Search This Blog

Saturday 4 August 2018

ಹೇಡಿ ಅಲೆಕ್ಸಾಂಡರ್ - ಅಲೆಕ್ಸಾಂಡರ್ ದಿ ಗ್ರೇಟ್.


ಸ್ವರ್ಗದಿಂದ ಅತ್ಯಂತ ಗೌಪ್ಯವಾಗಿ ಬೆಂಕಿಯೊಂದನ್ನು ಪಡೆದುಕೊಂಡು ಮಾನವನಿಗೆ ನೀಡಿದವನು ಪ್ರಮೀತಿಯಸ್ ಎನ್ನುವವನು. ಇದನ್ನು ಸ್ಯೂಸ್ ಎನ್ನುವ ಗ್ರೀಕರ ದೇವತೆ ಕಂಡುಹಿಡಿದು ಪ್ರಮೀತಿಯಸ್ ಎನ್ನುವವನನ್ನು ಶಿಲೆಯೊಂದಕ್ಕೆ ಕಟ್ಟಿ ಪ್ರತಿ ದಿನ ಪರಭಕ್ಷಕ ಹಕ್ಕಿಯೊಂದು ಅವನ ಪಿತ್ತಜನಕಾಂಗವನ್ನು ತಿಂದುಹಾಕುವಂತಹ ಶಾಶ್ವತ ಶಿಕ್ಷೆಯನ್ನು ನೀಡುತ್ತಾನೆ. ಹೆರಾಕ್ಲೆಸ್ ಅಥವಾ ಹರ್ಕ್ಯುಲೀಸ್ ಅವನನ್ನು ಬಿಡುಗಡೆ ಮಾಡುವವರೆಗೆ, ಪ್ರತಿದಿನ ಪಿತ್ತಜನಕಾಂಗ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿತ್ತು. ಪಿತ್ತಜನಕಾಂಗ ತಿನ್ನುವುದಕ್ಕಾಗಿ ಆ ಹಕ್ಕಿಯು ಬರುತ್ತಿತ್ತಂತೆ. ಈ ಹೆರಾಕ್ಲೆಸ್ ಅಥವಾ ಹರ್ಕ್ಯುಲೀಸ್ ಗ್ರೀಕ್ ಪುರಾಣದ ಮತ್ತು ಇತಿಹಾಸದ ಕಾಲ್ಪನಿಕ ವ್ಯಕ್ತಿ. ಇನ್ನೊಬ್ಬ ದಿಯೊನೀಸಸ್ ಕೂಡ ಒಬ್ಬ ಕಾಲ್ಪನಿಕ ವ್ಯಕ್ತಿ. ಹರ್ಕ್ಯುಲೀಸ್ ಅಂತೂ ಗ್ರೀಕ್ ಜನರ ಆದರ್ಶದ ಮತ್ತು ಅನೇಕ ಸಾಹಸಗಳನ್ನು ಮೆರೆದ ದೇವತಾಪುರುಷನಾಗಿದ್ದ. ದಿಯೋನೀಸಸ್ ಒಬ್ಬ ಸೌಂದರ್ಯೋಪಾಸಕ ಶೃಂಗಾರದ ಅಧಿ ದೇವತೆ, ಮದ್ಯ ಮತ್ತು ರಂಗ ಈತನ ದೈವತ್ವವನ್ನು ಸಾಕಾರಗೊಳಿಸಿತ್ತು. ಈತನನ್ನು ಬ್ಯಾಕಸ್ ಎಂದು ರೋಮ್ ಜನರೂ ಪೂಜಿಸುತ್ತಿದ್ದರು. ಇವುಗಳ ಅಸ್ತಿತ್ವದ ಕುರಿತಾಗಿ ಅಥವಾ ಈ ದೇವತೆಗಳ ನಿರಾಕರಣೆಯೂ ಇಲ್ಲಿ ಅಪ್ರಸ್ತುತ. ಆದರೆ ಈ ದೇವತೆಗಳು ಭಾರತವನ್ನು ತಮ್ಮ ಅಧೀನದಲ್ಲಿಟ್ಟು ಕೊಂಡಿದ್ದವು ಅಥವಾ ಭಾರತದ ಮೇಲೆ ಯುದ್ಧ ಸಾರಿದ್ದವು ಎನ್ನುವುದು ಮಾತ್ರ ಸತ್ಯಕ್ಕೆ ಬಹುದೂರ ಎನ್ನಿಸಿ ಬಿಡುತ್ತದೆ. ಇಲ್ಲಿ ನಾನು ಹೇಳ ಹೊರಟಿರುವುದು ಇವೆರಡನ್ನೂ ಮೀರಿದ ಇನ್ನೊಂದು ವಿಷಯ. ಈ ಇಬ್ಬರೂ ದೇವತೆಗಳು ಯುದ್ಧ ಮಾಡಿಲ್ಲ ಹಾಗೂ ಭಾರತಕ್ಕೆ ಬಂದಿಲ್ಲ ಎಂದಾದಮೇಲೆ ಭಾರತಕ್ಕೆ ಬರಲು ಪ್ರಯತ್ನ ಪಟ್ಟವ ಅಲೆಕ್ಸಾಂಡರ್ ಮಾತ್ರ !
ಆದರೆ ಅಲೆಕ್ಸಾಂಡರ್ ಸಹ ಭಾರತದ ಮೇಲೆ ದಾಳಿ ಮಾಡಲಿಲ್ಲ. ಆತ ಸಿಂಧೂ ನದಿಯನ್ನೂ ದಾಟಿ ಬಂದದ್ದಕ್ಕೆ ಪ್ರಬಲವಾದ ಆಧಾರಗಳೇ ಸಿಗುವುದಿಲ್ಲ. ಆತ ವಿತಸ್ತಾ ನದಿಯ ತನಕ ಬಂದಿದ್ದ ಎನ್ನುವುದಾದರೂ ಸಹ ಅದು ಊಹೆ ಅನ್ನಿಸಿ ಬಿಡುತ್ತದೆ. ಆತ ಭಾರತೀಯ ರಾಜರ ಶೌರ್ಯವನ್ನು ತನ್ನವರ ಮೂಲಕ ತಿಳಿದುಕೊಂಡು ಬೆವರಿದ್ದಂತೂ ನಿಜ. ಅಲ್ಲಿಂದಲೆ ಹಿಂದೆ ಸರಿದಾಗಿತ್ತು. ಹಾಗೆ ಆತ ಧಾಳಿ ನಡೆಸಿದ್ದರೆ ಅಂತಹ ದೊಡ್ಡ ದಾಳಿ ಅದಾಗಿರುತ್ತಿದ್ದರೆ ಅದು ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆಯಮೇಲೆ ಅಗಾಧವಾದ ಪರಿಣಾಮ ಬೀರುತ್ತಿತ್ತು ಹಾಗಾಗಲೇ ಇಲ್ಲ.
ದಾಳಿಯ ಕುರಿತಾದ ಮಾಹಿತಿ ಪುರಾಣಗಳಲ್ಲಿಯೂ ಇಲ್ಲ ಗರ್ಗ ಸಂಹಿತೆಯಲ್ಲಿ ಯವನರ ಉಲ್ಲೇಖ ಸಿಕ್ಕಿದರೂ ಅದು ಅಲೆಕ್ಸಾಂಡರ್ ಕುರಿತಾಗಿಯಲ್ಲ. ಪುಷ್ಯಮಿತ್ರಶುಂಗನ ಮೊಮ್ಮಗ ಯವನರ ಸೈನ್ಯದ ಜೊತೆ ಹೋರಾಡಿದ್ದು ಕಾಳಿದಾಸನ ಮಾಳವಿಕಾಗ್ನಿಮಿತ್ರದಲ್ಲಿ ಉಲ್ಲೇಖ ಸಿಗುತ್ತದೆ. ಆದರೆ ಅದೂ ಸಹ ಅಲೆಕ್ಸಾಂಡರನ ದಾಳಿಯದ್ದಲ್ಲ. ಇನ್ನು ಹೇಲಿಯೋಡೋರಸ್ ನ ಶಾಸನ ವಿದಿಶಾದ ಬೇಸ್ ನಗರದಲ್ಲಿದೆ ಅಲ್ಲಿ ಇದು  ಬ್ರಾಹ್ಮಿ ಲಿಪಿಯಲ್ಲಿದ್ದು  ಹೆಲಿಯೋಡೋರಸ್ ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ  ಕುರಿತಾಗಿದೆ.
ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನ ಹತ್ತಿರ ಅಂಟಾಲಿಕಿಡಾಸ್ ಮಹಾರಾಜನಿಂದ ಕಳುಹಿಸಲ್ಪಟ್ಟವನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಮಗನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು.ಎನ್ನುವ ವಾಖ್ಯವಿದೆ. ಇಲ್ಲಿ ಹೇಲಿಯೋಡೋರಸ್ ಒಬ್ಬ ಭಾರತೀಯ ಯವನನಾಗಿ ಕಾಣಿಸಿಕೊಂಡಿದ್ದಾನೆಯೇ ಹೊರತು ಅಲೆಕ್ಸಾಂಡರ್ ನ ಅನುಯಾಯಿಯಾಗಿ ಅಲ್ಲ. ಹೀಗಿರುತ್ತಾ ಅಂದಿನ ಸಮಕಾಲೀನ ಸಾಹಿತ್ಯ ಕೂಡಾ ಅಲೆಕ್ಸಾಂಡರ್ ನನ್ನು ಉಪೇಕ್ಷಿಸಿದ್ದನ್ನು ಕಂಡರೆ ಅಥವಾ ಅವನ ಕುರಿತು ಯಾವುದೇ ವಿಷಯವನ್ನೂ ಹೇಳದಿರುವುದನ್ನು ಸೂಕ್ಷ್ಮವಾಗಿನೋಡಿದರೆ ಒಂದೋ ಅಲೆಕ್ಸಾಂಡರ್ ಅಂತಹ ಪ್ರಬಲ ದಾಳಿ ಮಾಡಲೇ ಇಲ್ಲ. ಅಲೆಕ್ಸಾಂಡರ್ ಪ್ರಾಯಶಃ ಸಿಂಧೂ ನದಿಗಿಂತ ಆಚೆಗಿನ ಚಿಕ್ಕ ಚಿಕ್ಕ ರಾಜರನ್ನು ಗೆದ್ದ ನಂತರ ಇಡೀ ಭಾರತದಲ್ಲಿ ಏಕ ಚಕ್ರಾಧಿಪತ್ಯವಿಲ್ಲದಿದ್ದರೂ ಪರಕೀಯರ ಆಕ್ರಮಣವಾದಾಗ ಸಾಹಸಿಗರಾಗಿದ್ದ ನಮ್ಮವರು ಅಲೆಕ್ಸಾಂಡರ್ ನನ್ನು ಹೊಡೆದುರುಳಿಸುವುದು ಖಚಿತವೆಂದು ಮನಗಂಡು ಆತ ಅಲ್ಲಿಂದಲೇ ಹಿಂದಿರುಗಿದ.
ಆದರೆ ಯವನರ ಉಪಟಳವಂತೂ ಇದ್ದದ್ದನ್ನು ವೇಂಕಟಾಧ್ವರಿಯ ವಿಶ್ವಗುಣಾದರ್ಶಚಂಪೂ ಕಾವ್ಯದಲ್ಲಿ ಸಿಗುತ್ತದೆ."ಹೂಣಾಃ ಕರುಣಾಹೀನಾಸ್ತೃಣವತ್ ಬ್ರಾಹ್ಮಣಗಣಂ ನ ಗಣಯಂತಿ" ಎಂದು ಬರೆದು ಅವರ ಅನಾಚಾರಗಳ ಬಣ್ಣನೆಯಿಂದ ಕಟ್ಟಿಕೊಟ್ಟಿದ್ದಾನೆ. ಇದು ಹದಿನೇಳನೆ ಶತಮಾನದ ಆಸುಪಾಸಿನದ್ದಾದರೂ ನಂಬಲರ್ಹವಾಗಿದೆ. ಇನ್ನು ಭಾರತೀಯರ ಸಾಮರ್ಥ್ಯವನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಮಹಾ ರಾಜಾಧಿರಾಜರು ತಮ್ಮ ಪ್ರಜೆಗಳಲ್ಲಿ ಹೇಗಿನ ಭಾವನೆ ಇಟ್ಟಿದ್ದರು ಎನ್ನುವುದಕ್ಕೆ ಮಹಾಭಾರತದ ದ್ರೋಣ ಪರ್ವದ ಒಂದು ಕಥೆ ಮನದಲ್ಲಿ ಮೂಡುತ್ತದೆ. ಅಂಗದೇಶದ ಅಂಗನೆಂಬ ರಾಜನಿಗೆ ಸುನಿಧೆ ಎನ್ನುವ ಮಡದಿ. ಈ ಅಂಗ ಮತ್ತು ಸುನಿಧೆಯರಿಗೆ ಮಗನಾಗಿ ಹುಟ್ಟುವವ ವೇನ ಎನ್ನುವವ. ಈತ ಪರಮ ನಾಸ್ತಿಕಧರ್ಮಿಯಾಗಿದ್ದ. ಪ್ರಜಾಪೀಡಕನಾಗಿ ವರ್ತಿಸುತ್ತಿದ್ದ. ಈತನ ಉಪಟಳವನ್ನು ಸಹಿಸಿಕೊಳ್ಳಲು ಅಸಾಧ್ಯವಾದಾಗ ಆತನ ವಿರುದ್ಧ ಪ್ರಜೆಗಳೆಲ್ಲಾ ಬಂಡಾಯವೇಳುತ್ತಾರೆ. ಆತನನ್ನು ರಾಜಾಧಿಕಾರದಿಂದ ಇಳಿಸುತ್ತಾರೆ. ಆದರೆ ಅರಾಜಕವಾದ ರಾಜ್ಯ ಸುಭಿಕ್ಷವಾಗಿರದೇ ಪ್ರಜೆಗಳಿಗೆ ಅರಾಜಕತೆ ಬೇಡ ಎನ್ನುವ ಉದ್ದೇಶದಿಂದ ಆತನನ್ನೇ ಪುನಃ ರಾಜನನ್ನಾಗಿ ಅಂಗೀಕರಿಸುತ್ತಾರೆ. ಆದರೆ ಈತ ತನ್ನ ಕ್ರೌರ್ಯವನ್ನು ಬಿಡುವುದಿಲ್ಲ ಆಗ ಋಷಿಗಳೆಲ್ಲಾ ಸೇರಿ ಆತನನ್ನೇ ಕೊನೆಗಾಣಿಸಿ ಆತನ ಮಗ ಪೃಥುವನ್ನು ರಾಜನನ್ನಾಗಿ ಮಾಡುತ್ತಾರಂತೆ. ಆಮೇಲೆ ಭೂಮಿಯಲ್ಲೆ ಪುನಃ ಸಸ್ಯಗಳೆಲ್ಲಾ ಬೆಳೆದು ಸುಭಿಕ್ಷವುಂಟಾದಾಗ ಈ ಭೂಭಾಗಕ್ಕೆ ಪೃಥ್ವೀ ಎನ್ನುವ ಹೆಸರಾಯಿತು ಎನ್ನಲಾಗುತ್ತದೆ. ಇಲ್ಲಿ ನಾವು ಭಾರತೀಯರ ಐಕ್ಯಮತ್ಯವನ್ನು ಗಮನಿಸಬೇಕು. ರಾಜ ಕೆಲವೊಮ್ಮೆ ಪ್ರಜೆಗಳಲ್ಲಿನ ಮಹತ್ವವನ್ನರಿತು ತನ್ನ ಸ್ಥಾನ ಮರೆತು ಪಾಲು ನೀಡಿದ್ದು ಉಂಟು. ಆದರೆ ರಾಜನ ಸ್ಥಾನಕ್ಕೆ ಪ್ರಜೆಗಳು ಕೊಡುತ್ತಿದ್ದ ಮರ್ಯಾದೆ ಅಷ್ಟು ಭದ್ರವಾಗಿತ್ತು ಹೀಗಿದ್ದಾಗ ಯಾವ ಅಲೆಕ್ಸಾಂಡರ್ ತಾನೆ ಇಲ್ಲಿ ಬಂದು ಸಾಮ್ರಾಟನಾಗಲು ಸಾಧ್ಯ ? ಇದು ಭಾರತೀಯತೆ. ಎಲ್ಲಿಂದಲೋ ಈ ದೇಶದ ಭೂಭಾಗದ ಮಣ್ನಿನ ಸ್ಪರ್ಶವನ್ನೂ ಮಾಡಲು ಹೆದರಿದ ಅಲೆಕ್ಸಾಂಡರ್ ನನ್ನು ವಿದ್ಯಾರ್ಥಿಗಳಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಅಂತ ಕಲಿಸುವುದು ಸರಿಯೇ ?
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment