಠಾಧಿಗಳಿಗಾಗಿ ಕೋಟಿಗಟ್ಟಲೆ ಹಣವನ್ನು ನೀಡುತ್ತಿದ್ದುದಾಗಿಯೂ ಆತ ಶೈವನಾಗಿದ್ದು ಅನೇಕ ಶಿವಬಿಂಬಗಳನ್ನು ಶಿವಾಲಯಗಳಲ್ಲಿ ಪ್ರತಿಷ್ಠಿಸಿದುದಲ್ಲದೆ ಅಂಥ ಒಂದು ಬಿಂಬವನ್ನು ಪೂಜಿಸಿ ಅದನ್ನೇ ತಬ್ಬಿಕೊಂಡು ಪ್ರಾಣ ನೀಗಿದುದಾಗಿಯೂ ಹೇಳಿಕೊಳ್ಳುತ್ತಾನೆ. ಇದರಿಂದ ಕ್ಷೇಮೇಂದ್ರನೂ ಸಹ ಶೈವನೆಂದಂತಾಯಿತು. ಇವನ ಗುರುವಾದ ಅಭಿನವಗುಪ್ತನಂತೂ ಶೈವನೇ. ಆತ ವಾಸವಾಗಿದ್ದುದೂ ಶೈವಮಂಡಲದಲ್ಲೇ. ಹೀಗಿದ್ದರೂ ಕಾಲಕ್ರಮದಲ್ಲಿ ಆತ ವೈಷ್ಣವನಾಗಿಬಿಟ್ಟ. ಇದಕ್ಕೆ ಕಾರಣ ಪರಮ ಭಾಗವತನಾಗಿದ್ದ ಸೋಮಪಾದನ ಅನುಗ್ರಹವೇ ಎಂದು ಕ್ಷೇಮೇಂದ್ರನೇ ತನ್ನ ಬೃಹತ್ ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ. 
"ತಸ್ಯಾತ್ಮಜಃ ಸರ್ವಮನೀಷಿ ಶಿಷ್ಯಃ ಶ್ರೀವ್ಯಾಸದಾಸಾಪರಪುಣ್ಯನಾಮಾ" 
ಎಂಬಲ್ಲಿ ಕ್ಷೇಮೇಂದ್ರ ತಾನು ಸರ್ವಮನೀಷಿಯ ಶಿಷ್ಯನೆಂದೂ ತನಗೆ ವ್ಯಾಸದಾಸ ಎಂಬ ಮತ್ತೊಂದು ಪುಣ್ಯಕರವಾದ ಹೆಸರಿತ್ತೆಂದು ತಿಳಿಸಿರುವುದರಿಂದ ಈ ಸರ್ವಮನೀಷಿಯೇ ಸೋಮಪಾದಾಚಾರ್ಯನಿರಬೇಕೆಂದೂ ಕ್ಷೇಮೇಂದ್ರ ವೈಷ್ಣವನಾದ ಮೇಲೆ ಭಾರತಮಂಜರಿಯನ್ನು ರಚಿಸಿದ್ದಿರಬಹುದು ಆಮೇಲೆ ವ್ಯಾಸದಾಸನೆಂಬ ಹೆಸರನ್ನು ಪಡೆದಿರಬೇಕೆಂದೂ ಭಾವಿಸಬಹುದಾಗಿದೆ ಆದರೆ ಭಾರತಕಥಾ ಮಂಜರಿ ಈತನೇ ರಚಿಸಿದ ಬಗ್ಗೆ ಗೊಂದಲಗಳಿವೆ. 
ಕ್ಷೇಮೇಂದ್ರನಿಂದ ರಚಿತವಾದುವೆಂದು ಈ ವರೆಗೆ ತಿಳಿದು ಬಂದಿರುವ ಗ್ರಂಥಗಳು 35. ಆ ಪೈಕಿ ಉಪಲಬ್ಧವಾಗಿರುವುವು 19. 
ಕ್ಷೇಮೇಂದ್ರನ ಮೂರು ಮಂಜರಿಗಳೂ ಸುಪ್ರಸಿದ್ಧವಾಗಿವೆ. ಸುವಿಸ್ತಾರವಾದ ರಾಮಾಯಣ ಮಹಾಭಾರತಗಳನ್ನು, ಮೂಲದಲ್ಲಿರುವ ಯಾವ ಘಟನೆಯನ್ನೇ ಆಗಲಿ ಉಪಾಖ್ಯಾನವನ್ನೇ ಆಗಲಿ ಬಿಡದಂತೆ, ಪದ್ಯಾತ್ಮಕವಾಗಿಯೇ ಸಂಗ್ರಹಿಸಿರುವುದು ಈ ಮಂಜರಿಗಳ ವೈಶಿಷ್ಟ್ಯ. ಇದರಿಂದ ಆ ಮೂಲಗ್ರಂಥಗಳು ಕ್ಷೇಮೇಂದ್ರನ ಕಾಲದಲ್ಲಿ ಯಾವ ಸ್ವರೂಪದಲ್ಲಿದ್ದುವೆಂಬುದನ್ನು ತಿಳಿಯಲವಕಾಶವಾಗಿದೆ. ಕ್ಷೇಮೇಂದ್ರನ ಬೃಹತ್ಕಥಾಮಂಜರಿ ಗುಣಾಢ್ಯನ ಬೃಹತ್ಕಥೆಯ ಸಂಗ್ರಹರೂಪ. ಇದರಲ್ಲಿ 19 ಲಂಬಕಗಳಿವೆ. ಇದರ ಮೊದಲ ಐದು ಲಂಬಕಗಳೂ ಸೋಮದೇವನ ಕಥಾಸರಿತ್ಸಾಗರದ ಕ್ರಮದಲ್ಲೇ ಇದ್ದರೂ ಅಲ್ಲಿಂದ ಮುಂದಕ್ಕೆ ಲಂಬಕಗಳ ಅನುಪೂರ್ವಿ, ವಿಷಯ ಮುಂತಾದವುಗಳಲ್ಲಿ ಗಣನೀಯವಾದ ವ್ಯತ್ಯಾಸಗಳಿರುವುದರಿಂದ ಇಬ್ಬರೂ ಮೂಲ ಬೃಹತ್ಕಥೆಯನ್ನೇ ಸಂಗ್ರಹಿಸಿದ್ದಾರೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಕಾಶ್ಮೀರದ ಜನಿಸಿದ ಕವಿಗಳಲ್ಲಿ ಈತ ಅಗ್ರಗಣ್ಯನೆನಿಸಿ ಅನೇಕ ವಿದ್ಯಾಪಾರಂಗತನಾಗಿದ್ದು ಸಂಸ್ಕೃತ ಸಾಹಿತ್ಯದ ವಿಭಿನ್ನ ಕ್ಷೇತ್ರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಈತನ ಕಾಲ ಸುಮಾರು 990 ರಿಂದ 1070 ಎನ್ನಲಾಗುತ್ತಿದೆ. ವಿದ್ಯಾವಿವೃತ್ತಿ - ಪ್ರತ್ಯಭಿಜ್ಞಾ ವಿವೃತಿ ವಿಮರ್ಶಿನಿ ರಚಿಸಿದ ಅಭಿನವಗುಪ್ತನಲ್ಲಿ ತಾನು ಸಾಹಿತ್ಯ ಶಾಸ್ತ್ರವನ್ನು ಕಲಿತುದಾಗಿ ತನ್ನ ಬೃಹತ್ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ. ಅಭಿನವಗುಪ್ತ ಪ್ರತ್ಯಭಿಜ್ಞಾದರ್ಶನ ವ್ಯಾಖ್ಯಾನ ಬರೆದುದು 1014ರಲ್ಲಿ. ಈ ಆಧಾರದ ಮೇಲೆ ಕ್ಷೇಮೇಂದ್ರ ಸುಮಾರು 990ರಲ್ಲಿ ಹುಟ್ಟಿದವನಾಗಿರಬೇಕೆಂದು ಭಾವಿಸಲಾಗುತ್ತದೆ. ಕಾಶ್ಮೀರದಲ್ಲಿ ಆಳಿದ ರಾಜಾ ಅನಂತ ಎನ್ನುವವನ (1022-1063) ಆಸ್ಥಾನದಲ್ಲಿ ತಾನು ಕವಿಯಾಗಿದ್ದುದಾಗಿಯೂ ತನ್ನ ಹಲವಾರು ಕೃತಿಗಳ ಸಮಾಪ್ತಿವಾಕ್ಯಗಳಲ್ಲಿ ಈತನೇ ಹೇಳಿಕೊಂಡಿರುವುದಲ್ಲದೆ ಬೃಹತ್ಕಥಾಮಂಜರಿ ಸಮಯಮಾತೃಕಾ ಮತ್ತು ದಶಾವತಾರ ಚರಿತಗಳಲ್ಲಿ ತಾನು ಅವನ್ನು ರಚಿಸಿದ ಕಾಲವನ್ನೂ ಬರೆದಿಟ್ಟಿದ್ದಾನೆ. ಅದರಂತೆ ಈಗ ಉಪಲಬ್ಧವಾಗಿರುವ ಕೃತಿಗಳಲ್ಲಿ ಬೃಹತ್ಕಥಾಮಂಜರಿ (1037) ಮೊದಮೊದಲು ರಚಿತವಾದುದೆಂದು ರಾಜ ಅನಂತನ ಮಗ ಕಲಶನ ಕಾಲದಲ್ಲಿ ದಶಾವತಾರಚರಿತ (1066) ರಚಿತವಾದುದೆಂದೂ ಹೇಳಿಕೊಂಡಿದ್ದಾನೆ. ಆದ್ದರಿಂದ ಕ್ಷೇಮೇಂದ್ರ ಸುಮಾರು 1070 ರ ವೇಳೆಗೆ ಕಾಲವಾದನೆಂದು ನಂಬಲಾಗಿದೆ.
ಕ್ಷೇಮೇಂದ್ರನ ಕಾಲ ಬನವಾಸಿ ಕದಂಬರ ಕಾಲಕ್ಕಿಂತ ಸುಮಾರು 800 ವರ್ಷಗಳ ತರುವಾಯ. ಆದರೆ ಆತ ಬನವಾಸಿ ಕದಂಬರ ಕಾಲಕ್ಕೆ ಬೇಕಾದವನಾಗುತ್ತಾನೆ. ಅದನ್ನು ಸಧ್ಯದಲ್ಲಿಯೇ ಬರೆಯುತ್ತೇನೆ.
ಇದು ತಾಳಗುಂದದ ಸ್ತಂಭ ಶಾಸನದ ಸಾಲು ಕುಬ್ಜ ಕವಿಯು ರಚಿಸಿದ್ದು. ಈ ಸಾಲಿಗೂ ಕ್ಷೇಮೇಂದ್ರನ ಉಲ್ಲೇಖಕ್ಕೂ ನೇರ ಸಂಬಂಧವಿದೆ.

No comments:

Post a Comment