Search This Blog

Sunday 25 March 2018

ಮಾಂ ಧಾಸ್ಯತೀತಿ = ಮಾಂಧಾತ ಮತ್ತು ವೇದ - ಪುರಾಣ – ಇತಿಹಾಸ


ಇಕ್ಷ್ವಾಕುವಂಶದಲ್ಲಿ ಯುವನಾಶ್ವನೆಂಬವನು ಜನಿಸಿದನು. ಅವನು ಮೌಲ್ಯಯುತವಾದ ಅನೇಕ ಯಾಗಗಳನ್ನು ಮಾಡಿದನು. ಧರ್ಮಾತ್ಮನಾದ ಅವನು ಒಂದು ಸಾವಿರ ಅಶ್ವಮೇಧ ಯಾಗಗಳನ್ನು ಮಾಡಿದನಂತೆ. ಸಾವಿರ ಅಶ್ವಮೇಧಯಾಗಗಳೇ ಅಲ್ಲದೇ ಇನ್ನೂ ಅನೇಕ ಯಜ್ಞಗಳನ್ನು ಮಾಡಿ ಮುಗಿಸಿದನು. ಇಂತಹ ಮಹಾತ್ಮನಾದ, ಮಹಾವ್ರತನಾದ ಯುವನಾಶ್ವನಿಗೆ ಮಕ್ಕಳಿರಲಿಲ್ಲ. ಮಕ್ಕಳನ್ನು ಪಡೆಯುವ ಅಭಿಲಾಷೆಯಿಂದ ಆ ರಾಜನು ರಾಜ್ಯದ ಆಡಳಿತವೆಲ್ಲವನ್ನೂ ಮಂತ್ರಿಗಳಿಗೆ ವಹಿಸಿಕೊಟ್ಟು ಹೆಚ್ಚುಕಾಲ ಕಾಡಿನಲ್ಲಿಯೇ ತಪಶ್ಚರಣೆಮಾಡುತ್ತಾ ಕಾಲಕಳೆಯುತ್ತಿದ್ದನು. ಶಾಸ್ತ್ರಾಧಾರಿತ ವಿಧಿನಿಯಮಗಳನ್ನು ಅನುಸರಿಸುತ್ತಾ ಅರಣ್ಯದಲ್ಲಿದ್ದ ರಾಜನು ಉಪವಾಸವ್ರತನಿಷ್ಠನಾದನು. ಆದರೆ ಆ ಉಪವಾಸದಿಂದ ಅವನು ಬಳಲುತ್ತಿದ್ದನು. ಬಹಳ ಬಾಯಾರಿಕೆಯಿಂದ ಬಳಲಿ ಸುತ್ತಾಡುತ್ತಾ ತುಂಬಾ ದಣಿದು ಕಡೆಗೆ ಸಮೀಪದಲ್ಲಿಯೇ ಇದ್ದ ಭೃಗುಮಹರ್ಷಿಗಳ ಆಶ್ರಮಕ್ಕೆ ಹೋದನು. ಅವನ ಅದೃಷ್ಟವೇ ಅವನನ್ನು ಅಲ್ಲಿಗೆ ಕೊಂಡೊಯ್ದಿತು. ಅವನು ಅಲ್ಲಿಗೆ ಪ್ರವೇಶಿಸಿದ್ದು ರಾತ್ರಿಯಲ್ಲಿ. ಅದೇ ರಾತ್ರಿಯಲ್ಲಿ ಭೃಗುಪುತ್ರನಾದ ಚ್ಯವನಮಹರ್ಷಿಯು ಯುವನಾಶ್ವನಿಗೆ ಮಕ್ಕಳಾಗಬೇಕೆಂದು ಒಂದು ಯಜ್ಞವನ್ನು ಮಾಡಿ ಮುಗಿಸಿದ್ದನು. ಯಜ್ಞವೇದಿಕೆಯ ಬಳಿಯಲ್ಲಿ ಮಂತ್ರಪೂರಿತವಾದ ಒಂದು ಪೂರ್ಣಕುಂಭವು ಸ್ಥಾಪಿತವಾಗಿದ್ದಿತು. ಯುವನಾಶ್ವನ ಪತ್ನಿಯು ಆ ತೀರ್ಥವನ್ನು ಪ್ರಾಶನಮಾಡಿದರೆ ದೇವಸಮಾನನಾದ ಪುತ್ರನನ್ನು ಪಡೆಯುತ್ತಿದ್ದಳು. ಅಂತಹ ಮಹತ್ತ್ವಪೂರ್ಣವಾದ ತೀರ್ಥದ ಕುಂಭವನ್ನು ಅಲ್ಲಿಟ್ಟಿದ್ದರು. ರಾತ್ರಿಯಲ್ಲಿ ಬಹಳ ಹೊತ್ತು ಕಳೆದಿದ್ದರಿಂದಲೂ, ಕರ್ಮಗಳನ್ನು ಮಾಡಿ ಆಯಾಸಹೊಂದಿದ್ದರಿಂದಲೂ ಮಹರ್ಷಿಗಳೆಲ್ಲರೂ ಮಲಗಲು ಹೊರಟುಹೋದರು. ಅವರು ಹೋದನಂತರವೇ ಯುವನಾಶ್ವನು ಹಸಿವು, ಬಾಯಾರಿಕೆಗಳಿಂದ ಬಳಲಿದವನಾಗಿ ಆಶ್ರಮಕ್ಕೆ ಬಂದನು. ಆತನ ನಾಲಿಗೆಯು ಒಣಗಿಹೋಗಿತ್ತು. ಆಶ್ರಮವನ್ನು ಪ್ರವೇಶಿಸಿದೊಡನೆಯೇ ಕುಡಿಯಲು ನೀರು ಕೇಳಿದನು. ರಾಜನ ಬಾಯಿ ಒಣಗಿಹೋಗಿದ್ದುದರಿಂದಲೂ, ಆಹಾರವಿಲ್ಲದೇ ಬಳಲಿಕೆಯಿಂದಲೂ ಅವನ ಧ್ವನಿಯೂ ಬಹಳವಾಗಿ ಕುಗ್ಗಿಹೋಗಿದ್ದಿತು. ಪಕ್ಷಿಯ ಧ್ವನಿಯಂತೆ ಕೀರಲು ಧ್ವನಿಯಿಂದ ಕೂಡಿದ್ದ ಅವನ ಪ್ರಾರ್ಥನೆಯು ಆಶ್ರಮದಲ್ಲಿ ಮಲಗಿದ್ದ ಯಾರೊಬ್ಬರಿಗೂ ಕೇಳಿಸಲಿಲ್ಲ. ರಾಜನು ಹತಾಶನಾಗಿ ಆಶ್ರಮದೊಳಗೆ ಸುತ್ತಲೂ ನೋಡಿದನು. ಯಜ್ಞವೇದಿಯಲ್ಲಿ ಜಲಪೂರ್ಣವಾಗಿದ್ದ ಕುಂಭವಿದ್ದುದು ಅವನಿಗೆ ಕಾಣಿಸಿತು. ಒಡನೆಯೇ ರಾಜನು ಉದಕುಂಭ ವಿದ್ದೆಡೆಗೆ ಧಾವಿಸಿದನು. ಅದರಲ್ಲಿದ್ದ ನೀರೆಲ್ಲವನ್ನೂ ಕುಡಿದನು. ಸ್ವಲ್ಪ ಹೊತ್ತು ಕಳೆದನಂತರ ಮಹರ್ಷಿಗಳೆಲ್ಲರೂ ನಿದ್ರೆಯಿಂದ ಎದ್ದರು. ಜಲರಹಿತವಾದ ಕುಂಭವನ್ನು ನೋಡಿದರು. ಕೂಡಲೇ ಅವರೆಲ್ಲರೂ ಒಂದೆಡೆಯಲ್ಲಿ ಸೇರಿ ಈ ಕೆಲಸ ಮಾಡಿದವರು ಯಾರೆಂದು ಚಿಂತಿಸತೊಡಗಿದರು. ಅಲ್ಲಿಯೇ ಇದ್ದ ಯುವನಾಶ್ವನು ತಾನೇ ಕುಡಿದುದಾಗಿಯೂ, ಬಾಯಾರಿಕೆಯಿಂದ ಬಳಲಿದ್ದ ತಾನು ನೀರೆಲ್ಲವನ್ನೂ ಕುಡಿದೆ ಎಂದು ಹೇಳಿದನು. ಆ ಮಾತುಗಳನ್ನು ಕೇಳಿದ ಚ್ಯವನನು ಖಿನ್ನನಾಗಿ ರಾಜನ ಹತ್ತಿರ : ಮಹಾರಾಜ ನೀನು ತಪ್ಪು ಮಾಡಿಬಿಟ್ಟೆ. ನಿನಗೆ ಮಕ್ಕಳಾಗಬೇಕೆಂಬ ಅಭಿಲಾಷೆಯಿಂದಲೇ ಅದಕ್ಕೆ ಸಂಬಂಧಿಸಿದಂತೆ ಹೋಮ- ಹವನಾದಿಗಳನ್ನು ಮಾಡಿ ಮಂತ್ರಪೂರಿತವಾದ ಜಲವನ್ನು ಈ ಕುಂಭದಲ್ಲಿಡಲಾಗಿತ್ತು. ನಾನು ಮಹಾಕ್ಲಿಷ್ಟವಾದ ತಪಸ್ಸನ್ನುಮಾಡಿ ನನ್ನ ತಪಃಫಲವನ್ನು ಬೀಜರೂಪವಾಗಿ ಈ ಭಾಂಡದಲ್ಲಿ ನಿಕ್ಷೇಪಿಸಿದ್ದೆನು. ಮಹಾಬಲಶಾಲಿಯೂ, ಮಹಾವೀರ್ಯವಂತನೂ, ಇಂದ್ರನನ್ನೂ ತನ್ನ ಪರಾಕ್ರಮದಿಂದ ಗೆಲ್ಲುವಷ್ಟು ಸಾಮರ್ಥ್ಯವುಳ್ಳವನಾಗಿಯೂ ಇರುವ ಪುತ್ರನು ನಿನಗೆ ಹುಟ್ಟಬೇಕೆಂದು ನಾನು ಈ ಕರ್ಮಗಳೆಲ್ಲವನ್ನೂ ಮಾಡಿ ನನ್ನ ತಪಃಫಲವೆಲ್ಲವನ್ನೂ ಈ ಉದಕುಂಭದಲ್ಲಿ ನಿಕ್ಷೇಪಿಸಿದ್ದೆನು. ಈ ತೀರ್ಥವನ್ನು ನಿನ್ನ ಪತ್ನಿಯು ಕುಡಿದು ಅವಳಲ್ಲಿ ಸರ್ವಶ್ರೇಷ್ಠನಾದ ಮಗನು ಹುಟ್ಟಬೇಕಾಗಿತ್ತು. ನೀನೀಗ ಈ ತೀರ್ಥವನ್ನು ಕುಡಿದು ತಪ್ಪು ಮಾಡಿಬಿಟ್ಟಿರುವೆ. ನೀನೀಗ ಈ ತೀರ್ಥವನ್ನು ಕುಡಿದುಬಿಟ್ಟಿರುವುದರಿಂದ ನಾವಾದರೂ ಏನನ್ನೂ ಮಾಡಲೂ ಸಾಧ್ಯವಿಲ್ಲ. ತಪಃಫಲವನ್ನು ಪಡೆದಿದ್ದ ಮಂತ್ರಪೂರಿತವಾಗಿದ್ದತೀರ್ಥವನ್ನು ನೀನು ಬಾಯಾರಿಕೆಯಿಂದ ಕುಡಿದುಬಿಟ್ಟೆಯಾದಕಾರಣ ನಾನು ಮೇಲೆ ಹೇಳಿದಂತೆ ಸರ್ವಲಕ್ಷಣಸಂಪನ್ನನಾದ ಮತ್ತು ಮಹಾಪರಾಕ್ರಮಶಾಲಿಯಾದ ಮಗನನ್ನು ನೀನೇ ಹಡೆಯಬೇಕಾಗಿದೆ. ಇಂದ್ರನಿಗೆ ಸಮಾನನಾದ ಮಗನು ನಿನಗೆ ಲಭ್ಯವಾಗುವಂತೆ ಒಂದು ಯಾಗವನ್ನು ಮಾಡುವೆವು. ಆ ಯಾಗದ ಫಲದಿಂದಾಗಿ ನಿನಗೆ ಗರ್ಭಧಾರಣೆಯ ಕಷ್ಟ ಉಂಟಾಗುವುದಿಲ್ಲ. ಎಂದು ಸಮಾಧಾನಗೊಳಿಸಿದನು. ಅನಂತರದಲ್ಲಿ ಯುವನಾಶ್ವನ ಹೊಟ್ಟೆಯ ಎಡಭಾಗವನ್ನು ಸೀಳಿಕೊಂಡು ಸೂರ್ಯ ತೇಜಸ್ಸಿನಿಂದ ಕೂಡಿದ್ದ ಶಿಶುವು ಹೊರಬಂದಿತು. ಆ ಶಿಶುವು ಹುಟ್ಟಿದಾಗಲೇ ಬಹಳ ಬಲಶಾಲಿಯಾಗಿದ್ದಿತು. ಯುವನಾಶ್ವನ ಹೊಟ್ಟೆಯನ್ನು ಸೀಳಿ ಮಗುವು ಹೊರಗೆ ಬಂದರೂ ಯುವನಾಶ್ವನು ಸಾಯಲೂ ಇಲ್ಲ; ಯಾತನೆಯನ್ನೂ ಅನುಭವಿಸಲಿಲ್ಲ. ಯಜ್ಞದ ಫಲದಿಂದ ಯುವನಾಶ್ವನಿಗೆ ಯಾವ ವಿಧವಾದ ತೊಂದರೆಯೂ ಆಗಲಿಲ್ಲ. ಅಂತಹ ಅದ್ಭುತವಾದ ಶಿಶುವೊಂದು ಭೂಲೋಕದಲ್ಲಿ ಹುಟ್ಟಿರುವುದನ್ನು ನೋಡಲು ಇಂದ್ರನೂ ದೇವತೆಗಳೊಡನೆ ಯುವನಾಶ್ವನ ಅರಮನೆಗೆ ಆಗಮಿಸಿದನು. ಮಗುವನ್ನು ನೋಡುತ್ತಲೇ ಮುಗ್ಧರಾದ ದೇವತೆಗಳು ಇಂದ್ರನನ್ನು ಕೇಳಿದರು : ದೇವೇಂದ್ರ ಈ ಮಗುವು ಏನನ್ನು ಕುಡಿಯುತ್ತದೆ? ತಂದೆಯನ್ನೇ ತಾಯಿಯನ್ನಾಗಿ ಪಡೆದಿರುವ ಶಿಶುವಿಗೆ ಸ್ತನ್ಯಪಾನದ ಅದೃಷ್ಟವೆಲ್ಲಿಯದು?”
ಪ್ರದೇಶಿನೀಂ ತತೋಽಸ್ಯಾಸ್ಯೇ ಶಕ್ರಃ ಸಮಭಿಸಂದಧೇ |
ಮಾಮಯಂ ಧಾಸ್ಯತೀತ್ಯೇವಂ ಭಾಷಿತೇ ಚೈವ ವಜ್ರಿಣಾ |
ಮಾನ್ಧಾತೇತಿ ಚ ನಾಮಾಸ್ಯ ಚಕ್ರುಃ ಸೇನ್ದ್ರಾ ದಿವೌಕಸಃ || ೩೧ ||
ಇಂದ್ರನು ಕ್ಷಣಕಾಲ ಯೋಚಿಸಿ ತನ್ನ ಹೆಬ್ಬೆಟ್ಟಿನ
ಪಕ್ಕದ ತೋರುಬೆರಳನ್ನು ಶಿಶುವಿಗೆ ಚೀಪಲು ಕೊಟ್ಟು ಅಯಂ ಮಾಂ ಧಾಸ್ಯತಿಧಾಸ್ಯತಿ ಎಂದರೆ ಪಾಸ್ಯತಿನನ್ನನ್ನೇ ಇವನು ಕುಡಿಯುತ್ತಾನೆಎಂದು ದೇವತೆಗಳಿಗೆ ಹೇಳಿದನು. ಶಿಶುವಿಗೆ ಸ್ತನ್ಯದ ಪ್ರತ್ಯಾಮ್ನಾಯವಾಗಿ ತನ್ನ ತರ್ಜನಿಯನ್ನೇ ಕೊಟ್ಟು ಇಂದ್ರನು ಮಾಂ ಧಾಸ್ಯತಿಎಂದು ಹೇಳಿದ್ದರಿಂದ ದೇವತೆಗಳು ಆ ಶಿಶುವಿಗೆ ಮಾಂಧಾತಎಂದೇ ನಾಮಕರಣಮಾಡಿದರು.
ಈತನ ಮಗನೇ ಪುರುಕುತ್ಸ. ಹೌದು ವೇದಾದಿಗಳಲ್ಲಿ ಬಂದು ಹೋಗಿರುವಾತ.
ಅಸ್ಮಾಕಮತ್ರ ಪಿತರಸ್ತ ಆಸನ್ತ್ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ |
ತ ಆಯಜಂತ ತ್ರಸದಸ್ಯುಮಸ್ಯಾ ಇಂದ್ರಂ ನ ವೃತ್ರತುರಮರ್ಧದೇವಂ ||
ಪುರುಕುತ್ಸಾನೀ ವಾಮದಾಶದ್ಧವ್ಯೇ ಭಿರಿಂದ್ರಾವರುಣಾ ನಮೋಭಿಃ |
ಆಥಾ ರಾಜಾನಂ ತ್ರಸದಸ್ಯುಮಸ್ಯಾ ವೃತ್ರಹಣಂ ದದಥುರರ್ದ್ಧದೇವಂ || ಋಗ್ವೇದ ೪ : ೪೨
ಈ ಋಕ್ಕಿನಲ್ಲಿ ಪುರುಕುತ್ಸನು ಕಾರಾಗ್ರಹವಾಸಿಯಾದಾಗ ಸಪ್ತರ್ಷಿಗಳೇ ಪಾಲಕರಾಗಿದ್ದರಂತೆ. ಇದೇ ಸಮಯದಲ್ಲಿ ಸಪ್ತರ್ಷಿಗಳು ಇಂದ್ರಾವರುಣ ಯಜ್ಞವನ್ನು ಮಾಡಿ ಅವರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಾದ ಪುರುಕುತ್ಸಾನಿಯಲ್ಲಿ ತ್ರಸದಸ್ಯು ಎನ್ನುವ ಅಸದೃಷನಾದ ಮಗನನ್ನು ಪಡೆಯುವಂತೆ ಮಾಡಿದರು ಎಂದು ತಿಳಿದು ಬರುತ್ತದೆ. ಇಲ್ಲಿ ವಾಮದೇವ ಋಷಿಯು ಇಂದ್ರಾವರುಣರನ್ನು ಸ್ತುತಿಸಿ ನಿಮ್ಮಿಂದ ಲೋಕವಿಖ್ಯಾತನಾದ ಮಹಾಬಲಶಾಲಿಯಾದ ತ್ರಸದಸ್ಯು ಎನ್ನುವ ಮಗನನ್ನು ಕರುಣಿಸಿದ್ದೀರಿ ಎನ್ನುವುದಾಗಿಯೂ ಪುರುಕುತ್ಸಾನಿಯು ನಿಮ್ಮನ್ನು ಸಂತುಷ್ಟಿ ಗೊಳಿಸಿರುವುದಾಗಿಯೂ ಹೇಳುವುದಲ್ಲದೇ ಮಂತ್ರ ದೃಷ್ಟಾರ ಋಷಿಯು ಈ ಪುರುಕುತ್ಸಾನಿ ಮತ್ತು ತ್ರಸದಸ್ಯುವು ಗಿರಿಕ್ಷಿತ್ ಮತ್ತು ದುರ್ಗಹ ಎನ್ನುವ ವಂಶದಿಂದ ಬಂದವರೆಂದೂ ತಿಳಿಯುತ್ತದೆ.
ಯೇಭಿಸ್ತೃಕ್ಷಿಂ ವೃಷಣಾ ತ್ರಾಸದಸ್ಯವಂ ಮಹೇ ಕ್ಷತ್ರಾಯ ಜಿನ್ವಥಃ || ೮ : ೭: ೨೨
ರಲ್ಲಿ ಇದೇ ವಂಶದಲ್ಲಿ ತಾರ್ಕ್ಷ್ಯ ಅಥವ ತೃಕ್ಷ ಎನ್ನುವವನೂ ಇದ್ದುದಾಗಿ ತಿಳಿಯುತ್ತದೆ.
ಈ ಪುರುಕುತ್ಸನ ಮಗನಾದ ತ್ರಸದಸ್ಯವೂ ಋಷಿಯಾಗಿದ್ದನು ಎನ್ನುವುದು ಕೆಲವು ಋಕ್ಕಿನಲ್ಲಿ ಹೇಳಲ್ಪಟ್ಟಿದೆ.
ಮಮದ್ವಿತಾರಾಷ್ಟ್ರಂ ಕ್ಷತ್ರಿಯಸ್ಯ ವಿಶ್ವಯೋರ್ವಿಶ್ವೇ ೪ : ೪೨ : ೧
ರಲ್ಲಿ ತ್ರಸದಸ್ಯು ಎನ್ನುವವನು ರಾಜನೂ ಆಗಿದ್ದ ಋಷಿಯೂ ಆಗಿದ್ದ ಎನ್ನುತ್ತದೆ. ದ್ವಿತಾರಾಷ್ಟ್ರಂ ಎನ್ನುವುದನ್ನು ಸಾಯಣರು ಎರಡು ರಾಷ್ಟ್ರ ಎಂದರೆ ಒಂದು ಭೂಮಿ ಮತ್ತು ಸ್ವರ್ಗ ಎನ್ನುವುದಾಗಿ ಅರ್ಥೈಸಿದ್ದಾರೆ, ಕೆಲವು ಋಕ್ಕುಗಳಲ್ಲಿ ದ್ಯಾವಾ ಪೃಥಿವಿಯೂ ತಾನೇ ಎನ್ನುತ್ತಾನೆ.
ಅಹಂ ರಾಜಾ ವರುಣೋ ಮಹ್ಯಂ ತಾನ್ಯಸುರ್ಯಾಣಿ ಪ್ರಥಮಾ ಧಾರಯಂತ |
ಕ್ರತುಂ ಸ ಚಂತೇ ವರುಣಸ್ಯ ದೇವಾ ರಾಜಾಮಿ ಕೃಷ್ಟೇರುಪಮಸ್ಯ ವವ್ರೇಃ || ೪ : ೪೨ : ೨

ನಾನೇ ಜಗದೊಡೆಯನಾದ ವರುಣ, ದೇವತೆಗಳು, ಪ್ರಸಿದ್ಧವಾದ, ಅಸುರನಾಶಕವಾದ ಬಲವನ್ನೆಲ್ಲಾ ನನಗಾಗಿಯೇ ಪಡೆದಿದ್ದಾರೆ, ವರುಣಾತ್ಮನೂ ಮಾನವರೂಪನೂ ಆದ ನಾನು ಎಲ್ಲರಿಗೂ ಪ್ರಭುವಾಗಿದ್ದೇನೆ. ನನ್ನ ಕರ್ಮವನ್ನು ದೇವತೆಗಳು ಪಡೆಯುತ್ತಾರೆ ಎನ್ನುತ್ತಾನೆ.
ಅಹಮಿಂದ್ರೋ ವರುಣಸ್ತೇ ಮಹಿತೋರ್ವೀ ಗಭೀರೇ ರಜಸಿ ಸುಮೇಕೇ |
ತ್ವಷ್ಟೇವ ವಿಶ್ವಾ ಭುವನಾನಿ ವಿದ್ವಾನ್ತ್ಸಮೈರಯಂ ರೋದಸಿ ಧಾರಯಂತ || ೪ : ೪೨ : ೩
ನಾನೇ ನನ್ನ ಮಹಾತ್ಮ್ಯದಿಂದ ಇಂದ್ರನಂತೆಯೂ ವರುಣನಂತೆಯೂ ಇದ್ದೇನೆ. ಪ್ರಸಿದ್ಧವಾದ ಮತ್ತು ವಿಸ್ತೃತವಾದ, ಅಗಣಿತ ಆಳವುಳ್ಳವನೂ ಸುಂದರವೂ ಆದ ದ್ಯಾವಾಪೃಥಿವಿಗಳೇ ನಾನಾಗಿದ್ದೇನೆ. ದ್ಯಾವಾ ಪೃಥಿವಿಗಳೆರಡನ್ನೂ ನಾನು ಧರಿಸಿದ್ದೇನೆ ಎನ್ನುತ್ತಾನೆ.
ಇದೇ ಮಾಂಧಾತ - ಪುರುಕುತ್ಸ - ಮತ್ತು ತ್ರಸದಸ್ಯುವಿನ ವಂಶದಿಂದ ಬಂದವನೇ ಶ್ರೀರಾಮ. ವೇದೋಲ್ಲಿಖಿತ ರಾಜವಂಶದ ಕುರುಹು ಸಿಂಧೂ ಸರಸ್ವತೀ ನದೀ ತೀರದ ಹಲಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗಾದರೆ ಇಲ್ಲಿ ವೇದ ಪುರಾಣಗಳು ಇತಿಹಾಸದಲ್ಲಿ ಸಂಬಂಧ ಪಡೆದುಕೊಳ್ಳುವುದಿಲ್ಲವೇ. ಇತಿಹಾಸವನ್ನು ಬೇರ್ಪಡಿಸಿ ಅದು ಆಧುನಿಕತೆಯೆಡೆಗೆ ತರುವಲ್ಲಿನ ಶ್ರಮಕ್ಕೆ ಧನ್ಯವಾದಗಳು. ರಾಮನವಮಿಯ ಶುಭಾಶಯಗಳೊಂದಿಗೆ ಇಂದು ಜನ್ಮದಿನವನ್ನು ಹೊಂದಿರುವ ಎಲ್ಲಾ ನನ್ನ ಮಿತ್ರರಿಗೂ ಶುಭಾಶಯಗಳು.

No comments:

Post a Comment