Search This Blog

Monday 30 July 2018

ಜಗತ್ತಿನ ಮೊದಲ ಡಾಕ್ಟರ್ ಸೂರ್ಯ


ಪ್ರಸ್ಕಣ್ವಮಹರ್ಷಿ ಋಗ್ವೇದ ಕಾಲದ ಒಬ್ಬ ಋಷಿಯಾಗಿದ್ದ. ಅನೇಕ ಸೂಕ್ತಗಳ ದೃಷ್ಟಾರನಾಗಿ ಕಾಣಿಸಿಕೊಳ್ಳುವ ಈತ ಕಣ್ವ ಮಹರ್ಷಿಯ ವಂಶದವನು. ಕಣ್ವನ ಮಗ ಎನ್ನುವುದಾಗಿಯೂ ಋಗ್ವೇದದ ಒಂದನೇ ಮಂಡಲದ ನಲವತ್ತನಾಲ್ಕನೇ ಸೂಕ್ತದಲ್ಲಿ ಹೇಳಲಾಗಿದೆ. ಕಣ್ವ ಋಷಿಯು ಋಗ್ವೇದದ ೯೭ ಋಕ್ಕುಗಳಿಗೆ ಋಷಿಯಾಗಿ ಸಿಗುತ್ತಾನೆ. ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಈತ ಒಬ್ಬ. ಋಗ್ವೇದದ ಎಂಟನೇ ಮಂಡಲದಲ್ಲಿರುವ ಎಲ್ಲಾ ಸೂಕ್ತಗಳಿಗೆ ಈತ ಮತ್ತು ಈತನ ವಂಶೀಯರೇ ಋಷಿಗಳಾಗಿದ್ದಾರೆ. ಈ ಕಣ್ವನ ಮಗ ಪ್ರಸ್ಕಣ್ವ ವಿಶೇಷವಾಗಿ ಕಾಣಿಸಿಕೊಳ್ಳುತ್ತಾನೆ. ಅದಕ್ಕೆ ಕಾರಣವಿದೆ ಆತ ಸೂರ್ಯನ ಕುರಿತಾಗಿ ಎಲ್ಲಾ ಕಡೆಯೂ ಪ್ರಾರ್ಥಿಸಿ ಆತನ ಶಕ್ತಿಯನ್ನು ಹೊಗಳುತ್ತಾನೆ. ಪ್ರಸ್ಕಣ್ವ ವ್ಯಾಧಿಗಳಿಂದ ಬಳಲುತ್ತಿದ್ದ ಎನ್ನುವುದು ಆತನ ಅನೇಕ ಋಕ್ಕುಗಳಿಂದ ತಿಳಿದು ಬರುತ್ತದೆ.
ಉದ್ಯನ್ನದ್ಯ ಮಿತ್ರಮಹ ಆರೋಹನ್ನುತ್ತರಾಂ ದಿವಂ |
ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ ||
ಹೇ ಸೂರ್ಯದೇವ, ನೀನು ಈ ಜಗತ್ತಿನ ಅನುಕೂಲವಾಗಿರತಕ್ಕ ತೇಜಸ್ಸಿನಿಂದ ಕೂಡಿದ್ದಿಯೇ. ಸಕಲ ಚರಾಚರ ಜೀವ ಜುಅಂತುಗಳಿಗೂ ಎಲ್ಲವಕ್ಕೂ ಪ್ರೇರಕನಾಗಿ ಚೈತನ್ಯವನ್ನು ತುಂಬುವವನಾಗಿದ್ದಿಯೇ, ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರುವ ಅಂತರಿಕ್ಷವನ್ನು ಹತ್ತುತ್ತಾ ನನ್ನ ಹೃದಯಸಂಬಂಧೀ ರೋಗ(ಹೃದಯದಲ್ಲಿನ ಆಂತರಿಕವಾದ ರೋಗ) ಮತ್ತು ನನ್ನ ಕಾಮಾಲೆ ಅಥವಾ ಹಳದಿ ಬಣ್ಣದ ಚರ್ಮವ್ಯಾದಿಯನ್ನು ಗುಣಪಡಿಸು ಎನ್ನುವುದು ಪ್ರಸ್ಕಣ್ವ ಋಷಿಯ ನಿವೇದನೆ. ಅಂದರೆ ಆತ ಈ ಎರಡು ವಿಧದ ರೋಗದಿಂದ ಪೀಡಿತನಾಗಿ ಅದನ್ನು ಗುಣಪಡಿಸುವಂತೆ ಬೇಡಿಕೊಳ್ಳುತ್ತಾನೆ.
ಈ ಋಕ್ಕನ್ನು ರೋಗದ ಶಾಂತಿಗಾಗಿ ಅಂದರೆ ರೋಗ ಉಲ್ಬಣಿಸದಂತೆ ಪಠಿಸಬೇಕಂತೆ. ಉದ್ಯನ್ನದ್ಯ ಎನ್ನುವ ಈ ಋಕ್ಕು ಪ್ರಸ್ಕಣ್ವನ ಚರ್ಮ ಸಂಬಂಧೀ ರೋಗವನ್ನು ನಿವಾರಿಸುವ ಕುರಿತು ಆತ ಸೂರ್ಯನಲ್ಲಿ ಬೇಡಿಕೊಳ್ಳುವ ಕುರಿತು ಅದನ್ನೇ "ಉದ್ಯನ್ನದ್ಯ ಮಿತ್ರಮಹ" ಅಂದರೆ ಈಗತಾನೇ ಉದಯಿಸುತ್ತಿರುವ ಸೂರ್ಯನು ಆರೋಹನ್ ಉತ್ತರಾಂ ದಿವಂ ಅಂದರೆ ಆಮೇಲೆ ಅತ್ಯಂತ ಎತ್ತರಕ್ಕೆ ಏರಿ ಹೋಗುತ್ತಾನೆ. ಎಂದು "ಮಿತ್ರಮಹ" ಎನ್ನುವುದು ಸೂರ್ಯನಿಗೆ. ಅಂದರೆ ಅನುಕೂಲವಾದ ಮತ್ತು ಅತ್ಯವಶ್ಯವಾದ ಕಾಂತಿಯಿಂದ ಕೂಡಿರುವವನು ಎನ್ನುವುದನ್ನು ಸೂಚಿಸುತ್ತದೆ. "ಹೃದ್ರೋಗಂ" ಎನ್ನುವುದು ಹೃದಯದ ಸಂಬಂಧವಾದ ರೋಗವನ್ನು ಕುರಿತಾಗಿ ಹೇಳಲಾಗಿದೆ. "ಹರಿಮಾಣಂ" ಎನ್ನುವುದು ಬಾಹ್ಯ ಶರೀರದ ಚರ್ಮವು ಹಳದೀ ಬಣ್ಣಕ್ಕೆ ತಿರುಗಿ ಉಂಟಾಗುವ ಚರ್ಮವ್ಯಾದಿ ಅಥವಾ ತೊನ್ನು ಎನ್ನುವ ಕಾಯಿಲೆಯನ್ನು ಸೂಚಿಸುತ್ತದೆ. ಹೀಗೇ ಸೂರ್ಯನನ್ನು ಕುರಿತಾಗಿ ಇಲ್ಲಿ ಪ್ರಾರ್ಥನೆ ಇದ್ದರೆ ಮುಂದಿನ ಋಕ್ಕನ್ನು ಗಮನಿಸಿದರೆ ಅಲ್ಲಿ :
ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ |
ಅಥೋ ಹಾರಿದ್ರವೇಷು ಮೇ ಹರಿಮಾಣಂ ನಿ ದಧ್ಮಸಿ ||
ಈ ಋಕ್ಕಿನಲ್ಲಿ ಪರಿಹಾರವನ್ನೂ ಸೂಚಿಸಿದ್ದಾನೆ. ನನಗೆ ಈ ಹಳದಿ ಬಣ್ಣದ ದೇಹ ಬೇಡ ಇದು ನನಗೆ ಅನವಶ್ಯಕ ಇದ್ರ ಅವಶ್ಯಕತೆ ಇರುವುದು ಗಿಳಿಗಳಿಗೆ. ಅವುಇಗಳಿಗೆ ಹಸಿರು ಬಣ್ಣ್ದ ಜೊತೆಗೆ ಹಳದಿಯೂ ಇದೆ, ಅದಿಲ್ಲವಾದರೆ "ಹಾರಿದ್ರವೇಷು" ಅಂದರೆ ಹರಿತಾಳ ವೃಕ್ಷ ಅಥವಾ ಯಾವುದೋ ಒಂದು ಹಳದಿ ಬಣ್ಣದ ಎಲೆ ಹೊಂದಿರುವ ಮರದಲ್ಲಿ ಇಡು ಇದನ್ನು ತೊಲಗಿಸು ಎನ್ನುತ್ತಾನೆ. ಹೀಗೆ ಇಟ್ಟಲ್ಲಿ ನನ್ನ ರೋಗ ಸುಲಭವಾಗಿ ಗುಣವಾಗುತ್ತದೆ ಎನ್ನುತ್ತಾನೆ. ಹೀಗೆ ಮುಂದಿನ ಋಕ್ಕಿನಲ್ಲಿಯೂ ಅದಿತಿಯ ಸುತನಾದ ಆದಿತ್ಯನೇ ನನ್ನಲ್ಲಿ ರೋಗವನ್ನು ಸ್ವಸಾಮರ್ಥ್ಯದಿಂದ ಗುಣ ಪಡಿಸಿಕೊಳ್ಳುವ ಸಾಮರ್ಥ್ಯವಿಲ್ಲ ನೀನೇ ಗುಣಪಡಿಸು ಎಂದು ಬೇಡಿಕೊಳ್ಳುತ್ತಾನೆ.
"ಪ್ರಿಯಮೇಧವತ್ ಅತ್ರಿವತ್ ಜಾತವೇದಃ ........... " ಎನ್ನುವ ಋಕ್ಕಿನಲ್ಲಿ ಅತ್ರಿ, ಪ್ರಿಯಮೇಧ ಮತ್ತು ವಿರೂಪ ಮತ್ತು ಆಂಗೀರಸರನ್ನು ನೀನು ಹೇಗೆ ಯಜ್ಞಗಳಲ್ಲಿ ಬಂದು ಉಪಕರಿಸಿದ್ದೆಯೋ ಹಾಗೆ ನನ್ನ ರೋಗವನ್ನೂ ನೀನು ಗುಣಪಡಿಸಿ ಉಪಕರಿಸು. ಇಲ್ಲಿ ಬಂದಿರುವ ಋಷಿಗಳ ವಿವರಣೆ ಅನವಶ್ಯಕವಾದುದರಿಂದ ಬರೆಯುತ್ತಿಲ್ಲ.
ಸುಶಂಶೋ ಬೋಧಿಗೃಣ್ವತೇ ಯವಿಷ್ಠ್ಯ ಮಧುಜಿಹ್ವಃ ಸ್ವಾಹುತಃ |
ಪ್ರಸ್ಕಣ್ವಸ್ಯ ಪ್ರತಿರನ್ನಾಯುರ್ಜೀವಸೇ ನಮಸ್ಯಾ ದೈವ್ಯಂ ಜನಂ ||
ಹೇ ಅಗ್ನಿದೇವನೇ ನಿನಗೆ ಎಲ್ಲಾ ಕಡೆಯೂ ಹೋಮ ಮಾಡುವುದರಿಂದ ನಿನ್ನ ಜ್ವಾಲೆಯು ಅತ್ಯಂತ ಆಕರ್ಷಕವಾಗಿ ಮೇಲಕ್ಕೆದ್ದು ಎಲ್ಲರಿಗೂ ಸಂತೋಷವನ್ನು ಉಂಟುಮಾಡುತ್ತಿರುವೆ. ನಿನ್ನನ್ನು ಸ್ತೋತ್ರಮಾಡುವ ಯಜಮಾನನಿಗಾಗಿ ನಾವು ನಿನ್ನನ್ನು ಹೊಗಳುತ್ತೇವೆ. ಈಗ ನೀನು ಪ್ರಸ್ಕಣ್ವನ ಜೀವನವನ್ನು ವೃದ್ಧಿಸಿ ಅವನ ಆಯುಷ್ಯವನ್ನು ವರ್ಧಿಸು. ದೇವಸಂಬಂಧಿಯಾದ ಮನುಷ್ಯನನ್ನು ನೀನು ರಕ್ಷಿಸು ಎನ್ನುವುದಾಗಿ ಈ ಋಕ್ಕು ಹೇಳುತ್ತದೆ.
ಅಂದರೆ ಇಲ್ಲಿ ಸೂರ್ಯ ಎಲ್ಲವಕ್ಕೂ ಕೇಂದ್ರನೆನಿಸಿಕೊಂಡಿದ್ದಾನೆ. ಪ್ರತಿಯೊಂದು ವಸ್ತು ವಿಷಯಕ್ಕೂ ಚೇತನಾ ಸ್ವರೂಪಿ ಸೂರ್ಯನೇ ಅಂದರೆ ಅದು ಅತಿಶಯವೆನ್ನಿಸದು.
ಇಲ್ಲಿ ಇನ್ನೊಂದು ಗಮನಿಸಬೇಕಾದ್ದು ಹೃದಯ ಸಂಬಂಧೀ ರೋಗ ಮತ್ತು ಚರ್ಮ ಸಂಬಂಧೀ ರೋಗವನ್ನುಇ ಸೂರ್ಯ ಗುಣಪಡಿಸಬಲ್ಲ ಎನ್ನುತ್ತದೆ. ಹೌದು ಸಾಮಾನ್ಯವಾಗಿ ವೈದ್ಯಲೋಕದಲ್ಲಿಯೂ ಹೃದಯ ಸಂಬಂಧೀ ಕಾಯಿಲೆಗೆ ಸೂರ್ಯನ ಬಿಸಿಲಿನಲ್ಲಿ ನಡೆದಾಡಲು ಹೇಳುವುದು ಕೇಳಿದ್ದೇನೆ. ಚರ್ಮ ವ್ಯಾಧಿಗೂ ಅಷ್ಟೇ ವಿಟಮಿನ್ ಗಳ ಕೊರತೆಯನ್ನು ನೀಗಿಸಲೂ ಸಹ ಸೂರ್ಯನ ಬಿಸಿಲು ಅಥವಾ ಕಿರಣ ಅತ್ಯವಶ್ಯ ಎಂದು ಕೇಳಿದ್ದೇನೆ. ಇವತ್ತಿಗೂ ನಮ್ಮ ಮನಸ್ಸನ್ನು ಶಾಂತ ಗೊಳಿಸಲು ಉದ್ವೇಗದ ಜೀವನದಿಂದ ಸ್ವಲ್ಪ ವಿಶ್ರಾಂತಿಪಡೆಯಲು ಸಂಜೆಯ ಸೂರ್ಯಾಸ್ತದ ಮತ್ತು ಬೆಳಗಿನ ಸೂರ್ಯೋದಯದ ಬಿಸಿಲನ್ನು ಆಸ್ವಾದಿಸಿದಾಗ ಮನಸ್ಸು ಹಗುರವಾಗಿರುವುದು ನಮಗೆ ಗೊತ್ತಾಗುತ್ತದೆ. ಹಾಗಾದರೆ ಪ್ರಾಚೀನ ವಿಶ್ವದಲ್ಲಿ ವೈದ್ಯಕೀಯ ಜಗತ್ತಿಗೆ ಕೊಟ್ತ ಕೊಡುಗೆ ಸೂರ್ಯನ ತಾಪದಿಂದಲೂ ಅನೇಕ ವಿಧವಾದ ರೋಗಗಳು ಗುಣವಾಗುತ್ತವೆ ಎನ್ನುವುದು. ಹೌದು ನನಗೆ ಇದು ಹೆಮ್ಮೆ ಎನ್ನಿಸುತ್ತದೆ ನಾನು ಭಾರತೀಯ ಎನ್ನಲು. ಅಗಾಧ ಶಕ್ತಿಯನ್ನು ಉಚಿತವಾಗಿ ನಾವು ಪಡೆಯುತ್ತಿದ್ದೇವೆ. ಇದೇ ಸೂರ್ಯ ನಮ್ಮಿಂದ ಕಣ್ಮರೆಯಾಗಿ ಗಂಟೆಗಟ್ಟಲೆ ಸಿಗದಿದ್ದರೆ ! ಭಯಾನಕ !
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment