Search This Blog

Sunday 26 August 2018

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು - ಆತ್ಮಾರ್ಥೇ ಪೃಥಿವೀಂ ತ್ಯಜೇತ್


ಮಹಾ ಭಾರತದ ಆದಿಪರ್ವದ ೧೧೫ನೇ ಅಧ್ಯಾಯದಲ್ಲಿ ದುರ್ಯೋಧನನ ಹುಟ್ಟಿನ ಕುರಿತಾಗಿ ಹೇಳಲಾಗುತ್ತದೆ. ಹುಟ್ಟಿದೊಡನೆಯೇ ಮಕ್ಕಳು ಅಳುವಂತೆ ದುರ್ಯೋಧನನು ಹುಟ್ಟಿದೊಡನೆಯೇ ಕತ್ತೆಯು ಅರಚುವಂತೆ ಅರಚಲು ತೊಡಗಿದನಂತೆ. ಧ್ವನಿಯನ್ನು ಕೇಳಿದೊಡನೆಯೇ ಕತ್ತೆಗಳೂ ಸಹ ಕಿರುಚಲು ಪ್ರಾರಂಭಿಸಿದುವಂತೆ. ನರಿಗಳೂ, ರಣಹದ್ದುಗಳೂ, ಕಾಗೆಗಳು ಪ್ರತಿಧ್ವನಿಗೈಯ್ಯುತ್ತವೆ. ಹಲವು ಕಡೆಗಳಲ್ಲಿ ಸುಂಟರಗಾಳಿಯು ಏಳುತ್ತದೆ. ಅನಿರೀಕ್ಷಿತವಾಗಿ ಬೆಂಕಿಯು ನಾಲ್ಕು ದಿಕ್ಕುಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದನ್ನು ತಿಳಿದ ಧೃತರಾಷ್ಟ್ರನು ಭಯಗೊಳ್ಳುತ್ತಾನೆ. ಬ್ರಾಹ್ಮಣರನ್ನೂ, ಭೀಷ್ಮನನ್ನೂ, ವಿದುರನನ್ನೂ, ಶಕುನಶಾಸ್ತ್ರವಿಶಾರದರನ್ನೂ, ಇತರ ಕುರುಪ್ರಮುಖರನ್ನೂ ಕರೆಯಿಸಿ ಸಮಾಲೋಚನೆ ನಡೆಸುತ್ತಾನೆ.
ಯುಧಿಷ್ಠಿರೋ ರಾಜಪುತ್ರೋ ಜ್ಯೇಷ್ಠೋ ನಃ ಕುಲವರ್ಧನಃ | ಪ್ರಾಪ್ತಃ ಸ್ವಗುಣತೋ ರಾಜ್ಯಂ ತಸ್ಮಿನ್ವಾಚ್ಯಮಸ್ತಿ ನಃ || ೩೧ || ಅಯಂ ತ್ವನನ್ತರಸ್ತಸ್ಮಾದಪಿ ರಾಜಾ ಭವಿಷ್ಯತಿ | ಏತದ್ವಿಬ್ರೂತ ಮೇ ತಥ್ಯಂ ಯದತ್ರ ಭವಿತಾ ಧ್ರುವಮ್ || ೩೨ || “ಮಹನೀಯರೇ! ರಾಜಕುಮಾರರಲ್ಲಿ ಹಿರಿಯನಾದ ಯುಧಿಷ್ಠಿರನು ನಮ್ಮ ವಂಶವರ್ಧಕನೆಂಬುದು ನಿಗೆಲ್ಲಾ ಗೊತ್ತೇ ಇದೆ ಅದು ನಿಶ್ಚಯವೂ ಹೌದು. ಅವನು ನಮ್ಮ ವಂಶದಲ್ಲಿ ಜ್ಯೇಷ್ಠಪುತ್ರನಾಗಿ ಹುಟ್ಟಿರುವುದರಿಂದಲೂ, ಅವನ ಉತ್ತಮಗುಣಗಳಿಂದಲೂ ನಮ್ಮ ರಾಜ್ಯಸಿಂಹಾಸನವು ಅವನಿಗೇ ಸೇರಬೇಕು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಆದರೆ ಅವನ ನಂತರ ಹುಟ್ಟಿರುವ ನನ್ನ ದೊಡ್ಡ ಮಗನೂ ರಾಜನಾಗಲು ಸಾಧ್ಯವಿದೆಯೇ? ನ್ಯಾಯ-ನೀತಿಗಳನ್ನೂ, ವಂಶದ ಪದ್ಧತಿಯನ್ನೂ ಅನುಸರಿಸಿ ಹೇಳಿರಿ.” ಎಂದು ಕೇಳಿಕೊಳ್ಳುತ್ತಾನೆ.
ಧೃತರಾಷ್ಟ್ರನು ಇಷ್ಟು ಹೇಳುವುದರೊಳಗಾಗಿಯೇ ಹೆಣ್ಣುನರಿಗಳೂ, ಮಾಂಸಭಕ್ಷಕಪ್ರಾಣಿಗಳೂ ಅಪಸ್ವರಗಳಿಂದ ಅರಚ ತೊಡಗಿದವು. ದುರ್ನಿಮಿತ್ತಗಳನ್ನು ಕಂಡು ಬ್ರಾಹ್ಮಣರೂ ಮತ್ತು ವಿದುರನೂ ಭ್ರಾಂತರಾಗಿ ಈ ರೀತಿಯಾಗಿ ಹೇಳುತ್ತಾರೆ
ಶತಮೇಕೋನಮಪ್ಯಸ್ತು ಪುತ್ರಾಣಾಂ ತೇ ಮಹೀಪತೇ | ತ್ಯಜೈನಮೇಕಂ ಶಾನ್ತಿಂ ಚೇತ್ಕುಲಸ್ಯೇಚ್ಛಸಿ ಭಾರತ || ೩೭ || ಏಕೇನ ಕುರು ವೈ ಕ್ಷೇಮಂ ಕುಲಸ್ಯ ಜಗತಸ್ತಥಾ | ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ | ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ || ೩೮ || “ಮಹಾರಾಜ, ನಿನ್ನ ಮಗನು ಹುಟ್ಟಿದಾಗ ಉಂಟಾದ ಭಯಂಕರವಾದ ನಿಮಿತ್ತಗಳಿಂದ ಇವನು ವಂಶವಿನಾಶಕನೆಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆದುದರಿಂದ ಇವನನ್ನು ಪರಿತ್ಯಜಿಸುವುದರಿಂದಲೇ ದುಷ್ಪರಿಣಾಮಗಳ ಶಾಂತಿಯಾಗಬೇಕಾಗಿದೆ. ಇವನನ್ನು ಪುತ್ರವಾತ್ಸಲ್ಯದಿಂದ ಹಾಗೆಯೇ ಉಳಿಸಿಕೊಂಡರೆ ಕುಲಕ್ಕೇ ನಾಶಕನಾಗುವನು. ಇವನನ್ನು ಪರಿತ್ಯಜಿಸಿದರೂ ನಿನಗೆ ತೊಂಬತ್ತೊಂಬತ್ತು ಮಂದಿ ಮಕ್ಕಳು ಉಳಿಯುವರು. ನೀನು ವಂಶದ ಹಿತವನ್ನೂ ಮತ್ತು ಜಗತ್ತಿನ ಹಿತವನ್ನೂ ಬಯಸುವೆಯಾದರೆ ಖಂಡಿತವಾಗಿಯೂ ಒಂದು ಶಿಶುವನ್ನು ವರ್ಜಿಸಬೇಕು. ಹಿರಿಯರು ಹೇಳುವುದೇನೆಂದರೆ "ವಂಶದ ಹಿತರಕ್ಷಣೆಗಾಗಿ ಒಬ್ಬನನ್ನು ವಿಸರ್ಜಿಸಬಹುದು. ಒಂದು ಗ್ರಾಮದ ಹಿತರಕ್ಷಣೆಗಾಗಿ ಒಂದು ಕುಲವನ್ನಾದರೂ ದೂರಮಾಡಬಹುದು. ಒಂದು ದೇಶದ ಹಿತರಕ್ಷಣೆಗಾಗಿ ಒಂದು ಹಳ್ಳಿಯನ್ನಾದರೂ ಕೈಬಿಡಬಹುದು. ಪ್ರಪಂಚವನ್ನೇ ಬಿಡಬಹುದು.” ಆತ್ಮೋದ್ಧಾರದ ಕಾರಣಕ್ಕಾಗಿ ಬ್ರಾಹ್ಮಣರ ಮತ್ತು ವಿದುರನ ಸಲಹೆಯಂತೆ ಧೃತರಾಷ್ಟ್ರನು ದುರ್ಯೋಧನನನ್ನು ವಿಸರ್ಜಿಸಲಿಲ್ಲ. ಅಂದಿನ ಸಭೆಯನ್ನು ಮಾತ್ರ ವಿಸರ್ಜಿಸಿದನು. ಒಂದು ವೇಳೆ ಅಂದು ಧೃತರಾಷ್ಟೃ ದುರ್ಯೋಧನನನ್ನು ಕೊಂದಿದ್ದರೆ ಅಥವಾ ಅವನಿಗೆ ಪಟ್ಟವನ್ನೇ ಕಟ್ಟದಿದ್ದರೆ ಮುಂದಿನ ಯಾವ ಅನಾಹುತವೂ ಘಟಿಸುತ್ತಲೇ ಇರಲಿಲ್ಲ. ಈ ವಿದುರನ ಮಾತು ಮುಂದೆ ನಮಗೆ ಬ್ರಿಟೀಷರ ಆಗಮನದ ನಂತರ ಅವರನ್ನು ಇಲ್ಲಿಂದ ಓಡಿಸಬೇಕಾದರೆ ಅರ್ಥವಾಗುತ್ತದೆ. ಅದೆಷ್ಟೋ ಜನ ತಮ್ಮ ದೇಶಕ್ಕಾಗಿ ಇಡೀ ರಾಷ್ಟೃದ ಹಿತವನ್ನು ಕಾಪಾಡಲಿಕ್ಕಾಗಿ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ಅನ್ನುವುದು ನಿಜವಾಗಿ ಮಾಡಿ ತೋರಿಸುತ್ತಾರೆ. ಅದೆಷ್ಟೋ ಜನ ಮಹತ್ವದ ಅವಕಾಶದಿಂದ ವಂಚಿತರಾಗುತ್ತಾರೆ. ಹೀಗೆ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತ್ಯಾಗ ಎನ್ನುವುದು ಮಹತ್ತರ ಪಾತ್ರ ನಿರ್ವಹಿಸುತ್ತದೆ.
ಆದರೆ ಈ ಸ್ವರಾಜ್ಯದ ಕಲ್ಪನೆ ಈ ರಾಷ್ಟ್ರದ್ದ ಕಲ್ಪನೆ ಕಟ್ಟಿ ಕೊಟ್ಟದ್ದು ಋಗ್ವೇದ ಮತ್ತು ಯಜುರ್ವೇದಗಳು.
ಇತ್ಥಾ ಹಿ ಸೋಮ ಇನ್ಮದೇ ಬ್ರಹ್ಮಾ ಚಕಾರ ವರ್ಧನಂ |
ಶವಿಷ್ಠ ವಜ್ರನ್ನೋಜಸಾ ಪೃಥಿವ್ಯಾ ನಿಃ ಶಶಾ ಅಹಿಮರ್ಚನ್ನನು ಸ್ವರಾಜ್ಯಂ || ಇದು ಒಂದನೇ ಮಂಡಲದ ೮೦ನೇ ಸೂಕ್ತ ಇದರ ಅರ್ಥ ಅತ್ಯಂತ ಬಲಿಷ್ಟನೂ ಸಮರ್ಥನೂ ಆದ ಇಂದ್ರನು ಈ ಜಗತ್ತಿನ ಅಭಿವೃದ್ಧಿಯನ್ನು ಮಾಡುತ್ತಾ ಈ ದುಷ್ಟ ಜನರಾದ ವೃತ್ರನೇ ಮೊದಲಾದವರನ್ನು ಸೋಲಿಸಿ ಸ್ವರಾಜ್ಯವನ್ನು ಸ್ಥಾಪಿಸಲಿ ಎನ್ನುವ ಅರ್ಥ.
ಸ್ವಸ್ಯ ರಾಜ್ಯಂ ಸ್ವರಾಜ್ಯಂ ಎಂದು ಸ್ವರಾಜ್ಯವನ್ನು ಹೇಳಲಾಗುತ್ತದೆ. ರಕ್ಷಣೆಗೆ ಅರ್ಹರಾದ ಪ್ರಜೆಗಳನ್ನು ರಕ್ಷಿಸುತ್ತಾ ಅವರವರ ಅನುರಾಗವನ್ನು ಹೊಂದಲು ಯೋಗ್ಯವಾದ ರೀತಿಯಿಂದ ಇರುವಿಕೆಯು ಅಥವಾ ಆ ಪ್ರಕಾರವಾದ ಕರ್ಮಗಳನ್ನು ಆಚರಿಸುವ ಸನ್ನಿವೇಶವನ್ನು ಹೊಂದಿರುವಿಕೆಯು ರಾಜ್ಯವೆನಿಸುವುದು. ಇಂತಹ ಸ್ವರಾಜ್ಯಕ್ಕೆ ಗೌರವ ಪೂರ್ವಕವಾದ ಮಳೆ ಬೆಳೆ ಬೆಳೆಯುವಂತೆ ಮಾಡಿ ಸಂಪದ್ಭರಿತವನ್ನಾಗಿ ಇಂದ್ರನು ಮಾಡಲಿ ಎನ್ನುವ ಆಶಯದೊಂದಿಗೆ ಶತ್ರುಗಳ ಕೈವಶವಾಗದಂತೆ ಬಲವನ್ನೂ ನೀಡಲಿ ಎಂದು ಆಶಯ.

No comments:

Post a Comment