Search This Blog

Tuesday 21 August 2018

ಶಿಲೆಗಳು ಹೇಳುವ ಚಳುಕ್ಯ ಚರಿತ್ರೆ


ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಮ್ |
ಯಥಾಪರಾಧ ದಂಡಾನಾಂ ಯಥಾ ಕಾಲ ಪ್ರಬೋಧಿನಾಮ್ ||
ಐಹೊಳೆಯ ಮೇಗುಟಿಯಲ್ಲಿರುವ ಎರಡನೇ ಪೊಲೆಕೇಶಿಯ ಶಾಸನ ಬರುವುದಕ್ಕೂ ಸುಮಾರು 30 ವರ್ಷಗಳಷ್ಟು ಮೊದಲು ಮಹಾಕೂಟದಲ್ಲಿ ಮಂಗಲೇಶನ ಸ್ತಂಭ ಶಾಸನವನ್ನು ದಾಟ ಎನ್ನುವ ಶಿಲ್ಪಿ - ಕವಿಯೊಬ್ಬ ಖಂಡರಿಸಿದ. ರವಿಕೀರ್ತಿಯಷ್ಟೇ ವಿದ್ವಾಂಸನಾಗಿದ್ದ. ಕಾಲಿದಾಸನ ರಘುವಂಶದ ಮೊದಲನೇ ಸರ್ಗದ ಆರನೇ ಶ್ಲೋಕವನ್ನು ತನ್ನ ಶಾಸನದ ಮೊದಲ ಸಾಲಿನ ಕೊನೆಯ ಭಾಗ ಮತ್ತು ಎರಡನೆ ಸಾಲಿನ ಮೊದಲ ಭಾಗದಲ್ಲಿ ಹೇಗೇಗೋ ಬರೆದು("" ಆದ ನಂತರ "ಧಿ"ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಂ ಎಂದು ಬರೆದು ಮತ್ತು ಧಿ ಕಾರಗಳ ಕೆಳಗೆ ಥಾ ವಿ ಬರೆಯಲಾಗಿದೆ.) ಬೆರಗು ಗೊಳಿಸಿದ್ದಾನೆ. ಹಾಗಂತ ದಾಟನಿಗೆ ಕವಿ ಕಾಳಿದಾಸನ ಹೆಸರು ಗೊತ್ತಿರಲಿಲ್ಲವೋ ಅಥವಾ ಇದು ರಘುವಂಶದ ಶ್ಲೋಕ ಎನ್ನುವ ಬಗ್ಗೆಯೂ ತಿಳಿದಿದ್ದಂತೆ ಕಾಣಿಸುತ್ತಿಲ್ಲ. ಆದರೆ ಆತ ಕಾಲಕ್ಕೆ ಪ್ರಚಲಿತವಾಗಿದ್ದ ಶ್ಲೋಕ( ಮೊದಲ ಸಾಲನ್ನು ತೆಗೆದುಕೊಂಡಿದ್ದಾನೆ.) ಒಂದನ್ನು ಉದಾಹರಿಸಿರಬೇಕು. ಆದರೆ ಆತ ಸಹ ಒಬ್ಬ ದೊಡ್ದ ವಿದ್ವಾಂಸ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ನನ್ನ ಅಭಿಪ್ರಾಯದಂತೆ ಆತನ ಶಿಷ್ಯನೇ ರವಿಕೀರ್ತಿ ಆಗಿರಬಹುದು. ರವಿಕೀರ್ತಿ ತನ್ನ ಶಾಸನದ ಅಂತ್ಯದಲ್ಲಿ ತಾನು ಭಾರವಿ ಮತ್ತು ಕಾಳಿದಾಸನಿಗೆ ಕಡಿಮೆ ಇಲ್ಲದ ಕವಿ ಎಂದು ಆತ್ಮವಿಶಾಸವನ್ನು ಬೆಳಿಸಿಕೊಂಡಿರುವುದು ತಿಳಿದು ಬರುತ್ತದೆ. ಆದರೆ ದಾಟ ಮಹಾಕೂಟದ ಶಾಸನದಲ್ಲಿ ಕದಂಬರ ಗುಡ್ನಾಪುರ ಶಾಸನದಲ್ಲಿ ಬರೆದಂತೆ ಸಾಲುಗಳನ್ನು ಅಸ್ತವ್ಯಸ್ಥಗೊಳಿಸಿಕೊಂಡಿರುವುದು ಕಂಡುಬರುತ್ತದೆ. ಐಹೊಳೆಯಲ್ಲಿ ಹಾಗೇನೂ ಆಗಿಲ್ಲ. ಪ್ರಬುದ್ಧ ಸಂಸ್ಕೃತ ವಾಂಗ್ಮಯ ಹೊರಟಿದೆ.
ಬಾದಾಮಿ ಚಲುಕ್ಯರ ವಂಶದ ಮೊದಲ ದೊರೆ ಜಯಸಿಂಹ, ಆತನ ಮಗ ರಣರಾಗ, ಸುಮಾರು 540 ರಿಂದ 560 ತನಕ ಆಡಳಿತ ನಡೆಸಿದ ವಲ್ಲಭೇಶ್ವರ ಮೊದಲನೇ ಪೊಲೆಕೇಶಿ. ಮೊದಲನೇ ಪೊಲೆಕೇಶಿಗೆ ಮೂರುಜನ ಮಕ್ಕಳಿದ್ದರೂ ಸಹ ಪೂಗವರ್ಮನ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ ಉಳಿದವರಿಬ್ಬರು ಮೊದಲನೇ ಕೀರ್ತಿವರ್ಮ ಮತ್ತು ಮಂಗಲೇಶ. ಮೊದಲ ಕೀರ್ತಿವರ್ಮನ ಮಗನೇ ಎರಡನೆ ಪೊಲೆಕೇಶಿ. ಈತ ಸುಮಾರು 32 ವರ್ಷಗಳಷ್ಟು ಆಡಳಿತ ನಡೆಸಿದ ಎಂದು ತಿಳಿದು ಬರುತ್ತದೆ. ಕ್ರಿ. . ಸು. 610 ರಿಂದ 642 ತನಕ ಆಡಳಿತ ನಡೆಸಿದ
ಕರ್ನಾಟಕವನ್ನು ಆಳಿದ ಬಾದಾಮಿ ಚಲುಕ್ಯ ವಂಶದವರಲ್ಲೇ ಹೆಚ್ಚು ಪ್ರಸಿದ್ಧಿಗೆ ಬಂದ ಚಕ್ರವರ್ತಿ. ಒಂದನೇ ಕೀರ್ತಿವರ್ಮ ಅಂದರೆ ಇವನ ತಂದೆಯ ಮರಣದ ಕಾಲದಲ್ಲಿ ಇವನು ಇನ್ನೂ ಚಿಕ್ಕವನಾದ್ದರಿಂದ ಇವನ ಚಿಕ್ಕಪ್ಪ ಮಂಗಲೇಶನೇ ರಾಜ್ಯಭಾರವನ್ನು ವಹಿಸಿಕೊಂಡ. ಮಂಗಲೇಶ ತನ್ನ ಕೊನೆಯ ಕಾಲದಲ್ಲಿ ಸಿಂಹಾಸನವನ್ನು ನಿಜವಾದ ಹಕ್ಕುದಾರನಾದ ಪೊಲೆಕೇಶಿಯಿಂದ ತಪ್ಪಿಸಿ ತನ್ನ ಮಗನಿಗೆ ಕೊಡಬೇಕೆಂಬ ಉದ್ದೇಶದಿಂದ ಪೊಲೆಕೇಶಿಯಿಂದ ಅಂತರ ಕಾಯ್ದುಕೊಂಡ ಎಂದು ಕೆಲವು ಕಡೆ ತಿಳಿಸುತ್ತದೆ, ಆದರೆ ಪ್ರಾಪ್ತ ವಯಸ್ಕನಾಗಿದ್ದ ಪೊಲೆಕೇಶಿ ಸಂಚನ್ನು ತಿಳಿದು ತನ್ನ ಹಕ್ಕನ್ನು ಸ್ಥಾಪಿಸಲುಬಂಡಾಯಹೂಡಿದ ಎಂದು ಹೇಳಲಾಗುತ್ತದೆ. ಆದರೆ ಇಂತಹ ಆಂತರಿಕ ಕ್ಷೋಭೆಗಳ ಬಗ್ಗೆ ವಿವರಗಳಂತೂ ಸಿಕ್ಕಿದಂತಿಲ್ಲ. ಆದರೆ ಮಂಗಲೇಶ ಹೋರಾಟದಲ್ಲಿ ಮರಣ ಹೊಂದಿದ. ಪೊಲೆಕೇಶಿ 610ರಲ್ಲಿ ಬಾದಾಮಿಯ ಚಳುಕ್ಯ ರಾಜನಾಗಿ 642ರವರೆಗೂ ಆಳಿದ. ಪೊಲೆಕೇಶಿ ಪಟ್ಟಕ್ಕೆ ಬಂದಾಗ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಅರಾಜಕತೆ ಉಂಟಾಗಿತ್ತು. "ನಾನಾ ಹೇತಿ ಶತಾಭಿ ಘಾತ ಪತಿತಃ" ಎಂದು ಐಹೊಳೆ ಶಾಸನದಿಂದ ತಿಳಿದು ಬರುತ್ತದೆ, ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಚಳುಕ್ಯರ ವೈರಿಗಳು ಪ್ರಬಲರಾಗಿ, ತಮ್ಮ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಯೋಚನೆಯಲ್ಲಿದ್ದರು. ಪೊಲೆಕೇಶಿ ಅಧಿಕಾರ ವಹಿಸಿಕೊಂಡ ಕೂಡಲೇ ಅರಾಜಕತೆಯನ್ನು ಕೊನೆಗೊಳಿಸಿ ಸಾಮ್ರಾಜ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ. ಪುಲಕೇಶಿಯ ಸಾಧನೆಗಳನ್ನು ತಿಳಿಯಲು ಇವನ ಐಹೊಳೆ ಶಾಸನ ಒಂದೇ ಸಾಕು ಅನ್ನಿಸುತ್ತದೆ. ಜೈನ ಕವಿ ರವಿಕೀರ್ತಿ ರಚಿಸಿದ ಐಹೊಳೆಯ ಮೇಗುಟಿ ಜಿನದೇವಾಲಯದ ಶಾಸನ ಚಲುಕ್ಯರ ಇತಿಹಾಸ ಹಾಗೂ ಪೊಲೆಕೇಶಿಯ ದಿಗ್ವಿಜಯಗಳನ್ನು ಅತ್ಯಂತ ಮನೋಜ್ಞವಾಗಿ ಮತ್ತು ಕಾವ್ಯಾತ್ಮಕವಾಗಿ ತೆರೆದಿಡುತ್ತದೆ."ಪೃಥಿವೀ ವಲ್ಲಭ ಶಬ್ದೋ ಏಷಾಮನ್ವರ್ಥತಾಞ್ಚಿರಞ್ಜಾತಃ | ತದ್ವಂಶೇಷು ಜಿಗೀಷುಷು ತೇಷು ಬಹುಷ್ವಪ್ಯತೀತೇಷು||" ಎಂದು ರವಿಕೀರ್ತಿ ಉಲ್ಲೇಖಿಸುತ್ತಾನೆ
ರಣರಂಗ ಮಂದಿರೇ
ಇಂತಹ ಪ್ರಕ್ಷುಬ್ಧ ರಾಜಕೀಯ ವಾತಾವರಣಾದ ಪರಿಸ್ಥಿತಿಯ ಲಾಭವನ್ನು ಪಡೆದು ರಾಷ್ಟ್ರಕೂಟ ದೊರೆಗಳಾದ ಅಪ್ಪಾಯಿಕ ಮತ್ತು ಗೋವಿಂದ ಪೊಲೆಕೇಶಿಯ ವಿರುದ್ಧ ದಂಗೆ ಎದ್ದರು. ಕವಿ ರವಿಕೀರ್ತಿ ಈತನ ಯುದ್ಧ ಭೂಮಿಯನ್ನು ವರ್ಣಿಸುತ್ತಾ "ರಣರಂಗ ಮಂದಿರ" ಎನ್ನುತ್ತಾನೆ. ಕಾವ್ಯಾತ್ಮಕ ಮತ್ತು ಸಾಹಿತ್ಯಾತ್ಮಕ ಶಬ್ದಗಳನ್ನು ಪ್ರಯೋಗಿಸಿದ್ದಾನೆ ಅಂದರೆ "ಪೃಥುಕದಂಬಕದಂಬಕದಂಬಕಮ್" ಎಂದು ಶಾಸನದಲ್ಲಿ ಬಳಸುತ್ತಾನೆ. ಪೊಲೆಕೇಶಿ ತನ್ನ ಸೈನ್ಯದ ಸಹಾಯದಿಂದ ದಂಗೆಕೋರರನ್ನು ಭೀಮಾ ನದಿಯ ದಂಡೆಯಲ್ಲಿ ಎದುರಿಸಿದ. ಅಪ್ಪಾಯಿಕ ಹೆದರಿ ರಣರಂಗದಿಂದ ತಲೆಮರೆಸಿಕೊಂಡು ಓಡಿದ. ಗೋವಿಂದ ಶರಣಾಗತನಾದ. ಅನಂತರ ಪೊಲೆಕೇಶಿ ಕದಂಬರ ವಿರುದ್ಧ ದಂಡೆತ್ತಿ ಹೋಗಿ ಆವರನ್ನು ಸೋಲಿಸಿ ಬನವಾಸಿಯನ್ನು ಮುತ್ತಿ ವಶಪಡಿಸಿಕೊಂಡನೆಂದು ಐಹೊಳೆ ಶಾಸನ ಹೇಳುತ್ತದೆ. ವಾಕ್ಯವನ್ನೂ ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾನೆ. "ನೃತ್ಯದ್ವಿದ್ಯುತ್ಪತಾಕೈ: ಪ್ರಜವಿನಿ ಮರುತಿ ಕ್ಷುಣ್ಣ ಪರ್ಯಂತ ಭಾಗೈಃ ಗಜದ್ಭಿರ್ ವಾರಿವಾಸೈರಳಿಕುಲಮಲಿನಂ ವ್ಯೋಮಯಾತಂ ಕದಾ ವಾ" ಎಂದು ವರ್ಣ್ಣಿಸುತ್ತಾನೆ ಮತ್ತು ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. "ವರದಾ ತುಂಗ ತರಂಗ ವಿಲಸದ್ವಂಸಾವಳೀ ಮೇಖಲಾಂ ವನವಾಸೀ ಮವಮೃದ್ನತ ಸ್ಸುರಪುರ ಪ್ರಸ್ಪರ್ಧಿನೀಂ ಸಂಪದಾ ||" ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ. ಮುಂದೆ ಇವನು "ಗಂಗಾಳುಪೇಂದ್ರ ವ್ಯಸನಾನಿ" ಗಂಗರನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಳುಪರನ್ನು ಸೋಲಿಸಿದ. ತನ್ನ ಸೈನ್ಯವನ್ನು ಕೊಂಕಣದ ಕಡೆಗೊಯ್ದು ಮೌರ್ಯರನ್ನು ಸೋಲಿಸಿ, ಲಾಟ, ಮಾಳವ ಮತ್ತು ಗುಜರಾತಿನ ರಾಜರನ್ನು ಗೆದ್ದು, ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ"ಕೊಂಕಣೇಷು ಯದಾದಿಷ್ಟ ಚಂಡದಂಡಾಂಬುವೀಚಿಭಿಃ" ಎಂದು ರವಿಕೀರ್ತಿ ಬಣ್ಣಿಸುತ್ತಾನೆ. ಶಾಸನದ ಪ್ರಕಾರ ಪುಲಕೇಶಿ ಉತ್ತರದ ಸಮರ್ಥದೊರೆ ಹರ್ಷ ಚಕ್ರವರ್ತಿಯನ್ನು ಎದುರಿಸಿದ. ಮಗಧ ದೇಶಾಧಿಪತಿ ಹರ್ಷನ ಹಾಗೂ ಪುಲಕೇಶಿಯ ಅಧಿಕಾರ ವಿಸ್ತರಣೆಯ ಉತ್ಕಟಾಕಾಂಕ್ಷಿಗಳೇ ಘರ್ಷಣೆಗೆ ಮೂಲ. ಶ್ರೀಹರ್ಷ ದೃಢ ವಿಶ್ವಾಸದಿಂದ ತನ್ನ ದೊಡ್ಡ ಸೈನ್ಯದೊಡನೆ ಪುಲಕೇಶಿಯ ಮೇಲೆ ದಂಡೆತ್ತಿ ಹೊರಟ"ಯುಧಿ ಪತಿತ ಗಜೇಂದ್ರಾನೀಕ ಬೀಭತ್ಸ ಭೂತೋ ಭಯವಿಗಳಿತ ಹರ್ಷೋ ಯೇನ ಚಾಕಾರಿ ಹರ್ಷಃ" ಎಂದು ೧೧ನೇ ಸಾಲಿನಲ್ಲಿ ಉಲ್ಲೇಖಿಸುತ್ತಾನೆ. ಆದರೆ, ಅವನು ಜಯಿಸಲಾಗಲೀ, ಪುಲಕೇಶಿಯನ್ನು ಹತ್ತಿಕ್ಕುವುದರಲ್ಲಾಗಲೀ ವಿಫಲನಾದನೆಂದು ಭಾವಿಸಬಹುದು. ಯುದ್ಧ 630 ರಿಂದ 634 ಅವಧಿಯಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಯುದ್ಧದಲ್ಲಿ ಹರ್ಷ ಸೋತು ಹಿಂದಿರುಗಿದ. ವಿಜಯಿಯಾದ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಧರಿಸಿದ ಎಂದು ಹೈದರಾಬಾದಿನಲ್ಲಿ ದೊರೆತ ತಾಮ್ರಪಟ ಶಾಸನದಿಂದ ಮತ್ತು ಸಂಜಾನ್ ತಾಮ್ರಪಟದ ೮ನೇ ಸಾಲಿನಿಂದ "ಶ್ರೀ ಹರ್ಷದೇವ ಪರಾಜಯೋಪಲಬ್ಧೋಗ್ರಃ ಪ್ರತಾಪಃ ಪರಮೇಶ್ವರಃ"ತಿಳಿದು ಬರುತ್ತದೆ. ನರ್ಮದೆಯು ಚಳುಕ್ಯ ಸಾಮ್ರಾಜ್ಯದ ಗಡಿಯಾಯಿತು. ದಂಡಯಾತ್ರೆಗಳಿಂದ ಪುಲಕೇಶಿ ಸುಮಾರು 99,000 ಗ್ರಾಮಗಳನ್ನೊಳಗೊಂಡ ಮಹಾರಾಷ್ಟ್ರಕಗಳ ಅಧಿಪತಿಯಾದನೆಂದು ಹೇಳಲಾಗಿದೆ. (ಅಗಮದಧಿ ಪತಿತ್ವಂ ಯೋ ಮಹಾರಾಷ್ಟ್ರಕಾಣಾಂ ನವನವತಿ ಸಹಸ್ರ ಗ್ರಾಮಭಾಜಾಂ ತ್ರಯಾಣಾಂ) ಎಂದು ಐಹೊಳೆ ಶಾಸನದ ೧೨ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಅಂದರೆ ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶ ಇವೇ ಮೂರು ಮಹಾರಾಷ್ಟ್ರಕಗಳೆಂದು ಹೇಳಲಾಗಿದೆ
ಪೊಲೆಕೇಶಿ ಅನಂತರ ಪೂರ್ವಾಭಿಮುಖವಾಗಿ ಮುನ್ನಡೆದ. ಕೋಸಲ, ಕಳಿಂಗದ ಹಲವು ಭಾಗಗಳನ್ನು ಗೆದ್ದುಕೊಂಡು, "ಪಿಷ್ಟಂ ಪಿಷ್ಟ ಪುರಂ ಯೇನ ಜಾತಂ ದುರ್ಗಮದುರ್ಗ ಮಂಚಿನ್ನಂ. . . ." ಎಂದು ಪೂರ್ವತೀರದ ಪಿಷ್ಟಪುರವನ್ನು ವಶಪಡಿಸಿಕೊಂಡು ವೆಂಗಿಮಂಡಲವನ್ನು ಗೆದ್ದುಕೊಂಡ. ತಮ್ಮನಾದ ವಿಷ್ಣುವರ್ಧನನ್ನು ವೆಂಗಿಮಂಡಲದ ಯುವರಾಜನನ್ನಾಗಿ ನೇಮಿಸಿದ. ಕ್ರಮೇಣ ವಿಷ್ಣುವರ್ಧನ ಸ್ವತಂತ್ರ ರಾಜನಂತೆ ವೆಂಗಿಮಂಡಲವನ್ನು ಆಳಿದ. ಇವನ ವಂಶಕ್ಕೆ ವೆಂಗಿ ಚಾಳುಕ್ಯ ವಂಶವೆಂದು ಹೆಸರು ಬಂತು. ಇದು ಪೂರ್ವ ಚಾಳುಕ್ಯ ಮನೆತನ ಎಂದೂ ಹೆಸರಾಗಿದೆ. ಪೂರ್ವ ಚಾಳುಕ್ಯರು ಅನೇಕ ವರ್ಷಗಳ ಕಾಲ ಪ್ರದೇಶವನ್ನು ಆಳಿದರು. ವೆಂಗಿಮಂಡಲದ ವಿಜಯದ ಅನಂತರ ಪುಲಕೇಶಿ ವಿಷ್ಣುಕುಂಡಿ ರಾಜ್ಯವನ್ನು ಮುತ್ತಿದ. ವಿಷ್ಣುಕುಂಡಿ ರಾಜ್ಯದ ದಕ್ಷಿಣಕ್ಕೆ ಪಲ್ಲವರ ರಾಜ್ಯವಿತ್ತು. ಪುಲಕೇಶಿ ಪಲ್ಲವ ರಾಜ ಮೊದಲನೆಯ ಮಹೇಂದ್ರವರ್ಮನನ್ನು ಸೋಲಿಸಿ ಅವನು ಆತ್ಮ ರಕ್ಷಣೆಗಾಗಿ ತನ್ನ ರಾಜಧಾನಿಯಾದ ಕಂಚಿಯ ಕೋಟೆಯನ್ನು ಸೇರುವಂತೆ ಮಾಡಿದ. "ಕಾವೇರೀ ದೃತ ಶಫರೀ ವಿಲೋಲ ನೇತ್ರ ಚೋಳಾನಾಂ ..." ಎಂದು ಐಹೊಳೆ ಶಾಸನದ ೧೪ನೇ ಸಾಲಿನಲ್ಲಿ ಬರುತ್ತದೆ. ಪುಲಕೇಶಿ ಕಾವೇರಿ ನದಿಯನ್ನೂ ದಾಟಿ ಚೋಳರನ್ನು ಸೋಲಿಸಿ ಪಾಂಡ್ಯರು ಮತ್ತು ಚೇರರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದ
ದಿಗ್ವಿಜಯಗಳನ್ನೆಲ್ಲಾ ಪೂರೈಸಿದ ಪೊಲೆಕೇಶಿ
ಉತ್ಸಾಹ ಪ್ರಭುಮಂತ್ರ ಶಕ್ತಿ ಸಹಿತೇ ಯಸ್ಮಿನ್ ಸಮಸ್ತಾ ದಿಶೋ ಜಿತ್ವಾ ಭೂಮಿಪತೀನ್ ವಿಸೃಜ್ಯ ಮಹಿತಾನ್ ಆರಾಧ್ಯ ದೇವ ದ್ವಿಜಾನ್ ||
ವಾತಾಪೀ ನಗರೀಂ ಪ್ರವಿಶ್ಯ ನಗರೀಮೇಕಾಮಿವೋರ್ವೀಮಿಮಾಂ ಚಂಚನ್ನೀರಧಿನೀಲನೀರ ಪರಿಖಾಂ ಸತ್ಯಾಶ್ರಯೇ ಶಾಸತಿ || ಐಹೊಳೆ ಶಾಸನದ 15ನೇ ಸಾಲು.
ತನ್ನ ರಾಜಧಾನಿಯಾದ ಬಾದಾಮಿಗೆ ಹಿಂದಿರುಗಿ ವೈಭವದಿಂದ ವಿಜಯೋತ್ಸವ ಸಮಾರಂಭವನ್ನು ಆಚರಿಸಿದನೆಂದು ಶಾಸನದ ಸಾಲಿನಿಂದ ತಿಳಿದುಬರುತ್ತದೆ. ವಿಜಯಗಳೆಲ್ಲ ಒಂದೇ ದಂಡಯಾತ್ರೆಯ ಕಾಲದಲ್ಲಿ ಲಭಿಸಿದವೇ ಅಥವಾ ಬೇರೆ ಬೇರೆ ದಂಡಯಾತ್ರೆಗಳ ಫಲವೇ ಎಂಬುದರಲ್ಲಿ ಒಮ್ಮತದ ನಿರ್ಣಯ ಇಲ್ಲ. ಇಮ್ಮಡಿ ಪೊಲೆಕೇಶಿ ಬಾದಾಮಿ ಚಳುಕ್ಯ ವಂಶದ ಅತ್ಯಂತ ಶ್ರೇಷ್ಠನೂ ಪ್ರಾಚೀನ ಭಾರತದ ಅಗ್ರಗಣ್ಯ ಸಾಮ್ರಾಟರಲ್ಲೊಬ್ಬನೂ ಆಗಿದ್ದ. ಈತನ ಕಾಲದಲ್ಲಿ ಚಳುಕ್ಯ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಇವನ ರಾಜ್ಯ ಬನವಾಸಿ, ಗಂಗಮಂಡಲ, ಆಳುಪ ರಾಜ್ಯ, ಕೊಂಕಣ, ಲಾಟ, ಮಾಳವ, ಕಳಿಂಗದ ಸ್ವಲ್ಪ ಭಾಗ, ಪಿಷ್ಟಪುರ, ಕಂಚಿಯ ಪಲ್ಲವ ನಾಡಿನ ಸ್ವಲ್ಪ ಭಾಗಗಳನ್ನೊಳಗೊಂಡಿತ್ತು. ಅಲ್ಲದೆ, ಚೋಳ, ಚೇರ ಮತ್ತು ಪಾಂಡ್ಯರು ಪೊಲೆಕೇಶಿಗೆ ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು. ಪೊಲೆಕೇಶಿ ಗೆದ್ದ ಹಲವು ರಾಜ್ಯಗಳ ರಾಜರುಗಳನ್ನು ಅವರವರ ರಾಜ್ಯಗಳಲ್ಲೇ ಉಳಿಸಿ ಆಶ್ರಿತರನ್ನಾಗಿ ಮಾಂಡಲೀಕರನ್ನಾಗಿಮಾಡಿಕೊಂಡ. ಇನ್ನು ಕೆಲವು ರಾಜ್ಯಗಳ ಆಡಳಿತ ನಿರ್ವಹಣೆಗೆ ತನ್ನ ಆಪ್ತೇಷ್ಟರನ್ನೂ ಸಹೋದರರನ್ನೂ ನೇಮಿಸಿದ. ನರ್ಮದಾ ನದಿಯ ತೀರದಲ್ಲಿ ಭದ್ರತೆಗಾಗಿ ಸೈನ್ಯದ ತುಕಡಿಗಳನ್ನು ನೆಲೆಗೊಳಿಸಿದ. ಸುಮಾರು 641 ರಲ್ಲಿ ಇವನ ಸಾಮ್ರಾಜ್ಯವನ್ನು ಚೀನೀ ಯಾತ್ರಿಕ ಹ್ಯೂ ಯೆನ್ ತ್ಸಾಂಗ್ ಸಂದರ್ಶಿಸಿದ. ಇವನು ಪುಲಕೇಶಿಯ ಶೌರ್ಯವನ್ನೂ ಉದಾರ ಗುಣಗಳನ್ನೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ವಾಯುಗುಣವನ್ನು ಜನರ ಗುಣಾವಗುಣಗಳನ್ನೂ ವಿವರಿಸಿದ್ದಾನೆ. ಪರ್ಷಿಯದ ಅರಸ ಇಮ್ಮಡಿ ಖುಸ್ರು 625-26 ರಲ್ಲಿ ಚಳುಕ್ಯ ರಾಜನ ರಾಯಭಾರಿಯನ್ನು ಸ್ವಾಗತಿಸಿದನೆಂದು ತಿಳಿದುಬರುತ್ತದೆ. ಖುಸ್ರು ಪೊಲೆಕೇಶಿಯ ಆಸ್ಥಾನಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದ. ಖುಸ್ರುವಿನ ರಾಯಭಾರಿಗಳು ಪೊಲೆಕೇಶಿಗೆ ತಮ್ಮ ರಾಜನ ನಿರೂಪಗಳನ್ನು ಅರ್ಪಿಸುತ್ತಿರುವ ಚಿತ್ರ ಅಜಂತ ಗುಹಾಲಯದಲ್ಲಿದೆ. ಪೊಲೆಕೇಶಿ 32 ವರ್ಷಗಳ ಜಯಪ್ರದ ಆಳ್ವಿಕೆಯ ಅನಂತರ ಕಂಚಿಯ ಪಲ್ಲವರಿಂದ ಅಪಾಯವನ್ನು ಎದುರಿಸಬೇಕಾಯಿತು. ಪಲ್ಲವ ಮಹೇಂದ್ರವರ್ಮನ ಅನಂತರ ಪಟ್ಟಕ್ಕೆ ಬಂದ 1 ನೆಯ ನರಸಿಂಹವರ್ಮ ತನ್ನ ತಂದೆಯನ್ನು ಸೋಲಿಸಿದ ಪೊಲೆಕೇಶಿಯ ವಿರುದ್ಧ ಸೈನ್ಯವನ್ನು ಕಳುಹಿಸಿದ. ಅನೇಕ ಕಡೆಗಳಲ್ಲಿ ಘೋರ ಯುದ್ಧಗಳು ನಡೆದುವು. ಯುದ್ಧಗಳಲ್ಲಿ ಪಲ್ಲವ ರಾಜನದೇ ಮೇಲುಗೈ ಆಯಿತು. ಪೊಲೆಕೇಶಿಯ ಸೈನ್ಯ ಸೋತು ಹಿಮ್ಮೆಟ್ಟತೊಡಗಿತು. ನರಸಿಂಹವರ್ಮ ಚಳುಕ್ಯ ಸೈನ್ಯವನ್ನು ಬೆನ್ನಟ್ಟಿ ರಾಜಧಾನಿಯನ್ನೇ ಮುತ್ತಿದ. ತನ್ನ ವಿಜಯದ ಕುರುಹಾಗಿ ಬಾದಾಮಿಯ ಕೋಟೆಯ ಕಲ್ಲಿನ ಮೇಲೆ ಒಂದು ಶಾಸನವನ್ನು ಕೆತ್ತಿಸಿ, ವಾತಾಪಿಕೊಂಡ ಎಂಬ ಬಿರುದನ್ನು ಪಡೆದ. ಸಿಂಹಳದ ದೊರೆ ಮಾನವವರ್ಮನೂ 642 ರಲ್ಲಿ ನಡೆದ ಕದನಗಳಲ್ಲಿ ಪಲ್ಲವರ ಪರ ವಹಿಸಿದ್ದನೆಂದು ತಿಳಿದುಬರುತ್ತದೆ. ಘಟನೆಯ ಅನಂತರ ಪೊಲೆಕೇಶಿಯ ಬಗ್ಗೆ ಏನೂ ತಿಳಿದುಬರುವುದಿಲ್ಲ. ಬಹುಶಃ ತನ್ನ ರಾಜಧಾನಿಯನ್ನು ರಕ್ಷಿಸುವ ಸಂದರ್ಭದಲ್ಲಿ ಇವನು ವೀರಾವೇಶದಿಂದ ಕಾದಾಡಿ ಮಡಿದಿರಬಹುದು. ಪೊಲೆಕೇಶಿಗೆ ಆದಿತ್ಯವರ್ಮ, ಚಂದ್ರಾದಿತ್ಯ, ವಿಕ್ರಮಾದಿತ್ಯ, ರಣರಾಗವರ್ಮ, ಧಾರಾಶ್ರಯ ಜಯಸಿಂಹ ಎಂಬ ಪುತ್ರರೂ ಅಂಬೇರಾ ಎಂಬ ಪುತ್ರಿಯೂ ಇದ್ದರೆಂದು ತಿಳಿದುಬರುತ್ತದೆ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment