Search This Blog

Tuesday 21 August 2018

ಮಧು ವಾತಾ ಋತಾಯತೇ ಮಧು ಕ್ಷರಂತಿ ಸಿಂಧವಃ


ಹೌದು ಮಳೆಗೂ ಜೇನಿಗೂ ಎಲ್ಲಿಲ್ಲದ ನಂಟಿದೆ. ಮಕರಂದ ಹೀರಲು ಮಳೆಯನ್ನೇ ಧ್ಯಾನಿಸುತ್ತವೆ ಅವು. ಜೇನನ್ನು ಸವಿಯದ ಮನುಷ್ಯನೇ ಇರಲಿಕ್ಕಿಲ್ಲ. ಮಧು ಎನ್ನುವ ಶಬ್ದವೇ ನಮ್ಮ ಮನಸ್ಸನ್ನು ಹಿಡಿದಿಡುತ್ತದೆ.
ಉತ ಸ್ಯಾ ವಾಂ ಮಧುಮನ್ಮಕ್ಷಿಕಾರ ಪನ್ಮದೇ ಸೋಮಸ್ಯೌಶಿಜೋ ಹುವನ್ಯತಿ |
ಯುವಂ ದಧೀಚೋ ಮನ ಆ ವಿವಾಸಥೊಥಾ ಶಿರಃ ಪ್ರತಿ ವಾಮಶ್ವ್ಯಂ ವದತ್ ||
ಎಲೈ ಅಸ್ವಿನೀ ದೇವತೆಗಳೇ, ಮಧುಯುಕ್ತರಾದ ನಿಮ್ಮಿಬ್ಬರನ್ನು ನಮ್ಮ ಮಧುವಿಗಾಗಿ ದುಂಬಿಯು ಸ್ತುತಿಸಿತು. ಉಶಿಜಪುತ್ರನಾದ ಕಕ್ಷೀವಂತನು (ನೀವು) ಸೋಮರಸಪಾನದಿಂದ ಹೃಷ್ಟರಾಗಬೇಕೆಂದು ನಿಮ್ಮನ್ನು ಆಹ್ವಾನಿಸುತ್ತಾನೆ. (ದುಂಬಿಯು ಮಧುವನ್ನು ಕೊಡಲು) ಅಥರ್ವಣ(ದಧೀಚಿ)ಋಷಿಯ ಮನಃ ಪ್ರಸಾದವನ್ನು ಸಂಪಾದಿಸಿದ ಮೇಲೆ ನೀವುಕೊಟ್ಟ ಅಶ್ವದ ಶಿರಸ್ಸಿನಿಂದ, ಆತನು ನಿಮಗೆ ಮಧುವಿದ್ಯೆಯನ್ನು ಉಪದೇಶಿಸಿದರು.
ಒಂದು ಕಾಲದಲ್ಲಿ ಅನಾವೃಷ್ಟಿಯುಂಟಾಗುತ್ತದೆ. ಆಗ ಅನಾವೃಷ್ಟಿಯಿಂದಾಗಿ ಮರಗಳೆಲ್ಲಾ ಒಣಗಿ ಹೋಗುತ್ತವೆ. ಆಗ ಅರಪತ್ ಮತ್ತು ಸರಘಾ ಎನ್ನುವ ಎರಡು ಜೇನು ನೊಣಗಳು ಬಹಳ ಸಂಕಷ್ಟಕ್ಕೀಡಾಗುತ್ತವೆ. ಆಗ ಹೂವುಗಳು ಸಿಕ್ಕದೇ ನೊಂದಿರುವಾಗ ಅವುಗಳು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸುತ್ತವೆ ಅಶ್ವಿನೀ ದೇವತೆಗಳು ಅವುಗಳಿಗೆ ಮಧುವನ್ನು ಒದಗಿಸುತ್ತಾರೆ. ಆಮೇಲಿಂದ ಅವು ಮಧುವನ್ನು ಯಥೇಚ್ಚವಾಗಿ ಕೊಡಲು ಆರಂಭಿಸಿದವು. ಹೀಗೆ ಜೇನು ನೊಣಗಳು ಅಶ್ವಿನೀ ದೇವತೆಗಳನ್ನು ಕುರಿತಾಗಿ ಪ್ರಾರ್ಥಿಸಿದ ಮಂತ್ರ ಇದು. ಈ ಮಧುವಿಗೂ ಮತ್ತು ದಧ್ಯಂಚ್ ಅಥವಾ ದಧೀಚಿಗೂ ಈ ಜೇನು ನೊಣಕ್ಕೂಮತ್ತು ಜೇನುತುಪ್ಪಕ್ಕೂ ಹತ್ತಿರದ ನಂಟನ್ನು ಗಮನಿಸೋಣ.
ಯಾಮಥರ್ವಾ ಮನುಷ್ಪಿತಾ ದಧ್ಯಙ್ ಧಿಯಮತ್ನತ |
ತಸ್ಮಿನ್ಬ್ರಹ್ಮಾಣಿ ಪೂರ್ವಥೇಂದ್ರ ಉಕ್ಥಾ ಸಮಗ್ಮತಾರ್ಚನ್ನನು ಸ್ವರಾಜ್ಯಂ || ಇದು ಋಗ್ವೇದ ಒಂದನೇ ಮಂಡಲದ ಎಂಭತ್ತನೇ ಸೂಕ್ತದಲ್ಲಿ ಬರುವ ಋಕ್ಕು.
ದಧ್ಯಂಚ್ ಅಥವಾ ದಧೀಚಿ ಎನ್ನುವ ಋಷಿ ಪುರಾಣಗಳಲ್ಲಿ ಅತ್ಯಂತ ಪ್ರಸಿದ್ಧನಾದ ಋಷಿ. ಅಥರ್ವ ಎನ್ನುವ ಋಷಿಯ ಮಗನಾಗಿ ಜನಿಸಿದ ಈ ದಧೀಚಿ ಒಂದು ಕಾಲದಲ್ಲಿ ತನ್ನ ಜೀವಿತದಲ್ಲಿ ಅಸುರರು ಈತನನ್ನು ನೋಡಿ ಓಡಿ ಹೋಗಿದ್ದರಂತೆ. ಆತ ಮೃತನಾದ ಬಳಿಕ ಪುನಃ ಅಸುರರು ಉಪಟಳ ಕೊಡಲು ಆರಂಭಿಸುತ್ತಾರೆ. ನಿರ್ಭಯವಾಗಿ ಭೂಮಿಯನ್ನೆಲ್ಲಾ ವ್ಯಾಪಿಸಿ ಬಿಡುತ್ತಾರೆ. ಆಗ ಇಂದ್ರ ಅವರೊಡನೆ ಯುದ್ಧ ಮಾಡಲು ಅಶಕ್ತನಾಗುತ್ತಾನೆ. ಆಗ ಇಂದ್ರ ಈ ದಧ್ಯಂಚನನ್ನು ಹುಡುಕುತ್ತಾನೆ. ಆದರೆ ಋಷಿ ಸಿಕ್ಕುವುದಿಲ್ಲ, ಋಷಿ ಮೃತನಾಗಿದ್ದು ತಿಳಿದು ಬರುತ್ತದೆ. ಆಗ ಇಂದ್ರ ತನ್ನ ಜೊತೆಯಲ್ಲಿರುವವರಲ್ಲಿ ಆ ಋಷಿಯ ದೇಹದ ಯಾವುದಾದರೂ ಅವಶೇಷ ಇದೆಯೇ ಎಂದು ಕೇಳುತ್ತಾನೆ, ಅದಕ್ಕೆ ಅವರು "ದಧೀಚಿಯು ಒಂದಾನೊಂದು ಕಾಲದಲ್ಲಿ ಅಶ್ವಿನೀ ದೇವತೆಗಳಿಗೆ ಮಧುವಿದ್ಯೆಯನ್ನು ಹೇಳಿಕೊಡುತ್ತಾನೆ. ಈ ಮಧುವಿದ್ಯೆ ಅಂದರೆ ಮಧುವೆನ್ನುವ ಪರಬ್ರಹ್ಮ ಸ್ವರೂಪದ ವಿದ್ಯೆಯನ್ನು ಉಪದೇಶಿಸಿದಾಗ ಅದನ್ನು ಯಾರಿಗಾದರೂ ಹೇಳಿದರೆ ನಿನ್ನ ತಲೆ ಕಡಿಯುತ್ತೇನೆ ಎಂದು ಹೇಳಿರುತ್ತಾನೆ. ಆದರೆ ಆತ ಅಶ್ವಿನೀ ದೇವತೆಗಳಿಗೆ ಹೇಳಿಕೊಡುತ್ತಾನೆ. ಆಗ ಅವನ ತಲೆ ಹೋಗುತ್ತದೆ. ಆಗ ಅಶ್ವಿನೀ ದೇವತೆಗಳು ಕುದುರೆಯೊಂದರ ಶಿರವನ್ನು ಜೋಡಿಸುತ್ತಾರೆ. ದಧ್ಯಂಚನ ಕುದುರೆಯಾಕಾರದ ತಲೆ ಮಾತ್ರ ಕುರುಕ್ಷೇತ್ರದ ಸಮೀಪವಿರುವ ಶರ್ಯಣಾವತ್ ಎನ್ನುವ ಒಂದು ಸರೋವರದಲ್ಲಿ ಬಿದ್ದು ತೇಲುತ್ತಿರುವುದನ್ನು ಹೇಳುತ್ತಾರೆ. ಅದನ್ನೇ ತೆಗೆದುಕೊಂಡು ಬರುತ್ತಾರೆ. ಅದರ ಮೂಳೆಯಿಂದಲೇ ಇಂದ್ರ ಅಸುರರನ್ನು ಸಂಹರಿಸುತ್ತಾನಂತೆ. ಒಂಬತ್ತಾವರ್ತಿ ಅಂದರೆ ಎಂಟುನೂರ ಹತ್ತು ಸಲ ಅಸುರರ ಮಾಯಾಜಾಲವನ್ನು ಬೇಧಿಸಿ ಜಯಿಸುತ್ತಾನೆ. ಇಲ್ಲಿ ನಮಗೆ ತಿಳಿಯುವ ಎರಡು ವಿಷಯಗಳಲ್ಲಿ ಮಳೆಗೆ ಸಂಬಂಧಿಸಿ ಜೇನುನೊಣಗಳು ಅಶ್ವಿನೀ ದೇವತೆಗಳ ಮೂಲಕ ಪ್ರಾರ್ಥಿಸುತ್ತವೆ. ಜೇನು ತುಪ್ಪಕ್ಕೆ ಔಷಧೀಯ ಗುಣ ಅಲ್ಲಿಂದ ಸಿಗುವುದು. ಪಂಚ ಅಮೃತಗಳಲ್ಲಿ ಅದಕ್ಕೂ ಸ್ಥಾನ ಸಿಗುತ್ತದೆ. ಹಾಗೆಯೇ ಇಂದಿಗೂ ಜೇನುತುಪ್ಪ ಔಷಧವಗಿಯೇ ಉಪಯೋಗಿಸಲ್ಪಡುತ್ತದೆ. ಹಾಗೆಯೇ 9X90 = 810 ಎನ್ನುವ ಗುಣಕಾರವು ಗೋಚರಿಸುತ್ತದೆ.
ಗೀರ್ವಣಃ ಪಾಹಿ ನಃ ಸುತಂ ಮಧೋರ್ಧಾರಾಭಿರಜ್ಯಸೇ |
ಇಂದ್ರತ್ವಾದಾತಮಿದ್ಯಸಃ || ಮೂರನೇ ಮಂಡಲದ ನಲವತ್ತನೆಯ ಸೂಕ್ತ ಇದು
ಇಲ್ಲಿ ಮಧೋಃ ಧಾರಾಭಿ ಅಜ್ಯಸೇ ಎನ್ನುವ ಶಬ್ದ ಮಧು ಶಬ್ದಕ್ಕೆ ಬಂದಿರುವುದು ಮದಕರವಾದ ಅಂದರಎ ಹರ್ಷವನ್ನು ಉಂಟುಮಾಡುವ ಸೋಮರಸಕ್ಕೆ ಹೇಳಲಾಗಿದೆ. ಮಧು ಎನ್ನುವ ಶಬ್ದಕ್ಕೆ ಸಿಹಿಯಾದ ಮತ್ತು ಹರ್ಷವನ್ನುಂಟುಮಾಡುವ ಎನ್ನುವ ಅರ್ಥವಿದ್ದರೂ ಸೋಮರಸವೂ ಸಹ ಈ ಗುಣಗಳಿಂದ ಕೂಡಿರುವುದಕ್ಕಾಗಿ ಅದನ್ನೂ ಹಾಗೇ ಹೇಳಲಾಗಿದೆ. ಧಾರಾಭಿಃ ಎನ್ನುವಲ್ಲಿ ಧಾರೆಯಂತೆ ಹರಿಯುವ ಎನ್ನುವ ಅರ್ಥ ಧ್ವನಿಸಿದರೂ ಋಗ್ವೇದದಲ್ಲಿ ಸೋಮರಸವನ್ನು ಹಿಂಡುವಾಗಲೂ ಧಾರೆಯಂತೆ ಹರಿಯುತ್ತದೆ. ಜೇನನ್ನು ಹಿಂಡುವಾಗಲೂ ಅದು ಧಾರೆಯಂತೆ ಹರಿಯುತ್ತದೆ. ಸೋಮವೂ ಮತ್ತು ಜೇನು ಎರಡೂ ಸಹ ಮನುಷ್ಯನ ಯಶಸ್ಸನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ವರ್ಧಿಸುತ್ತದೆ. ಮತ್ತು ಮನಸ್ಸಿಗೆ ಅಹ್ಲಾದವನ್ನು ನೀಡುತ್ತದೆ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment