Search This Blog

Thursday 15 February 2018

ಸಂಸ್ಕೃತದ ಚೋಕ್ಷ - ಕನ್ನಡದಲ್ಲಿ ಚೊಕ್ಕ - ಪ್ರಾಕೃತದಲ್ಲಿಯೂ ಚೊಕ್ಕವೇ


“ಚೋಕ್ಷ” ಈ ಪದ ಕೇಳಲಿಕ್ಕೆ ವಿಚಿತ್ರವೆನ್ನಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಪ್ರಾಚೀನ ಮತ್ತು ಆಮೇಲಿನ ಭಾಷೆಗಳಲ್ಲಿಯೂ ಈ ಪದ ಬಳಕೆಗೊಂಡಿದೆ. ಮಧ್ಯಪ್ರದೇಶದ ಭಾಗ್ ಎನ್ನುವ ಊರಿನಲ್ಲಿ ದೊರೆತ ೪-೫ನೇ ಶತಮಾನದ ಭುಲುಂಡಮಹಾರಾಜನ ಸಂಸ್ಕೃತ ಭಾಷೆ ಮತ್ತು ಬ್ರಾಹ್ಮಿಲಿಪಿಯ ತಾಮ್ರಪಟ ಶಾಸನದಲ್ಲಿ ಈ ಶಬ್ದ ನಮಗೆ ಮೊತ್ತ ಮೊದಲಿಗೆ ದೊರಕುತ್ತದೆ. ಅಲ್ಲಿ ಚೌಕ್ಷ ಎನ್ನುವುದಾಗಿ ಇದು ಬಳಕೆಗೊಂಡಿದೆ. ಮೋನಿಯರ್ ವಿಲಿಯಂನ ೪೦೨ನೇ ಪೇಜಿನ ೩ನೇ ಕಾಲಮ್ಮಿನಲ್ಲಿ ಇದಕ್ಕೆ Pure ಮತ್ತು Clean ಎನ್ನುವ ಅರ್ಥದೊಂದಿಗೆ ಇದು ಪ್ರಾಕೃತದಲ್ಲಿ ಚೊಕ್ಕ ಎನ್ನುವುದಾಗಿದೆ ಎಂದು ಹೇಳಲಾಗಿದೆ. ಹೌದು ನಮ್ಮ ಕನ್ನಡದಲ್ಲಿಯೂ ಚೊಕ್ಕವೇ.
ಶಾಸನಪಾಠದಲ್ಲಿ ನೋಡೋಣ "ಯತೋದ್ಯ ಪ್ರಭೃತ್ಯಾ ದೇವಕೀಯ ಕರ್ಷಕಾಃ ಕೃಷಂತೋ ವಪಂತಃ ಪಾಶುಪತಾರ್ಯ್ಯ ಚೋಕ್ಷಾಃ ದೇವಪರಸಾದಕಾಶ್ಚ ಗಂಧ ಧೂಪ ಬಲಿ ಚರು ಸತ್ರೋಪಯೋಗಾದಿಶುಪಾಯೋಜಯಮಾನಾಸ್ಸರ್ವೈರೇವ . . . . . .ಸಮನುಮಂತವ್ಯಾಃ" ಇಲ್ಲಿ ಶಾಸನದಲ್ಲಿ ಸಾಹಿತ್ಯದ ನೆಲೆಯಲ್ಲಿ ಬಂದದ್ದು. ಚೋಕ್ಷಾಃ ಎನ್ನುವ ಪದ ಚುಕ್ಷಾ ಎನ್ನುವ ಪದದಿಂದ ಹುಟ್ಟಿ ಛತ್ರಾದಿ ಗಣ ಎನ್ನುವ ಮೂಲ ಧಾತುವಿನಿಂದ ಹುಟ್ಟಿದ್ದು. ಛತ್ರ ಚಾಮರ ಪಂಚಮಹಾವಾದ್ಯಾದಿಗಳು. ಸಾಹಿತ್ಯದ ದೃಷ್ಟಿಯಲ್ಲಿ ಅವಲೋಕಿಸಿದರೆ ಈತ ಅತ್ಯಂತ ಪರಿಶುದ್ಧ ಹೃದಯಿ ಎನ್ನುವುದು. ಮಹಾಭಾರತದಲ್ಲಿ ಇದರ ಕುರಿತಾಗಿ ಬಂದಿರುವುದನ್ನು ಗಮನಿಸೋಣ.
ಶಾಂತಿಪರ್ವ ದಲ್ಲಿ
ಅನೀರ್ಷುರ್ಗುಪ್ತದಾರಃ ಸ್ಯಾಚ್ಚೋಕ್ಷಃ ಸ್ಯಾದಘೃಣೀ ನೃಪಃ |
ಸ್ತ್ರಿಯಃ ಸೇವೇತ ನಾತ್ಯರ್ಥಂ ಮೃಷ್ಟಂ ಭುಞ್ಜೀತ ನಾಹಿತಮ್ || ||  
ದಕ್ಷನಾಗಿರಬೇಕು. ಅತಿಕಾರುಣ್ಯವಿರ ಬಾರದು. ಸ್ತ್ರೀಯರಲ್ಲಿ ಹೆಚ್ಚು ಅನುರಕ್ತನಾಗಬಾರದು. ಶುದ್ಧವಾದ ಮತ್ತು ರುಚಿಕರವಾದ ಭೋಜನವನ್ನೇ ಮಾಡಬೇಕು. ಆದರೆ ಅಹಿತಕರವಾದ ಪದಾರ್ಥಗಳನ್ನು ತಿನ್ನಬಾರದು. ಇಲ್ಲಿಯೂ ಸಹ ಶುದ್ಧವಾದ ಎನ್ನುವ ಅರ್ಥ ಬರುವಂತೆ ಹೇಳಲಾಗಿದೆ.
ಶಾಂತಿಪರ್ವ ಅಧ್ಯಾಯ೨೬೫ ರಲ್ಲಿ
ಯಚ್ಚಾಪಿ ಕಿಂಚಿತ್ಕರ್ತವ್ಯಮನ್ಯಚ್ಚೋಕ್ಷೈಃ ಸುಸಂಸ್ಕೃತಮ್ |
ಮಹಾಸತ್ತ್ವೈಃ ಶುದ್ಧಭಾವೈಃ ಸರ್ವಂ ದೇವಾರ್ಹಮೇವ ತತ್ || ೧೨ ||
ವೇದಗಳಲ್ಲಿ ಯಜ್ಞಸಂಬಂಧವಾದ ಯಾವ ವೃಕ್ಷಗಳು ಹೇಳಿವೆಯೋ ಅವುಗಳನ್ನು ಯಜ್ಞಗಳಲ್ಲಿ ಉಪಯೋಗಿಸಲೇಬೇಕು. ಶುದ್ಧವಾದ ಆಚಾರ- ವಿಚಾರವುಳ್ಳ ಸಾತ್ತ್ವಿಕನಾದ ಪುರುಷನು ವಿಶುದ್ಧವಾದ ಭಾವನೆಯನ್ನಿಟ್ಟುಕೊಂಡು ಪ್ರೋಕ್ಷಣವೇ ಮೊದಲಾದ ಉತ್ತಮಸಂಸ್ಕಾರಗಳಿಂದ ಯಾವುದೇ ಹವಿಸ್ಸನ್ನು ಸಿದ್ಧಗೊಳಿಸಿದರೂ ಹವಿಸ್ಸು ದೇವತೆಗಳ ಅರ್ಪಣೆಗೆ ಅರ್ಹವೇ ಆಗಿರುತ್ತದೆ.” ಎಂದು ಇಲ್ಲಿ ಕೂಡಾ ಶುಚಿತ್ವ ಮತ್ತು ಶುದ್ಧತೆಗೆ ಹೇಳಲಾಗಿದೆ.
ಅನುಶಾಸನ ಪರ್ವದ ೧೧ನೇ ಅಧ್ಯಾಯದಲ್ಲಿ
ಪಾಪಾಮಚೋಕ್ಷಾಮವಲೇಹಿನೀಂ ವ್ಯಪೇತಧೈರ್ಯಾಂ ಕಲಹಪ್ರಿಯಾಂ |
ನಿದ್ರಾಭಿಭೂತಾಂ ಸತತಂ ಶಯಾನಾ- ಮೇವಂವಿಧಾಂ ತಾಂ ಪರಿವರ್ಜಯಾಮಿ || ೧೨ ||
ದಯಾರಹಿತಳಾಗಿ ಪಾಪಕಾರ್ಯಗಳಲ್ಲಿ ತತ್ಪರಳಾಗಿರತಕ್ಕವಳನ್ನೂ, ಕುರೂಪಿಯಾಗಿರುವವಳನ್ನೂ (ಅವುಡುಕಚ್ಚುವವಳನ್ನೂ), ಧೈರ್ಯವಿಲ್ಲದವಳನ್ನೂ, ಜಗಳಗಂಟಿಯನ್ನೂ, ತೂಕಡಿಸುತ್ತಿರುವವಳನ್ನೂ, ಯಾವಾಗಲೂ ಮಲಗಿರುವವಳನ್ನೂ ನಾನು ಪರಿತ್ಯಾಗಮಾಡುತ್ತೇನೆ. ಎಂದು ಪರಿಶುದ್ಧಳಲ್ಲದವಳ ಕುರಿತು ಹೇಳಲಾಗಿದೆ. ಅಂದರೆ ಇಲ್ಲಿ ಶುದ್ಧತೆಯನ್ನೇ ಹೇಳಲಾಗಿದೆ.
ಚೋಕ್ಷಶ್ಚೋಕ್ಷಜನಾನ್ವೇಷೀ ಶೇಷಾನ್ನಕೃತಭೋಜನಃ |
ವೃಥಾ ಮಾಂಸಂ ಭುಞ್ಜೀತ ಶೂದ್ರೋ ವೈಶ್ಯತ್ವಮೃಚ್ಛತಿ || ೨೯ ||
ಶುದ್ಧರಾದವರು ಪರಿಶುದ್ಧರೊಡನೆಯೇ ಬೆರೆಯಬೇಕು ಎನ್ನುವ ಅರ್ಥ ಧ್ವನಿಸುತ್ತದೆ.
ಶ್ರದ್ಧಾವನ್ತೋ ದಯಾವನ್ತಶ್ಚೋಕ್ಷಾಶ್ಚೋಕ್ಷಜನಪ್ರಿಯಾಃ |
ಧರ್ಮಾಧರ್ಮವಿದೋ ನಿಶ್ಯಂ ತೇ ನರಾಃ ಸ್ವರ್ಗಗಾಮಿನಃ || ೩೭ ||
ಶ್ರದ್ಧಾಳುಗಳಾದ, ದಯಾಳುಗಳಾದ, ಶುದ್ಧರಾದ, ಶುದ್ಧಜನಪ್ರಿಯ ರಾದ, ಧರ್ಮಾಧರ್ಮಗಳನ್ನು ತಿಳಿದಿರುವ ಮನುಷ್ಯರು ಸ್ವರ್ಗಕ್ಕೆ ಹೋಗು ತ್ತಾರೆ.
ತೀರ್ಥಾನಾಂ ಗುರವಸ್ತೀರ್ಥಂ ಚೋಕ್ಷಾಣಾಂ ಹೃದಯಂ ಶುಚಿ |
ದರ್ಶನಾನಾಂ ಪರಂ ಜ್ಞಾನಂ ಸಂತೋಷಃ ಪರಮಂ ಸುಖಮ್ || ೪೭ ||
ತೀರ್ಥಗಳಲ್ಲಿ ಗುರುಜನರೇ ಸರ್ವೋತ್ತಮವಾದ ತೀರ್ಥಸ್ವರೂಪರು. (ಗುರುಜನರನ್ನು ಸಂದರ್ಶಿಸಿ ಸೇವಿಸಿದರೆ ತೀರ್ಥಗಳಲ್ಲಿ ಸ್ನಾನಮಾಡುವುದಕ್ಕಿಂತಲೂ ಅಧಿಕವಾದ ಫಲವು ಲಭಿಸುತ್ತದೆ.) ಪವಿತ್ರವಾದ ವಸ್ತುಗಳಲ್ಲಿ ಶುದ್ಧವಾದ ಹೃದಯವೇ ಅತ್ಯಂತಪವಿತ್ರವಾದ ವಸ್ತುವಾಗಿದೆ. ದರ್ಶನಗಳಲ್ಲಿ (ಜ್ಞಾನಗಳಲ್ಲಿ) ಪರಮಾರ್ಥತತ್ತ್ವಜ್ಞಾನವೇ ಶ್ರೇಷ್ಠವಾದ ಜ್ಞಾನವಾಗಿದೆ. ಸಂತೋಷವೆಂಬುದೇ ಸರ್ವೋತ್ತಮವಾದ ಸುಖವಾಗಿದೆ. ಇಲ್ಲಿ ಪಾವಿತ್ರಕ್ಕೆ, ಶುದ್ಧತೆಗೆ ಹೇಳಲಾಗಿದೆ.
ಆಶ್ವಮೇಧಿಕಪರ್ವದಲ್ಲಿ
ಆಗ್ನೇಯಂ ವೈ ಲೋಹಿತಮಾಲಭನ್ತಾಂ ವೈಶ್ವದೇವಂ ಬಹುರೂಪಂ ಹಿ ರಾಜನ್ |
ನೀಲಂ ಚೋಕ್ಷಾಣಂ ಮೇಧ್ಯಮಪ್ಯಾಲಭನ್ತಾಂ ಚಲಚ್ಛಿಶ್ನಂ ಸಮ್ಪ್ರದಿಷ್ಟಂ ದ್ವಿಜಾಗ್ರ್ಯಾಃ || ೩೦ ||
ಮರುತ್ತನೇ! ಹವಿಸ್ಸಿಗಾಗಿ ಅಗ್ನಿದೇವತಾಸ್ವರೂಪದ ಲೋಹಿತ ಜಾತಿಯ ಜಿಂಕೆಯನ್ನು ಆಲಂಭಿಸಲಿ. ವಿಶ್ವೇದೇವತೆಗಳ ಹವಿಸ್ಸಿಗಾಗಿ ಬಹುರೂಪವಿರುವ ಜಿಂಕೆಯನ್ನು ಆಲಂಭಿಸಲಿ. ಇಲ್ಲಿರುವ ಬ್ರಾಹ್ಮಣಶ್ರೇಷ್ಠರು ಯಾಗಕ್ಕೆ ಅರ್ಹವಾದ ಚಂಚಲವಾದ ಶಿಶ್ನವುಳ್ಳ ನೀಲಿಯ ಬಣ್ಣದ ಎತ್ತನ್ನು ನನ್ನ ನಿರ್ದೇಶನದಂತೆ ಆಲಂಭಿಸಲಿ.” ಎಂದು ವ್ಯಾಸರು ಹೇಳುತ್ತಾರೆ: ತಿಳಿಯಾದ ಪರಿಶುದ್ಧತೆಗೆ ಹೇಳಲಾಗಿದೆ.
ಇವುಗಳೆಲ್ಲವೂ ಮಹಾಭಾರತದಲ್ಲಿನ ಉಲ್ಲೇಖ.
ಮನುವಿನ ಸಂಹಿತೆಯಲ್ಲಿ ಚೋಕ್ಷದ ಕುರಿತಾಗಿ ನೋಡಿದರೆ ಅಲ್ಲಿ
ಅವಕಾಶೇಷು ಚೋಕ್ಷೇಷು ಜಲತೀರೇಷುಚೈವ ಹಿ
ವಿವಿಕ್ತೇಷು ಚ ತುಷ್ಯಂತಿ ದತ್ತೇನ ಪಿತರಃ ಸದಾ
ಮನುಸ್ಮೃತಿಗೆ ಬರೆದ ಮೇಧಾತಿಥಿ ಟೀಕೆಯಲ್ಲಿ "ಸ್ವಭಾವ ಶುಚಯೋ ಮನಃ ಪ್ರಸಾದ ಜನಕಾರಣ್ಯಾದಯಃ " ಅಂದರೆ ಇಲ್ಲಿಯೂ ಸಹ ಅದೊಂದು ಸ್ವಭಾವ, ಶುಚಿತ್ವ, ಮತ್ತು ಮನಸ್ಸಿನ ಪರಿಶುದ್ಧತೆಗೆ ಸಂಬಂಧಿಸಿದ ಪದ ಎನ್ನಲಾಗಿದೆ.
ಪಾಳಿ ಮತ್ತು ಆಂಗ್ಲ ಡಿಕ್ಷನರಿಯಲ್ಲಿ ಚೋಕ್ಕ ಭಾವ ಎನ್ನಲಾಗಿದೆ. ಶುಭ್ರತೆ ಎನ್ನುವುದು ಮನಸ್ಸಿನ ಭಾವನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಪಾಇಯ ಸದ್ದ ಮಹಾಣ್ಣಓ, ಭಗವತೀ ಸೂತ್ರ, ರಾಯಪಸೇಣಿಯ ಮುಂತಾದವುಗಳಲ್ಲಿ ಶುಭ್ರತೆ ಸ್ವಚ್ಚ ಮತ್ತು ಶುದ್ಧತೆಗೆ ಹೇಳಲಾಗಿದೆ. ಅಲ್ಲಿ
ಅಭಿನವಗುಪ್ತ ತನ್ನ ನಾಟ್ಯಶಾಸ್ತ್ರದಲ್ಲಿ
ಪರಿವ್ರಾಡ್ ಮುನಿಶಾಕ್ಯೇಷು ಚೋಕ್ಷೇಷು ಶ್ರೋತ್ರೀಯೇಷುಚ|
ಶಿಷ್ಠಾಯೇಚೈವ ಲಿಂಗಸ್ಥಾಃ ಸಂಸ್ಕೃತಂ ತೇಷುವೋಜಯೇತ್ ||
ಅಭಿನವಗುಪ್ತನ ನಾಟ್ಯ ಶಾಸ್ತ್ರದಲ್ಲಿ ಚೋಕ್ಷದ ಕುರಿತು ಹೇಳುತ್ತಾ. ಇದೊಂದು ಭಾಗವತ ಸಂಪ್ರದಾಯದಲ್ಲಿ ಬರುವ ಒಂದು ಪಂಗಡ ಇವರನ್ನು ಏಕಾಯನರು ಎಂದೂ ಕರೆಯಲಾಗುತ್ತದೆ ಎಂದಿರುವನು.
ಪರಿವ್ರಾಜಕರು, ಶ್ರೋತ್ರೀಯರು, ಮುಂತಾದವರ ಕುರಿತು ಹೇಳುತ್ತಾನೆ. ಇಲ್ಲಿಯೂ ಪರಿಶುದ್ಧತೆಯನ್ನೇ ಹೇಳುತ್ತಾನೆ. ಪ್ರೈವ್ರಾಜರು ಮುನಿಶಾಕ್ಯರು ಮತ್ತು ಚೋಕ್ಷರು ಶ್ರೋತ್ರೀಯರು ಎನ್ನುತ್ತಾನೆ. ಇಲ್ಲಿ ಶ್ರೋತ್ರೀಯರ ವಿಶೇಷಣವಾಗಿ ಚೋಕ್ಷ ಪದವನ್ನು ಬಳಸಿಕೊಂಡಿದ್ದಾನೆ ಪರಿಶುದ್ಧರಾದ ವೇದಾಧ್ಯನ ನಿರತರನ್ನು ಹೇಳಿದ್ದಾನೆ.
ವರಾಹಮಿಹಿರ ಜ್ಯೋತಿಷ್ಯ ಶಾಸ್ತ್ರವನ್ನು ಹೇಳುವಾಗ ಚೋಕ್ಷವನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ ಶಕುನಗಳನ್ನು ಹೇಳುವಾಗ ಮತ್ತು ಅಂತಶ್ಚಕ್ರವನ್ನು ಹೇಳುವಾಗ ಚೋಕ್ಷವನ್ನೇ ಆಧಾರವಾಗಿ ಬಳಸುತ್ತಾನೆ.
ಬೃಹತ್ಸಂಹಿತೆಯಲ್ಲಿ :
ಶಸ್ತ್ರಾನಲ ಪ್ರಕೋಪಾವಾಗ್ನೇಯೇ ವಾಜಿ ಮರಣ ಶಿಲ್ಪಿ ಭಯಂ
ಯಾಮ್ಯೇ ಧರ್ಮ ವಿನಾಶೋಪರೇ ಅಗ್ನ್ಯವಸ್ಕಂದ ಚೋಕ್ಷ ಬದ್ಧಾಃ
ಎನ್ನುವುದು ಶಸ್ತ್ರಾಸ್ತ್ರಗಳ ಘರ್ಷಣೆಯಿಂದ 'ಸುಡುವದು' ಮತ್ತು ಏಕಾಏಕಿ ಬೆಂಕಿ, ಮತ್ತು ಕುದುರೆಗಳು ನಾಶ, ಶಿಲ್ಪಿಗಳಿಗೆ ಭಯ, ಧರ್ಮ ಕ್ಷೋಭೆ, ಅಗ್ನಿಯೇ ಮುಂತಾದವುಗಳಿಂದ ಅನರ್ಥ, ಪರಿಶುದ್ಧ ಹೃದಯಿಗಳ ನಾಶವಾಗಬಹುದೆನ್ನುತ್ತಾನೆ.
ವರಾಹಮಿಹಿರನ ಬೃಹತ್ಸಂಹಿತಾವನ್ನು ಕುರಿತು ಅಜಯ್ ಮಿಶ್ರ ಶಸ್ತ್ರಿಯವರು ಹೇಳುವಂತೆ ಇಂದಿನ ಗುಜರಾತ್ ಪ್ರಾಂತ್ಯದಲ್ಲಿ ವಾಸವಾಗಿರುವ ವೈಷ್ಣವ ಭಕ್ತರೇ ಚೋಕ್ಷುಗಳು ಎನ್ನುತ್ತಾರೆ. ಉತ್ಪಲ ಎನ್ನುವ ಗ್ರಂಥದಲ್ಲಿ ಚೋಕ್ಷುಗಳು ಕೆಟ್ಟಜನಾಂಗದವರು ಎನ್ನುವ ವಿಭಿನ್ನ ಹೇಳಿಕೆ ಸಿಗುತ್ತದೆ.
ಇನ್ನೂ ಬೇಕಾದಷ್ಟು ಬರೆಯ ಬಹುದು, ಎಲ್ಲಾ ಕಡೆಯೂ ಪವಿತ್ರವನ್ನೇ ಹೇಳಿ, ಪರಿಶುದ್ಧತೆ ಮತ್ತು ಪಾವಿತ್ರ್ಯವನ್ನು ಹೇಳಲಾಗಿದೆ. ಗುಪ್ತರ ಕಾಲದ ವೈಷ್ಣವರಾಗಿ, ನಾಟಕವೊಂದರಲ್ಲಿ ಪಾತ್ರವಾಗಿ, ಉತ್ಪಲದಲ್ಲಿ ದುಷ್ಟಜನರಾಗಿ, ಜ್ಯೋತಿಷ್ಯದಲ್ಲಿ ಶಕುನವಾಗಿ ಚೋಕ್ಷ ಬಂದು ಹೋಗಿದೆ. ಇಂದಿಗೂ ನಮ್ಮ ಕನ್ನಡದಲ್ಲಿ ಚೊಕ್ಕವಾಗಿಯೇ ಬಂದಿದ್ದು ಇಲ್ಲಿ, ಶುಭ್ರತೆಯ ಜೊತೆಗೆ ರಿಕ್ತವನ್ನೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಹೇಳುತ್ತದೆ.

No comments:

Post a Comment