Search This Blog

Thursday 26 April 2018

ಕಾಳಿದಾಸನ ರಘುವಂಶದ ಕಾವೇರಿ ಮತ್ತು ರವಿಕೀರ್ತಿಯ ಕಾವ್ಯ ಕನ್ನಿಕೆ ಕಾವೇರಿ.


ಸೂರ್ಯ ವಂಶದ ಮೊದಲ ದೊರೆ ವೈವಸ್ವತ ಮನು. ದಿಲೀಪ ಅವನ ವಂಶದಿಂದ ಬಂದವನು. ಅವನು ಸುದಕ್ಷಿಣಾ ಎನ್ನುವವಳನ್ನು ಮದುವೆ ಆಗಿದ್ದ ಆದರೆ ಆತನಿಗೆ ಬಹುಕಾಲದವರೆಗೂ ಮಕ್ಕಳಿರಲಿಲ್ಲ. ಆತ ತನ್ನ ಕುಲ ಗುರುವಾದ ವಶಿಷ್ಠರಲ್ಲಿ ತನ್ನ ದುಃಖವನ್ನು ತೋಡಿಕೊಂಡಾಗ ವಶಿಷ್ಠನು ಸುರಭಿಯ ಮಗಳಾದ(ಕರು) ನಂದಿನಿಯನ್ನು ಆರಾಧಿಸು ನಿನಗೆ ಮಕ್ಕಳಾಗುವುದು ಎಂದಾಗ ಹಾಗೇ ಮಾಡುತ್ತಾನೆ. ಈ ಆರಾಧನೆಯಿಂದ ದಿಲೀಪನಿಗೆ ಸಂತಾನ ಪ್ರಾಪ್ತಿಯಾಗಿ ರಘುವಿನ ಜನವಾಗುತ್ತದೆ.
ರಘು ಅತ್ಯಂತ ಬಲಿಷ್ಠ. ಪ್ರಜಾನುರಾಗಿಯಾಗಿ ಪ್ರವರ್ಧಮಾನಕ್ಕೆ ಬರುತ್ತಾನೆ. ಪ್ರಜಾಕಲ್ಯಾಣಕ್ಕಾಗಿ ರಘುವು ದಿಗ್ವಿಜಯಗಳನ್ನು ಮಾಡಿ "ಸರ್ವಜಿತ್" ಎನ್ನುವ ಯಾಗವೊಂದನ್ನು ಮಾಡುತ್ತಾನೆ. ಯಾಗದ ಸಮಯದಲ್ಲಿ ಗುರುದಕ್ಷಿಣಾ ನಿಮಿತ್ತವಾಗಿ ತನ್ನ ಬಳಿ ಬಂದ ವರತಂತು ಎನ್ನುವ ಋಷಿಯ ಶಿಷ್ಯನಾದ ಕೌತ್ಸ ಎನ್ನುವವನಿಗೆ ಹದಿನಾಲ್ಕು ಕೋಟಿ ದ್ರವ್ಯಗಳನ್ನು ಕೊಟ್ಟನಂತೆ. ಈ ಯಾಗದ ನಿಮಿತ್ತ ರಘುವಿಗೆ ಅಜ ಎನ್ನುವ ಮಗನು ಜನಿಸುತ್ತಾನೆ.
ರಘುವಿನ ಮಗನಾದ ಅಜನು ಪ್ರಾಯ ಪ್ರವೃದ್ಧನಾಗಿದ್ದ ಸಮಯದಲ್ಲಿ ವಿದರ್ಭದ ರಾಜ ಭೋಜನ ತಂಗಿಯಾದ ಇಂಣ್ದುಮತಿ ಎನ್ನುವವಳನ್ನು ಮದುವೆಯಾಗುತ್ತಾನೆ. ಈ ಇಂದು ಮತಿಗೆ ಅಜನಿಂದ ಜನಿಸಿದವನೇ ದಶರಥ.
ಈ ದಶರಥ ಕೌಸಲ್ಯೆ , ಸುಮಿತ್ರೆ ಮತ್ತು ಕೈಕೇಯಿರನ್ನು ಮದುವೆಯಾಗಿ ರಾಮಾಯಣದ ಕಥೆಗೆ ಮೂಲರಾಗುತ್ತಾರೆ ಮುಂದೆ. ಮುಂದೆ ಜನಪ್ರಿಯವಾದ ರಾಮಾಯಣದ ಕಥೆ .......ರಾಮನಿಗೆ ಕುಶ ಮತ್ತು ಲವ ಎನ್ನುವ ಇಬ್ಬರು ಮಕ್ಕಳಾಗುತ್ತಾರೆ. ರಾಮ ಕುಶನಿಗೆ ರಾಜ್ಯಭಾರವನ್ನು ಒಪ್ಪಿಸುತ್ತಾನೆ. ಆತ ಕುಮುದ್ವತಿ ಎನ್ನುವವಳನ್ನು ಮದುವೆಯಾಗುತ್ತಾನೆ. ಈ ಕುಮುದ್ವತಿ ಮತ್ತು ಕುಶರಿಂದ ಹುಟ್ಟಿದವನು ಅತಿಥಿ ಎನ್ನುವ ಹೆಸರು ಪಡೆದುಕೊಳ್ಳುತ್ತಾನೆ. ಈ ಅತಿಥಿ ಎನ್ನುವವನಿಗೆ ಒಬ್ಬ ಮಗಹುಟ್ಟುತ್ತಾನೆ ಆತನೇ ಅಗ್ನಿವರ್ಣ ಎನ್ನುವವನು ಈತ ವಿಷಯ ನ್ಲಂಪಟನಾಗಿ ಅಕಾಲದಲ್ಲಿ ಮೃತ್ಯು ಹೊಂದಿ ಈ ಕುಲದ ಕೊನೆಯ ಅರಸನಾಗುತ್ತಾನೆ. ಈತನ ಮರಣಾನಂತರ ಆತನ ಮಡದಿಗೆ ಪಟ್ತಕಟ್ಟುತ್ತಾರೆ. ಈ ಅಗ್ನಿವರ್ಣನೇ ಈ ವಂಶದ ಕೊನೆಯ ದೊರೆಯಾಗುತ್ತಾನೆ ಎನ್ನುವುದಾಗಿ ಕಾಳಿದಾಸನ ರಘುವಂಶದಲ್ಲಿ ವರಣನೆ ಬರುತ್ತದೆ. ಒಟ್ಟು ಹತ್ತೊಂಬತ್ತು ಸರ್ಗಗಳ ಈ ಕಾವ್ಯದಲ್ಲಿ ನಾಲ್ಕನೇ ಸರ್ಗದ ೪೫ನೇ ಶ್ಲೋಕದಲ್ಲಿ ಕಾವೇರಿಯ ಉಲ್ಲೇಖ ಸಿಗುತ್ತದೆ.

ಸ ಸೈನ್ಯ ಪರಿಭೋಗೇಣ ಗಜದಾನ ಸುಗಂಧಿನಾ |
ಕಾವೇರೀಂ ಸರಿತಾಂ ಪತ್ಯುಃ ಶಂಕನೀಯಾಮಿವಾಕರೋತ್ || 4 : 45 ||

ಕಾಲಿದಾಸನ ಕಾವ್ಯದಲ್ಲಿ ರಘು ಹೇಳುತ್ತಾನೆ ; ಅವನ ಸೈನಿಕರು ಕಾವೇರಿಯ ನೀರನ್ನು ಸವಿದು ಪುಳಕಿತರಾದರಂತೆ. ಆ ನೀರಿನಿಂದ ಹೊಮ್ಮುತ್ತಿದ್ದ ಸುಗಂಧದಿಂದ ಮನೋಲ್ಲಾಸ ಹೊಂದಿದರಂತೆ. ಆನೆಗಳು ಈ ಕಾವೇರಿಯನ್ನು ಕಂಡು ಅದಕ್ಕೊಂದು ಸೇತುವೆಯನ್ನೇ ನಿರ್ಮಿಸಿದವೋ(ಇದನ್ನು ಸಾಗರ ಎಂದು ವರ್ಣಿಸಿದ್ದಾನೆ) ಎನ್ನುವ ಶಂಕೆ ಹುಟ್ಟಿತಂತೆ. ಕಾವೇರೀ ಸರಿತಾಂ ಪತ್ಯುಃ ಕಾಳಿದಾಸನ ಪದ ಪ್ರಯೋಗ ಎಷ್ಟು ಖುಷಿ ಕೊಡುತ್ತದೆ. ಕಾವೇರಿ ಎನ್ನುವ ನದಿಯ ಪತಿ ಎನ್ನುತ್ತಾನೆ ಅಂದರೆ ಸಮುದ್ರಕ್ಕೆ ಹೋಲಿಸುತ್ತಾನೆ.
ಇದು ಕಾಳಿದಾಸನ ಕಾವ್ಯದ ಉಲ್ಲೇಖವಾದರೆ ಇನ್ನೊಬ್ಬ ಕವಿ ರವಿಕೀರ್ತಿಯದ್ದು ಗಮನಿಸೋಣ.
ಮಹಾಭಾರತ ಯುದ್ಧವಾಗಿ 3735 ವರ್ಷಗಳ ನಂತರ (ಕ್ರಿ. ಶ. 634 - 35)ರಲ್ಲಿ ರವಿಕೀರ್ತಿ ಎನ್ನುವವ ಪ್ರಬುದ್ಧ ಕವಿ ಬಾದಾಮಿ ಚಳುಕ್ಯರ ಎರಡನೇ ಪೊಲೆಕೇಶಿಯ ಕಾಲದಲ್ಲಿದ್ದ. ಈತ ಐಹೊಳೆಯ ಜಿನ ದೇವಾಲಯದಲ್ಲಿ ರಚಿಸಿದ ಶ್ರೇಷ್ಠ ಕಾವ್ಯಾತ್ಮಕವಾದ ಶಾಸನದಲ್ಲಿ ಪುನಃ ಕಾವೇರಿಯನ್ನು ಸ್ಮರಿಸಿಕೊಳ್ಳುತ್ತಾನೆ.
ಶಾಸನದ 14ನೇ ಸಾಲಿನ ಉತ್ತರಾರ್ಧದಲ್ಲಿ

ಕಾವೇರೀ ದೃತಶಫರೀವಿಲೋಲ ನೇತ್ರಾ ಚೋಳಾನಾಂ ಸಪದಿ ಜಯೋದ್ಯತಸ್ಯ ಯಸ್ಯ |
ಪ್ರಶ್ಚ್ಯೋತನ್ಮದಗಜಸೇತುರುದ್ಧನೀರಾ ಸಂಸ್ಪರ್ಶಂ ಪರಿಹರತಿಸ್ಮ ರತ್ನರಾಶೇಃ ||




ಇಲ್ಲಿ ರವಿಕೀರ್ತಿಯೂ ಒಮ್ಮೆಲೆ ಚೋಳರಾಜರು ಬಂದು ಮುತ್ತಿಗೆ ಹಾಕಿದಾಗ ಶುಭ್ರವಾಗಿ ಸ್ವಚ್ಚವಾಗಿ ಹರಿಯುತ್ತಿದ್ದ ಕಾವೇರಿಯಲ್ಲಿನ ಮೀನುಗಳ ಕಣ್ಣುಗಳಿಂದ ಹೊರಟ ಚಿಕ್ಕ ಚಿಕ್ಕ ಕಿರಣಗಳು ಕುಕ್ಕುತ್ತಿದ್ದವಂತೆ, ಆನೆಗಳಿಂದ ಮಾಡಲ್ಪಟ್ಟ ಸೇತುವೆಯು ನೀರನ್ನು ಮುಟ್ಟಿ ಕಂದು ಬಣ್ಣಕ್ಕೆ ತಿರುಗಿದ್ದವಂತೆ. ಆ ಶುಭ ನೀರಿನಲ್ಲಿ ರತ್ನಗಳ ರಾಶಿಯೇ ಇತ್ತಂತೆ. ಹೌದು ಇಲ್ಲಿ ಕವಿಗಳ ಕವಿತಾ ಸಾಮರ್ಥ್ಯ ಅಚ್ಚರಿ ಹುಟ್ಟಿಸುತ್ತದೆ. ಕಾಳಿದಾಸ ಆ ಕಾಲದಲ್ಲಿ ಕಾವೇರಿಯನ್ನು ನೋಡಿದ್ದನೇ ? ಗೊತ್ತಿಲ್ಲ. ಆದರೆ ಕಾಳಿದಾಸನ ಪರಮ ಭಕ್ತನಾಗಿದ್ದ. ಮತ್ತು ಕಾಳಿದಾಸನಷ್ಟೇ ತಾನು ಸಾಮರ್ಥ್ಯ ಉಳ್ಳವನು ಎಂದು ಬರೆದುಕೊಂಡ ರವಿಕೀರ್ತಿ ರಘುವಂಶವನ್ನು ಭಟ್ಟೀ ಇಳಿಸಿದ್ದಂತೂ ಹೌದು.

No comments:

Post a Comment