Search This Blog

Sunday 26 August 2018

ಔಶಿಜ ಕಕ್ಷೀವಾನನೆನ್ನುವ ಮಂತ್ರದೃಷ್ಟಾರ ಮತ್ತು ಸ್ವನಯ ಮಹಾರಾಜ


ಸೋಮಾನಂ ಸ್ವರಣಂ ಕೃಣುಹಿ ಬ್ರಹ್ಮಣಸ್ಪತೇ |
ಕಕ್ಷೀವಂತಂ ಔಶಿಜಃ ||
ಕಕ್ಷೀವತ, ಔಶಿಜ ಅಥವಾ ಕಕ್ಷೀವಾನ್ ಎಂದು ಕರೆಯಲ್ಪಡುವ ಋಷಿಯೊಬ್ಬ ಋಗ್ವೇದ ಕಾಲದ ಪ್ರಾಚೀನರಲ್ಲಿ ಕಂಡು ಬರುವವನು ಈತನ ತಾಯಿ ಉಶಿಜಾ ಎನ್ನುವವಳು ತಂದೆ ದೀರ್ಘತಮ ಈತ ಕ್ಷತ್ರಿಯನೆಂದು ಎಲ್ಲೋ ಒಂದು ಕಡೆ ಹೇಳಲಾಗಿದ್ದು ಬ್ರಾಹ್ಮಣ್ಯವನ್ನು ಹೊಂದಿದ ಎಂದು ಹೇಳಲಾಗುತ್ತದೆ. ಈತ ಪಜ್ರ ಎನ್ನುವ ವಂಶದವನು. ಈತನ ವಂಶೀಯರನ್ನು ಪಜ್ರವಂಶೀಯ ಆಂಗೀರಸರೆಂದು ಕರೆಯಲಾಗಿದೆ. ಈತ ಸೂಕ್ತ ದೃಷ್ಟಾರನಾಗಿದ್ದ. ಕಕ್ಷೀವಾನ ಮತ್ತು ಸ್ವನಯ ಎನ್ನುವ ಎರಡು ಹೆಸರುಗಳು ಋಗ್ವೇದದಲ್ಲಿ ಕಾಣಿಸಿಕೊಂಡರೆ ಕಕ್ಷೀವಾನನ ಹೆಸರಿ ತೈತ್ತೀರೀಯ ಸಂಹಿತೆಯಲ್ಲಿಯೂ ಕಾಣಿಸಿಕೊಂಡಿದೆ.
ಒಮ್ಮೆ ಸ್ವನಯ ಎನ್ನುವ ಮಹಾರಾಜ ವಿಹಾರಕ್ಕಾಗಿ ಹೊರರಡುತ್ತಾನೆ, ರಾಜ ಹೊರಟ ಅಂದರೆ ಪರಿವಾರ ಸಹಜ ತಾನೇ ರಾಜನ ಜೊತೆ ಸಂಸಾರವೇ ಹೊರಟಿತ್ತು. ಹೀಗೇ ಹೋಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಸುಂದರ ಋಷಿಕುಮಾರ ಮಾರ್ಗಾಯಾಸದಿಂದ ಮಲಗಿರುವುದು ಕಾಣುತ್ತದೆ. ರಾಜ ಸ್ವನಯ ಆತನನನ್ನು ನೋಡಿ ನಿಂತು ಬಿಡುತ್ತಾನೆ. ಋಷಿ ಕುಮಾರನ ಮೈ ಯೆಲ್ಲಾ ಮಾರ್ಗದಲ್ಲಿನ ಧೂಳು ಆವರಿಸಿರುತ್ತದೆ. ಕಾಡಿನ ಮಾರ್ಗವಾಗಿ ಬಹಳ ದೂರ ನಡೆದು ಬಂದಿದ್ದ ಕತ್ತಲಾವರಿಸಿತ್ತು ರಾತ್ರಿಯಾಯಿತು ಅಲ್ಲಿಯೇ ಮಲಗಿದವನಿಗೆ ಮಾರ್ಗಾಯಾಸ ಬೇರೆ ಹಾಯಾಗಿ ನಿದ್ದೆ ಹೊತ್ತಿತ್ತು. ಈತನ ಬಾಹ್ಯ ಸೌಂದರ್ಯಕ್ಕೆ ಸ್ವನಯ ಮಾರುಹೋಗುತ್ತಾನೆ. ಬೆಳಗಿನ ಜಾವ ರಾಜ ಆತನನ್ನೇ ನೋಡುತ್ತಾ ನಿಂತೇ ಬಿಟ್ಟ. ರಾಜ ನಿಂತಾಕ್ಷಣ ಆತನ ಪರಿವಾರವೂ ನಿಂತು ಬಿಟ್ಟಿತು. ಕೋಲಾಹಲದಿಂದಾಗಿ ಋಷಿಕುಮಾರನಿಗೆ ಎಚ್ಚರವಾಯಿತು. ಋಷಿಕುಮಾರ ಸುತ್ತಲೂ ನೋಡುತ್ತಾನೆ. ಸುತ್ತಲೂ ಜನಗಳ ಗುಂಪು ನೆರೆದಿದೆ. ರಾಜ ಗುಂಪನ್ನೆಲ್ಲಾ ಚದುರಿಸಿ ಋಷಿಕುಮಾರರೇ ತಾವೆಲ್ಲಿಗೆ ಹೋಗುತ್ತಿದ್ದೀರಿ ? ಎಲ್ಲಿಂದ ಬಂದಿರುವಿರಿ ಎಂದು ಪ್ರಶ್ನಿಸುತ್ತಾನೆ. ತಾನು ಗುರುಗಳ ಆಶ್ರಮದಿಂದ ಸ್ನಾತಕನಾಗಿ ಹೊರಟು ಬಂದಿರುವೆ, ಪಜ್ರವಂಶೀಯನಾದ ನಾನು ಉಚಥ್ಯನ ಮಗನಾದ ದೀರ್ಘತಮಸ್ಸೆನ್ನುವ ಋಷಿಯ ಮಗ ಕಕ್ಷೀವಾನ ಎಂದು ನನ್ನ ಹೆಸರು, ನನ್ನನ್ನು ಔಶಿಜ ಎಂದೂ ಕರೆಯುತ್ತಾರೆ ಎಂದು ಮೃಧು ಧ್ವನಿಯಲ್ಲಿ ಹೇಳಿದ. ನಾನು ನನ್ನ ಮನೆಯ ಕಡೆ ಹೋಗುತ್ತಿದ್ದೇನೆ. ಬಹಳ ದೂರ ನಡೆದು ಬಂದಿದ್ದರಿಂದ ಮಾರ್ಗಾಯಾಸದಿಂದ ಬಳಲಿ ಇಲ್ಲಿಯೇ ವಿಶ್ರಾಂತಿ ತೆಗೆದುಕೊಂಡೆ ಬಹಳ ಹೊತ್ತಾಗಿ ಬಿಟ್ಟಿತು ಎಂದು ಉತ್ತರಿಸಿದಾಗ ರಾಜ ತನ್ನ ಪರಿಚಯ ಹೇಳಿಕೊಳ್ಳುತ್ತಾನೆ. ತಾನು ಭಾವಯವ್ಯನ ಮಗ, ಸ್ವನಯ ಎನ್ನುವುದು ನನ್ನ ಹೆಸರು. ಎಂದು ಪರಿಚಯಿಸಿಕೊಳ್ಳುತ್ತಾನೆ. ಹಾಗೆಯೇ ರಾಜ ತನ್ನ ಪರಿವಾರದ ತನ್ನ ಮಡದಿಯನ್ನು ಹಾಗೂ ಪುತ್ರಿಯರನ್ನೂ ಪರಿಚಯಿಸಿ ಪುರೋಹಿತರನ್ನೂ ಪರಿಚಯಿಸಿ ತಾನು ವಿಹಾರಕ್ಕಾಗಿ ಬಂದಿರುವುದಾಗಿ ತಿಳಿಸುತ್ತಾನೆ. ಸ್ವನಯನು ಕಕ್ಷೀವಾನ್ ನನ್ನು ತನ್ನ ರಥದ ಮೇಲೆ ಕುಳ್ಳೀರಿಸಿಕೊಳ್ಳುತ್ತಾನೆ. ಸ್ವನಯ ಆತನ ರೂಪಕ್ಕೆ ಮಾರುಹೋಗಿದ್ದ. ರಾಜ ಆತನನ್ನು ಆತನನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಮಧುಪರ್ಕಾದಿಗಳನ್ನು ಕೊಡುತ್ತಾನೆ ಹಾಗೆಯೇ ಪುರೋಹಿತರ ಸಮ್ಮುಖದಲ್ಲಿ ತನ್ನ ಮಡದಿಯನ್ನು ಕೇಳಿಕೊಂಡು ತನ್ನ ಹತ್ತು ಮಂದಿ ಪುತ್ರಿಯರನ್ನು ಆಂಗೀರಸ ಗೋತ್ರದ ಕಕ್ಷೀವಾನನಿಗೆ ಮದುವೆ ಮಾಡಿಕೊಡುತ್ತಾನೆ.
ಪ್ರಾತಾರತ್ನಂ ಪ್ರಾತರಿತ್ವಾ ದಧಾತಿ ತಂ ಚಿಕಿತ್ವಾನ್ಪ್ರತಿ ಗೃಹ್ಯಾನಿ ಧತ್ತೇ | ತೇನ ಪ್ರಜಾಂ ವರ್ಧಯಮಾನ ಆಯೂ ರಾಯಸ್ಪೋಷೇನ ಸಚತೇ ಸುವೀರಃ ||
ಸ್ವನಯ ರಾಜನಿಂದ ಪ್ರಾತಃಕಾಲದಲ್ಲಿ ಅರ್ಪಿತವಾದ ರತ್ನಾದಿಗಳನ್ನು ಕಕ್ಷೀವಂತನು ಅದು ಕೆಟ್ಟ ಸಂಪತ್ತಲ್ಲ ಎಂದು ತಿಳಿದು ಅದನ್ನು ಸ್ವೀಕರಿಸಿ ಅದನ್ನು ತನ್ನ ಪಿತೃವಿಗೆ(ದೀರ್ಘತಮನಿಗೆ ಕೊಟ್ಟು) ಆತನಿಂದ ಪುನಃ ಕೊಡಲ್ಪಟ್ಟದ್ದನ್ನು ಸ್ವೀಕರಿಸಿ ಪುತ್ರನನ್ನು ಪ್ರಜೆಗಳನ್ನು ಪೋಷಿಸುತ್ತಾ ದೀರ್ಘಾಯುವಾಗಿ ಉತ್ತಮ ಸಂತಾನ ಉಳ್ಲವನಾಗಿ ಐಶ್ವರ್ಯವಂತನಾಗಿ ಜೀವಿಸಿದನು ಎನ್ನುವುದು ಈ ಋಕ್ಕಿನ ಅರ್ಥ. ರಾಜ ಸ್ವನಯ ಏನು ಕೊಟ್ಟ ಅನ್ನುವುದನ್ನು ಗಮನಿಸಿದರೆ ರಥಗಳನ್ನು ಕೊಟ್ಟ, ನೂರು ಸುವರ್ಣ ದ್ರವ್ಯಗಳನ್ನು ಕೊಟ್ಟನಂತೆ, ನೂರು ಕುದುರೆಗಳು ನೂರು ಎತ್ತುಗಳನ್ನು ಕೊಟ್ಟನಂತೆ, ಸಾವಿರದ ಅರವತ್ತು ಗೋವುಗಳನ್ನು ನೀಡುತ್ತಾನೆ, ಹನ್ನೊಂದು ರಥಗಳನ್ನು ನೀಡಿದ ಎನ್ನಲಾಗಿದೆ. ಅವುಗಳನ್ನು ಸ್ವೀಕರಿಸಿದ ಕಕ್ಷೀವಾನ ಇವುಗಳನ್ನೆಲ್ಲಾ ತನ್ನ ತಂದೆ ದೀರ್ಘತಮನಿಗೆ ಕೊಡುತ್ತಾನೆ. ದೀರ್ಘತಮ ಅದನ್ನು ತನ್ನ ಮಗನಿಗೇ ಮರಳಿಸುತ್ತಾನೆ.
ಕಕ್ಷೀವಾನನ ಕುರಿತಾಗಿ ಸ್ವಲ್ಪ "ಕಕ್ಷ್ಯಾ ರಜ್ಜುರಶ್ವಸ್ಯ" ಎನ್ನುವುದು ನಿರುಕ್ತದ ಮಾತು. ಕಕ್ಷ್ಯಾ ಎನ್ನುವುದು ಕುದುರೆಯನ್ನು ಕಟ್ಟುವ ಹಗ್ಗ. ಅಂತಹ ಹಗ್ಗವನ್ನು ಹಿಡಿದು ಕೊಂಡಿದ್ದರಿಂದಲೇ ಕಕ್ಷೀವಂತನಿಗೆ ಕಕ್ಷ್ಯಾವಾನ್ ಆದ. ಈ ಕುದುರೆ ಕಟ್ಟುವ ಹಗ್ಗ ಕ್ಷತ್ರಿಯನ ಬಳಿ ಇರಬೇಕಾಗಿತ್ತು ಅದು ಕಕ್ಷೀವಾನ್ ನ ಬಳಿ ಹೇಗೆ ಬಂತು ಎನ್ನುವ ಒಂದು ಸಂದೇಹ ಉಂಟಾಗುತ್ತದೆ. ಕಕ್ಷೀವಾನ ಕ್ಷತ್ರಿಯನಾಗಿದ್ದನೇ ಸ್ವನಯ ಮಹಾರಾಜ ಕೊಟ್ಟ ದಾನದ ಪರಿಗ್ರಹ ಹೇಗೆ ಸಾಧ್ಯ ಎನ್ನುವ ಜಿಜ್ಞಾಸೆ ಉಂಟಾಗುತ್ತದೆ.
ಅದದಾಂ ಅರ್ಭಾಂ ಮಹತೇ ವಚಸ್ಯವೇ ಕಕ್ಷೀವತೇ ವೃಚಯಾಮಿಂದ್ರ ಸುನ್ವತೇ........ ಎನ್ನುವ ಒಂದನೇ ಮಂಡಲದ ೫೧ನೇ ಸೂಕ್ತದಲ್ಲಿ ಹೀಗೆ ಬರುತ್ತದೆ. ಕಕ್ಷೀವಂತನೆನ್ನುವ ರಾಜನಿಗೆ ವೃಚಯಾ ಎನ್ನುವ ತನ್ನ ಮಗಳನ್ನು ಕೊಟ್ಟಿರುವೆ ಎಂದು ಸ್ವನಯ ರಾಜ ಹೇಳುತ್ತಾನೆ. ಆದರೆ ಇದೇ ವೃಚಯಾ ಎನ್ನುವ ಸ್ತ್ರೀ ಹೆಚ್ಚು ಕಡೆ ಕಾಣಿಸಿಕೊಳ್ಳದಿದ್ದರೂ ಇಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಸೋಮವನ್ನು ಹಿಂಡಿ ನಿನ್ನನ್ನು(ಇಂದ್ರ) ಆರಾಧಿಸಿದ ಕಕ್ಷೀವಂತನೆಂಬ ರಾಜ ಎನ್ನಿಸಿಕೊಳ್ಳುತ್ತಾನೆ. ಹಾಗಾದರೆ ಹೇಗೆ ಕಕ್ಷೀವಂತ ನೆನ್ನುವವನು ರಾಜನಾದ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದಕ್ಕೆ ಸಿಗುವ ಉತ್ತರ ಇಷ್ಟೇ! ಕಳಿಂಗ ಎನ್ನುವ ರಾಜನೊಬ್ಬನಿಗೆ ಬಹುಕಾಲದಿಂದ ಮಕ್ಕಳಿರಲಿಲ್ಲ. ಅದಾಗಲೇ ಅವನಿಗೆ ವೃದ್ಧಾಪ್ಯವೂ ಸಮೀಪಿಸಿತ್ತು ಪುತ್ರೋತ್ಪಾದನೆಗೆ ಅಸಮರ್ಥನಾಗಿದ್ದ. ಒಮ್ಮೆ ಉಚಥ್ಯನ ಮಗ ದೀರ್ಘತಮನು ಕಳಿಂಗರಾಜನಿದ್ದಲ್ಲಿ ಬಂದಾಗ ಕಳಿಂಗ ದೀರ್ಘತಮನಲ್ಲಿ ತನ್ನ ಸ್ಥಿತಿಯನ್ನು ಹೇಳಿಕೊಂಡು ಮರುಗುತ್ತಾನೆ. ಮತ್ತು ದೀರ್ಘತಮನಲ್ಲಿ ತನ್ನ ರಾಜ ಮಹಿಷಿಯಲ್ಲಿ ಒಂದು ಪುತ್ರೋತ್ಪಾದನೆ ಮಾಡಿಕೊಡು ಎಂದು ಬೇಡಿಕೊಳ್ಳುತ್ತಾನೆ. ದೀರ್ಘತಮ ಆಳೊಚಿಸಿ ಆಗಬಹುದು ಎಂದು ಒಫ್ಫಿಕೊಳ್ಳುತ್ತಾನೆ. ರಾಜ ರಾಣಿಯಲ್ಲಿ ವಿಷಯ ತಿಳಿಸಿ ದೀರ್ಘತಮನಲ್ಲಿ ನೀನು ಒಬ್ಬ ಪುತ್ರನನ್ನು ಪಡೆ ಎಂದು ಹೇಳುತ್ತಾನೆ. ರಾಣಿಗೆ ಎದುರು ಮಾತನಾಡುವಂತಿಲ್ಲ ಒಪ್ಪಿಕೊಂಡು ಆಮೇಲೆ ಕುರೂಪಿಯೂ ವಯಸ್ಸಿನಲ್ಲಿಯೂ ಬಹಳ ಹಿರಿಯನಾದವನನ್ನು ಅಸಹ್ಯ ಪಟ್ಟೂ ಉಶಿಕ್ ಎನ್ನುವ ತನ್ನ ಸ್ತ್ರೀಯನ್ನು ತನ್ನ ಬಟ್ಟೆಗಳನ್ನು ತೊಡಿಸಿ ಋಷಿಯ ಸಮೀಪಕ್ಕೆ ಕಳುಹಿಸುತ್ತಾಳೆ. ದೀರ್ಘತಮನಿಗೆ ಇದು ತಿಳಿಯುತ್ತದೆ. ಆತ ಅವಳಿಗೆ ಮಂತ್ರೋದಕವನ್ನು ಪ್ರೋಕ್ಷಿಸಿ ಅವಳನ್ನು ಋಷಿ ಪುತ್ರಿಯನ್ನಾಗಿ ಶುದ್ಧೀಕರಿಸಿ ಅವಳೊಡನೆ ರಮಿಸುತ್ತಾನೆ. ಈಕೆಯಲ್ಲಿ ಹುಟ್ಟಿದವನೇ ಕಕ್ಷೀವಾನ್!, ಉಶಿಕ್ ನಿಂದ ಹುಟ್ಟೀದ್ದರಿಂದ ಔಶಿಜನೂ ಆದ, ಆದರೂ ಬ್ರಾಹ್ಮಣ ಮತ್ತು ಕ್ಷತ್ರಿಯ ಸಂಬಂಧ ವಿದ್ದರೂ ಬ್ರಾಹ್ಮಣತ್ವ ಈತನಿಗೆ ಲಭಿಸಿದ್ದರಿಂದ ಸ್ವನಯ ಮಹಾರಾಜನ ದಾನ ಪರಿಗ್ರಹಕ್ಕೆ ಅರ್ಹನೆನ್ನಿಸಿಕೊಳ್ಳುತ್ತಾನೆ. ಈತ ಮಂತ್ರ ದೃಷ್ಟಾರನಾಗುತ್ತಾನೆ. ಋಗ್ವೇದದಲ್ಲಿ ಯಜುರ್ವೇದದಲ್ಲಿ ಸಾಮವೇದದಲ್ಲಿ ಈತನ ಹೆಸರು ಕಂಡು ಬರುತ್ತದೆ. ಈತ ಪುರುಕುತ್ಸನ ಜೊತೆಯಲ್ಲಿಯೂ ಗೋಚರಿಸುತ್ತಾನೆ. ನೂರು ವರ್ಷಗಳು ಜೀವಿಸಿದ್ದ ಎಂದು ತಿಳಿದು ಬರುತ್ತದೆ. ಇಲ್ಲಿ ಗಮನಿಸ ಬೇಕಾದದ್ದು ಬಹಳಷ್ಟಿದೆ. ಅವುಗಳಲ್ಲಿ ಒಂದು ವೇದಕಾಲದಲ್ಲಿ ಅಥವಾ ವೇದಗಳಲ್ಲಿ ಜಾತಿಯ ಕಟ್ಟುಪಾಡುಗಳಿರಲಿಲ್ಲ ಎನ್ನುವುದು. ಪುರಾಣಗಳಲ್ಲಿ ಕಂಡು ಬರುವ ನಿಯೋಗ ಮೊದಲೂ ಇತ್ತು, ಹಾಗೆಯೇ ಬಹುಪತ್ನಿತ್ವ ಕೂಡಾ ಹೊಸದಲ್ಲ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment