Search This Blog

Sunday 26 August 2018

ಯಾರೀತ ಗಣಾನಾಂ ತ್ವಾ ಗಣಪತಿಂ ??


ಒಮ್ಮೆ ಪಾರ್ವತಿ ತನ್ನ ಮೈಗೆ ಅಂಗರಾಗವನ್ನು ಹಚ್ಚಿಕೊಳ್ಳುತ್ತಿದ್ದಳು. ಅಂಗರಾಗ ಬಳಿದುಕೊಂಡಾದ ಮೇಲೆ ನೆಲದ ಮೇಲೆ ಬಿದ್ದಿದ್ದ ಅಂಗರಾಗವನ್ನೆಲ್ಲಾ ಒಟ್ಟುಗೂಡಿಸುತ್ತಾಳೆ. ಆ ಒಟ್ಟುಗೂಡಿದ ಅಂಗರಾಗದಿಂದ ಒಂದು ಪುರುಷಾಕಾರ ಮಾಡುತ್ತಾಳೆ. ಅದು ಆನೆಯ ಆಕಾರದಂತೆ ಕಾಣುತ್ತದೆ ಅದನ್ನು ಗಂಗೆಯಲ್ಲಿ ಬಿಡುತ್ತಾಳೆ. ಗಂಗೆ ಅದನ್ನು "ಪುತ್ರ" "ಮಗೂ" ಅನ್ನುತ್ತಾಳಂತೆ ಮತ್ತು ಅದಕ್ಕೆ ಜೀವಕಳೆ ಇದ್ದದ್ದು ಗಮನಿಸಿ ಹಿಡಿದು ಪಾರ್ವತಿಗೊಪ್ಪಿಸುತ್ತಾಳೆ. ಅಂದಿನಿಂದ ಅದಕ್ಕೆ “ದ್ವೈಮಾತುರ” ಎನ್ನುವ ಹೆಸರಾಗುತ್ತದೆ. ಆಮೇಲೆ ಈತನಿಗೆ ವಿನಾಯಕ ಎಂದು ನಾಮಕರಣ ಮಾಡಲಾಯಿತಂತೆ. ವಿನಾಯಕ ಶಿವನ ಗಣಗಳಿಗೆ ಅಧಿಪತಿಯ ಸ್ಥಾನವನ್ನು ದೊರಕಿಸಿ ಕೊಡುದುದರಿಂದ ಮುಂದೆ ಗಣಪತಿಯಾಗುತ್ತಾನೆ ಎಂದು ಮತ್ಸ್ಯ ಮತ್ತು ಸ್ಕಾಂದಪುರಾಣಗಳು ಹೇಳುತ್ತವೆ.
ಲಿಂಗಪುರಾಣ ಮತ್ತು ಬ್ರಹ್ಮವೈವರ್ತಕ ಪುರಾಣದ ಗಣಪತಿ ಖಂಡದಲ್ಲಿ ಹೇಳುವಂತೆ ದಕ್ಷಯಜ್ಞ ಧ್ವಂಸ ಮಾಡುತ್ತಾ ವೀರಭದ್ರನು ವಿನಾಯಕನ ತಲೆಯನ್ನು ಕಡಿಯುತ್ತಾನೆ. ಆಗ ಬ್ರಹನೇ ಮೊದಲಾದವರು ವಿಘ್ನ ವಿನಾಯಕನ ಬದುಕಿಸು ಎಂದು ಶಿವನಲ್ಲಿ ಮೊರೆ ಇಡುತ್ತಾರೆ, ಆಗ ಶಿವ ಉತ್ತರದಿಕ್ಕಿನಲ್ಲಿ ತಲೆ ಹಾಕಿ ಮಲಗಿದ ಆನೆಯ ತಲೆಯನ್ನು ತಂದು ಸೇರಿಸಿ ಎಂದು ಹೇಳುತ್ತಾನೆ ಅಂತೆಯೇ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ ಆನೆಯ ಮುಖವನ್ನು ಸೇರಿಸಿದಾಗ ಜೀವ ತಳೆಯುತ್ತನೆ ಅಂದಿನಿಂದ ಆತ ಗಜಾನನ ಎಂದು ಕರೆಯಲ್ಪಡುತ್ತಾನೆ ಎನ್ನುತ್ತದೆ.
ಸ್ಯಮಂತಖೋಪಾಖ್ಯಾನದಲ್ಲಿ ಗಣಪತಿ ಮೂಷಕವಾಹನನಾಗಿ ಹೋಗುವುದನ್ನು ಗಮನಿಸಿದ ಚಂದ್ರ ಅವಮಾನಿಸುತ್ತಾನೆ ಆಗ ಇಂದ್ರನಿಗೆ ಶಾಪಕೊಡುವ ಪ್ರಸಂಗವೂ ಬರುತ್ತದೆ. ಇಲ್ಲೆಲ್ಲಾ ಅಂದರೆ ಪುರಾಣಾದಿಗಳಲ್ಲಿ ಗಣೇಶ ಎಲ್ಲ ಕಡೆ ಕಾಣಿಸಿಕೊಳ್ಳುತ್ತಾನೆ. ಆದರೆ ವೇದಗಳಲ್ಲಿ ಈತನ ಅಸ್ತಿತ್ವವೇ ಇಲ್ಲ. ಆದರೆ ಗಣಪತಿಯ ಕುರಿತು ಮಂತ್ರಗಳು ಋಕ್ ಯಜುರ್ವೇದ ಸಾಮವೇದಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ಅಲ್ಲಿನ ಗಣಪತಿ ಬೇರೆಯೇ ಅದನ್ನು ಮುಂದೆ ವಿವೇಚಿಸಿದ್ದೇನೆ.
ವ್ಯಕೃಣೋತ ಚಮಸಂ ಚತುರ್ಧಾ ಸಖೇ ವಿ ಶಿಕ್ಷೇತ್ಯಬ್ರವೀತ |
ಅಥೈತ ವಾಜಾ ಅಮೃತಸ್ಯ ಪಂಥಾಂ ಗಣಂ ದೇವಾನಾಮೃಭವಃ ಸುಹಸ್ತಾಃ || ನಾಲ್ಕನೇ ಮಂಡಲದ ಮೂವತ್ತೈದನೇ ಸೂಕ್ತ.
ಎಲೈ ಋಭುಗಳೇ ಒಂದಾಗಿದ್ದ ಚಮಸ ಪಾತ್ರೆಯನ್ನು ನಾಲ್ಕಾಗುವಂತೆ ನೀವು ಮಾಡಿದಿರಿ. ಅನಂತರ ಅಗ್ನಿಯನ್ನು ಕುರಿತು, ಎಲೈ ಮಿತ್ರನಾದ ಅಗ್ನಿಯೇ ಸೋಮಪಾನಕ್ಕೆ ಅನುಜ್ಞೆಯನ್ನು ಕೊಡು." ಎಂದು ಕೇಳಿದಿರಿ. ಅಗ್ನಿಯು ಅನುಜ್ಞೆಯನ್ನು ಕೊಟ್ಟೊಡನೆಯೇ ಎಲೈ ವಾಜಾ ಮತ್ತು ಋಭುಗಳೇ ನೀವು ಶ್ರೇಷ್ಠವಾದ ಕರ್ಮಕ್ಕೆ ಯೋಗ್ಯವಾದ ಹಸ್ತವುಳ್ಳವರಾಗಿ ಶಾಶ್ವತವಾದ ಸ್ವರ್ಗದ ದಾರಿಯನ್ನು ಹೋಗಿ ಸೇರಿದಿರಿ. ಮತ್ತು ಇಂದ್ರಾದಿ ದೇವತೆಗಳ ಸಮೂಹವನ್ನು ಹೋಗಿ ಸೇರಿದಿರಿ. ಇಲ್ಲಿ ಗಣ ಎನ್ನುವುದು ಸಮೂಹವನ್ನು ಸೂಚಿಸುತ್ತದೆ.
ಅಭ್ರಪ್ರುಷೋ ನ ವಾಚಾ ಪ್ರುಷಾ ವಸು ಹವಿಷ್ಮಂತೋ ನ ಯಜ್ಞಾ ವಿಜಾನುಷಃ |
ಸುಮಾರುತಂ ನ ಬ್ರಹ್ಮಾಣಮರ್ಹಸೇ ಗಣಮಸ್ತೋಷ್ಯೇಷಾಂ ನ ಶೋಭಸೇ || ಹತ್ತನೇ ಮಂಡಲದ ೭೭ನೇ ಸೂಕ್ತದಲ್ಲಿ
ನಮ್ಮ ಸ್ತುತಿಯಿಂದ ಪ್ರೀತರಾದ ಮರುತ್ತುಗಳು ಮೇಘವು ಸುರಿಸುವ ವೃಷ್ಟಿಯಂತೆ ಧನವನ್ನು ಸುರಿಸುತ್ತಾರೆ. ಹವಿಸ್ಸುಗಳಿಂದ ತುಂಬಿದ ಯಜ್ಞಗಳಂತೆ ಉತ್ಪಾದಕರಾಗುತ್ತಾರೆ. ಉತ್ತಮರಾದ ಮರುತ್ತುಗಳ ಮಹತ್ವದಿಂದ ಕೂಡಿದ ಸಂಘವನ್ನು ಅವರ ಯೋಗ್ಯತೆಗೆ ಅನುಗುಣವಾಗಿ ನಾನು ಸ್ತುತಿಸಿಲ್ಲ. ಅವರ ಘನತೆಗೆ ತಕ್ಕಂತೆ ಸ್ತುತಿಸಿಲ್ಲ. ಇಲ್ಲಿ ಬ್ರಹ್ಮಾಣ ಎಂದರೆ ಮಹತ್ವದ “ಗಣ” ಎಂದರೆ ಸಂಘವನ್ನು ಹೇಳಿದೆ.
ಅನವದ್ಯೈರಭಿದ್ಯುಭಿರ್ಮಖಃ ಸಹಸ್ವದರ್ಚತಿ |
ಗಣೈರಿಂದ್ರಸ್ಯ ಕಾಮೈಃ || ಇದು ಒಂದನೇ ಮಂಡಲದ ಏಳನೇ ಸೂಕ್ತ
ಮರುದ್ಗಣಗಳು ದೋಷರಹಿತರಾದವರು. ಸ್ವರ್ಗಲೋಕಕ್ಕೆ ಹೋಗಲು ಸಮರ್ಥರಾದವರು. ಇಷ್ಟಫಲ ಪ್ರಾಪ್ತಿಗಾಗಿ ಜನರು ಇವರನ್ನು ಸ್ತುತಿಸುವರು. ಇಂತಹ ಮರುದ್ಗಣಗಳಿಂದ ಕೂಡಿದ ಇಂದ್ರನಿಗೆ ನಾವು ಮಾಡುತ್ತಿರುವ ಈ ಯಜ್ಞವು ಪೂಜಾದಿಗಳಿಂದ ತೃಪ್ತಿ ಪಡಿಸಿ ಅವನನ್ನು ಬಲಶಾಲಿಯಾಗುವಂತೆ ಮಾಡಲಿ .
ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀಮುಪಮಶ್ರವಸ್ತಮಂ |
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದ ಸಾದನಂ ||
ಹೇ ಬ್ರಹ್ಮಣಸ್ಪತಿಯೇ, ಪ್ರವೃದ್ಧವಾದ ಕರ್ಮಗಳಿಗೆ ಪ್ರಭುವಾದವನೂ, ದೇವ ಗಣಗಳಿಗೆ ಸಂಬಂಧಿಸಿದವನೂ, ಸ್ವಗಣಕ್ಕೆ ಒಡೆಯನೂ, ಕ್ರಾಂತದರ್ಶಿಗಳಾದ ಕವಿಗಳಲ್ಲಿ ಅತ್ಯುತ್ತಮವಾದ ಕವಿಯಾದವನೂ, ಅಪರಿಮಿತವಾದ ಅನ್ನವುಳ್ಳವನೂ, ಶ್ಲಾಘ್ಯರ ನಡುವೆ ಪ್ರಕಾಶಮಾನನಾಗಿ ಕಾಣಿಸಿಕೊಳ್ಳುವವನೂ, ಮಂತ್ರಗಳಿಗೆ ಒಡೆಯನಾದ ನಿನ್ನನ್ನು ಈ ಕರ್ಮ ನಿಮಿತ್ತವಾಗಿ ಕರೆಯುತ್ತೇವೆ. ನಮ್ಮ ಸ್ತುತಿಗಳನ್ನು ಕೇಳುತ್ತಾ ನಿನ್ನ ರಕ್ಷಣೆಗಳೊಡನೆ ಯಜ್ಞ ಗೇಹಕ್ಕೆ ಬಂದು ಕುಳಿತುಕೋ ಎನ್ನುವುದು ಈ ಋಕ್ಕಿನ ಅರ್ಥ.ಎರಡನೇ ಮಂದಲದ ೨೩ನೇ ಋಕ್ಕು ಇದು. ಇಲ್ಲಿ ಇಡೀ ಸೂಕ್ತದಲ್ಲಿ ಬ್ರಹ್ಮಣಸ್ಪತಿ ಮತ್ತು ಬ್ರಹಸ್ಪತಿಯನ್ನು ಕುರಿತಾಗಿ ಹೇಳಿರುವುದು. ಈ ಬ್ರಹ್ಮಣಸ್ಪತಿ ಮತ್ತು ಬೃಹಸ್ಪತಿ ಎನ್ನುವ ದೇವತೆಗಳು ಯಾರೆನ್ನುವುದು ಸ್ವಲ್ಪ ತಿಳಿದುಕೊಳ್ಳಬೇಕು.
ಇಲ್ಲಿ ಬ್ರಹ್ಮ ಎನ್ನುವ ಶಬ್ದಕ್ಕೆ ಅನ್ನ ಅಥವಾ ಆಹಾರ, ಮತ್ತು ಧನ, ಸ್ತೋತ್ರ ಎನ್ನುವ ಅರ್ಥವನ್ನು ಯಾಸ್ಕ ಮಹರ್ಷಿ ತಮ್ಮ ನಿರುಕ್ತದಲ್ಲಿ ಕೊಟ್ಟಿದ್ದಾರೆ. "ಬ್ರಹ್ಮಣಸ್ಪತಿರ್ಬ್ರಹ್ಮಣಃ ಪಾತಾವಾ ಪಾಲಯಿತಾವಾ" ಎನ್ನುವಲ್ಲಿ ಬೃಹ್ಮಣಸ್ಪತಿಗಳು ಪಾತಾ ಎಂದರೆ ಅನ್ನಕ್ಕೆ ಒಡೆಯ, ಸ್ವಾಮಿ ಎನ್ನುವುದು ಅರ್ಥವಾದರೆ ಬ್ರಹ್ಮಣಸ್ಪತಿ ಎನ್ನುವುದು ಅಧಿಪತಿಗೆ.
ನಿರುಕ್ತದ 10-13 ರ ಅಭಿಪ್ರಾಯದಂತೆ ಬ್ರಹ್ಮಣಸ್ಪತಿಯು ಸೂರ್ಯನ ಪ್ರಕಾಶದ ಸಹಾಯದಿಂದ ಮೋಡಗಳು ಸಮುದ್ರದ ನೀರನ್ನು ಶೇಖರಿಸಿಕೊಂಡು ಭೂಮಿಯ ಮೇಲೆ ಮಳೆಯಾಗಿ ಬೀಳುವಂತೆ ಮಾಡುವುದರಿಂದ ಮಳೆಯಿಂದ ಗಿಡಗಳು ಬೆಲೆಯುತ್ತವೆ ವನಸ್ಪತಿಗಳ ಉತ್ಪತ್ತಿಯಾಗುತ್ತದೆ. ಈ ವನಸ್ಪತಿಗಳಿಂದ ಅನ್ನಾದಿ ಆಹಾರಗಳು ಲಭಿಸುತ್ತವೆ. ಆದುದರಿಂದ ಬ್ರಹ್ಮಣಸ್ಪತಿ ಎನ್ನುವವನು ಅನ್ನಾದಿ ಆಹಾರಗಳಿಗೆ ಅಧಿಪತಿ ಎನ್ನಿಸಿಕೊಳ್ಳುತ್ತಾನೆ. ಬ್ರಹ್ಮ ಎನ್ನುವ ಶಬ್ದಕ್ಕೆ ಧನ ಮತ್ತು ಸ್ತೋತ್ರ ಎನ್ನುವ ಅರ್ಥವಿರುವುದಕ್ಕಾಗಿ ಬ್ರಹ್ಮಣಸ್ಪತಿಯು ಧನ ಮತ್ತು ಮಂತ್ರಗಳೀಗೂ ಅಧಿಪತಿ ಎನ್ನಬಹುದಾಗಿದೆ ಎನ್ನುವುದು ಯಾಸ್ಕರ ಅಭಿಪ್ರಾಯ.
ಬ್ರಹ್ಮಣಸ್ಪತಿಯು ಪಾತಾ ಪಾಲಯಿತಾ ಎಂದು ನಿರುಕ್ತದಲ್ಲಿ ಹೇಳಿದ್ದರೂ ಬೃಹಸ್ಪತಿಯ ಕುರಿತಾಗಿ ಆತ ದೇವತೆಗಳಿಗೆ ಪುರೋಹಿತನಾಗಿ ಯಜ್ಞಕರ್ಮಗಳನ್ನು ನೆರವೇರಿಸುವುದರಿಂದ ಮತ್ತು ಮನುಷ್ಯರಿಗೆ ಅವಶ್ಯಕವಾದ ಮಳೆಯನ್ನು ಉಂಟುಮಾಡುವುದರಿಂದ ಬೃಹಸ್ಪತಿ ಎನ್ನುವ ಹೆಸರು ಸಮಂಜಸ ಎನ್ನಲಾಗಿದೆ. ಮಳೆ ಮತ್ತು ಪೌರೋಹಿತ್ಯ ಎರಡೂ ಬೃಹಸ್ಪತಿಯಿಂದ ನೆರವೇರುತ್ತದೆ.
ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಕಥೆಯೊಂದರಲ್ಲಿ ಶಂತನು ಮಾಡಿದ ಯಜ್ಞದಲ್ಲಿ ಬ್ರಹ್ಮನೆಂಬ ಪುರೋಹಿತನಾಗಿ ವಾಕ್ಯರೂಪವಾದ ಮಂತ್ರವನ್ನು ಆತನಿಗೆ ಉಪದೇಶಿಸಿದ ಆ ಮಂತ್ರವನ್ನು ಯಜಮಾನನು ಹೇಳಿದ್ದರಿಂದ ಮಳೆ ಬಂದಿತು ಎನ್ನುವುದಾಗಿ ಹೇಳಲ್ಪಟ್ಟಿದೆ.
ತೈತ್ತಿರೀಯ ಸಂಹಿತೆಯಲ್ಲಿ "ಬ್ರಹ್ಮ ವೈ ದೇವಾನಾಂ ಬೃಹಸ್ಪತಿರ್ಬ್ರಹ್ಮಣೈವೈನಮಭಿಚರತಿ" ದೇವತೆಗಳು ಮಾಡಿದ ಯಜ್ಜದಲ್ಲಿ ಬೃಹಸ್ಪತಿಯು ಬ್ರಹ್ಮನೆಂಬ ಋತ್ವಿಜನಾಗಿ ಯಜ್ಞವನ್ನು ನೆರವೇರಿಸುತ್ತಾನೆ. ಎಂದು ಹೇಳಿದೆ ಹೀಗೆ ಬ್ರಹ್ಮಣಸ್ಪತಿ ಮತ್ತು ಬೃಹಸ್ಪತಿಯನ್ನು ಉಲ್ಲೇಖಿಸಿದ ಮಂತ್ರವಿದು ಇಲ್ಲಿನ ಗಣಾನಾಂ ತ್ವಾ ಗಣಪತಿಂ ಅಂದರೆ ಬ್ರಹ್ಮಣಸ್ಪತಿಯ ಗಣಗಳನ್ನು ಅಥವಾ ಸಮೂಹವನ್ನು ನಿರ್ದೇಶಿಸಿ ಹೇಳಲಾಗಿರುವುದು. ಇದು ಋಷ್ಟಿಷೇಣ ಎನ್ನುವ ರಾಜನ ಕಥೆಯನ್ನು ಉಲ್ಲೇಖಿಸುತ್ತದೆ. ಇಲ್ಲಿ ಗಣಪತಿ ಎಂದಾಕ್ಷಣ ನಮಗೆ ವಿನಾಯಕ, ವಿಘ್ನರಾಜನ ಕುರಿತೆಂದು ಭಾವಿಸಿಕೊಳ್ಳುತ್ತೇವೆ ಆದರೆ ವೇದಗಳಲ್ಲಿ ಗಣಪತಿ ಎನ್ನುವವನು ಸಮೂಹ ಒಂದರ ಅಧಿಪತಿ ಎನ್ನಿಸಿಕೊಳ್ಳುತ್ತಾನೆ. ಶಿವನ ಮಗ ಗಣಪತಿ ಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ.
ಆದರೆ ಈ ಮಂತ್ರ ಮತ್ತು ಹತ್ತನೇ ಮಂಡಲದ ನಿ ಷು ಸೀದ ಗಣಪತೇ ಗಣೇಷು ಎನ್ನುವ ಮಂತ್ರಗಳನ್ನು ಗಣಪತಿಯ ಕುರಿತಾಗಿ ಹೇಳುವುದು ವಾಡಿಕೆಯಾಗಿದೆ. ಇದು ಇನ್ನೂ ಹಲವು ಇಂತಹದ್ದೇ ವಾಡಿಕೆಗಳಿವೆ. ಅವುಗಳನ್ನು ಇನ್ನೊಮ್ಮೆ ಚರ್ಚಿಸುವೆ. ಗಣಾನಾಂ ... ಎನ್ನುವ ಈ ಮಂತ್ರವು ಗೃತ್ಸಮದನದ್ದು, ಇಲ್ಲಿ ಬ್ರಹ್ಮಣಸ್ಪತಿಯು ಮಂತ್ರ ದೇವತೆಯು.
#ಶಿಲೆಗಳಲ್ಲಡಗಿದ_ಸತ್ಯ


No comments:

Post a Comment