Search This Blog

Friday 13 July 2018

ಮೌನ ವಹಿಸಿರುವುದೂ ತಪ್ಪಿನ ಅನುಮೋದನೆಗೆ ಸಮ ಮತ್ತು ಪ್ರಹ್ಲಾದನ ನ್ಯಾಯ.


ಮಹಾಭಾರತಸಭಾಪರ್ವ68ನೇ ಅಧ್ಯಾಯದಲ್ಲೊಂದು ಕಥೆ ಬರುತ್ತದೆ. ದೈತ್ಯರ ಅಧಿಪತಿಯಾದ ಪ್ರಹ್ಲಾದನೆಂಬ ಪ್ರಸಿದ್ಧರಾಜನಿದ್ದನು. ಅವನಿಗೆ ವಿರೋಚನನೆಂಬ ಮಗನಿದ್ದನು. ಒಂದು ಕನ್ಯೆಯನ್ನು ವಿವಾಹವಾಗುವ ಸಲುವಾಗಿ ವಿರೋಚನನಿಗೂ ಅಂಗಿರಸಕುಲೋದ್ಭವನಾದ ಸುಧನ್ವನಿಗೂ ಪರಸ್ಪರವಿವಾದವುಂಟಾಗುತ್ತದೆ. ಅವರಿಬ್ಬರಲ್ಲಿ ವಿದ್ಯೆಯಲ್ಲಿಯೂ, ಪರಾಕ್ರಮ ದಲ್ಲಿಯೂ ನಾನು ಹೆಚ್ಚು, ‘ತಾನು ಹೆಚ್ಚು ಎಂಬ ಪರಸ್ಪರ ವಾದ ವಿವಾದಗಳು ನಡೆದು ಅದರ ಇತ್ಯರ್ಥದ ಸಲುವಾಗಿ ಇಬ್ಬರೂ ತಮ್ಮ ತಮ್ಮ ಪ್ರಾಣಗಳನ್ನೇ ಪಣವನ್ನಾಗಿಡುತ್ತಾರೆ. ಸುಧನ್ವ ಮತ್ತು ವಿರೋಚನರು ತಮ್ಮಲ್ಲಿ ಯಾರು ಶ್ರೇಷ್ಠರೆಂಬುದನ್ನು ಪ್ರಹ್ಲಾದನ ಹತ್ತಿರ ಹೋಗಿ ಕೇಳಬೇಕೆಂದೂ, ಸುಧನ್ವನು ಶ್ರೇಷ್ಠನೆಂದು ಪ್ರಹ್ಲಾದನು ತೀರ್ಪನ್ನಿತ್ತರೆ ವಿರೋಚನನು ಪ್ರಾಣತೊರೆಯುವುದಾಗಿಯೂ ವಿರೋಚನನು ಶ್ರೇಷ್ಠನೆಂದು ತೀರ್ಪನ್ನಿತ್ತರೆ ಸುಧನ್ವನು ಪ್ರಾಣತೊರೆಯುವುದಾಗಿಯೂ ಆ ಇಬ್ಬರೂ ತಮ್ಮ ತಮ್ಮಲ್ಲಿಯೇ ಒಪ್ಪಂದಮಾಡಿಕೊಂಡರು. ಕೊನೆಗೆ ತೀರ್ಮಾನಕ್ಕಾಗಿ ಪ್ರಹ್ಲಾದನ ಬಳಿಗೆ ಇಬ್ಬರೂ ಹೋದರು. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಎಂದು ಕೇಳುತ್ತಾರೆ, ಮಹಾರಾಜ ನೀನು ಈ ನಮ್ಮ ಪ್ರಶ್ನೆಗೆ ಉತ್ತರಿಸಲೇಬೇಕು. ಸುಳ್ಳುಹೇಳಬಾರದುಎಂದು ಇಬ್ಬರೂ ಕೇಳಿಕೊಂಡರು. ಪ್ರಹ್ಲಾದನು ಅವರಿಬ್ಬರ ಪರಸ್ಪರ ಕಲಹದಿಂದ ಭಯ ಪಡುತ್ತಾನೆ. ಸುಧನ್ವನ ಕಡೆಗೊಮ್ಮೆ ನೋಡುತ್ತಾನೆ. ಸುಧನ್ವನ ಮುಖದಲ್ಲಿ ಕೋಪವಾವರಿಸಿದ್ದಿತು. ಅವನು ಸಾಕ್ಷಾತ್‍ ಬ್ರಹ್ಮದಂಡದಂತೆಯೇ ಪ್ರಜ್ವಲಿಸುತ್ತಿದ್ದನು. ಸುಧನ್ವನು ಪ್ರಹ್ಲಾದನಿಗೆ ಹೇಳುತ್ತಾನೆ.
ಯದಿ ವೈ ವಕ್ಷ್ಯಸಿ ಮೃಷಾ ಪ್ರಹ್ಲಾದಾಥ ನ ವಕ್ಷ್ಯಸಿ |
ಶತಧಾ ತೇ ಶಿರೋ ವಜ್ರೀ ವಜ್ರೇಣ ಪ್ರಹರಿಷ್ಯತಿ || 70 ||
ಮಹಾರಾಜ, ನೀನು ಸುಳ್ಳುಹೇಳಿದರೂ, ಅಥವಾ ಉತ್ತರಿಸದೇ ಮೌನವಾಗಿದ್ದರೂ ಇಂದ್ರನು ನಿನ್ನ ತಲೆಯನ್ನು ತನ್ನ ವಜ್ರಾಯುಧದಿಂದ ನೂರು ಭಾಗಗಳನ್ನಾಗಿ ಸೀಳಿಬಿಡುತ್ತಾನೆ.” ಸುಧನ್ವನ ಮಾತುಗಳನ್ನು ಕೇಳಿ ಪ್ರಹ್ಲಾದನು ಭಯದಿಂದ ನಡುಗುತ್ತಾನೆ. ವಿಷಯದಲ್ಲಿ ಸಲಹೆಯನ್ನು ಕೇಳುವ ಸಲುವಾಗಿ ಪ್ರಹ್ಲಾದನು ಕೂಡಲೇ ಕಶ್ಯಪರ ಬಳಿಗೆ ಹೋಗಿ ಹೀಗೆ ಹೇಳುತ್ತಾನೆ : “ಕರ್ತವ್ಯದ ವಿಷಯವಾಗಿ ನಾನೊಂದು ಸಂಕಟದಲ್ಲಿ ಸಿಕ್ಕಿಬಿದ್ದಿರುತ್ತೇನೆ. ವಿಷಯದಲ್ಲಿ ತಾವು ಧರ್ಮಮೂಲವಾದ ಪ್ರಶ್ನೆಗೆ ಉತ್ತರಿಸದಿದ್ದರೆ ಯಾವ ಶಿಕ್ಷೆಯಾಗುತ್ತದೆ? ಮತ್ತು ಪ್ರಶ್ನೆಗೆ ಸುಳ್ಳು ಉತ್ತರವನ್ನು ಕೊಟ್ಟರೆ ಯಾವ ವಿಧವಾದ ಪಾಪವು ಪ್ರಾಪ್ತವಾಗುತ್ತದೆ?’ ಎಂಬುದನ್ನು ಹೇಳಿರಿ.” ಎನ್ನುತ್ತಾನೆ. ಆಗ ಕಶ್ಯಪರು ಹೇಳತೊಡಗುತ್ತಾರೆ :
ಜಾನನ್ನತೇಬ್ರುವನ್ಪ್ರಶ್ನಾನ್ಕಾಮಾತ್ಕ್ರೋಧಾ ದ್ಭಯಾತ್ತಥಾ |
ಸಹಸ್ರಂ ವಾರುಣಾನ್ಪಾಶಾನಾತ್ಮನಿ ಪ್ರತಿಮುಞ್ಚತಿ || 74 ||ಪ್ರಹ್ಲಾದ! ಒಬ್ಬ ಮನುಷ್ಯನು ಪ್ರಶ್ನೆಗೆ ತಕ್ಕ ಉತ್ತರವೇನೆಂಬುದು ತಿಳಿದಿದ್ದರೂ ಕೋಪದಿಂದಾಗಲೀ, ಭಯದಿಂದಾಗಲೀ, ದುರಾಶೆಯಿಂದಾಗಲೀ ಉತ್ತರಿಸದೇ ಮೌನವಾಗಿದ್ದರೆ ಅಂತಹವನು ಒಂದು ಸಾವಿರ ವರುಣಪಾಶಗಳಿಂದ ಬಂಧಿಸಲ್ಪಡುತ್ತಾನೆ.
ಸಾಕ್ಷೀ ವಾ ವಿಬ್ರುವನ್ಸಾಕ್ಷ್ಯಂ ಗೋಕರ್ಣಶಿಥಿಲಶ್ಚರನ್ |
ಸಹಸ್ರಂ ವಾರುಣಾನ್ಪಾಶಾನಾತ್ಮನಿ ಪ್ರತಿಮುಞ್ಚತಿ || 75 ||
ತಸ್ಯ ಸಂವತ್ಸರೇ ಪೂರ್ಣೇ ಪಾಶ ಏಕಃ ಪ್ರಮುಚ್ಯತೇ |
ತಸ್ಮಾತ್ಸತ್ಯಂ ತು ವಕ್ತವ್ಯಂ ಜಾನತಾ ಸತ್ಯಮಞ್ಜಸಾ || 76 ||  
ನ್ಯಾಯ ಸ್ಥಾನಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದವನೊಬ್ಬನನ್ನು ಸಾಕ್ಷ್ಯಹೇಳಲು ಕರೆತಂದಾಗ ಆತನು ಜೋಲಾಡುತ್ತಿರುವ ಹಸುಗಳ ಕಿವಿಗಳಂತೆ ಚಂಚಲಚಿತ್ತನಾಗಿ, ಎರಡು ಪಕ್ಷಗಳಿಗೂ ಹೊಂದಿಕೊಳ್ಳುವಂತೆ ಸಂಶಯಾಸ್ಪದವಾಗಿ ಸಾಕ್ಷ್ಯ ಹೇಳಿದರೆ ಅವನೂ ಸಾವಿರ ವರುಣಪಾಶಗಳಿಂದ ಬಂಧಿತನಾಗುತ್ತಾನೆ. ವರುಣಪಾಶಗಳು ವರ್ಷಕ್ಕೊಂದರಂತೆ ಬಿಡುಗಡೆಯಾಗುತ್ತವೆ. (ಪಾಪದಿಂದ ಮುಕ್ತನಾಗಲು ಸಹಸ್ರವರ್ಷಗಳೇ ಆಗುತ್ತವೆ.) ಆದುದರಿಂದ ವಿಷಯವನ್ನು ತಿಳಿದಿರುವವನು ಮರೆಮಾಚದೇ ಸತ್ಯವನ್ನು ಹೇಳಿಯೇ ತೀರಬೇಕು.
ವಿದ್ಧೋ ಧರ್ಮೋ ಹ್ಯಧರ್ಮೇಣ ಸಭಾಂ ಯತ್ರೋಪಪದ್ಯತೇ |
ಚಾಸ್ಯ ಶಲ್ಯಂ ಕೃನ್ತನ್ತಿ ವಿದ್ಧಾಸ್ತತ್ರ ಸಭಾಸದಃ || 77 || 
ಧರ್ಮವು ಅಧರ್ಮವೆಂಬ ಭರ್ಜಿಯಿಂದ ಇರಿಯಲ್ಪಟ್ಟು ಸಭೆ ಯೊಳಗೆ ಬಂದಾಗ ಶಲ್ಯವನ್ನು ತೆಗೆದುಹಾಕಿ ಧರ್ಮವನ್ನು ರಕ್ಷಿಸುವುದು ಸಭಾಸದರ ಮುಖ್ಯಕರ್ತವ್ಯವಾಗಿರುತ್ತದೆ. ಹಾಗೆ ಮಾಡದಿದ್ದರೆ ಶಲ್ಯವು ಸಭ್ಯರೆಲ್ಲರನ್ನೂ ಹಿಂಸಿಸುತ್ತದೆ. ಪಾಪದ ಫಲವನ್ನು ಸಭ್ಯರೂ ಅನುಭವಿಸಬೇಕಾಗುತ್ತದೆ.
ಅರ್ಧಂ ಹರತಿ ವೈ ಶ್ರೇಷ್ಠಃ ಪಾದೋ ಭವತಿ ಕರ್ತೃಷು |
ಪಾದಶ್ಚೈವ ಸಭಾಸತ್ಸು ಯೇ ನಿನ್ದನ್ತಿ ನಿನ್ದಿತಮ್ || 78 || ಒಂದು ಅಧರ್ಮಕ್ರಿಯೆಯು ನಡೆದಾಗ ಆ ಅಧರ್ಮ ಕ್ರಿಯೆಯನ್ನು ಮಾಡುತ್ತಿರುವವನನ್ನು ಸಭೆಯಲ್ಲಿ ಸಭಾಸದರು ಖಂಡಿಸದೇ ಮೌನದಿಂದಿದ್ದರೆ ಪಾಪದ ಅರ್ಧಭಾಗವು ಸಭಾಧ್ಯಕ್ಷನಿಗೂ, ಕಾಲುಭಾಗವು ಕರ್ತೃಗಳಿಗೂ, ಉಳಿದ ಕಾಲುಭಾಗವು ಸಭಾಸದರಿಗೂ ಸೇರುತ್ತದೆ
ಅನೇನಾ ಭವತಿ ಶ್ರೇಷ್ಠೋ ಮುಚ್ಯನ್ತೇ ಸಭಾಸದಃ |
ಏನೋ ಗಚ್ಛತಿ ಕರ್ತಾರಂ ನಿನ್ದಾರ್ಹೋ ಯತ್ರ ನಿನ್ದ್ಯತೇ || 79 || 
ಇದಕ್ಕೆ ಪ್ರತಿಯಾಗಿ ಸಭೆಯಲ್ಲಿ ಪಾಪಕರ್ಮಿಯನ್ನು ಖಂಡಿಸಿದರೆ ಸಭಾಧ್ಯಕ್ಷನೂ ಸಭಾಸದರೂ ಪಾಪದಿಂದ ವಿಮುಕ್ತರಾಗಿ, ಪಾಪವು ಸಂಪೂರ್ಣವಾಗಿ ಕರ್ತೃವಿಗೇ ಸೇರುತ್ತದೆ.
 ವಿತಥಂ ತು ವದೇಯುರ್ಯೇ ಧರ್ಮಂ ಪ್ರಹ್ಲಾದ ಪೃಚ್ಛತೇ |
ಇಷ್ಟಾಪೂರ್ತಂ ತೇ ಘ್ನನ್ತಿ ಸಪ್ತ ಸಪ್ತ ಪರಾವರಾನ್‍ || 80 || ಪ್ರಹ್ಲಾದನೇ! ಧರ್ಮದ ವಿಷಯವಾಗಿ ಪ್ರಶ್ನೆಕೇಳಿದಾಗ ಧರ್ಮಕ್ಕೆ ವಿರೋಧವಾಗಿ ಉತ್ತರಿಸಿದರೆ ಅಥವಾ ಸುಳ್ಳು ಹೇಳಿದರೆ ಅವರೂ ಅವರ ಹಿಂದಿನ ಏಳು ತಲೆಮಾರಿನವರೂ ಮತ್ತು ಮುಂದಿನ ಏಳು ತಲೆಮಾರಿನವರೂ ಮಾಡಿದ ಮತ್ತು ಮಾಡುವ ಇಷ್ಟಾಪೂರ್ತಾದಿ ಪುಣ್ಯಕರ್ಮಫಲಗಳು ನಾಶವಾಗುವುವು.
ಹೃತಸ್ವಸ್ಯ ಹಿ ಯದ್ದುಃಖಂ ಹತಪುತ್ರಸ್ಯ ಚೈವ ಯತ್‍ |
ಋಣಿನಃ ಪ್ರತಿ ಯಚ್ಚೈವ ಸ್ವಾರ್ಥಾದ್ಭ್ರಷ್ಟಸ್ಯ ಚೈವ ಯತ್‍ || 81 ||
ಸ್ತ್ರಿಯಾಃ ಪತ್ಯಾ ವಿಹೀನಾಯಾ ರಾಜ್ಞಾ ಗ್ರಸ್ತಸ್ಯ ಚೈವ ಯತ್‍ |
ಅಪುತ್ರಾಯಾಶ್ಚ ಯದ್ದುಃಖಂ ವ್ಯಾಘ್ರಾಘಾತಸ್ಯ ಚೈವ ಯತ್‍ || 82 ||
ಅಧ್ಯೂಢಾಯಾಶ್ಚ ಯದ್ದುಃಖಂ ಸಾಕ್ಷಿಭಿರ್ವಿಹತಸ್ಯ |
 ಏತಾನಿ ವೈ ಸಮಾನ್ಯಾಹುರ್ದುಃಖಾನಿ ತ್ರಿದಿವೇಶ್ವರಾಃ |
ತಾನಿ ಸರ್ವಾಣಿ ದುಃಖಾನಿ ಪ್ರಾಪ್ನೋತಿ ವಿತಥಂ ಬ್ರುವನ್‍ || 83 || 
ಐಶ್ವರ್ಯವೆಲ್ಲವನ್ನೂ ಕಳೆದುಕೊಂಡವನು, ಮಗನನ್ನು ಕಳೆದು ಕೊಂಡವನು, ಋಣಬಾಧೆಗೆ ತುತ್ತಾದವನು, ತನ್ನ ಕೆಲಸಕ್ಕೆ ಸರಿಯಾದ ಪ್ರಯೋಜನವನ್ನು ಪಡೆಯದವನು, ಗಂಡನನ್ನು ಕಳೆದುಕೊಂಡ ಹೆಂಗಸು, ರಾಜಕೋಪಕ್ಕೆ ಪಾತ್ರನಾಗಿ ಸರ್ವಸ್ವವನ್ನೂ ಕಳೆದುಕೊಂಡವನು, ಬಂಜೆ ಯಾದ ಸ್ತ್ರೀ, ಹುಲಿಯ ಬಾಯಲ್ಲಿ ಸಿಕ್ಕಿಕೊಂಡವನು, ಸವತಿಯಿರುವವಳು ಮತ್ತು ಸುಳ್ಳುಸಾಕ್ಷ್ಯದ ಕಾರಣದಿಂದಾಗಿ ತನ್ನ ಸರ್ವಸ್ವವನ್ನೂ ಕಳೆದು ಕೊಂಡಿರುವವನು ಇವರೆಲ್ಲರ ದುಃಖಗಳೂ ಸಮಾನವಾದ ದುಃಖಗಳೆಂದು ದೇವತೆಗಳು ಅಭಿಪ್ರಾಯಪಡುತ್ತಾರೆ. ದುಃಖಗಳೆಲ್ಲವನ್ನೂ ಸುಳ್ಳುಹೇಳುವವನು ಹೊಂದುತ್ತಾನೆ.
ಸಮಕ್ಷದರ್ಶನಾತ್ಸಾಕ್ಷೀ ಶ್ರವಣಾಚ್ಚೇತಿ ಧಾರಣಾತ್ |
ತಸ್ಮಾತ್ಸತ್ಯಂ ಬ್ರುವನ್ಸಾಕ್ಷೀ ಧರ್ಮಾರ್ಥಾಭ್ಯಾಂ ಹೀಯತೇ || 84 ||
ಸಾಕ್ಷಿಯಾಗಬೇಕಾದರೆ ಅವನು ಪ್ರತ್ಯಕ್ಷದರ್ಶಿಯಾಗಿರಬೇಕು. ಕಕ್ಷಿ ಮತ್ತು ಪ್ರತಿಕಕ್ಷಿಗಳು ಏನು ಹೇಳಿದರೆಂಬುದನ್ನು ಕೇಳಿರಬೇಕು. ಸತ್ಯಾಂಶವೇನೆಂಬುದನ್ನು ತಿಳಿದಿರಬೇಕು. ಅಂತಹ ಸಾಕ್ಷಿಯು ಸತ್ಯವನ್ನೇ ಹೇಳಬೇಕಲ್ಲದೇ ಅಸತ್ಯವನ್ನೆಂದಿಗೂ ಹೇಳಬಾರದು; ಮೌನವಾಗಿರಲೂಬಾರದು. ಸತ್ಯವಾಗಿ ಸಾಕ್ಷ್ಯವನ್ನು ಹೇಳುವವನು ತನ್ನ ಧರ್ಮಾರ್ಥಗಳನ್ನೆಂದಿಗೂ ಕಳೆದುಕೊಳ್ಳು ವುದಿಲ್ಲ.” ಕಶ್ಯಪರು ಹೀಗೆ ಹೇಳಿದೊಡನೆಯೇ ಪ್ರಹ್ಲಾದನು ತನ್ನ ಮಗನನ್ನು ಕುರಿತು ಈ ಮುಂದಿನದನ್ನು ಹೇಳುತ್ತಾನೆ.
ಶ್ರೇಯಾನ್ಸುಧನ್ವಾ ತ್ವತ್ತೋ ವೈ ಮತ್ತಃ ಶ್ರೇಯಾಂಸ್ತಥಾಙ್ಗಿರಾಃ |
ಮಾತಾ ಸುಧನ್ವನಶ್ಚಾಪಿ ಮಾತೃತಃ ಶ್ರೇಯಸೀ ತವ |
ವಿರೋಚನ ಸುಧನ್ವಾಯಂ ಪ್ರಾಣಾನಾಮೀಶ್ವರಸ್ತವ || 86 || 
ಅಂಗಿರಸರು ನನಗಿಂತಲೂ ಶ್ರೇಷ್ಠರು. ಅಂತೆಯೇ ಅವರ ಮಗನಾದ ಸುಧನ್ವನು ನಿನಗಿಂತಲೂ ಶ್ರೇಷ್ಠನು. ಸುಧನ್ವನ ತಾಯಿಯೂ ನಿನ್ನ ತಾಯಿಗಿಂತಲೂ ಶ್ರೇಷ್ಠಳು. ಆದುದರಿಂದ ಈಗ ಸುಧನ್ವನು ನಿನ್ನ ಪ್ರಾಣಗಳಿಗೆ ಒಡೆಯನಾಗಿರುತ್ತಾನೆ.” ಎಂದು ನ್ಯಾಯ ಕೊಡುತ್ತಾನೆ. ಪ್ರಹ್ಲಾದನ ನಿಷ್ಪಕ್ಷಪಾತವಾದ ಮಾತುಗಳನ್ನು ಕೇಳಿ ಸುಪ್ರೀತನಾದ ಸುಧನ್ವನು ಪ್ರಹ್ಲಾದನನ್ನು ಕುರಿತು ಹೇಳಿದನು
ಪುತ್ರಸ್ನೇಹಂ ಪರಿತ್ಯಜ್ಯ ಯಸ್ತ್ವಂ ಧರ್ಮೇ ವ್ಯವಸ್ಥಿತಃ |
ಅನುಜಾನಾಮಿ ತೇ ಪುತ್ರಂ ಜೀವತ್ವೇಷ ಶತಂ ಸಮಾಃ || 87 || 
ಪ್ರಹ್ಲಾದನೇ! ನೀನು ಪುತ್ರಪ್ರೇಮವೆಂಬ ವ್ಯಾಮೋಹಕ್ಕೆ ವಶನಾಗದೇ ಧರ್ಮದ ಪಕ್ಷವನ್ನು ವಹಿಸಿ ಉತ್ತರಿಸಿರುವೆಯಾದ ಕಾರಣ ನಿನ್ನೀ ಮಗನಿಗೆ ಸ್ವತಂತ್ರನಾಗಿ ಬಾಳಲು ಅನುಜ್ಞೆಕೊಡುವೆನು. ಈತನು ನೂರು ವರ್ಷಗಳು ಜೀವಿಸಿರಲಿ.” ಹೀಗೆಂದು ಹೇಳಿ ಸುಧನ್ವನು ತನ್ನ ಆಶ್ರಮಕ್ಕೆ ತೆರಳಿದನು. ಎನ್ನುವ ಕಥೆ ಬರುತ್ತದೆ ಇಲ್ಲಿ ಪುತ್ರ ವ್ಯಾಮೋಹಿಯಾಗಿದ್ದರೆ ಪ್ರಹ್ಲಾದ ತನ್ನ ಮಗ ವಿರೋಚನನ ಅಭಿಪ್ರಾಯವೇ ಸರಿ ಎನ್ನಬಹುದಿತ್ತು. ಆದರೆ ಕಶ್ಯಪರ ಧರ್ಮದ ಕುರಿತಾದ ಹಿತವಚನದಿಂದ ಪ್ರಹ್ಲಾದ ಧರ್ಮದಂತೆ ನಡೆದ.
ತಪ್ಪು ಯಾರೇ ಮಾಡಿರಲಿ ಆತ ಮಾಡಿದ್ದು ತಪ್ಪು ಎಂದು ಗೊತ್ತಿದ್ದೂ ಆತನ ಹಂಗಿಗೋಸ್ಕರವಾಗಿ ಸುಮ್ಮನಿದ್ದಲ್ಲಿ ತಪ್ಪು ಮಾಡಿದವನಷ್ಟೆ ದೊಡ್ದ ತಪ್ಪುಗಾರರು ಸುಮ್ಮನಿದ್ದವರಾಗುತ್ತಾರೆ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment