Search This Blog

Wednesday 25 July 2018

ನಾನು ಭಾರತೀಯ.


ರಾಮಾಯಣದಲ್ಲಿ ದಶರಥನಿಗೆ ಕೈಕೇಯಿಯಲ್ಲಿ ಜನಿಸಿದವ ಭರತ. ಇಡಿ ರಾಮಾಯಣದ ಕೇಂದ್ರ ಬಿಂದು ಈತ. ಮಂಥರೆಯ ಮಾತನ್ನು ಕೇಳದೇ ಹೋಗಿದ್ದರೆ ರಾಮಾಯಣದ ಕಥೆ ಮುಂದುವರಿಯುತ್ತಿರಲಿಲ್ಲವೇನೋ. ಅದೇನೇ ಇರಲಿ. ಭರತ ಎನ್ನುವ ಹೆಸರು ರಾಮಾಯಣದಲ್ಲಿ ಸಿಗುವುದು ಇಲ್ಲಿಯೇ.
ಮಹಾಭಾರತದಲ್ಲಿ ಪುರುವಂಶದ ದುಷ್ಯಂತ ಮತ್ತು ಶಕುಂತಲೆಗೆ ಮಗನಾಗಿ ಜನಿಸುವವನೇ ಭರತ ಎನ್ನುವ ಉಲ್ಲೇಖ ಆದಿಪರ್ವ ವಿರಾಟಪರ್ವ ಮತ್ತು ದ್ರೋಣ ಪರ್ವದಲ್ಲಿ ಸಿಗುತ್ತದೆ.
ಹಿಂದೆ ಋಷಭದೇವ ಎನ್ನುವವನೊಬ್ಬನಿದ್ದ ಆತನಿಗೆ ಜಯಂತಿ ಎನ್ನುವ ಮಡದಿ ಇದ್ದಳು. ಸಚ್ಚಾರಿತ್ರವಂತರು, ಅಪ್ರತಿಮ ದೇಶಭಕ್ತರೂ ಪ್ರಜಾಪಾಲಕರಾಗಿದ್ದ ಅವರಿಗೆ ಜನಿಸಿದ ಮಗನೇ ಭರತ. ಈತ ಪಾಲಿಸಿದ ಭೂಭಾಗವನ್ನು ಭರತ ಖಂಡ ಎಂದು ಕರೆಯಲಾಯಿತು ಎನ್ನುವುದು ಭಾಗವತ ಮತ್ತು ವಿಷ್ಣುಪುರಾಣದಲ್ಲಿನ ಉಲ್ಲೇಖ. ಭರತಖಂಡ ಮಾತ್ರವಲ್ಲದೇ ಅಜನಾಭವರ್ಷ ಎನ್ನುವುದಾಗಿಯೂ ಕರೆಯಲಾಗಿದೆ.
ಅಯಂತು ತೇ ನವಮಸ್ತೇಷಾಂ ದ್ವೀಪಸ್ಸಾಗರ ಸಂವೃತಃ |
ಯೋಜನಾನಾಂ ಸಹಸ್ರಂತು ದ್ವೀಪೋಯಂ ದಕ್ಷಿಣೋತ್ತರಃ ||
ಆಯತಸ್ತು ಕುಮಾರೀತಃ ಗಂಗಾಯಾಃ ಪ್ರವಹಾವಧಿಃ |
ತಿರ್ಯಗೂರ್ಧ್ವಂತು ವಿಸ್ತೀರ್ಣಃ ಸಹಸ್ರಾಣಿ ದಶೈವತು |
ದ್ವಿಪೋಹ್ಯುಪನಿವಿಷ್ಟೋಯಂ ಮ್ಲೇಚ್ಛೈರಂತೇತು ಸರ್ವತಃ || ಇದು ಮತ್ಸ್ಯಪುರಾಣದ ಮಾತು. ಕನ್ಯಾಕುಮಾರಿಯಿಂದ ಹಿಮಾಲಯದ ತನಕ ವ್ಯಾಪಿಸಿರುವ ಈ ದೇಶ ಪೂರ್ವ ಪಶ್ಚಿಮದ ಸಮುದ್ರಗಳ ನಡುವೆ ಇದೆ. ಕ್ರಮೇಣ ಇದು ಮೇಚ್ಚರ ಆಕ್ರಮಣಕ್ಕೆ ಗುರಿಯಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ಪ್ರಿಯವ್ರತ ರಾಜನ ಮಗನಾದ ಅಗ್ನೀಧ್ರ ಎನ್ನುವವನಿಗೆ ಮಗನಾಗಿ ಜನಿಸುವವನು ಅಜನಾಭ ಎನ್ನುವವನು. ಈತನು ಪಾಲಿಸುವ ಜಂಬೂದ್ವೀಪದ ಒಂದು ಪ್ರದೇಶವನ್ನು ಅಜನಾಭವರ್ಷ ಎಂದು ಕರೆಯಲಾಗಿದೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಮತ್ತು ನನ್ನ ಮನಸ್ಸನ್ನು ಹಿಡಿದಿರುವುದು ಭಾರತದ ಪ್ರಾಚೀನತೆ.
ಭಾರತೀಳೇ ಸರಸ್ವತಿ ಯಾ ವಃ ಸರ್ವಾ ಉಪಬ್ರುವೇ |
ತಾ ನ ಶ್ಚೋದಯತ ಶ್ರಿಯೇ || ಇದು ಋಗ್ವೇದದ ಒಂದನೇ ಮಂಡಲದಲ್ಲಿ ಬರುವ ಋಕ್ಕು. "ಹೇ ಭಾರತೀ, ಇಳಾ, ಸರಸ್ವತೀ ಎಂಬ ಮೂರು ಲೋಕಗಳ ಅಧಿದೇವತೆಗಳೇ, ನಿಮ್ಮೆಲ್ಲರನ್ನೂ ಸಮೀಪಿಸಿ ಸ್ತುತಿಸುತ್ತೇನೆ. ನೀವೆಲ್ಲರೂ ಸಂಪತ್ತನ್ನು ಪಡೆಯುವುದಕ್ಕಾಗಿ ನಮ್ಮನ್ನು ಪ್ರೇರೇಪಿಸಿ. ಎನ್ನುವ ಅರ್ಥವನ್ನು ಇದು ಧ್ವನಿಸುತ್ತದೆ. ಇಲ್ಲಿ ಈ ಮೂರೂ ದೇವತೆಗಳನ್ನು ಯಜ್ಞಕ್ಕೆ ಪ್ರಾರ್ಥಿಸಲಾಗಿದೆ.
ಇವುಗಳ ಕುರಿತಾಗಿ ಇದೇ ಮಂಡಲದಲ್ಲಿ
ಶುಚಿರ್ದೇವೇಶ್ವರ್ಪಿತಾ ಹೋತ್ರಾ ಮರುತ್ಸು ಭಾರತೀ |
ಇಳಾ ಸರಸ್ವತೀ ಮಹೀ ಬರ್ಹಿಃ ಸೀದಂತು ಯಜ್ಞಿಯಾಃ ||
ಇಲ್ಲಿ ಭಾರ್ತಿಯನ್ನು ಕುರಿತಾಗಿ ಅಮರತ್ವವನ್ನು ಪಡೆದವರೂ, ಪ್ರಕಾಶಮಾನರಾದವರೂ ಸ್ತೋತ್ರಗಳಲ್ಲಿಯಾಗಲೀ, ಮರುತ್ತುಗಳಲ್ಲಿಯಾಗಲೀ, ಅಥವಾ ಋತ್ವಿಕ್ಕುಗಳಲ್ಲಿ ನಿಯತವಾಗಿರುವವಳೂ, ಹೋಮ ಸಂಪಾದಿಕೆಯಾದವಳೂ, ಆದ ದ್ಯುಲ್ಲೋಕಸ್ಥಳೂ, ಆದಿತ್ಯ ಸಂಬಂಧಿನಿಯೂ ಆದ ವಾಗ್ದೇವತೆಯೂ, ಪಾರ್ಥಿವಸ್ಥಳಾದ ವಾಗ್ದೇವತೆಯೂ ಮತ್ತು ಮಹತ್ತಾದ ಸ್ವರೂಪ ಉಳ್ಳವಳೂ, ಮಾಧ್ಯಮಿಕ ವಾಕ್ಕೂ ಈ ಮೂರು ಸ್ಥಾನಗಳ ವಾಗಾಭಿಮಾನ ದೇವತೆಗಳೂ ಯಜ್ಞಕ್ಕೆ ಯೋಗ್ಯರಾಗಿ ಬಂದು ದರ್ಭಾಸನಸ್ಥರಾಗಲಿ ಎನ್ನುವ ಅರ್ಥ ಕೊಡುತ್ತದೆ.
ಭಾರತೀ. ಇಳಾ ಮತ್ತು ಸರಸ್ವತಿಯರನ್ನು ತಿಸ್ರೋ ದೇವೀ ಎನ್ನುವುದಾಗಿಯೇ ಕರೆಯಲಾಗಿದೆ. ಇದರಲ್ಲಿ ಭಾರತಿಗೆ ಹೋತ್ರಾ ಮತ್ತು ಶುಚಿಃ ಮತ್ತು ಅರ್ಪಿತಾ ಎನ್ನುವುದಾಗಿ ಹೇಳಲಾಗಿದೆ. ಈ ತಿಸ್ರೋ ದೇವತೆಗಳು ಅಗ್ನಿಯನ್ನು ಪ್ರತಿಬಿಂಬಿಸುತ್ತವೆ.
ನಿರುಕ್ತದಲ್ಲಿ "ಏತು ನೋ ಯಜ್ಞಂ ಭಾರತೀ ಕ್ಷಿಪ್ರಂ | ಭರತ ಆದಿತ್ಯಸ್ತಸ್ಯ ಭಾ ಇಳಾಚ ಎನ್ನಲಾಗಿದೆ. ಭ ಎಂದರೆ ಸೂರ್ಯನನ್ನು ನಿರ್ದೇಶಿಸಲಾಗಿದೆ. ರತ ಎನ್ನುವುದು ಪ್ರಭೆಯನ್ನು ನಿರ್ದೇಶಿಸುತ್ತದೆ. ಅಂದರೆ ಪ್ರಭಾರೂಪವಾದ ದೇವತೆ ಈಕೆ. ಈ ತಿಸ್ರೋ ದೇವತೆಗಳಲ್ಲಿ ಇಳಾ ಪಾರ್ಥಿವಾಗ್ನಿಯನ್ನು ಅಲಂಕರಿಸಿ ಆಕ್ರಮಿಸಿಕೊಂಡಳು, ಸರಸ್ವತಿಯು ಮಧ್ಯವನ್ನಾಕ್ರಮಿಸಿದಳು. ಭಾರತಿಯು ದೇವಲೋಕವನ್ನು ಪಡೆದುಕೊಂಡಳು ಎಂದು ಬೃಹದ್ದೇಶಿಯಲ್ಲಿ ಹೇಳಲಾಗಿದೆ.
"ಇಳಾ ಸರಸ್ವತೀ ಮಹಿ" ಎಂದು ವೇದದಲ್ಲಿ ಬರುವುದು ಇಲ್ಲಿ ಮಹೀ ಎನ್ನುವುದು ಭಾರತಿ ಎನ್ನುವುದರ ವಿಶೇಷಣ ಎನ್ನಲಾಗಿದೆ.
"ಭಾರತೀ ಪವಮಾನಸ್ಯ ಸರಸ್ವತೀಳಾ ಮಹೀ |"
ಎನ್ನುವ ಋಕ್ಕಿನಲ್ಲಿಯೂ ಸಹ ಭಾರತಿಯ ವಿಶೇಷಣವನ್ನಾಗಿ ಮಹೀ ಶಬ್ದವನ್ನು ಬಳಸಿಕೊಳ್ಳಲಾಗಿದೆ ಎನ್ನುವುದು ಸಾಯಣಾಚಾರ್ಯರ ಅಭಿಮತ.
ಋಗ್ವೇದದ ನಾಲ್ಕನೇ ಮಂದಲದಲ್ಲಿ "ತಸ್ಮಾ ಅಗ್ನಿರ್ಭಾರತಃ" ಎನ್ನುವ ಋಕ್ಕು ಇದೆ. ಅಲ್ಲಿ ಭಾರತಿಯನ್ನೇ ಭಾರತ ಎನ್ನಲಾಗಿದೆ. ಅಂದರೆ ಅಗ್ನಿಯ ಅತ್ಯಂತ ನಿಕಟತ್ವವನ್ನು ನಿರ್ದೇಶಿಸಲಾಗಿದೆ. ಅಂದರೆ ಸೂರನನ್ನೇ ಇಲ್ಲಿ ಅಗ್ನಿ ಎನ್ನುವ ನಿರ್ದೇಶದಿಂದ ಕರೆಯಲಾಗಿದೆ. ಇಲ್ಲಿ ಇಳಾ ಭಾರತೀ ಮತ್ತು ಸರಸ್ವತಿ ಎನ್ನುವುದು ಅಗ್ನಿಯನ್ನಾಶ್ರಯಿಸಿದರೂ ಸಹ ಸರಸ್ವತಿಯು ನೀರನ್ನಾಶ್ರಯಿಸಿದ್ದಾಳೆ ಅವಳು ದೇವತಾತ್ಮಳಾದ ನದಿ ಎನ್ನುವುದು ಕೆಲವರ ಅಭಿಮತ ಅಲ್ಲಿಯೂ ಅವರು ಸರ ಎನ್ನುವ ಶಬ್ದ ಹರಿಯುವುದನ್ನು ಸೂಚಿಸುವುದು ಎನ್ನುತ್ತಾರೆ. ಆದರೆ ಅಗ್ನಿಯು ಭೂಮಿ ಮತ್ತು ಅಂತರಿಕ್ಷ ಮತ್ತು ದೇವಲೋಕಗಳನ್ನೂ ಆಕ್ರಮಿಸಿಕೊಂಡಿರುವುದರಿಂದ ಭಾರತಿ ಎನ್ನುವುದು ಸೂರ್ಯನ ಪ್ರಭೆ ಎನ್ನುವುದು ಸರಿ ಎನ್ನಿಸುತ್ತದೆ. ಸರಸ್ವತಿಯು ಸಿಡಿಲು ಮಿಂಚುಗಳಿಗೆ ಅಧಿದೇವತೆ ಎನ್ನಲಾಗುತ್ತದೆ. ಇಳಾ ಎನ್ನುವುದು ಅಗ್ನಿಗೆ ನೇರವಾದ ಸಂಬಂಧ ಹೊಂದಿರುವುದರಿಂದ ಈ ತಿಸ್ರೋ ದೇವತೆಗಳು ಅಗ್ನಿಯ ಇನ್ನೊಂದು ರೂಪ ಎಂದೂ ಹೇಳಲಾಗಿದೆ.
ಆ ನೋ ಯಜ್ಞಂ ಭಾರತೀ ತೂಯಮೇತ್ವಿಳಾ ಮನುಷ್ವದಿಹ ಚೇತಯಂತಿ |
ತಿಸ್ರೋದೇವಿರ್ಬರ್ಹಿರೇದಂ ಸ್ಯೋನಂ ಸರಸ್ವತೀ ಸ್ವಪಸಃ ಸದಂತು || ಇದು ಹತ್ತನೇ ಮಂಡಲದಲ್ಲಿನ ಋಕ್ಕು. ಸೂರ್ಯನ ತೇಜೋ ರೂಪವಾದ ಭಾರತೀ ದೇವಿಯು ನಮ್ಮ ಯಜ್ಞಕ್ಕೆ ಕ್ಷಿಪ್ರವಾಗಿ ದಯಮಾಡಲಿ, ಮಾನವರಂತೆ ಕರ್ತ್ವ್ಯವನ್ನರಿತ ಇಳಾ ಮತ್ತು ಸರಸ್ವತಿಯೂ ಬರಲಿ. ಶ್ರೇಷ್ಠವಾದ ಕರ್ಮವುಳ್ಳ ಈ ದೇವತೆಗಳು ನಮ್ಮ ಯಜ್ಞಕ್ಕೆ ಬಂದು ಕುಳಿತುಕೊಳ್ಳಲಿ ಎನ್ನುವುದು ಇದರ ಆಶಯ.
ಭರತಃ ಆದಿತ್ಯಸ್ತಸ್ಯ ಭಾ ಎನ್ನುವದನ್ನು ಗಮನಿಸಿದರೆ ಇಲ್ಲಿ ಭರತ ಎನ್ನುವುದು ಸೂರ್ಯನಿಗೆ. ಜಗತ್ತಿನ ಪ್ರತಿಯೊಂದು ಪ್ರಾಣಿ ಪಕ್ಷಿಗಳೆಲ್ಲವನ್ನೂ ಚೆತನಾ ಸ್ವರೂಪರಂತೆ ಮಾಡುವವನೇ ಭರತ ಅವನೇ ಸೂರ್ಯ. ಈತ ಮಳೆಯ ಮತ್ತು ಅದರ ನೀರಿನಿಂದಲೂ ಜನರ ಅಭಿವೃದ್ಧಿಯನ್ನು ಮಾಡುವಂತವನು ಆದುದರಿಂದಲೇ ಭರತ ಎನ್ನುವುದಾಗಿ ಕರೆಯಲಾಗಿದೆ. ತಸ್ಯ ಭಾ ಎಂದರೆ ಅವನ ಪ್ರಕಾಶಕ್ಕೆ ಎಂದು ಅಂದರೆ ಸೂರ್ಯನ ಪ್ರಕಾಶವನ್ನು ಇಲ್ಲಿ ಭಾ ಎನ್ನಲಾಗಿದೆ. "ಇಳಾ ಮನುಷ್ಯದಿಹ ಚೇತಯಮಾನಾ" ಅಂದರೆ ಇಳಾ ಎನ್ನುವವಳು ತಿಳಿದಿರುವವಳು ಎನ್ನುವುದಾಗಿ ಅರ್ಥ. ಅಂದರೆ ಹೇಗೆ ಹಸಿದ ಮನುಷ್ಯ ತನ್ನ ಆಹಾರ ಸಿಕ್ಕಿದೊಡನೆ ಅವಸರದಿಂದ ಬಂದು ಸ್ವೀಕರಿಸುತ್ತಾನೋ ಅದೇ ರೀತಿ ಈ ಇಳಾ ಅಗ್ನಿಗೆ ಸಮರ್ಪಿಸುವ ಆಹುತಿಯನ್ನು ಬೇಗನೇ ಬಂದು ಸ್ವೀಕರಿಸುತ್ತಾಳೆ ಎನ್ನುವ ಅರ್ಥ.
ಹೀಗೇ ಭಾರತೀ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನು. ಆದಿತ್ಯನ ದೀಪ್ತಿಗೆ ಭಾ ಎಂದು ಹೆಸರು ಆದುದರಿಂದ ಭಾರತಿ ಎಂದರೆ ಸೂರ್ಯನ ಪ್ರಕಾಶ ಮತ್ತು ಸೂರ್ಯ ಮಂಡಲದಲ್ಲಿನ ಅಗ್ನಿಯನ್ನು ಕುರಿತಾಗಿ ಹೇಳಿರುವುದು.
ಇಳಾ ಎಂದರೆ ಭೂಮಿಯನ್ನು ಕುರಿತಾಗಿ ಹೇಳಿರುವುದು. "ಮನುಷ್ವತ್ ಚೇತಯಂತೀ" ಎಂದರೆ ಮನುಷ್ಯರಿಗೆ ಭೂಮಿಯ ಮೇಲಿನ ಅನ್ನಾದಿ ಆಹಾರಗಳನ್ನು ಸಂಪತ್ತು ಮತ್ತು ಶಾಂತಿಯನ್ನು ಕೊಡುವುದರಿಂದ ಇವಳು ಭೂಮಿಯಲ್ಲಿನ ಅಗ್ನಿ.
ಸರಸ್ವತೀ ಎನ್ನುವವಳು ಅಂತರಿಕ್ಷದ ಸಿಡಿಲು ಮತ್ತು ಮಿಂಚು ಗುಡುಗುಗಳಿಗೆ ಅಧಿದೇವತೆಯಾದ್ದರಿಂದ ಅಲ್ಲಿನ ಅಗ್ನಿಯೆಂದು ಹೇಳಲಾಗಿದೆ. ಅಗ್ನಿ ಅಥವಾ ಸೂರ್ಯ (ಶಕ್ತಿ) ಭೂಮಿಗೆ ಅನಿವಾರ್ಯ ಸಕಲ ಚರಾಚರ ವಸ್ತುಗಳು ಜೀವಿಗಳೂ ಸಹ ಈ ಶಕ್ತಿಯನ್ನು ಅವಲಂಬಿಸಿವೆ. ಇಂತಹ ಶಕ್ತಿ ಭಾರತ. ಈ ಹೆಸರೇ ಅತ್ಯಂತ ಸುಂದರ. ಈ ಸುಂದರ ಹೆಸರಿನಲ್ಲಿಯೇ ಸೂರ್ಯನಂತಹ ಪ್ರಭೆ ಹೊಂದಿದೆ. ಸೂರ್ಯನ ಶಕ್ತಿ ಈ ಭಾರತಕ್ಕಿದೆ. ಸೂರ್ಯನಿಲ್ಲದೇ ಹೇಗೆ ಭೂಮಿ ಇಲ್ಲವೋ ಅದೇ ರೀತಿ ಭಾರತ ವಿಲ್ಲದ ವಿಶ್ವ ಇರಲಿಕ್ಕಿಲ್ಲ. ಇಡಿಯ ಜಗತ್ತನ್ನು ಹಿಡಿದಿಡುವ ಮತ್ತು ಇಡೀ ಜಗತ್ತಿಗೆ ಬೆಳಕನ್ನು ಕೊಡುವ ಶಕ್ತಿ ಈ ಭಾರತಕ್ಕಿದೆ. ಹೌದು ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬಂದಿರುವುದು ಇಲ್ಲಿ ಆಳಿದ ರಾಜರುಗಳಿಂದ ಇರಬಹುದು ಆದರೆ ಜಗತ್ತಿಗೆ ಶಕ್ತಿಯನ್ನೊದಗಿಸುವ ಭಾರತ ನನ್ನ ಕಣ್ಣಿಗೆ ಕಾಣಿಸುವುದು ಇಂತಹ ಸೂರ್ಯನಾರಯಣನಿಂದಲೇ. ಇದು ಜಗದ್ಗುರು ಭಾರತ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment