Search This Blog

Sunday 15 July 2018

ತಳವನಪುರದ ಗಂಗರಾಜರ ಶಿಲ್ಪಿ ಕೊಂಗುಣಿ ಆಚಾರಿ.

ಕದಂಬರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರೂ ಸಹ ರಾಜ್ಯದ ವಿಸ್ತರಣೆಗೆ ಅಷ್ಟು ಗಮನ ಹರಿಸಿದಂತೆ ಕಂಡು ಬರುತ್ತಿಲ್ಲ. ತಮ್ಮ ಸ್ವಾಧೀನದಲ್ಲಿದ್ದ ಪ್ರದೇಶದ ಅಭಿವೃದ್ಧಿಯನ್ನು ಬಯಸಿದ್ದರು. ಆದರೆ ಕದಂಬರ ಆಳ್ವಿಕೆ ಸರಿ ಸಮಾನವಾಗಿ ಅಥವಾ ಒಂದೆರಡು ಶತಮಾನದ ಬಳಿಕ ಬಂದ ಗಂಗರು ಕನ್ನಡನಾಡನ್ನು ಸುಮಾರು ಏಳು ಶತಮಾನಗಳ ಕಾಲ ಆಳಿದರು. ತಲಕಾಡಿನ ಗಂಗರು ಅಥವಾ ಪಶ್ಚಿಮದ ಗಂಗರೆಂದು ಕರೆಯಲ್ಪಟ್ಟ ಇವರು ಗಂಗ ಆರು ಸಾವಿರ ಅಥವಾ ಕೊವಳಾಲಪುರವನ್ನು ತಮ್ಮ ಆಡಳಿತದ ಕೇಂದ್ರವಾಗಿರಿಸಿಕೊಂಡಿದ್ದರು. ಕೊವಳಾಲ ಅನ್ನುವುದು ಇಂದಿನ ಕೋಲಾರಕ್ಕೆ. ಕ್ರಿಸ್ತ ಶಕ ನಾಲ್ಕನೇ ಶತಮಾನದ ಆರಂಭದಿಂದ ಹತ್ತನೆಯ ಶತಮಾನದ ಅಂತ್ಯದ ತನಕ ಕನ್ನಡದ ನೆಲದಲ್ಲಿ ಆಳ್ವಿಕೆ ನಡೆಸಿದವರು. ಮೊದ ಮೊದಲು ಆಂಧ್ರದ ಅನಂತಪುರ ಮತ್ತು ಕಡಪ ಇವರ ರಾಜಧಾನಿಯಾಗಿತ್ತು. ಕ್ರಮೇಣ ಅದು ವಿಸ್ತಾರಗೊಳ್ಳುತ್ತ ಸಾಗಿತು. ಹೀಗೆ ಸಾಗಿದ ಇವರ ವಿಸ್ತರಣೆಗೆ ಗಂಗವಾಡಿ 96000 ಎನ್ನುವ ಎನ್ನುವ ಹೆಸರನ್ನು ಪಡೆದುಕೊಂಡಿತು. ಇದೇ ಕಾಲಕ್ಕೆ ತಮ್ಮ ಸ್ವಾತಂತ್ರ್ಯದಿಂದ ವಂಚಿತರಾಗಿ ಮಾಂಡಲೀಕರಾದರು. ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಕೊಡಗು ಮುಂತಾದ ಪ್ರಾಂತ್ಯಗಳೊಂದಿಗೆ ಆರ್ಕಾಟ್, ಸೇಲಮ್, ಕೊಯಮುತ್ತೂರು ಮುಂತಾದ ತಮಿಳುನಾಡಿನ ಪ್ರಾಂತ್ಯಗಳು ಇವರ ಆಡಳಿತಕ್ಕೆ ಸೇರಿಕೊಂಡಾಗ ಇವರು ಮೈಸೂರಿನ ತಳವನಪುರವನ್ನು ತಮ್ಮ ಆಡಳಿತದ ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡರು. ಈ ತಳವನಪುರವೇ ಮುಂದೆ ತಲಕಾಡು ಎಂದು ಹೆಸರಿಸಲ್ಪಟ್ಟು ಗಂಗರನ್ನು ತಲಕಾಡಿನ ಗಂಗರು ಎಂದು ಕರೆಯಲಾಯಿತು. ಚನ್ನಪಟ್ಟಣ ತಾಲೂಕಿನ ಮಂಕುಂದ ಮತ್ತು ನೆಲಮಂಗಲ ತಾಲೂಕಿನ ಮಣ್ಣೆ ಇವರ ನೆಲೆವೀಡು ಅನ್ನಿಸಿಕೊಂಡಿತ್ತು.
ಆರಂಭಕಾಲದ ಕದಂಬರಿಗಿಂತ ಹೆಚ್ಚು ಕಾಲ, ಹೆಚ್ಚು ಪ್ರದೇಶ, ಆಳಿದ ಗಂಗರು ಮೂಲತಃ ಬುಡಕಟ್ಟಿನ ಜನಾಂಗಕ್ಕೆ ಸೇರಿದವರು ಎಂದು ತಿಳಿದು ಬರುತ್ತದೆ. ಆದರೆ ಜ್ಞಾನ ಪಿಪಾಸುಗಳಾದ ಇವರು ವೇದಜ್ಞರನ್ನು ಮತ್ತು ಬ್ರಾಹ್ಮಣರನ್ನು ಅತ್ಯಂತ ಆದರದಿಂದ ಕುಲಗುರುಗಳೆಂದು ಮನ್ನಿಸಿ ಬ್ರಹ್ಮದೇಯಗಳಲ್ಲಿ ಮತ್ತು ಅಗ್ರಹಾರಗಳಲ್ಲಿ ಅವರು ನೆಲೆಸಬೇಕೆಂದು ಅವರಿಗೆ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಉತ್ಸಾಹ ತೋರಿರುವುದು ಅನೇಕ ಶಾಸನ ವಾಕ್ಯಗಳಿಂದ ತಿಳಿದು ಬರುತ್ತದೆ. ಅತ್ಯಂತ ದೀರ್ಘಾವಧಿಯ ಆಳ್ವಿಕೆಯ ಸಮಯದಲ್ಲೂ ಗಂಗರ ಮೂಲ ತಿಳಿದು ಬರದೇ ಇದ್ದರೂ ಸಹ ಆರಂಭದ ಸಹಸ್ರಮಾನ ಕಳೆದು ಹನ್ನೆರಡನೇ ಶತಮಾನದ ಅಂಚಿಗೆ ಮೂಲ ಪುರುಷನ ಕುರಿತು ಕಥೆಗಳು ತೇಲಿ ಬರುತ್ತವೆ. ಉತ್ತರದಿಂದ ವಲಸೆ ಬಂದ ಗಂಗ ದಢಿಗ ಮತ್ತು ಮಾಧವರ ಬಗ್ಗೆ ಉಲ್ಲೇಖಗಳು ಬರುತ್ತವೆ.
ಅಹಿಚ್ಛತ್ರದಿಂದ ಬಂದ ತಾನಗುಂದೂರು ಮೊದಲಾದೆಡೆ ನೆಲೆಯೂರಿದ ಆರಂಭಕಾಲದ ಬ್ರಾಹ್ಮಣರಿಗೆ ಮತ್ತು ವಿದ್ವಾಂಸರುಗಳಿಗೆ ಸ್ಥಳೀಯ ಭಾಷೆ ಮತ್ತು ಲಿಪಿ ತಿಳಿದಿರಲಿಕ್ಕಿಲ್ಲ. ಮತ್ತು ಆ ಕಾಲದಲ್ಲಿ ಹೆಚ್ಚು ಪ್ರಚಲಿತವಿದ್ದ ಪ್ರಾಕೃತ ಭಾಷೆಯ ಕುರಿತಾಗಿಯೂ ಅವರಲ್ಲಿ ಅಂತಹ ಅತ್ಯಾಸಕ್ತಿ ಕಂಡುಬರುವುದಿಲ್ಲ. ಪ್ರಾಯಶಃ ತಾವು ತಿಳಿದ ಸಂಸ್ಕೃತ ಭಾಷೆಯಲ್ಲಿಯೇ ವ್ಯವಹರಿಸಲು ಅವರು ಗಂಗರನ್ನು ಪ್ರೇರೇಪಿಸಿದುದರಿಂದ ಆರಂಭಕಾಲದ ಕಾಲದ ಬ್ರಹ್ಮದೇಯವೇ ಮೊದಲಾದ ವೈದಿಕ ದಾನ ದತ್ತಿಗಳೆಲ್ಲವೂ ಸಂಸ್ಕೃತದಲ್ಲಿ ಬರೆಯಲ್ಪಟ್ಟವು. ದುರ್ವಿನೀತನಂಥಹ ಅನೇಕರು ಸಂಸ್ಕೃತದಲ್ಲಿ ಗ್ರಂಥಗಳನ್ನು ಬರೆಯುವಷ್ಟು ಪಾಂಡಿತ್ಯ ಗಳಿಸಿಕೊಂಡಿದ್ದರು. ಅವರು ತಮ್ಮ ಖಂಡರಣೆಕಾರರಿಗೆ ಮತ್ತು ಲಿಪಿಕಾರರಿಗೆ ಮಹಾರಾಜ ಮುಖಾಜ್ಞಾಪ್ತ್ಯಾ ಮುಂತಾದ ಆದೇಶಗಳನ್ನು ಕೊಡುವಷ್ಟು ಬಲ್ಲವರಾಗಿದ್ದು ಅಕ್ಷರಸ್ಥರಾಗಿದ್ದರು. ಇವರು ಬರೆಸಿದ ಶಾಸನಗಳಲ್ಲಿ ಸುಮಾರು ನಾಲ್ಕು- ಐದನೇ ಶತಮಾನದಿಂದ ಮೊದಲುಗೊಂಡು ಆರಂಭಕಾಲದ ಸಹಸ್ರಮಾನದುದ್ದಕ್ಕೂ ಬರೆಸಿದ ಸಂಸ್ಕೃತ ಭಾಷಾ ತಾಮ್ರಪಟಗಳು ಒಂದನೇ ವರ್ಗವಾಗಿ ತೆಗೆದುಕೊಳ್ಳಬಹುದು.
ಮೊದಲ ಹಂತದಲ್ಲಿ ಕ್ರಿ. ಶ. ನಾಲ್ಕು- ಐದನೇ ಶತಮಾನದ ಮಾಧವ ವರ್ಮನ ಶಾಸನಕೋಟೆ ತಾಮ್ರಪಟ ಇದಕ್ಕೊಂದು ಉತ್ತಮ ಉದಾಹರಣೆ. ಇದರಲ್ಲಿ ಬೇರಾವ ಭಾಷೆಯನ್ನೂ ಬಳಕೆ ಮಾಡಿಕೊಳ್ಳದೇ ಕೇವಲ ಸಂಸ್ಕೃತಭಾಷೆ ಮತ್ತು ಕನ್ನಡ ಲಿಪಿ ಬಳಸಲಾಗಿದೆ.
ಎರಡನೆಯ ಹಂತದಲ್ಲಿ ಸಂಸ್ಕೃತ ಭಾಷಾ ಶಾಸನಗಳಲ್ಲಿ ಕನ್ನಡ ವಾಕ್ಯಗಳನ್ನೂ ಪದಗಳನ್ನೂ ಕೂಡಿಸಿಕೊಂಡು ಬರೆಸಿದ ದ್ವಿಭಾಷಾ ತಾಮ್ರಪಟಗಳು. ಸುಮಾರು 9ನೇ ಶತಮಾನದ ಹರಿವರ್ಮನ ಕೂಡಲೂರು ಶಾಸನದಲ್ಲಿ 20ನೇ ಸಾಲಿನ ಮಧ್ಯದಿಂದ ಕನ್ನಡ ಆರಂಭವಾಗಿ 27ನೇ ಸಾಲಿನಲ್ಲಿ ಅರ್ಧ ಸಾಲು ಕನ್ನಡ ಕೊನೆಗೊಂಡು ಸಂಸ್ಕೃತ ಪುನಃ ಆರಂಭಗೊಳ್ಳುತ್ತದೆ. ಮತ್ತು ತುಂಬಲು ತಾಮ್ರಪಟಗಳು ಇವುಗಳಲ್ಲಿ ಬಹುಶಃ ಮೊದಲಿನವು.
ಕನ್ನಡಭಾಷೆಯಲಿಯ್ಲೇ ಬರೆಸಿದ ಶಾಸಗಳ ಸಾಲಿನಲ್ಲಿ ಸುಮಾರು ಆರನೇ ಶತಮಾನದ ಗಂಗ ನಿರ್ವಿನೀತನ ಚಿಕ್ಕಮಗಳೂರು ತಾಲೂಕಿನ ಸೆರುಗುಂದ ಶಾಸನ ಇವುಗಳಲ್ಲಿ ಬಹುಶಃ ಮೊದಲಿನದು ಐದು ಸಾಲುಗಳ ಈ ಶಾಸನ ಪಡವೈಲಾಮು ಮತ್ತು ಅಮಸಪಾಲನ್ನು ಹೇಳುತ್ತದೆ. ಸಂಪೂರ್ಣ ಸಂಸ್ಕೃತ ಮತ್ತು ಸಂಸ್ಕೃತ-ಕನ್ನಡ ದ್ವಿಭಾಷಾ ಶಾಸನಗಳು ಹೆಚ್ಚಿನವು ತಾಮ್ರಪಟಗಳಲ್ಲಿದ್ದರೆ, ಕನ್ನಡ ಶಾಸನಗಳು ಶಿಲೆಯನ್ನು ಅವಲಂಭಿಸಿವೆ.
ನಾಲ್ಕು - ಐದನೇ ಶತಮಾನದಲ್ಲಿನ ಗಂಗರಾಜರು ಬರೆಸಿದ ತಾಮ್ರ ಪಟಗಳಲ್ಲಿ ಹೆಚ್ಚಿನ ಲಿಪಿಕಾರರು ಶರ್ಮ ಅಥವಾ ವರ್ಮ ಎನ್ನುವ ಹೆಸರಿನಿಂದ ಕೊನೆಗೊಳ್ಳುತ್ತದೆ. ಉದಾಹರಣೆಗೆ ಮಾಧವವರ್ಮನ ಶಾಸನಕೋಟೆಯ ತಾಮ್ರಪಟದ ಬರೆದವನು ಸೋಮಶರ್ಮ ಈತ ಸರ್ವರಹಸ್ಯಾಧಿಕೃತನಾದ ಆಡಳಿತಾಧಿಕಾರಿಯಾಗಿದ್ದ. ಕುಡುಲಿಯಂ ತಾಮ್ರಪಟ ಏರಶರ್ಮನದು ಈತನು ಸರ್ವಮಂತ್ರಾಧಿಕೃತ ನೆನ್ನುವ ಅಧಿಕಾರಿಯಾಗಿದ್ದ. ಹೀಗೆಯೇ ಮುಂದೆ ಮೆಳೆಕೊಟೆಯ ತಾಮ್ರಪಟಗಳ ಬರಹಗಾರ ಚಾರುದತ್ತನು ಸೇನಾಪತಿಯಾಗಿದ್ದ. ಕಡಗತ್ತೂರಿನ ತಾಮ್ರ ಪಟದ ಬರಹಗಾರ ದೂತಕನಾಗಿದ್ದ, ಚೂಕುಟ್ಟೂರಿನ ತಾಮ್ರಪಟ ಶಾಸನಕಾರ ಪುರಾಧಿಪತಿಯಾಗಿದ್ದ. ಅಂದರೆ ಕೆಲವೊಮ್ಮೆ ರಹಸ್ಯ ಕಾಪಾಡಿಕೊಳ್ಳುವವನೇ ಶಾಸನಕಾರನಾಗಿದ್ದು ತಿಳಿದುಬರುವುದಲ್ಲದೇ ಬೇರೆ ಬೇರೆ ಆಡಳಿತದ ಕಾರ್ಯ ನಿರ್ವಹಿಸುತ್ತಿದ್ದವರೂ ಸಹ ಹೆಚ್ಚಿನ ಹೊಣೆಗಾರಿಕೆಯಿಂದ ಶಾಸನಕಾರರಾಗಿದ್ದು ಕಂಡುಬರುತ್ತದೆ.
ಅಶೋಕನ ಕಾಲದ ಕಂಡರಣೆಕಾರರ ಕಿರು ಮತ್ತು ಹೆಬ್ಬಂಡೆಶಾಸನಗಳ ಕೊಡುಗೆಯ ನಂತರ ಒಂದೆರಡು ಶತಮಾನಗಳ ಕಾಲ ನಿಂತ ಬರಹ ಮುಂದೆ ಉತ್ತರದಿಂದ ದಕ್ಷಿಣಕ್ಕೆ ವಲಸೆಯೋ ಅಥವಾ ಆರಂಭ ಕಾಲೀನ ಕದಂಬರು ಶಾಸನ ಬರೆಸಲು ಕರೆಸಿದ ಸಂಸ್ಕೃತಭಾಷೆಯ ಲಿಪಿಕಾರರು ಗಂಗರ ಕಾಲಕ್ಕೆ ಮೊದಲೆಲ್ಲಾ ಮೂರ್ನಾಲ್ಕು ತಾಮ್ರಪಟಗಳನ್ನು ಬರೆದರೂ ಅವರು ಹೆಚ್ಚುಕಾಲ ಲೇಖಕರಾಗಿ ಮುಂದುವರಿಯಲಿಲ್ಲ. ಲಿಪಿ ಬರೆಯುವುದರಲ್ಲಿ ಇವರಿಗಿಂತ ಹೆಚ್ಚು ಪರಿಣಿತರಾಗಿದ್ದ ತ್ವಷ್ಟ(ಬಡಗಿಗಳ) ವರ್ಗವೊಂದು ಈ ಕ್ಷೇತ್ರದಲ್ಲಿದ್ದುದು ಭಾಗಶಃ ಇದಕ್ಕೆ ಕಾರಣವಾಗಿರಬಹುದು. ಮರಗೆಲಸ ಮತ್ತು ಕಂಚುಗಾರಿಕೆಯನ್ನು ಪ್ರಮುಖ ವೃತ್ತಿಯನ್ನಾಗಿಸಿಕೊಂಡಿದ್ದ ಬಡಗಿಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳನ್ನೂ ಕನ್ನಡ ಲಿಪಿಯನ್ನೂ ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಸ್ಥಳೀಯರಾಗಿದ್ದರು ಮತ್ತು ತಾಮ್ರಪಟಗಳ ಮೇಲೆ ಅಕ್ಷರ ಮೂಡಿಸುವ ಕೆಲಸದಲ್ಲಿ ಎಲ್ಲರಿಗಿಂತ ಹೆಚ್ಚು ಪರಿಣತಿಯನ್ನು ಪಡೆದು ಸಮರ್ಥರೆನಿಸಿದ್ದರು.
ಗಂಗರ ಕಾಲದ ಬ್ರಾಹ್ಮಣರು ಬರೆದ ಸಂಸ್ಕೃತ ತಾಮ್ರಪಟಗಳಲ್ಲಿ ಪ್ರಮುಖವಾಗಿ ಶಾಸನಕೋಟೆಯ ತಾಮ್ರಪಟದಲ್ಲಿ ಲಿಖಿತೇಯಂ ತಾಮ್ರಪಟ್ಟಿಕಾ ಎಂದು ಕೂಡಲೂರಿನ ತಾಮ್ರಪಟದಲ್ಲಿ ವಿಶ್ವಕರ್ಮಾಚಾರ್ಯೇಣ ಲಿಖಿತಂ ಎಂದೂ, ಲಿಖಿತೇನ, ಮುಂತಾದ ಸಂಸ್ಕೃತ ಪದಗಳಿಂದ ಬರಹವನ್ನು ಗುರುತಿಸಿಕೊಳ್ಳುತ್ತಿದ್ದರು. ತ್ವಷ್ಟರು ತಟ್ಟಕಾರೇಣ, ತ್ವಷ್ಠಕರೇಣ, ತ್ವಷ್ಟಕಾರಸ್ಯ, ಎಂಬ ಸಂಸ್ಕೃತಪದಗಳಿಂದ ಗುರುತಿಸಿದರು. ಶರ್ಮ್ಮ ಪ್ರತ್ಯಯದಿಂದ ಬ್ರಾಹ್ಮಣ ಲಿಪಿಕಾರರು ಗುರುತಿಸಿಕೊಳ್ಳುತ್ತಿದ್ದರೆ, ತಟ್ಟಾರ, ಪೆಂದಟ್ಟಾರ, ತಚ್ಚ, ಎಂಬ ವಿಶೇಷಣಗಳಿಂದ ತ್ವಷ್ಟರು ಗುರುತಿಸಿಕೊಳ್ಳುತ್ತಿದ್ದರು. ಕ್ರಿ.ಶ. ಐದನೇ ಶತಮಾನದಲ್ಲಿ ಮಾಧವ ಎರಡನೆ ಸಿಂಹವರ್ಮನ ಪೆನುಕೊಂಡ ತಾಮ್ರಪಟ ಬರೆದ ಆಯ್ಯನ ಪುತ್ರ ಅಪಾಪ ಎಂಬವನು ಸುವರ್ಣಕಾರ ಆರ್ಯಪುತ್ರೇಣ ಅಪಾಪೇನ ಲಿಖಿತೇಯಂ ತಾಮ್ರ ಪಟ್ಟಿಕಾ ಎಂದು ಬರೆದ ತ್ವಷ್ಟಕಾರರಲ್ಲಿ ದಾಖಲೆಗೆ ಸಿಗುವ ಮೊದಲಿಗನು. ಇವನಿಗೆ ಸಮಕಾಲೀನರೆಂದರೆ 5- 6ನೇ ಶತಮಾನದ ಕೊಂಗುಣಿವರ್ಮನ ನೊಣಮಂಗಲ ತಾಮ್ರಪಟದ ಮರಿಷೇಣತಟ್ಟಕಾರ. ಈತನು ಮಹಾರಾಜಮುಖಾಜ್ಞಾಪ್ತಯಾ ಮರಿಷೇಣ ತಟ್ಟಕಾರೇಣ ಎಂದು ಬರೆದುಕೊಂಡಿದ್ದಾನೆ, ಅದೇ ಕಾಲದ ಅವಿನೀತನ ಶೃಂಗೇರಿ ತಾಮ್ರಪಟದ ಪಾಪಾಱತ್ವಷ್ಠ ಸಹ ಅದನ್ನೇ ಅನುಸರಿಸಿದ್ದಾನೆ, ಕೊಂಗಣ್ಯಧಿರಾಜನ ಹೊಸಕೋಟೆ ಪಟದ ಕುವಲಾಲ ತ್ವಷ್ಟಕಾರಪೆರೆರ, ಮತ್ತು ಪೆಣ್ಣಊರ್ ಪಟದ ಚೋಮತಟ್ಟಾರ ಮತ್ತು ಗುಮ್ಮರೆಡ್ಡಿಪುರ ತಾಮ್ರಪಟದ ಕೊಂಗಣಿಪೆಂದಟ್ಟಾರ ಇವರೆಲ್ಲರೂ ಒಂದೇ ರೀತಿಯಲ್ಲಿ ಬರೆದುಕೊಂಡಿದ್ದಾರೆ.
ಮಹಾರಾಜರ ಆದೇಶವನ್ನು ಚೆನ್ನಾಗಿ ತಿಳಿದು ಅರ್ಥೈಸಿಕೊಂಡು, ಅದನ್ನು ಶಾಸನದ ಭಾಷೆಗೆ ಅನುವಾದಿಸಿಕೊಂಡು, ಅದನ್ನು ಲಿಲಿಪಿಕಾರರು ಖಂಡರಿಸುತ್ತಿದ್ದರು. ಆರನೇ ಶತಮಾನದ ಗಂಗ ದುರ್ವಿನೀತನ ಗುಮ್ಮರೆಡ್ಡಿಪುರದ ತಾಮ್ರಪಟದ ಲಿಪಿಕಾರನು ಒಂದು ಹೆಜ್ಜೆ ಮುಂದೆ ಹೋಗಿ ಅರಸರಮೇಲಿನ ಪ್ರೀತಿಯಿಂದ ಪೆಂದಟ್ಟಾರನು ನಾಲ್ಕು ತಾಮ್ರಪಟಗಳನ್ನು ಬರೆದವನೂ ಆದ ಒಬ್ಬನು ಗಂಗರಾಜ್ಯ ಸಂಸ್ಥಾಪಕನ ಹೆಸರನ್ನು ತನ್ನ ಹೆಸರನ್ನಾಗಿಸಿಕೊಂಡು ಕೊಂಗಣಿ ಪೆರ್ನ್ದಟ್ಟಕಾರ ಎಂದು ಕರೆದುಕೊಂಡಿದ್ದ.
ಮೊದಲ ಸಹಸ್ರಮಾನದ ಆರಂಭಕಾಲದ ಗಂಗರಾಜರ ಕೆಲವು ಲಿಪಿಕಾರರು ತಮ್ಮನ್ನು ಆಚಾರ್ಯರೆಂದು ಗುರುತಿಸಿಕೊಂಡಿದ್ದು ಕಂಡುಬರುತ್ತದೆ. ಆಚಾರ್ಯನನ್ನು ಗುರು, ಶ್ರೇಷ್ಠ, ಜ್ಞಾನಿ ಎಂಬೆಲ್ಲ ಅರ್ಥಗಳಿಂದ ಗುರುತಿಸುವುದರಿಂದ, ಮತ್ತು ತಾವು ಕಾಷ್ಠಶಿಲ್ಪ ಮಾತ್ರವಲ್ಲ ಅಕ್ಷರ ಜ್ಞಾನವನ್ನು ಹೊಂದಿದ ಲಿಪಿಕಾರರೂ ಕೂಡಾ ಎಂಬುದನ್ನು ತೋರಿಸಿಕೊಡಲು ಮತ್ತು ಸಾಮಾಜಿಕವಾಗಿ ಪ್ರಜಾ ಜನರ ನಡುವೆ ತಮ್ಮ ಅಂತಸ್ತನ್ನು ಸ್ಥಾಪಿಸಿಕೊಳ್ಳುವುದು ಬಹುಶಃ ಇದರ ಉದ್ದೇಶವಾಗಿರಬಹುದು ಅನ್ನಿಸುತ್ತದೆ.
ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಶಿಲ್ಪಿಯೊಬ್ಬನ ತಂದೆಯನ್ನು ಆಚಾರ್ಯ ಎಂಬ ಪದನಾಮದಿಂದ ಹೆಸರಿಸಲಾಗಿದೆ ಗುಲ್ಬರ್ಗಾ ಜಿಲ್ಲೆಯ ಭೀಮಾ ತಟದ ಕನಗನಹಳ್ಳಿಯ ಬೌದ್ಧ ಬುಧತಾತ ಶಿಷ್ಯನ ದಾನಶಾಸನದಲ್ಲಿ ಇದೇ ರೀತಿಯ ಉದಾಹರಣೆ ಸಿಗುವುದು. ಸುಮಾರು ಐದರಿಂದ ಒಂಬತ್ತನೇ ಶತಮಾನದ ಕಾಲಾವಧಿಯಲ್ಲಿ ತ್ವಷ್ಟಕಾರ ಅಥವಾ ತಟ್ಟಕ ಎಂಬುದರ ಜೊತೆಗೆ ಆಚಾರ್ಯ ಎಂದು ಗಂಗ ಶಿಲ್ಪಿಗಳು ಕರೆದುಕೊಳ್ಳುತ್ತಿದ್ದರೆಂದೆನಿಸುವುದು. ಇಂಥವರಲ್ಲ್ಲಿ ಮೊದಲ ಗಂಗಲಿಪಿಕಾರನೆಂದರೆ ಕಮ್ಮಾರ ಕೊಂಗುಣಿಯಾಚಾರಿ. ಈತನು ಬರೆದ ಕರಿ. ಶ 444ನೇ ಇಸವಿಯ ಹರಿವರ್ಮನ ತಾಮ್ರಪಟಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯ ಕೊಟ್ಟಿರುವನು. ಅರಸನು ತಳವನಪುರದಿಂದ ಆಳುತ್ತಿದ್ದಾಗ, ಹೊಂಬುಜದಲ್ಲಿ ನಡೆದ ಒಂದು ಕಾಳಗದಲ್ಲಿ ಮೂವರು ಗಾವುಂಡರು ವೀರಮರಣವನ್ನಪ್ಪಿದ್ದನ್ನು ಮೆಚ್ಚಿ, ಊರವರು ಎಡೆತೊರೆನಾಡಿಗೆ ಸೇರಿದ ತುಂಬಲು ಪ್ರದೇಶವನ್ನು ಅವರ ಕುಲದವರಿಗೆ ಕೊಡುಗೆಯಾಕೊಟ್ಟದ್ದನ್ನು ಇದರಲ್ಲಿ ದಾಖಲಿಸಲಾಗಿದೆ. ನಾಡು ಎನ್ನುವ ಆಡಳಿತದ ಒಂದು ಘಟಕವನ್ನು ಹೆಸರಿಸಿ ವೀರಗೊಡುಗೆಯೊಂದನ್ನು ತಾಮ್ರಪಟದ ಮೇಲೆ ಬರೆದ ಮೊದಲ ಕನ್ನಡ ಶಾಸನ ಇದು. ಇದರಲ್ಲಿ ಸಂಸ್ಕೃತ ಭಾಗವಾಗಿ ಸಾಂಪ್ರದಾಯಿಕ ಸ್ತುತಿ, ರಾಜನ ವಂಶಾವಳಿ ಮತ್ತು ಕೊನೆಯಲ್ಲಿನ ಶಾಪಾಶಯವನ್ನು ಬಿಟ್ಟು, ಉಳಿದ ಪಠ್ಯ ಕನ್ನಡ ಗದ್ಯದಲ್ಲಿದೆ. ಗಂಗರಾಜ್ಯದ ಮೂಲಪುರುಷನಾದ ಕೊಂಗುಣಿಯ ಹೆಸರನ್ನು ತನ್ನ ಹೆಸರನ್ನಾಗಿಸಿಕೊಂಡು, ‘ಆಚಾರಿ ವಿಶೇಷಣದಿಂದ ಕರೆದುಕೊಂಡ ಮೊದಲ ಲಿಪಿಕಾರನಿವನು.


#ಶಿಲೆಗಳಲ್ಲಡಗಿದ_ಸತ್ಯ

1 comment:

  1. This valuable information about the development of viswabrahimns as lipikars and epigraphers is highly praiseworthy.

    ReplyDelete