Search This Blog

Tuesday 1 May 2018

ಮನುಷ್ಯ ಹೇಗಾದ ???


"ಮಾನವ", "ಮನುಷ್ಯ" ಹೀಗೆ ಈ ಶರೀರ ಧರಿರಿಸಿರುವ ಜನರಿಗೆ ಕರೆಯಲು ಕಾರಣ ಏನು.? ಮನುವಿನಿಂದಾಗಿ ಈ ಹೆಸರು ಬಂದಿರಬಹುದಾ ಅಥವಾ ಮನ್ವಂತರದಿಂದ ಈ ಹೆಸರು ಬಂದಿದೆಯಾ ? ಮನುಷ್ಯ ಎನ್ನುವ ಒಂದು ಪದ ಹೇಗೆ ರೂಪು ಗೊಂಡಿತು ಎನ್ನುವುದಕ್ಕೆ ಐತರೇಯ ಬ್ರಾಹ್ಮಣದ ಹದಿಮೂರನೇ ಅಧ್ಯಾಯದ ಎಂಟನೇ ಖಂಡದಲ್ಲಿ ಒಂದು ಕಥೆ ಬರುತ್ತದೆ.
ಪ್ರಜಾಪತಿರ್ವೈ ಸ್ವಾಂ ದುಹಿತರಮಭ್ಯಧ್ಯಾಯದಿವಮಿತ್ಯನ್ನ ಆಹುರುಷ ಸಮಿತ್ಯನ್ಯೇ ತಾಮೃಶ್ಶೋಭೂತ್ವಾ ರೋಹಿತಂ ಭೂತ ಮಭ್ಯೈತ್ತಂ ದೇವಾ ಅಪಶ್ಯನ್ನಕೃತಂ .... ಎನ್ನುವ ಮಂತ್ರ ಬರುತ್ತದೆ.
ಹಿಂದೆ ಪ್ರಜಾಪತಿಯು ತನ್ನ ಮಗಳನ್ನು ನೋಡಿ ಅನುರಕ್ತನಾಗಿ ಅವಳೊಡನೆ ರಮಿಸಬೇಕು ಎಂದು ಆಶಿಸುತ್ತಾನೆ. ಹೌದು ಈ ಮಗಳು ಯಾರು ? ಮಂತ್ರ ದೃಷ್ಟಾರ ಋಷಿಗಳಲ್ಲಿ ಇದರ ಕುರಿತಾಗಿ ಅಭಿಪ್ರಾಯ ಬೇಧವಿದೆ. ದ್ಯುಲೂಕಾಭಿಮಾನಿ ದೇವತೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಉಷೋದೇವತೆ ಎನ್ನುವರು. ಅದೇನೇ ಇರಲಿ. ಪ್ರಜಾಪತಿಯು ಋಶ್ಯವೆನ್ನುವ ಚುಕ್ಕೆಯುಳ್ಳ ಒಂದು ಜಿಂಕೆಯ ರೂಪ ಧರಿಸುತ್ತಾನೆ. ಅವನ ಪುತ್ರಿಯು ಕೆಂಪು ಬಣ್ಣದ ಹೆಣ್ಣು ಜಿಂಕೆಯ ರೂಪವನ್ನು ತಾಳುತ್ತಾಳೆ. ಪ್ರಜಾಪತಿಯು ಆಕೆಯಲ್ಲಿ ರಮಿಸುತ್ತಾನೆ. ಈ ರೀತಿ ದುಷ್ಕೃತ್ಯದಲ್ಲಿ ನಿರತನಾಗಿದ್ದ ಪ್ರಜಾಪತಿಯನ್ನು ದೇವತೆಗಳು ನೋಡಿ ತಮ್ಮ ತಮ್ಮ ಲಿ ಮಾತನಾಡಿಕೊಳ್ಳುತ್ತಾರೆ. ಸೃಷ್ಟಿ ಕರ್ತನಾದ ಪ್ರಜಾಪತಿಯೇ ನಿಷಿದ್ಧವಾದ ಇಂತಹ ನೀಚ ಕೃತ್ಯವನ್ನು ಮಾಡುತ್ತಿದ್ದಾನೆ. ಇದನ್ನು ಮಾಡಬಾರದೆಂದು ತಿಳಿಸಿ ಶಿಕ್ಷಿಸುವ ಕಾರ್ಯಕ್ಕೆ ಎಲ್ಲರನ್ನೂ ಪ್ರಾಶ್ನಿಸುತ್ತಾರೆ. ಆಗ ಯಾರೂ ಸಹ ಅದಕ್ಕೆ ತಮ್ಮಿಂದ ಸಾಧ್ಯವಾಗಲಾರದು ಎನ್ನುತ್ತಾರೆ. ದೇವತೆಗಳಲ್ಲಿರುವ ಅತ್ಯುಗ್ರ ಮತ್ತು ಘೋರ ರೂಪವನ್ನೆಲ್ಲಾ ಒಂದೆಡೆ ಸೇರಿಸಿ ಒಂದು ಆಕೃತಿಯನ್ನು ಮಾಡುತ್ತಾರೆ. ಆ ರೂಪವು ಭಯಂಕರವಾದ ಪುರುಷರೂಪವುಳ್ಲದ್ದಾದುದರಿಂದ ಅದನ್ನು ರುದ್ರ ಎನ್ನುವುದಾಗಿ ಕರೆಯುತ್ತಾರೆ. ಆ ರುದ್ರನ ಅತಿ ಭಯಂಕರ ಆಕೃತಿಯು ಭೂತಾಕಾರವಾಗಿದ್ದುದರಿಂದ ಆತನನ್ನು ಭೂತವಾನ್ , ಭೂತಪತಿ ಎಂದು ಕರೆಯುತ್ತಾರೆ ಅದೇ ಅವನ ಹೆಸರಾಗುತ್ತದೆ. ಇಂತಹ ಭೂತಪತಿಯ ಆರಾಧನೆಯಿಂದ ಸಕಲ ಸಂಪತ್ತು ಕೂಡಿ ಬರುತ್ತದೆ. ಮತ್ತು ಐಶ್ವರ್ಯವಂತನಾಗುತ್ತಾನೆ ಎನ್ನುವ ಆಶಯ ಈ ಮಂತ್ರದ್ದು.
"ತಂ ದೇವಾ ಅಬ್ರುವನ್ನಯಂ ವೈ ಪ್ರಜಾಪತಿ .......... ಏಕಮೇವವರಮವೃಣೀತ ಪಶೂನಾಮಾಧಿಪತ್ಯಂ ತದಸ್ಯೈತತ್ಪಶುಮನ್ನಾಮ ಪಶುಮಾನ್ಭವತಿ ಯೋ ಸ್ಯೈತದೇವಂ ನಾಮ ವೇದ ||
ಅಂತಹ ಭಯಂಕರಾಕಾರನಾದ ರುದ್ರನನ್ನು ನೋಡಿ ದೇವತೆಗಳೆಲ್ಲಾ ಪ್ರಾರ್ಥಿಸಿಕೊಳ್ಳುತ್ತಾರೆ. ಪ್ರಜಾಪತಿಯು ತನ್ನ ಪುತ್ರಿಯಲ್ಲಿಯೇ ಅನುರಕ್ತನಾಗಿ ಲೋಕಾರೂಢಿಗೆ ವಿರುದ್ಧವಾಗಿ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇವನನ್ನು ಶಿಕ್ಷಿಸಲು ನಿನ್ನ ಬಾಣದಿಂದ ಅವನಿಗೆ ಬುದ್ಧಿ ಕಲಿಸು ಶಿಕ್ಷಿಸು ಎನ್ನುತ್ತಾರೆ. ಆಗ ರುದ್ರನು ತಾನು ಆ ಕೆಲಸ ಮಾಡುವ ಮೊದಲು ನನಗೊಂದು ವರ ಕೊದಬೇಕು ಎಂದು ಕೇಳಿಕೊಳ್ಳುತ್ತಾನೆ. ದೇವತೆಗಳು ಒಪ್ಪಿಕೊಳ್ಳುತ್ತಾರೆ. ತಾನು ಪಶುಗಳಿಗೆಲ್ಲ ಒಡೆಯನಾಗಬೇಕು ನನಗೆ ಪಶುಪತಿ ಎನ್ನುವ ಹೆಸರು ಬರಬೇಕು. ಅದರ ಅಧಿಪತ್ಯ ನನಗೆ ಕೊಡಬೇಕು ಎನ್ನಲು. ದೇವತೆಗಳು ಅದಕ್ಕೂ  ಸಮ್ಮತಿಸುತ್ತಾರೆ. ಮುಂದೆ ಪಶುಪತಿ ಎನ್ನುವ ಹೆಸರಿನಿಂದ ಪ್ರಸಿದ್ಧನಾಗಿ ಗೋವುಗಳಿಂದ ಸಮೃದ್ಧ ಸುಖವನ್ನು ಹೊಂದುತ್ತಾನಂತೆ.
"ತಮಭ್ಯಾಯತ್ಯಾ ವಿದ್ಯತ್ಸ ವಿದ್ಧ ಊರ್ಧ್ವ ಉದಪ್ರಪತತ್ತಮೇತಂ ಮೃಗ ಇತ್ಯಾಚಕ್ಷತೇ . . . . . . . ಸ ಯಾ ರೋಹಿತ್ಸಾ ರೋಹಿಣೀ ಯೋ ಏವೇಷುಸ್ತ್ರಿ ಕಾಂಡಾ ಸೋ ಏವೇಷು ಸ್ತ್ರಿಕಾಂಡಾ |" ರುದ್ರ ತನ್ನ ಧನುಸ್ಸಿನಲ್ಲಿ ಬಾಣವನ್ನು ಹೂಡಿ ಹೆದೆಯನ್ನು ಕಿವಿಯವರೆಗೂ ಎಳೆದು ಮೃಗರೂಪದಲ್ಲಿದ್ದ ಪ್ರಜಾಪತಿಯ ಕಡೆಗೆ ಗುರಿ ಇಟ್ಟು ಹೊಡೆದನು. ಆ ಬಾಣದಿಂದ ನೊಂದ ಪ್ರಜಾಪತಿಯು ಮೃಗರೂಪದಿಂದಲೇ ಊರ್ಧ್ವಾಭಿಮುಖವಾಗಿ ಆಕಾಶಕ್ಕೆ ನೆಗೆದನು. ಇದನ್ನು ನೋಡಿದ ಜನರೆಲ್ಲರೂ ಆಕಾಶದಲ್ಲಿ ಮೃಗರೂಪದಿಂದಿರುವ ಪ್ರಜಾಪತಿಯೇ ರೋಹಿಣೀ ಮತ್ತು ಆರ್ದ್ರಾ ನಕ್ಷತ್ರಗಳ ಮಧ್ಯದಲ್ಲಿ ಕಾಣುತ್ತಿರುವ ಮೃಗಶಿರಾ ನಕ್ಷತ್ರರೂಪದಿಂದ ನಮಗಿಂದು ಪ್ರಕಾಶಿಸುತ್ತಿದ್ದಾನೆ. ಈ ಪ್ರಜಾಪತಿಯನ್ನು ತನ್ನ ಬಾಣದಿಂದ ಹೊಡೆದ ರುದ್ರನು ಮೃಗವ್ಯಾಧ ಎನ್ನುವ ಹೆಸರಿನಿಂದ ಪ್ರಸಿದ್ಧಿ ಪಡೆದ. ನಕ್ಷತ್ರಗಳ ಮಧ್ಯದಲ್ಲಿ ಕಾಣಿಸುತ್ತಿರುವ ಪ್ರಕಾಶಮಾನವೇ ಇದೇ ಮೃಗವ್ಯಾಧ. ಕೆಂಪುಬಣ್ಣದ ಹೆಣ್ಣು ಜಿಂಕೆಯ ರೂಪದಲ್ಲಿದ್ದ ಪ್ರಜಾಪತಿಯ ಪುತ್ರಿಯೇ ನಕ್ಷತ್ರ ಲೋಕದ ಕೆಂಪುವರ್ಣದ ನಕ್ಷತ್ರವೇ ರೋಹಿಣೀ. ಆಗ ರುದ್ರನು ಬಿಟ್ತ ಬಾಣದಲ್ಲಿ ಕಾಂಡ, ಲೋಹ ಮತ್ತು ತುದಿಯನ್ನು (Shaft, Steel and Point) ಬಳಸಿದ್ದರಿಂದ ಮುಂದೆ ಅದು ಇಂದಿಗೂ ಬಾಣದ ತಯಾರಿಕೆಯಲ್ಲಿ ನಡೆದುಕೊಂಡು ಬಂದಿತು.
ತದ್ವಾ ಇದಂ ಪ್ರಜಾಪತೇ ರೇತಃ ಸಿಕ್ತಮಧಾವತ್ತತ್ಸರೋ ಭವತ್ತೇ ದೇವಾ ಅಬ್ರುವನ್ಮೇದಂ ಪ್ರಜಾಪತೇ ರೇತೋ ದುಷದಿತಿ ಯದಬ್ರುವನ್ಮೇದಂ ಪ್ರಜಾಪತೇ ರೇತೋ ದುಷದಿತಿ ತನ್ಮಾದುಷಮಭವತನ್ಮಾದುಷಸ್ಯ ಮಾದುಷತ್ವಂ ಮಾದುಷಂ ಹ ವೈ ನಾಮೈತದ್ಯನ್ಮಾನುಷಂ ಸನ್ಮಾನುಷಮಿತ್ಯಾಚಕ್ಷತೇ ಪರೋಕ್ಷೇಣ ಪರೋಕ್ಷಪ್ರಿಯಾ ಇವ ಹಿ ದೇವಾಃ || ಐತರೇಯ ಬ್ರಾಹ್ಮಣ ೧೩ : ೩೩ ||’
ಮೃಗರೂಪದಲ್ಲಿದ್ದ ಪ್ರಜಾಪತಿಯು ಹೆಣ್ಣು ಜಿಂಕೆಯ ರೂಪದಲ್ಲಿದ್ದ ತನ್ನ ಪುತ್ರಿಯಲ್ಲಿ ಸೇಚನ ಮಾಡಿದ ವೀರ್ಯವು ಅಧಿಕವಾಗಿತ್ತು ಅದು ಭೂಮಿಯ ಮೇಲೆ ಬಿದ್ದು ಅದು ಪ್ರವಾಹ ರೂಪದಲ್ಲಿ ಹರಿಯಿತಂತೆ. ಮುಂದೆ ಹರಿಯುತ್ತಾ ಒಂದು ತಗ್ಗಾದ ಪ್ರದೇಶದಲ್ಲಿ ನಿಂತು ಬಿಟ್ಟಿತು. ಅದೇ ದೊಡ್ದ ಸರೋವರವಾಯಿತು. ಇದನ್ನು ನೋಡಿದ ದೇವತೆಗಳು ಪ್ರಜಾಪತಿಯ ವೀರ್ಯವು ದೂಷ್ಯವಾದದ್ದಲ್ಲ(ದೋಷಗಳಿಂದ ಕೂಡಿಲ್ಲ) ಅಸ್ಪೃಷ್ಯವೂ ಅಲ್ಲ ಎಂದು ಕೊಂಡಾಡುತ್ತಾರೆ. ಅಂದು ಆ ರೀತಿಯಲ್ಲಿ ಮಾದೂಷ್ಯಂ ಎಂದಿದ್ದರಿಂದ, ಆ ಹೆಸರಿನಿಂದಲೇ ಪ್ರಸಿದ್ಧವಾಯಿತು. ಹೀಗೇ ಅದನ್ನು ಭೂಲೋಕದಲ್ಲಿ ಮಾದೂಷ್ಯ ದಲ್ಲಿನ ದೂ ಕಾರಕ್ಕೆ ಬದಲಾಗಿ ನಕಾರ ಉಚ್ಚರಿಸಿದ್ದರಿಂದ ಮಾನುಷ್ಯ - ಮಾನುಷ ಎನ್ನುವುದಾಗಿ ಪ್ರಸಿದ್ಧಿ ಹೊಂದಿತು. ಭೂಲೋಕದಲ್ಲಿರು ಶರೀರಿಗಳಿಗೆಲ್ಲಾ ಮಾನುಷ ಎನ್ನುವ ಹೆಸರಿದ್ದು ದೇವಲೋಕದಲ್ಲಿ 'ಮಾದುಷ'  ಎಂದೇ ಕರೆಯಲ್ಪಡುತ್ತಾರೆ.

No comments:

Post a Comment