Search This Blog

Thursday 2 August 2018

ಲಲನಾಲಲನೇನಾಲಂ ಲೀಲಾಲಾನೇನ ಲಾಲಿನಾ - "ಮಾಘ"


ಘೂರ್ಜರ ದೇಶದ ರಾಜಧಾನಿಯಾದ ಮಾಲವವನ್ನು ಶ್ರೀವರ್ಮಲನೆನ್ನುವ ರಾಜನು ಆಳುತ್ತಿದ್ದನು. ಈ ಬ್ರಾಹ್ಮಣನಿಗೆ ಸುಪ್ರಭನೆನ್ನುವ ಬ್ರಾಹ್ಮಣನೊಬ್ಬ ಮಂತ್ರಿಯಾಗಿದ್ದನಂತೆ. ಈ ಸುಪ್ರಭನಿಗೆ ದತ್ತಕ ಮತ್ತು ಶುಭಕರ ಎನ್ನುವ ಇಬ್ಬರು ಮಕ್ಕಳಿದ್ದರು. ಇವರಲ್ಲಿ ಹಿರಿಯಾದ ದತ್ತಕನಿಗೆ ಭೋಜ ಎನ್ನುವ ಮಗನಾಗುತ್ತಾನೆ ಶುಭಕರ ಎನ್ನುವವನಿಗೆ ಸಿದ್ಧಕವಿ ಎನ್ನುವ ಮಗನಾಗುತ್ತಾನೆ. ಈ ಭೋಜಕನ ಮಗನೇ ಶಿಶುಪಾಲವಧಮ್ ಕರ್ತೃ ಮಾಘ ಕವಿ ಎನ್ನುವುದಾಗಿ ತಿಳಿದು ಬರುತ್ತದೆ. ಸಿದ್ಧ ಕವಿ ಎನ್ನುವವನು ಉಪಮಿತಿ ಭವ ಪ್ರಪಂಚವನ್ನು ಬರೆದ ಎನ್ನುವುದಾಗಿ ಹೇಳಲಾಗುತ್ತದೆ. ಮಾಘನ ಶಿಶುಪಾಲವಧೆಯಲ್ಲಿ ದತ್ತಕನ ಮಿತ್ರ ಮಾಘ ಎಂದು ಹೇಲಿದ್ದರೆ ಉಳಿದ ಕೆಲವು ಗ್ರಂಥಗಳಲ್ಲಿ ದತ್ತಕ ಸೂನುಃ ಮಾಘಃ ಎನ್ನುವುದಾಗಿ ಬಂದದ್ದು ವಿಶೇಷವಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ ಘೂರ್ಜರ ದೇಶಕ್ಕೆ ಮಾಲವ ಯಾವಾಗ ರಾಜಧಾನಿಯಾಗಿದ್ದಿತು ಮತ್ತು ಅಲ್ಲಿ ರಾಜ್ಯವಾಳಿದ ಶ್ರೀವರ್ಮಲನ ಕುರಿತಾಗಿಯೂ ಏನೊಂದೂ ತಿಳಿಯುವುದಿಲ್ಲ. ಮಾಘನ ಕಾಲದ ವಿಚಾರವಾಗಿ ಎಲ್ಲಿಯೂ ಸ್ಪಷ್ಟತೆಕಂಡು ಬರುವುದಿಲ್ಲ. ಹಿಸ್ಟರಿ ಆಫ್ ಸಂಸ್ಕೃತ ಲಿಟರೇಚರ್ ನಲ್ಲಿಯೂ ಮಾಘನ ಕಾಲ 9ನೇ ಶತಮಾನ ಇಅರಬಹುದು ಎನ್ನುವುದಾಗಿ ಹೇಳಲಾಗಿದೆ. ಧ್ವನ್ಯಾಲೋಕವನ್ನು ಬರೆದ ಕಾಶ್ಮೀರದ ಆನಂದವರ್ಧನನು ಸುಮಾರು 9ನೇ ಶತಮಾನದ ಕವಿ. ಈತ ತನ್ನ ಧ್ವನ್ಯಾಲೋಕದಲ್ಲಿ ಮಾಘನ ಶಿಶುಪಾಲ ವಧೆಯ ಶ್ಲೋಕವನ್ನು ಉದಾಹರಿಸಿರುವುದರಿಂದ ಮತ್ತು ಇವನ ಪೂರ್ವದ ಒಂದೆರಡು ಶತಮಾನಕ್ಕೂ ಮುಂಚೆ ಯಾರೂ ಮಾಘನ ಶ್ಲೋಕಗಳನ್ನು ಉದಾಹರಿಸದೇ ಇರುವುದರಿಂದ ಮಾಘನು ಸುಮಾರಾಗಿ 8ನೇ ಶತಮಾನದವನಿರಬಹುದು ಎಂದು ತಿಳಿಯಬಹುದು.
ಧರ್ಮರಾಯನ ರಾಜಸೂಯಯಾಗಕ್ಕೆ ಬಂದಿದ್ದ ಶ್ರೀಕೃಷ್ಣ ಮತ್ತು ಶಿಶುಪಾಲರೇ ಮೊದಲಾದವರು ಯಜ್ಞ ನಡೆಯುವ ಯಜ್ಞ ಮಂಟಪದಲ್ಲಿ ನೆರೆದಿರುವಾಗ ಶ್ರೀಕೃಷ್ಣನೇ ಅಗ್ರಪೂಜೆಗೆ ಯೋಗ್ಯನೆಂದು ಸಹದೇವನು ಹೊಗಳುತ್ತಾನೆ. ಈ ಹೊಗಳುವಿಕೆಯನ್ನು ಕೇಳಿದ ಶಿಶುಪಾಲನು ಶ್ರೀಕೃಷ್ಣನ ನಿಂದನೆ ಮಾಡುತ್ತಾನೆ ಆಗ ಶ್ರೀಕೃಷ್ಣ ಮೊದಲಿಗೆ ಶಾಂತಚಿತ್ತನಾಗಿದ್ದರೂ ಶಿಶುಪಾಲನ ನೂರು ತಪ್ಪುಗಳನ್ನು ಗಣಿಸಿ ನೂರ ಒಂದನೇ ತಪ್ಪಿಗೆ ತನ್ನ ಚಕ್ರವನ್ನು ತೆಗೆದು ಶಿಶುಪಾಲನನ್ನು ವಧಿಸುತ್ತಾನೆ. ಇದು ಭಾಗವತ ಪುರಾಣದ ದಶಮ ಸ್ಕಂಧದ ಎಪ್ಪತ್ತನಾಲ್ಕನೆಯ ಅಧ್ಯಾಯದಲ್ಲಿ ಬರುತ್ತದೆ. ಇದನ್ನೇ ಮಾಘ ತನಗೆ ಬೇಕಾದಹಾಗೆ ಮಾರ್ಪಡಿಸಿಕೊಂಡು ಶಿಶುಪಾಲವಧಂ ಎನ್ನುವ ಗ್ರಂಥ ರಚಿಸುತ್ತಾನೆ.
ಶ್ರಿಯಃ ಪತಿಃ ಶ್ರೀಮತಿ ಶಾಸಿತುಂ ಜಗಜ್ಜಗನ್ನಿವಾಸೋ ವಸುದೇವ ಸದ್ಮನಿ | ಎನ್ನುವುದಾಗಿ ತನ್ನ ಮಂಗಳ ಶ್ಲೋಕದಲ್ಲಿ ಶಾಸಿತುಂ ಜಗತ್ ಜಗನ್ನಿವಾಸೋ ವಾಸುದೇವಃ ಎನ್ನುತ್ತಾನೆ. ಜಗತ್ತಿಗೆ ಆಜ್ಞಾಧಾರಕ ಆ ವಾಸುದೇವ.
ಜಜೌಜೋsಜಾಜಿ ಜಿಜ್ಜಾಜೀ ತಂತತೋsತಿತತಾತಿತುತ್ |
ಭಾಬೋಭೀ ಭಾಭಿಭೂಭಾಭೂ ರಾರಾರಿರ ರಿರೀರರಃ || 19 : 3 || ಮಾಘ ಕವಿ ತನಗಿದ್ದ ವ್ಯಾಕರಣದ ಚತುರತೆಯನ್ನು ಚಿತ್ರಯುದ್ಧವೆಂದು ಕರೆದು 19ನೇ ಸರ್ಗವನ್ನು ಸೊಗಸಾಗಿ ರಂಜಿಸಿದ್ದಾನೆ. ಅಲ್ಲಿ ಆತ ತನಗಿದ್ದ ಭಾಷಾ ಪ್ರೌಢಿಮೆಯನ್ನು ಮೆರೆದಿರುವುದು ಕಂಡು ಬರುತ್ತದೆ.
ಇದಕ್ಕೆ ಇನ್ನೊಂದು ಉದಾಹರಣೆ :
ಸಕಾರನಾನಾರಕಾಸಕಾಯಸಾದದಸಾಯಕ |
ರಸಾಹವಾ ವಾಹಸಾರನಾ ದವಾದದವಾದನಾ ||19 : 27 ||
ನೀಲೇನಾನಾಲನಲಿನನಿಲಿನೋಲ್ಲಲನಾಲಿನಾ |
ಲಲನಾಲಲನೇನಾಲಂ ಲೀಲಾಲಾನೇನ ಲಾಲಿನಾ || 19 : 54 ||
ದಾದದೋದುದ್ದದುದ್ದಾದೀ ದಾದದೋ ದೂದದೀದದೋಃ |
ದುದ್ದಾದಂ ದದದೇ ದುದ್ದೇ ದದಾದದದದೌದದಃ || 19 : 114 || ಮಾಘ ತನ್ನ ಕಾವ್ಯದಲ್ಲಿ ತನ್ನ ಸಾಮರ್ಥ್ಯವನ್ನು ಜಾಣ್ಮೆಯಿಂದ ತೋರಿಸಿಕೊಟ್ಟಿದ್ದಾನೆ. ವ್ಯಾಕರಣ ಮತ್ತು ಅಲಂಕಾರದ ಚತುರತೆ ಇದರಲ್ಲಿ ವ್ಯಕ್ತವಾಗುತ್ತದೆ.
ರೈವತಕ ಪರ್ವತದ ವರ್ಣನೆಯನ್ನು ನಾಲ್ಕನೇಸರ್ಗದಲ್ಲಿ ಮಾಡಿದ್ದರೆ, ಆರು ಋತುಗಳ ವರ್ಣನೆಯನ್ನು ಆರನೇ ಸರ್ಗದಲ್ಲಿಯೇ ಇಟ್ಟಿದ್ದಾನೆ. 9-10ನೇ ಸರ್ಗದಲ್ಲಿ ಸಂಧ್ಯಾಕಾಲ ಮತ್ತು ಚಂದ್ರೋದಯ, ರಾತ್ರಿಯ ವರ್ಣನೆ, ಪಾನಗೋಷ್ಠಿಗಳು, ರಾತ್ರಿಯ ಕ್ರೀಡೆ ಮತ್ತು ಪ್ರಸಾದನ ವರ್ಣನೆ ಮಾಡಿದ್ದಾನೆ. ಹೀಗೆ ಪ್ರತಿಯೊಂದು ಸರ್ಗವೂ ಅತ್ಯಂತ ರೋಚಕವಾಗಿದೆ. ಈತ ತನ್ನ ಕಾವ್ಯ ರಚನೆಯಲ್ಲಿ ಭಾರವಿಯ ಕಿರಾತಾರ್ಜುನೀಯದ ಹಿಂದೆ ಬಿದ್ದಿದ್ದನೋ ಎನ್ನುವ ಅನುಮಾನ ಕಾಡುತ್ತದೆ. ಭಾರವಿಯ ಕಿರಾತಾರ್ಜುನೀಯದಲ್ಲಿ ವ್ಯಾಸ ಉಪದೇಶ ಮಾಡುತ್ತಾನೆ ಇಲ್ಲಿ ನಾರದ ಉಪದೇಶಕನಾಗುತ್ತಾನೆ. ಅಂತೂ ಈತನ ಕವಿತಾ ಸಾಮರ್ಥ್ಯಕ್ಕೆ ಸಾಟಿ ಇಲ್ಲ ಅನ್ನಿಸಿ ಬಿಡುತ್ತದೆ. ಭಾರವಿಯೊಂದಿಗೆ ಜಿದ್ದಿಗೆ ಬಿದ್ದ ಕವಿ ಅನ್ನಿಸಿ ಬಿಡುತ್ತಾನೆ.
ಮಾಘ ಹುಟ್ಟುವ ತನಕ ಭಾರವಿ ತನ್ನ ಕೀರ್ತಿಯಿಂದ ಮೆರೆಯುತ್ತಿದ್ದನಂತೆ. ಮಾಘನ ಜನನವಾದ ನಂತರ ಮಾಘ ಭಾರವಿಯನ್ನೂ ಹಿಂದಿಕ್ಕಿದನಂತೆ. ಅದಕ್ಕೆ ಹೇಳುವುದು "ಉಪಮಾ ಕಾಳಿದಾಸಸ್ಯ ಭಾರವೇರರ್ಥಗೌರವಂ | ದಂಡಿನಃ ಪದಲಾಲಿತ್ಯಂ "ಮಾಘೇ ಸಂತಿ ತ್ರಯೋಗುಣಾಃ" || ಉಪಮೆಯೂ ಇದೆ, ಅರ್ಥವತ್ತಾದ ಸರ್ಗಗಳು,ಪದಲಾಲಿತ್ಯವಂತೂ ಈ ಮೇಲೆ ಬರೆದಿರುವೆನು. ಈ ಎಲ್ಲಾ ಗುಣದ ಒಟ್ಟಾರೆ ಪ್ರತಿ ರೂಪ "ಮಾಘ".

No comments:

Post a Comment