Search This Blog

Sunday 25 February 2018

ಪಾರ್ಥತುಲ್ಯ ಪರಾಕ್ರಮಃ



ಕ್ರಿ ಶ ೬೧೬-೬೧೭ ನೇ ಇಸವಿಗೆ ಸರಿ ಹೊಂದುವ ಈ ಶಾಸನ ಚಳುಕ್ಯ ಮೊದಲನೇ ವಿಷ್ಣುವರ್ಧನನಿಗೆ ಸೇರಿದ್ದು. ಮಹಾರಾಷ್ಟ್ರದ ಸತಾರದಲ್ಲಿ ದೊರೆತ ತಾಮ್ರಪಟ ಶಾಸನ, ಕನ್ನಡ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಈ ಶಾಸನ ಬರೆಯಲಾಗಿದೆ. ಈ ಶಾಸನದ ೭ನೇಸಾಲಿನ ಕೊನೆಯ ಭಾಗ ಮತ್ತು ೮ನೇ ಸಾಲಿನಲ್ಲಿ ವಾಲ್ಮೀಕಿರಾಮಾಯಣ ಬಾಲಕಾಂಡ ೧ನೆಯ ಸರ್ಗ ಎರಡನೇ ಶ್ಲೋಕದ ಎರಡನೇ ಚರಣವನ್ನು ಹಾಗೇಯೇ ಅಲ್ಲಿ ಇಳಿಸಲಾಗಿದೆ. "ಧರ್ಮಜ್ಞಶ್ಚ ಕೃತಜ್ಞಶ್ಚ ಪಾರ್ಥತುಲ್ಯ ಪರಾಕ್ರಮಃ" ಎಂದು ಶಾಸನ ಕವಿ ತೆಗೆದುಕೊಂಡಿದ್ದಾನೆ. ಧರ್ಮಜ್ಞನೂ, ಕೃತಜ್ಞನೂ ಆಗಿದ್ದ ಮೊದಲನೇ ವಿಷ್ಣುವರ್ಧನನು ಪರಾಕ್ರಮದಲ್ಲಿ ಅರ್ಜುನನಿಗೆ ಸರಿಸಾಟಿಯಾಗಿದ್ದನಂತೆ.
ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್ |
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ | || ||
ಪರಮಪೂಜ್ಯರಾದ ನಾರದಮಹರ್ಷಿಗಳೇ! ಈಗ ಜಗತ್ತಿನಲ್ಲಿ ಸಕಲಕಲ್ಯಾಣಗುಣಗಳಿಂದ ಕೂಡಿರುವವನು ಯಾರು? ವೀರ್ಯವಂತನು ಯಾರು? ಧರ್ಮಜ್ಞನಾರು? ಕೃತಜ್ಞನಾರು? ಸತ್ಯಭಾಷಿಯು ಯಾರು? ಎನ್ನುವ ಪ್ರಶ್ನೆ ಕೆಳಲಾಗುತ್ತದೆ.
೧. ಅನುಸಂಧಾನಮಾಡಲ್ಪಡುವುದು, ಅಥವಾ ಅನುಕರಣೆಮಾಡಲ್ಪಡುವುದೇ ಗುಣ.
೨ ವಿಕಾರಕ್ಕೆ ಕಾರಣಗಳಿದ್ದರೂ ವಿಕಾರಹೊಂದದವನು, ಅಥವಾ ತಾನೂ ವಿಕಾರ ಹೊಂದದೆ ಮತ್ತೊಬ್ಬರನ್ನೂ ವಿಕಾರಹೊಂದದಂತೆ ಮಾಡಬಲ್ಲ ಸಮರ್ಥನು ವೀರ್ಯವಂತನೆನಿಸಿಕೊಳ್ಳುತ್ತಾನೆ.
3. "ಯತೋಽಭ್ಯುದಯನಿಃಶ್ರೇಯಸಸಿದ್ಧಿಃಸಧರ್ಮಃ" ಅಭ್ಯುದಯ ಮತ್ತು ಶ್ರೇಯಸ್ಸುಗಳನ್ನು ಸಾಧಿಸಿಕೊಡುವುದೇ ಧರ್ಮ. ಅಲೌಕಿಕಶ್ರೇಯಸ್ಸಿನ ಸಾಧನೆಯೇ ಧರ್ಮ. ಇಂತಹ ಧರ್ಮದಲ್ಲಿ ಸಾಮಾನ್ಯ ಮತ್ತು ವಿಶೇಷರೂಪಗಳನ್ನು ತಿಳಿದವನು ಧರ್ಮಜ್ಞನು.
೪ ಇತರರಿಂದಾದ ಉಪಕಾರವು ಸ್ವಲ್ಪವೇ ಆದರೂ ಅದನ್ನೇ ಬಹುವಾಗಿ ತಿಳಿಯುವವನು ಕೃತಜ್ಞನು.
೫ ನಿಜವನ್ನು ಹೇಳಿದರೆ ತನಗೆ ತೊಂದರೆಯುಂಟಾಗುವುದೆಂದು ತಿಳಿದೂ ಸುಳ್ಳು ಹೇಳದೇ ನಿಜವನ್ನು ಹೇಳುವವನೇ ಸತ್ಯಭಾಷಿಯು.
೬ ಎಂತಹ ವಿಪತ್ತು ಒದಗಿದರೂ ಸಂಕಲ್ಪವನ್ನು ಪರಿತ್ಯಜಿಸದೇ ಕಾರ್ಯವನ್ನು ಸಾಧಿಸುವ ಸತ್ಯಸಂಕಲ್ಪನು ದೃಢವ್ರತನೆನಿಸುತ್ತಾನೆ.
ಇದೇ ಶ್ಲೋಕದಂತೊಇರುವುದು ರಾಮಾಯಣದಲ್ಲಿ ಅನೇಕ ಸಂದರ್ಭಗಳಲ್ಲಿ ಬರುತ್ತದೆ. ಅವುಗಳಲ್ಲಿ :
ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡದ ೧೬ನೇ ಸರ್ಗದಲ್ಲಿ
ನ ಚ ಕಾರ್ಯೋ ವಿಷಾದಸ್ತೇ ರಾಘವಂ ಪ್ರತಿ ಮತ್ಕೃತೇ |
ಧರ್ಮಜ್ಞಶ್ಚ ಕೃತಜ್ಞಶ್ಚ ಕಥಂ ಪಾಪಂ ಕರಿಷ್ಯತಿ || ||
ವಾಲ್ಮೀಕಿ ರಾಮಾಯಣದ ಸುಂದರ ಕಾಂಡದಲ್ಲಿ
ಧರ್ಮಜ್ಞಶ್ಚ ಕೃತಜ್ಞಶ್ಚ ರಾಜಧರ್ಮವಿಶಾರದಃ |
ಪರಾವರಜ್ಞೋ ಭೂತಾನಾಂ ತ್ವಮೇವ ಪರಮಾರ್ಥವಿತ್ || ||
ಸಂಕ್ಷೇಪರಾಮಾಯಣದ ಪ್ರಥಮ ಸರ್ಗದಲ್ಲಿ, ಮತ್ತು
ಉತ್ತರಕಾಂಡದ ೮೪ನೇ ಸರ್ಗದಲ್ಲಿ
ಧರ್ಮಜ್ಞಶ್ಚ ಕೃತಜ್ಞಶ್ಚ ಬುದ್ಧ್ಯಾ ಚ ಪರಿನಿಷ್ಠಿತಃ |
ಶಶಾಸ ಪೃಥಿವೀಂ ಸ್ಫೀತಾಂ ಧರ್ಮೇಣ ಸುಸಮಾಹಿತಃ || || ಎನ್ನುವುದಾಗಿ ಪುನರುಕ್ತ ಗೊಂಡಿದೆ.

2 comments:

  1. ಓಹೋ! ಹಾಗಾದರೆ ಉದ್ಧರಣೆಯ ಕ್ರಮ ಆಗಲೇ ಇತ್ತೆನ್ನಿ!

    ReplyDelete
  2. I am addicted to your blog. What a writing .. ಎಂತಹ ಉತ್ತಮೋತ್ತಮ ಮಾಹಿತಿಗಳು ಸರ್. ಹೀಗೆ ಬರೆಯುತ್ತಿರಿ." ಬ್ಲಾಗ್ ಯಾರು ಒದಲ್ಲ " ಎನ್ನುವ ನಿಮ್ಮ Facebook comment nodi ಬೇಜಾರಾಯಿತು. ನೀವು ಬರಿಯುತ್ತಿರಿ . ಶುಭವಾಗಲಿ

    ReplyDelete