Search This Blog

Monday 30 July 2018

ಕಃ ಅಂದರೆ ಯಾರು ?


ಇಂದ್ರನನ್ನು ಕೊಲ್ಲಲಿಕ್ಕಾಗಿಯೇ ಮಗಬೇಕೆಂದು ಯಜ್ಞಮಾಡಿದ ವಿಶ್ವರೂಪಾಚಾರ್ಯನ ಸ್ವರದಲ್ಲಿ ವ್ಯತ್ಯಾಸವಾಗಿದ್ದರಿಂದ ಇಂದ್ರನಿಂದಲೇ ಕೊಲ್ಲಲ್ಲ್ಪಡುವ ಮಗನಾಗಿ ವ್ರತ್ರ ಹುಟ್ಟುತ್ತಾನೆ. ಇಂದ್ರನ ಪರಮ ವೈರಿಯಾಗಿ ಬೆಳೆಯುತ್ತಾನೆ. ಇಂದ್ರ ವ್ರತ್ರನನ್ನು ಯುದ್ಧವೊಂದರಲ್ಲಿ ಸಂಹರಿಸುತ್ತಾನೆ. ಈತನ ಸಂಹಾರದ ನಂತರ ಸಮಸ್ತ ಭೂಮಂಡಲವೇ ಇಂದ್ರನ ವಶವಾಗುತ್ತದೆ. ಆಗ ಇಂದ್ರ ಪ್ರಜಾಪತಿಯಲ್ಲಿ ಒಂದು ಮಾತು ಕೇಳುತ್ತಾನೆ. ಪ್ರಜಾಪತಿಯೇ ಇಷ್ಟರ ತನಕ ಮಹಾಸ್ಥಾನವನ್ನು ಗಳಿಸಿ ನೀನು ಎಲ್ಲರಿಂದಲೂ ಪೂಜ್ಯನೆನಿಸಿಕೊಂಡಿದ್ದಿಯಲ್ಲ. ಅದು ಇನ್ನು ಮುಂದೆ ನನಗೆ ಸಲ್ಲಬೇಕು ಎನ್ನುತ್ತಾನೆ. ಇನ್ನು ಮುಂದೆ ನಿನ್ನ "ಮಹತ್" ಪದವಿಯು ನನಗೆ ಬೇಕು ಎನ್ನುತ್ತಾನೆ. ಆಗ ಪ್ರಜಾಪತಿಯು ಹೇಳುತ್ತಾನೆ. ಇಲ್ಲಿಯ ತನಕ ನನ್ನಲ್ಲಿದ್ದ ಆ "ಮಹತ್" ಪದವಿಯನ್ನು ತೆಗೆದುಕೊಂಡರೆ, ಪದವಿಯನ್ನು ಕಳೆದುಕೊಂಡ ನಾನು ಯಾರು (ಕಃ ?) ಎನ್ನುತ್ತಾನೆ. ಎಲ್ಲವನ್ನೂ ಕಳೆದು ಕೊಂಡ ನನ್ನ ಸ್ಥಾನಮಾನವೇನು ಎಂದು ಕೇಳುತ್ತಾನೆ. ಅದಕ್ಕೆ ಇಂದ್ರನು ಪ್ರಜಾಪತಿಯೇ ಈಗ ನೀನೇ ಕೇಳಿರುವೆಯಲ್ಲ ನಾನು ಯಾರು "ಕಃ" ಎಂದು ಅದೇ ಇನ್ನು ಮುಂದೆ ನೀನು. ಇನ್ನು ಮುಂದೆ ನೀನು ಕಃ ಶಬ್ದದಿಂದ ಕರೆಯಲ್ಪಡುವೆ. ಅಂದಿನಿಂದ ಪ್ರಜಾಪತಿಗೆ ಕ ಎನ್ನುವ ಹೆಸರು ಪ್ರಚಲಿತಕ್ಕೆ ಬಂದು ಪ್ರಸಿದ್ಧನಾಗುವನು. ಇದು ಐತರೇಯ ಬ್ರಾಹ್ಮಣದ ೨೧-೨೧ ರಲ್ಲಿ ಬರುವ ಕಥೆ. "ಪ್ರಜಾಪತಿರಭವಕ್ಕೋ ವೈ ನಾಮ ಪ್ರಜಾಪತಿರ್ಮಹಾನಿಂದ್ರೋ ಭವತ್" ಎಂದು ಐತರೇಯದಲ್ಲಿ ಸಿಗುತ್ತದೆ. ಈ ಕಾರಣದಿಂದಲೇ ಯಾವುದಾದರೂ ದಾನವನ್ನು ಸ್ವೀಕರಿಸುವಾಗ ಹೇಳುವ ಮಂತ್ರಗಳಲ್ಲಿ ಈ ವಿಷಯವು ಹೇಳಲ್ಪಡುತ್ತದೆ. "ಕ ಇದಂ ಕಸ್ಮಾ ಅದಾದಿತ್ಯಾಹ | ಪ್ರಜಾಪತಿರ್ವೈ ಕಃ | ಪ್ರಜಾಪತಯ ಏವ ತದ್ ದದಾತಿ ಎಂದು ಹೇಳುವ ರೂಢಿ ಬೆಳೆದು ಬಂತು.
ಕ ಎನ್ನುವ ಅಕ್ಷರಕ್ಕೆ ಸುಖ ಎನ್ನುವ ಅರ್ಥವೂ ಇರುವುದರಿಂದ ಪ್ರಜಾಪತಿಯನ್ನು ಸುಖ ದಾಯಕನು ಅಥವಾ ಸುಖ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. "ಇಂದ್ರೋ ವೃತ್ರ ಮಹಂತಂ ದೇವಾ ಅಬ್ರುವನ್ ಮಹಾನ್ವಾ ಅಯಮಭೂದ್ಯೋ ವೃತ್ರಮಧೀದಿತಿ ತನ್ಮಹೇಂದ್ರಸ್ಯ ಮಹೇಂದ್ರತ್ವಂ" ಪ್ರಜಾಪತಿಯ ಮಹತ್ತನ್ನು ಇಂದ್ರ ಸ್ವೀಕರಿಸಿದುದರಿಂದ ಮುಂದೆ "ಮಹೇಂದ್ರ" ಎನ್ನಿಸಿಕೊಂಡ.
ಹಿರಣ್ಯಗರ್ಭಂ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮಾ ||
ಹಿರಣ್ಯಗರ್ಭಂ ಸಮವರ್ತತಾಗ್ರೇ ಎಂದರೆ ಇಲ್ಲಿ ಹಿರಣ್ಯಗರ್ಭನು ಪ್ರಜಾಪತಿ ಎಂದಾಗುವುದಾದರೂ, ಹಿರಣ್ಭ್ಯ ಗರ್ಭ ಎನ್ನುವುದು ಈ ಜಗತ್ತಿನ ಸೃಷ್ಟಿಯ ಆರಂಭದಲ್ಲಿ ವಿಶ್ವವು ಒಂದು ಅಂಡಾಕಾರದಲ್ಲಿ ಚಿನ್ನದ್ದ ಬಣ್ಣದ ಪ್ರಕಾಶಮಾನವಾದ ಬೆಳಕನ್ನು ಸೂಸುತ್ತಿತ್ತು ಎನ್ನುವುದು. ಅಂತಹ ಪ್ರಕಾಶಮಾನವಾದ ಅಂಡವನ್ನು ತನ್ನ ಗರ್ಭದಲ್ಲಿ ಧರಿಸಿದಂತವನನ್ನೇ ಹಿರಣ್ಯಗರ್ಭನೆಂದು ಕರೆಯಲಾಗಿದೆ. ಇಲ್ಲಿ ಇನ್ನೊಂದು ಸೂಕ್ಷ್ಮ ಅಡಗಿದೆ, ಸೃಷ್ಟಿಗೆ ಪೂರ್ವದಲ್ಲಿ ಯಾವುದೂ ಇರಲಿಲ್ಲ ಅವ್ಯಕ್ತವಾದ ಒಂದು ಪ್ರಕಾಶ(ಶಕ್ತಿ) ಒಂದು ನಮ್ಮ ಕಣ್ಣಿಗೆ ಕಾಣಿಸದಷ್ಟು ಪ್ರಮಾಣದಲ್ಲಿದ್ದದ್ದು. ವ್ಯಕ್ತವಾಗ ಬೇಕೆನ್ನುವ ಇಚ್ಚೆ ಆ ಪರಮಾತ್ಮನಲ್ಲಿ ಉಂಟಾಗುವುದನ್ನೇ ತೈತ್ತಿರೀಯ ಉಪನಿಷತ್ತಿನಲ್ಲಿ "ಸೋ ಕಾಮಯತ | ಬಹುಸ್ಯಾಂ ಪ್ರಜಾಯಾಯೇತಿ ......... ಎಂದು ಹೇಳಿರುವುದು ಸೃಷ್ಟಿಯ ಕ್ರಿಯೆಯನ್ನು. ಒಂದು ವಸ್ತುವಿನಲ್ಲಿ ಅಡಕವಾಗಿರುವ ಇನ್ನೊಂದು ವಸ್ತುವನ್ನೇ "ಗರ್ಭ" ಎನ್ನಲಾಗುತ್ತದೆ. ಹೀಗೇ ಹಿರಣ್ಯ ಗರ್ಭ ಎನ್ನುವ್ದು ಸೃಷ್ಟಿ ಕ್ರಿಯೆಯನ್ನು ಪ್ರತಿಪಾದಿಸುತ್ತದೆ. ಇಲ್ಲಿ ಹಿರಣ್ಯ ಗರ್ಭನಾದ ಪ್ರಜಾಪತಿಯೊಬ್ಬನೇ ಇದ್ದ ಎನ್ನಲಾಗಿದೆ.
"ಭೂತಸ್ಯ ಜಾತಃ ಪತಿಃ ಏಕಃ ಆಸೀತ್" ಸಮಸ್ತ ಚರಾಚರ ವಸ್ತು ಮತ್ತು ಪ್ರಾಣಿಗಳಿಗೂ ಆತನೊಬ್ಬನೇ ಆಜ್ಞಾಧಾರಕನಾಗಿದ್ದ ಎನ್ನುತ್ತದೆ.
"ಕಸ್ಮೈ ದೇವಾಯ ಹವಿಷಾ ವಿಧೇಮಾ " ಇಲ್ಲಿ ಪುನಃ ಕ ಕಾರ ಬಂತು. ಇಲ್ಲಿ ಕಸ್ಮೈ ಎಂಉ ಬಂದಿದೆ ಅಂದರೆ ಕಂ ಎನ್ನುವುದು ಸುಖವನ್ನು ಸೂಚಿಸುವುದಕ್ಕಾಗಿ. ಕಸ್ಮೈ ಎನ್ನುವುದು ಸುಖ ಸ್ವರೂಪನಾದ ಪ್ರಜಾಪತಿಯನ್ನು ಕುರಿತಾಗಿದೆ. ನಿರುಕ್ತದಲ್ಲಿ ಇದನ್ನೇ "ಕಃ ಕ್ರಮನೋ ವಾ ಕ್ರಮಣೋ ವಾ ಸುಖೋ ವಾ" ಎನ್ನಲಾಗಿದೆ. ಅಂದರೆ ಕಂ ಎನ್ನುವುದು ಪ್ರೀತಿಸು ಎನ್ನುವುದನ್ನು ಧ್ವನಿಸುವುದರಿಂದ ಇಲ್ಲಿ ಸಕಲವನ್ನೂ ಪ್ರೀತಿಸುವವನು ಎನ್ನುವುದು ಅರ್ಥ. ಕಃ ಎನ್ನುವುದು ಇದರಿಂದಲೇ ಹುಟ್ಟಿದ್ದು, ಕ್ರಮಣ ಅತ್ರಿಕ್ರಮಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಕಃ ಎಂದರೆ ಸುಖಸ್ವರೂಪನಾದವನು ಎನ್ನುವುದು ಒಟ್ಟಾರೆ ಅರ್ಥ. ಹೀಗೆ ಕಃ ಶಬ್ದವು ಬಹಳ ವಿಸ್ತಾರವಾದ ಅರ್ಥವನ್ನು ಕೊಡುತ್ತದೆ
#ಶಿಲೆಗಳಲ್ಲಡಗಿದ_ಸತ್ಯ


No comments:

Post a Comment