Search This Blog

Saturday 4 August 2018

ತಾಳಗುಂದ ಶಾಸನದಲ್ಲಿ ಕುಬ್ಜ ಕವಿಯ ಪ್ರೌಢಿಮೆ


ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿರುವ ಸ್ತಂಭಶಾಸನವು ಕದಂಬರ ಕುರಿತಾಗಿ ಹಾಗೂ ಮಯೂರ ವರ್ಮನ ಕುರಿತಾಗಿ ಕೆಲವು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಮಯೂರನ ಕುರಿತಾಗಿಯೇ ಇನ್ನು ಕೆಲವು ವಿಚಾರ ತಿಳಿಸುವ ಇನ್ನೊಂದು ಶಾಸನವೆಂದರೆ ಅದು ಗುಡ್ನಾಪುರದಲ್ಲಿದೆ. ವೇದ ವಿದ್ಯಾ ಪಾರಂಗತ ಎನ್ನುವುದನ್ನು ಎರಡೂ ಶಾಸನಗಳು ಬಿಂಬಿಸುತ್ತವೆ. ತಾಳಗುಂದ ಶಾಸನದಂತೆ ಒಮ್ಮೆ ಮಯೂರಶರ್ಮನು ತನ್ನ ಅಜ್ಜ ವೀರಶರ್ಮಜೊತೆಗೆ ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯ ಘಟಿಕಾಸ್ಥಾನಕ್ಕೆ ತೆರಳಿದ್ದ ಎಂದು ಶಾಸನದ ನಾಲ್ಕನೇ ಸಾಲಿನ 9ನೇ ಶ್ಲೋಕದಿಂದ ತಿಳಿದು ಬರುತ್ತದೆ. ಪಲ್ಲವ ರಾಜ ಶಿವಸ್ಕಂದವರ್ಮನು ಸುಮಾರು 345 ರಿಂದ 355 ಸಮಯದಲ್ಲಿ ಅಶ್ವಮೇಧ ಯಾಗವನ್ನು ನಡೆಸುತ್ತಾನೆ. ಯಾಗಕ್ಕೆ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರಶರ್ಮನು ಹೋಗುತ್ತಾನೆ. ಸಂದರ್ಭದಲ್ಲಿ ನಡೆದ ಜಗಳ ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಮಯೂರ ಅಪಮಾನಿತನಾದ. ತಕ್ಷಣವೇ ಮಯೂರ ಅಲ್ಲಿನ ಆಳರಸರಲ್ಲಿ ದೂರನ್ನು ನಿವೇದಿಸಿಕೊಂಡರೂ ಸಹ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವರಿಂದಲೂ ಅವಮಾನವನ್ನು ಅನುಭವಿಸುತ್ತಾನೆ. ಇವುಗಳಿಂದ ಸಹಜವಾಗಿಯೇ ಆತ ಸಿಟ್ಟಿಗೆದ್ದು ಕಾಂಚಿಯ ಪಲ್ಲವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ. ಶಸ್ತ್ರ ವಿದ್ಯೆಯನ್ನು ಕಲಿಯಲು ಆರಂಭಿಸಿದ ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನ 11ನೇ ಶ್ಲೋಕದಲ್ಲಿ ರೀತಿಯಾಗಿ ಉಲ್ಲೇಖಿಸಲಾಗಿದೆ.
"ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ | ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾ ವಿಪ್ರತಃ ||"
ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನಶರ್ಮಅಭಿದಾನವನ್ನು ತೊರೆದು ಕ್ಷತ್ರಿಯೋಚಿತವಾದ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯ ವರ್ಣ ಸೂಚಕ ಅಭಿದಾನವಾದವರ್ಮನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ. 5ನೇ ಸಾಲಿನ 14ನೇ ಶ್ಲೋಕದಲ್ಲಿ ಮಯೂರ ವರ್ಮನ ಕುರಿತಾಗಿ "ಶ್ರೀಪರ್ವತದ್ವಾರಾ ಸಂಶ್ರಿತಾಮ್" ಎಂದು ಬರುತ್ತದೆ. ಶ್ರೀ ಶೈಲದ ದಟ್ಟಕಾಡಿನಲ್ಲಿ ಗುಡ್ದಗಾಡಿನ ಜನರನ್ನು ಸಂಪರ್ಕಿಸಿ ತನ್ನದೇ ಆದ ಬಲಿಷ್ಠ ಸೇನೆ ಕಟ್ಟಿದ ಎನ್ನುವುದು ತಿಳಿದು ಬರುತ್ತದೆ.
ಕಾಂಚಿಯ ಪಲ್ಲವರಿಂದ ಅವಮಾನಿತನಾದ ಮಯೂರವರ್ಮಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತನಾಗಿದ್ದ (ಪಲ್ಲವರ ಅಶ್ವಮೇಧಕ್ಕಾಗಿ ಕಟ್ಟಿದ ಕುದುರೆಯಿಂದ ಆದ ಕಲಹ) ಮಯೂರ ಸಾಕ್ಷಾತ್ ಪರಶುರಾಮನಂತೆ ಆಗಿದ್ದ.
"ಕುಶ ಸಮಿತ್ಸ್ರುಗಾಜ್ಯ ಚರುಗ್ರಹಣಾದಿಧಕ್ಷೇನ ಪಾಣಿನಾ |
ಉದ್ವವರ್ಹ ದೀಪ್ತಿಮಚ್ಛಸ್ತ್ರಂ ವಿಜಿಗೀಷಮಾಣೋ ವಸುನ್ಧರಾಮ್ ||"
ದರ್ಭೆ ಹಿಡಿದು ಆಜ್ಯ ಮತ್ತು ಚರುಗಳಿಂದ ಹೋಮ ಹವನಗಳನ್ನು ಮಾಡಬೇಕಿದ್ದ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಭೂಮಿಯನ್ನು ಆಳಲು ಹೊರಟ ಎನ್ನುವುದಾಗಿ ತಾಳಗುಂದದ ಸ್ತಂಭ ಶಾಸನದ 5ನೇ ಸಾಲಿನಲ್ಲಿ 13ನೇ ಶ್ಲೋಕದಲ್ಲಿ ಹೇಳಲ್ಪಡುತ್ತದೆ. ಕಂಚಿಯಿಂದ ಹೊರಟ ಮಯೂರ ಧನುರ್ವೇದಿಯಾಗಿ ಶ್ರೀಪರ್ವತ ಅಥವಾ ತ್ರಿಪರ್ವತದ ದಟ್ಟ ಕಾಡನ್ನು ಪ್ರವೇಶಿಸಿ ಅಲ್ಲಿನ ಮೂಲ ನಿವಾಸಿಗಳನ್ನು ಸಂಘಟಿಸಿ ಸಮರ್ಥ ಸೇನೆಯನ್ನು ಕಟ್ಟಿ ಬ್ರಹದ್ಬಾಣ ಮೊದಲಾದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ಎನ್ನುವುದಾಗಿ ಅದೇ ಸಾಲಿನಲ್ಲಿ ಹೇಳಲಾಗಿದೆ. ಉಪಾಯದಿಂದ ಪಲ್ಲವರ ಕೈಗೆ ಎಲ್ಲಿಯೂ ಸಿಕ್ಕಿ ಹಾಕಕೊಳ್ಳದೇ ಪರ್ವತದ ಸುತ್ತಲಿನ ಪಲ್ಲವರ ಸಾಮಂತ ದೊರೆಗಳಾದ ಆಂಧ್ರಪಾಲರನ್ನು ಅಲ್ಲಿಂದ ಓಡಿಸಿ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಂಡು ಮಯೂರ ಬಲಿಷ್ಠನಾಗುತ್ತ ಬಂದ.
ಯೋಂತಪಾಲಾನ್ ಪಲ್ಲವೇಂದ್ರಾಣಾಂ ಸಹಸಾ ವಿನಿರ್ಜ್ಜಿತ್ಯ ಸಂಯುಗೇ | ಅದ್ಧ್ಯುವಾಸ ದುರ್ಗ್ಗಮಾಮಟವೀಂ ಶ್ರೀ ಪರ್ವ್ವತ ದ್ವಾರ ಸಂಶ್ರಿತಾಮ್ ||
ಆದದೇಕರದ್ಬೃಹದ್ಬಾಣ ಪ್ರಮುಖಾದ್ವಹೂನ್ ರಾಜ ಮಂಡಲಾತ್ | ಏವಮೇಭಿಱ್ಪಲ್ಲವೇಂದ್ರಾಣಾಂ ಭ್ರುಕುಟೀ ಸಮುತ್ಪತ್ತಿ ಕಾರಣೈಃ ||
ಎನ್ನುವುದಾಗಿ 14 - 15 ನೇ ಶ್ಲೋಕದಲ್ಲಿ ವಿವರಣೆ ಸಿಗುತ್ತದೆ. ಒಂದು ವೇಳೆ ಪಲ್ಲವರಿಂದ ಅಪಹಾಸ್ಯಕ್ಕೆ ಗುರಿಯಾಗದೇ ವೇದಾಧ್ಯಯನ ಶೀಲನಾಗಿ ಮಯೂರ ನಮಗೆ ದೊರಕಿದ್ದರೆ ಕರ್ನಾಟಕದ ಪಾಲಿಗೆ ಅನ್ಯಾಯವಾಗುತ್ತಿತ್ತು ಅನ್ನಿಸುತ್ತದೆ. ನಮ್ಮ ನೆಲಕ್ಕೆ ಶಾಪಾದಪಿ ಶರಾದಪಿ ಸಾಮರ್ಥ್ಯ ಹೊಂದಿದ ರಾಜನೊಬ್ಬನ ಅಥವಾ ರಾಜ ವಂಶ ಸಿಗುತ್ತಿರಲಿಲ್ಲ.
ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಮ್ಇದು ವಶಿಷ್ಠನಿಂದ ವಿಶ್ವಾಮಿತ್ರನು ತನ್ನ ಪೂರ್ವಾಶ್ರಮದಲ್ಲಿ ಕಾಮಧೇನುವನ್ನು ಪಡೆದುಕೊಳ್ಳಲು ಆಗದಿರುವಾಗ ಹೇಳುವ ನುಡಿ. ಆದರೆ ಇಲ್ಲಿ ಇತಿಹಾಸದಲ್ಲಿ ಕದಂಬರ ಮಯೂರಶರ್ಮನು ವರ್ಮನಾಗಿ ಬದಲಾದಾಗ ಮಾತು ಆತನಿಗೂ ಅನ್ವಯಿಸುತ್ತದೆ. ವಿಶ್ವಾಮಿತ್ರ ಕ್ಷತ್ರಿಯನಾಗಿ ನಂತರ ಬ್ರಹ್ಮರ್ಷಿಯಾದ ಆದರೆ ಇಲ್ಲಿ ಬ್ರಹ್ಮ ತೇಜಸ್ಸನ್ನು ಪಡೆದ ಮಯೂರ ಕ್ಷತ್ರಿಯ ತೇಜಸ್ಸನ್ನು ಪಡೆದ.
ತನ್ನ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳಲಿಕ್ಕಾಗಿ ತ್ರಿಪರ್ವತದ ಸುತ್ತಲಿನ ಪಲ್ಲವರ ಸಾಮಂತರನ್ನು ಓಡಿಸಿದ ಮಯೂರ ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಳ್ಳುತ್ತಾ ಸಾಗಿದ. ಈತ ಒಂದು ಕಡೆಯಿಂದ ಸೈನ್ಯವನ್ನು ಕಟ್ಟಿ ತನ್ನ ಕೇಂದ್ರವನ್ನು ತನ್ನ ಪ್ರತಿಜ್ಞೆಯನ್ನು ತೀರಿಸಿಕೊಳ್ಳುವ ಹಂಬಲವನ್ನು ಕಾದಿರಿಸಿಕೊಂಡ.
ಸ್ವಪ್ರತಿಜ್ಞಾ ಪಾರಣೋತ್ಥಾನ ಲಘುಭೀ ಕೃತಾರ್ಥೈಶ್ಚ ಚೇಷ್ಟಿತೈಃ|ಭೂಷಣೈರಿವಾ ಬಭೌ ಬಲವದ್ಯಾತ್ರಾಸಮುತ್ಥಾಪನೇನ ||16||
ತನ್ನ ವೈರಿಗಳ ಪ್ರದೇಶಕ್ಕೆ ತೆರಳಿ ಅಲ್ಲಿ ಹಿಂದಿನ ಮಯೂರನಾಗಿರದೇ ರಾಜನಾಗಿರುವ ಮಯೂರನಾಗಿ ವಿಜಯಶಾಲಿಯಾಗಿ ಬರಬೇಕು ಎನ್ನುವುದು ಮಯೂರನ ಹಂಬಲವಾಗಿತ್ತು. ಅತ್ಯಂತ ಉತ್ಸಾಹ ಭರಿತ ಸೈನ್ಯವನ್ನು ಕಟ್ಟಿ ಬೆಳೆಸಿ ಅವರಲ್ಲಿ ಸ್ವಾಭಿಮಾನವನ್ನು ತುಂಬಿ ಪಲ್ಲವರ ಕಾಂಚಿಯನ್ನು ಜಯಿಸಲಿಕ್ಕಾಗಿ ಮತ್ತು ಪಲ್ಲವರಿಗೆ ತಕ್ಕ ಪಾಠ ಕಲಿಸಲಿಕ್ಕಾಗಿ ಹೊರಟ.
ಅಭಿ ಯುಯುಕ್ಷಯಾಗತೇಷು ಭೃಶಂ ಕಾಂಚೀ ನರೇಂದ್ರೇಷ್ವರಾತಿಷು |
ವಿಷಮದೇಶ ಪ್ರಯಾಣ ಸಂವೇಶ ರಜನೀಷ್ವವಸ್ಕಂದ ಭೂಮಿಷು || 17 ||
ಭೂಮಿಗೆ ಇಳಿದು ಬಂದ ಚಂದ್ರನಂತೆ ಪ್ರಕಾಶಮಾನನಾದ ಮಯೂರ ವಿಷಮ ದೇಶ ಪ್ರಯಾಣ ಮಾಡಿದ ಎನ್ನುವುದಾಗಿ ಶಾಸನ ಹೇಳುತ್ತದೆ. ಕಾಂಚಿ ಮಯೂರನಿಗೆ ವಿಷಮದೇಶವಾಗಿತ್ತು. ಅವನ ವೈರಿ ದೇಶವಾಗಿತ್ತು.
ಮಯೂರನ ಸೇನೆ ಸಾಮಾನ್ಯದ ಸೇನೆ ಆಗಿರಲಿಲ್ಲ ಅದೊಂದು ಸಾಗರದಂತೆ ಕಂಗೊಳಿಸುತ್ತಿತ್ತಂತೆ. ಅತ್ಯಂತ ಉತ್ಸಾಹ ಭರಿತ ಸೇನೆ ಬಲಶಾಲಿಯಾಗಿಯೂ ಗಿಡುಗ ಅಥವಾ ಗರುಡ ಪಕ್ಷಿಯ ಆಕಾರದಲ್ಲಿದ್ದು ಸೇನೆಯನ್ನು ಶತ್ರು ಸೈನ ಬಿಡಿಸಿಕೊಳ್ಳಲು ಸಾಧ್ಯವಾಗದಂತೆ ನಿರ್ಮಿಸಲಾಗಿತ್ತು ಅದನ್ನೇ ಶಾಸನ ವಾಕ್ಯದಲ್ಲೂಶ್ಯೇನವತ್ತದಾಎಂದು ಉಲ್ಲೇಖಿಸಿದ್ದು.
ಪ್ರಾಪ್ಯ ಸೇನಾ ಸಾಗರಂ ತೇಷಾಂ ಪ್ರಾಹನ್ ಬಲೀ ಶ್ಯೇನವತ್ತದಾ | ಆಪದಂತಾಂಧಾರಯಾಮಾಸ ಭುಜ ಖಡ್ಗ ಮಾಂತ್ರ ವ್ಯುಪಾಶ್ರಯಃ || 18 ||
ತನ್ನ ಪ್ರತಿಜ್ಞೆಯನ್ನು ಸಾಕಾರಗೊಳಿಸಿಕೊಳ್ಳಲು ಬಲಿಷ್ಠವಾದ ಮತ್ತು ವೈರಿಗಳಿಂದ ಸುಲಭದಲ್ಲಿ ಬಿಡಿಸಿಕೊಳ್ಳಲು ಸಾಧ್ಯವಾಗದಂತಹ ವ್ಯೂಹವನ್ನು ರಚಿಸಿಕೊಂಡ ಮಯೂರ ವಿಷಮ ದೇಶವನ್ನು ಪ್ರವೇಶಿಸಿಸುತ್ತಾನೆ. ವೈರಿಗಳಲ್ಲಿ ನಡುಕ ಹುಟ್ಟಿಸಿ ಕಾರ್ಮೋಡದಂತೆರಗಿ ಅವರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಾನೆ.
ಸ್ವಪ್ರತಿಜ್ಞಾ ಪಾರಣೋತ್ಥಾನನಾಗಿ(ತಾನು ಏನು ಪ್ರತಿಜ್ಞೆ ಮಾಡಿದ್ದಾನೋ ಅದನ್ನು ಛಲಬಿಡದೇ ನೆರವೇರಿಸಿಕೊಳ್ಳುವವ) ತನ್ನ ಬಲವಾದ ಸೈನ್ಯದೊಂದಿಗೆ ಶ್ಯೇನದಂತಹ ವ್ಯೂಹವನ್ನು ರಚಿಸಿಕೊಂಡು ವಿಷಮದೇಶವನ್ನು ಹೊಕ್ಕು ಯುದ್ಧೋತ್ಸಾಹನಾದಾಗ ಅದೇ ಸಮಯಕ್ಕೆ ಉತ್ತರದಲ್ಲಿದ್ದ ಗುಪ್ತ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ಸಮುದ್ರ ಗುಪ್ತನ ದಕ್ಷಿಣಾಪಥದ ದಂಡಯಾತ್ರೆ ಆರಂಭವಾಗುತ್ತದೆ. ಆಗ ಸಮುದ್ರಗುಪ್ತ ಪಲ್ಲವರ ರಾಜ ವಿಷ್ಣುಗೋಪನನ್ನು ಸೋಲಿಸಿ ಮಯೂರವರ್ಮನಿಗೆ ಬೆಂಬಲವಾಗಿ ನಿಂತು ಬಿಡುತ್ತಾನೆ. ಇದೇ ಸಮಯವನ್ನು ಕಾಯುತ್ತಿದ್ದ ಮಯೂರ ಸಮಯದಲ್ಲಿ ಪ್ರಬಲನಾಗಿ ಬೆಳೆದಾಗಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡು ಕರ್ನಾಟಕದ ಮೈಸೂರು ಪ್ರಾಂತ್ಯ, ಬಾದಾಮಿ, ಶಿವಮೊಗ್ಗ ಮತ್ತು ಕುಂತಳ, ಕರಾವಳಿಯ ಭೂ ಬಾಗಗಳನ್ನು ಸೇರಿಸಿಕೊಂಡು ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕದಂಬ ವಂಶವನ್ನು ಸ್ಥಾಪಿಸುತ್ತಾನೆ. ಮೌರ್ಯರ ಕಾಲದಲ್ಲಿಯೂ ಅದು ಕುಂತಳ ನಗರವೆಂದೇ ಪ್ರಸಿದ್ಧಿಯನ್ನು ಪಡೆದಿತ್ತು.
ಪಲ್ಲವೇಂದ್ರಾ ಯಸ್ಯ ಶಕ್ತಿಮಿಮಾಂ ಲಬ್ದ್ವಾ ಪ್ರತಾಪಾನ್ವಯಾವಪಿ | ನಾಸ್ಯ ಹಾನಿ ಶ್ರೇಯಸೀತ್ಯುಕ್ತಾ ಯಮ್ಮಿತ್ರಮೇವಾಶು ವವ್ರಿರೇ || 19 ||
ಹೌದು ಪಲ್ಲವ ರಾಜ ಈತನ ಸೈನ್ಯದ ಬಲವನ್ನು ನೋಡಿಯೇ ಮಯೂರನಲ್ಲಿ ಯುದ್ಧಮಾಡುವುದಕ್ಕಿಂತ ಮತ್ತು ನಾವು ಹಾನಿ ಮಾಡಿಸಿಕೊಳ್ಳುವುದಕ್ಕಿಂತ ಮಿತ್ರತ್ವಕ್ಕೆ ಹೆಚ್ಚು ಒತ್ತು ಕೊಟ್ಟರೆ ಅದು ನಮಗೇ ಶ್ರೇಯಸ್ಸು ಎಂದು ಮನಗಂಡು ಮಿತ್ರತ್ವವನ್ನೇ ಸಾಧಿಸುತ್ತಾನಂತೆ.
ಸಂಶ್ರಿತಸ್ತದಾ ಮಹೀಪಾಲಾನಾರಾಧ್ಯ ಯುದ್ಧೇಷು ವಿಕ್ರಮೈಃ | ಪ್ರಾಪ ಪಟ್ಟಬಂಧ ಸಂಪೂಜಾಂ ಕರಪಲ್ಲವೈರ್ಪಪಲ್ಲವೈದ್ಧರ್ತಾಮ್ || 20 ||
ಭಂಗುರೋರ್ಮಿ ವಲ್ಗಿತೈರ್ನೃತ್ಯದಪರಾರ್ಣವಾಂಭಷ್ಕೃತಾವಧಿಂ | ಪ್ರೇಹರಾಂತಾಮನನ್ಯ ಸಂಚರಣ ಸಮಯಸ್ಥಿತಾಂ ಭೂಮಿಮೇವ || 21 ||
ಹೀಗೇ ಪಲ್ಲವರನ್ನೂ ಯುದ್ಧದಲ್ಲಿ ಸೋಲಿಸಿ ತನ್ನ ಸ್ವಪ್ರತಿಜ್ಞೆಯನ್ನು ನೆರವೇರಿಸಿದ್ದಲ್ಲದೇ ಕನ್ನಡನಾಡಿಗೆ ಒಂದು ಒಳ್ಳೆಯ ವಂಶವನ್ನು ಕೊಟ್ಟ ಹೆಗ್ಗಳಿಕೆ ಮಯೂರನಿಗೆ ಸಲ್ಲುತ್ತದೆ. ಶಾತವಾಹನರು, ಸಾತಕರ್ಣಿಗಳ ಕಾಲದಲ್ಲಿ ಮತ್ತು ಪಲ್ಲವರ ಕಾಲದಲ್ಲಿ ಬನವಾಸಿಯು ಕುಂತಳನಗರ ಎಂದು ಪ್ರಸಿದ್ಧಿ ಪಡೆದಿತ್ತು.
ಕೃತಯುಗದಲ್ಲಿ ಕೌಮುದೀ ಎನ್ನುವ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದ ಬನವಾಸಿ, ತ್ರೇತಾಯುಗದಲ್ಲಿ ಚೈದಲೀಪುರವಾಯಿತು. ಜಯಂತೀಪುರವೆಂದು ದ್ವಾಪರದಲ್ಲಿ ಕರೆಯಲ್ಪಟ್ಟ ಬನವಾಸಿ ಕಲಿಯುಗದಲ್ಲಿ ವೈಜಯಂತಿಯಾಗಿ ವನವಾಸಿಯಾಗಿ ಮುಂದೆ ಕನ್ನಡದ ನೆಲದಲ್ಲಿ ಬನವಾಸಿಯಾಯಿತು. ಹೀಗೆ ಅತ್ಯಂತ ಪ್ರಾಚೀನ ಕಾಲದಲ್ಲಿಯೂ ಯುಗಾಂತರಗಳಲ್ಲಿಯೂ ಇದು ರಾಜಧಾನಿಯಾಗಿ ಮೆರೆದ ಊರು.
ನೊಸಲೊಳುರಿಗಣ್ಣವಂದದಿ ಮಿಸೆಮರೆಯನಲ್ಲಿ ಪಟ್ಟಮಂ ಕಟ್ಟಿದ ಜಾನು ಸಮುದ್ದೇಶದೊಳಂತದನೆಸದಿರೆ ಕಟ್ಟಿದರೆನದಲ್ಕ ದಿನ್ನೇವೊಳ್ಗೆಂಮಯೂರನಿಗೆ ಮೂರು ಕಣ್ಣುಗಳಿದ್ದವಂತೆ ಆದುದರಿಂದ ಈತನನ್ನುತ್ರಿನೇತ್ರ ಕದಂಬ’, ’ಲಲಾಟಲೋಚನಮುಂತಾಗಿ ಕರೆಯಲಾಗುತ್ತದೆ. ಹಣೆಯಲ್ಲಿ ಮೂರನೇ ಕಣ್ಣಿದ್ದುದರಿಂದ ಈತನಿಗೆ ಪಟ್ಟಾಭಿಷೇಕದ ಸಮಯದಲ್ಲಿ ಕಿರೀಟ ಕಟ್ಟಲು ಸಾಧ್ಯವಾಗದೇ ಕೊನೆಗೆ ಮಂಡಿಗೆ ಕಟ್ಟಿದರು ಎಂದು ಹೇಳಲಾಗುತ್ತದೆ.(ಇದು ಉತ್ಪ್ರೇಕ್ಷೆಯಾಗಿರಬಹುದು) ಹೌದು ಮಯೂರನ ಕುರಿತಾಗಿ ಸಿಗುವ ದಾಖಲೆಗಳಲ್ಲಿ ಮಯೂರನ ಕುರಿತಾಗಿ ಅನೇಕ ದಂತ ಕಥೆಗಳು ಉಪಲಬ್ದವಾಗುತ್ತವೆ. ಕೆಲವಂತೂ ಉತ್ಪ್ರೇಕ್ಷೆಯಿಂದ ಕೂಡಿದೆಯೇನೋ ಅನ್ನುವಷ್ಟು ಹೇಳಲ್ಪಟ್ಟಿದೆ. ಅವುಗಳಲ್ಲೊಂದು ರೀತಿ ಇದೆ. ಪರಶಿವನನ್ನು ಕೈಲಾಸದಲ್ಲಿ ನಂದ ರಾಜನು ಕದಂಬ ಹೂವುಗಳಿಂದ ಅರ್ಚಿಸಲು ಶಿವನ ಸಂಪ್ರೀತಿಯ ವರದಿಂದ ಹುಟ್ಟಿದವನೇ ಮಯೂರ ಎನ್ನುವುದಾಗಿ ಹೇಳಲಾಗುತ್ತದೆ. ಕಾವೇರಿ ಪುರಾಣ ಎನ್ನುವ ಪುರಾಣದಲ್ಲಿ ಮಯೂರನ ಕುರಿತಾಗಿ ಇನ್ನೊಂದು ಕಥೆ ಇದೆ. ಚಂದ್ರಾಂಗದ ಎನ್ನುವ ಅರಸು ತನಗೆ ಉಂಟಾದಸರ್ಪದಮನಎನ್ನುವ ರೋಗದ ಚಿಕಿತ್ಸೆಗಾಗಿ ವಲ್ಲಭೀಪುರಕ್ಕೆ ಬರುತ್ತಾನೆ. ಆಗ ಅಲ್ಲಿನ ಛತ್ರ ಒಂದರಲ್ಲಿ ಉಳಿದುಕೊಳ್ಳಬೇಕಾಗಿ ಬಂದಾಗ ಅಲ್ಲಿನ ಸೇವಕಿ ಒಬ್ಬಳು ಅವನ ಕಾಯಿಲೆಗೆ ಚಿಕಿತ್ಸೆಮಾಡುತ್ತಾಳೆ. ಅದರಿಂದ ಗುಣಮುಖ ಹೊಂದಿದ ಚಂದ್ರಾಂಗದನು ಆಕೆಯನ್ನು ಮದುವೆಯಾಗುತ್ತಾನೆ. ಚಂದ್ರಾಂಗದನು ಗರ್ಭಿಣಿಯಾದ ಹಿರಿಯ ಮಡದಿಯನ್ನು ತ್ಯಜಿಸುತ್ತಾನೆ. ಪರಿತ್ಯಕ್ತಳ ಮಗನೇ ಮಯೂರಎನ್ನುವುದಾಗಿ ಬರುತ್ತದೆ. ಹೀಗೇ ಮಯೂರನ ಕುರಿತಾಗಿ ಅನೇಕ ಕಥೆಗಳು ಕೇಳಿಬರುತ್ತವೆ. ಅದೇನೇ ಇರಲಿ ಮಯೂರ ವಿದ್ವದ್ರಾಜನಂತೂ ಹೌದು.
ವಿಬುಧ ಸಂಘಮೌಲಿ ಸಮೃಷ್ಟ ಚರಣಾರವಿಂದಷ್ಷಡಾನನಃ | ಯಮಭಿಷಿಕ್ತವಾನನುಧ್ಯಾಯ ಸೇನಾಪತಿಂ ಮಾತೃಭಿಸ್ಸಹ ||
ಕಾಂಚಿಯ ಪಲ್ಲವರನ್ನು ಉಪಾಯದಿಂದ ಗೆದ್ದು ತನ್ನ ಅಪೇಕ್ಷೆಯ ಸೇಡನ್ನು ತೀರಿಸಿಕೊಂಡ ಮಯೂರ, ವಿದ್ಯಾರ್ಜನೆಯ ಕೇಂದ್ರವನ್ನಾಗಿ ವಿಬುಧ ಜನರ ಒಂದು ದೊಡ್ಡ ಪಡೆಯನ್ನೇ ನಿರ್ಮಿಸಿಕೊಂಡಿದ್ದು ತನ್ನ ಪಟ್ಟಾಭಿಷೇಕವನ್ನು ತನ್ನ ತಾಯಿ ಮತ್ತು ಸೇನಾಪತಿಯ ನೇತೃತ್ವದಲ್ಲಿ ನೆರವೇರಿಸಿಕೊಳ್ಳುತ್ತಾನೆ. ಆದರೆ ಇನ್ನೊಂದು ಮೂಲದಂತೆ ಕದಂಬ ಮಯೂರನ ಸಾಮರ್ಥ್ಯಕ್ಕೆ ಮನಸೋತ ಪಲ್ಲವ ಶಿವಸ್ಕಂದವರ್ಮ ಪಶ್ಚಿಮ ಸಮುದ್ರದಿಂದ ಮಲಪ್ರಭಾ ನದಿಯ ವರೆಗಿನ ಭೂಬಾಗವನ್ನು ಮಯೂರನಿಗೆ ಬಿಟ್ಟುಕೊಟ್ಟು ಪಟ್ಟಾಭಿಷೇಕವನ್ನು ಮಾಡಿದ ಎನ್ನುವುದಾಗಿ ತಿಳಿಯುತ್ತದೆ.
ಮಯೂರನ ಮಗ ಕಂಗವರ್ಮ ಈತನೂ ಸಹ ಅತ್ಯಂತ ಚಾಣಾಕ್ಷನಾಗಿದ್ದನೆಂದು ತಿಳಿಯುತ್ತದೆ. ಆದರೆ ಮಯೂರನಷ್ಟು ವಿದ್ವಾಂಸನಾಗಿರಲಿಲ. ಆದುದರಿಂದಲೇ ಕದಂಬ ರಾಜರುಗಳಲ್ಲಿ ಅಂತಹ ಹೆಸರು ಈತ ಪಡೆಯಲಿಲ್ಲ.
ತಸ್ಯಪುತ್ರಷ್ಕಂಗವರ್ಮೋಗ್ರ ಸಮರೋದ್ಧುರ ಪ್ರಾಂಶು ಚೇಷ್ಟಿತಃ | ಪ್ರಣತ ಸರ್ವ ಮಂಡಲೋತ್ಕೃಷ್ಟ ಸಿತ ಚಾಮರೋದ್ಧೂತ ಶೇಖರಃ ||
ತತ್ಸುತಷ್ಕದಂಬ ಭೂಮಿವಧೂರುಚಿತೈಕನಾಥೋ ಭಗೀರಥಃ | ಸಗರಮುಖ್ಯ ಸ್ವಯಂ ಕದಮ್ಬ ಕುಲ ಪ್ರಚ್ಚನ್ನ ಜನ್ಮಾ ಜನಾಧಿಪಃ ||
ಮಯೂರವರ್ಮನ ನಂತರ ಬಂದ ಕದಂಬ ರಾಜರುಗಳಲ್ಲಿ ಕಂಗವರ್ಮ ಮೊದಲಿಗ. ಈತನು ಮಯೂರನ ಮಗ, ಈತನ ನಂತರ ಬಂದವರಲ್ಲಿ ಸಂಪದ್ಭರಿತವಾದ ಇಡೀ ಭೂಮಂಡಲವನ್ನೇ ಆಳಲು ಸಮರ್ಥನೆನ್ನಿಸಿದ "ರಘು" ಎನ್ನುವ ರಾಜ ಪ್ರಮುಖನು.
ಅಥ ನೃಪತಿ ಮಹಿತಸ್ಯ ತಸ್ಯ ಪುತ್ರಃ ಪೃಥಿತ ಯಶಾ ರಘು ಪಾರ್ಥಿವ ಪೃಥಿವೀ ಶ್ರೀ |
ಪೃಥುರಿವ ಪೃಥಿವೀಂ ಪ್ರಸಹ್ಯ ಯೋsರೀನ್ ಅಕೃತ ಪರಾಕ್ರಮತ ಸ್ಸ್ವವಂಶ ಭೋಜ್ಯಾಮ್ ||
ಇಲ್ಲೊಂದು ಚಿಕ್ಕ ಕಥೆ ನೆನಪಿಗೆ ಬರುತ್ತದೆ. ಸೂರ್ಯವಂಶದಲ್ಲಿ ಅನರಣ್ಯ ಎನ್ನುವ ಒಬ್ಬ ದೊರೆ ಇದ್ದ. ಆತ ಪ್ರಜಾ ಪೀಡಕನಾಗಿ ಸ್ವಾರ್ಥಿಯಾಗಿ ಅಹಂಕಾರದಿಂದ ಮೆರೆಯುತ್ತಿದ್ದ ಆತನ ಕ್ರೂರತೆ ಎಷ್ಟಿತ್ತೆಂದರೆ ಇಡೀ ಭೂಮಂಡಲದ ಸಸ್ಯವರ್ಗಗಳು ಮತ್ತು ಪ್ರಾಣಿಗಳು ತಮ್ಮ ಜೀವ ಕಳೆದುಕೊಂಡಿದ್ದವು. ಇಂತಹ ಸಮಯದಲ್ಲಿ ಜನರೆಲ್ಲಾ ಸೇರಿ ಆತನನ್ನು ಕಲ್ಲಿನಿಂದ ಹೊಡೆದು ಕೊಲ್ಲುತ್ತಾರೆ. ಆಮೇಲೆ ಅವನ ಮೂಳೆಯನ್ನು ಕಡೆದಾಗ ಹುಟ್ಟುವ ಮಗುವೇ ಪೃಥು ಪೃಥುವು ಹುಟ್ಟಿದಾಕ್ಷಣ ಇಡೀ ಭೂಮಂಡಲದಲ್ಲಿ ಮಳೆಯಾಗಿ ಹಸಿರು ಕಂಗೊಳಿಸಿ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಪೃಥುವಿನಿಂದ ಪುನಃ ಭೂಮಿ ತನ್ನ ಜೀವಕಳೆ ಪಡೆದದ್ದಕ್ಕಾಗಿ ಭೂಮಿಗೆಪೃಥಿವೀಎನ್ನುವ ಹೆಸರು ಬರುತ್ತದೆ ಪೃಥ್ವೀ ಪುನರ್ವಸುವಾಗುತ್ತದೆ. ಎಂದು ಓದಿದ ನೆನಪು. ಇಲ್ಲಿ ಶಾಸನ ಕವಿ ಕದಂಬ ರಾಜರಿಗೆ ಪೃಥುವಿನಂತೆ ಭೂಮಂಡಲವನ್ನು ಪುನಃ ಸಂಪದ್ಭರಿತವನ್ನಾಗಿ ಮಾಡಿದರು ಎನ್ನುವ ರೀತಿಯಲ್ಲಿ ಸಾಹಸ ಶೌರ್ಯಗಳನ್ನು ಹೇಳುತ್ತಾನೆ.
ಪ್ರಥಿತ ಭಯ ಸಮರೇಶ್ವರಾತಿ ಶಸ್ತ್ರೋಲ್ಲಿಖಿತ ಮುಖೋsಭಿಮುಖದ್ವಿಷಾಂ ಪ್ರಹರ್ತ್ತಾ | ಶ್ರುತಿಪಥನಿಪುಣಷ್ಕವಿಃ ಪ್ರದಾತಾ ವಿವಿಧ ಕಲಾ ಕುಶಲರ್ಪ್ರಜಾ ಪ್ರಿಯಶ್ಚ ||
ಮುಖಕ್ಕೆ ಮುಖ ಕೊಟ್ಟು ಯುದ್ಧ ಮಾಡುವ ಸಮರ್ಥರು ಕದಂಬ ಕುಲದ ರಾಜರುಗಳು, ಸ್ಮೃತಿ ಮತ್ತು ಶ್ರುತಿಗಳಲ್ಲಿ ನೈಪುಣ್ಯತೆ ಹೊಂದಿದ ಶಸ್ತ್ರ ಮತ್ತು ಶಾಸ್ತ್ರಗಳಿಗೆ ಸಮಾನವಾದ ಗೌರವಗಳನ್ನು ಕೊಡತಕ್ಕವರು ಕದಂಬ ರಾಜ್ಯದಲ್ಲಿದ್ದರು ಮತ್ತು ವಿವಿಧ ಕಲೆಗಳಲ್ಲಿ ನಿಪುಣರಾದ ಕವಿಗಳು ಕಲಾವಿದರ ಒಂದು ವರ್ಗವೇ ರಾಜ್ಯದಲ್ಲಿದ್ದು ರಾಜರುಗಳೆಲ್ಲಾ ಪ್ರಜೆಗಳ ಅತ್ಯಂತ ಪ್ರೀತಿ ಪಾತ್ರರಾಗಿದ್ದರು ಎಂದು ಶಾಸನದ ಸಾಲುಗಳು ಹೇಳುತ್ತವೆ.
ಇಲ್ಲಿನ ತನಕ ಶಾಸನವು ಅಂದರೆ ಮೊದಲ ಸಾಲಿನಿಂದ ೮ನೇ ಸಾಲು ಅಂದರೆ ಅಲ್ಲಿಗೆ ೨೪ ಶ್ಲೋಕಗಳನ್ನು ಮಿಶ್ರಗೀತಿಕಾದಲ್ಲಿ ಬರೆಯಲಾಗಿದ್ದು ಮುಂದೆ ಸಾಲು ಅಂದರೆ ೨೫ ಮತ್ತು ೨೬ನೇ ಶ್ಲೋಕವನ್ನು ಪುಷ್ಪಿತಾಗ್ರದಲ್ಲಿ ಬರೆಯಲಾಗಿದೆ.
ಮಯೂರವರ್ಮ, ಆತನ ಮಗ ಕಂಗವರ್ಮ ಕಂಗವರ್ಮನ ತರುವಾಯ ಬಂದವನು ಭಗೀರಥ. ಅವನ ನಂತರ ರಘು. ರಘುವಿನ ನಂತರ ಬಂದವನೇ ಕಾಕುಸ್ಥವರ್ಮ. ಕದಂಬ ರಾಜರುಗಳಲ್ಲಿ ಕಾಕುಸ್ಥವರ್ಮ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದ.
ಭ್ರಾತಾಸ್ಯ ಚಾರುವಪುರಬ್ದ ಗಭೀರನಾದೋ ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲಶ್ಚ | ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ಕಾಕುಸ್ಥ ಇತ್ಯವನಿಮಂಡಲಘುಷ್ಟಕೀರ್ತಿಃ ||
ಅತ್ಯಂತ ಬುದ್ಧಿವಂತನಾದ ಕಾಕುಸ್ಥವರ್ಮ ಅಷ್ಟೇ ಬಲಶಾಲಿಯಾಗಿದ್ದ. ಹಾಗೆ ನೋಡಿದರೆ ಕದಂಬ ರಾಜರುಗಳ ಸಂಸ್ಕಾರವೇ ಹಾಗಿತ್ತೋ ಏನೋ ಪರಾಕ್ರಮದಲ್ಲಿಯೂ ಸಹ ಮುಂದಿರುತ್ತಿದ್ದ ಕದಂಬರಾಜರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಅಷ್ಟೇ ಮುಂದಿದ್ದರು. ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲರಾಗಿದ್ದರು. ಅದೇ ಕದಂಬ ಕಾಕುಸ್ಥವರ್ಮನು - ’ಭಾಗೀರಥಿರ್ನರಪತಿರ್ಮೃಗರಾಜ ಲೀಲಃನಾಗಿದ್ದ, ಹೀಗೇ ಭೂಮಂಡಲದಲ್ಲಿ ಕೀರ್ತಿಯನ್ನು ಹೊಂದಿದ್ದ.
ಜ್ಯಾಯೋಭಿಸ್ಸಹ ವಿಗ್ರಹೋರ್ಥಿಷು ದಯಾ ಸಮ್ಯಕ್ ಪ್ರಜಾಪಾಲನಂ ದೀನಾಭ್ಯುದ್ಧರಣಂ ಪ್ರಧಾನವಸುಭಿರ್ಮುಖ್ಯ ದ್ವಿಜಾಭ್ಯರ್ಹಣಮ್ |
ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ ತಂಭೂಪಾಷ್ಖಲು ಮೇನಿರೇ ಸುರಸಖಂ ಕಾಕುಸ್ಥಮತ್ರಾಗತಮ್ ||
ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಪ್ರಜೆಗಳ ಸುಖವನ್ನೇ ಅಭಿಲಾಶಿಸುತ್ತಿದ್ದ ಮತ್ತು ರಾಜಧರ್ಮದ ಪ್ರತಿಪಾಲನೆಗೆ ಕಟಿಬದ್ಧನಾಗಿದ್ದ ಕಾಕುಸ್ಥನು ದೀನ ಜನರ ಉದ್ಧಾರಕ್ಕಾಗಿ ಭೂಮಂಡಲದ ರಕ್ಷಣೆಗಾಗಿ ಬ್ರಾಹ್ಮಣ್ಯವನ್ನು ಎತ್ತಿ ಹಿಡಿದಿದ್ದ. "ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ" ಎನ್ನುವ ಮಾತು ಕಾಕುಸ್ಥನಿಗೆ ಅನ್ವರ್ಥವಾಗಿತ್ತು.
ಶ್ಲೋಕದ ಅಂದರೆ ಮೊದಲ ಶ್ಲೋಕ 10ನೇ ಸಾಲಿನ ಪೂರ್ವಾರ್ಧ ವಸಂತ ತಿಲಕಾದಲ್ಲಿ ಬರೆಯಲಾಗಿದ್ದು ಮುಂದಿನ ಹತ್ತನೇ ಸಾಲಿನ ಕೊನೆಯ ಅರ್ಧ ಮತ್ತು 11ನೇ ಸಾಲಿನ ಪೂರ್ವಾರ್ಧವು ಶಾರ್ದೂಲ ವಿಕ್ರೀಡಿತದಲ್ಲಿದೆ. (27ನೇ ಶ್ಲೋಕವು ವಸಂತ ತಿಲಕ ಮತ್ತು 28 ಶಾರ್ದೂಲ ವಿಕ್ರೀಡಿತದಲ್ಲಿದೆ)
ಮಯೂರವರ್ಮನ ಸಾಮ್ರಾಜ್ಯದಲ್ಲಿ - ಸಂಗೀತದ ನಿನಾದ :
ಅದೊಂದು ಅಸದೃಶವಾದ ಅಗ್ರಹಾರ. ಸಂಜೆಯಾಯಿತೆಂದರೆ ಸಾಯಂ ಸಂಧ್ಯಾವಂದನೆಯ ಜೊತೆಗೆ ಸೂಕ್ತಾದಿಗಳನ್ನು ಉಚ್ಚ ಸ್ವರದಲ್ಲಿ ಕಂಠಸ್ಥಮಾಡಿಕೊಳ್ಳುತ್ತಿದ್ದ ಸ್ಥಳ. ಅಗ್ರಹಾರದ ಬೀದಿಯಲ್ಲಿ ನಡೆದರೆ ಅದು ಭೂಲೋಕದ ಸ್ವರ್ಗ ಎನ್ನಿಸುತ್ತಿತ್ತು. ಅಂತಹ ಅಗ್ರಹಾರದಲ್ಲಿ ಸಾಗುತ್ತಿದ್ದರೆ ಇಕ್ಕೆಲಗಳಲ್ಲಿ ಬೆಳಗಿನ ರಂಗೋಲಿ ಅಳಿಸದೇ ಹಾಗೆ ಅದು ಕಣ್ಣಿಗೆ ರಾಚುತ್ತಿತ್ತು. ಗಿಳಿವಿಂಡುಗಳ ಆತ್ಮೀಯ ಹಾರೈಕೆಗಳುಒಂದೆಡೆಯಾದರೆ ವೇದಾದಿಗಳನ್ನು ಘಟಿಕಾಸ್ಥಾನಗಳಲ್ಲಿ ಕಲಿತು ಅವುಗಳನ್ನು ತಮ್ಮ ಮುಂದಿನ ಪೀಳೆಗೆಗೆ ಧಾರೆಎರೆಯುತ್ತಿರುವ ವೇದವಿದರ ಶ್ರೋತ್ರೀಯರ ಮಂತ್ರಘೋಷಗಳು ಕಿವಿಗೆ ಮುದನೀಡುತ್ತಿರುವುದುಇನ್ನೊಂದೆಡೆ. ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕಲಾ ಪ್ರಕಾರದ ಸಂಗೀತ ಮತ್ತು ನೃತ್ಯಕಲಾವಿದರುನೃತ್ಯಾಸಕ್ತರಿಗೆ ತಮ್ಮ ವಿದ್ಯೆಗಳನ್ನು ಹೇಳಿಕೊಡುತ್ತಿರುವುದು ಮತ್ತು ಗೆಜ್ಜೆಯ ಮತ್ತು ಸಂಗೀತದ ನಾದ ಹರಿದು ಕಿವಿಯನ್ನು ತಂಪಾಗಿಸುತ್ತಿದ್ದವು. ಇನ್ನೊಂದು ಕಡೆ ಧನುರ್ವೇದವನ್ನು ಕಲಿಸುತ್ತಾ ಗರಡಿಯ ತಾಲೀಮು ನಡೆಯುತ್ತಿದ್ದುದು ಕಾಣಿಸುತ್ತಿತ್ತು ಇದು ಬೇರೆಲ್ಲೋ ಅಲ್ಲ, ಕನ್ನಡ ನೆಲದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಕದಂಬರ ಕಾಲದಲ್ಲಿನ ಒಂದು ಚಿಕ್ಕದಾದ ನೋಟ. ಅದಕ್ಕೇ ಕುಬ್ಜನೆನ್ನುವ ಕವಿಯೊಬ್ಬ "ನಾನಾ ವಿಧ ದ್ರವಿಣಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರ ಮದವಾಸಿತ ಗೋಪುರೇಷು | ಸಂಗೀತ ವಲ್ಗು ನಿನಾದೇಷು ಗೃಹೇಷು" ಎನ್ನುವುದಾಗಿ ತಾನು ಬರೆದ ಶಾಂತಿವರ್ಮನ ತಾಳಗುಂದದ ಸ್ತಂಬ ಶಾಸನದಲ್ಲಿ ಬಣ್ಣಿಸಿದ್ದಾನೆ. ಕದಂಬರ ರಾಜಕೀಯ ಆಸಕ್ತಿಯ ಜೊತೆ ಅವರ ಧಾರ್ಮಿಕ ಮತ್ತು ಕಲಾಸಕ್ತಿಯನ್ನು ಬಿಂಬಿಸಿದ್ದಾನೆ. ಅಂದರೆ ಪ್ರಾಯಶಃ ತಾಳಗುಂದದ ಪಾವಿತ್ರ್ಯ ಮತ್ತು ಅಲ್ಲಿನ ಘಟಿಕಾಸ್ಥಾನದ ಮಹತ್ವವನ್ನು ಬಣ್ಣಿಸಿದ್ದಾನೆ.
ನಾನಾವಿಧ ದ್ರವಿಣ ಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರ ಮದವಾಸಿತ ಮದವಾಸಿತ ಗೋಪುರೇಷು| ಸಂಗೀತ ವಲ್ಗು ನಿನದೇಷು ಗೃಹೇಷು ಯಸ್ಯ ಲಲ್ಕ್ಷ್ಮ್ಯಾಂಗನಾ ಧೃತಿಮತೀ ಸುಚಿರಂ ಚರೇಮೆ”||
ಸಾಲು ಬಹಳ ಮಹತ್ವವನ್ನು ಪಡೆಯುತ್ತದೆ. ಕದಂಬರ ಕಾಲದಲ್ಲಾಗಲೇ ಸಂಗೀತ ಶಾಸ್ತ್ರವೂ ಕೂಡಾ ಪ್ರಚಲಿತಕ್ಕೆ ಬಂದು ದಕ್ಷಿಣದಲ್ಲಿ ತನ್ನ ಸ್ಥಾನ ಪಡೆದುಕೊಂಡಿತ್ತು. ಅಂದರೆ ಕದಂಬರು ಕೇವಲ ರಾಜ್ಯಾಡಳಿತಕ್ಕೆ ಸೀಮಿತರಾಗಿರದೇ ತಾವು ಸಾಂಸ್ಕೃತಿಕ ರಂಗದಲ್ಲಿಯೂ ಸಹ ಗುರುತಿಸಿಕೊಂಡಿದ್ದರು.
ಗುಪ್ತರೇ ಮೊದಲಾದ ಸಾಮ್ರಾಟರ ಸ್ನೇಹ ಹೊತ್ತಿಗೆ ಕದಂಬರಿಗೆ ಲಭಿಸಿಯಾಗಿತ್ತು. ಕದಂಬರನ್ನು ಅತ್ಯಂತ ಸ್ನೇಹ ಮತ್ತು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದರು. ಎಲ್ಲಾ ರಾಜರೂ ಸಹ ಅತ್ಯಾದರದಿಂದ ನೋಡುವಂತಹ ಒಂದು ಹಂತವನ್ನು ಕದಂಬರು ಸಂಪಾದಿಸಿದರು. ತಮ್ಮ ಮಗಳನ್ನು ಕೊಟ್ಟು ಉಳಿದ ರಾಜರುಗಳಲ್ಲಿ ಸಂಬಂಧವನ್ನು ಬೆಳೆಸಿಕೊಂಡರು.
ಗುಪ್ತಾದಿ ಪಾರ್ಥಿವ ಕುಲಾಂಬುರುಹ ಸ್ಥಲಾನಿ ಸ್ನೇಹಾದರ ಪ್ರಣಯ ಸಂಭ್ರಮ ಕೇಸರಾಣಿ | ಶ್ರೀಮಂತ್ಯನೇಕ ನೃಪ ಷಟ್ಪದ ಸೇವಿತಾನಿ ಯೋ ಬೋಧಯದ್ದುಹಿತೃದೀಧಿತಿಭಿರ್ನೃಪಾರ್ಕ್ಕಃ ||
ವಸಂತತಿಲಕಾ ವೃತ್ತದಲ್ಲಿ ಬರೆದ ಸಾಲುಗಳು ಶಾಸನದ 12ನೇ ಸಾಲಿನಲ್ಲಿ ಕಾಣಸಿಗುತ್ತದೆ.
ಕದಂಬ ರಾಜರು ಸಾಮಾನ್ಯ ರಾಜರಾಗಿರಲಿಲ್ಲ ಮೂರು ಲೋಕಗಳನ್ನೇ ಗೆಲ್ಲಬಲ್ಲ ಶಕ್ತಿವಂತರೂ ಮತ್ತು ಜನಾನುರಾಗಿಗಳೂ ತಮ್ಮ ಸಾಮಂತರನ್ನು ಅತಿಯಾದ ಗೌರವ ಮತ್ತು ಆದರದಿಂದ ನೋಡುತ್ತಿದ್ದರು.
ಯನ್ದೈವ ಸಂಪನ್ನ ಮದೀನ ಚೇಷ್ಟಂ ಶಕ್ತಿತ್ರಯೋಪೇತ ಮಥಾಸನಸ್ಥಮ್ | ಶೇಷೈರ್ಗುಣೈಃ ಪಂಚಭಿರಪ್ಯಸಾದ್ಧ್ಯಾಸ್ಸಾಮಂತ ಚೂಡಾಮಣಯಃ ಪ್ರಣೇಮುಃ ||
ಕನ್ನಡದ ಮೊದಲ ಕವಿ ಪ್ರಣವೇಶ್ವರನ ಭಕ್ತ ಕುಬ್ಜಕವಿ
ತಾಳಗುಂದದ ಪ್ರಣವೇಶ್ವರ ಹೆಸರಿಗಷ್ಟೇ ಪ್ರಣವನಾಗಿರಲಿಲ್ಲ. ಕನ್ನಡಿಗರ ಪಾಲಿಗೆ ಈತ ಆದಿದೈವ. ದೇವಾಲಯದ ಎದುರಿಗೆ ನಿಲ್ಲಿಸಿದ ಸ್ತಂಬಶಾಸನದ ಹೇಳಿಕೆಯಂತೆ ಪ್ರಣವೇಶ್ವರನನ್ನು ಕೇವಲ ಕದಂಬ ವಂಶೀಯರು ಮಾತ್ರವೇ ಪೂಜಿಸುತ್ತಿರಲಿಲ್ಲ. ಇದನ್ನು ಸಾತಕರ್ಣಿಗಳೂ ಆರಾಧಿಸುತ್ತಿದ್ದರು ಎನ್ನುವುದಾಗಿ ತಿಳಿದು ಬರುತ್ತದೆ. ಸ್ತಂಬ ಶಾಸನವನ್ನು ಕೆಲವರು ಕಾಕುಸವರ್ಮನದೆಂದು ಹೇಳಿದರೆ ಇನ್ನು ಕೆಲವರು ಶಾಂತಿವರ್ಮನದ್ದು ಎಂದು ಹೇಳುತ್ತಾರೆ. ಅದೇನೇ ಇರಲಿ ಕಾಕುಸ್ಥವರ್ಮ ಮತ್ತು ಶಾಂತಿವರ್ಮನ ಕಾಲದ ಸ್ತಂಬ ಶಾಸನವೆಂದು ನಾವು ತಿಳಿದುಕೊಳ್ಳುವುದು ಉತ್ತಮ.
ನಾನು ಗಮನಿಸಿದ ಶಾಸನಗಳಲ್ಲಿ ಕಾವ್ಯಾತ್ಮಕವಾಗಿ ಹಾಗೂ ಕಾವ್ಯಗಳಲ್ಲಿ ಛಂದಸ್ಸನ್ನು ಬಳಸಿಕೊಂಡ ಶಾಸನಗಳಲ್ಲಿ ಇದು ಅಗ್ರಗಣ್ಯ ಎನ್ನಬಹುದು. ಶಾಸನಕವಿಯನ್ನು ಅವಲೋಕಿಸಿದರೆ ಈತ ಕಾಕುಸ್ಥವರ್ಮನ ಮಗ ಶಾಂತಿವರ್ಮನ ಆಳ್ವಿಕೆಯಲ್ಲಿ ಮಾನ್ಯತೆ ಪಡೆದ ವಿದ್ವತ್ಕವಿಯಾಗಿದ್ದಿರಬಹುದು. ಈತನಂತೂ ಕನ್ನಡಿಗ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈತ ಉಭಯ ಭಾಷೆಗಳಲ್ಲಿಯೂ ಸಮಾನ ವಿದ್ವತ್ತನ್ನು ಹೊಂದಿದ್ದ.
ಶಾಸನದಲ್ಲಿ ಕನ್ನಡನಾಡಿನ ಪ್ರಪ್ರಥಮ ರಾಜವಂಶವಾದ ಕದಂಬ ವಂಶದ ಸ್ಥಾಪನೆ, ಶಾಂತಿವರ್ಮನವರೆಗಿನ ವಂಶಾವಳಿಯ ವಿಚಾರ, ಉತ್ತರದ ಗುಪ್ತರಿಗೂ ಕದಂಬರಿಗೂ ಸಂಬಂಧವೇರ್ಪಟ್ಟ ವಿಚಾರ, ಕಾಲದ ವೈದಿಕ ಧರ್ಮದ ಸ್ವರೂಪ, ವಿದ್ಯಾಭ್ಯಾಸಪದ್ಧತಿ ಮುಂತಾದ ಸಂಗತಿಗಳನ್ನೊಳಗೊಂಡ ತಾಳಗುಂದ ಸ್ತಂಬಶಾಸನದ ಮುಖ್ಯ ಉದ್ದೇಶ ಕದಂಬ ಕಾಕುಸ್ಥವರ್ಮ ತಾಳಗುಂದದಲ್ಲಿ ಬಹುಪ್ರಾಚೀನಕಾಲದಿಂದ ಪ್ರಸಿದ್ಧವಾಗಿದ್ದ ಪ್ರಣವೇಶ್ವರಸ್ವಾಮಿ ದೇವಾಲಯದ ಉಪಯೋಗಕ್ಕೆಂದು ಕೆರೆಯೊಂದನ್ನು ತೋಡಿಸಿದ ವಿಷಯವನ್ನು ತಿಳಿಸುವುದಾಗಿದೆ. ಹೀಗೆ ಇದು ಕಾಕುಸ್ಥನ ಗುಣಕಾರ್ಯಗಳನ್ನು ಬಣ್ಣಿಸುವ ಶಾಸನ.
ಒಟ್ಟು ೩೪ ಪದ್ಯಗಳಿರುವ ಪದ್ಯ ಶಾಸನದಲ್ಲಿ ಕೆಲವು ಅಪೂರ್ವ ಛಂದಸ್ಸುಗಳನ್ನು ಬಳಸಲಾಗಿದೆ. ಪದ್ಯ ೧ರಿಂದ ೨೪ ವರೆಗೆ ಬಳಸಿದ ಅಪೂರ್ವ ಛಂದಸ್ಸು ಮಾತ್ರಾಸಮಕವಿಶೇಷವೆಂದು ಕೀಲ್ ಹಾರ್ನ್ಹೇಳಿದ್ದಾರೆ ಆದರೆ ಇದನ್ನು ಮಿಶ್ರಗಣ ಗೀತಿಕೆ ಎಂದು ವೆಂಕಟಸುಬ್ಬಯ್ಯ ಹೇಳಿದ್ದಾರೆ. ಇದಲ್ಲದೆ ಪ್ರಾಚೀನ ಕನ್ನಡ ಕವಿಗಳಿಗೆ ಪರಿಚಿತವಾಗಿದ್ದ ಶಾರ್ದೂಲವಿಕ್ರೀಡಿತ, ವಸಂತತಿಲಕ, ಪುಷ್ಟಿತಾಗ್ರ , ದಂಡಕ ಮುಂತಾದ ಛಂದಸ್ಸುಗಳನ್ನು ಅತ್ಯಂತ ಶುದ್ಧವಾಗಿ ಬಳಸಲಾಗಿದೆ. ಶಾಸನದ ಭಾಷೆ ಸಂಸ್ಕೃತ, ಶಾಸನದ ಶೈಲಿ ಪ್ರೌಢವೂ ಕಾವ್ಯಮಯವಾದದ್ದು. ಸೊಗಸಾದ ಪದಮೈತ್ರಿ. ಮನೋಹರವಾದ ಶಬ್ದಾಲಂಕಾರ ವೈಚಿತ್ರ್ಯ. ರೂಪಕ, ಉಪಮಾದಿ ಅರ್ಥಾಲಂಕಾರಗಳ ಉಚಿತ ಬಳಕೆ ಅಲ್ಲಲ್ಲಿ ಕಂಡುಬರುತ್ತದೆ. ಅಂತೂ ಕಬ್ಜ ನೆನ್ನುವ  ಶಾಸನ ಕವಿಯ ಅಪ್ರತಿಮ ಕೊಡುಗೆ ಇದು ಆತ ಬೇರಾವ ಕಾವ್ಯವನ್ನೋ ಕೃತಿಯನ್ನೋ ಬರೆದ ಬಗ್ಗೆ ತಿಳಿಯುತ್ತಿಲ್ಲ. ಅಂತೂ ಕುಬ್ಜ ಹೆಸರಿಗೆ ಕುಬ್ಜನೇ ಹೊರತು ಕಾವ್ಯದಲ್ಲಿ ದಿಗ್ಗಜ.
ಸುಕೃತಿಭಿರವನೀಶ್ವರೈರಾತ್ಮನಿಶ್ರೇಯಸಂ ಪ್ರೇಪ್ಸುಭಿಸ್ಸಾತಕರ್ಣ್ಯಾದಿಭಿಃ ಶ್ರದ್ಧಯಾಭ್ಯರ್ಚ್ಚಿತೇ | ಇದಮುರು ಸಲಿಲೋಪಯೋಗಾಶ್ರಯಂ ಭೂಪತಿಕಾರಯಾಮಾಸ ಕಾಕುಸ್ಥವರ್ಮ್ಮಾ ತಡಾಕಮ್ಮಹತ್ ||
ಶ್ರೀ ಶಾಂತಿವರ್ಮ ನೃಪತೇರ್ವರಶಾಸನಸ್ಥಃ ಕುಬ್ಜಸ್ವಕಾವ್ಯಮಿದಮಶ್ಮತಲೇ ಲಿಲೇಖ ||
ಕುಬ್ಜಸ್ವ ಕಾವ್ಯಮಿದಂ ಅಶ್ಮತಲೇ ಲಿಲೇಖ ಕುಬ್ಜ ಇಲ್ಲಿ ಕವಿಯಾಗಿ ಗುರುತಿಸಿಕೊಳ್ಳುತ್ತಾನೆ. ತನ್ನ ಕಾವ್ಯವನ್ನು ಕಲ್ಲಿನ ಮೇಲೆ ಕಂಡರಿಸಲಾಗಿದೆ ಅನ್ನುತ್ತಾನೆ. ಕುಬ್ಜನಂತಹ ಕವಿಯೊಬ್ಬ ಅಜ್ಜಾತವಾಗುಳಿದು ಆತನ ಬೇರಾವ ಕೃತಿಗಳೂ ನಮಗೆ ಒರಕದೇ ಇರುವುದು ನಮಗೆ ನಷ್ಟ ಅನ್ನಿಸುತ್ತದೆ. ರಾಮಾಯಣದಂತಹ ಮಹಾ ಕಾವ್ಯವನ್ನು ನೇರವಾಗಿ ತನ್ನ ಶಾಸನದ ಸಾಲಿನಲ್ಲಿ ಇಳಿಸಿದ್ದು ಇವನ ಹೆಗ್ಗಳಿಕೆ


No comments:

Post a Comment