Search This Blog

Saturday 7 April 2018

ಬ್ರಹ್ಮಸ್ವಂತು ವಿಷಂ ಘೋರಂ ಮತ್ತು “ಮಠಾಧಿಪತಿ”ಯಾದವನು “ನಾಯಿ” ಯಾಗುತ್ತಾನೆ.


ರಾಮಾಯಣದ ಉತ್ತರಕಾಂಡದ ಪ್ರಕ್ಷಿಪ್ತ ಸರ್ಗದಲ್ಲಿ ಒಂದು ಕಥೆ ಬರುತ್ತದೆ. ರಾಮ ಪ್ರತಿ ದಿನವೂ ಸಿಂಹಾಸನದಲ್ಲಿ ಕುಳಿತು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುವ ಪರಿಪಾಠ ನಡೆದುಕೊಂಡು ಬಂದಿರುತ್ತದೆ. ಹೀಗೆ ಸಾಗುತ್ತಿರಲು ಎಂದಿನಂತೆ ಲಕ್ಷ್ಮಣನಿಗೆ ಅರಮನೆಯ ಹೊರಗೆ ಹೋಗಿ ಯಾರಾದರೂ ದರ್ಶನಾರ್ಥಿಗಳು ಬಂದಿದ್ದರೆ ಒಳಗೆ ಕಳುಹಿಸು ಎನ್ನುತ್ತಾನೆ. ಲಕ್ಷ್ಮಣನಿಗೆ ಆ ದಿನ ಯಾರೂ ಕಾಣಿಸುವುದಿಲ್ಲ. ಆದರೆ ಒಂದು ನಾಯಿ ಮಾತ್ರ ಕೂಗಿಕೊಳ್ಳುತ್ತದೆ. ಆಗ ನಾಯಿಯನ್ನು ಲಕ್ಷ್ಮಣ ಪ್ರಶ್ನಿಸುತ್ತಾನೆ. ನಿನ್ನ ನಿವೇದನೆಯನ್ನು ನನ್ನಲ್ಲಿಯೇ ಹೇಳು ನಾನು ಒಳಗೆ ಹೋಗಿ ತಿಳಿಸುವೆ ಎನ್ನುತ್ತಾನೆ. " ಕಿಂ ತೇ ಕಾರ್ಯಂ ಮಹಾಭಾಗ ಬ್ರೂಹಿ ವಿಸ್ರಬ್ಧ ಮಾನಸಃ "“ಮಹಾನುಭಾವನೇ ! ನಿನಗೆ ಯಾವ ಕಾರ್ಯವಾಗಬೇಕಾಗಿದೆಯೆಂಬುದನ್ನು ಸ್ವಲ್ಪವೂ ಭಯಪಡದೇ ಹೇಳು.” ಲಕ್ಷ್ಮಣನ ಮಾತನ್ನು ಕೇಳಿ ನಾಯಿಯು ಎಲ್ಲರಿಗೂ ಅಭಯವನ್ನು ನೀಡುವ ಶ್ರೀರಾಮನ ಎದುರಿನಲ್ಲಿಯೇ ನಾನು ನನಗೆ ಆಗ ಬೇಕಾಗಿರುವ ಕಾರ್ಯವನ್ನು ನಿವೇದಿಸಿಕೊಳ್ಳುತ್ತೇನೆ.” ಎಂದಿತು ನಾಯಿಯ ಮಾತನ್ನು ಕೇಳಿ ಲಕ್ಷ್ಮಣನು ಶ್ರೀರಾಮನಿಗೆ ವಿಷಯವನ್ನು ತಿಳಿಸಿದನು. ರಾಮನು ಆ ನಾಯಿಯನ್ನು ಒಲಬಿಡಲು ಆಜ್ಞಾಪಿಸಿದನು. ಲಕ್ಷ್ಮಣನು ನಾಯಿಗೆ ಒಳಬರಲು ಹೇಳಿದಾಗ ನಾಯಿಯು
ದೇವಾಗಾರೇ ನೃಪಾಗಾರೇ ದ್ವಿಜವೇಶ್ಮಸು ವೈ ತಥಾ |
ವಹ್ನಿಃ ಶತಕ್ರತುಶ್ಚೈವ ಸೂರ್ಯೋ ವಾಯುಶ್ಚ ತಿಷ್ಠತಿ |
ನಾತ್ರ ಯೋಗ್ಯಾಸ್ತು ಸೌಮಿತ್ರೇ ಯೋನೀನಾಮಧಮಾ ವಯಮ್ || “ಲಕ್ಷ್ಮಣ, ದೇವಸ್ಥಾನದಲ್ಲಿ, ರಾಜಭವನದಲ್ಲಿ, ಬ್ರಾಹ್ಮಣರ ಮನೆಗಳಲ್ಲಿ ಅಗ್ನಿ ಇಂದ್ರಸೂರ್ಯವಾಯುಗಳ ಸಾನ್ನಿಧ್ಯವು ಯಾವಾಗಲೂ ಇರುತ್ತದೆ. ಆದುದರಿಂದ ನೀಚ ಜನ್ಮದಲ್ಲಿ ಹುಟ್ಟಿರುವ ನಾವು ಅಂತಹ ಸ್ಥಳಗಳಿಗೆ ಪ್ರವೇಶಿಸಲು ಯೋಗ್ಯರಲ್ಲ. ಎಂದು ಹೇಳುತ್ತದೆ. ಆದರೆ ರಾಮನ ಆಜ್ಞೆಯಾಗಿಯಾಗಿದೆ ಆದುದರಿಂದ ನಾಯಿಯು ಒಳ ಬರುತ್ತದೆ.
ರಾಮನು ನಾಯಿಯಲ್ಲಿ "ನೀನು ಯಾವ ವಿಷಯವನ್ನು ಹೇಳಬೇಕೆಂದಿರುವೆಯೋ ಅದನ್ನು ಯಾವ ಭಯವೂ ಇಲ್ಲದೇ ನನ್ನ ಮುಂದೆ ಹೇಳಬಹುದು.” ಸಮಯದಲ್ಲಿ ನಾಯಿಯ ತಲೆಯು ಗಾಯದಿಂದ ರಕ್ತ ಸುರಿಯುತ್ತಿತ್ತು. ಸಿಂಹಾಸನದಲ್ಲಿ ಕುಳಿತಿದ್ದ ಶ್ರೀರಾಮನನ್ನು ನೋಡಿ ಹೇಳತೊಡಗಿತು. ನಾಯಿಯು ಇಲ್ಲಿ ಅನೇಕ ಧರ್ಮ ಸೂಕ್ಷ್ಮಗಳನ್ನು ಹೇಳಿದೆ. ಅದು ಇಲ್ಲಿ ನನ್ನ ಬರಹವನ್ನು ದೀರ್ಘಗೊಳಿಸುತ್ತದೆ.
ಪ್ರಭುವೇ ! ಬ್ರಾಹ್ಮಣ ಸರ್ವಾರ್ಥಸಿದ್ಧನೆಂಬ ಭಿಕ್ಷುವೊಬ್ಬನು ವಾಸವಾಗಿದ್ದಾನೆ. ಅವನು ಯಾವ ಅಪರಾಧವನ್ನೂ ಮಾಡದ ನನ್ನನ್ನು ನಿಷ್ಕಾರಣವಾಗಿ ಹೊಡೆದನು.ಅದನ್ನು ಕೇಳಿದೊಡನೆಯೇ ರಾಮನು ದ್ವಾರಪಾಲಕನನ್ನು ಕಳುಹಿಸಿ ಸರ್ವಾರ್ಥಸಿದ್ಧನೆಂಬ ವಿದ್ವಾಂಸನಾದ ಬ್ರಾಹ್ಮಣಭಿಕ್ಷುವನ್ನು ಕರೆಸಿದನು. ಶ್ರೀರಾಮನನ್ನು ನೋಡಿದೊಡನೆಯೇ ಮಹಾತೇಜಸ್ವಿಯಾದ ಬ್ರಾಹ್ಮಣನು ಶ್ರೀರಾಮ ನನ್ನಿಂದ ನಿನಗೆ ಯಾವ ಕಾರ್ಯವಾಗ ಬೇಕಾಗಿದೆ ಎನ್ನುತ್ತಾನೆ. ಭಿಕ್ಷುವು ಹೀಗೆ ಪ್ರಶ್ನಿಸಲು ಶ್ರೀರಾಮನು ಭಿಕ್ಷುವಿಗೆ ಹೇಳಿದನು : “ಬ್ರಾಹ್ಮಣ ! ನೀನು ನಾಯಿಯನ್ನು ಹೊಡೆದಿರುವೆ. ಈ ನಾಯಿ ಮಾಡಿದ ಅಪರಾಧವೇನು ? ಯಾಕೆ ಇದನ್ನು ದಂಡದಿಂದ ಹೊಡೆದೆ ಎನ್ನುತ್ತಾನೆ.
ಅವಧ್ಯೋ ಬ್ರಾಹ್ಮಣೋ ದಣ್ಡೈರಿತಿ ಶಾಸ್ತ್ರವಿದೋ ವಿದುಃ || ರಾಮ, ಬ್ರಾಹ್ಮಣನು ದಂಡದ ಮೂಲಕ ವಧಿಸಲ್ಪಡತಕ್ಕವನಲ್ಲ. ಬ್ರಾಹ್ಮಣನಿಗೆ ಮರಣದಂಡನೆಯಿಲ್ಲ ಎಂಬುದಾಗಿ ಶಾಸ್ತ್ರಗಳನ್ನು ತಿಳಿದ ವಿದ್ವಾಂಸರು ತಿಳಿಯುತ್ತಾರೆ. ರಾಮಾ, ರಾಜನಾದ ನೀನೇ ಎಲ್ಲದಕ್ಕೂ ಆಜ್ಞೆ ಮಾಡತಕ್ಕವನು ಎಂದರು. ಋಷಿ-ಮುನಿಗಳೆಲ್ಲರೂ ಹೀಗೆ ಹೇಳುವುದನ್ನು ಕೇಳಿಸಿಕೊಂಡ ನಾಯಿಯು ಶ್ರೀರಾಮನಿಗೆ ಹೇಳಿತು : ರಾಮಾ ! ನೀನು ನನ್ನ ವಿಷಯದಲ್ಲಿ ಸುಪ್ರೀತನಾಗಿದ್ದರೆ, ನನಗೇನಾದರೂ ನೀನು ವರಕೊಡುವುದಾಗಿದ್ದರೆ ನನ್ನ ಈ ಮಾತನ್ನು ಕೇಳು. ನನ್ನ ಪ್ರಾರ್ಥನೆಯಂತೆ ಬ್ರಾಹ್ಮಣನನ್ನು ಒಂದು ಮಠದ ಕುಲಪತಿಯನ್ನಾಗಿ ಮಾಡು. ಕಾಲಂಜರನಗರದಲ್ಲಿ ಇವನಿಗೆ ಒಂದು ಮಠದ ಆಧಿಪತ್ಯವನ್ನು ವಹಿಸಿಕೊಡು.ನಾಯಿಯ ಮಾತನ್ನು ಕೇಳಿದೊಡನೆಯೇ ಶ್ರೀರಾಮನು ಬ್ರಾಹ್ಮಣನನ್ನು ಒಂದು ಮಠದ ಕುಲಪತಿಯ ಸ್ಥಾನದಲ್ಲಿ ಅಭಿಷೇಕಮಾಡಿ ಕಳುಹಿಸಿ ಕೊಟ್ಟನು. ಕುಲಪತಿಯ ಪದವಿಯಿಂದ ಸತ್ಕೃತನಾದ ಬ್ರಾಹ್ಮಣನು ಸಮ್ತೋಷದಿಂದ ಆನೆಯ ಮೇಲೆ ಕುಳಿತು ಹೊರಟುಹೋದನು. ಸಮಯದಲ್ಲಿ ಸಭಾಮಂದಿರದಲ್ಲಿದ್ದ ಸಚಿವರು ನಸುನಗುತ್ತಾ ಶ್ರೀರಾಮನಿಗೆ ಹೇಳಿದರು
ವರೋಽಯಂ ದತ್ತ ಏತಸ್ಯ ನಾಯಂ ಶಾಪೋ ಮಹಾದ್ಯುತೇ || “ಶ್ರೀರಾಮನೇ ! ಬ್ರಾಹ್ಮಣನಿಗೆ ನೀನು ಕೊಟ್ಟುದು ವರವೇ ಹೊರತು ಶಿಕ್ಷೆಯಲ್ಲ ಎಂದರು. ಸಚಿವರು ಹೀಗೆ ಹೇಳಲು ಶ್ರೀರಾಮನು
ಯೂಯಂ ಗತಿತತ್ತ್ವ ಜ್ಞಾಃ ಶ್ವಾ ವೈ ಜಾನಾತಿ ಕಾರಣಮ್ || “ಮಹಾ ಮಂತ್ರಿಗಳೇ ಕರ್ಮಗಳ ಗತಿಯು ಹೇಗೆ ಸಾಗುವುದೆಂಬ ರಹಸ್ಯವನ್ನು ನೀವು ತಿಳಿದಿಲ್ಲ. ಆದರೆ ನಾಯಿಯು ಅದನ್ನು ಅರಿತು ಕೊಂಡಿದೆ. ಹೀಗೆ ಸಚಿವರಿಗೆ ಹೇಳಿದ ಶ್ರೀರಾಮನು ಜೀವನಗತಿಯ ರಹಸ್ಯವನ್ನು ತಿಳಿಸುವಂತೆ ನಾಯಿಗೆ ಹೇಳಿದನು. ನಾಯಿಯು ಹೇಳತೊಡಗಿತು: “ಹೇ ರಾಮ ನಾನು ಹಿಂದಿನ ಜನ್ಮದಲ್ಲಿ ನಾನು ಕಾಲಂಜರಮಠದ ಅಧಿಪತಿಯೇ ಆಗಿದ್ದೆನು. ಅಲ್ಲಿ ನಾನು ಯಜ್ಞಶಿಷ್ಟವಾದ ಅನ್ನವನ್ನೇ ಭೋಜನ ಮಾಡುತ್ತಿದ್ದೆನು. ದೇವ ಬ್ರಾಹ್ಮಣರ ಪೂಜೆಯಲ್ಲಿ ನಿರತನಾಗಿದ್ದೆನು. ದಾಸ ದಾಸಿಯರಿಗೆ ಅವರವರ ನ್ಯಾಯೋಚಿತವಾದ ಭಾಗಗಳನ್ನು ಹಂಚಿಕೊಡುತ್ತಿದ್ದೆನು. ಶುಭಕರ್ಮಗಳಲ್ಲಿಯೇ ಇರುತ್ತಿದ್ದೆನು. ದೇವ ದ್ರವ್ಯವನ್ನು ಜಾಗರೂಕತೆಯಿಂದ ರಕ್ಷಿಸುತ್ತಿದ್ದೆನು. ವಿನಯಶೀಲನೂ, ಶೀಲಸಂಪನ್ನನೂ ಆಗಿದ್ದು ಸಮಸ್ತಪ್ರಾಣಿಗಳ ಹಿತದಲ್ಲಿಯೂ ಆಸಕ್ತನಾಗಿ ದ್ದೆನು. ನಾನು ಹಿಂದಿನ ಜನ್ಮದಲ್ಲಿ ಹಾಗಿದ್ದರೂ ನನಗೆ ಜನ್ಮದಲ್ಲಿ ಘೋರವಾದ ಅತ್ಯಂತ ಕೀಳಾದ ನಾಯಿಯ ಜನ್ಮವು ಪ್ರಾಪ್ತವಾಯಿತು. ಹೀಗಿರುವಾಗ ಕ್ರುದ್ಧನಾದ, ಧರ್ಮಬಾಹಿರನಾದ, ಪ್ರಾಣಿಗಳ ಅಹಿತದಲ್ಲಿಯೇ ನಿರತನಾಗಿರುವ, ಕ್ರೂರಿಯಾದ, ಅವಿದ್ವಾಂಸನಾದ, ಅಧಾರ್ಮಿಕನಾದ ಇಂತಹವನಿಗೆ ಮಠಾಧಿ ಪತ್ಯವು ಸಿಕ್ಕಿದರೆ ಅವನು ಅಧೋಗತಿಗೆ ಹೋಗುವುದು ಮಾತ್ರವಲ್ಲದೇ ಅವನ ಹಿಂದಿನ ಏಳು ತಲೆಮಾರಿನವರನ್ನೂ ಮುಂದಿನ ಏಳು ತಲೆಮಾರಿನವರನ್ನೂ ನರಕದಲ್ಲಿ ಕೆಡವುತ್ತಾನೆ. ಇದು ನಿಶ್ಚಯ.
ತಸ್ಮಾತ್ಸರ್ವಾಸ್ವವಸ್ಥಾಸು ಕೌಲಪತ್ಯಂ ಕಾರಯೇತ್ |
ಯಮಿಚ್ಛೇನ್ನರಕಂ ನೇತುಂ ಸಪುತ್ರಪಶುಬಾನ್ಧವಮ್ |
ದೇವೇಷ್ವಧಿಷ್ಠಿತಂ ಕುರ್ಯಾದ್ಗೋಷು ಬ್ರಾಹ್ಮಣೇಷು ||೪೭||
ಬ್ರಹ್ಮಸ್ವಂ ದೇವತಾದ್ರವ್ಯಂ ಸ್ತ್ರೀಣಾಂ ಬಾಲಧನಂ ಯತ್ ||೪೭||
ಆದುದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಮಠಾಧಿಪತಿಯಾಗಬಾರದು. ಯಾವನನ್ನಾದರೂ ಪುತ್ರ ಪಶು ಬಂಧುಗಳೊಡನೆ ನರಕಕ್ಕೆ ಕಳುಹಿಸಲು ಅಪೇಕ್ಷೆಯಿದ್ದರೆ - ಅಂತಹವನನ್ನು ಮಠದ ಅಧಿಪತಿಯನ್ನಾಗಿ, ದೇವಾಲಯದ ಅಧಿಕಾರಿಯನ್ನಾಗಿ, ಗೋ-ಬ್ರಾಹ್ಮಣರಿಗೆ ಅಧಿಪತಿಯನ್ನಾಗಿ ಮಾಡು.
ದೇವತೆಗಳ ಮತ್ತು ಬ್ರಾಹ್ಮಣರ ದ್ರವ್ಯವನ್ನು ಅಪಹರಿಸುವವನು ಅತಿಶೀಘ್ರವಾಗಿ ಅವೀಚಿ ಎಂಬ ನರಕದಲ್ಲಿ ಬೀಳುತ್ತಾನೆ ಎಂದು ಮುಂದಿನ ಶ್ಲೋಕವೊಂದು ಉದಾಹರಿಸುತ್ತದೆ
ಮನಸಾಪಿ ಹಿ ದೇವಸ್ವಂ ಬ್ರಹ್ಮಸ್ವಂ ಚ ಹರೇತ್ತು ಯಃ |
ನಿರಯಾನ್ನಿರಯಂ ಚೈವ ಪತತ್ಯೇವ ನರಾಧಮಃ ||೫೦||
*******************************************************************************
ಗಂಗ - ಶ್ರೀಪುರುಷ : ಕ್ರಿ.ಶ.೭೭೬-೭೭. ರಲ್ಲಿನ ಮಂಡ್ಯ ಜಿಲ್ಲೆಯ ಹುಳ್ಳೇನಹಳ್ಳಿ ಗ್ರಾಮದ ಚಾಮಯ್ಯ ಎನ್ನುವವರ ವಶದಲ್ಲಿದ್ದ ತಾಮ್ರಶಾಸನಮೊದಲ ೩೯ ಸಾಲುಗಳು ಸಂಸ್ಕೃತದಲ್ಲಿವೆ, ಆಮೇಲೆ ಉಳಿದವು ಕನ್ನಡದಲ್ಲಿವೆ ಅದರಲ್ಲಿ ಶಾಸನಾಂತ್ಯದಲ್ಲಿ
ಸ್ವದತ್ತಂ ಪರದತ್ತಾನ್ವಾ ಯೋ
೫೧. ಹರೇತಿ ಬಶುನ್ಧರಾ ಷಷ್ಠಿ ಬರಿಷಸಹಸ್ರಾಣಿ ವಿಷ್ಟಾಯಂ ಜಾತೇ ಕೃಮಿ || ಬಹುಭಿರ್ವ್ವ
೫೨. ಸುಧಾಭುಕ್ತಂ ರಾಜಭಿಶಗರಾಜಭಿ ಯಸ್ಯ ಯಸ್ಯ ಯತಾ ಭೂಮಿ ತಸ್ಯ ತಸ್ಯ ತದಾ ಪಲಂ
೫೩. "ಬ್ರಹ್ಮಶ್ವನ್ತು" ವಿಷಂ ಘೋರಂ ನ ವಿಷಂ ವಿಷಮುಖ್ಯತೇ ವಿಷಮೇಕಾಕಿನಂ ಹನ್ತಿ ಬ್ರಹ್ಮಶ್ವಂ
೫೪. ಪುತ್ರಪೌತ್ರಿಕಂ ||
ಈ ಶಾಸನದಲ್ಲಿ ಬ್ರಹ್ಮಸ್ವ ಎನ್ನುವುದೇ ಅತ್ಯಂತ ಘೋರ ವಿಷ . ಅದು ಮಕ್ಕಳು ಮೊಕ್ಕಳನ್ನೂ ಬಿಡುವುದಿಲ್ಲ ಎನ್ನುವುದಾಗಿ ಹೇಳಿದೆ.

ಇದೊಂದು ದಾನಶಾಸನ. ಕ್ರಿ.ಶ. ೮೮೯ರಾಷ್ಟ್ರಕೂಟ ಕನ್ನರದೇವ ದಾವಣಗೆರೆಕಾಡಜ್ಜಿ ಎನ್ನುವ ಊರಿನ ಕೆರೆಯ ಏರಿಯಲ್ಲಿ ಚಳ್ಳೇಮರದ ಬಳಿ ಇರುವ ಶಿಲೆಯಲ್ಲಿನ ೨೦ನೇಸಾಲಿನಲ್ಲಿ ಶಾಪಾಶಯ ಬರುತ್ತದೆ. ಅದರಲ್ಲಿಯೂ ಬ್ರಹ್ಮಸ್ವದ ಕುರಿತಾಗಿ ಬರುತ್ತದೆ. ಬ್ರಹ್ಮಸ್ವಂ ವಿಷಮುಚ್ಯತೇ ಎನ್ನುತ್ತದೆ.
೨೦. ವಿಷನ್ನವಿಷಮಿತ್ಯಾಹುರ್ಬ್ರ
೨೧. ಹ್ಮಸ್ವಂವಿಷಮುಚ್ಯತೇವಿಷನ್ನಮೇಕಾಕಿನಂಹನ್ತಿಬ್ರಹ್ಮ
೨೨. ಸ್ವಂಪುತ್ರಪೌತ್ರಕಂಸ್ವಸ್ತಿಶ್ರೀತಿಪ್ಪಯ್ಯಬರೆ
೨೨. ದಂ ಮಂಗಳಶ್ರೀ

೮೯೦ ನೇ ಇಸವಿಯ ಬೆಂಗಳೂರಿನ ದೊಡ್ಡ ಬೇಗೂರು ನಾಗೇಶ್ವರ ದೇವಾಲಯದಲ್ಲಿನ ದಾನಶಾಸನ. ಇಲ್ಲಿಯೂ ಬ್ರಹ್ಮಸ್ವವನ್ನು ಹೇಳಲಾಗಿದೆ.
ಸ್ವದತ್ತಂ ಪರದತ್ತಂ ವಾಯೋ
೧೨. . . . . . . . . ಯಪಾತ ಗಾ ಯೋ[ನ]ರಮ್ ಬ್ರಹ್ಮಸ್ವನ್ತು ವಿಷಂ ಘೊರಂ ನಾದಿ
೧೩. ಹನ್ತಿ ದೇವಸ್ವಂ ಪುತ್ರ ಪೌತ್ರಿಕಂ ಈ ಧನ ನಮಂ[ಪೊತ್ವ] ಬಟ್ಟಗಿಕಡು
೧೪. ದೆ . . . . . . . . ದುಕ್ಕಂ ಕೇಡಂಗೆಯ್ವೋನುಣ್ಬಾತನ್ನೀ ದೇಗುಲಗಳಂ ಪಡಿಸಲಿ
ಸ್ವಸ್ತಿ(ಸಂ)=ಸ್ವಸ್ತಿ. ಸಮ . . . . . . .

ದಾನಶಾಸನ - ದೇವಭೋಗ
ಕಲ್ಯಾಣಿ ಚಾಳುಕ್ಯ - ತೈಲ II : ಕ್ರಿ.ಶ.೯೮೦ನೇ ಇಸವಿಯ ಬೆಳಗಾವಿ ಜಿಲ್ಲೆಯ ಪರಸಗಡದ ಸೊಗಲ್ ಗ್ರಾಮದಲ್ಲಿದ್ದ, ಈಗ ಇದು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ ಕಲ್ಲು."ಸಮಾಳೋಕದೊಳಿಂದ್ರನಾಕೆಯಂ ಬೆಸಗೊಣ್ಡಂ ದೇವಸ್ವಂ ಬ್ರಹ್ಮಸ್ವಮನಾವು" ಎನ್ನುವುದಾಗಿ ಸಂಸ್ಕೃತದ ಶ್ಲೋಕವು ಕನ್ನಡದಲ್ಲಿ ಬರೆಯಲಾಗಿದೆ.
ಧರ್ಮ್ಮಮಂ ಘಾತಿಸಿದಂಗೆ ದುರ್ಗ್ಗತಿಪದಂ ಪ್ರತಿಪಾಳಿಸಿದೊಂಗೆ ಪುಣ್ಯಬನ್ಧಾತಿಶಯಾಸ್ಪದಂ
೫೯. ಸುಖಪದಂ ಶುಭವೃದ್ಧಿ ಜಯಾಸ್ಪದಂ ಮಹಾಖ್ಯಾತಿಪದಂಗಳೆಂಬಿವು ತಪ್ಪವು ದೇವಣಪಂಡಿತಾ
೬೦. ಗ್ರಣಿ ಸಾಸಿರಪಸುವಂ ದ್ವಿಜರಿರ್ಚ್ಚಾಸಿರಮಂ ಕೋಟಿಮುನಿಗಳಂ ಕೊಂಡ ಮಹಾದೋಷಂ ಪೊರ್ದ್ದುಗುಮ್ [? ? ?]
೬೧. ವ ಸಾ(ಶಾ)ಸನ ಧರ್ಮ್ಮಮನೆ ಕಿಡಿಪ ಮಾಪಾತಕನಂ ಮೇಳಿಸಿ ನಾಯಡಗಂ ಚಾಂಡಾಳೆ ಕಪಾಳದೊಳೆ ಕಳ್ಳನೆಱೆದಡು
೬೨. ತಂ ತಾ(ತ)ತ್‌ಕಾಳದೆ ಕೆರ್ಪ್ಪಿಂ ಮುಚ್ಚೆ ಸಮಾಳೋಕದೊಳಿಂದ್ರನಾಕೆಯಂ ಬೆಸಗೊಣ್ಡಂ ದೇವಸ್ವಂ ಬ್ರಹ್ಮಸ್ವಮನಾವು * * *
೬೩. ನ್ದ ಪಾತಕನ ಪಾದ ರಜಂ ಭಾವಿಸಲಭೋಜ್ಯಮೆನಲಾ ದೇವಸ್ವಮನಳಿವನಿಂ ನಿಕ್ರಿ(ಕೃ)ಷ್ಟರುಮೊಳರೇ ನವಿಷಂ [ವಿಷ]
೬೪. ಮಿತಿ ಆಹುಃ(ರ್) ದೇವಸ್ವಂ ವಿಷಮುಚ್ಯತೇ ವಿಷಮೇಕಾಕಿನಂ ಹನ್ತ್ತಿ ದೇವಸ್ವಂ ಪುತ್ರಪೌತ್ರಿ(ತ್ರ)ಕಂ ಸ್ವದತ್ತಂ ಪ
೬೫. ರದತ್ತಾಂ ವಾ ಯೋ ಹರೇತಿ(ತ) ವಸುನ್ಧರಾ[ಂ] ಷಷ್ಟಿರ್ವ್ವರ್ಷ ಸಹಶ್ರಾ(ಸ್ರಾ)ಣಿ ವಿಷ್ಟಾ(ಷ್ಠಾ)ಯಾಂ ಜಾಯತೇ ಕ್ರಿಮಿ
೬೬. ಭುವನಂ ವನನಿಧಿ ಸುರಗಿರಿ ದಿವಕುಳಮಿನಚಂದರುಳ್ಳಿನಂ ಧರ್ಮ್ಮಮಿದುದುದ್ಭವಮಾಗಿ ನಡೆಗೆ
೬೭. ಶಾಸನಕವಿ ಕಮಳಾದಿತ್ಯ ರಚಿತ ಕಾವ್ಯಾದೇಷ(ಶ)ಂ ಧರ್ಮ್ಮಮನೂರುಂ ಸ್ಥಾನಾಚಾರ್ಯ್ಯ
೬೮. ನುಂ ಕೂಡಿ ಸ್ವಧರ್ಮ್ಮದಿಂ ನಡೆಯಿಸುವ ಸತ್ರಕ್ಕೆ ಬ್ರಾಹ್ಮಣಿಯಡುವಳ್ ಮಂಗಳ ಮಹಾ ಶ್ರೀ
ಹೀಗೇ ಆರಂಭ ಕಾಲದ ಕನ್ನಡ ಶಾಸನಗಳಲ್ಲಿ ಅಲ್ಲಲ್ಲಿ ಕಂಡು ಬಂದರೂ ಸಂಸ್ಕೃತ ಶಾಸನದಲ್ಲಿಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ. ಅದೇನೇ ಇದ್ದರೂ ಪುರಾಣದ ಅಂದರೆ ರಾಮಾಯಣ ಮಹಾಭಾರತ ಮತ್ತು ಕಾಳಿದಾಸನ ಕಾವ್ಯಗಳು ಶಾಸನಗಳ ಮೇಲೆ ಪ್ರಭಾವ ಬೀರಿದ್ದಂತೂ ನಿಜ. ಬ್ರಹ್ಮಸ್ವ ಎನ್ನುವ ಪದ ರಾಮಾಯಣ, ಮಹಾಭಾರತ ಮತ್ತು ಇತರೇ ಪುರಾಣಗಳಲ್ಲಿ ಅಲ್ಲಲ್ಲಿ ಬಂದು ಹೋಗಿವೆ ಅದು ನೇರವಾಗಿ ಶಾಸನಗಳಲ್ಲಿಯೂ ನುಸುಳಿಕೊಂಡಿವೆ.

No comments:

Post a Comment