Search This Blog

Monday 30 July 2018

ಸ್ವರ್ಭಾನುವಿನ ತಮಾಂಧಕಾರ


ನಾನು ಹುಟ್ಟಿದ್ದು ಹಳ್ಳಿಯಲ್ಲಿ ಚಿಕ್ಕವನಿರುವಾಗ ಅಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಸಂಜೆಯಾಯಿತೆಂದರೆ ಲಾಟೀನು ಬೆಳಕು ಬಿಟ್ಟರೆ ದೊಡ್ದ ಬೆಳಕು ಕಾಣುವುದು ಯಕ್ಷಗಾನದ ರಂಗಸ್ಥಳಕ್ಕೆ ಅಳವಡಿಸುತ್ತಿದ್ದ ಪೆಟ್ರೋಮಾಕ್ಸ್. ಅದೂ ಸಹ ಪಂಪ್ ಹೊಡೆದು ಉರಿಸುತ್ತಿದ್ದರು ಅದು ಕ್ರಮೇಣ ಮಬ್ಬಾಗುತ್ತಿತ್ತು. ಅಂತಹ ಕಾಲದಲ್ಲಿಯೂ ಗ್ರಹಣ ಬರುತ್ತಿತ್ತು. ಆದರೂ ಆ ಕಾಲದಲ್ಲಿ ಗ್ರಹಣಕಾಲದಲ್ಲಿ ದೇವಾಲಯಗಳ ಬಾಗಿಲು ಹಾಕುವುದು ನೋಡಿಲ್ಲ ಗ್ರಹಣಾರಂಭದಲ್ಲಿಯೇ ಸ್ನಾನ ಮಾಡಿ ದೇವಾಲಯದಲ್ಲಿ ರುದ್ರಾಭಿಷೇಕ ನಡೆಯುತ್ತಿತ್ತು ಗ್ರಹಣ ಮೋಕ್ಷವಾದ ನಂತರವೂ ಪುನಃ ಸ್ನಾನ ಮಾಡಿ ಪೂಜೆಗಳು ನಡೆಯುತ್ತಿದ್ದವು ಅದು ಅಂದಿಗೂ ಇಂದಿಗೂ ವ್ಯತ್ಯಾಸವಂತೂ ಆಗಿಲ್ಲ. ಆದರೆ ಈಗ ಕೆಲವೆಡೆ ದೇವಾಲಯಗಳ ಬಾಗಿಲು ಮುಚ್ಚುತ್ತಾರಂತೆ. ಇಂತಹ ಪವಿತ್ರ ಕಾಲದ ಉಪಯೋಗವನ್ನೇ ಮಾಡಿಕೊಳ್ಳುತ್ತಿಲ್ಲ ಅಂತಾಯಿತು. ಪ್ರಕೃತಿಯ ವಿಸ್ಮಯಗಳನ್ನು ಕಾಣದೆ ಮನೆಯಲ್ಲೇ ಹೊದ್ದು ಮಲಗುವ ಚಾಳಿ ಇದನ್ನೆಲ್ಲಾ ಮಾಡಿಸುತ್ತದೆಯೋ ಅಥವಾ ದೃಶ್ಯ ಮಾಧ್ಯಮ ಹಾಗೆ ಮಾಡಿಸುತ್ತದೆಯೋ ಗೊತ್ತಿಲ್ಲ. ಅದೇನೇ ಇರಲಿ ಗ್ರಹಣದ ಕುರಿತು ವೇದಗಳಲ್ಲಿನ ಮತ್ತು ಪುರಾಣದ ಕಲ್ಪನೆ ಸ್ವಲ್ಪ ಹೇಳುತ್ತೇನೆ. ಕಶ್ಯಪ ಮಹರ್ಷಿ ಪ್ರಾಚೀನ ಋಷಿ. ಆತನಿಗೆ ಹನ್ನೆರಡು ಜನ ಪತ್ನಿಯರು. ಅವರಲ್ಲಿ ಧನು ಎನ್ನುವಳಲ್ಲಿ ಜನಿಸಿದವನೇ ಸ್ವರ್ಭಾನು ಎನ್ನುವವ. ಸ್ವರ್ಭಾನು ಆಸುರೀ ಸ್ವಭಾವದವನಾಗಿದ್ದ. ಈತ ತಾಮಸೀ ಸ್ವಭಾವಕ್ಕೆ ಹೆಸರಾಗಿದ್ದ. ತಮಸ್ಸು ಈತನ ಸಹಜ ಸ್ವಭಾವವಾಗಿತ್ತು.
ಯತ್ತ್ವಾ ಸೂರ್ಯ ಸ್ವರ್ಭಾನುಸ್ತಮಸಾವಿಧ್ಯದಾಸುರಃ |
ಅಕ್ಷೇತ್ರವಿದ್ಯಥಾ ಮುಗ್ಧೋ ಭುವನಾನ್ಯದೀಧಯುಃ ||
ಎಲೈ ಸೂರ್ಯನೇ ಅಸುರಪುತ್ರನಾದ ಸ್ವರ್ಭಾನುವು ತನ್ನ ಮಾಯಾ ನಿರ್ಮಿತವಾದ ಅಂಧಕಾರದಿಂದ ಯಾವಾಗ ನಿನ್ನನ್ನು ಆವರಿಸಿದನೋ ಆಗ ಸಕಲ ಲೋಕಗಳೂ ಬೆದರಿದವು ನಿನ್ನ ಅಂಧಕಾರದಿಂದ ತಮ್ಮ ವಾಸಸ್ಥಾನವನ್ನೇ ಗುರುತಿಸದಂತಾದರು. ಅಂದರೆ ಸೂರ್ಯಗ್ರಹಣದ ಕಾಲದಲ್ಲಿನ ಅಂಧಕಾರವನ್ನು ಸೂಚಿಸಲಾಗಿದೆ. ಈತನ ಮಾಯೆಗಳನ್ನೆಲ್ಲಾ ಇಂದ್ರ ಯುದ್ಧಮಾಡಿ ಜಯಿಸುತ್ತಾನಂತೆ. ಇಂದ್ರನಿಗೆ ಅತ್ರಿ ಮಹರ್ಷಿ ಸಹಕರಿಸಿ ಸೂರ್ಯನ ತೇಜಸ್ಸು ಪುನಃ ಪ್ರಕಾಶಿಸುವಂತೆ ಮಾಡಿದ ಎನ್ನುವುದು ತಿಳಿದು ಬರುತ್ತದೆ. ಈತನನ್ನೇ ಪುರಾಣಗಳಲ್ಲಿ ರಾಹು ಎನ್ನುವುದಾಗಿ ಕರೆಯಲಾಗಿದೆ. ಆದರೆ ಈತ ಅತ್ಯಂತ ಶಕ್ತಿಯುತನಾದ ಬಲಿಷ್ಠನಾದ ಅಸುರನಾಗಿದ್ದ ಎನ್ನುವುದು ಸಂಹಿತೆಗಳಲ್ಲಿ ಮತ್ತು ಬ್ರಾಹಣಗಳಲ್ಲಿ ಉಲ್ಲೇಖಗೊಂಡಿದ್ದರೂ ಈತನನ್ನ ರಾಹು ಎಂದು ಹೇಳಿಲ್ಲ.
ತಮಸ್ತು ರಾಹುಸ್ಸ್ವರ್ಭಾನುಃ ಸೈಂಹಿಕೇಯೋ ವಿಧಂತುದಃ ಎನ್ನುವುದಾಗಿ ಅಮರಕೋಶದಲ್ಲಿ ಸ್ವರ್ಭಾನುವನ್ನು ಹೇಳಲಾಗಿದೆ. ಇದರಲ್ಲಿ ತಿಳಿಸಿರುವ ಗುಣವೆಲ್ಲವೂ ಸ್ವರ್ಭಾನುವಿನಲ್ಲಿರುವುದರಿಂದ ಆತನೇ ರಾಹು ವಿನಲ್ಲಿರುದರಿಂದ ಎನ್ನ ಬಹುದು. ಹೀಗಿರುವುದರಿಂದ ಪುರಾಣದ ರಾಹುವೇ ಸ್ವರ್ಭಾನು. ಆದರೆ ಕಂಠದ ಮೇಲ್ಬಾಗ ಅಸುರ ಎನ್ನುವುದು ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.
ವೇದದಲ್ಲಿ ಮಾತ್ರ ಯತ್ತ್ವಾ ಸೂರ್ಯ ಸ್ವರ್ಭಾನುಸ್ತಮಸಾವಿಧ್ಯದಾಸುರಃ ಎನ್ನುದರಿಂದ ಈತ ಕೇವಲ ಮುಖ ಮಾತ್ರ ಅಸುರನಾಗಿರದೇ ಸಂಪೂರ್ಣ ತಾಮಸೀ ಪೃವೃತ್ತಿಯ ಅಸುರಪುತ್ರನೂ ಸ್ವರ್ಭಾನು ಎನ್ನುವ ಹೆಸರುಳ್ಳವನು ಎನ್ನಲಾಗಿದೆ.
ಸ್ವರ್ಭಾನು ದೃಷ್ಟಂ ಸೂರ್ಯಸ್ಯ ಅಪಹತ್ಯ ತತೋ ತ್ರಯಃ ಎಂದು ಬೃಹದ್ದೇವತಾದಲ್ಲಿ ಬರುತ್ತದೆ. ಅಂದರೆ ಅತ್ರಿ ಮಹರ್ಷಿಗಳು ಸ್ವರ್ಭಾನುವಿನಿಂದ ಗ್ರಸ್ತನಾಗಿದ್ದ ಸೂರ್ಯನ ತೇಜಸ್ಸು ಕ್ಷೀಣಿಸಿ ಕಾಣದಾದಾಗ ಕತ್ತಲ್ಲಿನಿಂದ ಬಿಡಿಸಿ ಸೂರ್ಯನ ಪ್ರಕಾಶ ಕಂಡೊಡನೆ ಅಗ್ನಿಯನ್ನು ಸ್ತುತಿಸಿದರು ಎನ್ನುತ್ತದೆ.
ಕೌಶೀತಕಿಯಲ್ಲಿ ಹೀಗೆ ಹೇಳಲಾಗಿದೆ. ಸ್ವರ್ಭಾನುವೆಂಬ ಅಸುರನು ಸೂರ್ಯನನ್ನು ಕತ್ತಲೆಯಿಂದ ಮುಚ್ಚಿದಾಗ ದೇವತೆಗಳ ಪ್ರಾರ್ಥನೆಯಂತೆ ಅತ್ರಿ ಮಹರ್ಷಿ ಸೂರ್ಯನನ್ನು ಬಿಡಿಸಿದ ಎನ್ನುವುದಾಗಿ ಹೇಳಲಾಗಿದೆ. ಆಗ ಸಪ್ತದಶಸ್ತೋಮದಿಂದ ಯುಕ್ತವಾದ ತ್ರ್ಯಹಾತ್ಮಕವಾದ ಯಾಗದಲ್ಲಿ ಸ್ವರಸಾಮ ಎನ್ನುವ ಮಂತ್ರದಿಂದ ಪರಿಹರಿಸುತ್ತಾನಂತೆ. ಮನಸ್ಸಿನ ಅಂಧಕಾರದ ನಿವಾರಣೆಗೆ ಜಪಿಸುವ ಮಂತ್ರವನ್ನು ಮುಂದೆ ಸ್ವರ ಸಾಮವೆಂದೇ ಕರೆಯಲಾಗುತ್ತದೆ.
ಯಂ ವೈ ಸೂರ್ಯಂ ಸ್ವರ್ಭಾನುಸ್ತಮಸಾ ವಿಧ್ಯದಾಸುರಃ |
ಅತ್ರಯಸ್ತಮನ್ವ ವಿಂದನ್ನಹ್ಯನ್ಯೇ ಅಶಕ್ನುವನ್ || ಎಂದು ಋಗ್ವೇದದ ಐದನೇ ಮಂಡಲದಲ್ಲಿ ಹೇಳಲಾಗಿದೆ.
ಸೂರ್ಯನ ಅಂಧಕಾರವನ್ನು ಹೋಗಲಾಡಿಸಿ ಸೂರ್ಯನನ್ನು ಪಡೆಯುವಲ್ಲಿ ಅತ್ರಿಮಹರ್ಷಿಗಳ ವಂಶಜರು ಸಮರ್ಥರಾದರು ಮತ್ತು ಅವರಲ್ಲದೇ ಬೇರೆ ಯಾರಿಗೂ ಸಾಧ್ಯವಾಗಲಿಲ್ಲ ಎನ್ನುವುದಾಗಿ ಈ ಋಕ್ಕು ಹೇಳುತ್ತದೆ. "ರಹತಿ ಗೃಹೀತ್ವಾ ತ್ಯಜತಿ ಚಂದ್ರಾರ್ಕೌ" ಚಂದ್ರ ಮತ್ತು ಸೂರ್ಯ ಗ್ರಹಣಕ್ಕೂ ರಾಹುವು ಕಾರ್ಣನಾಗಿರುವುದರಿಂದ ಆತನನ್ನು ರಾಹು ಎನ್ನಲಾಗಿದೆ. ಹೀಗೇ ಸೂರ್ಯನ ಅಥವಾ ಚಂದ್ರನ ಪ್ರಕಾಶವು ಕುಗ್ಗುತ್ತದೆ ಮತ್ತು ಅಂಧಕಾರವು ಆವರಿಸುತ್ತದೆ ಎಂದು ವೇದಗಳಲ್ಲಿ ಉಲ್ಲೇಖಿಸಿದ್ದರೂ ರಾಹು ನುಂಗುತ್ತಾನೆ ಎನ್ನುವ ರೀತಿಯ ಉಲ್ಲೇಖ ಸಿಗುವುದಿಲ್ಲ. ಅಥವಾ ಇದಕ್ಕಾಗಿ ಭಯದ ವಾತಾವರಣವನ್ನೋ ಅಥವಾ ಈ ಗ್ರಹಣಗಳಿಂದ ದೋಷಗಳಿವೆ ಎನ್ನುವ ಯಾವ ಪ್ರಸ್ತಾಪವೂ ಇಲ್ಲ.
ಇನ್ನು ಮಹಾಭಾರತದಲ್ಲಿ ಗಮನಿಸಿದರೆ
ಪುನರ್ಮೇಘಮಹಾವಾತೌ ಪುನರ್ವಜ್ರಮಹಾಚಲೌ | ಪುನಃ ಕುಞ್ಜರಶಾರ್ದೂಲೌ ಪುನಃ ಸ್ವರ್ಭಾನುಭಾಸ್ಕರೌ || ೩೧ ||
ಒಬ್ಬ ರಾಕ್ಷಸನು ಪ್ರಳಯಕಾಲದ ಬೆಂಕಿಯಾಗಿ ಉರಿಯತೊಡಗುತ್ತಾನೆ ಮತ್ತೊಬ್ಬ ರಾಕ್ಷಸನು ಸಮುದ್ರರೂಪವನ್ನು ಧರಿಸಿ ಪ್ರಳಯಾಗ್ನಿಯನ್ನೂ ಉಪಶಮನಗೊಳಿಸುತ್ತಿದ್ದನು. ಒಬ್ಬನು ತಕ್ಷಕನ ರೂಪವನ್ನು ಧರಿಸಿ ಕಚ್ಚಲು ಬರುತ್ತಾನೆ ಮತ್ತೊಬ್ಬನು ಒಡನೆಯೇ ಗರುಡನ ರೂಪವನ್ನು ಧರಿಸಿ ತಕ್ಷಕನ ಸೊಕ್ಕನ್ನು ಮುರಿಯುತ್ತಿದ್ದನು. ಒಬ್ಬ ರಕ್ಕಸನು ಮೇಘದ ರೂಪವನ್ನು ಧರಿಸಿ ಧಾರಾಕಾರವಾಗಿ ಮಳೆಗರೆಯಲು ಪ್ರಾರಂಭಿಸಿದರೆ ಮತ್ತೊಬ್ಬ ದೈತ್ಯನು ಚಂಡಮಾರುತನ ರೂಪವನ್ನು ತಾಳಿ ಮೋಡಗಳನ್ನು ದಿಕ್ಕಾಪಾಲಾಗಿ ಚೆದುರಿಸಿಬಿಡುತ್ತಿದ್ದನು. ಒಬ್ಬ ರಾಕ್ಷಸನು ಪರ್ವತದ ರೂಪವನ್ನು ತಾಳಿದರೆ ಮತ್ತೊಬ್ಬನು ವಜ್ರಾಯುಧದ ರೂಪವನ್ನು ತಾಳುವನು. ಒಬ್ಬ ರಕ್ಕಸನು ಮದವೇರಿದ ಆನೆಯ ರೂಪವನ್ನು ಧರಿಸಿ ಧ್ವಂಸಮಾಡಲು ಬರುತ್ತಾನೆ ಮತ್ತೊಬ್ಬನು ಸಿಂಹದ ರೂಪವನ್ನು ಧರಿಸಿ ಆನೆಯ ಕೊಬ್ಬನ್ನು ಅಡಗಿಸುತ್ತಿದ್ದನು. ಒಬ್ಬ ಅಸುರನು ಪ್ರಳಯಕಾಲದ ಸೂರ್ಯನಾಗಿ ದಹಿಸಲು ಪ್ರಾರಂಭಿಸಿದರೆ ಮತ್ತೊಬ್ಬ ದಾನವನು ರಾಹುವಿನ ರೂಪವನ್ನು ತಾಳಿ ಸೂರ್ಯನ ಪ್ರತಾಪ ವನ್ನು ಕುಂಠಿತಗೊಳಿಸುತ್ತಿದ್ದನು. ಪರಸ್ಪರವಧಾಕಾಂಕ್ಷಿಗಳಾಗಿದ್ದ, ನೂರಾರು ಮಾಯೆಗಳನ್ನು ಸೃಷ್ಟಿಸುತ್ತಿದ್ದ ಅಲಂಬುಷ ಮತ್ತು ಘಟೋತ್ಕಚರು ಈ ರೀತಿಯಾಗಿ ವಿಚಿತ್ರರೀತಿಯಲ್ಲಿ ಯುದ್ಧ ಮಾಡುತ್ತಿದ್ದರು.
ಭೀಷ್ಮಪರ್ವದಲ್ಲಿ ರಾಹು, "ರಾಹುವಿನ ಪ್ರಮಾಣವೆಷ್ಟಿದೆಯೆಂಬು ದನ್ನು ಹೇಳುತ್ತೇನೆ. ಸ್ವರ್ಭಾನುವು ಮಂಡಲಾಕಾರನಾಗಿದ್ದಾನೆಂದು ನಾನು ಕೇಳಿದ್ದೇನೆ. ರಾಹುಗ್ರಹದ ವ್ಯಾಸದ ವಿಸ್ತಾರ ಹನ್ನೆರಡು ಸಾವಿರ ಯೋಜನ ಗಳು. ಅದರ ಸುತ್ತಳತೆ ಮೂವತ್ತಾರು ಸಾವಿರ ಯೋಜನಗಳು. ರಾಹುಗ್ರಹದ ಗಾತ್ರವು (ದಪ್ಪವು) ಆರು ಸಾವಿರ ಯೋಜನಗಳೆಂದು ಪೌರಾಣಿಕರು ಹೇಳುತ್ತಾರೆ. ಚಂದ್ರಗ್ರಹದ ವ್ಯಾಸ ಹನ್ನೊಂದು ಸಾವಿರ ಯೋಜನಗಳಿವೆ. ಸುತ್ತಳತೆಯು ಮೂವತ್ತುಮೂರು ಸಾವಿರ ಯೋಜನಗಳು. ಚಂದ್ರಗ್ರಹದ ಗಾತ್ರವು ಅಥವಾ ದಪ್ಪವು ಐದು ಸಾವಿರದ ಒಂಬೈನೂರು ಯೋಜನಗಳು. ಸೂರ್ಯಗ್ರಹದ ವಿಸ್ತಾರ ಹತ್ತು ಸಾವಿರ ಯೋಜನಗಳು. ಸುತ್ತಳತೆ ಮೂವತ್ತು ಸಾವಿರ ಯೋಜನಗಳು. ಸೂರ್ಯಗ್ರಹದ ಗಾತ್ರ ಐದು ಸಾವಿರದ ಎಂಟುನೂರು ಯೋಜನಗಳು. ಈ ರೀತಿಯಾಗಿ ಪರಮೋದಾರನಾದ, ಶೀಘ್ರಗಾಮಿಯಾದ ವಿಭಾವಸುವಿನ (ಸೂರ್ಯಗ್ರಹದ) ಪರಿಮಾಣವನ್ನು ಹೇಳುತ್ತಾರೆ. ಧೃತರಾಷ್ಟ್ರ! ಇದೇ ಸೂರ್ಯಗ್ರಹದ ಪ್ರಮಾಣವೆಂದು ನಿರ್ದಿಷ್ಟವಾಗಿದೆ. ಮೂರು ಗ್ರಹಗಳಲ್ಲಿ ರಾಹುವೇ ಬಹಳ ದೊಡ್ಡಗ್ರಹ ವಾದುದರಿಂದ ಕೆಲವು ಸಮಯಗಳಲ್ಲಿ ರಾಹುಗ್ರಹವು ಸೂರ್ಯ ಮತ್ತು ಚಂದ್ರಗ್ರಹ ಗಳನ್ನೇ ಮುಚ್ಚಿಬಿಡುತ್ತದೆ. ಎಂದು ಗಾತ್ರವನ್ನು ಹೇಳಲಾಗಿದೆ.
ಹೀಗೇ ಗ್ರಹಣಗಳ ಕುರಿತಾಗಿ ಎಲ್ಲಿಯೂ ಭಯದ ವಾತಾವರಣದ ವಿಷಯಗಳಿಲ್ಲದೇ ಅದೊಂದು ಪವಿತ್ರ ಸಮಯ ಎನ್ನುವುದು ಕಂಡು ಬರುತ್ತದೆ ಸ್ವರಸಾಮದಂತಹ ಮಂತ್ರಗಳಿಂದ ಗ್ರಹಗಳನ್ನು ಸ್ತುತಿಸುವ ಪುಣ್ಯ ಕಾರ್ಯವಾಗಬೇಕೇ ವಿನಃ ದೇವಾಲಯದ ಬಾಗಿಲು ಹಾಕಿಕೊಳ್ಳುವ ಮೂರ್ಖತನ ಸರಿಯಲ್ಲ. ಆಹಾರ ಸೇವನೆಯ ಕುರಿತಾಗಿಯೂ ವೇದಗಳಲ್ಲಿ ಎಲ್ಲಿಯೂ ಉಲ್ಲೇಖ ಸಿಗುವುದಿಲ್ಲ. ಆದರೆ ಅವೆಲ್ಲ ಸ್ಮೃತಿಯ ವಾಕ್ಯವಿರಬಹುದು. ಸೂರ್ಯ ಮತ್ತು ಭೂಮಿ ಚಂದ್ರ ಇವುಗಳ ಸಂಬಂಧವನ್ನು ಇಲ್ಲಿ ಕಲ್ಪಿಸಿಕೊಂಡು ಸ್ವರ್ಭಾನು ವೆನ್ನುವ ತಮಾಂಧಕಾರ ನಮ್ಮನ್ನು ಆವರಿಸುತ್ತದೆ ಎನ್ನುವ ಸೂಕ್ಷ್ಮ ಅರಿಯ ಬೇಕು. ಆದರೆ ಇವೆಲ್ಲವನ್ನೂ ನಾವು ಆಚರಿಸದೇ ಇರುವುದು ಮತ್ತು ಏನೇನೋ ಕಲ್ಪಿಸಿ ಭಯಗೊಳ್ಳುವುದು ಶುದ್ಧ ಮೂರ್ಖತನ ಎನ್ನಬಹುದು. ಇನ್ನು ಜ್ಯೋತಿಷ್ಯದಲ್ಲಿಯೂ ಕೇತುಗ್ರಹವು ಚಂದ್ರನ ಜೊತೆಗಿದ್ದು ಅಲ್ಲಿಂದ ಏಳನೇ ಮನೆಯಲ್ಲಿ ಸೂರ್ಯನ ಜೊತೆಗೆ ರಾಹುವಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಂದರೆ ಪ್ರತಿಫಲನವನ್ನು ಇಲ್ಲಿ ಹೇಳಲಾಗಿದೆ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment