Search This Blog

Tuesday 21 August 2018

ರಾಜಾ ರಾವಣಃ ಶತ್ರುರಾವಣಃ


ಅತ್ಯಂತ ಹೆಚ್ಚು ಚರ್ಚಿತನಾದ ಪುರಾಣ ಪುರುಷ ರಾವಣ. ಈತನನ್ನು ಹೊಗಳುವವರೂ ತೆಗಳುವವರೂ ಸಮಾನ ಸಂಖ್ಯೆ ಎನ್ನಿಸುತ್ತದೆ. ಅಂತಹ ರಾವಣನ ಕುರಿತು ಒಂದು ಚಿಕ್ಕ ಬರಹ ಅಷ್ಟೇ.
ರಾವಣ ದ್ರಾವಿಡನಾಗಿದ್ದನಂತೆ ಆದುದರಿಂದ ರಾಮಾಯಣದಲ್ಲಿ ಆತನನ್ನು ರಾಕ್ಷಸ ಎಂದು ಕರೆಯಲಾಯಿತು. ಆತನ ಆಕಾರ ಬಣ್ಣಗಳನ್ನು ನೋಡಿ ಆತನನ್ನು ಆರ್ಯರು ಹಾಗೆ ಹೇಳಿದರು. ಉತ್ತರ ಭಾರತೀಯರಿಗೆ ಈತನನ್ನು ರಾಕ್ಷಸನನ್ನಾಗಿ ಬಿಂಬಿಸಬೇಕಿತ್ತು ಎಂದು ಇತ್ತೀಚೆಗೆ ನನ್ನ ಮಿತ್ರರೊಬ್ಬರು ನನ್ನಲ್ಲಿ ತಗಾದೆ ತೆಗೆದರು. ಆದರೆ ಆತನ ಬಣ್ಣ ಕಪ್ಪು ಎನ್ನುವುದು ಒಂದೇ ಒಂದು ಕಡೆ ಇದೆ ಬಿಟ್ಟರೆ ಆತ ಬ್ರಾಹ್ಮಣ ವೇದಜ್ಞ ಆತನಿಗೆ ತಿಳಿದಿರದ ವಿದ್ಯೆ ಇಲ್ಲ ಎನ್ನುವುದು ರಾಮಾಯಣ ಮಹಾಭಾರತದ ಉಲ್ಲೇಖ ಹೇಳುತ್ತವೆ. ಆತ ಎಷ್ಟು ಕೆಟ್ಟವನಾಗಿದ್ದರೂ ಆತ ಸಂಗೀತ ಸಾಹಿತ್ಯ ಕಲಾಪ್ರಕಾರಗಳ ದೊಡ್ದ ವ್ಯಕ್ತಿತ್ವ ಹೊಂದಿದ್ದ. ಕೇವಲ ಕುತರ್ಕಗಳ ಸರಣಿ ನನಗೆ ಸರಿ ಕಾಣಿಸುತ್ತಿಲ್ಲ.
ರಾವಯಾಮಾಸ ಲೋಕಾನ್ಯತ್ತಸ್ಮಾದ್ರಾವಣ ಉಚ್ಯತೇ" ಅವನು ತನ್ನ ಎದುರಾಳಿಗಳೆಲ್ಲರನ್ನೂ ಬಹುವಾಗಿ ಹಿಂಸಿಸುತ್ತಿದ್ದುದರಿಂದ (ಗೋಳಾಡುವಂತೆ ಮಾಡುತ್ತಿದ್ದುದರಿಂದ) ವೈಶ್ರವಸನಿಗೆ ರಾವಣನೆಂಬ ಅನ್ವರ್ಥನಾಮವೂ ಬಂದಿತು.
ಸುಂದರಕಾಂಡದ 22ನೇ ಸರ್ಗದಲ್ಲಿ :
ಇತ್ಯುಕ್ತ್ವಾ ಮೈಥಿಲೀಂ ರಾಜಾ ರಾವಣಃ ಶತ್ರುರಾವಣಃ | ಸಂದಿಶ್ಯ ತತಃ ಸರ್ವಾ ರಾಕ್ಷಸೀರ್ನಿರ್ಜಗಾಮ || 1 || ಶತ್ರುಗಳನ್ನುಹಾ ಹಾಎಂದು ಕೂಗಿಕೊಳ್ಳುವಂತೆ ಮಾಡಲು ಸಮರ್ಥನಾಗಿದ್ದ ರಾವಣನು ಸೀತಾದೇವಿಗೆ ಹೀಗೆ ಹೇಳಿ ಅವಳನ್ನು ಬಹಳ ಬೇಗ ತನ್ನ ವಶಳಾಗುವಂತೆ ಮಾಡಬೇಕೆಂದು ಎಲ್ಲ ರಾಕ್ಷಸಿಯರಿಗೂ ಆಜ್ಞಾಪಿಸಿ ಅಶೋಕವನದಿಂದ ನಿರ್ಗಮಿಸಿದನು. (ಶತ್ರುರಾವಣಃ : ಶತ್ರೂನ್ರಾವಯತಿ ಹಾಹಾಶಬ್ದಂ ಕಾರಯತಿ ಸಃ= ಶತ್ರು ಗಳನ್ನು ಹಾಹಾ ಎಂದು ಕೂಗಿಕೊಳ್ಳುವಂತೆ ಮಾಡುವವನು.)
ಭಯಂಕರಪರಾಕ್ರಮಿಯಾಗಿದ್ದ, ದೊಡ್ಡದಾದ ಶರೀರವನ್ನು ಹೊಂದಿದ್ದ ಒಂದು ಹದ್ದನ್ನು ರಾಮನು ನೋಡುತ್ತಾನೆ. ಆಲದ ಮರದ ಮೇಲೆ ಕುಳಿತಿದ್ದ ಬೃಹದಾಕಾರದ ಹದ್ದನ್ನು ನೋಡಿದ ರಾಮ, ಲಕ್ಷ್ಮಣರು ಅವನೊಬ್ಬ ರಾಕ್ಷಸ ಇರಬಹುದೆಂದು ಭಾವಿಸಿ ನೀನು ಯಾರು ಎನ್ನುವುದಾಗಿ ಆ ಮಹಾಪ್ರಾಣಿಯನ್ನು ಪ್ರಶ್ನಿಸುತ್ತಾರೆ. ಹದ್ದು ಹೇಹೀಗೆ ಹೇಳುತ್ತದೆ.
"ವತ್ಸ ಮಾಂ ವಿದ್ಧಿ ವಯಸ್ಯಂ ಪಿತುರಾತ್ಮನಃ" ಮಗು! ನನ್ನನ್ನು ನಿನ್ನ ತಂದೆಯ ಸ್ನೇಹಿತನೆಂದು ತಿಳಿ.” ಎನ್ನುತ್ತದೆ. ರಣಹದ್ದು ಹೀಗೆ ಹೇಳಿದೊಡನೆಯೇ ರಾಮನು ಅದನ್ನು ಪೂಜ್ಯಭಾವನೆಯಿಂದ ಯಥೋಚಿತ ವಾಗಿ ಸತ್ಕರಿಸಿ ಏಕಾಗ್ರಚಿತ್ತನಾಗಿ ಮಹಾಗೃಧ್ರದ ಕುಲವನ್ನೂ ಮತ್ತು ಹೆಸರನ್ನೂ ಕೇಳುತ್ತಾನೆ. ಗೃಧ್ರನು ರಾಮನಿಗೆ ಸಕಲಪ್ರಾಣಿಗಳ ಉತ್ಪತ್ತಿಯನ್ನೂ ಮತ್ತು ತನ್ನ ಕುಲದ ವಿಷಯವನ್ನೂ ಹೇಳಲು ಉಪಕ್ರಮಿಸುತ್ತದೆ. “ರಾಮ! ಪೂರ್ವದಲ್ಲಿ ಯಾರು ಯಾರು ಪ್ರಜಾಪತಿಗಳಾಗಿದ್ದರೋ ಅವರ ವಿಷಯಗಳನ್ನು ಮೊದಲಿನಿಂದಲೂ ಹೇಳುತ್ತೇನೆ. ಪ್ರಜಾ ಪತಿಗಳಲ್ಲಿ ಕರ್ದಮನೆಂಬುವವನೇ ಮೊದಲನೆಯವನು. ವಿಕೃತನೆಂಬುವನು ಎರಡನೆಯವನು. ಶೇಷನೆಂಬುವನು ಮೂರನೆಯವನು. ನಾಲ್ಕನೆಯವನು ಸಂಶ್ರಯನು. ಬಹುಪುತ್ರ ಐದನೆಯವನು. ಆರನೆಯವನೇ ಸ್ಥಾಣು. ಏಳನೆಯವನು ಮರೀಚಿಯು. ಎಂಟನೆಯವನು ಅತ್ರಿ. ಕ್ರತು ಒಂಬತ್ತನೆಯವನು. ಹತ್ತನೆಯವನು ಪುಲಸ್ತ್ಯ. ಹನ್ನೊಂದನೆಯವನು ಅಂಗಿರಸ. ಪ್ರಚೇತಸನು ಹನ್ನೆರಡನೆಯವನು. ಹದಿಮೂರನೆಯವನು ಪುಲಹ. ಹದಿನಾಲ್ಕನೆಯವನು ಸುಪ್ರಸಿದ್ಧನಾದ ದಕ್ಷಪ್ರಜಾಪತಿಯು. ಹದಿನೈದನೆಯವನು ವಿವಸ್ವಂತ. ಹದಿನಾರನೆಯವನು ಅರಿಷ್ಟನೇಮಿ. ಹದಿನೇಳನೆಯವನು ಹಾಗೂ ಕಡೆಯವನು ಮಹಾತೇಜಸ್ವಿಯಾದ ಕಶ್ಯಪನು.
ಉತ್ತರಕಾಂಡದ 2ನೇ ಸರ್ಗದಲ್ಲಿ ಅಗಸ್ತ್ಯರು ವಿಶ್ರವಸಮುನಿಯ ಕುರಿತಾಗಿ ಹೇಳುತ್ತಾರೆ.
ಕೃತಯುಗದಲ್ಲಿ ಪ್ರಜಾಪತಿಬ್ರಹ್ಮನಿಗೆ ಪುಲಸ್ತ್ಯನೆಂಬ ಹೆಸರಿನ ಪ್ರಭಾವ ಶಾಲಿಯಾದ ಒಬ್ಬ ಪುತ್ರನಿದ್ದ ಆತ ಬ್ರಹ್ಮರ್ಷಿಯೂ ಆಗಿದ್ದ ಅವನು ಸಾಕ್ಷಾತ್ ಪಿತಾಮಹನಂತೆಯೇ ತೇಜಸ್ವಿಯಾಗಿದ್ದನು. ಪುಲಸ್ತ್ಯನ ಗುಣ ಧರ್ಮ ಮತ್ತು ಶೀಲಗಳನ್ನು ವಿವರಿಸಿ ಹೇಳಲು ಶಕ್ಯವೇ ಇಲ್ಲ. ಆತನನ್ನು ಪ್ರಜಾಪತಿಯ ಮಗ ಎಂದು ಹೇಳಿದರೆ ಸಾಕು, ಅವನ ಎಲ್ಲ ಗುಣಗಳನ್ನೂ ವರ್ಣಿಸಿದಂತಾಗುತ್ತದೆ. ಪುಲಸ್ತ್ಯನು ಬ್ರಹ್ಮನ ಮಗನಾಗಿದ್ದುದರಿಂದ ದೇವತೆಗಳಿಗೂ ಅತ್ಯಂತಪ್ರಿಯನಾಗಿದ್ದನು. ಮಹಾ ಬುದ್ಧಿವಂತನಾಗಿದ್ದ ಅವನು ತನ್ನ ಉಜ್ಜ್ವಲವಾದ ಗುಣಗಳಿಂದ ಸಮಸ್ತ ಲೋಕಗಳಿಗೂ ಪ್ರಿಯನಾಗಿದ್ದನು. ಒಮ್ಮೆ ಪುಲಸ್ತ್ಯನು ಧರ್ಮಾಚರಣೆಗಾಗಿ ಮಹಾಗಿರಿಯಾದ ಮೇರು ಪರ್ವತದ ಪಕ್ಕದಲ್ಲಿದ್ದ ರಾಜರ್ಷಿಯಾದ ತೃಣಬಿಂದುವಿನ ಆಶ್ರಮಕ್ಕೆ ಹೋಗಿ ಸ್ವಲ್ಪಕಾಲ ಅಲ್ಲಿಯೇ ವಾಸಮಾಡುತ್ತಿದ್ದನು. ಧರ್ಮಾತ್ಮನಾದ ಅವನು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡು ಅನುದಿನವೂ ವೇದಾಧ್ಯಯನ ಮಾಡುತ್ತಾ ತಪಸ್ಸನ್ನು ಮಾಡುತ್ತಿದ್ದನು. ಆದರೆ ಕನ್ಯೆಯರು ಅವನಿದ್ದ ಆಶ್ರಮಕ್ಕೆ ಬಂದು ತಪಸ್ಸಿಗೆ ವಿಘ್ನ ಉಂಟು ಮಾಡುತ್ತಿದ್ದರು. ಋಷಿಕನ್ಯೆಯರೂ, ನಾಗಕನ್ಯೆಯರೂ, ರಾಜರ್ಷಿ ಕನ್ಯೆಯರೂ ಮತ್ತು ಅಪ್ಸರೆಯರೂ ಕ್ರೀಡೆಯಾಡುತ್ತಾ ಪುಲಸ್ತ್ಯನ ಆಶ್ರಮದ ಬಳಿಗೆ ಬಂದರು. ಪುಲಸ್ತ್ಯನು ತಪಸ್ಸು ಮಾಡುತ್ತಿದ್ದ ಪ್ರದೇಶವು ಎಲ್ಲ ಋತುಗಳಲ್ಲಿಯೂ ನಲಿದಾಡಲು ಯೋಗ್ಯವಾಗಿದ್ದುದರಿಂದಲೂ ಅತ್ಯಂತ ರಮಣೀಯವಾಗಿದ್ದುದರಿಂದಲೂ ಎಲ್ಲ ಕನ್ಯೆಯರೂ ನಿತ್ಯವೂ ಅಲ್ಲಿಗೆ ಹೋಗಿ ವಿಹರಿಸುತ್ತಿದ್ದರು. ಪುಲಸ್ತ್ಯನು ತಪಸ್ಸುಮಾಡುತ್ತಿದ್ದ ಪ್ರದೇಶವಂತೂ ಇನ್ನೂ ಅತಿಶಯವಾಗಿ ರಮಣೀಯವಾಗಿದ್ದಿತು. ಕಾರಣದಿಂದ ಕನ್ಯೆಯರು ಪ್ರತಿನಿತ್ಯವೂ ಅಲ್ಲಿಗೆ ಬಂದು ಹಾಡುತ್ತಿದ್ದರು. ವಾದ್ಯಗಳನ್ನು ಬಾರಿಸುತ್ತಿದ್ದರು. ಕುಣಿದಾಡುತ್ತಿದ್ದರು. ಕನ್ಯೆಯರ ಸ್ವೇಚ್ಛಾವರ್ತನೆಯಿಂದಾಗಿ ಪುಲಸ್ತ್ಯನು ಕುಪಿತನಾಗಿ ಹೀಗೆ ಹೇಳಿದನು : ಯಾ ಮೇ ದರ್ಶನಮಾಗಚ್ಛೇತ್ಸಾ ಗರ್ಭಂ ಧಾರಯಿಷ್ಯತಿ ||೧೨|| “ ನನ್ನ ದೃಷ್ಟಿಪಥಕ್ಕೆ ಯಾವ ಕನ್ಯೆಯು ಗೋಚರವಾಗುವಳೋ ಅವಳು ಒಡನೆಯೇ ಗರ್ಭವನ್ನು ಧರಿಸುವಳು.” ಮಹಾತ್ಮನಾದ ಪುಲಸ್ತ್ಯನ ಮಾತು ಕೇಳಿ ಎಲ್ಲ ಕನ್ಯೆಯರೂ ಬ್ರಹ್ಮಶಾಪದ ಭಯದಿಂದಾಗಿ ಪ್ರದೇಶಕ್ಕೆ ಹೋಗುವುದನ್ನೇ ನಿಲ್ಲಿಸಿದರು. ಆದರೆ ರಾಜರ್ಷಿಯಾದ ತೃಣಬಿಂದುವಿನ ಮಗಳಿಗೆ ಪುಲಸ್ತ್ಯನ ಶಾಪದ ಸಮಾಚಾರ ತಿಳಿದಿರಲಿಲ್ಲವಾದುದರಿಂದ ಅವಳು ಮರುದಿನ ಯಾವ ವಿಧವಾದ ಭಯವೂ ಇಲ್ಲದೇ ಹಿಂದಿನಂತೆಯೇ ಆಶ್ರಮಪ್ರದೇಶದಲ್ಲಿ ನಲಿದಾಡುತ್ತಿದ್ದಳು. ಅವಳ ಸಖಿಯರಾರೂ ಅಲ್ಲಿಗೆ ಬಂದಿರಲಿಲ್ಲ. ರಾಜಪುತ್ರಿಯೊಬ್ಬಳೇ ಅಲ್ಲಿ ಆಡುತ್ತಾ ಹಾಡುತ್ತಾ ನಲಿದಾಡುತ್ತಿದ್ದಳು. ಅದೇ ಸಮಯದಲ್ಲಿ ಮಹಾ ತೇಜಸ್ವಿಯಾದ, ಪ್ರಜಾಪತಿಯ ಮಗನಾದ, ಮಹರ್ಷಿಯಾದ ಪುಲಸ್ತ್ಯನು ತಪಸ್ಸಿನಿಂದ ತೇಜೋವಿಶಿಷ್ಟನಾಗಿ ವೇದಾಧ್ಯಯನವನ್ನು ಮಾಡುತ್ತಿದ್ದನು. ಅಲ್ಲಿಯೇ ನಲಿದಾಡುತ್ತಿದ್ದ ರಾಜಪುತ್ರಿಯು ತಪೋನಿಧಿಯಾದ ಪುಲಸ್ತ್ಯನು ಹೇಳುತ್ತಿದ್ದ ವೇದದ ಧ್ವನಿಯನ್ನು ಆಲಿಸುತ್ತಾ ಅವನ ಬಳಿಗೆ ಹೋಗಿ ನೋಡಿದಳು. ಪುಲಸ್ತ್ಯನ ದೃಷ್ಟಿಯೂ ಅವಳ ಮೇಲೆ ಬಿದ್ದಿತು. ಮರು ಕ್ಷಣದಲ್ಲಿಯೇ ಅವಳ ಶರೀರವು ಬಿಳಿಚಿಕೊಂಡು ಗರ್ಭಧರಿಸಿದ ಚಿಹ್ನೆಯು ಅವಳಲ್ಲಿ ಕಾಣಿಸಿಕೊಂಡಿತು. ತನ್ನ ಶರೀರದಲ್ಲುಂಟಾದ ದೋಷವನ್ನು ಕಂಡು ರಾಜಕುಮಾರಿಯು ಗಾಬರಿಗೊಂಡಳು. ‘ನನ್ನ ಶರೀರದಲ್ಲಿ ಈಗೇನಾಗಿದೆ? ಹೀಗಾಗಲು ಕಾರಣವೇನಿರಬಹುದು ?’ ಹೀಗೆ ಚಿಂತಿಸುತ್ತಾ ತಂದೆಯ ಆಶ್ರಮಕ್ಕೆ ಹೋದಳು. ಗರ್ಭವನ್ನು ಧರಿಸಿ ಬಂದಿದ್ದ ಮಗಳನ್ನು ನೋಡಿ ತೃಣಬಿಂದುವು ಹೇಳಿದನು : “ ಕುಮಾರಿ ! ನಿನ್ನ ಶರೀರಕ್ಕೆ ಇಂತಹ ಅವಸ್ಥೆಯು ಹೇಗುಂಟಾಯಿತು? ಈಗಿನ ನಿನ್ನ ಶರೀರದ ಬದಲಾವಣೆಯು ಸರ್ವಥಾ ಅಯೋಗ್ಯವೂ ಅನುಚಿತವೂ ಆಗಿದೆ.” ತಂದೆಯ ಮಾತನ್ನು ಕೇಳಿ ರಾಜಕನ್ಯೆಯು ಕೈಮುಗಿದು ಕೊಂಡು ಹೇಳಿದಳು : “ ಇಂತಹ ಅವಸ್ಥೆಯು ನನ್ನ ಶರೀರಕ್ಕೆ ಬಂದೊದಗಿರುವುದಕ್ಕೆ ಕಾರಣವೇನೂ ತಿಳಿಯದು. ಸ್ವಲ್ಪ ಹೊತ್ತಿನ ಮೊದಲು ನಾನು ಪವಿತ್ರಾತ್ಮನಾದ ಪುಲಸ್ತ್ಯ ಮಹರ್ಷಿಯ ದಿವ್ಯಾಶ್ರಮಕ್ಕೆ ನನ್ನ ಸಖಿಯರನ್ನು ಹುಡುಕುವ ಸಲುವಾಗಿ ಹೋಗಿದ್ದೆನು. ಆದರೆ ಅಲ್ಲಿಗೆ ನನ್ನ ಯಾವ ಸಖಿಯೂ ಬಂದಿರಲಿಲ್ಲ. ಆದರೆ ನನ್ನ ರೂಪವು ಮಾತ್ರ ಹೀಗೆ ಬದಲಾಯಿಸಿತು. ಇದರಿಂದ ಭಯಗೊಂಡು ನಾನು ನಿನ್ನಲ್ಲಿಗೆ ಬಂದೆನು.” ರಾಜರ್ಷಿಯಾದ ತೃಣಬಿಂದುವು ಮಗಳು ಹೇಳಿದ ಮಾತನ್ನು ಕೇಳಿ ಧ್ಯಾನಮಗ್ನನಾದನು. ಅಂತರ್ಮುಖನಾದ ರಾಜರ್ಷಿಗೆ ಅದು ಬ್ರಹ್ಮರ್ಷಿಯಾದ ಪುಲಸ್ತ್ಯನ ಕಾರ್ಯವೇ ಎಂಬ ಅರಿವುಂಟಾಯಿತು. ಪವಿತ್ರಾತ್ಮನಾದ ಮಹರ್ಷಿಯ ಶಾಪದ ವಿಷಯವನ್ನು ಜ್ಞಾನದೃಷ್ಟಿಯಿಂದ ತಿಳಿದುಕೊಂಡ ರಾಜರ್ಷಿಯು ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಪುಲಸ್ತ್ಯನ ಬಳಿಗೆ ಹೋಗಿ ಹೇಳಿದನು ನನ್ನ ಮಗಳು ತನ್ನ ಕಲ್ಯಾಣಗುಣಗಳಿಂದ ವಿಭೂಷಿತಳಾಗಿದ್ದಾಳೆ. ತಾನಾಗಿಯೇ ಬಂದಿರುವ ಇವಳನ್ನು ನೀನು ಭಿಕ್ಷೆಯ ರೂಪದಲ್ಲಿ ಪ್ರತಿಗ್ರಹಿಸು. ಸದಾ ತಪಸ್ಸಿನಲ್ಲಿಯೇ ನಿರತನಾಗಿರುವ ನೀನು ಬಹಳ ಬಳಲುವೆ. ನಿನ್ನ ಇಂದ್ರಿಯಗಳೆಲ್ಲವೂ ಆಯಾಸಗೊಳ್ಳುತ್ತವೆ. ನಿನ್ನನ್ನು ಇವಳು ಯಾವಾಗಲೂ ಶುಶ್ರೂಷೆಮಾಡುತ್ತಿರುತ್ತಾಳೆ. ವಿಷಯದಲ್ಲಿ ಸಂಶಯವೇ ಇಲ್ಲ.” ಪುಲಸ್ತ್ಯನು ಆಕೆಯನ್ನು ಪ್ರತಿಗ್ರಹಿಸುವ ಅಪೇಕ್ಷೆಯಿಂದ ಹೀಗೆ ಹೇಳುತ್ತಿ ಧಾರ್ಮಿಕನಾದ ರಾಜರ್ಷಿಗೆಬಾಢಂ ’ ‘ಹಾಗೆಯೇ ಆಗಲಿ - ನೀನು ಹೇಳಿದಂತೆ ಇವಳನ್ನು ಭಿಕ್ಷೆಯ ರೂಪದಲ್ಲಿ ಪ್ರತಿಗ್ರಹಿಸುತ್ತೇನೆಎಂದು ಹೇಳಿದನು. ರೀತಿಯಲ್ಲಿ ಕನ್ಯೆಯನ್ನು ಪುಲಸ್ತ್ಯನಿಗೆ ಒಪ್ಪಿಸಿಕೊಟ್ಟು ರಾಜನು ತನ್ನ ಆಶ್ರಮಕ್ಕೆ ಹಿಂದಿರುಗಿದನು. ಒಂದುದಿನ ಪುಲಸ್ತ್ಯನು ಕನ್ಯೆಯನ್ನು ಕರೆದು ಹೇಳುತ್ತಾನೆ: “ ಸುಂದರಿ ! ಸಂಪದ್ರೂಪವಾದ ನಿನ್ನ ಕಲ್ಯಾಣಗುಣಗಳಿಂದ ನಾನು ಸಂತುಷ್ಟನಾಗಿದ್ದೇನೆ. ಕಾರಣದಿಂದ ನನಗೆ ಅನುರೂಪನಾದ ಪುತ್ರನನ್ನು ನಿನಗೆ ಅನುಗ್ರಹಿಸುತ್ತೇನೆ. ಎರಡು ವಂಶಗಳ ಅಭಿವೃದ್ಧಿಗೂ ಕಾರಣನಾಗುವ ಪೌಲಸ್ತ್ಯ ಎಂಬ ಹೆಸರಿನಿಂದ ವಿಖ್ಯಾತನಾಗುವ ಪುತ್ರನನ್ನು ದಯಪಾಲಿಸುತ್ತೇನೆ. ನಾನಿಲ್ಲಿ ವೇದಾಭ್ಯಾಸವನ್ನು ಮಾಡುತ್ತಿದ್ದೆನು. ಸಮಯದಲ್ಲಿ ನಾನು ಹೇಳುತ್ತಿದ್ದ ವೇದಮಂತ್ರಗಳನ್ನು ವಿಶೇಷವಾದ ಆಸಕ್ತಿಯಿಂದ ಕೇಳುತ್ತಿದ್ದೆ. ಕಾರಣದಿಂದ ನಿನ್ನಲ್ಲಿ ಹುಟ್ಟುವ ಪುತ್ರನು ವಿಶ್ರವಸ ಅಥವಾ ವಿಶ್ರವಣ ಎಂಬ ಹೆಸರಿನಿಂದಲೂ ವಿಖ್ಯಾತನಾಗುತ್ತಾನೆ. ಎಂದು ಹೇಳಲು ರಾಜಕುಮಾರಿಯು ಆನಂದಭರಿತಳಾಗಿ ಸ್ವಲ್ಪದಿವಸಗಳಲ್ಲಿಯೇ ಮೂರು ಲೋಕಗಳಲ್ಲಿಯೂ ವಿಖ್ಯಾತನಾದ, ಯಶಸ್ಸಿನಿಂದಲೂ ಧರ್ಮದಿಂದಲೂ ಸಂಪನ್ನನಾದ ವಿಶ್ರವಸನೆಂಬ ಮಗನನ್ನು ಹಡೆದಳು. ಮುನಿಯು ತನ್ನ ತಂದೆಯಾದ ಪುಲಸ್ತ್ಯನಂತೆಯೇ ವೇದವಿದನಾಗಿಯೂ ವ್ರತಾಚಾರನಿಷ್ಠನೂ, ತಪಸ್ವಿಯೂ ಆದನು.
ಅಥ ಪುತ್ರಃ ಪುಲಸ್ತ್ಯಸ್ಯ ವಿಶ್ರವಾ ಮುನಿಪುಙ್ಗವಃ | ಅಚಿರೇಣೈವ ಕಾಲೇನ ಪಿತೇವ ತಪಸಿ ಸ್ಥಿತಃ ||1|| ಪುಲಸ್ತ್ಯನ ಮಗನಾದ ಮುನಿಶ್ರೇಷ್ಠನಾದ ವಿಶ್ರವಸನು ತಂದೆಯಂತೆಯೇ ಅತ್ಯಲ್ಪಕಾಲದಲ್ಲಿ ತಪಸ್ಸಿನಲ್ಲಿ ನಿರತನಾದನು. ವಿಶ್ರವಸನು ಸತ್ಯವಾದಿಯೂ, ಶೀಲವಂತನೂ, ಜಿತೇಂದ್ರಿಯನೂ, ಸ್ವಾಧ್ಯಾಯಪರಾಯಣನೂ, ಅಂತಃಶುದ್ಧಿಬಹಿಃಶುದ್ಧಿಗಳುಳ್ಳವನೂ, ಸಕಲ ಭೋಗಗಳಲ್ಲಿ ಅನಾಸಕ್ತನೂ, ಸರ್ವಕಾಲದಲ್ಲಿಯೂ ಧರ್ಮಾಚರಣೆಗಳಲ್ಲಿಯೇ ನಿರತನೂ ಆಗಿದ್ದನು. ವಿಶ್ರವಸನ ಸದಾಚಾರ, ಸಚ್ಚಾರಿತ್ರ್ಯಗಳನ್ನು ನೋಡಿ ಮಹಾಮುನಿಯಾದ ಭರದ್ವಾಜನು ತನ್ನ ಮಗಳನ್ನು ವಿಶ್ರವಸನಿಗೆ ಮದುವೆಮಾಡಿಕೊಟ್ಟನು. ಧರ್ಮಜ್ಞನಾದ, ಮುನಿಶ್ರೇಷ್ಠನಾದ ವಿಶ್ರವಸನು ಧರ್ಮಾನುಸಾರವಾಗಿ ಭರದ್ವಾಜಮುನಿಯ ಮಗಳ ಪಾಣಿಗ್ರಹಣಮಾಡಿದನು. ಲೋಕದ ಪ್ರಜೆಗಳಿಗೆ ಹಿತವನ್ನುಂಟುಮಾಡುವ ಬುದ್ಧಿಯಿಂದ ಕೂಡಿದವನಾಗಿ ಲೋಕದ ಶ್ರೇಯಸ್ಸನ್ನೇ ಚಿಂತಿತ್ತಾ ಪರಮಾದ್ಭುತನಾದ ಒಬ್ಬ ಪುತ್ರನನ್ನು ಪಡೆದುಕೊಂಡನು. ಬಾಲಕನು ಧರ್ಮಜ್ಞನೂ, ಬ್ರಾಹ್ಮಣೋಚಿತವಾದ ಸಮಸ್ತಗುಣಗಳಿಂದ ಸಂಪನ್ನನೂ ಆಗಿದ್ದನು. ಅಂತಹ ಮೊಮ್ಮಗನು ಹುಟ್ಟಲು ಪಿತಾಮಹನಾದ ಪುಲಸ್ತ್ಯನಿಗೂ ಆನಂದವಾಯಿತು. ಪುಲಸ್ತ್ಯನು ಬಾಲಕನಿಗೆ ಪ್ರಪಂಚಕ್ಕೆ ಕಲ್ಯಾಣವನ್ನುಂಟು ಮಾಡುವ ಬುದ್ಧಿಯಿರುವುದನ್ನು ದಿವ್ಯದೃಷ್ಟಿಯಿಂದ ಕಂಡುಕೊಂಡು ಅವನು ಮುಂದೆ ಧನಾಧ್ಯಕ್ಷನಾಗುವನೆಂದು ಭವಿಷ್ಯವನ್ನು ಹೇಳಿದನು. ದೇವರ್ಷಿಗಳೊಡನೆ ಅವನಿಗೆ ನಾಮಕರಣವನ್ನೂ ಮಾಡಿದನು.
ಯಸ್ಮಾದ್ವಿಶ್ರವಸೋಽಪತ್ಯಂ ಸಾದೃಶ್ಯಾದ್ವಿಶ್ರವಾ ಇವ | ತಸ್ಮಾದ್ವೈಶ್ರವಣೋ ನಾಮ ಭವಿಷ್ಯತ್ಯೇಷ ವಿಶ್ರುತಃ ||8|| “ವಿಶ್ರವಸನ ಮಗನಾಗಿರುವುದರಿಂದಲೂ ವಿಶ್ರವಸನನ್ನೇ ಹೋಲುತ್ತಿರುವುದರಿಂದಲೂ ಇವನು ವೈಶ್ರವಣನೆಂಬ ಹೆಸರಿನಿಂದಲೇ ಪ್ರಸಿದ್ಧನಾಗುತ್ತಾನೆ.” ವಿಶ್ರವಸನು ಮಗನಿಗೆ ಹೀಗೆ ನಾಮಕರಣಮಾಡಿ ತಪಸ್ಸು ಮಾಡಲು ತಪೋವನಕ್ಕೆ ಹೊರಟುಹೋದನು. ಆಹುತಿಯಿಂದ ಹುತಮಾಡಲ್ಪಟ್ಟ ಮಹಾತೇಜಸ್ಸಿನಿಂದ ಕೂಡಿದ ಯಜ್ಞೇಶ್ವರನಂತೆಯೇ ವೈಶ್ರವಣನು ಅಭಿವೃದ್ಧ್ದಿ ಹೊಂದುತ್ತಿದ್ದನು. ಆಶ್ರಮದಲ್ಲಿ ವಾಸಮಾಡುತ್ತಿದ್ದ ಮಹಾತ್ಮನಾದ ವೈಶ್ರವಣನಿಗೆ ಒಮ್ಮೆ ಹೀಗೆ ಬುದ್ಧಿಯುಂಟಾಯಿತು. ಚರಿಷ್ಯೇ ಪರಮಂ ಧರ್ಮಂ ಧರ್ಮೋ ಹಿ ಪರಮಾ ಗತಿಃ || 10|| “ ನಾನು ಶ್ರೇಷ್ಠವಾದ ಧರ್ಮಾಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮಗತಿಯಾಗಿದೆ.” ವೈಶ್ರವಣನು ಹೀಗೆ ಯೋಚಿಸಿ ತಪಸ್ಸು ಮಾಡಲು ನಿಶ್ಚಯಿಸಿ ಕಠೋರ ನಿಯಮಗಳಿಗೆ ಒಳಪಟ್ಟು ಮಹಾವನದಲ್ಲಿ ಒಂದು ಸಾವಿರ ವರ್ಷಗಳ ಕಾಲ ಮಹತ್ತರವಾದ ತಪಸ್ಸನ್ನು ಮಾಡಿದನು. ಒಂದು ಸಾವಿರ ವರ್ಷಗಳು ಕಳೆದ ನಂತರ ವೈಶ್ರವಣನು ಹೊಸ ಹೊಸ ನಿಯಮಗಳನ್ನು ಕಲ್ಪಿಸಿಕೊಂಡು ತಪಸ್ಸು ಮಾಡತೊಡಗಿದನು.
ವನಪರ್ವದ 274ನೇ ಅಧ್ಯಾಯದಲ್ಲಿ ವೈಶ್ರವಣನು ತಂದೆಯಾದ ಪುಲಸ್ತ್ಯನೊಡನಿರದೇ ಪಿತಾಮಹನಾದ ಬ್ರಹ್ಮನ ಬಳಿಗೇ ಹೊರಟುಹೋದನು. ಅದರಿಂದ ಕುಪಿತನಾದ ಪುಲಸ್ತ್ಯನು ವೈಶ್ರವಣನನ್ನು ಬಾಧೆಪಡಿಸುವ ಸಲುವಾಗಿ ಯೋಗಬಲದಿಂದ ದೇಹಾರ್ಧದಿಂದವಿಶ್ರವಸನೆಂಬ ದೇಹಾಂತರವನ್ನು ಪಡೆದನು. ತಂದೆಯನ್ನು ಬಿಟ್ಟು ತನ್ನ ಬಳಿಗೆ ಬಂದ ವೈಶ್ರವಣನ ವಿಷಯದಲ್ಲಿ ಚತುರ್ಮುಖನು ಸುಪ್ರೀತನಾಗಿ ಅವನಿಗೆ ಅಮರತ್ವವನ್ನೂ, ಸಕಲೈಶ್ವರ್ಯಗಳ ಈಶತ್ವವನ್ನೂ, ಲೋಕಪಾಲಸ್ಥಾನವನ್ನೂ, ಈಶಾನನೊಡನೆ ಸಖ್ಯವನ್ನೂ, ನಲಕೂಬರನೆಂಬ ಹೆಸರಿನ ಪುತ್ರನನ್ನೂ ಸಹ ದಯಪಾಲಿಸಿ ರಕ್ಷೋಗಣಗಳಿಂದ ಪರಿವೃತವಾಗಿದ್ದ ಲಂಕಾರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿದನು. ಇಚ್ಛೆಬಂದಲ್ಲಿಗೆ ಹೋಗಬಹುದಾಗಿದ್ದ ಪುಷ್ಪಕವೆಂಬ ವಿಮಾನವನ್ನೂ, ಯಕ್ಷರ ನಾಯಕತ್ವವನ್ನೂ ಮತ್ತು ರಾಜರಾಜನೆಂಬ ಅಭಿದಾನವನ್ನೂ ಚತುರ್ಮುಖಬ್ರಹ್ಮನು ವೈಶ್ರವಣನಿಗೆ ದಯಪಾಲಿಸಿದನು.
ಕುಪಿತನಾದ ಪುಲಸ್ತ್ಯನ ಅರ್ಧದೇಹದಿಂದ ಹುಟ್ಟಿದ ವಿಶ್ರವಸನು ಕೋಪಾವಿಷ್ಟನಾಗಿ ಲಂಕಾಧಿಪತಿಯಾಗಿದ್ದ ವೈಶ್ರವಣನನ್ನು ಉಗ್ರ ದೃಷ್ಟಿಯಿಂದಲೇ ನೋಡುತ್ತಿದ್ದನು. ತನ್ನ ತಂದೆಯಾದ ಪುಲಸ್ತ್ಯನ ಮತ್ತೊಂದು ಅವತಾರವೇ ವಿಶ್ರವಸನ ಸ್ವರೂಪವೆಂಬುದನ್ನು ತಿಳಿದಿದ್ದ ರಾಕ್ಷಸಾಧಿಪತಿಯಾದ ಕುಬೇರನುಮಹಾಕುಪಿತನಾಗಿ ವಿಶ್ರವಸನ ದೇಹ ಧರಿಸಿ ತನ್ನ ಬಳಿಗೆ ಬಂದಿದ್ದ ತಂದೆಯನ್ನು ಶಾಂತಗೊಳಿಸಲು ಯಾವಾಗಲೂ ಪ್ರಯತ್ನಿಸುತ್ತಿದ್ದನು. ವಿಶ್ರವಸನನ್ನು ಸಂತೋಷಗೊಳಿಸುವ ಸಲುವಾಗಿಯೇ ನರವಾಹನನಾದ, ರಾಜಾಧಿರಾಜನಾದ ಕುಬೇರನು ಅವನನ್ನು ಉಪಚರಿಸಲು ಮೂವರು ರಾಕ್ಷಸಿಯರನ್ನು ನೇಮಿಸಿದನು. ಪುಷ್ಪೋತ್ಕಟಾ, ರಾಕಾ ಮತ್ತು ಮಾಲಿನೀ ಎಂಬ ಮೂವರು ರಾಕ್ಷಸಿಯರು ನೃತ್ಯ-ಗೀತಗಳಲ್ಲಿ ಕುಶಲರಾಗಿದ್ದರಲ್ಲದೇ ಮಹಾತ್ಮನಾದ ವಿಶ್ರವಸ ಮಹರ್ಷಿಯನ್ನು ಬಹಳ ಜಾಗರೂಕತೆಯಿಂದ ಉಪಚರಿಸುತ್ತಿದ್ದರು. ರಾಜನ ಆಜ್ಞಾನುಸಾರವಾಗಿ ಮೂವರೂ ಮಹರ್ಷಿಯನ್ನು ಉಪಚರಿಸುತ್ತಿದ್ದರಾದರೂ ಅವರಿಗೆ ಮಹರ್ಷಿಯನ್ನು ಸಂತೋಷಗೊಳಿಸಿ ಅವನ ಅನುಗ್ರಹವನ್ನು ಪಡೆಯಬೇಕೆಂಬ ಸ್ವಾರ್ಥವೂ ಇದ್ದಿತು. ಆದುದರಿಂದ ಮೂವರೂ ಪರಸ್ಪರವಾಗಿ ಸ್ಪರ್ಧಿಸುತ್ತಿರುವವರಂತೆ ಮಹರ್ಷಿಯ ಸೇವೆಮಾಡುತ್ತಿದ್ದರು. ಮಹರ್ಷಿಗೆ ಮಾಡಿದ ಅವರ ಸೇವೆಯು ಫಲಿಸಿತು. ವಿಶ್ರವಸನು ಅವರ ಸೇವೆಯಿಂದ ಸಂತುಷ್ಟನಾಗಿ ಅವರಿಗೆ ವರವನ್ನು ದಯಪಾಲಿಸಿದನು. ಮಹರ್ಷಿಯು ಅವರವರ ಮನೋಗತವಾದ ಆಶಯದಂತೆ ಒಬ್ಬೊಬ್ಬರಿಗೂ ಪುತ್ರರನ್ನು ಅನುಗ್ರಹಿಸಿದನು. ಬಲದಲ್ಲಿ ಅಪ್ರತಿಮರೆನಿಸಿದ ರಾವಣ-ಕುಂಭಕರ್ಣರು ಪುಷ್ಪೋತ್ಕಟೆಯಲ್ಲಿ ಜನಿಸಿದರು ಕೈಕಸೆ ಎನ್ನುವುದಾಗಿಯೂ ಇವಳು ಪ್ರಸಿದ್ಧಳಾಗಿದ್ದಳು. ಮಾಲಿನಿಯು ಸುಪುತ್ರನಾದ ವಿಭೀಷಣನಿಗೆ ಜನ್ಮವಿತ್ತಳು. ರಾಕಾ ಎಂಬುವಳಲ್ಲಿ ಖರಶೂರ್ಪಣಖಾ ಹುಟ್ಟಿದರು. ರೂಪದಲ್ಲಿ ಮಾಲಿನಿಯ ಪುತ್ರನಾದ ವಿಭೀಷಣನು ಉಳಿದ ನಾಲ್ವರನ್ನೂ ಮೀರಿಸಿದ್ದನು. ಅವನು ಸರ್ವಲಕ್ಷಣ ಸಂಪನ್ನನಾಗಿದ್ದನು. ಮಹಾಭಾಗನಾದ ವಿಭೀಷಣನು ಧರ್ಮದ ರಕ್ಷಣೆಯಲ್ಲಿಯೂ, ಧರ್ಮಕಾರ್ಯದಲ್ಲಿಯೂ ಸರ್ವದಾ ಆಸಕ್ತನಾಗಿರುತ್ತಿದ್ದನು. ದಶಗ್ರೀವನೇ ಎಲ್ಲರಿಗೂ ಹಿರಿಯನು. ರಾವಣ ಉತ್ಸಾಹಶಾಲಿಯಾಗಿಯೂ, ಮಹಾವೀರ್ಯವಂತನಾಗಿಯೂ, ಮಹಾಸತ್ತ್ವವಂತನಾಗಿಯೂ, ಅತುಲಪರಾಕ್ರಮಿಯಾಗಿಯೂ ಇದ್ದನು. ಎರಡನೆಯವನಾದ ಕುಂಭಕರ್ಣನು ಎಲ್ಲರಿಗಿಂತಲೂ ಅಧಿಕಬಲಶಾಲಿಯಾಗಿದ್ದನು. ಯುದ್ಧದಲ್ಲಿ ಅವನನ್ನೆದುರಿಸಲು ಯಾರಿಗೂ ಸಾಧ್ಯವಿರಲಿಲ್ಲ. ರಣಾಂಗಣದಲ್ಲಿ ಅವನು ಭಯಂಕರನಾಗಿ ಕಾಣುತ್ತಿದ್ದನು. ಮಹಾಮಾಯಾವೀ. ಮಾಯಾಯುದ್ಧದಲ್ಲಿ ಬಹುಚತುರನಾಗಿದ್ದನು. ಖರನು ಧನುರ್ವಿದ್ಯೆಯಲ್ಲಿ ಬಹುಚತುರನಾಗಿದ್ದನು. ಅವನು ಬ್ರಹ್ಮದ್ವೇಷೀ. ಬ್ರಾಹ್ಮಣರನ್ನು ಕೊಂದು ಅವರ ರಕ್ತವನ್ನು ಕುಡಿದು ಮಾಂಸವನ್ನು ತಿನ್ನುವುದೇ ಅವನ ಕಾರ್ಯವಾಗಿತ್ತು. ಖರನಂತೆಯೇ ಅವನ ತಂಗಿಯಾದ, ಭಯಂಕರಾಕಾರಳಾದ ಶೂರ್ಪಣಖೆಯೂ
ಸಹ ಋಷಿ-ಮಹರ್ಷಿಗಳಿಗೆ ಉಪಟಳಕೊಡುವುದರಲ್ಲಿಯೇ ಸರ್ವದಾ ನಿರತಳಾಗಿರುತ್ತಿದ್ದಳು. ರಾವಣ - ಕುಂಭಕರ್ಣ - ವಿಭೀಷಣ - ಖರ ಇವರೆಲ್ಲರೂ ವೇದ- ವೇದಾಂಗಗಳನ್ನು ಅಧ್ಯಯನಮಾಡಿದ್ದರು. ಶೂರರಾಗಿದ್ದರು. ಮೊದಲು ಅವರೆಲ್ಲರೂ ಸದಾಚಾರ-ಸತ್ಕರ್ಮಗಳಲ್ಲಿಯೇ ನಿರತರಾಗಿರುತ್ತಿದ್ದು ತಮ್ಮ ತಂದೆ ಯಾದ ವಿಶ್ರವಸನೊಡನೆ ಗಂಧಮಾದನಪರ್ವತದಲ್ಲಿ ವಾಸಮಾಡುತ್ತಿದ್ದರು. ಹೀಗೆಯೇ ಅವರು ಗಂಧಮಾದನಪರ್ವತದ ತಪ್ಪಲಿನಲ್ಲಿ ವಾಸಮಾಡುತ್ತಿದ್ದಾಗ ಒಮ್ಮೆ ನರವಾಹನನಾದ ಕುಬೇರನು ಸರ್ವಾಲಂಕಾರಭೂಷಿತನಾಗಿ ತಮ್ಮ ತಂದೆಯೊಡನೆ ಕುಳಿತಿರುವುದನ್ನು ರಾವಣಾದಿಗಳು ನೋಡಿದರು. ಕುಬೇರನ ವೈಭವವನ್ನು ಕಂಡು ಅವರಿಗೆ ಅಸೂಯೆಯು ಹುಟ್ಟಿತು. ಘೋರವಾದ ತಪಸ್ಸನ್ನು ಮಾಡಿ ತಾವೂ ಸಹ ಕುಬೇರನಿಗೆ ಸಾಟಿಯಾದ ವೈಭವವನ್ನು ಪಡೆಯಬೇಕೆಂದು ನಿಶ್ಚಯಿಸಿದವರಾಗಿ ಬಹಳ ಘೋರವಾದ ಮತ್ತು ಕಷ್ಟಸಾಧ್ಯವಾದ ತಪಸ್ಸನ್ನು ಮಾಡಿ ಬ್ರಹ್ಮನನ್ನು ತೃಪ್ತಿಗೊಳಿಸಿದರು. ದಶಗ್ರೀವನು ಒಂದು ಸಹಸ್ರವರ್ಷಗಳ ಪರ್ಯಂತವಾಗಿ ಪಂಚಾಗ್ನಿಗಳ ಮಧ್ಯದಲ್ಲಿ ಏಕಪಾದದಲ್ಲಿ ನಿಂತು ವಾಯುವನ್ನು ಮಾತ್ರವೇ ಆಹಾರವನ್ನಾಗಿ ಸೇವಿಸುತ್ತಾ, ಏಕಾಗ್ರಚಿತ್ತನಾಗಿ ಬ್ರಹ್ಮನನ್ನು ಉದ್ದೇಶಿಸಿ ತಪಸ್ಸನ್ನು ಮಾಡಿದನು. ಕುಂಭಕರ್ಣನು ನಿಯತಾಹಾರನಾಗಿ, ನಿಯತವ್ರತನಾಗಿ, ತಲೆಕೆಳಗಾಗಿ ನಿಂತು, ಸಹಸ್ರವರ್ಷಗಳ ಕಾಲ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿದನು. ಧೀಮಂತನಾದ ವಿಭೀಷಣನು ಪರ್ಣಭಕ್ಷನಾಗಿ ಒಂದು ತರಗೆಲೆಯನ್ನು ಮಾತ್ರ ಆಹಾರವನ್ನಾಗಿ ಸೇವಿಸುತ್ತಾ, ಅದನ್ನೂ ತಿನ್ನದೇ ಸಮಯಗಳಲ್ಲಿ ಉಪವಾಸವನ್ನಾಚರಿಸುತ್ತಾ, ಮಹಾಮಂತ್ರಗಳನ್ನು ಜಪಿಸುತ್ತಾ ಒಂದು ಸಹಸ್ರವರ್ಷಗಳ ಕಾಲ ಬ್ರಹ್ಮನನ್ನು ಉಪಾಸನೆ ಮಾಡಿದನು. ಖರ ಮತ್ತು ಶೂರ್ಪಣಖೆಯರು ಹೀಗೆ ತಪಸ್ಸುಮಾಡುತ್ತಿದ್ದ ರಾವಣ-ಕುಂಭಕರ್ಣ- ವಿಭೀಷಣರ ಸೇವೆಯಲ್ಲಿಯೂ ಮತ್ತು ಅವರ ರಕ್ಷಣೆಯಲ್ಲಿಯೂ ನಿರತರಾಗಿರುತ್ತಿದ್ದು ಅದರಿಂದಲೇ ಸಂತುಷ್ಟಹೃದಯರಾಗಿದ್ದರು. ಒಂದು ಸಹಸ್ರವರ್ಷವು ಪೂರ್ಣವಾದನಂತರ ದಶಕಂಠನು ತನ್ನ ತಲೆಗಳನ್ನೇ ಕತ್ತರಿಸಿ ಬ್ರಹ್ಮನ ಪ್ರೀತ್ಯರ್ಥವಾಗಿ ಅಗ್ನಿಯಲ್ಲಿ ಹೋಮಮಾಡಿದನು. ದೃಢ ಮನಸ್ಕನಾದ ರಾವಣನ ಚರ್ಯೆಯನ್ನು ಕಂಡು ಲೋಕಪಿತಾಮಹನಾದ ಚತುರ್ಮುಖನು ಸಂತುಷ್ಟನಾಗಿ ಪ್ರತ್ಯಕ್ಷನಾದನು. ತಪಸ್ಸು ಮಾಡುತ್ತಿದ್ದ ಮೂವರಿಗೂ ಚತುರ್ಮುಖನು ಪ್ರತ್ಯಕ್ಷನಾಗಿ ಘೋರವಾದ ತಪಸ್ಸಿನಿಂದ ವಿಮುಖರಾಗುವಂತೆ ಅವರನ್ನು ಸಂತೈಸುತ್ತಾ ಹೇಳಿದನು :
ಪ್ರೀತೋಽಸ್ಮಿ ವೋ ನಿವರ್ತಧ್ವಂ ವರಾನ್ವೃಣುತ ಪುತ್ರಕಾ | ಯದ್ಯದಿಷ್ಟಮೃತೇ ತ್ವೇಕಮಮರತ್ವಂ ತಥಾಸ್ತು ತತ್ || 22 || “ಮಕ್ಕಳಿರಾ! ನಿಮ್ಮ ತಪಸ್ಸಿನಿಂದ ಸಂತುಷ್ಟನಾಗಿರುತ್ತೇನೆ. ನಿಮಗೆ ಇಷ್ಟವಾದ ವರಗಳನ್ನು ಕೇಳಿಕೊಳ್ಳಿರಿ. ಅಮರತ್ವವೊಂದನ್ನು ಬಿಟ್ಟು ಉಳಿದ ಯಾವುದೇ ವರವನ್ನು ಕೇಳಿದರೂ ಅನುಗ್ರಹಿಸುತ್ತೇನೆ. ರಾವಣ! ನನ್ನಿಂದ ವರಪಡೆಯಬೇಕೆಂಬ ಏಕೈಕೋದ್ದೇಶದಿಂದ ನೀನು ನಿನ್ನ ತಲೆಗಳನ್ನೂ ಅಗ್ನಿಯಲ್ಲಿ ಹೋಮಮಾಡಿರುವೆ. ಇದರಿಂದ ನೀನು ಅಂಗವಿಕಲನಾಗುವುದಿಲ್ಲ. ನೀನಪೇಕ್ಷಿಸಿದಲ್ಲಿ ಶಿರಸ್ಸುಗಳು ಪುನಃ ಬಂದು ಸೇರಿಕೊಳ್ಳುತ್ತವೆ. ಮೇಲಾಗಿ ನೀನಪೇಕ್ಷಿಸುವ ರೂಪವನ್ನು ಧರಿಸಲೂ ನನ್ನ ಅನುಗ್ರಹದಿಂದ ನಿನಗೆ ಸಾಧ್ಯವಾಗುವುದು. ನಿನ್ನ ಅಪೇಕ್ಷೆಯಂತೆ ನೀನು ಯುದ್ಧದಲ್ಲಿ ನಿನ್ನ ಎದುರಾಗಿ ಬಂದ ಶತ್ರುಗಳನ್ನು ನಿರ್ಮೂಲನಮಾಡಿ ಜಯಗಳಿಸುವ ಸಾಮರ್ಥ್ಯವನ್ನೂ ನನ್ನ ಅನುಗ್ರಹದಿಂದಲೇ ಪಡೆಯುವೆ. ವಿಷಯದಲ್ಲಿ ನೀನು ಸಂಶಯಿಸುವ ಕಾರಣವಿಲ್ಲ.” “ಯಾರೊಡನೆಯೂ ನೀನು ಯುದ್ಧದಲ್ಲಿ ಪರಾಜಿತನಾಗುವುದಿಲ್ಲಎಂದು ಹೇಳಿದ ಬ್ರಹ್ಮನು ಅಮರತ್ವವನ್ನು ಮಾತ್ರ ರಾವಣನಿಗೆ ಕೊಡಲಿಲ್ಲ. “ಆಗಲೇ ರಾವಣನಿಗೆ ತನ್ನ ಸಾವಿನ ಚಿಂತೆ ಹುಟ್ಟಿರಬೇಕು. ಸಂಶಯದ ನಿವಾರಣೆಗಾಗಿ ರಾವಣನು ಬ್ರಹ್ಮನನ್ನು ಸ್ಪಷ್ಟವಾಗಿಯೇ ಕೇಳಿದನು : ಗನ್ಧರ್ವದೇವಾಸುರತೋ ಯಕ್ಷರಾಕ್ಷಸತಸ್ತಥಾ | ಸರ್ಪಕಿನ್ನರಭೂತೇಭ್ಯೋ ಮೇ ಭೂಯಾತ್ಪರಾಭವಃ || 25 || “ಗಂಧರ್ವರಿಂದಾಗಲೀ, ದೇವತೆಗಳಿಂದಾಗಲೀ, ಅಸುರರಿಂದಾಗಲೀ, ಯಕ್ಷ-ರಾಕ್ಷಸರಿಂದಾಗಲೀ, ಸರ್ಪ-ಕಿನ್ನರರಿಂದಾಗಲೀ, ಇತರ ಭೂತಗಳಿಂದಾ ಗಲೀ ನನಗೆ ಯುದ್ಧದಲ್ಲಿ ಪರಾಜಯವುಂಟಾಗಬಾರದು.” ರಾವಣನ ಮಾತಿಗೆ ಬ್ರಹ್ಮನು ನಸುನಗುತ್ತಾ ಉತ್ತರಿಸಿದನು : ಏತೇ ಕೀರ್ತಿತಾಃ ಸರ್ವೇ ತೇಭ್ಯೋಽಸ್ತಿ ಭಯಂ ತವ | ಯತೇ ಮನುಷ್ಯಾದ್ಭದ್ರಂ ತೇ ತಥಾ ತದ್ವಿಹಿತಂ ಮಯಾ || 26 || “ರಾವಣ! ನೀನು ಈಗ ಯಾರು ಯಾರಿಂದ ನಿನಗೆ ಯುದ್ಧದಲ್ಲಿ ಪರಾಜಯವುಂಟಾಗಕೂಡದೆಂದು ಕೇಳಿರುವೆಯೋ ಅವರಾರಿಂದಲೂ ನಿನಗೆ ಮೃತ್ಯುಭಯವಿಲ್ಲ. ಅವರೊಡನೆ ಮಾಡುವ ಯುದ್ಧಗಳಲ್ಲಿ ನೀನು ಖಂಡಿತ ವಾಗಿಯೂ ಜಯಗಳಿಸುವೆ. ಆದರೆ ಮನುಷ್ಯರ ವಿಷಯವಾಗಿ ನೀನು ಪ್ರಸ್ತಾಪವನ್ನೇ ಮಾಡಿರುವುದಿಲ್ಲ. ಆದುದರಿಂದ ನಿನಗೆ ಮಾನವನಿಂದ ಪರಾಜಯವುಂಟಾಗುತ್ತದೆ ಮತ್ತು ನನ್ನ ನಿಯಮವೂ ಸಹ ಇದೇ ಆಗಿರುತ್ತದೆ.
ಮುಂದೆ ದಶಕಂಠನಾದ ರಾವಣನು ತನ್ನ ಹಿಂದಿನ ಇಚ್ಚೆಯಂತೆ ದೈವದತ್ತವಾದ ವರದಿಂದ ಯುದ್ಧದಲ್ಲಿ ಕುಬೇರನನ್ನು ಪರಾಜಯಗೊಳಿಸಿ ಲಂಕಾಪಟ್ಟಣಕ್ಕೆ ಚಕ್ರವರ್ತಿಯಾದನು. ತಾನು ಹಿಂದೊಮ್ಮೆ ನೋಡಿ ಅಸೂಯೆಪಟ್ಟಿದ್ದ ಪುಷ್ಪಕ ವಿಮಾನವನ್ನೂ ರಾವಣನು ಕುಬೇರನಿಂದ ಬಲಾತ್ಕಾರವಾಗಿ ಕಸಿದು ಕೊಂಡನು. ಆದರೆ ಅದರಲ್ಲಿ ಕುಳಿತು ಸುಖ ಪ್ರವಾಸಮಾಡುವ ಭಾಗ್ಯವು ಮಾತ್ರ ರಾವಣನಿಗೆ ಲಭ್ಯವಾಗಲಿಲ್ಲ. ತನಗೆ ಪರಮಪ್ರಿಯವಾಗಿದ್ದ ಪುಷ್ಪಕ ವಿಮಾನವನ್ನು ರಾವಣನು ಅಪಹರಿಸಿದೊಡನೆಯೇ ಕೋಪಾವಿಷ್ಟನಾದ ಕುಬೇರನು ರಾವಣನನ್ನು ಶಪಿಸಿದನು : ಶಶಾಪ ತಂ ವೈಶ್ರವಣೋ ತ್ವಾಮೇತದ್ವಹಿಷ್ಯತಿ | ಯಸ್ತು ತ್ವಾಂ ಸಮರೇ ಹನ್ತಾ ತಮೇವೈತದ್ವಹಿಷ್ಯತಿ || 34 || “ ಪುಷ್ಪಕವಿಮಾನವು ನಿನ್ನನ್ನು ಹತ್ತಗೊಡುವುದಿಲ್ಲ. ನೀನಿದರಲ್ಲಿ ಕುಳಿತು ಸುಖಪ್ರವಾಸಮಾಡುವ ಸಾಧ್ಯತೆಯಿಲ್ಲ. ಆದರೆ ನಿನ್ನನ್ನು ಯಾರು ಯುದ್ಧದಲ್ಲಿ ಸಂಹರಿಸುತ್ತಾನೆಯೋ ಅವನನ್ನು ಮಾತ್ರವೇ ಪುಷ್ಪಕ ವಿಮಾನವು ಧಾರಣೆಮಾಡಿಕೊಳ್ಳುತ್ತದೆ. ನಿನ್ನ ಸಂಹಾರಕನು ಮಾತ್ರವೇ ಪುಷ್ಪಕವಿಮಾನದಲ್ಲಿ ಕುಳಿತು ಸುಖಪ್ರವಾಸಮಾಡಲು ಅರ್ಹನಾಗುತ್ತಾನೆ. ನಿಮ್ಮಣ್ಣನಾದ ಮತ್ತು ನಿನಗೆ ಗುರುವಾದ ನನ್ನನ್ನು ನೀನು ಅವಮಾನ ಗೊಳಿಸಿರುವೆಯಾದುದರಿಂದ ನಿನ್ನ ಅವಸಾನವೂ ಸಹ ಬಹುಬೇಗ ಸನ್ನಿಹಿತ ವಾಗುವುದು”–ಹೀಗೆಂಬುದಾಗಿ ರಾವಣನಿಗೆ ಶಾಪಕೊಟ್ಟು ಕುಬೇರನು ಗಂಧ ಮಾದನಪರ್ವತಕ್ಕೆ ತೆರಳಿದನು. ಧರ್ಮಾತ್ಮನಾದ ಮತ್ತು ತೇಜಸ್ವಿಯಾದ ವಿಭೀಷಣನು ಹಿರಿಯರ ಮಾರ್ಗವನ್ನು ಸ್ಮರಿಸಿಕೊಳ್ಳುತ್ತಾ ಕುಬೇರನ ಹಿಂದೆಯೇ ಹೊರಟನು. ಭಗವಂತನಾದ, ಧನೇಶ್ವರನಾದ ಕುಬೇರನು ತನ್ನ ಕಿರಿಯ ತಮ್ಮನಾದ ವಿಭೀಷಣನ ಸೌಜನ್ಯವನ್ನು ಕಂಡು ಸಂತುಷ್ಟನಾಗಿ ಅವನಿಗೆ ಯಕ್ಷ-ರಾಕ್ಷಸ ಸೈನ್ಯದ ನಾಯಕತ್ವವನ್ನು ವಹಿಸಿಕೊಟ್ಟನು. ಪುರುಷಾದರಾದ ರಾಕ್ಷಸರೂ ಮತ್ತು ಪಿಶಾಚರೂ ಒಟ್ಟಿಗೆ ಕೂಡಿ ಸಭೆಸೇರಿ ದಶಕಂಠಕನಾದ ರಾವಣನೇ ತಮಗೆ ರಾಜನಾಗಲು ಯೋಗ್ಯನೆಂದು ನಿರ್ಧರಿಸಿದವರಾಗಿ ಅವನಿಗೆ ರಾಕ್ಷಸ ಸಾಮ್ರಾಜ್ಯದ ಪಟ್ಟಗಟ್ಟಿದರು. ಬ್ರಹ್ಮನಿಂದ ವರಪಡೆದಿದ್ದ ರಾವಣನಿಗೆ ಅಪಾರವಾದ ಬಲವಿತ್ತು. ಆಕಾಶದಲ್ಲಿಯೂ ಸಂಚರಿಸುವ ಶಕ್ತಿಯನ್ನು ರಾವಣನು ಪಡೆದಿದ್ದನು. ಎಲ್ಲ ಶಕ್ತಿಗಳಿಂದಲೂ ಕೂಡಿದ ರಾವಣನು ದೇವಲೋಕಕ್ಕೆ ಹೋಗಿ ದೇವತೆಗಳನ್ನು ಪರಾಜಯಗೊಳಿಸಿ ಅವರಲ್ಲಿದ್ದ ಅನರ್ಘ್ಯ ವಸ್ತುಗಳೆಲ್ಲವನ್ನೂ ಸುಲಿಗೆಮಾಡಿಕೊಂಡು ಬಂದನು. ಅಂತೆಯೇ ದೈತ್ಯರಾಜರ ಅಪಾರವಾದ ಐಶ್ವರ್ಯವನ್ನೂ ಸೂರೆಗೊಂಡನು. "ರಾವಯಾಮಾಸ ಲೋಕಾನ್ಯತ್ತಸ್ಮಾದ್ರಾವಣ ಉಚ್ಯತೇ" ಅವನು ತನ್ನ ಎದುರಾಳಿಗಳೆಲ್ಲರನ್ನೂ ಬಹುವಾಗಿ ಹಿಂಸಿಸುತ್ತಿದ್ದುದರಿಂದ (ಗೋಳಾಡುವಂತೆ ಮಾಡುತ್ತಿದ್ದುದರಿಂದ) ಅವನಿಗೆ ರಾವಣನೆಂಬ ಅನ್ವರ್ಥನಾಮವೂ ಬಂದಿತು.
ಸುಂದರಕಾಂಡದ 22ನೇ ಸರ್ಗದಲ್ಲಿ ಇತ್ಯುಕ್ತ್ವಾ ಮೈಥಿಲೀಂ ರಾಜಾ ರಾವಣಃ ಶತ್ರುರಾವಣಃ | ಸಂದಿಶ್ಯ ತತಃ ಸರ್ವಾ ರಾಕ್ಷಸೀರ್ನಿರ್ಜಗಾಮ || 1 || ಶತ್ರುಗಳನ್ನುಹಾ ಹಾಎಂದು ಕೂಗಿಕೊಳ್ಳುವಂತೆ ಮಾಡಲು ಸಮರ್ಥನಾಗಿದ್ದ ರಾವಣನು ಸೀತಾದೇವಿಗೆ ಹೀಗೆ ಹೇಳಿ ಅವಳನ್ನು ಬಹಳ ಬೇಗ ತನ್ನ ವಶಳಾಗುವಂತೆ ಮಾಡಬೇಕೆಂದು ಎಲ್ಲ ರಾಕ್ಷಸಿಯರಿಗೂ ಆಜ್ಞಾಪಿಸಿ ಅಶೋಕವನದಿಂದ ನಿರ್ಗಮಿಸಿದನು. (ಶತ್ರುರಾವಣಃ : ಶತ್ರೂನ್ರಾವಯತಿ ಹಾಹಾಶಬ್ದಂ ಕಾರಯತಿ ಸಃ= ಶತ್ರು ಗಳನ್ನು ಹಾಹಾ ಎಂದು ಕೂಗಿಕೊಳ್ಳುವಂತೆ ಮಾಡುವವನು.)
ರಾವಣ ವೇದಜ್ಞನಾಗಿದ್ದ, ಸಂಗೀತಗಾರನಾಗಿದ್ದ, ಶಾಸ್ತ್ರ ಪರಿಣತನಾಗಿದ್ದ, ರಾಜನೀತಿಜ್ಞನಾಗಿದ್ದ, ಆತ ಅಪ್ರತಿಮ ದೈವ ಭಕ್ತನಾಗಿದ್ದ. ಆತನ ಕುರಿತಾದ ಪರಸ್ತ್ರೀ ವ್ಯಾಮೋಹದ ಕುರಿತು ಎಲ್ಲಿಯೂ ಉಲ್ಲೇಖ ಸಿಗಲಿಲ್ಲ. ಸೀತಾಪಹರಣ ಬಿಟ್ಟರೆ ಆತನ ಕುರಿತಾದ ಪರಸ್ತ್ರೀ ಅಪಹರಣ ಸಿಗುವುದಿಲ್ಲ. ಇನ್ನು ವಿಶ್ವಾಮಿತ್ರ ಕೂಡ ಈತನಿಂದ ಪ್ರೇರಿತರಾದವರಿಂದ ಉಪಟಳ ಎನ್ನುವುದು ವಿಶೇಷವೆನ್ನಿಸುತ್ತದೆ. ಉಳಿದಂತೆ ಈತ ಉತ್ತಮ ಎನ್ನ ಬಹುದು. ಆದರೆ ಈತ ಎಲ್ಲರಿಗಿಂತ ಜಾಸ್ತಿ ಶಾಪಗ್ರಸ್ತನಾಗಿದ್ದನ್ನು ಪರಿಗಣಿಸಿದರೆ ಈತ ರಾಕ್ಷಸನೇ ಆಗಿದ್ದ. ಸ್ವಪ್ರತಿಷ್ಟೆ, ಅಹಂಕಾರ, ಮಮಕಾರ ವಾತ್ಸಲ್ಯ ಎಲ್ಲವೂ ಈತನನ್ನು ಹಾಳುಮಾಡಿತು.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment