Search This Blog

Sunday 22 July 2018

ಕದಂಬರ ಲಿಪಿ ವೈವಿಧ್ಯತೆ

ಕನ್ನಡ ಇತಿಹಾಸ ಆರಂಭವೇ ಕದಂಬರಿಂದ. ಸಂಸ್ಕೃತದಲ್ಲಿ ಛಂದೋಬದ್ಧವಾದ ಸಾಹಿತ್ಯಾತ್ಮಕ ರಚನೆಗಳನ್ನು ನೀಡಿದ ಕದಂಬರು ಬ್ರಾಹ್ಮೀ ಮತ್ತು ಪ್ರಾಕೃತದಿಂದ ಬೇರೆಯಾಗಿ ಸಂಸ್ಕೃತದ ಕಡೆಗೆ ಹೊರಳಿದರು ಅಲ್ಲಿಯೂ ಸಹ ಸಾಹಿತ್ಯದ ಕೃಷಿ ಮಾಡಿದ ನಂತರ ತಮ್ಮ ವಿಷಯಗಳನ್ನು ನಾಡಿನ ಜನತೆಯ ಸಮೀಪಕ್ಕೆ ತರುವ ನಿಟ್ಟಿನಲ್ಲಿ ಮಾಧ್ಯಮ ಲಿಪಿಯನ್ನು ಬ್ರಾಹ್ಮಿಯಿಂದ ಕನ್ನಡಕ್ಕೆ ಪರಿವರ್ತಿಸಿಕೊಂಡರು. ಹೀಗೆ ಬ್ರಾಹ್ಮಿಗೆ ವಿದಾಯ ಹೇಳುತ್ತಾ ಕನ್ನಡ ಲಿಪಿಯ ಆರಂಭಕ್ಕೆ ನಾಂದಿ ಹಾಡಿದರು.   
ಮಯೂರವರ್ಮನ ನಂತರ ಅವನದ್ದೇ ವಂಶದ ದಶರಥನ ಮಗ ಕಾಕುಸ್ಥವರ್ಮ ಅಧಿಕಾರಕ್ಕೆ ಬರುತ್ತಾನೆ. ಈತ ಕದಂಬರಲ್ಲಿಯೇ ಅತ್ಯಂತ ಹೆಚ್ಚು ಪ್ರಚಲಿತನಾದ ದೊರೆ. ಸುಮಾರು ೪೦೫-೩೦ರ ಅವಧಿಯಲ್ಲಿ ಈತ ಆಳಿದನೆನ್ನಲಾಗಿದೆ. ಈತನ ಹಲಸಿ ತಾಮ್ರಪಟವನ್ನು ಹೊರತುಪಡಿಸಿ ಮಿಕ್ಕ ಎರಡು ಮತ್ತು ತಾಳಗುಂದದಲ್ಲಿನ ಸಂಸ್ಕೃತದ ಎರಡು ಮತ್ತು ಹಲ್ಮಿಡಿಯ ಕನ್ನಡದ ಶಿಲಾಶಾಸನಗಳಲ್ಲಿ ದಕ್ಷಿಣದ ದ್ರಾವಿಡ ಮೂಲದ ಹಳಗನ್ನಡದಲ್ಲಿ ಮಾತ್ರ ಗುರುತಿಸಲ್ಪಟ್ಟ ವರ್ಣಗಳಾದ ಶಕಟರೇಫ "ರ-ಱ", ಮತ್ತು "ಳ-ೞ" ಗಳನ್ನು ಬಳಸಿಕೊಳ್ಳಲಾಗಿದೆ. ಛಂದೋಬದ್ಧ ಪದಲಾಲಿತ್ಯವನ್ನು ಹೊಂದಿದ ಸಂಸ್ಕೃತ ಕಾವ್ಯದಲ್ಲಿರುವ ಕುಬ್ಜನಿಂದ ರಚಿಸಲ್ಪಟ್ಟ ಶಾಂತಿವರ್ಮನ ತಾಳಗುಂದ ಶಾಸನ ೯ನೇ ಸಾಲಿನಲ್ಲಿ ಕಾಣಿಸಿಕೊಂಡಿರುವ "ಶ್ರುತಿಪಥ ನಿಪುಣಷ್ಕವಿಃ ಪ್ರದಾತಾ ವಿವಿಧ ಕಲಾಕುಶಲಱ್ಪ್ರಜಾಪ್ರಿಯಶ್ಚ" ಎಂಬ ಪದದಲ್ಲಿ "ಕುಶಲಱ್ಪ್ರಜಾ" ಎಂಬ ಪ್ರಯೋಗವಿದೆ. ಇಲ್ಲಿ ಶಕಟರೇಫದ ಱಪ್ರಯೋಗ ಬಳಸಿಕೊಳ್ಳಲಾಗಿದೆ. ಕಾಕುಸ್ಥವರ್ಮನ ಸಂಸ್ಕೃತದೊಂದಿಗೆ ಗುರುತಿಸಿಕೊಂಡ ಕನ್ನಡದ ಹಲ್ಮಿಡಿ ಶಾಸನದ ೮ನೇ ಸಾಲಿನಲ್ಲಿರುವ "ಪೊಗೞೆಪ್ಪೊಟ್ಟಣ" ಮತ್ತು ೧೧ನೇ ಸಾಲಿನಲ್ಲಿರುವ "ಕಾದೆಱೆದು", "ಬಾಳ್ಗೞ್ಚು", ೧೨ನೇ ಸಾಲಿನಲ್ಲಿರುವ "ಮೂೞವಳ್ಳಿ" "ಸೞ್ಬಙ್ಗದರ್", ೧೪ನೇ ಸಾಲಿನಲ್ಲಿರುವ "ಕುಱುಮ್ಬಿಡಿ". ೧೫ನೇ ಸಾಲಿನಲ್ಲಿರುವ "ಅದನೞವೊನ್ಗೆ", ೧೬ನೇ ಸಾಲಿನಲ್ಲಿರುವ "ಗೞೆ", ಎಂಬ ಪದಗಳ ಪ್ರಯೋಗಗಳನ್ನು ಗಮನಿಸಿದರೆ, ಸುಮಾರು ೪೦೦ನೇ ಇಸವಿಯ ಆಸುಪಾಸಿನಲ್ಲಿ ಈ ವರ್ಣಗಳು ಸಂಸ್ಕೃತ ಬರವಣಿಗೆಯಲ್ಲಿ ಪ್ರವೇಶಿಸಿದ ಬಗ್ಗೆ ಮಾಹಿತಿ ದೊರಕುತ್ತಿದೆ.
ಕರ್ನಾಟಕದಲ್ಲಿ ದೊರೆತ ಬ್ರಾಹ್ಮೀಲಿಪಿಯ ಪ್ರಾಕೃತ ಶಾಸನಗಳಲ್ಲಾಗಲೀ ಅಥವಾ ಸು.ನಾಲ್ಕನೇ ಶತಮಾನದ ಅಂತ್ಯದ ಕದಂಬ ಪ್ರಿಯವ್ರತವರ್ಮನ ಅರತಲೆಗದ್ದೆ ಸಂಸ್ಕೃತ ತಾಮ್ರಪಟ ಶಾಸನ ದಲ್ಲಾಗಲೀ ಱ-ೞ ವರ್ಣಗಳು ಕಾಣಿಸಿಕೊಂಡಿಲ್ಲ. ಅಂದರೆ ಈ ಱ-ೞ ವರ್ಣಗಳನ್ನು ಕರ್ನಾಟಕದಲ್ಲಿ ಸಂಸ್ಕೃತಕ್ಕೆ ಮೊತ್ತಮೊದಲು ಪರಿಚಯಿಸಿದವರು ಸುಮಾರು ಐದನೇ ಶತಮಾನದ ಆರಂಭಕಾಲದಲ್ಲಿದ್ದ ಕದಂಬ ಶಿಲಾಶಾಸನಕಾರರೆನ್ನುವುದು ಸ್ಪಷ್ಟ. ಹೀಗೆ ಪ್ರಾರಂಭವಾದ ಈ ವರ್ಣಗಳ ಬಳಕೆ ಕದಂಬರ ಕಾಲದುದ್ದಕ್ಕೂ ಮುಂದುವರಿದುದರಿಂದ ಸುಮಾರು ೩೦ ಸಂಸ್ಕೃತ ಶಾಸನಗಳಲ್ಲಿ ಕನಿಷ್ಠ ೨೮ ಬಾರಿ ಶಕಟರೇಫ ಗಳು ಬಂದಿವೆ.
ಸ್ಥಳೀಯ ವ್ಯಕ್ತಿ ಮತ್ತು ಸ್ಥಳನಾಮಗಳ ಉಚ್ಚಾರಕ್ಕೆ ಸಂಸ್ಕೃತ ಬರಹಗಾರರಿಂದ ಲೋಪ ಬರಬಾರದೆಂದು ಈ ವರ್ಣಗಳನ್ನು ಸಂಸ್ಕೃತ ಪಠ್ಯದಲ್ಲಿ ತಂದುಕೊಂಡಿರಬಹುದು. ಅಲ್ಲದೆ, ಇದು ಕೇವಲ ನಾಮಪದಗಳಿಗೆ ಮಾತ್ರ ಸೀಮಿತಗೊಳ್ಳಲಿಲ್ಲವೆಂಬುದನ್ನು ಕೆಳಗಿನ ನಿದರ್ಶನಗಳು ಸ್ಪಷ್ಟಪಡಿಸುತ್ತವೆ.
ಕಿಱುಕೆಯ್ತರ, ಕಿಱುನೀರಿಲ್ಲಿ, ಕದೞಕೞನಿ, ಕಿಱುಪಾಪಣಿ, ಮುೞ್ತಗಿ, ಅ(ಮ)ೞ್ಕಾವು, ಎಸೞಾ(ಎಸಱಾ), ಪಾಲ್ಗೞನೀ, ಕದೆಇೞ್ಕೂರ, ಕಿಱುಕೂಡಲೂರ್ ಎಂಬ ಸ್ಥಳನಾಮಗಳೆಲ್ಲವೂ ನಾಮಪದಗಳು.
ಱ್ಪಾವಿತಂ, ಱ್ಪದ್ಮ, ಱ್ಪಥಿತ, ವರಱ್ಪ್ರರು, ಱ್ಪಸಾದಾನ್ನೃಪತೇ, ಱ್ಪ್ರತಿಕೃತಸ್ವಾಧ್ಯಾಯ, ಱ್ಪಾತಾಪಾಲಯಿತಾ, ಸಮೞ್ಕಾವಂ, ನಯಱುಯಾಸ್ತಿರೇ, ಅದ್ಭಿಱ್ಪ್ರಾದಾನ್, ಱ್ಪಜಾರಕ್ಷಣ, ಱ್ಪರಮಮಹೇಶ್ವರ, ಱ್ಪವದ್ಧನಮಾನ, ಎಂಬ ಸಂದಿಗೊಳಗಾದ ಕರ್ತೃ-ಕ್ರಿಯಾಪದಗಳು ಮತ್ತು ಇತರ ಪದಗಳು.
ಱ-ೞಗಳಲ್ಲದೇ ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಇನ್ನೂ ಕೆಲವು ಕನ್ನಡ ಮೂಲದ ಪದಗಳು, ವಿಶೇಷವಾಗಿ ನಾಮಪದಗಳು, ಸಂಸ್ಕೃತ ಪಠ್ಯದಲ್ಲಿ ಸೇರಿದವು. ರಾಜಾಡಳಿತ ಘಟಕವಾದ "ನಾಡು" ಈ ಕಾಲದಲ್ಲಿ ಬಳಕೆಯಲ್ಲಿದ್ದರೂ ಸಂಸ್ಕೃತ ಶಾಸನಪಠ್ಯದಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಸಂಸ್ಕೃತ ಶಾಸನಕಾರರು ಇದರ ಸ್ಥಾನದಲ್ಲಿ ಒಮ್ಮೊಮ್ಮೆ ಕ್ಷೇತ್ರ ಬಳಸಿರುವರು. ಇಮ್ಮಡಿ ಕೃಷ್ಣವರ್ಮನ ಶಿರಸಿ ಶಾಸನದಲ್ಲಿ ಮಾತ್ರ ಇವೆರಡನ್ನೂ ಕೂಡಿಸಿ "ಕವ್ವನ್ನಾ(ಙ್ಗಂ)ಡ್ಗಂ ವಿಷಯೇ" ಎಂದು ಬರೆದ ಸ್ಪಷ್ಟವಾದ ನಿದರ್ಶನ ಸಿಗುತ್ತದೆ. ಅವರ್ಗೀಯ ಅಕ್ಷರ ಳ ಬಳಕೆ ಸಂಸ್ಕೃತ ಪಠ್ಯಗಳಲ್ಲಿ ವಿರಳಾತಿ ವಿರಳ, ಕನ್ನಡದ ನಾಮಪದಗಳನ್ನು ಉಚ್ಚರಿಸುವಾಗ ಸಂಸ್ಕೃತ ಲಿಪಿಕಾರರು ಕೞನಿ, ನಿಡುವೊಳ್ ಕೊಳಾಲ, ಪಾಲಗಳನಿ ಸುಳ್ಳಿ ಕೋಳನಲ್ಲೂರು, ವಳ್ಳಾವಿ-ವಿಷಯ ಕಾಣಸಿಗುತ್ತವೆ. ಹೀಗೆ ಸಂಸ್ಕೃತದಲ್ಲಿ ನಾಡು, ಪಲ್ಲಿ, ಊರು ಮುಂತಾದ ಹಳಗನ್ನಡ ಪದಗಳ ಪ್ರವೇಶವಾದವು.
ಪಲ್ಲಿ, ಪಳ್ಳಿ, ಹಳ್ಳಿ ಮತ್ತು ಊರು ಎಂಬ ಪದಗಳು ಹಳಗನ್ನಡ ಬರವಣಿಗೆಯಲ್ಲಿ ಸಾಕಷ್ಟು ಬಳಕೆಯಲ್ಲಿದ್ದವು. ಸಂಸ್ಕೃತದಲ್ಲಿ ಇದನ್ನು ಗ್ರಾಮ ಎನ್ನಲಾಗುತ್ತದೆ. ಕದಂಬರ ಕಾಲದ ಸ್ಥಳನಾಮಗಳಲ್ಲಿ ಸೇರಿಕೊಂಡಿರುವ ಪಲ್ಲಿ ಎನ್ನುವ ಪದವನ್ನು ಸಂಸ್ಕೃತದಲ್ಲಿ ಬದಲಾಯಿಸುವ ಕಾರ್ಯವನ್ನು ಸಂಸ್ಕೃತ ಕವಿಗಳು ಮಾಡಲಿಲ್ಲ.
ಕನ್ನಡ ಶಾಸನಗಳಲ್ಲಿ ಪಲ್ಲಿಯನ್ನು ಮೊದಲು ಬಳಸಿದವರು ಬ್ರಾಹ್ಮೀ-ಪ್ರಾಕೃತದ ಲಿಪಿಕಾರರು. ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಬಳಕೆಯಾಗಿರುವ ಮಳಪಳಿ ಮತ್ತು ಸೋಮಪಲ್ಲಿ. ಕದಂಬರ ಕಾಲದ ಸಂಸ್ಕೃತಭಾಷಾ ಶಾಸನಕಾರರು ಈ ಉಚ್ಚಾರವನ್ನುಮುಂದುವರೆಸಿರುವುದಕ್ಕೆ ಉದಾಹರಣೆಯಾಗಿ ವೇಲ್ಪಲ್ಲಿ, ಕಿಱುಪಾಣನಿಪಲ್ಲಿ, ಮುೞ್ತಕೆಪಲ್ಲಿ, ಹಾಕಿನಿಪಲ್ಲಿ, ನಾಪಿತಪಲ್ಲಿ, ಸಾಟ್ಟಿಪಲ್ಲಿ, ಕಮಕಪಲ್ಲಿ, ಮುಂತಾದವನ್ನು ಉದಾಹರಿಸಬಹುದು. ಭೋಗಿವರ್ಮನ ಬೆಳ್ಳೂರು ತಾಮ್ರಪಟದಲ್ಲಿ ಇಪ್ಪತ್ನಾಲ್ಕು ಪಲ್ಲಿಗಳ ಘಟಕವನ್ನು ಪ್ರಸ್ತಾಪಿಸಲಾಗಿದೆ. 
ಊರು ಎನ್ನುವ ಪದಗಳು ನಮ್ಮ ನಾಡಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಬ್ರಾಹ್ಮೀ-ಪ್ರಾಕೃತದ ಮಳವಳ್ಳಿಯ ಶಾಸನದಲ್ಲಿ ಅಂತ ಭಾವಿಸಿದರೆ ಕನಗನಹಳ್ಳಿಯ ಸನ್ನತಿ ಶಾಸನಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ವೇಗೂರು, ಮತ್ತು ಕೋಟೂರುಗಳನ್ನು ಉಲ್ಲೇಖಿಸುವವು. ಹಾಗಾದರೆ ಎರಡುನೇ ಶತಮಾನಕ್ಕಿಂತ ಮುಂಚೆಯೇ ಇಂತಹ ಊರುಗಳು ಕರ್ನಾಟಕದಲ್ಲಿ ಇತ್ತು ಎನ್ನುವುದನ್ನು ದೇಢಪಡಿಸುತ್ತವೆ. ಕದಂಬರ ಕಾಲದ ಸಂಸ್ಕೃತ ಶಾಸನಕಾರರು ಇವನ್ನು ಮನ್ನಿಸಿ ಮುಂದುವರಿಸಿದರು. ಅವರ ಬರವಣಿಗೆಗಳಲ್ಲಿ ಬಂದಿರುವ ಸ್ಥಾನಕುಂದೂರು, ಪರಲೂರು, ಕೆದೆಇಲ್ಕೂರು, ಮೋಗೂರು, ಸತ್ತೂರು, ಇಡಿಊರು, ಅಳವೂರು, ಕುನ್ದೂರು, ಕೂಡಲೂರು, ಆಸಂದ್ಯಾಲೂರು, ಕೊಳನಲ್ಲೂರು, ಕಿಱುಕೂಡಲೂರು, ಎಂಬವು ಇದಕ್ಕೆ ಉದಾಹರಣೆಗಳು.
ಇದೇ ರೀತಿ ಕುಣ್ಡಿ, ಗೋಡು, ಪಾಟಿ, ಗಲ್ಲಿ, ಸ್ಥಳನಾಮಗಳೂ ಸಂಸ್ಕೃತ ಶಾಸನಗಳಲ್ಲಿ ಕಂಡು ಬಂದಿವೆ. ಇವೂ ಕನ್ನಡ ಮೂಲದ ಪದಗಳು.
ಇನ್ನೂ ಕೆಲವು ಹಳಗನ್ನಡ ಪದಗಳು ಸಂಸ್ಕೃತ ಶಾಸನದಲ್ಲಿ ಸ್ಥಾನ ಪಡೆದುಕೊಂಡಿರುವವು. ಪುಕ್ಕೊಲ್ಲಿ ಮತ್ತು ಸಮೞ ಎಂಬವು ಇದಕ್ಕೆ ಉದಾಹರಣೆಗಳು. ಪುಕ್ಕೊಲ್ಲಿ ಎನ್ನುವುದು ನೀರ್ಣ್ಣು ಎನ್ನುವುದನ್ನು ಸೂಚಿಸುತ್ತದೆ ಅದು ಫಲವತ್ತಾದ ಗದ್ದೆ, ಸಮೞ ಎನ್ನುವುದು ಗ್ರಾಮದ ಆದಾಯ ಅಥವಾ ತೆರಿಗೆಯನ್ನು ಸೂಚಿಸುವುದು. ಈ ಪದಗಳು ಮೃಗೇಶವರ್ಮನ ಎರಡನೇ ವರ್ಷದ ತಾಮ್ರಪಟದ ೫ನೇ ಸಾಲಿನಲ್ಲಿ ಮತ್ತು ಇಮ್ಮಡಿ ಕೃಷ್ಣವರ್ಮನ ೧೯ನೇ ವರ್ಷದ ಶಿರಸಿಯ ಸಂಸ್ಕೃತ ತಾಮ್ರಪಟದ೩೯ನೇ ಸಾಲಿನಲ್ಲಿ ಬಂದಿವೆ. ಇಂತಹ ವರ್ಣಗಳನ್ನು, ಪದಗಳನ್ನು ಬಳಸಿಕೊಂಡು ಸಂಸ್ಕೃತ ಶಾಸನಗಳನ್ನು ಬರೆದ ಕದಂಬ ಲಿಪಿಕಾರರು ಕನ್ನಡವನ್ನು ಸಂಸ್ಕೃತವನ್ನೂ ಬಲ್ಲವರಾಗಿರಬೇಕು. ಇವರಲ್ಲಿ ತಾಳಗುಂದ ಶಿಲಾಶಾಸನವನ್ನು ರಚಿಸಿದ ಕವಿ ಕುಬ್ಜ, ವಿಜಯ ಶಿವಮೃಗೇಶವರ್ಮನ ನಾಲ್ಕನೇ ವರ್ಷದ ದೇವಗಿರಿ ಶಾಸನವನ್ನು ರಚಿಸಿದ ನರವರ ಸೇನಾಪತಿ, ಆರನೇ ವರ್ಷದ ಹೊಸನಗರ ಮತ್ತು ಮೃಗೇಶವರ್ಮನ ಐದನೇ ವರ್ಷದ ಹಿಟ್ನಹೆಬ್ಬಾಗಿಲು ತಾಮ್ರಪಟಗಳನ್ನು ರಚಿಸಿದವನು ಶ್ರೀ ಕೀರ್ತ್ತಿವರ, ಮತ್ತು ಇದೇ ಅರಸನ ಎಂಟನೇ ವರ್ಷದ ಹಲಸಿ ತಾಮ್ರಪಟವನ್ನು ರಚಿಸಿದ ಭಾನುಕೀರ್ತ್ತಿ ಭೋಜಕ ಮತ್ತು ಜಯಂತ ಆಯುಕ್ತಕ ಎಂದು ಗುರುತಿಸಿಕೊಂಡಿರುವರು.
ಹೀಗೆ ಕದಂಬರು ಲಿಪಿಯ ಸಾಮ್ರಾಜ್ಯವನ್ನೇ ಸ್ಥಾಪಿಸಿ, ಪ್ರಾಕೃತದಿಂದ ಸಂಸ್ಕೃತಕ್ಕೆ ಬಂದು ಅಲ್ಲಿಂದ ಬ್ರಾಹ್ಮಿ ಲಿಪಿಯನ್ನು ತೊರೆದು ಸ್ಥಳೀಯವಾದ ಕನ್ನಡ ಬಳಕೆಗೆ ತಂದವರು ಕದಂಬರು.

#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment