Search This Blog

Wednesday 14 February 2018

ಕಾಶೀರಾಜ ದಿವೋದಸ - ದೇವವೈದ್ಯ ಧನ್ವಂತರಿ


ದಿವೋದಾಸಸ್ಯ ಸತ್ಪತಿಃ ಇದು ಋಗ್ವೇದ ೬:೧೬;೧೯ ರಲ್ಲಿ ಬರುವ ಉಲ್ಲೇಖ,
ದಿವೋದಾಸೇಭಿರ್ ಇಂದ್ರಸ್ತವಾನಃ ಇದೂ ಸಹ ಋಗ್ವೇದದ ೧: ೧೩೦; ೧೦ರ ಉಲ್ಲೇಖ. ಹೌದು ವೇದಗಳಲ್ಲಿ ಉಲ್ಲೇಖಿತನಾದ ಭಾರತ ಕಂಡ ಅಪ್ರತಿಮ ಕೌಶಲ್ಯದ ವೈದ್ಯದೇವ ಧನ್ವಂತರಿಯೇ ದಿವೋದಸ. ದಿವೋದಸನ ಕುರಿತು ಬರೆಯಲು ಕುಳಿತರೆ ಅದು ಒಂದು ನೂರಾರು ಪುಟಗಳಿಗೂ ಹೆಚ್ಚಾಗಬಹುದು.
ಕಾಶಿಯಲ್ಲಿ ಹರ್ಯಶ್ವನೆಂಬ ರಾಜನು ರಾಜ್ಯವನ್ನಾಳುತ್ತಿದ್ದನು. ಅವನು ಅತ್ಯಂತ ಪರಾಕ್ರಮಿ ಮತ್ತು ಅಷ್ಟೇ ಖ್ಯಾತಿಯನ್ನು ಪಡೆದಿದ್ದನು. ಒಮ್ಮೆ ವೀತಹವ್ಯನ ಸಾವಿರ ಮಕ್ಕಳೆಲ್ಲಾ ಸೇರಿ ಹರ್ಯಶ್ವನ ಮೇಲೆ ಯುದ್ಧಕ್ಕೆ ಹೋದರು. ಗಂಗಾ-ಯಮುನೆಯರ ಮಧ್ಯದಲ್ಲಿ ನಡೆದ ಆ ಮಹಾಯುದ್ಧದಲ್ಲಿ ಹರ್ಯಶ್ವನು ಅಸುನೀಗಿದನು. ಮಹಾರಥರಾದ ಹೈಹಯನ ಮಕ್ಕಳು ಹರ್ಯಶ್ವರಾಜನನ್ನು ಸಂಹರಿಸಿ ತಮ್ಮ ರಾಜಧಾನಿಗೆ ಹಿಂದಿರುಗಿದರು. ಹರ್ಯಶ್ವನು ಸತ್ತ ನಂತರ ಅವನ ಮಗನಾದ, ಸುದೇವನೆಂಬುವನು (ಈತನಿಗೆ ಧನ್ವನೆನ್ನುವ ಹೆಸರೂ ಇದೆ) ಕಾಶೀರಾಜ್ಯದಲ್ಲಿ ಪಟ್ಟಾಭಿಷಿಕ್ತನಾದನು. ಈತ ಧರ್ಮಪರಾಯಣೆಯಲ್ಲಿ ಎತ್ತಿದ ಕೈ. ವೀತಹವ್ಯನ ಸಾವಿರ ಮಕ್ಕಳು ಪುನಃ ಸುದೇವನ ಮೇಲೂ ದಂಡೆತ್ತಿ ಬಂದು ಅವನನ್ನು ಯುದ್ಧದಲ್ಲಿ ಸಂಹರಿಸಿ ತಮ್ಮ ರಾಜಧಾನಿಗೆ ಹೊರಟು ಹೋದರು. ಬಳಿಕ ಅಮಾತ್ಯರು ಸುದೇವನ ಮಗನಾದ ದಿವೋದಸನನ್ನು ಕಾಶೀರಾಜ್ಯದ ಸಿಂಹಾಸನದಲ್ಲಿ ಪಟ್ಟಾಭೀಷೇಕಮಾಡಿದರು. ಮಹಾತೇಜಸ್ವಿಯಾಗಿದ್ದ ದಿವೋದಸನು ಜಿತೇಂದ್ರಿಯರಾದ ಹೈಹಯ ಸುತರ ಪರಾಕ್ರಮವನ್ನು ಮನಗಂಡು ಇಂದ್ರನನ್ನು ಆರಾಧಿಸಿ ಅವನ ಆಜ್ಞಾನುಸಾರವಾಗಿ ಅಭೇದ್ಯವಾದ ವಾರಣಾಸಿ ಎಂಬ ನಗರವನ್ನು ನಿರ್ಮಿಸಿದನು. ನೂತನವಾದ ಆ ಪಟ್ಟಣವು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರಿಂದ ಸಮಾಕುಲವಾಗಿದ್ದಿತು. ಅದು ಸಂಪದ್ಭರಿತ ನಾಡಾಗಿತ್ತು. ಆ ವಾರಣಾಸೀ ನಗರದ ಒಂದು ಭಾಗವು ಗಂಗಾನದಿಯ ಉತ್ತರದಿಕ್ಕಿನ ತೀರಪ್ರದೇಶದವರೆಗೂ, ಮತ್ತೊಂದು ಭಾಗವು ಗೋಮತೀ ನದಿಯ ದಕ್ಷಿಣತೀರಪ್ರದೇಶದವರೆಗೂ, ವ್ಯಾಪಿಸಿತ್ತಲ್ಲದೇ, ಆ ಪಟ್ಟಣವು ಅತ್ಯಂತಸುಂದರವಾಗಿದ್ದು ಇಂದ್ರನ ಅಮರಾವತಿಗೆ ಕಡಿಮೆ ಇರಲಿಲ್ಲ. ಧರ್ಮದಿಂದ ರಾಜ್ಯವನ್ನು ಪಾಲಿಸಿಕೊಂಡು ವಾರಣಾಸಿಯಲ್ಲಿ ವಾಸಮಾಡುತ್ತಿದ್ದ ದಿವೋದಸನ ಪಟ್ಟಣಕ್ಕೆ ಹೈಹಯಕುಮಾರರು ಪುನಃ ಮುತ್ತಿಗೆಹಾಕಿದರು. ಈಗ ದಿವೋದಸನು ಪಟ್ಟಣದಿಂದ ಹೊರಬಂದು ಹೈಹಯಕುಮಾರರನ್ನು ಎದುರಿಸಿ ಅವರೊಡನೆ ಘೋರ ಯುದ್ಧ ಮಾಡಿದನು. ಒಂದು ನೂರು ದಿವಸಗಳವರೆಗೆ ಯುದ್ಧಮಾಡುತ್ತಿದ್ದ ದಿವೋದಸನು ಯುದ್ಧದಲ್ಲಿ ತನ್ನ ಅನೇಕ ರಥಿಕರನ್ನೂ, ಅಶ್ವ ಸೈನಿಕರನ್ನೂ, ಗಜಸೈನಿಕರನ್ನೂ, ಕಾಲಾಳುಗಳನ್ನೂ ಕಳೆದುಕೊಂಡನು. ಅವನ ಭಂಡಾರವೂ ಬರಿದಾಯಿತು. ಅಂತಹ ದಯನೀಯವಾದ ಅವಸ್ಥೆಯನ್ನು ಹೊಂದಿದ ರಾಜನು ಅಜೇಯಶತ್ರುಗಳನ್ನು ಎದುರಿಸಿ ಯುದ್ಧಮಾಡಲು ಸಾಧ್ಯವಾಗದೇ ಪಟ್ಟಣವನ್ನೇ ತ್ಯಜಿಸಿ ಪಲಾಯನ ಮಾಡಿದನು. ಬಳಿಕ ದಿವೋದಾಸನು ಭರದ್ವಾಜಮುನಿಯ ಆಶ್ರಮಕ್ಕೆ ಹೋಗಿ ಮಹರ್ಷಿಯ ಮುಂದೆ ಕೈಜೋಡಿಸಿ ಅವನಿಗೆ ಶರಣಾಗತನಾದನು. ಬೃಹಸ್ಪತಿಯ ಜ್ಯೇಷ್ಠಪುತ್ರನಾದ, ಭರದ್ವಾಜನು ದಿವೋದಸನಿಗೆ ಹೀಗೆ ಕೇಳುತ್ತಾನೆ.
ಕಿಮಾಗಮನಕೃತ್ಯಂ ತೇ ಸರ್ವಂ ಪ್ರಬ್ರೂಹಿ ಮೇ ನೃಪ |
ಯತ್ತೇ ಪ್ರಿಯಂ ತತ್ಕರಿಷ್ಯೇ ನ ಮೇಽತ್ರಾಸ್ತಿ ವಿಚಾರಣಾ || ೨೫ ||
ರಾಜನೇ! ಯಾತಕ್ಕಾಗಿ ಬಂದಿರುವೆ? ಎಲ್ಲವನ್ನೂ ನನಗೆ ಹೇಳು. ನಿನಗೆ ಪ್ರಿಯವಾದ ಕಾರ್ಯವನ್ನು ನಾನು ಮಾಡಿಕೊಡುವೆನು. ಆಗ ದಿವೋದಸನು ಹೇಳುತ್ತಾನೆ ಯುದ್ಧದಲ್ಲಿ ವೀತಹವ್ಯನ ಮಕ್ಕಳು ನನ್ನ ವಂಶವನ್ನೇ ನಾಶಮಾಡಿಬಿಟ್ಟರು. ಯುದ್ಧದಲ್ಲಿ ಪರಾಜಯವನ್ನು ಹೊಂದಿ ಎಲ್ಲವನ್ನೂ
ಕಳೆದುಕೊಂಡಿರುವ ನಾನೊಬ್ಬನೇ ಈಗ ಉಳಿದುಕೊಂಡಿದ್ದೇನೆ. ರಕ್ಷಣೆಗಾಗಿ ನಿನ್ನಲ್ಲಿ ಬಂದಿರುವೆ ಎನ್ನುತ್ತಾನೆ. ಪಾಪಕರ್ಮಿಗಳಾದ ಆ ವೀತಹವ್ಯನ ಮಕ್ಕಳು ನಮ್ಮ ವಂಶದಲ್ಲಿ ನನ್ನೊಬ್ಬನನ್ನು ಮಾತ್ರವೇ ಜೀವಂತ ಉಳಿಸಿದ್ದಾರೆ ಎನ್ನುತ್ತಾನೆ. ಆಗ ಭರಧ್ವಾಜನು ಭಯಪಡಬೇಡ! ನಿನಗೆ ಪುತ್ರಪ್ರಾಪ್ತಿಗಾಗಿ ನಾನೊಂದು ಇಷ್ಟಿಯನ್ನು ಮಾಡುತ್ತೇನೆ. ಇಷ್ಟಿಯ ಫಲವಾಗಿ ಹುಟ್ಟುವ ಪುತ್ರನ ಮೂಲಕವಾಗಿ ನೀನು ವೀತಹವ್ಯನ ಸಾವಿರಮಕ್ಕಳನ್ನೂ ಸಂಹರಿಸುವೆ.ಭರದ್ವಾಜನು ಹೀಗೆ ಹೇಳಿ ಒಡನೆಯೇ ರಾಜನಿಂದ ಪುತ್ರಕಾಮೇಷ್ಟಿಯನ್ನು ವಿಧಿವತ್ತಾಗಿ ಮಾಡಿಸಿದನು. ಯಜ್ಞದ ಫಲವಾಗಿ ದಿವೋದಾಸನಿಗೆ ಪ್ರತರ್ದನನೆಂಬ ಮಗನು ಹುಟ್ಟಿದನು. ಪ್ರತರ್ದನನು ಹುಟ್ಟಿದೊಡನೆಯೇ ಹದಿಮೂರು ವರ್ಷದ ಪ್ರಾಯದವನಾಗಿ ಬೆಳೆದುಬಿಟ್ಟನು. ಆಗಲೇ ಅವನು ಸಂಪೂರ್ಣವೇದಗಳನ್ನೂ ಅಧ್ಯಯನಮಾಡಿದ್ದನು. ಧನುರ್ವೇದದಲ್ಲಿಯೂ ಪಾರಂಗತನಾಗಿದ್ದನು.
ದಿವೋದಾಸನು ಸುದೇವ ಅಥವಾ ಧನ್ವನ ಮಗನಾಗಿದ್ದರಿಂದ ಈತನಿಗೆ ಧನ್ವಂತಿರಿ ಎನ್ನುವ ಹೆಸರೂ ಇತ್ತು. ಈತನೇ ಇಂದು ನಾವು ಆರಾಧಿಸಿಕೊಂಡು ಬರುವ ಧನ್ವಂತರಿ. ಆಯುರ್ವೇದದ ಜನಕ. ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರ ಪ್ರವರ್ತಕನೆಂದು ಖ್ಯಾತ. ಈತನ ಅಂದರೆ ದಿವೋದಾಸನ ಹೆಸರು ಋಗ್ವೇದದಲ್ಲಿ ಸಿಗುತ್ತದೆ ಆದರೆ ಧನ್ವಂತರಿಯ ಹೆಸರು ಸಿಗುವುದಿಲ್ಲ. ಕೌಶಿಕ ಸೂತ್ರದಲ್ಲಿ ಧನ್ವಂತರಿಯ ಹೆಸರು ಪ್ರಾಯಶಃ ಮೊತ್ತಮೊದಲು ಸೂಚಿತವಾಗಿದೆ ಎನ್ನಬಹುದು. ಮಹಾಭಾರತಕ್ಕೆ ಸೇರಿದ ಹರಿವಂಶದಲ್ಲಿ ಅಷ್ಟಾಂಗ ಆಯುರ್ವೇದ ಶಾಸ್ತ್ರ ಪ್ರವರ್ತಕನಾದ ಕಾಶಿರಾಜನ ವಂಶದಲ್ಲಿ ಈತ ಜನ್ಮ ತಾಳಿದನೆಂದೂ ಕಾಶಿ ರಾಜ ಅಥವಾ ಧನ್ವರಾಜನ ಮಗನಾದ್ದರಿಂದ ಈತನನ್ನು ಧನ್ವಂತರಿ ಎಂದು ಕರೆಯಲಾಯಿತೆಂದೂ ಸೂಚಿತವಾಗಿದೆ. ಕಾಶಿರಾಜರ ವಂಶವೃಕ್ಷ ಹರಿವಂಶದಲ್ಲಿ ಈ ರೀತಿ ಸೂಚಿತವಾಗಿದೆ : ಕಾಶೇಯ,ದೀರ್ಘತಪಸ್ಸು, ಧನ್ವ, ಧನ್ವಂತರಿ, ಕೇತುಕಾಮ, ಭೀಮರಥ (ಭೀಮಸೇನ), ದಿವೋದಾಸ, ಪ್ರತರ್ದನ, ವತ್ಸ, ಅಲರ್ಕ. ಕಾಶೇಯನ ಪೌತ್ರನಾದ ಧನ್ವ ಹಾಲಿನ ಸಮುದ್ರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರನಾದ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಧನ್ವಂತ ಭರದ್ವಾಜರಿಂದ ಆಯುರ್ವೇದದ ಉಪದೇಶಗಳನ್ನು ಪಡೆದು ಆ ವಿಜ್ಞಾನವನ್ನು ಶಲ್ಯ, ಶಾಕಲ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದತಂತ್ರ, ರಸಾಯನಶಾಸ್ತ್ರ ಮತ್ತು ವಾಜೀಕರಣ ತಂತ್ರಗಳೆಂದು ಎಂಟು ಭಾಗಗಳಾಗಿ ಶಿಷ್ಯರಿಗೆ ಉಪದೇಶಿಸಿದ.
ಸುಶ್ರುತ ಸಂಹಿತೆಯಲ್ಲಿ ಕಾಶಿಯ ರಾಜನಾದ ದಿವೋದಾಸನೇ ಧನ್ವಂತರಿ ಎಂದು ಹೇಳಿದೆ. ಈತ ಆಯುರ್ವೇದದಲ್ಲಿ ಪಾರಂಗತನಾಗಿದ್ದುದರಿಂದ ಈತನನ್ನು ಧನ್ವಂತರಿ ದಿವೋದಾಸನೆಂದು ಕರೆಯುತ್ತಾರೆ. ಅಗ್ನಿಪುರಾಣ ಮತ್ತು ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವನೇ ದಿವೋದಾಸನೆಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಮನುಷ್ಯ, ಕುದುರೆ, ಹಸುಗಳಿಗೆ ಸಂಬಂಧಿಸಿದ ಆಯುರ್ವೇದ ಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು ಶಿಷ್ಯ ಸಂಭಾಷಣೆಯ ರೂಪದಲ್ಲಿ ವರ್ಣಿತವಾಗಿದೆ. ಧನ್ವಂತರಿದಿವೋದಾಸ ಸುಶ್ರುತನಿಗೆ ಆಯುರ್ವೇದವನ್ನು ಉಪದೇಶಿಸಿದನೆಂದು ಹೇಳಿದೆ.
ಶಲ್ಯ ಶಾಸ್ತ್ರದಲ್ಲಿ ಪಾರಂಗತರಾದವರನ್ನು ಧನ್ವಂತರಿ ಎಂದೂ ಕರೆಯುತ್ತಾರೆ. ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಪ್ರಧಾನವಾದುದರಿಂದ ಶಲ್ಯ ಅಂಗದಲ್ಲಿ ನಿಪುಣನಾದ ವೈದ್ಯನನ್ನು ಪ್ರಾರಂಭದಲ್ಲಿ ಧನ್ವಂತರಿ ಎಂದೇ ಕರೆಯುತ್ತಿದ್ದರು. ವೈದ್ಯರನ್ನು ಮೂರು ವಿಧವಾಗಿ ವಿಂಗಡಿಸಿ ಒಂದೇ ರೋಗಕ್ಕೆ ನೂರು ಔಷಧಿಗಳನ್ನು ಬಲ್ಲವನನ್ನು ವೈದ್ಯನೆಂದೂ ಇನ್ನೂರು ಔಷಧಿಗಳನ್ನು ಬಲ್ಲವನನ್ನು ಭಿಷಕ್ ಎಂದೂ ಮೂನ್ನೂರು ಔಷಧಿಗಳನ್ನು ಬಲ್ಲವನನ್ನು ಧನ್ವಂತರಿ ಎಂದು ಕರೆಯುತ್ತಿದ್ದರು. ವೈದ್ಯ ಚಿಕಿತ್ಸೆಯಲ್ಲಿ ನಿಪುಣನಾದವನನ್ನು ಅನಂತರ ಧನ್ವಂತರಿ ಎಂದು ಕರೆಯಲಾಯಿತು.
 ಸ್ಕಾಂದ ಗರುಡ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿರುವ ಕಥೆಯ ಪ್ರಕಾರ ಗಾವಲನೆಂಬ ಋಷಿ ಸಂಚರಿಸುತ್ತಿರುವಾಗ ಬಹಳ ಬಾಯಾರಿದವನಾಗಿ ದಾರಿಯಲ್ಲಿ ನೀರನ್ನು ಹೊತ್ತು ಬರುತ್ತಿದ್ದ ವೈಶ್ಯಕನ್ಯೆಯಾದ ವೀರಭದ್ರಾ ಎಂಬಾಕೆಯಿಂದ ನೀರು ಪಡೆದು ತೃಪ್ತನಾಗಿ ಆಕೆಗೆ ಉತ್ತಮವಾದ ಮಗನಾಗಲೆಂದು ಆಶೀರ್ವದಿಸಿದನೆಂದೂ ಕಾಲಕ್ರಮೇಣ ಆಕೆಯಲ್ಲಿ ಜನಿಸಿದ ಗಂಡು ಮಗು ಬಾಲ್ಯದಲ್ಲಿಯೇ ಸಕಲಶಾಸ್ತ್ರಗಳಲ್ಲಿ ಪಾರಂಗತನಾಗಿ ಅಶ್ವಿನೀಕುಮಾರರಿಂದ ಆಯುರ್ವೇದವನ್ನು ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದೂ ವರ್ಣಿತವಾಗಿದೆ.
ಇವುಗಳಲ್ಲದೇ ದಿವೋದಾಸನ ಕುರಿತಾಗಿ: ಧರ್ಮಾತ್ಮನಾದ ದಿವೋದಾಸನು ವಾರಾಣಸೀಪುರಿಗೆ ರಾಜನಾಗಿದ್ದನು. ಅದೇ ಸಮಯದಲ್ಲಿ ಭಗವಾನ್ ಶಂಕರನು ಪಾರ್ವತಿಯನ್ನು ವಿವಾಹಮಾಡಿಕೊಂಡು ಅವಳಿಗೆ ಪ್ರಿಯವನ್ನುಂಟು ಮಾಡುವ ಅಪೇಕ್ಷೆಯಿಂದ ಮಾವನಾದ ಹಿಮವಂತನ ಮನೆಯಲ್ಲೇ ಇದ್ದುಬಿಟ್ಟನು. ಆ ಸಮಯದಲ್ಲಿ ಮಹಾದೇವನ ಆಜ್ಞೆಯಂತೆ ದೇವೀಮಂತ್ರಗಳ ಪಾರ್ಷದರು ಮಹೇಶ್ವರನ ಪುನಶ್ಚರಣೆಯಿಂದ ಪಾರ್ವತಿಯನ್ನು ತುಷ್ಟಿಗೊಳಿಸುತ್ತಿದ್ದರು. ಇದರಿಂದ ಪಾರ್ವತಿಯು ಸಂತುಷ್ಟಳಾದಳು. ಆದರೆ ಅವಳ ತಾಯಿಯಾದ ಮೇನೆಗೆ ಇದು ಸಹ್ಯವಾಗಲಿಲ್ಲ. ಅವಳು ಮಗಳ ಎದುರಿನಲ್ಲಿಯೇ ಮಹೇಶನನ್ನೂ ಅವನ ಪಾರ್ಷದರನ್ನೂ ಅನಾಚಾರಿಗಳೆಂದು ನಿಂದಿಸುತ್ತಿದ್ದಳು. ಇದರಿಂದ ಕುಪಿತಳಾದ ಉಮೆಯು ಮಹೇಶನ ಬಳಿಗೆ ಹೋಗಿ ದೇವ! ಇನ್ನು ಮುಂದೆ ನಾನಿಲ್ಲಿ ವಾಸಮಾಡುವುದಿಲ್ಲ. ನಿನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗು.ಎಂದು ಹೇಳಿದಳು. ಪಾರ್ವತಿಯು ಹೇಳಿದಂತೆ ಮಾಡಲು ತಾನು ವಾಸವಾಗಿರಲು ಯೋಗ್ಯಸ್ಥಳವು ಯಾವುದೆಂದು ನಿರ್ಧರಿಸಲು ಮಹಾದೇವನು ಎಲ್ಲ ಲೋಕಗಳನ್ನೂ ಅವಲೋಕಿಸಿದನು. ಮಹೇಶ್ವರನು ಪಾರ್ವತಿಯೊಡನೆ ವಾಸಮಾಡಿಕೊಂಡಿರಲು ಭೂಲೋಕವನ್ನೇ ಆರಿಸಿಕೊಂಡನು. ಅದರಲ್ಲಿಯೂ ಸಿದ್ಧಿಕ್ಷೇತ್ರವಾದ ವಾರಾಣಸಿಯೇ ಅವನಿಗೆ ಬಹಳ ಮೆಚ್ಚುಗೆಯಾಯಿತು. ದಿವೋದಾಸನು ವಾರಾಣಸಿಯನ್ನು ಆಳುತ್ತಿರುವನೆಂದು ತಿಳಿದು ಮಹೇಶನು ತನ್ನ ಪಾರ್ಷದನಾದ ನಿಕುಂಭನಿಗೆ ವಾರಾಣಸೀ ಕ್ಷೇತ್ರವನ್ನು ಮನುಷ್ಯ ರಹಿತವನ್ನಾಗಿ ಮಾಡುವಂತೆ ಹೇಳಿದನು. ಶಂಕರನ ಆಜ್ಞೆಯಂತೆ ನಿಕುಂಭನು ವಾರಾಣಸಿಗೆ ಹೋಗಿ ಕಂಡುಕನೆಂಬವನ ಕನಸಿನಲ್ಲಿ ಕಾಣಿಸಿಕೊಂಡು ಆ ಪಟ್ಟಣದ ಗಡಿಯಲ್ಲಿ ಅವನದೊಂದು ಪ್ರತಿಮೆಯನ್ನು ಸ್ಥಾಪಿಸುವಂತೆಯೂ ಆ ಮೂಲಕ ಅವನಿಗೆ ಅಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆಯೂ ತಿಳಿಸಿದನು. ಕಂಡುಕನು ರಾಜನಿಗೆ ತಿಳಿಸಿ ನಗರದ ಗಡಿಯಲ್ಲಿ ನಿಕುಂಭನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಆ ಪ್ರತಿಮೆಗೆ ಮಹಾಪೂಜೆಯನ್ನೂ ಮಾಡತೊಡಗಿದನು. ಕಂಡುಕನು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿಮೆಯೊಂದನ್ನು ಪೂಜಿಸುತ್ತಿದ್ದಾನೆಂಬ ವಿಷಯವನ್ನು ತಿಳಿದ ವಾರಾಣಸಿಯ ನಾಗರಿಕರು ಸಾಲು-ಸಾಲಾಗಿ ನಿಕುಂಭನನ್ನು ಪೂಜಿಸಲು ಬರತೊಡಗಿದರು. ಹಾಗೆ ಪೂಜಿಸಿದವರೆಲ್ಲರಿಗೂ ನಿಕುಂಭನು ಬೇಡಿದ ವರಗಳನ್ನು ದಯಪಾಲಿಸುತ್ತಿದ್ದನು. ಪುತ್ರರು, ಐಶ್ವರ್ಯ, ಆಯುಸ್ಸುಮುಂತಾದ ಎಲ್ಲಾ ಕಾಮನೆಗಳನ್ನೂ ನಿಕುಂಭನು ಅನುಗ್ರಹಿಸುತ್ತಿದ್ದನು. ದಿವೋದಾಸನ ಪತ್ನಿಯಾದ ಸುಯಶಾ ಎಂಬುವಳು ಕೂಡ ಸಂತಾನವನ್ನು ಪಡೆಯುವ ಸಲುವಾಗಿ ನಿಕುಂಭನ ಪ್ರತಿಮೆಯಿದ್ದೆಡೆಗೆ ಬಂದು ಮಹಾಪೂಜೆಯನ್ನು ಮಾಡತೊಡಗಿದಳು. ಆದರೆ ಎಷ್ಟು ಪ್ರಾರ್ಥಿಸಿದರೂ ನಿಕುಂಭನು ರಾಣಿಗೆ ಸಂತಾನದ ವರವನ್ನು ಕೊಡಲಿಲ್ಲ. ರಾಜನು ಯಾವುದಾದರೂ ಕಾರಣದಿಂದ ನಮ್ಮ ಮೇಲೆ ಕೋಪಿಸಿಕೊಂಡರೆ ಒಡನೆಯೇ ನಮ್ಮ ಕಾರ್ಯಸಿದ್ಧಿಯಾಗುತ್ತದೆ’ – ಎಂಬುದು ನಿಕುಂಭನ ಅಭಿಪ್ರಾಯವಾಗಿದ್ದಿತು. ತನ್ನ ಪತ್ನಿಯು ಎಷ್ಟು ಪೂಜಿಸಿದರೂ ಎಷ್ಟು ಬೇಡಿಕೊಂಡರೂ ಸಂತಾನಪ್ರಾಪ್ತಿಯಾಗದಿರಲು ದಿವೋದಾಸನು ಕುಪಿತನಾಗಿ ನಿಕುಂಭನ ಪ್ರತಿಮೆಯಿದ್ದ ಸ್ಥಾನವನ್ನು ವಿನಾಶಗೊಳಿಸಿದನು. ತನ್ನ ಆಲಯವು ಭಗ್ನವಾದುದನ್ನು ಕಂಡು ನಿಕುಂಭನು ರಾಜನಿಗೆ ನನ್ನ ಈ ಆಲಯವನ್ನು ವಿನಾಶಗೊಳಿಸಿದ ಕಾರಣ ಈ ನಿನ್ನ ಪಟ್ಟಣವು ಅನಿರೀಕ್ಷಿತವಾಗಿ ಜನಶೂನ್ಯವಾಗುತ್ತದೆ’ – ಎಂದು ಶಪಿಸಿದನು. (ಇಂದಿಗೂ ವಾರಣಾಸಿಯಲ್ಲಿ ಅಲ್ಲಿನ ಮೂಲ ನಿವಾಸಿಗಳೆಂದು ಯಾರೂ ಇಲ್ಲ ಎಲ್ಲರೂ ಬೇರೆಡೆಯಿಂದ ಅಲ್ಲಿ ಹೋಗಿ ನೆಲೆನಿಂತು ನೆಲೆ ಕಂಡುಕೊಂಡವರೇ ಇರುವುದು) ವಾರಾಣಸಿಯಲ್ಲಿ ಅದರಂತೆ ವಾಸಮಾಡುತ್ತಿದ್ದ ವಾರಾಣಸಿಯು ಜನರೆಲ್ಲರೂ ಜನಶೂನ್ಯವಾಯಿತು. ದಿಕ್ಕಾಪಾಲಾಗಿ ಓಡಿಹೋದರು. ಅನಂತರ ಮಹಾದೇವನು ಆ ಪಟ್ಟಣದಲ್ಲಿ ತನ್ನ ನಿವಾಸವನ್ನು ಕಲ್ಪಿಸಿಕೊಂಡನು. ಹೀಗೆ ದಿವೋದಾಸನ ಕುರಿತಾಗಿ ಪುರಾಣಗಳಲ್ಲಿ ವಿಧವಿಧದ ಕಥೆಗಳು ದೊರಕುತ್ತವೆ. ಬ್ರಹ್ಮ ವೈವರ್ತಪುರಾಣದಲ್ಲಿ ಈತ ಸರ್ವವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಈತನ ಭಾವಚಿತ್ರ ರೀತಿಯ ಪ್ರತಿಮೆಯ ವಿಚಾರವಾಗಿ ಭಾಗವತಪುರಾಣ ಮಾರ್ಕಂಡೇಯ ಪುರಾಣ ವಿಷ್ಣುಧರ್ಮೋತ್ತರ ಪುರಾಣ ವಿಷ್ಣು ಪುರಾಣಗಳಲ್ಲೂ ಶಿಲ್ಪರತ್ನ ಸಮರಾಂಗಣಸೂತ್ರಧಾರ ಎಂಬ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿಯೂ ವಿವರಣೆಗಳಿವೆ. ಆದರೆ ಈ ಗ್ರಂಥಗಳಲ್ಲಿ ವರ್ಣಿತವಾಗಿರುವಂತೆ ಇರುವ ಧನ್ವಂತರಿಯ ವಿಗ್ರಹ ಇದುವರೆಗೂ ದೊರೆತಿರುವಂತೆ ತೋರುವುದಿಲ್ಲ.
ದಿವೋದಾಸನ ಉಲ್ಲೇಖವಿರುವ ಮೊಹೆಂಜೋದಾರೋವಿನ ಹಲಗೆ.



No comments:

Post a Comment