Search This Blog

Monday 23 April 2018

ವಿಶ್ವಾಮಿತ್ರ - ನಾವಾಜಿನಂ ವಾಜಿನಾ ಹಾಸಯಂತಿ ನಗರ್ದಭಂ ಪುರೋ ಅಶ್ವಾನ್ನಯಂತಿ


ಮಹಾಭಾರತದ ಆದಿಪರ್ವ 71ನೇ ಅಧ್ಯಾಯದಲ್ಲಿ ವಿಶ್ವಾಮಿತ್ರನ ತಪಸ್ಸನ್ನು ಭಂಗ ಪಡಿಸಲು ಇಂದ್ರ ಮೇನಕೆಯನ್ನು ಕಳುಹಿಸುವ ಪ್ರಸಂಗ ಬಂದಾಗ ಅಲ್ಲಿ ಮೇನಕೆ ಇಂದ್ರನಲ್ಲಿ ಹೇಳುವ ಮಾತು :
ವಿಶ್ವಾಮಿತ್ರರು ತಮ್ಮ ಕೋಪದ ಮತ್ತು ತಪಸ್ಸಿನ ಬಲದಿಂದಾಗಿ ವಸಿಷ್ಠರನ್ನೂ ಅವರ್ ಪುತ್ರರಿಂದ ವಿಯೋಗಗೊಳಿಸಿದರು. ಕ್ಷತ್ರಿಯರಾಗಿದ್ದ ವಿಶ್ವಾಮಿತ್ರರು ತಪಸ್ಸಿನ ಬಲದಿಂದಲೇ ಬ್ರಾಹ್ಮಣರಾದರು. ಶೌಚ ಮುಖಮಾರ್ಜನ ಸ್ನಾನಗಳಿಗಾಗಿಯೇ ವಿಶ್ವಾಮಿತ್ರರು ದುರ್ಗಮವಾದ ಒಂದು ನದಿಯನ್ನೇ ಸೃಷ್ಟಿಮಾಡಿರುವರು. ತುಂಬಿ ಹರಿಯುತ್ತಿರುವ ಆ ನದಿಕೌಶಿಕೀಎಂದೇ ಪ್ರಸಿದ್ಧಿಹೊಂದಿದೆ. ಹಿಂದೊಮ್ಮೆ ಬಹಳ ಕಷ್ಟಪರಿಸ್ಥಿತಿಯು ಒದಗಿದ್ದಾಗ ( ಕ್ಷಾಮಕಾಲದಲ್ಲಿ ) ವಿಶ್ವಾಮಿತ್ರರ ಹೆಂಡತಿಯನ್ನು ರಾಜರ್ಷಿ ಮತ್ತು ಧರ್ಮಾತ್ಮನಾದ ಮತಂಗ ನೆಂಬ ರಾಜನು ಆಶ್ರಯಕೊಟ್ಟು ಸಂರಕ್ಷಿಸಿದ್ದನು. ಮುಂದೆ ಮತಂಗನು ಬ್ರಾಹ್ಮಣನೊಬ್ಬನ ಶಾಪದಿಂದಾಗಿ ವ್ಯಾಧನಾದನು. ದುರ್ಭಿಕ್ಷಕಾಲವು ಕಳೆದ ನಂತರ ವಿಶ್ವಾಮಿತ್ರರು ಆಶ್ರಮಕ್ಕೆ ಹಿಂದಿರುಗಿ ಆಶ್ರಮದ ಸಮೀಪದಲ್ಲಿದ್ದ ನದಿಗೆಪಾರಾಎಂದು ಹೆಸರಿಟ್ಟರು. ವ್ಯಾಧನಾಗಿದ್ದ ಮತಂಗನಿಂದಲೇ ಯಾಗವನ್ನೂ ಮಾಡಿಸಿದರು. ವಿಶ್ವಾಮಿತ್ರರ ಭಯದಿಂದಾಗಿ ಮತಂಗನೆನ್ನುವ ವ್ಯಾಧನು ಮಾಡಿದ ಯಜ್ಞದಲ್ಲಿಯೇ ಸೋಮಪಾನಮಾಡಲು ನೀನು ಹೋಗಲಿಲ್ಲವೇ, ಎಂದು ಇಂದ್ರನನ್ನು ಕೇಳುತ್ತಾಳೆ.
ಮತ್ತೊಂದು ನಿದರ್ಶನವನ್ನೂ ಹೇಳುತ್ತಾಳೆ. ಹಿಂದೊಮ್ಮೆ ತ್ರಿಶಂಕುರಾಜನು ಗುರುಶಾಪಗ್ರಸ್ತನಾಗಿದ್ದನು. ಅವನು ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕೆಂದಾಶಿಸಿ ವಿಶ್ವಾಮಿತ್ರರ ಮರೆಹೊಕ್ಕನು. ತ್ರಿಶಂಕುವು ಗುರುಶಾಪದಿಂದ ದೂಷಿತನಾಗಿರುವ ವಿಷಯವು ವಿಶ್ವಾಮಿತ್ರರಿಗೆ ತಿಳಿದಿತ್ತು. ಆದರೂ ಮಹಾತಪಸ್ವಿಗಳಾದ ವಿಶ್ವಾಮಿತ್ರರು ತ್ರಿಶಂಕುವಿಗೆ ಅಭಯಪ್ರದಾನಮಾಡಿ ಅವನಿಂದ ಯಜ್ಞಮಾಡಿಸಿ ಸ್ವರ್ಗಕ್ಕೆ ಕಳುಹಿಸಿದರು. ನೀನವನನ್ನು ಸ್ವರ್ಗದಿಂದ ಕೆಳಕ್ಕೆ ತಳ್ಳಿಬಿಟ್ಟಾಗ ಕುಪಿತರಾದ ವಿಶ್ವಾಮಿತ್ರರು ತಮ್ಮ ತಪಃಪ್ರಭಾವದಿಂದ ಬೇರೆಯ ಸ್ವರ್ಗವನ್ನೇ ನಿರ್ಮಿಸಿದರು. ಶ್ರವಣನಕ್ಷತ್ರವನ್ನು ಮೊದಲುಮಾಡಿ ನಕ್ಷತ್ರಗಳ ರಾಶಿಯನ್ನೇ ಸೃಷ್ಟಿಸಿದರು. ಅವರ ಅನೇಕಸಾಹಸಕಾರ್ಯಗಳಲ್ಲಿ ಕೆಲವನ್ನು ಮಾತ್ರವೇ ನಾನಿಲ್ಲಿ ಉದಾಹರಿಸಿದ್ದೇನೆ. ಅಂತಹವರ ಬಳಿಗೆ ಅವರು ಮಾಡುತ್ತಿರುವ ತಪಸ್ಸಿಗೆ ವಿಘ್ನವುಂಟುಮಾಡಲು ನನ್ನನ್ನು ಹೋಗುವಂತೆ ಹೇಳುತ್ತಿರುವೆ. ಅವರ ವಿಷಯವಾಗಿ ನಿನ್ನ ಮನಸ್ಸಿನಲ್ಲಿರುವ ಭಯವು ನನ್ನ ಮನಸ್ಸಿನಲ್ಲಿಯೂ ಇರುವುದು. ಎನ್ನುತ್ತಾಳೆ.
ಇದೇ ವಿಶ್ವಾಮಿತ್ರ, ಋಗ್ವೇದದ ಮೂರನೇ ಮಂಡಲದ ದೃಷ್ಟಾರರಾಗಿ ಅನೇಕ ಕಡೆ ತಮ್ಮ ಹೆಸರನ್ನು ಪ್ರಕಟಗೊಳಿಸುತ್ತಾರೆ.
ತ್ವಾಂ ಸುತಸ್ಯ ಪೀತಯೇ ಪ್ರತ್ನಮಿಂದ್ರ ಹವಾಮಹೇ|
ಕುಶಿಕಾಸೋ ಅವಸ್ಯವಃ || ೩ : ೪೨ : ೯ ||
ಇಂದ್ರನೇ ನಿನ್ನ ರಕ್ಷಣೆಯನ್ನು ಪಡೆಯಲಿಚ್ಚಿಸುವವರೂ, ಕುಶಿಕ ವಂಶದಲ್ಲಿ ಹುಟ್ಟಿದವರಾದ ನಾವು ತಯಾರಿಸಿದ ಸೋಮರಸವನ್ನು ಸೇವಿಸಲಿಕ್ಕೆ ಹಿರಿಯನಾದ ನಿನ್ನನ್ನು ಆಹ್ವಾನಿಸುತ್ತಿದ್ದೇನೆ. ಎನ್ನುವುದು ಈ ಋಕ್ಕಿಗೆ ಭಾಷ್ಯಕಾರರು ಅರ್ಥವನ್ನು ನೀಡಿದ್ದಾರೆ.

ಇಲ್ಲಿ ನಾನು ಕುಶಿಕಾಸೋ ಎನ್ನುವ ಶಬ್ದಕ್ಕೆ ಅರ್ಥವನ್ನು ಹುಡುಕುತ್ತಾ "ಕ್ರಂಶತೇರ್ವಾ ಸ್ಯಾತ್ ಪ್ರಕಾಶಯತಿ" ಎಂದು ನಿರುಕ್ತಕಾರ ಯಾಸ್ಕರು ಹೇಳಿದ್ದಾರೆ. ಕುಶಿಕ ಎನ್ನುವ ಹೆಸರಿನ ರಾಜನೊಬ್ಬ ಬಹಳ ಹಿಂದೆ ಇದ್ದ. ಅವನ ವಂಶಸ್ಥರೆಲ್ಲಾ ಕುಶಿಕ ಎನ್ನುವ ಹೆಸರನ್ನು ಪಡೆದಿದ್ದಾರೆ. ಕುಶಿಕಾಃ ಅಥವಾ ಕುಶಿಕಾಸಃ ಎನ್ನುವುದಾಗಿಯೂ ಕರೆಯಲಾಗಿದೆ. ಕುಶಿಕ ಶಬ್ದವು ಕ್ರಂಶತಿ ಶಬ್ದದ ವ್ಯುತ್ಪತ್ತಿಯಾಗಿದ್ದು ಶಬ್ದ ಮಾಡುವುದು ಎನ್ನುವ ಅರ್ಥವನ್ನು ಸೂಚಿಸುತ್ತದೆ. ವಾಕ್ಯಗಳನ್ನು ಉಚ್ಚರಿಸಿ ಸ್ತೋತ್ರಮಾಡುವುದನ್ನು ಕ್ರಂಶತಿ ಎನ್ನಲಾಗಿದೆ. ಕುಶಿಕಾಃ ಎನ್ನುವುದಕ್ಕೆ ಉಚ್ಚ ಸ್ವರದಲ್ಲಿ ಗಟ್ಟಿಯಾಗಿ ಮಂತ್ರಗಳನ್ನು ಉಚ್ಚರಿಸುವ ಋತ್ವಿಕ್ ಸಮೂಹವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಯಜ್ಞಾದಿ ಕರ್ಮಗಳನ್ನು ಮಾಡುವವನೂ, ಧರ್ಮಗಳನ್ನು ಪಾಲಿಸುವವನೂ ಎನ್ನುವ ಅರ್ಥವೂ ಇದೆ. ಸಜ್ಜನರಿಗೆ ದಾನಮಾಡುವವರನ್ನೂ ಕುಶಿಕಾ ಎಂದು ಕರೆಯಲಾಗಿದೆ.
ಕುಶಿಕ ಎನ್ನುವ ಹೆಸರಿನ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ಮಗನಿದ್ದನು ಅವನ ಹೆಸರೂ ಸಹ ಕುಶಿಕನೇ. ಈ ಕುಶಿಕನಿಗೆ ಆ ಹೆಸರು ಹೇಗೆ ಬಂತು ಎಂದರೆ ಇವನು ಸದಾ ಕಾಲ ಇನ್ನೊಬ್ಬರ ಹಿತವನ್ನೇ ಬಯಸುತ್ತಾ ಎಲ್ಲರಿಗೂ ಒಳ್ಳೆಯದನ್ನು ಮಾಡು ಎನ್ನುತ್ತಿದ್ದುದರಿಂದ ಆ ಶಬ್ದಾರ್ಥಕವಾಗಿ "ಕ್ರೋಶತಿ" ಎನ್ನುವ ಧಾತುವಿನಿಂದ ಕುಶಿಕ ಎನ್ನುವ ಹೆಸರು ನಿಷ್ಪನ್ನವಾಯಿತು. ಮುಂದೆ ಇವರನ್ನೆಲ್ಲಾ ಕುಶಿಕರೆನ್ನುವ ಹೆಸರಿನಿಂದಲೇ ಕರೆಯಲಾಯಿತು. ವಿಶ್ವಾಮಿತ್ರ ಸಹ ಇದೇ ಕುಶಿಕ ವಂಶಸ್ಥನೇ ಆಗಿದ್ದನು. ಋಗ್ವೇದದ ಅನೇಕ ಕಡೆ ಕುಶಿಕಾಃ ಎನ್ನುವುದಾಗಿ ಬಂದಿದೆ. ಐತರೇಯ ಬ್ರಾಹ್ಮಣದ ೭ : ೧೮ ರಲ್ಲಿನ ಶುನಶ್ಯೇಫನ ಕತೆಯಲ್ಲಿಯೂ ಕುಶಿಕನ ಹೆಸರು ಉಲ್ಲೇಖವಾಗುತ್ತದೆ. ಸಾಂಖ್ಯಾಯನ ಶ್ರೌತ ಸೂತ್ರದಲ್ಲಿ ಇವರು ಪುರೋಹಿತ ವಂಶಸ್ಥರು. ತತ್ಕಾಲೀನ ಸಮಾಜದಲ್ಲಿ ಭರತ ಜನಾಂಗ ಎನ್ನುವ ಒಂದು ಜನಾಂಗ ಇದ್ದು ಆ ಜನಾಂಗದ ರಾಜರಿಗೆಲ್ಲಾ ಇವರು ಪುರೋಹಿತರಾಗಿದ್ದರು ಎಂದು ತಿಳಿದು ಬರುತ್ತದೆ. ಇಂದ್ರನಿಗೆ ಅತ್ಯಂತ ಆಪ್ತರಾಗಿದ್ದರಿಂದ ಇಂದ್ರನ ಆಸರೆಯಲ್ಲಿದ್ದರು ಎಂದು ಋಗ್ವೇದದ ಅನೇಕ ಕಡೆ ಸಿಗುತ್ತದೆ. ಇಂದ್ರನನ್ನೂ ಕುಶಿಕ ಅಥವಾ ಕೌಶಿಕ ಎಂದಿರುವುದೂ ಕಾಣ ಸಿಗುತ್ತದೆ.
ಕುಶಿಕಸ್ತೌಷೀರಥೇಂದ್ರಸ್ತುಲ್ಯಂ ಪುತ್ರಮಿಚ್ಚನ್ ಬ್ರಹ್ಮಚರ್ಯಂ ಚಚಾರ |
ತಸ್ಯೇಂದ್ರ ಏವ ಗಾಧೀ ಪುತ್ರೋ ಜಜ್ಞೇ ||
ಇಲ್ಲಿ ಇನ್ನೊಂದು ಕಥೆ ಬರುತ್ತದೆ.
ಇಷೀರಥ ಎನ್ನುವ ರಾಜನಿಗೆ ಕುಶಿಕ ಎನ್ನುವ ಮಗನಿದ್ದನು. ಅವನು ತನಗೆ ಇಂದ್ರ ಸಮಾನನಾದ ಮಗ ಬೇಕು ಎನ್ನುವ ಆಶೆಯಿಂದ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದನು. ಆಗ ಇಂದ್ರನು ಗಾಧಿ ಎನ್ನುವ ಹೆಸರಿನಿಂದ ಅವನಿಗೆ ಮಗನಾಗಿ ಹುಟ್ಟಿದನು. ವಿಶ್ವಾಮಿತ್ರ ಋಷಿಯು ಗಾಧಿರಾಜನ ಮಗ. ಈತ ಋಗ್ವೇದದ ಮೂರನೇ ಮಂಡಲದ ದೃಷ್ಟಾರನು. ಇದೇ ಕಾರಣಕ್ಕೆ ಕುಶಿಕರಿಗೂ ಇಂದ್ರನಿಗೂ ನೇರವಾದ ಸಂಬಂಧವಿದೆ ಮತ್ತು ಇಂದ್ರನನ್ನು ವಿಶೇಷವಾಗಿ ಆರಾಧಿಸಿಕೊಂಡು ಬಂದಿರುವುದಕ್ಕೆ ಸಂಬಂಧವನ್ನು ಇದೇ ಕಾರಣಕ್ಕೆ ಹೇಳಲಾಗುತ್ತದೆ.
ಪುರಾಣದಲ್ಲಿ ಗಮನಿಸಿದರೆ ಚಂದ್ರವಂಶದಲ್ಲಿ ಕುಶಿಕ ರಾಜ ವಂಶದಲ್ಲಿ ಜನಿಸಿದ ಗಾಧೀ ರಾಜನ ಮಗನು ವಿಶ್ವಾಮಿತ್ರ. ಜನ್ಮತಃ ಕ್ಷತ್ರಿಯತ್ವ ಹೊಂದಿದರೂ ಆಮೇಲೆ ತನ್ನ ತಪಸ್ಸಿನ ಮಹಿಮೆಯಿಂದ ಬ್ರಾಹ್ಮಣನಾದ. ಈತನ ಕುರಿತಾಗಿ ಅನೇಕ ಕಥೆಗಳು ಬಂದು ಹೋಗುತ್ತವೆ. ಈತನ ವಂಶಸ್ಥರೇ ಆದ ದೇವರಾತ, ಬಲ ಮಧುಚ್ಛಂದ, ಅಘಮರ್ಷಣ, ಅಷ್ಟಕ ಲೋಹಿತ ಶಾಲಂಕಾಯನ ಮುಂತಾದವರೆಲ್ಲರೂ ಮಂತ್ರದೃಷ್ಟಾರರಾಗಿದ್ದಾರೆ.
ನ ಸಾಯಕಸ್ಯ ಚಿಕಿತೇ ಜನಾಸೋ ಲೋಧಂ ನಯಂತಿ ಪಶುಮನ್ಯಮಾನಾಃ |
ನಾವಾಜಿನಂ ವಾಜಿನಾ ಹಾಸಯಂತಿ ನಗರ್ದಭಂ ಪುರೋ ಅಶ್ವಾನ್ನಯಂತಿ || ೩: ೫೩ : ೨೩
ಮೂಢ ಜನರೇ ನಾಶಕಾರಕವಾದ ಈ ವಿಶ್ವಾಮಿತ್ರನ ಮಂತ್ರ ಸಾಮರ್ಥ್ಯವನ್ನು ನೀವು ತಿಳಿಯದಾದಿರಿ. ತಾನು ಕೈಗೊಂಡ ತಪಸ್ಸು ವ್ಯರ್ಥವಾಗಬಾರದೆಂದು ಮೌನವನ್ನಾಶ್ರಯಿಸಿದ್ದ ಋಷಿಯನ್ನು ಪಶುವಿಗೆ ಸಮಾನವಾಗಿ ತಿಳಿದುಕೊಂಡ ಈ ಮನುಷ್ಯರು ಋಷಿಯನ್ನು ತಮ್ಮ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವಿವೇಕಿಯಾದ ಪುರುಷನನ್ನು ಪ್ರಾಜ್ಞರು ಅವಹೇಳನ ಮಾಡುವುದಿಲ್ಲ. ಕತ್ತೆಯನ್ನು ಶ್ರೇಷ್ಠವಾದ ಕುದುರೆಯ ಮುಂಭಾಗದಲ್ಲಿಡುವುದೂ ಇಲ್ಲ.
ಹಿಂದೆ ವಿಶ್ವಾಮಿತ್ರನು ತನ್ನ ತಪಸ್ಸಿನ ಸಾಮರ್ಥ್ಯವು ವ್ಯರ್ಥವಾಗಬಾರದೆನ್ನುವ ಉದ್ದೇಶದಿಂದ ಮೌನಕ್ಕೆ ಶರಣಾಗಿದ್ದ. ಮೌನವ್ರತದಿಂದ ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಆದ್ದರಿಂದ ತನ್ನ ದ್ವೇಷಿಗಳಿಗೂ ಶಾಪಕೊಡದೇ ಸುಮ್ಮನಿದ್ದನು. ಇದನ್ನು ಗಮನಿಸಿದ ವಶಿಷ್ಠನ ಕಡೆಯ ಜನಗಳು ಈ ವಿಶ್ವಾಮಿತ್ರನು ಏನನ್ನೂ ತಿಳಿಯದ ಪಶುವಿನಂತಿದ್ದಾನೆಂದು ವಿಶ್ವಾಮಿತ್ರನಿಗೆ ಹಗ್ಗ ಬಿಗಿದು ಹೊತ್ತುಕೊಂಡು ಹೋಗುತ್ತಿದ್ದರು ಆಸಮಯದಲ್ಲಿ ವಿಶ್ವಾಮಿತ್ರನು ಜನರನ್ನು ಕುರಿತು ಹೇಳಿದ ಮಾತು.
ಇಮೇ ಭೋಜಾ ಅಂಗಿರಸೋ ವಿರೂಪಾ ದಿವಸ್ಪುತ್ರಾಸೋ ಅಸುರಸ್ಯಾ ವೀರಾಃ |
ವಿಶ್ವಾಮಿತ್ರಾಯ ದದಾತೋ ಮಘಾನಿ ಸಹಸ್ರಸಾವೇ ಪ್ರ ತಿರಂತ ಆಯುಃ || ೩ : ೫೩ :೭ ||
ಇಂದ್ರನೇ, ಇಲ್ಲಿ ಯಜ್ಞವನ್ನು ಮಾಡಿಸುತ್ತಿರುವವರು ಸುದಾಸನೆಂಬ ಕ್ಷತ್ರಿಯನ ಮಕ್ಕಳು. ಬೇರೆ ಬೇರೆ ರೂಪವನ್ನು ಧರಿಸಿರುವ ಮೇಧಾ ತಿಥಿ ಮೊದಲಾದ ಅಂಗೀರಸ್ಸುಗಳು ಋತ್ವಿಜರಾಗಿದ್ದಾರೆ. ರುದ್ರಪುತ್ರರೂ ಇದ್ದಾರೆ. ಈ ಯಜ್ಞದಲ್ಲಿ ವಿಶ್ವಾಮಿತ್ರನಾದ ನನಗೆ ಧನ ಸಂಪತ್ತಿನೊಂದಿಗೆ ಆಯುಷ್ಯವನ್ನೂ ವೃದ್ಧಿಗೊಳಿಸು ಎನ್ನುವ ಭಾವಾರ್ಥ ಈ ಋಕ್ಕಿನಲ್ಲಿದೆ.
ಮಹಾ ಋಷಿರ್ದೇವಜಾ ದೇವಜಾತೋಸ್ತಭ್ನಾತ್ಸಿಂಧುಮರ್ಣಮ ನೃ ಚಕ್ಷಾಃ |
ವಿಶ್ವಾಮಿತ್ರೋ ಯದವಹತ್ಸುದಾಸಮಪ್ರಿಯಾಯತ ಕುಶಿಕೇಭಿರಿಂದ್ರಃ || ೩ : ೫೩ : ೯
ಸುದಾಸನು ವಿಪಾಶ ಮತ್ತು ಶತದ್ರು ನದಿಯ ಮಧ್ಯಭಾಗದಲ್ಲಿ ತನ್ನ ಪುರೋಹಿತನಾದ ವಿಶ್ವಾಮಿತ್ರನಿಂದ ಯಾಗ ಮಾಡಿಸಿದ ವರ್ಣನೆ ಸಿಗುತ್ತದೆ.
ವಿಶ್ವಾಮಿತ್ರನನ್ನು ಹೊಗಳುವ ಈ ಋಕ್ಕು ತಪಸ್ಸಿನಿಂದ ಅತ್ಯಮೋಘವಾದ ಸಾಮರ್ಥ್ಯವನ್ನು ಹೊಂದಿದ್ದಾನೆ. ಅತೀಂದ್ರಿಯ ದೃಷ್ಟಿಯನ್ನು ಹೊಂದಿರುವಾತನೂ, ತೇಜೋರಾಶಿಯನ್ನು ಹೊಂದಿ ಪ್ರಕಾಶಮಾನನಾಗಿದ್ದವನೂ, ರೂಪವೂ ಸಹ ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಅಧ್ವರ್ಯುಗಳೇ ಮೊದಲಾದ ಋತ್ವಿಗ್ರೂಪ ಉಳ್ಳವನೂ ಆದ ವಿಶ್ವಾಮಿತ್ರನು ವಿಪಾಶಾ ಮತ್ತು ಶುತುದ್ರೂ ನದಿಗಳ ಉಕ್ಕಿ ಹರಿಯುತ್ತಿದ್ದ ಪ್ರವಾಹವನ್ನು ನಿಲ್ಲಿಸಿದನು. ಎನ್ನುತ್ತದೆ.
ವಿಶ್ವಾಮಿತ್ರಸ್ಯ ರಕ್ಷತಿ ಬ್ರಹ್ಮೇದಂ ಭಾರತಂ ಜನಂ || ೩ : ೫೩ : ೧೨,
ವಿಶ್ವಾಮಿತ್ರನು ಇಂದ್ರನನ್ನು ಸ್ತುತಿ ಮಾಡಿರುವುದರಿಂದ ಭಾರತ ಜನ ಅಥವಾ ಭರತಕುಲದ ಜನರನ್ನೆಲ್ಲಾ ಕಷ್ಟಗಳಿಂದ ರಕ್ಷಿಸುತ್ತದೆ. ಈ ಭಾರತಜನ ಎನ್ನುವುದು ಆ ಕಾಲಘಟ್ಟದ ಪ್ರಸಿದ್ಧ ಜನಾಂಗ ಇದ್ದಿರಬೇಕು. ಅನೇಕ ಋಕ್ಕುಗಳಲ್ಲಿ ವಿಶ್ವಾಮಿತ್ರನ ಜೊತೆಗೆ ಸೇರಿಕೊಂಡಿದ್ದು ಕಾಣಸಿಗುತ್ತದೆ.
ಮುಂದಿನ ಮಂತ್ರದಲ್ಲಿ "ವಿಶ್ವಾಮಿತ್ರಾ ಅರಾಸತ" ಎನ್ನುವುದಾಗಿ ವಿಶ್ವಾಮಿತ್ರನಿಗೆ ಬಹುವಚನ ಕೊಟ್ಟಿರುವುದು ವಿಶ್ವಮಿತ್ರನ ಸಂಬಂಧಿಕರು ಎಂದು ಭಾಷ್ಯಕಾರರು ಅರ್ಥೈಸಿರುವುದು ಕಂಡು ಬರುತ್ತದೆ.
ಅಗ್ನಿಶ್ರಿಯೋ ಮರುತೋ ವಿಶ್ವ ಕೃಷ್ಟಯ ಆ ತ್ವೇಷಮುಗ್ರಮವ ಈಮಹೇ ವಯಂ |
ತೇ ಸ್ವಾನಿನೋ ರುದ್ರಿಯಾ ವರ್ಷನಿರ್ಣಿಜಃ ಸಿಂಹಾ ನ ಹೇಷಕ್ರತವಃ ಸುದಾನವಃ || ೩ : ೨೬ :೨
ಮರುತ್ತುಗಳು(ಗಾಳಿಯು) ವಿದ್ಯುತ್ತಿನ ರೂಪದ ಅಗ್ನಿಯನ್ನು ಆಶ್ರಯಿಸಿ ಪ್ರಕಾಶಿಸುತ್ತವೆ. ವಿಶ್ವದ ವೃಕ್ಷಾದಿ ಪದಾರ್ಥಗಲನ್ನೆಲ್ಲಾ ಆಕರ್ಶಿಸಿ ಚಲಿಸುವಂತೆ ಮಾಡುತ್ತವೆ. ಕುಶಿಕವಂಶದಿಂದ ಬಂದ ನಾವು ಉಗ್ರ ಸ್ವರೂಪವನ್ನು ಹೊಂದಿದ ಆ ಮರುತ್ತುಗಳ ಪ್ರಭಾವವನ್ನು ರಕ್ಷಣೆಗಾಗಿ ಪೂರ್ಣವಾಗಿ ಪ್ರಾರ್ಥಿಸುತ್ತೇವೆ. ರುದ್ರಪುತ್ರರೂ ವೃಷ್ಟ್ಯಾತ್ಮಕ ಸ್ವರೂಪವುಳ್ಳವರೂ ಗಭೀರ ಶಬ್ದವನ್ನು ಮಾಡುವವರೂ ಆದ ಸಿಂಹದಂತೆ ಘರ್ಜನೆಯನ್ನು ಮಾಡುತ್ತ ಉದಕದ ಸ್ವರೂಪವಾಗುತ್ತಾರೆ.
ನಾನೂ ವಿಶ್ವಾಮಿತ್ರಗೋತ್ರ ದೇವರಾತ ಪ್ರವರದವನು..................

No comments:

Post a Comment