Search This Blog

Friday 9 February 2018

ಚತುರ್ದಂತ - ನಾಲ್ಕು ದಂತಗಳ ಐರಾವತ

ಇಂದ್ರನ ಆನೆಯನ್ನು ಚತುರ್ದ್ಧಾಂತ ಎಂದು ಕರೆಯುತ್ತಿದ್ದರು. ನಾಲ್ಕು ಕೋರೆ (ದಂತ)ಗಳನ್ನು ಹೊಂದಿರುವುದು ಎನ್ನುವ ಅರ್ಥ ಬರುತ್ತದೆ. ಐರಾವತ ಅನ್ನುವುದು ರೂಢಿಯಲ್ಲಿದ್ದಿದ್ದರೂ ಸಹ ಅದರ ಪರ್ಯಾಯ ಹೆಸರು ಚತುರ್ದಾಂತ ಎಂತಲೂ ಇದೆ. ಆದರೆ ಈ ಉಲ್ಲೇಖ ಸಿಗುವುದು ಬಹಳ ವಿರಳ.
ಇತಿಹಾಸದಲ್ಲಿ ಚತುರ್ದಾಂತ ಎನ್ನುವ ಪದ ಅನೇಕ ಬಾರಿ ಬಂದಿದೆ. ಪ್ರಮುಖವಾಗಿ ಚತುರ್ದ್ದಾಂತ ಎನ್ನುವ ಪದದ ಉಪಯೋಗವಾಗಿದ್ದು ಆರಂಭಕಾಲೀನ ಗಂಗರ ಶಾಸನಗಳಲ್ಲಿ. ಪಶ್ಚಿಮದ ಗಂಗರು ಅಥವಾ ತಲಕಾಡಿನ ಗಂಗರ ಅವಧಿಯ ಶಾಸನಗಳಲ್ಲಿ ಸುಮಾರು ೩೬ ಸಲ ಬಂದಿದೆ. ಚತುರ್ದಾಂತ ಪದವನ್ನು ಅತೀ ಹೆಚ್ಚು ಬಳಸಿದವನು ಗಂಗ ಹರಿವರ್ಮ. ಶ್ರೀ ಕೇ ವಿ ರಮೇಶ್ ಅವರು ಇದನ್ನು ಆನುವಂಶೀಯ ಪ್ರಶಸ್ತಿ ಎನ್ನುವುದಾಗಿ ಬಣ್ಣಿಸಿದ್ದಾರೆ.

"ಅನೇಕ ಚತುರ್ದ್ದಾಂತ ಯುದ್ಧಾವಾಪ್ತ ಚತುರುದಧಿ ಸಲಿಲಾಸ್ವಾದಿತ ಯಶಸಃ"

ಎನ್ನುವುದಾಗಿ ಗಂಗ ಹಾರಿವರ್ಮನ ಶಾಸನದಲ್ಲಿ ಬಂದಿದೆ. ಇದು ಆನುವಂಶೀಯ ಪ್ರಶಸ್ತಿ ಎನ್ನುವುದಾಗಿ ನಾವು ಪರಿಗಣಿಸಿದರೂ ಸಹ ಇದೇ ಪದ ಬೇರೆ ಬೇರೆ ಕಡೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನಾನು ಮೆಲುಕು ಹಾಕುತ್ತೇನೆ.
ವಿಕ್ರಮಾಂದ್ರವರ್ಮನ ಚಿಕ್ಕುಲ ಶಾಸನದಲ್ಲಿ ಅನೇಕ ಚತುರ್ದ್ದಾಂತ ಸಮರ ಸಂಘಟ್ಟ ದ್ವಿರದ ಗಣ ವಿಪುಲ ವಿಜಯಸ್ಯ" ಈ ರೀತಿಯಾಗಿ ಬಂದಿದೆ. ಅದೇ
ವಿಕ್ರಮೇಂದ್ರನ ತಂಡಿಗ್ರಾಮದ ಶಾಸನದಲ್ಲಿ "ಅನೇಕ ಚತುರ್ದ್ದಂತ ಸಮರ ಸಂಘಟ್ಟ ವಿಜಯಿನಃ " ಎಂದು ಉಲ್ಲೇಖಗೊಂಡಿದೆ.
ಹೈದರಾಬಾದಿನ ಮ್ಯೂಸಿಯಂನಲ್ಲಿರುವ ಪೃಥ್ವೀ ಶ್ರೀ ಮೂಲರಾಜನ ತಾಮ್ರಪಟದಲ್ಲಿ "ಅನೇಕ ಚತುರ್ದ್ದಂತ ಸಮರ ಸಂಘಟ್ಟ ವಿಜಯೀ" ಎನ್ನುವುದಾಗಿ ಬಗೆಬಗೆಯ ರೂಪದಲ್ಲಿ ಬಂದಿದೆ.
ಇಲ್ಲಿ ಚಿಕ್ಕುಲ ಶಾಸನದಲ್ಲಿ ಬಂದಿರುವುದು ದೇವೇಂದ್ರನ ಆನೆಗಿರುವ ವಿಶೇಷಣ. ತನ್ನ ಕೋರೆ ಅಥವ ದಂತಗಳಿಡ ಅಪರಿಮಿತವಾದ ವೈರಿಗಳ ಸೈನ್ಯದ ಸಮೂಹವನ್ನು ಹತ್ಯೆ ಗೈದಿರುವುದನ್ನು ಉದ್ದೇಶಿಸಿ ಈ ವಿಶೇಷಣವನ್ನು ಬಳಸಲಾಗಿದೆ. ಇದನ್ನು ಇನ್ನು ಅನೇಕ ವಿದ್ವಾಂಸರೌ ಚತುರ್ದಂತ ಸಮರ ಎನ್ನುವುದು ಬೇರೆ ಬೇರೆ ಅರ್ಥೈಸಿದ್ದಾರೆ. ಗಜಗಳ ಕಾಳಗವನ್ನು ಚತುರ್ದಂತ ಸಮರ ಎಂದು ಹೇಳಲಾಗಿದೆ. ಅಂದರೆ ಮುಷ್ಟಿ ಯುದ್ಧ ಮಲ್ಲ ಯುದ್ಧ ಇರುವಂತೆ ಗಜಕಾಳಗವನ್ನು ಚತುರ್ದ್ದಂತ ಎನ್ನುವುದಾಗಿ ಪರಿಗಣಿಸಬೇಕು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಮೋನಿಯರ್ ವಿಲಿಇಯಂ ಮತ್ತು ಆಪ್ಟೆಯವರು ತಮ್ಮ ಶಬ್ದಕೋಶದಲ್ಲಿ ಇದನ್ನು ಇಂದ್ರನ ಆನೆಗೆ ಇರುವ ವಿಶೇಷಣ ಎನ್ನುವುದಾಗಿ ಹೇಳಿದ್ದಾರೆ.

ಪಂಚತಂತ್ರದಲ್ಲಿ ಕಸ್ಮಿನ್ಚಿತ ವನೇ ಚತುರ್ದಂತೋ ನಾಮ ಮಹಾಗಜೋ. . . . ಎಂದು ಬರುತ್ತದೆ ಅಲ್ಲಿ ಒಂದು ಆನೆಯನ್ನು ನಿರ್ದೇಶಿಸಲಾಗಿದೆ. ಕಥಾಸರಿತ್ಸಾಗರದಲ್ಲಿ "ತತ್ರಾವಗ್ರಹ ಶುಷ್ಕೇನ್ಯನಿಪಾನೇ ಗಜ ಯೂಥಪಃ | ಚತುರ್ದಂತಾಭಿದಾನೋಂಭಃ ಪಾತುಮಾಗತ ಕದಾಚನ್ || ಎಂದು ಬಂದಿದೆ ಇಲ್ಲಿ ಚತುರ್ದಂತ ಅಥವಾ ಚತುರ್ದಂಷ್ಟ್ರ ಎನ್ನುವುದು ನಾಲ್ಕು ಕೋರೆ ಹಲ್ಲುಗಳನ್ನುಳ್ಳ ಆನೆ ಎಂದು. ಆದರೆ ಇಂದ್ರನ ಐರಾವತದ ಕುರಿತಾಗಿ ಅಮರಕೋಶದಲ್ಲೆಲ್ಲೂ ಪರ್ಯಾಯಪದವಿಲ್ಲ.
ಆದರೆ ಪುರುಷೋತ್ತಮದೇವನ ತ್ರಿಕಾಂಡಶೇಷ ಎನ್ನುವ ಗ್ರಂಥದಲ್ಲಿ "ಹಸ್ತಿಮಲ್ಲಶ್ಚತುರ್ದ್ದಂತೋ ಭದ್ರ ರೇಣುರ್ಮದಾಂವರಃ"೧ ; ೧ : ೬೦., ಎನ್ನುವುದಾಗಿ ಉಲ್ಲೇಖ ಸಿಗುತ್ತದೆ. ಇಲ್ಲಿ ಇದು ಐರಾವತವನ್ನೇ ಕುರಿತು ಹೇಳಲಾಗಿದೆ. ಯಾದವಾಚಾರ್ಯನ ವೈಜಯಂತೀ ಕೋಶದಲ್ಲಿ ಚತುರ್ದಂತವನ್ನು "ಐರಾವಣಶ್ಚತುರ್ದಂಶ್ಟ್ರಃ" ೨: ೧೨ ರಲ್ಲಿ ಹೇಳಲಾಗಿದೆ.
ಪಾಣಿನಿಯ ಸಂಖ್ಯಾ ಸುಪೂರ್ವಸ್ಯ ಎನ್ನುವುದನ್ನು ಗಮನಿಸಿದರೆ ಚತುರ್+ದಂತ, ಇದನ್ನು ವಯಸಿ ದಂತಸ್ಯ ದತೃ ಎನ್ನುವುದನ್ನು ಪರಿಗಣಿಸಿದರೆ ಚತುರ್ದತ್ ಆಗುತ್ತದೆ.

ದಂತ ಎನ್ನುವುದನ್ನು ಮಾತ್ರ ಅವಲೋಕಿಸಿದರೆ "ವಿಷಾಣ" ಮತ್ತು 'ಶೃಂಗ' ಎನ್ನುವುದು ಪರ್ಯಾಯ ಪದ ಎನ್ನುತ್ತದೆ ವಿಶ್ವಕೋಶ.
ವ್ಯಾಕರಣಾಂಶವನ್ನು ನಾನಿಲ್ಲಿ ಪ್ರಸ್ತಾವಿಸುತ್ತಿಲ್ಲ. ಗಂಗರು ಸಂಸ್ಕೃತ ಭ್ಶಃಎಯ ಪೋಷಕರಾಗಿದ್ದರು ಅವರ ಶಾಸನಗಳಲ್ಲಿ ಇಂತಹ ಅಪರೂಪದ ಮತ್ತು ಶ್ರೇಷ್ಠವಾದ ವಾಕ್ಯಗಳು ಬರುವುದು ಸಹಜ. ಅವರ ಅನೇಕ ಶಾಸನಗಳಲ್ಲಿ "ವಕ್ತೃ ಪ್ರಯೋಕ್ತೃ ಕುಶಲಃ" " ಶಬ್ದಾವತಾರ ಕಾರಕಃ " ಇತ್ಯಾದಿ ಅನೇಕ ಬಾರಿ ಬಂದಿವೆ.
"ಚತುರ್ಧೋದಾತ್ತಂ ದಂತಂ ಯಸ್ಯ ಅಸೌ ಚತುರ್ದ್ದಂತ" ಎಂದು ಬಹುವ್ರೀಹೀ ಸಮಾಸದಂತೆ ನೋಡಿದಾಗ ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ಅಥವಾ ಅನೇಕ ಚತುರ್ದಂತ ಎಂದಾಗುತ್ತದೆ.
ತ್ರಿಕಂಡ ಶೇಷವನ್ನೇ ಗಮನಿಸಿದರೆ ಹಸ್ತಿಮಲ್ಲ - ಚತುರ್ದಂತ ಎನ್ನುತ್ತದೆ. ರಾಮಾಯಣದಲ್ಲಿಯಂತೂ ಉದಾತ್ತದಂತ ಎನ್ನುತ್ತದೆ.
ಆಮೇಲಿನ ಕಾಲದ ಕೃಷ್ಣವರ್ಮನ ಶಾಸನವನ್ನು ಗಮನಿಸಿದರೆ ಅಲ್ಲಿ ವ್ಯಾಲಾನೇಕೋಪನಿಗ್ರಹ ಎನ್ನುವ ವಾಕ್ಯ ಬರುತ್ತದೆ . ವ್ಯಾಲಾನೇಕ ಅನ್ನುವುದು ಚತುರ್ದ್ದಂತ ಎನ್ನುವುದರ ಇನ್ನೊಂದು ರೂಪ.

ಜಾತಕ ಕಥೆಗಳಲ್ಲಿ ಚದ್ದಂತ ಜಾತಕ, ಷಡ್ದಂತ ಜಾತಕ ಕಥೆಗಳಿವೆ.
ಚತುರ್ದಂತದ ಕುರಿತು ಕನ್ನಡದ ಅಜಿತ ತೀರ್ಥಂಕರ ಪುರಾಣ ಮತ್ತು ಪಂಪ ಭಾರತದಲ್ಲಿಯೂಉಲ್ಲೇಖಗಳಿವೆ ಅಜಿತ ತೀರ್ಥಂಕರ ಪುರಾಣ್ದ ೫ನೇ ಆಶ್ವಾಸದ ೬೬ನೇ ಪದ್ಯದಲ್ಲಿ ಉಲ್ಲೇಖವಿದೆ.
ಹೀಗೆ ಚತುರ್ದಂತ ಐರಾವತದ ಪರ್ಯಾಯ ಪದವಾಗಿ ಹಾಗೂ ಆನೆಗಳ ಕಾಳಗವೆಂದು ಮತ್ತು ರಾಜರುಗಳ ಬಲವನ್ನು ತಿಳಿಸುವ ಪದವಾಗಿಯೂ ಗಂಗರು ಬಳಸಿಕೊಂಡರು.




No comments:

Post a Comment