Search This Blog

Thursday 2 August 2018

ಅಕೂಪಾರಃ


ನಿನ್ನೆ ನಾನು ಕಃ ಅಂದರೆ ಯಾರು ಎಂದು ಬರೆದೆ. ಹೌದು ಕಃ ಎಂದು ನನ್ನನ್ನೆ ನಾನೇ ಪ್ರಶ್ನಿಸಿಕೊಂಡರೂ ನಾನು ಯಾರು ? ಈ ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಕಃ ದಿಂದ ಬ್ರಹನಾದ, ಬ್ರಹ್ಮನಿಂದ ಇಂದ್ರ ಮಹೇಂದ್ರನಾದ ಅನ್ನುವುದು ನಿನ್ನೆಯ ವಿಷಯವಾಗಿತ್ತು. ಕಸ್ಮೈ ದೇವಾಯ ಹವಿಷಾ ವಿಧೇಮಾ ಎನ್ನುವಲ್ಲಿನ ಕಸ್ಮೈ ಯಾರಿಗೆ ಎನ್ನುವಲ್ಲಿಯು ಪ್ರಶ್ನೆಯಾಗಿಯೆ ಉಳಿಯುತ್ತದೆ. ಅಲ್ಲಿನ ಕಸ್ಮೈ ಕಂ ಉದ್ದೇಶಿಸಿದೆ. ಕಂ ಎಂದರೆ ಸುಖವನ್ನು ನಿರ್ದೇಶಿಸುತ್ತದೆ. ಅದೇ "ಆನಂದೋ ಬ್ರಹ್ಮೇತಿ ವ್ಯಜನಾತ್ | ಆನಂದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ| ಆನಂದೇನ ಜಾತಾನಿ ಜೀವಂತಿ| ಆನಂದಂ ಪ್ರಯಂತ್ಯಭಿಸಂವಿಶತೀತಿ| ಎನ್ನುವುದಾಗಿತೈತ್ತಿರೀಯೋಪನಿಷತ್ತು: 3-6 ರಲ್ಲಿ ಬರುತ್ತದೆ. ಅಂದರೆ ಆನಂದ ಎನ್ನುವುದು ಬ್ರಹ್ಮವು. ಆನಂದದಿಂದಲೇ ಪ್ರಾಣಿಗಳು ಹುಟ್ಟುತ್ತವೆ, ಹುಟ್ಟಿದವುಗಳು ಆನಂದದಿಂದ ಜೀವಿಸುತ್ತವೆ. ಕೊನೆಗೆ ಆನಂದವನ್ನೇ ಹೋಗಿ ಸೇರುತ್ತವೆ. ಎನ್ನುವುದು ಇದರ ಸ್ಥೂಲಾರ್ಥ.
ಅದೇನೇ ಇರಲಿ ಆ ಕ ಕಾರದಿಂದ ಇಂದು ಸ್ವಲ್ಪ ಭಿನ್ನವಾದ ಕ ಕಾರವನ್ನು ಬರೆಯುತ್ತಿದ್ದೇನೆ.
ಯನ್ಮನ್ಯಸೇ ವರೇಣ್ಯಮಿಂದ್ರ ದ್ಯುಕ್ಷಂ ತದಾ ಭರ|
ವಿದ್ಯಾಮ ತಸ್ಯ ತೇ ವಯಮಕೂಪಾರಸ್ಯ ದಾವನೇ || ಇದು ಋಗ್ವೇದದ ಐದನೇ ಮಂಡಲದಲ್ಲಿ ಬರುವ ಋಕ್ಕು.
ಈಗ ಇಲ್ಲಿನ ಕಕಾರವನ್ನು ಗಮನಿಸುತ್ತೇನೆ. "ಅಕೂಪಾರಸ್ಯ ದಾವನೇ" ಇದರಲ್ಲಿ ದಾವನೇ ಎನ್ನುವುದು ದಾನವನ್ನು ಸೂಚಿಸಿ ಹೇಳಲಾಗಿದೆ. ಆದರೆ ಅಕೂಪಾರಸ್ಯ ಎನ್ನುವುದು ಅನೇಕ ಅರ್ಥಗಳಿಂದ ಕೂಡಿದ ಪದ. ಯಾಸ್ಕರು ಇದನ್ನು ಅಕುಪರಸ್ಯ ಎಂದು ಹೇಳುತ್ತಾ ಕು ಎಂದರೆ ಅದು ಕುತ್ಸಿತ ಎನ್ನುವ ಅರ್ಥವನ್ನು ಧ್ವನಿಸುತ್ತದೆ. ಕುತ್ಸಿತ ಎಂದರೆ ಸ್ವಲ್ಪ ಎನ್ನುವ ಧ್ವನಿ. ಪರಣ ಎಂದರೆ ಪೂರಣ. ಅಂದರೆ ಸ್ವಲ್ಪವೇ ತುಂಬಿರುವ ಎನ್ನುವ ಅರ್ಥವನ್ನು ಕೊಡುತ್ತದೆ ಆದರೆ ಇಲ್ಲಿ ಅಕುಪರಣ ಎಂದರೆ ಅಲ್ಲಿ ಸ್ವಲ್ಪವಲ್ಲದ, ಹೆಚ್ಚಾದ ಪಾರವೇ ಇಲ್ಲದ ಎನ್ನುವ ಅರ್ಥವನ್ನು ಕೊಡುತ್ತದೆ. ಅಕುಪರಣ ಎನ್ನುವುದಕ್ಕೆ ಇದು ಅರ್ಥವಾದರೆ ಅಕೂಪಾರ ಎನ್ನುವುದಕ್ಕೂ ಇದೇ ಅರ್ಥವೆನ್ನುವುದು ನಿರುಕ್ತಕಾರರ ಅಭಿಪ್ರಾಯ.
"ಸಮುದ್ರೋsಪ್ಯಕೂಪಾರ ಉಚ್ಯತೇsಕೂಪಾರೋ ಭವತಿ ಮಹಾಪಾರಃ" ಕಡಿಮೆ ಇರದ ಅಪಾರವಾದದದ್ದನ್ನು ಅಕೂಪಾರ ಎಂದು ಕರೆದದ್ದು ಒಂದಾದರೆ ಈಗ ಇಲ್ಲಿ ಸಮುದ್ರವೂ ಅಕೂಪಾರ ಎನ್ನಲಾಗುತ್ತದೆ. ಯಾಕೆಂದರೆ ಸಮುದ್ರ ಅಥವಾ ಸಾಗರವು ಬಹುದೂರದ ತನಕ ವ್ಯಾಪಿಸಿರುವುದರಿಂದ ಇದನ್ನು ಅಕೂಪಾರ ಎನ್ನಲಾಗಿದೆ. ಇಲ್ಲಿ ಪಾರ ಎಂದರೆ ದಡ ಅಥವಾ ತೀರಪ್ರದೇಶ. ಸಮುದ್ರದ ಇನ್ನೊಂದು ಮಗ್ಗುಲು ನಮಗೆ ಕಾನೀಸುತ್ತಿಲ್ಲವಾದುದರಿಂದ ಅದನ್ನು ಅಕೂಪಾರ ಎನ್ನಲಾಗಿದೆ. "ಮಹಾಪಾರಃ" ಎನ್ನುವುದಾಗಿಯೂ ಸಮುದ್ರ ಕರೆಸಿಕೊಂಡಿದೆ. ನಮ್ಮ ಕಣ್ಣಿಗೆ ಇನ್ನೊಂದು ತೀರ ಕಾಣಿಸಿಕೊಳ್ಳದೇ ಊಹೆಗೂ ನಿಲುಕದಿರುವುದನ್ನೇ ಹಾಗೆಂದು ಹೇಳಲಾಗಿದೆ.
"ಆದಿತ್ಯೋsಪ್ಯಕೂಪಾರ ಉಚ್ಯತೇsಕೂಪಾರೋ ಭವತಿ ದೂರಪಾರಃ" ಪ್ರಭಾತ ಸಮಯದಲ್ಲಿ ಉದಯನಾಗುವ ಸೂರ್ಯ ಅಸ್ತಮಾನದ ತನಕ ಅದೆಷ್ಟು ದೂರ ಕ್ರಮಿಸುತ್ತಾನೆ ಎಂದು ಅಳೆಯಲು ಸುಲಭದಲ್ಲಿ ಸಾಧ್ಯವಿರದ ಕಾರಣಾದಿಂದ ಸೂರ್ಯನೂ ಸಹ ಅಕೂಪಾರ ಎನ್ನಿಸಿಕೊಳ್ಳುತ್ತಾನೆ.
"ಕಚ್ಛಪೋsಪ್ಯಕೂಪಾರ ಉಚ್ಯತೇ ನ ಕೂಪಮೃಚ್ಚತಿ" ಆಮೆಗೂ ಸಹ ಅಕೂಪಾರ ಎನ್ನುವ ಹೆಸರಿದೆ. ಆಮೆ ಸ್ವಲ್ಪವೇ ನೀರಿರುವ ಭಾವಿಯಲ್ಲಿ ವಾಸಮಾಡುತ್ತಾ ಹೆಚ್ಚು ಸಂಚಾರಕ್ಕೆ ಅವಕಾಶವಿಲ್ಲದೇ ಅಲ್ಲಿಯೇ ಇರುವುದರಿಂದ ಅದಕ್ಕೆ ಭಾವಿ ಎನ್ನುವುದು ಅ-ಕೂಪ-ಅರವಾಗಿರುತ್ತದೆ. ಆದುದರಿಂದ ಇಲ್ಲಿ ಅಕೂಪಾರ ಆಗುತ್ತದೆ.
ಕಚ್ಛಪ ಎನ್ನುವಲ್ಲಿಯೂ ಕಕಾರವಿದೆ ಇದಕ್ಕೆ ನಿರುಕ್ತಕಾರರ ಅಭಿಮತ ಹೀಗೆ ಕಚ್ಚವೆಂದು ಹೆಳುವುದು ಆಮೆಯ ಮುಖಕ್ಕೆ. "ಕಚ್ಛಂ ಪಾತೀತಿ ಕಚ್ಛಪಃ" ತನ್ನ ಮುಖವನ್ನು ಅತ್ಯಂತ ಕಾಳಜಿಯಿಂದ ವಿಶೇಷವಾಗಿ ರಕ್ಷಿಸಿಕೊಳ್ಳುವುದರಿಂದ ಅಂದರೆ ಪಾತಿ ಎನ್ನುವುದು ರಕ್ಷಣೆಗೆ. ಆದುದರಿಂದ ಕಛ್ಛಪ ಎನ್ನಿಸಿಕೊಳ್ಳುತ್ತದೆ. ಪಾತಿ ಧಾತುವಿಗೆ ಪಾ ಪಾನೆ ಎನ್ನುವ ಅರ್ಥವೂ ಇರುವುದರಿಂದ ಕಚ್ಚೇನ ಪಾತಿ ಅಂದರೆ ತನ್ನ ಬಾಯಿಯಿಂದ ಕುಡಿಯುವುದರಿಂದ ಕಚ್ಚಪ ಎನ್ನಿಸಿಕೊಳ್ಳುತ್ತದೆ.
ಕಚ್ಛ ಮತ್ತು ಖಚ್ಚ ಎರಡಕ್ಕೂ ಒಂದೇ ಅರ್ಥವಾಗುತ್ತದೆ. ಕ ಎಂದರೆ ನೀರನ್ನು ಕುರಿತಾಗಿ ಹೇಳುವುದಾದರೆ ಖ ಎನ್ನುವುದು ಆಕಾಶವನ್ನು ಸೂಚಿಸುತ್ತದೆ. ಛಾದಯತೀತಿ ಛಃ ಎಂದು ಗಮನಿಸಿದರೆ ಆಮೆ ತನಗೆ ಸಂಕಷ್ಟ ಬಂದಾಗ ಅಥವಾ ಪ್ರಕೃತಿಯಲ್ಲಿನ ವೈಪರೀತ್ಯದ ಸೂಚನೆ ಸಿಕ್ಕಿದಾಗ ತನ್ನ ಕತ್ತನ್ನು ಒಳಸರಿಸಿ ಚಿಪ್ಪಿನಿಂದ ರಕ್ಷಿಸಿಕೊಳ್ಳುವುದರಿಂದ ಅದನ್ನು ಕಚ್ಛಪ ಅಥವಾ ಖಚ್ಛಪ ಎಂದು ಕರೆಯಲಾಗುತ್ತದೆ.
ಛಾದ್ಯತೇ ಎನ್ನುವುದು ಆವರಿಸು ಎನ್ನುವುದಕ್ಕೂ ಹೇಳಲ್ಪಡುತ್ತದೆ. ಅಂದರೆ ಕ ಅಂದರೆ ನೀರಾದಾಗ ಅದನ್ನು ಆವರಿಸಿರುವುದು ನದಿ. ಆದುದರಿಂದ ನದಿಯೂ ಸಹ ಕಚ್ಛಪ ಎನ್ನಿಸಿಕೊಳ್ಳುತ್ತದೆ. ಕ ಎನ್ನುವ ವಿಷಯದ ಕುರಿತಾಗಿ ಆಲೋಚಿಸುತ್ತಾ ಎಲ್ಲೆಲ್ಲೋ ಹರಿದಾಡಿ ಎಲ್ಲಿಗೋ ಬಂದು ನಿಂತಿತು.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment