Search This Blog

Thursday 12 July 2018

ಅಂಗಿರಸ "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿ"


ಅಂಗಿರಃ ಎನ್ನುವುದು ಪ್ರಮುಖವಾಗಿ ಅಗ್ನಿಯನ್ನು ಕುರಿತಾಗಿ ಹೇಳುವ ಪದ. ಅಂಗಾರಃ ಎನ್ನುವುದು ಅಗ್ನಿಯಿಂದ ಉಂಟಾದ ಕೆಂಡವನ್ನು ಕುರಿತಾಗಿ ಹೇಳಿವುದು. ಐತರೇಯ ಬ್ರಾಹ್ಮಣದಲ್ಲಿ "ಯೇಙ್ಗಾರಾ ಆ ಸಂಸ್ತೇಙ್ಗಿರಸೋ ಭವನ್" ಎಂದು ಬಂದಿದೆ. ಅಗ್ನಿಗೆ ಸಂಬಂಧಿಸಿದ ಅಂಗಾರಗಳು(ಕೆಂಡಗಳು) ಅಂಗಿರಸರೆನ್ನುವ ಹೆಸರನ್ನು ಪಡೆದವು ಎಂದು ಪ್ರಜಾಪತಿದುಹಿತೃಧ್ಯಾನೋಪಾಖ್ಯಾನದಲ್ಲಿ ಬರುತ್ತದೆ.
ಒಮ್ಮೆ ಪ್ರಜಾಪತಿಯು ತನ್ನ ಮಗಳನ್ನು ಕೆಟ್ಟ(ಕಾಮುಕ) ಭಾವನೆಯಿಂದ ಮನಸ್ಸಿನಲ್ಲಿ ಧ್ಯಾನಿಸುತ್ತಾನೆ. ಇದು ದೇವತೆಗಳ ಗಮನಕ್ಕೆ ಬರುತ್ತದೆ. ಆಗ ಅದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಯೋಚಿಸುತ್ತಾರೆ. ಆದರೆ ಈ ಕೆಲಸ ಮಾಡುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ದೇವತೆಗಳೆಲ್ಲಾ ಸೇರಿ ತಮ್ಮಲ್ಲಿರುವ ಘೋರವಾದ ಶಕ್ತಿಯನ್ನು ಒಂದು ಮಾಡಿ ಒಂದು "ರುದ್ರ" ಎನ್ನುವ ದೇವನನ್ನು ಸೃಷ್ಟಿಸುತ್ತಾರೆ. ಆ ರುದ್ರನಲ್ಲಿ ಪ್ರಜಾಪತಿಯನ್ನು ಶಿಕ್ಷಿಸಲು ವಿನಂತಿಸಿಕೊಳ್ಳುತ್ತಾರೆ. ಆಗ ಇದನ್ನು ಗಮನಿಸಿದ ಪ್ರಜಾಪತಿಯು ಹೆದರಿಕೊಂಡು ಮೃಗರೂಪವನ್ನು ಧರಿಸಿ ಅಂತರಿಕ್ಷಕ್ಕೆ ನೆಗೆಯುತ್ತಾನೆ. ಅದೇ ಇಂದಿಗೂ ಕಾಣಿಸಿಕೊಳ್ಳುತ್ತಿರುವ ಮೃಗ ನಕ್ಷತ್ರ ಅಥವಾ ಮೃಗಶಿರಾ. ಆಗ ರುದ್ರನು ಆರ್ದ್ರಾ ನಕ್ಷತ್ರವಾಗಿ ನೆಗೆದು ಮೃಗಶಿರಾ ನಕ್ಷತ್ರದ ಪ್ರಜಾಪತಿಯ ಮೇಲೆ ಬಾಣ ಪ್ರಯೋಗಿಸುತ್ತಾನೆ. ಆದರೆ ಅದಾಗಲೇ ಬೃಹಸ್ಪತಿಯ ವೀರ್ಯಸ್ಖಲನವಾಗುತ್ತದೆ. ಅದನ್ನು ಮರುತ್ತುಗಳು ಬೇರೆ ಬೇರೆ ಕಡೆ ಹರಡಿ ಭಸ್ಮ ಮಾಡುತ್ತವೆ. ಆ ವೀರ್ಯದಿಂದ ಮೊದಲು ಆದಿತ್ಯನೂ, ಆಮೇಲೆ ಭೃಗುರ್ವಾರುಣಿಯೂ ಜನಿಸುತ್ತಾರೆ. ಉಳಿದ ಅಂಗಾರಗಳಿಂದ ಅಂಗಿರಸರೆನ್ನುವವರು ಹುಟ್ಟಿಕೊಳ್ಳುತ್ತಾರೆ. ಹೀಗೆ ಅಂಗಿರಸರು ಕೆಂಡದಿಂದಲೇ ಜನ್ಮ ತಳೆದಿದ್ದು ತಿಳಿಯುತ್ತದೆ.
ವೇದಗಳಲ್ಲಿ ಅಂಗಿರ ಎನ್ನುವವನು ಬಹು ಪ್ರಾಚೀನ ಮತ್ತು ಅಷ್ಟೇ ಮಹತ್ವವನ್ನು ಪಡೆದವನು. ಅನೇಕ ಪ್ರಸಿದ್ಧರಾದ ಋಷಿಗಳಿಗೆ ಈತನೇ ಮೂಲ ಪುರುಷನಾಗಿದ್ದಾನೆ. "ತೇ ಅಂಗಿರಸಃ ಸೂನವಸ್ತೇ ಅಗ್ನೇಃ ಪರಿಜಜ್ಞಿರೇ " ಋಗ್ವೇದ 10:62:5 ರಲ್ಲಿ ಅಂಗಿರಸ್ಸೆಂಬ ಋಷಿಗಳು ಅಗ್ನಿಯ ಪುತ್ರರು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ. "ಮನುಷ್ವದಗ್ನೇ ಅಂಗಿರಸ್ವದಂಗಿರೋ ಯಯಾತಿವತ್ಸದನೇ ಪೂರ್ವವಚ್ಚುಚೇ" "ಪೂರ್ವೋ ಅಂಗಿರಾಃ ಪ್ರಿಯಮೇಧಃ ಕಣ್ವೋ ಅತ್ರಿರ್ಮನುರ್ವಿದುಸ್ತೇ ಮೇ ಪೂರ್ವೇ ಮನುರ್ವಿದುಃ ||" ಎನ್ನುವುದಾಗಿ ಋಗ್ವೇದದ ಒಂದನೇ ಮಂಡಲದಲ್ಲಿಯೇ ಅನೇಕ ಪ್ರಸಿದ್ಧ ರಷಿಗಳಿಗೆ ಈತ ಮೂಲ ಮತ್ತು ಪ್ರಾಚೀನ ಎನ್ನುವುದನ್ನು ತಿಳಿಸಿಕೊಡುತ್ತದೆ. ಈ ಅಂಗಿರಾ ಋಷಿಯ ವಂಶದಲ್ಲಿ 'ಅಥರ್ವನ್' ಎನ್ನುವವನು ಪ್ರಮುಖನು. ಇವನಿಗೆ ಬೃಹಸ್ಪತಿ, ಗೋತಮ ಮತ್ತು ವೃಷಣ ಎನ್ನುವ ಮೂವರು ಪುತ್ರರು. ವೃಷಣ ಎನ್ನುವವನು ಅಥರ್ವಣನಿಗೆ ಪಥ್ಯಾ ಎನ್ನುವ ಪತಿಯಲ್ಲಿ ಹುಟ್ಟಿದವನು. ವೇದದಲ್ಲಿ ಅನೇಕ ಕಡೆಯಲ್ಲಿ ಈತನ ಹೆಸರು ಕಂಡು ಬರುತ್ತದೆ. ಈ ವೃಷಣನ ಮಗ 'ಸುಧನ್ವಾನ್' ಆಂಗಿರ ಎನ್ನುವವನು . ಈ ಸುಧ್ನ್ವನಿಗೆ ಋಬು, ವಿಭ್ವನ್, ಮತ್ತು ವಾಜ ಎನ್ನುವುದಾಗಿ ಮೂರು ಜನ ಮಕ್ಕಳು. ಈ ಮೂವರನ್ನೂ ವೇದದಲ್ಲಿ ಋಭುಗಳೆಂದೇ ಕರೆಯಲ್ಪಟ್ಟಿದ್ದಾರೆ. ಇವರೆಲ್ಲ ತ್ವಷ್ಟೃ ಪ್ರಜಾಪತಿಯ ಶಿಷ್ಯರು. ಈ ಅಂಗಿರಾ ಋಷಿಯ ವಂಶಸ್ಥರೇ ಬೃಹಸ್ಪತಿಗಳೆನ್ನುವವರು ಮೂವರಿದ್ದರು. ಋಭು ಮತ್ತು ಬೃಹಸ್ಪತಿಗಳನ್ನು ದೇವತೆಗಳೆಂದೇ ಭಾವಿಸಿ ಅನೇಕ ಋಕ್ಕುಗಳಲ್ಲಿ ಕೊಂಡಾಡಿದ್ದಾರೆ. ಇವರನ್ನು ಸ್ತುತಿಸುವ ಅನೇಕ ಋಕ್ಕುಗಳು ಕಾಣ ಸಿಗುತ್ತವೆ. ಮೂವರು ಬೃಹಸ್ಪತಿಗಳಲ್ಲಿ ಮೊದಲನೆಯವನು ಫಣಿ ಎನ್ನುವ ದಸ್ಯು ರಾಜನನ್ನು ಕೊಂದು ಅವನು ಅಪಹರಿಸಿದ್ದ ಗೋವುಗಳನ್ನು ಹಿಂದಕ್ಕೆ ಕರೆತಂದವನು. ಅಂಶುಮತೀ ಎಂಬ ನದೀ ದಡದಮೇಲೆ ರಾಜ್ಯವಾಳುತ್ತಿದ್ದ ದಾಸನೆನ್ನುವ ಮತ್ತೊಬ್ಬ ದಸ್ಯು ಮುಖಂಡನನ್ನು ತನ್ನ ಹತ್ತು ಸಾವಿರ ಬೆಂಬಲಿಗರೊಡನೆ ಎದುರಿಸಿ ಸೋಲಿಸಿದ ಎನ್ನುವುದಾಗಿ ತಿಳಿದು ಬರುತ್ತದೆ. ಬೃಹಸ್ಪತಿಯ ಮಗನಾದ ಭರದ್ವಾಜನೆಂಬ ಋಷಿಯು ಶಂಬರನೆಂಬ ದೈತ್ಯನನ್ನ ಕೊಂದ ದಿವೋದಾಸನಿಗೆ ಪುರೋಹಿತನಾಗಿದ್ದನಂತೆ. ಈತ ಭೃಹಸ್ಪತಿಯ ಮಗ. ವೇದದಲ್ಲಿ ಅಗ್ನಿಯ ಕುರಿತಾದಲ್ಲೆಲ್ಲಾ ಅಂಗಿರಾ ಶಬ್ದ ಕಂಡು ಬರುತ್ತದೆ.
"ತಮಿತ್ಸು ಹವ್ಯಮಂಗಿರಃ ಸುದೇವಂ ಸಹಸೋ ಯಹೋ| ಜನಾ ಆಹುಃ ಸುಬರ್ಹಿಷಂ||" ಆರನೇ ಮಂಡಲದ ಮಂತ್ರವಿದು. ಇಲ್ಲಿ ಬಲ ಪುತ್ರನಾದ ಅಂಗಿರಸ್ ಎಂಬ ಅಗ್ನಿಯೇ ಯಜಮಾನನನ್ನೇ, ಹವಿರ್ದಾನ, ದೇವತೆ ಮತ್ತು ಯಜ್ಞ ಇವುಗಳೆಲ್ಲವುಗಳಲ್ಲಿಯೂ ಅದೃಷ್ಟಶಾಲಿಯೆಂದು ಎಲ್ಲ ಜನರೂ ಹೇಳುತ್ತಾರೆ ಎನ್ನುವುದು ಈ ಋಕ್ಕಿನ ಅರ್ಥವಾಗಿದ್ದರೂ ಇಲ್ಲಿ ಅಂಗಿರಃ ಎನ್ನುವುದು ಅಗ್ನಿಯನ್ನು ಕುರಿತಾಗಿ ಹೇಳಲಾಗಿದೆ. ತವೇತತ್ಸತ್ಯಮಂಗಿರಃ ಎಂದು ಒಂದನೇ ಮಂದಲದಲ್ಲಿ ಅಗ್ನಿಯನ್ನು ಸಂಬೋಧಿಸಲಾಗಿದೆ. "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ದೇವಾನಾಮಭವ ಶಿವಃ ಸಖಾ|| ಎನ್ನುವುದಾಗಿ ಇಲ್ಲಿಯೂ ಅಂಗಿರಾ ಋಷಿಯು ಅಗ್ನಿ ಎನ್ನಲಾಗಿದೆ. "ತ್ವಂ ನೋ ಅಗ್ನೇ ಅಂಗಿರಃ" ಎಂದು ಐದನೇ ಮಂಡಲದಲ್ಲಿ ಹೇಳಲಾಗಿದೆ.
ಋಗ್ವೇದ ಒಂದನೇ ಮಂಡಲದ 31ನೇ ಸೂಕ್ತದ ಋಷೀ ಹಿರಣ್ಯಸ್ತೂಪ ಎನ್ನುವವನು. ಈತ ತನ್ನನ್ನು ಅಂಗೀರಸ ವಂಶದವನೆಂದು ಹೇಳಿಕೊಂಡಿರುವುದಲ್ಲದೇ "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ಎನ್ನುವುದಾಗಿ ಆರಂಭಿಸಿ ಎಲ್ಲಾ ಋಕ್ಕುಗಳನ್ನೂ ತ್ವಮಗ್ನೇ ಎಂದು ಹೇಳಿಕೊಳ್ಳುತ್ತಾನೆ.
ಈ ಅಂಗೀರಸನು ಫಣಿಗಳಿಂದ ಅಪಹೃತವಾದ ಗೋವುಗಳನ್ನು ಸಂಪತ್ತನ್ನು ಮರಳಿ ಪಡೆದ ಎನ್ನುವುದು ಋಗ್ವೇದದ ಒಂದನೇ ಮಂಡಲದಿಂದ ತಿಳಿಯುತ್ತದೆ. ಹಾಗೆಯೇ ಇವರೆಲ್ಲರೂ ಯಜ್ಞಗಳ ನಿರ್ವಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತಿದ್ದುದು ತಿಳಿದು ಬರುತ್ತದೆ.
ಮಹಾಭಾರತದ ಆದಿಪರ್ವದ ಮೊದಲ ಅಧ್ಯಾಯದಲ್ಲಿಮೊದಲು ದೇವಗುರುವಾದ ಬ್ರಹ್ಮನು ಪ್ರಕಟವಾದನು. ಅವನನ್ನೇ ಅನುಸರಿಸಿ ರುದ್ರ, ಮನು, ಪ್ರಜಾಪತಿ, ಪರಮೇಷ್ಠೀ, ಪ್ರಚೇತಸನ ಪುತ್ರ, ದಕ್ಷ ಮತ್ತು ದಕ್ಷಪುತ್ರರು ಪ್ರಕಟವಾದರು. ದಕ್ಷನಿಗೆ ಕ್ರೋಧ, ತಮಸ, ದಮ, ವಿಕ್ರೀತ, ಅಂಗಿರಸ, ಕರ್ದಮ ಮತ್ತು ಅಶ್ವ ಎಂಬ ಏಳು ಮಕ್ಕಳು ಹುಟ್ಟಿದರು. ಎಂದು ಅಂಗಿರಸನ ಕುರಿತಾಗಿ ಬರುತ್ತದೆ. ೬೫ನೇ ಅಧ್ಯಾಯದಲ್ಲಿ ಹೀಗೆ ಬರುತ್ತದೆ: ಸುಪ್ರಸಿದ್ಧರಾದ ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಎಂದು ಅಂಗೀರಸನನ್ನು ಬ್ರಹ್ಮನ ಮಾನಸ ಪುತ್ರ ಎಂದು ಹೇಳಲಾಗುತ್ತದೆ.
ಸಭಾಪರ್ವದ 7ನೇ ಅಧ್ಯಾಯದಲ್ಲಿ ಅಂಗಿರಸರೆಂಬ ಇಪ್ಪತ್ತೇಳು ಅಗ್ನಿಗಳು, ಅಗ್ನೀಷೋಮರು, ಇಂದ್ರಾಗ್ನಿಗಳು, ಮಿತ್ರ, ಸವಿತೃ, ಅರ್ಯಮಾ, ಭಗ, ವಿಶ್ವೇದೇವತೆಗಳು, ಸಾಧ್ಯರು, ಗುರು, ಶುಕ್ರ, ವಿಶ್ವಾವಸು, ಚಿತ್ರಸೇನ, ಸುಮನ, ತರುಣ, ಯಜ್ಞಗಳ ಅಧಿದೇವತೆಗಳು, ಎಂದು ಅಂಗೀರಸನನ್ನು ಅಗ್ನಿ ಎನ್ನುವುದಾಗಿಯೇ ಹೇಳಲಾಗಿದೆ. ಅದೇ ಪರ್ವದ ಅಧ್ಯಾಯ-11 ರಲ್ಲಿ ಬ್ರಹ್ಮನ ಸಭೆಯನ್ನು ಕುರಿತಾಗಿ ಹೇಳುವಾಗ ದಕ್ಷ, ಪ್ರಚೇತಸ, ಪುಲಹ, ಮರೀಚಿ, ಕಶ್ಯಪ, ಭೃಗು, ಅತ್ರಿ, ವಸಿಷ್ಠ, ಗೌತಮ, ಅಂಗಿರಸ, ಪುಲಸ್ತ್ಯ, ಕ್ರತು, ಪ್ರಹ್ಲಾದ, ಕರ್ದಮ, ಅಥರ್ವಾಂಗಿರಸರು, ಸೂರ್ಯಕಿರಣಗಳನ್ನು ಪಾನಮಾಡುವ ವಾಲಖಿಲ್ಯಇವರೆಲ್ಲರೂ ಬ್ರಹ್ಮನ ಸೇವೆಯಲ್ಲಿ ನಿರತರಾಗಿರುತ್ತಾರೆ. ಎಂದು ಬರುತ್ತದೆ.
ವನಪರ್ವದ 85ನೇ ಅಧ್ಯಾಯದಲ್ಲಿ ಒಂದು ಚಿಕ್ಕ ಕಥೆ ಬರುತ್ತದೆ ಅಲ್ಲಿ ತುಂಗಕಾರಣ್ಯದಲ್ಲಿ ಹಿಂದೆ ಸಾರಸ್ವತಮಹರ್ಷಿಯು ಇತರ ಮುನಿಗಳಿಗೆ ವೇದಗಳನ್ನು ಅಧ್ಯಯನಮಾಡಿ ಸಿದನು. ಹೀಗೆ ಅಧ್ಯಯನಮಾಡಿಸಿದ ವೇದಗಳೆಲ್ಲವೂ ಕಾಲಾಂತರದಲ್ಲಿ ಋಷಿಗಳ ಸ್ಮೃತಿಪಥದಿಂದ ನಷ್ಟವಾದಾಗ ಅಂಗಿರಸನ ಮಗನಾದ ಆಂಗಿರಸನು ಋಷಿಗಳ ಉತ್ತರೀಯಗಳಲ್ಲಿ ಸೂಕ್ಷ್ಮರೂಪವನ್ನು ಹೊಂದಿ ಕುಳಿತು ಪ್ರಣವಪೂರ್ವಕವಾಗಿ ವೇದಗಳೆಲ್ಲವನ್ನೂ ಪಠಣಮಾಡಿದನು. ಒಡನೆಯೇ ಋಷಿಗಳು ತಾವು ಹಿಂದೆ ಸಾರಸ್ವತಮಹರ್ಷಿಯಿಂದ ಅಧ್ಯಯನಮಾಡಿದ ವೇದಗಳೆಲ್ಲವನ್ನೂ ಪುನಃ ಪಡೆದರು. (ವೇದಗಳು ಜ್ಞಾಪಕಕ್ಕೆ ಬಂದುವು.) ಎನ್ನುವ ಕಥೆ ಬರುತ್ತದೆ.
ವನಪರ್ವ ಅಧ್ಯಾಯ-217 ನೇ ಅಧ್ಯಾಯದಲ್ಲಿ ಕಥೆ ಹೀಗಿದೆ. : ಹಿಂದೆ ಅಂಗಿರಸಮಹರ್ಷಿಯು ಆಶ್ರಮಸ್ಥನಾಗಿ ಉತ್ತಮೋತ್ತಮವಾದ ತಪಶ್ಚರಣೆಯನ್ನು ಮಾಡಿದನು. ಮಹರ್ಷಿಯು ಯಜ್ಞೇಶ್ವರನನ್ನೂ ಮೀರಿಸುವ ತೇಜಸ್ಸನ್ನು ತನ್ನ ತಪಃಪ್ರಭಾವದಿಂದ ಪಡೆದಿದ್ದನು. ಯಜ್ಞೇಶ್ವರನಿಗಿಂತಲೂ ಮಿಗಿಲಾಗಿ ಅವನ ಅಪ್ರತಿಮವಾದ ತೇಜಸ್ಸು ಸರ್ವತ್ರ ವ್ಯಾಪ್ತವಾಗಿದ್ದಿತು. ಅದೇ ಸಮಯದಲ್ಲಿ ನೀರಿನಲ್ಲಿ ಕುಳಿತು ತಪಸ್ಸುಮಾಡುತ್ತಿದ್ದ ಯಜ್ಞೇಶ್ವರನು ಸರ್ವವ್ಯಾಪಿಯಾಗಿದ್ದ ಅಂಗಿರಸ ಮಹರ್ಷಿಯ ಅಪ್ರತಿಮವಾದ ತೇಜಸ್ಸನ್ನು ಕಂಡು ಉದ್ವಿಗ್ನನಾದನು. ಖಿನ್ನನಾದ ಯಜ್ಞೇಶ್ವರನಿಗೆ ಮುಂದೇನು ಮಾಡಬೇಕೆಂಬುದು ತಿಳಿಯಲಿಲ್ಲ. ತನ್ನಲ್ಲಿಯೇ ತಾನು ಯೋಚಿಸತೊಡಗಿದನು: “ನಾನಿಲ್ಲಿ ತಪಸ್ಸಿಗಾಗಿ ಕುಳಿತಿರಲಾಗಿ ಬ್ರಹ್ಮನು ಬೇರೆಯ ಅಗ್ನಿಯನ್ನೇ ಸೃಷ್ಟಿಸಿಬಿಟ್ಟಿದ್ದಾನೆ. ನನಗೆ ಇಂದು ಅಗ್ನಿತ್ವವೇ ಹೊರಟುಹೋಗಿರುವುದು. ನಾನು ಪುನಃ ಅಗ್ನಿತ್ವವನ್ನು ಪಡೆಯುವುದು ಹೇಗೆ?” ಪ್ರಕಾರವಾಗಿ ತನ್ನಲ್ಲಿಯೇ ತಾನು ಚಿಂತಿಸುತ್ತಾ ಅಂಗಿರಸ ಮಹರ್ಷಿಯ ಆಶ್ರಮದ ಬಳಿಗೆ ಬಂದು ಸಾಕ್ಷಾತ್ಯಜ್ಞೇಶ್ವರನಂತೆಯೇ ಸಕಲಭುವನಗಳನ್ನೂ ತನ್ನ ಕಾಂತಿಯಿಂದ ಬೆಳಗಿಸುತ್ತಿದ್ದ ಮಹರ್ಷಿಯನ್ನು ಕಂಡು ಮಹರ್ಷಿಯ ಬಳಿಗೆ ಹೋದನು. ಅಂಗಿರಸನು ಅಗ್ನಿಯನ್ನು ಕಂಡು ಅವನನ್ನು ಕುರಿತು ಹೇಳಿದನು : “ನಿನ್ನ ಮನಸ್ಸಿನ ಚಿಂತೆಯೇನೆಂಬುದು ನನಗೆ ತಿಳಿದಿದೆ. ಅಗ್ನಿಯಾಗಿ ಸರ್ವಕಾಲದಲ್ಲಿಯೂ ಇರುವ ಇಚ್ಛೆಯು ನನಗಿಲ್ಲ. ನೀನು ಮೂರು ಲೋಕಗಳಲ್ಲಿಯೂ ಪ್ರಸಿದ್ಧನಾಗಿರುವೆ. ಮೇಲಾಗಿ ಪ್ರಪಂಚದಲ್ಲಿ ರಾತ್ರಿಯ ವೇಳೆಯಲ್ಲಿ ಕತ್ತಲೆಯನ್ನು ನೀಗಲು ಬ್ರಹ್ಮನು ಮೊದಲು ನಿನ್ನನ್ನು ಸೃಷ್ಟಿಸಿದನು. ಆದುದರಿಂದ ನೀನು ಕೂಡಲೇ ನಿನ್ನ ಸ್ವಸ್ಥಾನಕ್ಕೆ ಬಂದು ಪ್ರಪಂಚದ ಕತ್ತಲೆಯನ್ನು ನಿವಾರಣೆಮಾಡು.” ಎನ್ನುತ್ತಾನೆ. ಅಂಗಿರಸನ ಮಾತುಗಳನ್ನು ಕೇಳಿ ಖಿನ್ನವದನನಾದ ಅಗ್ನಿಯು ಹೇಳಿದನು: “ನಾನು ಕಳೆದುಹೋದ ಕೀರ್ತಿಯುಳ್ಳವನಾಗಿದ್ದೇನೆ. ನೀನೇ ಇಂದು ಮಹಾತೇಜಸ್ಸಿನಿಂದ ಕೂಡಿರುವ ಹುತಾಶನನಾಗಿಬಿಟ್ಟಿರುವೆ. ನಿನ್ನನ್ನೇ ಇಂದು ಜನರು ಪರಮಪವಿತ್ರನಾದ ಪಾವಕನೆಂದು ತಿಳಿದುಕೊಂಡಿರುತ್ತಾರೆ. ನನ್ನನ್ನೀಗ ಅವರು ನಿರ್ಲಕ್ಷಿಸಿದ್ದಾರೆ. ನಾನೂ ಸಹ ನಿನ್ನಲ್ಲಿಯೇ ನನ್ನ ಅಗ್ನಿತ್ವವನ್ನು ಸ್ಥಾಪಿಸಿಬಿಡುತ್ತೇನೆ. ನೀನೇ ಮೊದಲನೆಯ ಅಗ್ನಿಯಾಗು. ನಾನು ಎರಡನೆಯ ಅಗ್ನಿಯಾಗಿ ಪ್ರಾಜಾಪತ್ಯಕ ಎಂಬ ಹೆಸರಿನ ವಿರಾಟ್ಪುರುಷನಾಗುತ್ತೇನೆ.” ಅಗ್ನಿಯ ಮಾತುಗಳನ್ನು ಕೇಳಿ ಮಹರ್ಷಿಯು ಹೇಳಿದನು : “ಅಗ್ನಿದೇವ! ನೀನು ನಿನ್ನ ಅಗ್ನಿತ್ವವನ್ನು ನನ್ನಲ್ಲಿ ಪ್ರತಿಷ್ಠಾಪಿಸ ಬೇಕಾಗಿಲ್ಲ. ನೀನೇ ಅಗ್ನಿಯಾಗಿದ್ದುಕೊಂಡು ಪ್ರಪಂಚದ ಕತ್ತಲನ್ನು ಹೋಗಲಾಡಿಸಿ ಪ್ರಜೆಗಳನ್ನು ಸ್ವರ್ಗಗಾಮಿಗಳನ್ನಾಗಿ ಮಾಡು. ನನ್ನನ್ನು ನಿನ್ನ ಮೊದಲನೆಯ ಮಗನನ್ನಾಗಿ ಮಾಡಿಕೋ. (ನಿನ್ನ ಅನುಗ್ರಹದಿಂದ ನನಗೊಬ್ಬ ಮಗನಾಗಲಿ. ನನ್ನ ಪುತ್ರನೂ ನಾನೇ ಆದುದರಿಂದ ನಾನೂ ನಿನ್ನ ಪುತ್ರನಾದಂತಾಗುತ್ತದೆ.)” ಅಂಗಿರಸಮಹರ್ಷಿಯ ಮಾತುಗಳನ್ನು ಕೇಳಿದ ಯಜ್ಞೇಶ್ವರನು ಮಹರ್ಷಿಗೊಬ್ಬ ಪುತ್ರನಾಗುವಂತೆ ಅನುಗ್ರಹಿಸಿದನು. ಅಂಗಿರಸನಿಗೆ ಬೃಹಸ್ಪತಿಯೆಂಬ ಪುತ್ರನು ಅಗ್ನಿಯ ಅನುಗ್ರಹದಿಂದ ಹುಟ್ಟಿದನು. ಅಗ್ನಿಯ ಅನುಗ್ರಹದಿಂದ ಅಂಗಿರಸನಿಗೆ ಒಬ್ಬ ಮಗನು ಹುಟ್ಟಿದ್ದಾನೆಂದು ತಿಳಿದು ದೇವತೆಗಳು ಮಹರ್ಷಿಯ ಬಳಿಗೆ ಬಂದು ಅದಕ್ಕೆ ಕಾರಣವನ್ನು ಕೇಳಿದರು. ಅಂಗಿರಸನು ತಾನು ಅಗ್ನಿಗೆ ಪುತ್ರನಾದ ಅಥವಾ ಅಗ್ನಿಯಿಂದ ಪುತ್ರನನ್ನು ಪಡೆದ ಕಾರಣವನ್ನು ವಿವರಿಸಿ ಹೇಳಿದನು. ಅಂಗಿರಸನು ಕೊಟ್ಟ ನಿರೂಪಣೆಯನ್ನು ಒಪ್ಪಿಕೊಂಡು, ಬೃಹಸ್ಪತಿಯನ್ನೇ ತಮ್ಮ ಗುರುವೆಂಬುದನ್ನೂ ಅಂಗೀಕರಿಸಿ ದೇವತೆಗಳು ಹೊರಟುಹೋದರು. ಇದು ಅಂಗಿರಸನ ಕುರಿತಾಗಿ ಪುರಾಣಗಳಲ್ಲಿರುವ ಉಲ್ಲೇಖಗಳು.
ಅಂಗಿರಾ ಋಷಿ ವೇದಗಳಲ್ಲಿ ಪ್ರಮುಖನಾಗಿ ಕಾಣಿಸಿಕೊಂಡು ದೇವತ್ವವನ್ನು ಪಡೆದ ಋಷಿಯಾಗಿ ಗೋಚರಿಸುತ್ತಾನೆ. ಹುಟ್ಟಿನ ಮೂಲಕ್ಕೂ ಅಗ್ನಿಯೇ ಶಾಖರೂಪದಲ್ಲಿ ಶಕ್ತಿಯರೂಪದಲ್ಲಿ ಕಾರಣನಾಗುತ್ತಾನೆ. ಸಾವಿನ ಮೂಲಕ್ಕೂ ಆತನೇ ಕಾರಣನಾಗಿ ಮಧ್ಯದ ನಮ್ಮ ಜೀವನದ ಉದ್ದಕ್ಕೂ ಅಗ್ನಿ ನಮ್ಮ ಜೊತೆಗಿರುತ್ತಾನೆ. ಅಂತಹ ಅಗ್ನಿಯನ್ನೇ ಅಂಗಿರಾ ಅಥವಾ ಅಂಗಿರಸ ಎನ್ನುವುದಾಗಿ ಕರೆಯಲಾಗಿದೆ.

1 comment:

  1. Please help me in understanding l mandala of Rig-Veda Nan's 142.
    Please explain
    Thank you

    ReplyDelete