Search This Blog

Tuesday 20 February 2018

ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು- ಕವಿ. ಮೊಗೇರಿ ಗೋಪಾಲಕೃಷ್ಣ ಅಡಿಗ.

ಹೊರಗೆ ನೀಲಾಕಾಶ, ಮುಗಿಲು, ತೊರೆ, ತೆರೆ ಕಾನು
ಹಿಮಗಿರಿಯ ಕಂದರದ ಧವಳ ಹಾಸ;
ಕೇಳುವುದು ದೂರತೀರದ ಮರ್ಮರಾಲಾಪ
ಈ ಪಂಜರಕು ನನಗು ವಜ್ರ ಲೇಪ
ಹೌದು, ಆ ಪರಿಸರವೇ ಹಾಗಿತ್ತು. ಪೂರ್ವಕ್ಕೆ ಕಣ್ಣು ಹಾಯಿಸಿದರೆ ಗದ್ದೆಗಳು. ಇನ್ನೂ ದೂರಕ್ಕೆ ಕಣ್ಣು ಹಾಯಿಸಿದರೆ ಬೆಟ್ಟಗಳ ಸಾಲು. ಪಶ್ಚಿಮದಲ್ಲಂತೂ ಬಯಲು ದೂರದಲ್ಲಿ ಸಮುದ್ರ. ಹಳ್ಳಿ ಎಂದರೆ ಹಳ್ಳಿಯೇ. ಮಧ್ಯದಲ್ಲಿರುವುದೇ ಅಡಿಗರ ಮನೆ. ಸಾಮಾನ್ಯವಾಗಿ ತಾಲೂಕಿನಾದ್ಯಂತ ಇಂದಿಗೂ ಜನ ಮಾನಸದಲ್ಲಿ ಹೆಸರು ಅಳಿಯದಂತೆ ಉಳಿಸಿಕೊಂಡ ಮನೆತನ ಅದು. ಹಾಗೆ ನೋಡಿದರೆ ಭೈರಪ್ಪರ ವಂಶವೃಕ್ಷದ ಶ್ರೋತ್ರೀಯರ ನೆನಪು ತಂದುಕೊಡುವಂತಹ ಮನೆ. ಜ್ಯೋತಿಷ್ಯ, ವೇದ ವೇದಾಂತಗಳ ಆಗರ. ಸ್ವತಃ ಸೂರ್ಯ ಸಿದ್ಧಾಂತದ ರೀತ್ಯಾ ಪಂಚಾಂಗ ತಯಾರಿಸುತ್ತಿರುವ ಮನೆ. ಬೆಳಗ್ಗೆದ್ದರೆ ಶಂಕರನಾರಾಯಣನಿಗೆ ರುದ್ರಾಭಿಷೇಕದೊಂದಿಗೆ ಅರ್ಚಿಸಿ ಪೂಜಿಸಿ ಅಡಿಗರ ಮನೆಯ ಮಿಕ್ಕಿದ ಕೆಲಸಗಳು ನಡೆಯುತ್ತಿದ್ದ ಕಾಲ. ಆಗಂತೂ ಎಲ್ಲಿಯೂ ವಿದ್ಯುತ್ ದೀಪಗಳಿರದ ಕಾಲ ಎಣ್ಣೆ ದೀಪದ ಅಡಿಯಲ್ಲಿಯೇ ಕುಳಿತು ಓದಿಕೊಳ್ಳುತ್ತಿದ್ದ ಸಮಯ. ಮೈಕುಗಳಿರದಿದ್ದರಿಂದ ದೂರದಲ್ಲಿ ಸಂಜೆ ಆರಕ್ಕೆ ಅಬ್ಬರದ ಚಂಡೆ ಕೇಳಿ ಇಂದು ಯಕ್ಷಗಾನವಿತ್ತು ಎಂದು ಅಂದಾಜಿಸಿ ದೊಂದಿಯನ್ನು ಹಿಡಿದುಕೊಂಡು ಆ ಕಡೆ ಹೋಗಬೇಕಿತ್ತು.
ಆ ಊರೇ ಹಾಗೆ ಇಂದು ಬಹಳಷ್ಟು ಬದಲಾವಣೆ ಕಂಡಿದೆ. ಆದರೆ ರಾಮಪ್ಪ ಅಡಿಗರ ಕಾಲದಲ್ಲಿನ ಪರಿಸ್ಥಿತಿಯನ್ನು ಸ್ವಲ್ಪವನ್ನೇ ಹೇಳಿದೆ.
ರಾಮಪ್ಪ ಅಡಿಗರು ಮತ್ತು ಗಾರಮ್ಮ ನಾನೀಗ ಹೇಳ ಹೊರಟಿರುವ ಗೋಪಾಲಕೃಷ್ಣ ಅಡಿಗರ ತಂದೆ ತಾಯಂದಿರು. ಮೊಗೇರಿ ಎನ್ನುವ ಊರಿನ ಪರಿಸರವೇ ಹಾಗಿತ್ತು ಮೊಗೇರಿಯಿಂದ ಕೂಗಳತೆಯ ದೂರದಲ್ಲಿದ್ದ ಬವಲಾಡಿಯಲ್ಲಿ ಯಕ್ಷಗಾನದ ಪ್ರಸಂಗಕರ್ತ ಕವಿ ಹೃದಯದ ಹಿರಿಯಣ್ಣ ಹೆಬ್ಬಾರರ ಮನೆಯಿತ್ತು. ಇನ್ನೊಬ್ಬ ಸಾಹಿತಿ ಸೀತಾರಾಮ ಹೆಬ್ಬಾರರ ಮಗ ಬಿ ಎಚ್. ಶ್ರೀಧರ್ ಸಹ ಅದೇ ಊರಿನವರು. ಒಂದು ದೃಷ್ಟಿಯಿಂದ ಆ ಪರಿಸರವೇ ಸಾಹಿತ್ಯದ ಕೃಷಿಕರ ನಾಡು ಅನ್ನಬಹುದಿತ್ತು. ಅಂತಹ ಪರಿಸರದಲ್ಲಿ ಬೆಳೆದ ಅಡಿಗರು ವರ್ಧಮಾನರಾಗಿ ಪ್ರವರ್ಧಮಾನಕ್ಕೇರಿದರು. ಒಂದು ಕಡೆ ಪಾರಂಪರಿಕ ವೈದಿಕ ಆಚರಣೆಗಳು ಇನ್ನೊಂದು ಕದೆ ಕೃಷಿಯನ್ನು ಬಿಡದ ಮನೆತನ. ಇಂತಹ ಸನ್ನಿವೇಶದಲ್ಲಿ ಅಡಿಗರಿಗೆ ಸಹಜವಾಗಿಯೇ ಚಂಡೆ ಮದ್ದಲೆಗಳ ನಾದ ಕೇಳಿರ ಬೇಕು.
ತಮ್ಮ ನೆನಪಿನ ಗಣಿಯಿಂದ ಎನ್ನುವ ಅನುಭವ ಕಥನದಲ್ಲಿ ಮೊಗೇರಿಯ ಸ್ಪಷ್ಟ ಚಿತ್ರಣವನ್ನು ಕೊಡುತ್ತಾರೆ. ಅದು ಅವರು ಕಂಡ ಮೊಗೇರಿ. ಈಗ ಅದು ಆ ರೀತಿಯಲ್ಲಿಲ್ಲದಿದ್ದರೂ. ಅವರಕಾಲಕ್ಕದು ಹಾಗಿತ್ತು. ನಾಗ ಬನ , ಆ ನಗಬನದ ಮೇಲೆಲ್ಲ ಬಾಗಾಳ ಮರದ ತರಗೆಲೆಗಳು ಬಿದ್ದಿರುವುದು ಇತ್ಯಾದಿ ಕೊಂಚ ಬದಲಾಗಿರಬಹುದು.
ಗೋಪಾಲಕೃಷ್ಣ ಅಡಿಗರ ಅಜ್ಜ ಶುದ್ಧ ವೈದಿಕರು ಆಚಾರ ವಿಚಾರಗಳು ಕರ್ಮಠತನವನ್ನು ಪ್ರತಿಬಿಂಬಿಸುತ್ತಿದ್ದವು ಆದರೆ ಆಮೇಲೆ ಅಡಿಗರ ತಂದೆ ಹಾಗಿರಲಿಲ್ಲ. ಅವರು ಸಂಸ್ಕೃತದಲ್ಲಿಯೂ ಪದ್ಯರಚನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ಅಡಿಗರು ತಮ್ಮ ಬಾಲ್ಯ, ಹುಡುಗಾಟಿಕೆಯ ಕಾಲ ಕಳೆದದ್ದು ಮೊಪ್ಗೇರಿ ಪರಿಸರದಲ್ಲಿಯೇ, ಆಮೇಲೆ ಕಾಲೇಜು ಅಭ್ಯಾಸ ಮೈಸೂರಿನಲ್ಲಿ ನಡೆಯಿತು. ಅವರ ಕುರಿತಾಗಿ ಹೇಳ ಹೊರಟರೆ ಅದು ಇನ್ನೂ ಬೆಳೆಯುತ್ತದೆ.
"ಅನ್ಯರೊರೆದುದನೆ, ಬರೆದುದನೆ ನಾ ಬರೆ ಬರೆದು
ಬಿನ್ನಗಾಗಿದೆ ಮನವು; ಬಗೆಯೊಲಗನೇ ತೆರೆದು
ನನ್ನ ನುಡಿಯೊಳಗೆ ಬಣ್ಣ ಬಣ್ಣದಲಿಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ" ಎಂದು ತಮ್ಮ ಕವನ ಒಂದರಲ್ಲಿ ತಿಳಿಸುತ್ತಾರೆ.
ಇನ್ನೊಂದು ಕವನದಲ್ಲಿ :
ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸವೇಗದಿಂದೆ ಎನ್ನುತ್ತಾರೆ.
ಕನ್ನಡದ ನೆಲವನ್ನು ನೆನೆಯುತ್ತ;
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸುಕುವ ಮುನ್ನ ಎನ್ನುತ್ತಾರೆ

ಈ ಸಾಲುಗಳಂತೂ ಹೃದಯಸ್ಪರ್ಶಿ ಎನ್ನಿಸುತ್ತದೆ. 

1 comment:

  1. ಸುಶ್ರಾವ್ಯವಾದ 'ಕಟ್ಟುವೆವು ನಾವು...' ಹಾಡನ್ನು ಚಂದನವಾಹಿನಿಯಲ್ಲಿ ಕೇಳಿದ ನೆನಪು. ಕವಿಯ ಬಗ್ಗೆ ತಿಳಿಯುವ ಅವಕಾಶ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete