Search This Blog

Monday 12 February 2018

ಗೌತಮೀ ಬಲಸಿರಿಯ ನಾಸಿಕ್ ಗುಹಾ ಶಾಸನ


 ವಾಲ್ಮೀಕಿ ರಾಮಾಯಣದ ಅಯೋಧ್ಯಾಕಾಂಡದ ದ್ವಿತೀಯ ಸರ್ಗದಲ್ಲಿ ಬರುವ ಮಾತಿದು.
ಸಂಗ್ರಾಮಾತ್ಪುನರಾಗತ್ಯ ಕುಞ್ಜರೇಣ ರಥೇನ ವಾ |
ಪೌರಾನ್ಸ್ವಜನವನ್ನಿತ್ಯಂ ಕುಶಲಂ ಪರಿಪೃಚ್ಫತಿ || ೩೮ ||
ಪುತ್ರೇಷ್ವಗ್ನಿಷು ದಾರೇಷು ಪ್ರೇಷ್ಯಶಿಷ್ಯಗಣೇಷು ಚ |
ನಿಖಿಲೇನಾನುಪೂರ್ವ್ಯಾಚ್ಚ ಪಿತಾ ಪುತ್ರಾನಿವೌರಸಾನ್ || ೩೯ ||
ರಾಷ್ಟ್ರರಕ್ಷಣೆಯಲ್ಲಿ ಮತ್ತು ರಾಷ್ಟ್ರದ ಹಿತದಲ್ಲಿ ಶ್ರೀರಾಮನಿಗೆ ಅಷ್ಟೊಂದು ಅಪಾರವಾದಆಸಕ್ತಿಯಿತ್ತು. ಜಯಶಾಲಿಯಾಗಿ ರಣರಂಗದಿಂದ ಅಥವಾ ಆನೆಯ ಮೇಲೆ ಕುಳಿತು ರಾಜಧಾನಿಗೆ ಹಿಂದಿರುಗಿದೊಡನೆಯೇ ತನ್ನ ಬಂಧುಗಳನ್ನು ಕುರಿತಾಗಿ ಕುಶಲಪ್ರಶ್ನೆಗಳನ್ನು ಕೇಳುವಂತೆಯೇ ಅಯೋಧ್ಯಾ ಪಟ್ಟಣಿಗರ ಕ್ಷೇಮ ಸಮಾಚಾರವನ್ನು ಯಾವಾಗಲೂ ಕೇಳುತ್ತಲೇ ಇರುತ್ತಾನೆ. ಶ್ರೀರಾಮನಿಗೆ ಇವರು ಸ್ವಜನರು, ಇವರು ಪಟ್ಟಣಿಗರು, ಇವರು ಸೇವಕರು ಎನ್ನುವಾ ಯಾವುದೇ ಭೇದವಿಲ್ಲ. ತನ್ನ ಪ್ರಜೆಗಳ ಮನೆಗೆ ಹೋಗಿ ಅವರೊಂದಿಗೆ ಆಪ್ತವಾಗಿ ಕ್ಷೇಮಗಳನ್ನು ತಿಳಿಯುವಾಗಲೂ ತನ್ನ ಊರಿಗೆ ಹೋಗಿ ಮನೆಗೆ ಬಂದ ತಂದೆಯು ತನ್ನ ಹಿರಿಯ ಮಗನನ್ನು ಕರೆದು ಕುಶಲವನ್ನು ಕೇಳುವಂತೆಯೇ ಪ್ರಜೆಗಳ ಕುಶಲವನ್ನೂ ಕೇಳಿ ತಿಳಿದುಕೊಳ್ಳುತ್ತಾನೆ. “ನಿನ್ನ ಹಿರಿಯ ಮಗನು ಕುಶಲಿಯಾಗಿರುವನೇ? ಎರಡನೆಯವನು ಏನು ಮಾಡುತ್ತಿದ್ದಾನೆ? ಕಿರಿಯವನ ವಯಸ್ಸೆಷ್ಟು? ಹಿರಿಯ ಮಗಳಿಗೆ ಮದುವೆಯಾಯಿತೇ? ಕಿರಿಯವಳು ಕುಶಲದಿಂದಿರುವಳೇ? ಔಪಾಸನ, ಅಗ್ನಿಹೋತ್ರ, ವೈಶ್ವದೇವಾದಿ ನಿತ್ಯ-ನೈಮಿತ್ತಿಕವಾದ ಕರ್ಮಗಳು ನಿರ್ವಿಘ್ನವಾಗಿ ನಡೆಯುತ್ತಿರುವುವೇ? ನಿನ್ನ ಪತ್ನಿಯು ಸುಖವಾಗಿರುವಳೇ? ಸೊಸೆಯರು ಅತ್ತೆ-ಮಾವಂದಿರ ವಿಷಯದಲ್ಲಿ ವಿಧೇಯರಾಗಿರುವರೇ? ನಿನ್ನ ಭೃತ್ಯರೂ ಮತ್ತು ಅವರ ಪರಿವಾರದವರೂ ಕುಶಲವೇ? ಸ್ವಾಮಿಭಕ್ತಿಯುಳ್ಳವರಾಗಿರುವರೇ? ಶಿಷ್ಯರು ಗುರುಶುಶ್ರೂಷೆಯಲ್ಲಿ ನಿರತರಾಗಿರುವರೇ?”ಹೀಗೆ ಒಂದು ಮನೆಯಲ್ಲಿ ಯಾರೊಬ್ಬರನ್ನೂ ಬಿಡದೇ ಸಕಲರ ಯೋಗ-ಕ್ಷೇಮಗಳನ್ನೂ ಶ್ರೀರಾಮನು ಪ್ರತ್ಯೇಕ-ಪ್ರತ್ಯೇಕವಾಗಿ ಕೇಳಿ ತಿಳಿದುಕೊಳ್ಳುತ್ತಾನೆ. ‘ಧರ್ಮಪರಾಯಣರಾದ ಶಿಷ್ಯರು ಸದಾ ಸನ್ನದ್ಧರಾಗಿ ನಿಮ್ಮ ಶುಶ್ರೂಷೆಮಾಡುವರೇ?’–ಹೀಗೆ ಪುರುಷೋತ್ತಮನಾದ ಶ್ರೀರಾಮನು ಆತ್ಮೀಯವಾದ ಮಾತುಗಳನ್ನಾಡುತ್ತಾನೆ. ಮನುಷ್ಯರ (ಪ್ರಜೆಗಳ) ದುಃಖದಲ್ಲಿ ತಾನೂ ಭಾಗಿಯಾಗುತ್ತಾನೆ. ಪ್ರಜೆಗಳ ಮನೆಗಳಲ್ಲಿ ನಡೆಯುವ ಉತ್ಸವಗಳಲ್ಲಿ ತಾನೂ ಭಾಗವಹಿಸುತ್ತಾ– ತಂದೆಯಾದವನು ಮಗನ ಮನೆಯಲ್ಲಿ ನಡೆಯುವ ಉತ್ಸವಸಮಾರಂಭವನ್ನು ನೋಡಿ ಸಂತೋಷಪಡುವಂತೆ ತಾನೂ ಸಹ ಸಂತೋಷಪಡುತ್ತಾನೆ. ‘ಪ್ರಜೆಗಳ ದುಃಖವೇ ತನ್ನ ದುಃಖ. ಪ್ರಜೆಗಳ ಸಂತೋಷವೇ ತನ್ನ ಸಂತೋಷ’–ಎಂಬುದನ್ನು ಶ್ರೀರಾಮನು ಚೆನ್ನಾಗಿ ಮೈಗೂಡಿಸಿಕೊಂಡಿದ್ದಾನೆ. ಇದನ್ನೇ ಕ್ರಿ ಶ ೨ನೇ ಶತಮಾನದ ಗೌತಮೀ ಬಲಸಿರಿಯ ನಾಸಿಕ್ ಗುಹೆಯಲ್ಲಿನ ಶಾಸನದಲ್ಲಿ ಬಳಸಿಕೊಳ್ಲಲಾಗಿದೆ. ಈ ಶಾಸನದ ೫ನೇ ಸಾಲಿನಲ್ಲಿ "ಪೋರಜನ ನಿವಿಸೇಸ ಸಮ ಸುಖ ದುಖಸ" ಎನ್ನುವ ವಾಕ್ಯವನ್ನು ರಾಮಾಯಣದ ಈ ಮೇಲಿನ ಶ್ಲೋಕವನ್ನು ಬಳಸಿ ಆಯ್ದುಕೊಂಡದ್ದಲ್ಲದೇ ವಿಷ್ಣು ಸಂಹಿತೆ ಮತ್ತು ಚಾಣಕ್ಯನೀತಿಯ ವಾಕ್ಯವನ್ನು ಒಳಗೊಂಡಂತೆ ಅಥವಾ ಶಾಸನ ಕವಿ ವಿಷ್ಣು ಸಂಹಿತೆಯ ಶ್ಲೋಕವೊಂದನ್ನು ಕಿರಿದಾಗಿಸಿ ತನ್ನ ನೆಲೆಯಲ್ಲಿ ಆಲೋಚಿಸಿ ಅದನ್ನು ಈ ರೀತಿ ಬರೆದುಕೊಂಡಿದ್ದಾನೆ.

ಪ್ರಜಾ ಸುಖ ಸುಖಾ ರಾಜ ತದ್ದುಃಖೇ ಯಶ್ಚ ದುಃಖಿತಃ |
ಸ ಕೀರ್ತಿಯುಕ್ತೋ ಲೋಕೇಸ್ಮಿನ್ ಪ್ರೀತ್ಯ ಸ್ವರ್ಗೇ ಮಹೀಯತೇ || ವಿಷ್ಣು ಸಂಹಿತಾ ೩, ೭೦
ಪ್ರಜೆಗಳು ಸುಖವಾಗಿದ್ದರೆ, ರಾಜನೂ ಸುಖಿಯಾಗುತ್ತಾನೆ. ಅವರ ದುಃಖದಲ್ಲಿ ರಾಜನ ದುಃಖವೂ ಆಡಗಿರುತ್ತದೆ. ಅವನು ಕೀರ್ತಿವಂತನಾಗಿ ಸ್ವರ್ಗವನ್ನಾಳುತ್ತಾನೆ.
ಅರ್ಥ ಶಾಸ್ತ್ರದಲ್ಲಿ
ಪ್ರಜಾ ಸುಖ ಸುಖ ರಾಜ್ಞಃ ಪ್ರಜಾನಾಂಶ್ಚ ಹಿತಂ ಹಿತಮ್ |
ನಾತ್ಮಪ್ರಿಯ ಹಿತ ರಾಜ್ಞಃ ಪ್ರಜಾನಾಂ ತುರೀಯಂ ಹಿತಮ್ ||
ಪ್ರಜೆಗಳ ಸುಖವೇ ರಾಜನ ಸುಖ, ಪ್ರಜೆಗಳ ಹಿತವೇ ರಾಜನ ಹಿತ,

No comments:

Post a Comment