Search This Blog

Monday 30 July 2018

ಮೂಮೆ ಪೆರ್ಜ್ಜೆರೆಪು ಇದೊಂದು ಪೇಟಾ ???


ಳುಕ್ಯರ ಆಳ್ವಿಕೆಯ ಸುಮಾರು ಎರಡು ಶತಮಾನಗಳಲ್ಲಿ ಅವರು ನಿರ್ಮಿಸಿದ್ದು ಸುಮಾರು ಆರು ಗುಹಾಲಯಗಳನ್ನು ಮತ್ತು ಕಟ್ಟಿಸಿದ್ದು ಸುಮಾರು ನಲವತ್ತೆಂಟು ಪ್ರಸಿದ್ಧ ದೇವಾಲಯಗಳನ್ನು. ಇವುಗಳನ್ನು ಎಷ್ಟುಜನ ಶಿಲ್ಪಿಗಳು ನಿರ್ಮಿಸಿದರು ಎಂದು ತಿಳಿದು ಬರುತ್ತಿಲ್ಲ. ಆದರೆ ಇನ್ನೂರಕ್ಕೂ ಹೆಚ್ಚು ಹೆಸರುಗಳು ಅಲ್ಲಲ್ಲಿ ಶಿಲೆಗಳಲ್ಲಿ ದಾಖಲಾಗಿವೆ. ಲ್ಲುಕುಟಿಗ(ಕಲ್ಕುಟಿಗ)ನಿಂದ ಹಿಡಿದು ಸೂತ್ರಧಾರಿಯವರೆಗೂ ಶ್ರಮಿಸಿದ ಶಿಲ್ಪಿಗಳೆಲ್ಲರೂ ಲಿಪಿ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರೆ, ಈ ಸಂಖ್ಯೆ ಸಾವಿರದ ಗಡಿ ದಾಟುತ್ತಿದ್ದಿರಬಹುದು. ಅದೇನೇ ಇರಲಿ, ಈ ಇನ್ನೂರು ವರ್ಷಗಳಲ್ಲಿ ರಾಜಮನ್ನಣೆ ದೊರಕಿದ್ದು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ತ್ರೈಲೋಕೇಶ್ವರ ಎನ್ನುವ ಎರಡು ದೇವಾಲಯಗಳನ್ನು ಕಟ್ಟಿದ ಗುಣ್ಡ ಮತ್ತು ಸರ್ವ್ವಸಿದ್ಧಿಆಚಾರಿಗಳಿಗೆ ಮಾತ್ರ. ಇಮ್ಮಡಿ ವಿಕ್ರಮಾದಿತ್ಯನು ಮೂರು ಬಾರಿ ಕಾಂಚಿಯನ್ನು ಜಯಿಸಿ, ಪಲ್ಲವರನ್ನು ಸೋಲಿಸಿ, ಅಪಾರ ಸಂಪತ್ತಿನಿಂದ ರಾಜಧಾನಿಗೆ ಮರಳಿ ಬಂದ ಮಹದಾನಂದದ ದಿನಗಳಲ್ಲಿ ಇದು ಸಂಭವಿಸಿದ್ದು. ತಮ್ಮ ವಿಜಯವನ್ನು ಹೇಳಿಕೊಳ್ಳಲು ಮತ್ತು ಯುದ್ಧದಲ್ಲಿ ಗೆದ್ದು ತಂದ ಸಂಪತ್ತಿನ ಒಂದು ಭಾಗವನ್ನು ಧರ್ಮಕಾರ್ಯಕ್ಕೆ ವಿನಿಯೋಗಿಸಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ವಿಕ್ರಮಾದಿತ್ಯನ ಇಬ್ಬರು ಅರಸಿಯರು ಅವಳಿ ದೇವಾಲಯಗಳನ್ನು ಕಟ್ಟಿಸಿದರು. ಕಾಂಚಿ ಯುದ್ಧದ ಮೊದಲ ಗೆಲುವಿನ ನಂತರ ಈ ದೇವಾಲಯದ ಕಾರ್ಯವು ಪ್ರಾರಂಭಗೊಂಡು ಮೂರನೇ ಬಾರಿ ಜಯ ಲಭಿಸಿದಾಗ ಪೂರ್ಣಗೊಂಡಿರಬಹುದು. ಮೂರು ಬಾರಿ ಪಡೆದ ಯಶಸ್ಸನ್ನಿಂದ ಉತ್ತೇಜಿತನಾದ ಶಾಸನಕವಿ ಶ್ರೀವಿಕ್ರಮಾದಿತ್ಯಭಟಾರನು ಮ್ಮೂಮೆಕಂಚಿಯಮ್ಮೂಮೆಪರಾಜಿಸಿದೊರಾ ಎಂದು ಹೊಗಳುತ್ತಾ ಲೋಕೇಶ್ವರಂ ಮಾಡಿದ ಸೂತ್ರಧಾರಿ[ಗೆ] ಮೂಮೆಪೆರ್ಜ್ಜೆಱೆಪು ಗೆಯ್ದ, ಶ್ರೀಸರ್ವ್ವಸಿದ್ಧಿ ಆಚಾರಿ ಹಾಗೂ ಮಹಾದೇವಿಯರಾ ದೇಗುಲಮಾನ್ ಮಾಡಿದ ಸೂತ್ರಧಾರಿ ಶ್ರೀಗುಣ್ಡನ್ ಅನಿವಾರಿತಾಚಾರಿಗೆ ಮ್ಮೂಮೆಪೆರ್ಜ್ಜಱೆಪು ಪಟ್ಟಮಂ ತ್ರಿಭುವನಾಚಾರಿಯೆಂದು ಪೆಸರಿತ್ತು ಪ್ರಸಾದಙ್ಗಯ್ದದ್ದನ್ನು ವರ್ಣಿಸಿರುವನು. ಸರ್ವ್ವಸಿದ್ಧಿಯನ್ನು ಗೌರವಿಸಿದ ಶಾಸನದಲ್ಲಿ ಶ್ರೀಲೋಕಮಹಾದೇವಿಯರಾ ಈ ಲೋಕೇಶ್ವರಂ ಎಂಬ ಉಲ್ಲೇಖವಿದ್ದರೆ, ಗುಣ್ಡನನ್ನು ಗೌರವಿಸಿದ ಶಾಸನದಲ್ಲಿ ಮಹಾದೇವಿಯರಾ ದೇಗುಲದ ಉಲ್ಲೇಖವಿದೆ, ಆದರೆ ಪೆರ್ಜ್ಜರಿಪು ಯಾರ ಹಸ್ತದಿಂದ ಈ ಸೂತ್ರಧಾರಿಗಳಿಗೆ ಕೊಡಲ್ಪಟ್ಟಿತು ಎಂಬುದರ ಉಲ್ಲೇಖ ಇಲ್ಲ.
ಪೆರ್ಜ್ಜೆಱೆಪುಗೆಯ್ದ ಉಲ್ಲೇಖ ಒಂದು ಶಾಸನದಲ್ಲಿದ್ದರೆ ಇನ್ನೊಂದರಲ್ಲಿ ಪೆರ್ಜ್ಜೆಱೆಪುಪಟ್ಟದ ಉಲ್ಲೇವಿದೆ. ಇದೊಂದು ಗೌರವ ಸಮಾರಂಭವೆನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಇದರ ನಿಜ ಸ್ವರೂಪ ನನಗೆ ತಿಳಿಯುತ್ತಿಲ್ಲ. ಪೆರ್ ಎಂದರೆ ಹಿರಿದು, ದೊಡ್ಡ ಪ್ರಮಾಣದ್ದು, ಎಂದಾಗುತ್ತದೆ, ಆದರೆ ಜರಿಪು ಎಂದರೇನು ಎಂಬುದರ ಬಗ್ಗೆ ಒಮ್ಮತವಿಲ್ಲ. ಇದು ಜರಿರುಮಾಲನ್ನು ತೊಡಿಸುವ ಗೌರವವೆನ್ನುವುದಾದರೆ ಈ ಪದದ ಶಬ್ದಾರ್ಥ ಮಾತ್ರ ಹೇಳಿದಂತಾಗಬಹುದು. ಇದೊಂದು ರಾಜಗೌರವವಾದರೂ ಗೌರವಾನ್ವಿತ ಸೂತ್ರಧಾರಿಗಳಿಗೆ ಇದರಿಂದಾದ ಆರ್ಥಿಕ ಮತ್ತು ಸಾಮಾಜಿಕ ಲಾಭದ ಕುರಿತು ತಿಳಿಯುತ್ತಿಲ್ಲ. ಭೂಮಿಯೋ, ಸಂಪತ್ತು, ನಿವೇಶನ, ಇವಾವೂ ಇವರಿಗೆ ಸಿಗಲಿಲ್ಲವೆಂದು ಕಾಣುತ್ತದೆ. ಇದೊಂದು ನಿರ್ದಿಷ್ಟವಾದ ನಿಮಿತ್ತಮಾತ್ರದ ಕಾರ್ಯಕ್ರಮ ಮಾತ್ರವಾಗಿ ಮುಕ್ತಾಯವಾಗಿರಬಹುದು. ಈ ಸೂತ್ರಧಾರರಲ್ಲಿ ಒಬ್ಬನಿಗೆ ಸಿಕ್ಕ ವಿಶೇಷ ಗೌರವವೆಂದರೆ ಅನಿವಾರಿತಾಚಾರಿ ಎಂಬ ಹೆಸರು. ಇದು ಆಳರಸ ವಿಕ್ರಮಾದಿತ್ಯನ ವಿಶೇಷಣವಾಗಿದ್ದೊಂದು ವಿಶೇಷ.
ಮೂಮೆಪೆರ್ಜ್ಜೆರಪು ಎನ್ನುವ ಈ ಗೌರವ ಸಮಾರಂಭದಿಂದ ಶಿಲ್ಪಿಗಳಕುಲಕ್ಕೆ ಆದ ಒಂದೇ ಒಂದು ತಾತ್ಕಾಲಿಕ ಲಾಭವೆಂದರೆ ಅವರು ಉಪಯೋಗಿಸುತ್ತಿದ್ದ ತಾಂಬೂಲಕ್ಕೆ ಸಿಕ್ಕ ಕರ ವಿನಾಯತಿ ಅಷ್ಟೇ. ಗುಣ್ಡ ಮತ್ತು ಸರ್ವ್ವಸಿದ್ಧಿಗೆ ಈ ಗೌರವ ದೊರೆಕಿದ್ದು ಅವರು ಕಟ್ಟಿದ ದೇವಾಲಯಗಳನ್ನು ಮೆಚ್ಚಿಯೋ ಅಥವಾ ಈ ದೇವಾಲಯಗಳು ವಿಜಯೋತ್ಸವದ ಅಂಗವಾಗಿದ್ದುದರಿಂದಲೋ, ಆಗಿರಬಹುದು. ಮೂಮೆಪೆರ್ಜ್ಜೆರಪು ಎನ್ನುವುದು ಚಾಳುಕ್ಯರ ಇತಿಹಾಸದಲ್ಲಿ ಬೇರೊಬ್ಬರಿಗೆ ಕೊಟ್ಟ ಇನ್ನೊಂದು ಉದಾಹರಣೆ ಸಿಗುವುದಿಲ್ಲ. ಇನ್ನೂ ಹಲವು ವಿದ್ವಾಂಸರ ಅಭಿಪ್ರಾಯದಂತೆ ಈ ಮೂಮೆ ಪೆರ್ಜ್ಜೆರಪು ಎಂದರೆ ಮೂರು ಬಾರಿ ಸೆರಗನ್ನು ಕಾಣಿಸುವಂತೆ ರಚಿಸಿರುವ ಒಂದು ಬಗೆಯ ಪೇಟಾ. ಈಗಿನ ಮೈಸೂರು ಪೇಟಾದಂತೆಯೇ ಅದು ಇದ್ದಿತ್ತು ಅದಕ್ಕೆ ಅಷ್ಟೇ ಮಹತ್ವವೂ ಇತ್ತು ಎನ್ನುವ ಅಭಿಪ್ರಾಯವೂ ಇದೆ. ಅದೇನೇ ಇದ್ದರೂ ಕದಂಬ, ಗಂಗ, ರಾಷ್ಟ್ರಕೂಟರ ಕಾಲದಲ್ಲಿಯೂ ಕಾಣಿಸಿಕೊಳ್ಳದೇ ಇಲ್ಲಿ ಮಾತ್ರ ಇದು ಕಾಣಿಸಿಕೊಂಡಿದ್ದು ವಿಶೇಷ.


No comments:

Post a Comment