Search This Blog

Tuesday 6 February 2018

“ಕರ್ದಮೇನ ಪ್ರಜಾ ಭೂತಾ ಮಯಿ ಸಂಭವ ಕರ್ದಮ”

ಪ್ರಜಾ ಪತಿಗಳಲ್ಲಿ ಕರ್ದಮನೆಂಬುವವನೇ ಮೊದಲನೆಯವನು. ವಿಕೃತನೆಂಬುವನು ಎರಡನೆಯವನು. ಶೇಷನೆಂಬುವನು ಮೂರನೆಯವನು. ನಾಲ್ಕನೆಯವನು ಸಂಶ್ರಯನು. ಬಹುಪುತ್ರನೆಂಬುವನು ಐದನೆಯವನು. ಆರನೆಯವನೇ ಸ್ಥಾಣು. ಏಳನೆಯವನು ಮರೀಚಿಯು. ಎಂಟನೆಯವನು ಅತ್ರಿ. ಕ್ರತು ಎಂಬುವವನು ಒಂಬತ್ತನೆಯವನು. ಹತ್ತನೆಯವನು ಪುಲಸ್ತ್ಯ. ಹನ್ನೊಂದ ನೆಯವನು ಅಂಗಿರಸ. ಪ್ರಚೇತಸನು ಹನ್ನೆರಡನೆಯವನು. ಹದಿಮೂರನೆಯ ವನು ಪುಲಹ. ಹದಿನಾಲ್ಕನೆಯವನು ಸುಪ್ರಸಿದ್ಧನಾದ ದಕ್ಷಪ್ರಜಾಪತಿಯು. ಹದಿನೈದನೆಯವನು ವಿವಸ್ವಂತ. ಹದಿನಾರನೆಯವನು ಅರಿಷ್ಟನೇಮಿ. ಹದಿನೇಳನೆಯವನು ಹಾಗೂ ಕಡೆಯವನು ಮಹಾತೇಜಸ್ವಿಯಾದ ಕಶ್ಯಪನು.
ಶ್ರೀ ಸೂಕ್ತದಲ್ಲಿ ಬರುವ ಕರ್ದಮನೆನ್ನುವವನು ಬ್ರಹ್ಮನ ಮಾನಸಪುತ್ರರಾದ ಬ್ರಹ್ಮಋಷಿಗಳಲ್ಲಿ ಒಬ್ಬ. ಅಥರ್ವವೇದದಲ್ಲಿ, ಸೂಕ್ತಗಳಲ್ಲಿ, ರಾಮಾಯಣ, ಮಹಾಭಾರತ ಮತ್ತು ಹೆಚ್ಚಿನ ಎಲ್ಲಾ ಪುರಾಣಗಳಲ್ಲಿ ಕರ್ದಮನ ವಿಚಾರವಾಗಿ ಹೆಚ್ಚು ವಿವರಗಳು ಸಿಗುತ್ತವೆ. ಈತ ಸರಸ್ವತೀ ತೀರದಲ್ಲಿ ವಿಷ್ಣುವನ್ನು ಕುರಿತು ತಪಸ್ಸು ಮಾಡಿದನಂತೆ. ಪ್ರತ್ಯಕ್ಷನಾದ ವಿಷ್ಣುವನ್ನು ಸಂತಾನಾರ್ಥವಾಗಿ ತನಗೆ ಪತ್ನಿಯೊಬ್ಬಳು ಬೇಕೆಂದು ಬೇಡಿದ. ನೀನಿದ್ದೆಡೆಗೇ ಸ್ವಯಂಭುವ ಮನು ಬಂದು ತನ್ನ ಮಗಳನ್ನು ಕೊಡುವನು ಎಂದು ಹೇಳಿ ವಿಷ್ಣು ಅಂತರ್ಧಾನನಾದ. ಸ್ವಲ್ಪಕಾಲದಲ್ಲೆ ಸ್ವಯಂಭುವ ಮನು ತನ್ನ ಮಗಳಾದ ದೇವಹೂತಿಯನ್ನು ಅಲ್ಲಿಗೆ ಕರೆತಂದು ಕರ್ದಮನಿಗೆ ಕೊಟ್ಟು ಮದುವೆ ಮಾಡಿದ. ದೇವಹೂತಿಯಲ್ಲಿ ಕರ್ದಮನಿಗೆ ಕಳಾ, ಅನಸೂಯಾ, ಶ್ರದ್ಧಾ, ಹವಿರ್ಭುಕ್, ಅರುಂಧತಿ, ಶಾಂತಿ, ಗತಿ, ಕ್ರಿಯಾ, ಖ್ಯಾತಿ ಎಂಬ ಒಂಬತ್ತು ಮಂದಿ ಹೆಣ್ಣುಮಕ್ಕಳಾದರು. ಮುಂದೆ ಇವರು ಕ್ರಮವಾಗಿ ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ವಶಿಷ್ಠ, ಅಥರ್ವಮುನಿ, ಪುಲಹ, ಕ್ರತು, ಭೃಗು ಎಂಬ ಒಂಬತ್ತು ಮಹರ್ಷಿಗಳನ್ನು ಮದುವೆಯಾದರು. ಇದಾದ ಅನಂತರ ಕರ್ದಮನಿಗೆ ಸಂನ್ಯಾಸ ತೆಗೆದುಕೊಳ್ಳಬೇಕೆಂಬ ಇಚ್ಛೆಯಾಯಿತು. ಇದನ್ನು ಕರ್ದಮ ದೇವಹೂತಿಗೆ ತಿಳಿಸಲು ಅವಳು ತನಗೆ ಪುತ್ರ ಸಂತಾನವಾದ ಹೊರತು ಸಂನ್ಯಾಸವನ್ನು ತೆಗೆದುಕೊಳ್ಳಕೂಡದೆಂದು ಹೇಳಿದಳು. ಕರ್ದಮ ದೇವಹೂತಿಯಲ್ಲಿ ಕಪಿಲನೆಂಬ ಮಗನನ್ನು ಪಡೆದ ಅನಂತರ ಸಂನ್ಯಾಸಾಶ್ರಮಕ್ಕೆ ತೆರಳಿದನೆನ್ನುವ ಕಥೆ ಸಿಗುತ್ತದೆ.

ಓಂ ಕರ್ದಮೇನ ಪ್ರಜಾ ಭೂತಾ ಮಯಿ ಸಂಭವ ಕರ್ದಮ |
ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮ ಮಾಲಿನೀಮ್ || ೧೧
ಹೇ ಕರ್ದಮನೇ ನಿನ್ನಿಂದ ಪ್ರಜಾವಂತಳಾದ ಪದ್ಮ ಮಾಲಿನಿಯಾದ ಲಕ್ಷ್ಮಿಯನ್ನು ನನ್ನ ವಂಶದಲ್ಲಿ ನೆಲೆನಿಲ್ಲುವಂತೆ ಮಾಡು ನೀನು ನನ್ನ ಮನೆಯಲ್ಲಿಯೇ ಇರುವಂತವನಾಗು. ಎನ್ನುವುದು ಈ ಮಂತ್ರದ ಅರ್ಥ. ಶ್ರೀ ದೇವಿಗೆ ಆನಂದ, ಕರ್ದಮ, ಚಿಕ್ಲೀಥನೆನ್ನುವ ಮೂರುಜನ ಪುತ್ರರು. ಇವರೆಲ್ಲರೂ ಅಸಾಧಾರಣ ಋಷಿಗಳು. ಕರ್ದಮ ಅತ್ಯಂತ ಪ್ರೀತಿಪಾತ್ರನಾಗಿದ್ದ, ಅವನೇ ಬಂದು ಮನೆಯಲ್ಲಿ ನೆಲೆ ನಿಂತರೆ ಸಹಜವಾಗಿ ವಾತ್ಸಲ್ಯಮಯೀ ತಾಯಿಯೂ ಬರುತ್ತಾಳೆ ಎನ್ನುವ ಭಾವಾರ್ಥವಿದೆ. ಇಲ್ಲಿ ಗಮನಿಸಬೇಕಾದ್ದು ಬಹಳವಿದೆ. ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ನಮ್ಮ ಪೂರ್ವಜರು ಅದೆಷ್ಟು ಮಹತ್ತರವಾದ ಕೊಡುಗೆಯನ್ನು ಜ್ಞಾನದ ಬಂಡಾರವನ್ನು ನಮಗೆ ಕೊಟ್ಟಿದ್ದಾರೆ. ಆದರೆ ಅವೆಲ್ಲವನ್ನು ಇಂದು ಅರ್ಥೈಸಿಕೊಳ್ಳುತ್ತಿಲ್ಲ ಅಷ್ಟೆ.
ಕರ್ದಮ ಎನ್ನುವುದು ಪುರಾಣಗಳಲ್ಲಿ ಅಲ್ಲಲ್ಲಿ ಮಹರ್ಷಿಯೊಬ್ಬನ ಹೆಸರಾಗಿ ಇನ್ನು ಕೆಲವೊಮ್ಮೆ ಒಂದು ಪ್ರದೇಶವಾಗಿ, ನದಿಯಾಗಿಯೂ ಗುರುತಿಸಿಕೊಂಡಿದೆ. ಪ್ರಸ್ತುತ ಸುಮಾರು ೫ -೬ನೇ ಶತಮಾನದ ಕದಂಬರ ದೊರೆ ರವಿವರ್ಮನ ಹಲಸಿಯ ಈ ಶಾಸನದಲ್ಲಿ ಕರ್ದಮ ಎನ್ನುವುದು ಒಂದು ಪ್ರದೇಶವಾಚಿಯಾಗಿ ಬಂದಿದೆ. "ಪಲಾಶಿಕಾಯಾಂ ಕರ್ದಮಪಟ್ಯಾಮ್" ಎನ್ನುವುದು ಹಲಸಿಯ ಕರ್ದಮ ಪಟ್ಟಿ ಎನ್ನುವ ಪ್ರದೇಶವನ್ನು ಸೂಚಿಸುತ್ತದೆ. ಆದರೆ ಸುಮಾರಾಗಿ ನಾನು ಗಮನಿಸಿದಂತೆ. ಹತ್ತನೇ ಶತಮಾನದೊಳಗಿನ ಯಾವುದೇ ಶಾಸನದಲ್ಲಿಯೂ ಕರ್ದಮನ ಉಲ್ಲೇಖ ಅತೀ ವಿರಳ ಎನ್ನಿಸುತ್ತದೆ.

ಈ ಶಾಸನದ ಈ ಸಾಲುಗಳಲ್ಲಿ ಹಲಸಿಯ ಕರ್ದಮ ಪಟ್ಟಿ ಪರದೇಶವನ್ನು ದತ್ತಿಯಾಗಿ ನೀಡಿ ಅದರ ಉಂಚ ಕರವೇ ಮೊದಲಾದ ತೆರಿಗೆಯನ್ನು ರದ್ದುಗೊಳಿಸಿದ ಕುರಿತು ಉಲ್ಲೇಖಿಸಲಾಗಿದೆ.

No comments:

Post a Comment