Search This Blog

Friday 17 November 2017

ಸಂಗೀತಗಾರ - ಕವಿರಾಜ - ಮಹಾರಾಜಾಧಿರಾಜ “ಕವಿಮತಿವಿಭವೋತ್ಸಾರಣಂ” ಸಮುದ್ರಗುಪ್ತ.


ಗುಪ್ತರು ಕ್ರಿ.. 4-6ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಆಳುತ್ತಿದ್ದ ಒಂದು ಪ್ರಮುಖ ರಾಜವಂಶ. ಈ ಕಾಲವನ್ನು ಭಾರತ ಇತಿಹಾಸದ ಸುವರ್ಣಯುಗವೆಂದು ವರ್ಣಿಸಲಾಗಿದೆ.
ಗುಪ್ತವಂಶಕ್ಕೆ ಸೇರಿದ 1ನೆಯ ಚಂದ್ರಗುಪ್ತನಿಗೂ ಹಿಂದಿನ  ರಾಜರುಗಳ ವಿಷಯ ಸ್ವಲ್ಪ ಮಾತ್ರ ತಿಳಿಯುತ್ತದೆ. ಶುಂಗರು, ಶಾತವಾಹನರ ಕಾಲ ಕುರಿತಂತೆ ಗುಪ್ತ ಎಂದು ಕೊನೆಗೊಳ್ಳುತ್ತಿದ್ದ ಹಲವು ಹೆಸರುಗಳು ಸಿಗುತ್ತವೆ ಆದರೆ ಅವೆಲ್ಲವೂ ಅಧಿಕಾರಿವರ್ಗದವರದ್ದು. ಆದರೆಇವುಗಳೇ ಈ ಗುಪ್ತ ವಂಶವನ್ನು ಸೂಚಿಸುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟ. ಒಂದನೆಯ ಚಂದ್ರಗುಪ್ತನ ಅಜ್ಜ ಮಹಾರಾಜ ಶ್ರೀಗುಪ್ತ, ತಂದೆ ಮಹಾರಾಜ ಘಟೋತ್ಕಚ, ಇವರಿಗೆ ಕೇವಲ 'ಮಹಾರಾಜ' ಎಂದು ಮಾತ್ರ ಬಿರುದಿತ್ತು. ಆದರೆ ಗುಪ್ತ ವಂಶದ ಶಾಸನಗಳಲ್ಲಿ ಘಟೋತ್ಕಚನ ಮಗನನ್ನು ಮಹಾರಾಜಾಧಿರಾಜ ಚಂದ್ರಗುಪ್ತನೆಂದು ವರ್ಣಿಸಲಾಗಿದೆ. ಚಂದ್ರಗುಪ್ತ ತನ್ನ ಪೂರ್ವಿಕರಿಗಿಂತ ಹೆಚ್ಚಿನ ಪ್ರಾಬಲ್ಯವನ್ನುಹೊಂದಿರುವುದು ಕಂಡುಬರುತ್ತದೆ. ಮಗಧದೇಶದ ಮೃಗಶಿಖಾವನದಲ್ಲಿ ಮಹಾರಾಜ ಚೆ. ಲಿ. ಕಿ. ತೋ ಎಂಬವನು ಯಾತ್ರಿಕರಿಗಾಗಿ ದೇವಾಲಯವೊಂದನ್ನು ಕಟ್ಟಿಸಿದನೆಂದು ಚೀನ ದೇಶದ ಯಾತ್ರಿಕನಾದ ಇತ್ಸಿಂಗ ಹೇಳುತ್ತಾನೆ. ಇವನು ಗುಪ್ತವಂಶದ ಮಹಾರಾಜ ಶ್ರೀಗುಪ್ತ ಎಂಬ ಊಹೆ ಅಷ್ಟೆ. ಶ್ರೀಗುಪ್ತನೂ ಆತನ ಮಗನಾದ ಘಟೋತ್ಕಚನೂ ಬಂಗಾಳದ ಕೆಲವು ಭಾಗಗಳಲ್ಲಿ ಆಳುತ್ತಿದ್ದಿರಬೇಕು.
ಗುಪ್ತವಂಶ ಪ್ರಾಮುಖ್ಯಕ್ಕೆ ಬಂದದ್ದು ಘಟೋತ್ಕಚನ ಮಗನಾದ 1ನೆಯ ಚಂದ್ರಗುಪ್ತನ ಕಾಲದಲ್ಲಿಯೇ. ಶಾಸನಗಳಲ್ಲಿ ಇವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದದ್ದು ಕಂಡುಬರುತ್ತದೆ. ಅಲ್ಲದೆ ಇವನು ಅಚ್ಚುಹಾಕಿಸಿದ ಚಿನ್ನದ ನಾಣ್ಯಗಳೂ ದೊರೆತಿವೆ. ಇವನು ಲಿಚ್ಛವಿ ವಂಶಕ್ಕೆ ಸೇರಿದ ಕುಮಾರದೇವಿಯನ್ನು ಮದುವೆಯಾಗಿದ್ದ. ವೇಳೆಗೆ ಬಿಹಾರ ಪ್ರಾಂತ್ಯದ ಉತ್ತರ ಭಾಗದಲ್ಲಿ ವೈಶಾಲಿ ಮತ್ತು ನೇಪಾಳಗಳ ನಡುವಣ ಪ್ರದೇಶ ಲಿಚ್ಚವಿಯರ ಆಳ್ವಿಕೆಗೆ ಒಳಪಟ್ಟಿತ್ತು. ಪ್ರದೇಶವು ಗುಪ್ತರು ಆಳುತ್ತಿದ್ದಿರಬಹುದಾದ ಪ್ರದೇಶಕ್ಕೆ ಹೊಂದಿದಂತಿತ್ತು. ವಂಶಕ್ಕೆ ಉತ್ತರಾಧಿಕಾರಿಗಳಿಲ್ಲದ ಕಾರಣ ಲಿಚ್ಛವಿ ರಾಜ್ಯವೂ ಸ್ವಾಧೀನಕ್ಕೆ ಬಂತು. ಕುಮಾರದೇವಿಯನ್ನು ಮದುವೆಯಾದದ್ದು ಚಂದ್ರಗುಪ್ತನ ಜೀವನದ ಗತಿಯನ್ನೇ ಬದಲಾಯಿಸಿತೆನ್ನಬಹುದು. ಇದರ ಪರಿಣಾಮವಾಗಿ ಇವನ ರಾಜ್ಯ ವಿಸ್ತಾರಗೊಂಡಿತು; ಪ್ರಾಬಲ್ಯ ಹೆಚ್ಚಿತು. ಇವನ ತಂದೆ "ಮಹಾರಾಜ"ನೆನಿಸಿಕೊಂಡಿದ್ದ. ಈಗ ಚಂದ್ರಗುಪ್ತನು `ಮಹಾರಾಜಾಧಿರಾಜ` ನೆಂದು ಬಿರುದಾಂಕಿತನಾದ. ಕವಯಿತ್ರಿ 'ವಿಜ್ಝಿಕಾ' ಳಿಂದ ರಚಿತವಾಯಿತು ಎನ್ನಲಾದ "ಕೌಮುದೀಮಹೋತ್ಸವ"ವೆಂಬ ನಾಟಕ ಮಗಧರಾಜ್ಯದ ಅರಸನಾದ ಸುಂದರವರ್ಮನ ದತ್ತುಪುತ್ರನಾದ ಚಂಡಸೇನನನ್ನು ಕುರಿತಾಗಿರುವುದು. ಈತ ಲಿಚ್ಛವಿಯರೊಡಗೂಡಿ ಸುಂದರವರ್ಮನನ್ನು ಕೊಂದು ಮಗಧರಾಜ್ಯವನ್ನು ಆಕ್ರಮಿಸಿದನೆಂಬುದು ನಾಟಕದ ಕಥಾವಸ್ತು. ಇದರಲ್ಲಿಯ ಚಂಡಸೇನನೇ 1ನೆಯ ಚಂದ್ರಗುಪ್ತನೆಂದುಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ ಇದು ಸಂಪೂರ್ಣ ನಂಬುಗೆಗೆ ಅರ್ಹವಲ್ಲ. ಚಂದ್ರಗುಪ್ತ ಲಿಚ್ಛವಿಯರೊಡನೆ ಮಾಡಿದ ಸಂಬಂಧ ಅವನಿಗೆ ಲಾಭದಾಯಕವಾಯಿತೆಂಬುದು ನಿಜ. ಲಿಚ್ಛವಿ ವಂಶದೊಡನೆ ತನ್ನ ಪ್ರಾಮುಖ್ಯವನ್ನು ಸೂಚಿಸಲೆಂಬಂತೆ ಇವನು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ. ಸಮುದ್ರಗುಪ್ತ ತನ್ನ ಶಾಸನದಲ್ಲಿ ತಾನು "ಲಿಚ್ಛವಿ ದೌಹಿತ್ರ"ನೆಂದು ಹೆಮ್ಮೆಯಿಂದ ಕರೆದುಕೊಂಡಿದ್ದಾನೆ. ಇದನ್ನು ಗಮನಿಸಿದಾಗ ಚಂದ್ರ ಗುಪ್ತ ಲಿಚ್ಛವಿಯರಿಂದಲೆ ಪ್ರಾಮುಖ್ಯಕ್ಕೆ ಬಂದನೆಂಬ ಅಂಶ ಸ್ಪಷ್ಟವಾಗುತ್ತದೆ.
ಚಂದ್ರಗುಪ್ತ ಆಳ್ವಿಕೆಗೆ ಬಂದ ವರ್ಷವಾದ 320ರಿಂದ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತು. ಗುಪ್ತ ಶಕೆಯನ್ನು ಸಮುದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಗಣಿಸಲಾಯಿತೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದಲೇ ಆರಂಭವಾಯಿತೆಂದು ಒಪ್ಪಲಾಗಿದೆ. ಸಮುದ್ರಗುಪ್ತನ ಅಲಾಹಾಬಾದ್ ಸ್ತಂಭಶಾಸನದಲ್ಲಿ ಚಂದ್ರಗುಪ್ತನ ಆಸ್ಥಾನದ ವರ್ಣನೆ ಇದೆ. ತನ್ನ ಆಳ್ವಿಕೆಯ ಕೊನೆಯ ಕಾಲದಲ್ಲಿ ಸಮುದ್ರಗುಪ್ತನೇ ಸಮರ್ಥನಾದ ತನ್ನ ಉತ್ತರಾಧಿಕಾರಿಯೆಂದು ಯೋಚಿಸಿ, ಆಸ್ಥಾನಿಕರ ಸಮ್ಮುಖದಲ್ಲಿ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ನಂತರದ ರಾಜನಾಗಿ ಆಳಲು ಆರಿಸಿದನೆಂದು ಹೇಳಿದೆ. ಇದರಿಂದ ಬಹುಶಃ ಸಮುದ್ರಗುಪ್ತ ಆತನ ಹಿರಿಯ ಮಗನಾಗಿರದೆ ಅವನ ಹಿರಿಯ ಸೋದರನೊಬ್ಬನಾಗಿದ್ದರೂ ಇರಬಹುದೆಂದು ಊಹೆ ಮಾಡಲಾಗಿದೆ. ಸಮುದ್ರಗುಪ್ತನ ನಾಣ್ಯಗಳನ್ನು ಹೋಲುವ, ಕಾಚಗುಪ್ತನೆಂಬವನ, ಚಿನ್ನದ ನಾಣ್ಯಗಳು ದೊರೆತಿವೆ. ಇವುಗಳ ಆಧಾರದ ಮೇಲೆ ಕಾಚಗುಪ್ತ ಸಮುದ್ರಗುಪ್ತನ ಹಿರಿಯ ಸೋದರನಾಗಿದ್ದಿರಬೇಕೆಂದು ಹಲವರು ಸೂಚಿಸಿದ್ದಾರೆ. ಆದರೆ ಇದೂ ಕೂಡಾ ನಂಬಲಿಕ್ಕೆ ಅರ್ಹವಾಗಿಲ್ಲ.
ಸಮುದ್ರಗುಪ್ತನ ಆಯ್ಕೆ ಅನೇಕ ಸಾಮಂತರಿಗೆ ಸಂತೃಪ್ತಿಯನ್ನುಂಟು ಮಾಡಿತಾದರೂ ಕೆಲವರು ಇದರಿಂದ ಅಸೂಯೆಗೊಂಡರು. ಇವರಲ್ಲಿ ಅಚ್ಯುತ ಮತ್ತು ನಾಗಸೇನರೂ ಕೋಟ ಕುಲದ ಒಬ್ಬ ಸಾಮಂತನೂ ಪ್ರಮುಖರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸಮುದ್ರಗುಪ್ತ ಇವರೆಲ್ಲರನ್ನೂ ಸೋಲಿಸಿದ. ಇವರು ಸಮುದ್ರಗುಪ್ತನ ವಿರುದ್ಧವಾಗಿ ಅವನ ಹಿರಿಯ ಸಹೋದರನ ಹಕ್ಕನ್ನು ಎತ್ತಿ ಹಿಡಿದರೆಂದು ಹೇಳಲಾಗುತ್ತದೆ. ಆದರೆ ವಿಷಯಗಳನ್ನು ತಿಳಿಸುವ ಶಾಸನದ ಭಾಗ ಹಾಳಾಗಿರುವುದರಿಂದ ಬಗ್ಗೆ ಯಾವ ನಿರ್ಣಯವನ್ನೂ ಹೇಳುವಂತಿಲ್ಲ.
ಆಮೇಲೆ ಸಮುದ್ರಗುಪ್ತ ಉತ್ತರದ ದಿಗ್ವಿಜಯಯಾತ್ರೆ ಕೈಗೊಂಡ. ಸಂದರ್ಭದಲ್ಲಿ ಇವನು ಒಂದುನೀತಿಯನ್ನು ಅನುಸರಿಸಿದ. ಭಾರತದ ಎಲ್ಲ ಪ್ರದೇಶಗಳನ್ನೂ ತನ್ನ ನೇರವಾದ ಆಡಳಿತಕ್ಕೊಳಪಡಿಸುವುದು ಕಷ್ಟಸಾಧ್ಯವೆಂಬುದನ್ನು ಅವನು ಮೊದಲೇ ತಿಳಿದಿರುವಂತೆ ತೋರುತ್ತದೆ. ಆದ್ದರಿಂದಲೇ ಆತ ಉತ್ತರದಲ್ಲಿ ಆಳುತ್ತಿದ್ದ ಅರಸರನ್ನು ಸೋಲಿಸಿ ಅವರ ರಾಜ್ಯಗಳನ್ನು ಮಾತ್ರ ತನ್ನ ಆಡಳಿತಕ್ಕೆ ಸೇರಿಸಿಕೊಂಡ. "ದಕ್ಷಿಣಾಪಥ" ಅರಸರನ್ನು ಸೋಲಿಸಿದರೂ ಅವರನ್ನು ಬಂಧನದಿಂದ ಮುಕ್ತಗೊಳಿಸಿ ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸಿ, ತನ್ಮೂಲಕ ಅವರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಂಡು ವಿಧೇಯರಾಗಿರುವಂತೆ ಮಾಡಿದ. ಇವನ ಶಕ್ತಿಸಾಮರ್ಥ್ಯಗಳನ್ನು ಕಂಡ ನೆರೆಹೊರೆಯ ಅರಸರು ಇವನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಇವನ ಸ್ನೇಹಕ್ಕಾಗಿ ತಮ್ಮ ಕೈಚಾಚಿದರು.
ಕವಿ "ಹರಿಷೇಣ" ಅಲಾಹಾಬಾದ್ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯಕ್ಕೆ ಸಂಬಂಧಿಸಿದ ಅನೇಕ ವಿವರಣೆಗಳನ್ನು ನೀಡಿದ್ದಾನೆ. ಅದರಂತೆ ಇವನು ಆರ್ಯಾವರ್ತದ ರುದ್ರದೇವ, ಮತಿಲ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಾಗಸೇನ, ಅಚ್ಯುತ, ನಂದಿ ಮತ್ತು ಬಲವರ್ಮ ಎಂಬ ಅರಸರನ್ನು ಸೋಲಿಸಿ ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಅರಸರು ಯಾರು? ಇವರು ಆಳುತ್ತಿದ್ದ ರಾಜ್ಯಗಳಾವುವು ಎಂಬುದು ತಿಳಿಯದು. ಇವರ ವಂಶ ಮತ್ತು ಇವರು ಆಳುತ್ತಿದ್ದ ರಾಜ್ಯಗಳನ್ನು ಕುರಿತು ಇತಿಹಾಸಕಾರರು ಹಲವು ಊಹೆಗಳನ್ನು ಮಾಡಿದ್ದಾರೆ. ಅವು ಹೇಗೇ ಇರಲಿ, ಇವರನ್ನು ಸೋಲಿಸಿದ ಪರಿಣಾಮವಾಗಿ ಸಮುದ್ರಗುಪ್ತ ಉತ್ತರಪ್ರದೇಶ, ಮಧ್ಯಭಾರತ, ಪೂರ್ವದಲ್ಲಿ ಬಂಗಾಳ, ಬಿಹಾರ ಮುಂತಾದ ಪ್ರದೇಶಗಳನ್ನೊಳಗೊಂಡ, ಉತ್ತರ ಭಾರತದ ವಿಸ್ತಾರಪ್ರದೇಶದ ಸಾಮ್ರಾಟನಾದ.
ಅನಂತರ ಸಮುದ್ರಗುಪ್ತ ದಕ್ಷಿಣಾಪಥದ ಕಡೆಗೆ ದಿಗ್ವಿಜಯಕ್ಕಾಗಿ ಹೊರಟ. ಅದಕ್ಕೆ ಮೊದಲು ದಾರಿಯಲ್ಲಿದ್ದ ಎಲ್ಲ ಆಟವಿಕ ರಾಜರನ್ನೂ ತನ್ನ ಅಧೀನರನ್ನಾಗಿ ಮಾಡಿಕೊಂಡ. ಬಹುಶಃ ವಿಂಧ್ಯ ಪರ್ವತದ ಪೂರ್ವಕ್ಕೆ ಬಾಘೇಲ್ಖಂಡ, ರೇವಾ ಮತ್ತು ಛೋಟಾನಾಗಪುರಗಳನ್ನೊಳಗೊಂಡ ಅರಣ್ಯ ಪ್ರದೇಶದಲ್ಲಿ ರಾಜರು ಆಳುತ್ತಿದ್ದು ಬಹಳ ಕಿರುಕುಳ ನೀಡುತ್ತಿದ್ದಿರಬೇಕು.
ದಕ್ಷಿಣಾಪಥದ ಅರಸರ ವಿಷಯದಲ್ಲಿ ಸಮುದ್ರಗುಪ್ತನದು ಗ್ರಹಣ, ಮೋಕ್ಷ ಮತ್ತು ಅನುಗ್ರಹ ನೀತಿಯಾಗಿತ್ತು. ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳದೆ ಗ್ರಹಣವನ್ನು ಅನುಸರಿಸುವುದು, ಅವರನ್ನು ಸೋಲಿಸಿದ ಬಳಿಕ ಬಿಡುಗಡೆ ಮಾಡಿ ಅವರಿಗೆ ಮೋಕ್ಷವನ್ನು ತೋರಿಸುವುದು, ಅವರ ರಾಜ್ಯದಲ್ಲಿ ಅವರನ್ನು ಪುನಃ ಸ್ಥಾಪಿಸಿ ಅವರನ್ನು ತನ್ನ ವಿಧೇಯರಾದ ಸಾಮಂತರನ್ನಾಗಿ ಮಾಡಿಕೊಂಡು ಅನುಗ್ರಹಿಸುವುದು. ಇದು ಅವನ ರಾಜನೀತಿ ಚತುರತೆಯನ್ನು ಸೂಚಿಸುತ್ತದೆ. ವಿಷಯವನ್ನು ಪ್ರಸ್ತಾಪಿಸುವಾಗ ಕವಿಗಳು ಸಮುದ್ರಗುಪ್ತ ಸೋಲಿಸಿದ ರಾಜರ ಹೆಸರುಗಳನ್ನೇ ಅಲ್ಲದೆ ಅವರು ಆಳುತ್ತಿದ್ದ ರಾಜ್ಯಗಳ ಹೆಸರುಗಳನ್ನೂ ಸೂಚಿಸಿದ್ದಾರೆ. ಅವರು ಹನ್ನೆರಡು ಮಂದಿ ಅರಸರು. ಹರಿಷೇಣನ ಶಾಸನದಲ್ಲಿ ಹೇಳಿರುವ ಪ್ರಕಾರ ಅವರ ಹೆಸರು ಮತ್ತು ರಾಜ್ಯಗಳು ಹೀಗಿವೆ; "ಕೋಸಲದ ಮಹೇಂದ್ರ", "ಮಹಾಕಾಂತಾರದ ವ್ಯಾಘ್ರರಾಜ", "ಕೌರಾಲದ ಮಂಟರಾಜ", "ಪಿಷ್ಠಿಪುರದ ಮಹೇಂದ್ರ", "ಗಿರಿಕೊಟ್ಟೂರಿನ ಸ್ವಾಮಿದತ್ತ", "ಏರಂಡಪಲ್ಲಿಯ ದಮನ", "ಕಂಚಿಯ ವಿಷ್ಣುಗೋಪ", "ಅವಮುಕ್ತದ ನೀಲರಾಜ", "ವೆಂಗಿಯ ಹಸ್ತಿವರ್ಮ", "ಪಾಲಕ್ಕದ ಉಗ್ರಸೇನ", "ದೇವರಾಷ್ಟ್ರದ ಕುಬೇರ" ಮತ್ತು "ಕೌಸ್ಥಲಪುರದ ಧನಂಜಯ". ಇಲ್ಲಿ ಹೆಸರಿಸಿರುವ ರಾಜ್ಯಗಳಲ್ಲಿ ಮಹಾಕಾಂತಾರ, ಅವಮುಕ್ತ, ಕೌಸ್ಥಲಪುರ ರಾಜ್ಯಗಳು ಯಾವುವು ಎಂಬುದು ಇನ್ನೂ ತಿಳಿದಿಲ್ಲ. ಕೌರಾಳ ಎಂಬುದನ್ನು ಕೇರಲ ಎಂದು ಕೆಲವರು ಓದಿ, ಮಂಟರಾಜನನ್ನು ಕೇರಳದ ದೊರೆಯಾಗಿ ಮಾಡಿದ್ದಾರೆ. ಪಾಲಕ್ಕ ಎಂಬುದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪಾಲಕ್ಕಡ ಎಂದು ಕೆಲವರೂ ಕೇರಳದ ಪಾಲಕ್ಕಾಡು ಎಂದು ಇತರರೂ ಸೂಚಿಸಿದ್ದಾರೆ. ಅಂತೆಯೇ ದೇವರಾಷ್ಟ್ರ ವಿಶಾಖಪಟ್ಟಣದ ಎಲಮಂಚಲಿ ಎಂದು ಕೆಲವರೆಂದರೆ, ಇನ್ನು ಕೆಲವರು ಇದನ್ನು ಮಹಾರಾಷ್ಟ್ರವೆನ್ನುತ್ತಾರೆ. ಏರಂಡಪಲ್ಲಿ ಸಹ ವಿಶಾಖಪಟ್ಟಣ ಜಿಲ್ಲೆಯ ಅದೇ ಹೆಸರಿನ ಗ್ರಾಮ. ಆದರೆ ಇದು ಮಹಾರಾಷ್ಟ್ರದ ಖಾನ್ದೇಶ್ ಜಿಲ್ಲೆಯ ಏರಂಡೋಲ್ ಎಂದ ಕೆಲರು ವಾದಿಸಿದ್ದಾರೆ. ಇಲ್ಲಿ ಸೂಚಿಸಿರುವ ರಾಜ್ಯಗಳೆಲ್ಲ ಪೂರ್ವತೀರದಲ್ಲಿಯೇ ಇದ್ದ ಪ್ರದೇಶಗಳು ಎನ್ನುವುದಾದಲ್ಲಿ ಸಮುದ್ರಗುಪ್ತ ಕೇವಲ ಪೂರ್ವ ತೀರದ ತುದಿಯವರೆಗೂ ಬಂದು, ಅದೇ ಮಾರ್ಗವಾಗಿ ಹಿಂದಿರುಗಿದನೆಂದು ಹೇಳಬೇಕಾಗುತ್ತದೆ. ಆದರೆ ಇನ್ನು ಕೆಲವರು ಸೂಚಿಸಿರುವಂತೆ ರಾಜ್ಯಗಳಲ್ಲಿ ಕೆಲವು ಕೇರಳ ಮತ್ತು ಈಗಿನ ಮಹಾರಾಷ್ಟ್ರಗಳಲ್ಲಿಯೂ ಇದ್ದುವು ಎನ್ನುವ ಪಕ್ಷದಲ್ಲಿ ಸಮುದ್ರಗುಪ್ತ ಪೂರ್ವ ತೀರದ ರಾಜ್ಯಗಳಿಂದಾರಂಭಿಸಿ ದಕ್ಷಿಣದ ತುದಿಯಲ್ಲಿದ್ದ ಚೇರರ ರಾಜ್ಯದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿ ಪಶ್ಚಿಮಕ್ಕೆ ತಿರುಗಿ ಮಹಾರಾಷ್ಟ್ರದ ಮೂಲಕ ತನ್ನ ರಾಜಧಾನಿಗೆ ಹಿಂದಿರುಗಿದನೆಂದು ತಿಳಿಯಬೇಕಾಗುತ್ತದೆ.
ಇವನ ದಿಗ್ವಿಜಯದಿಂದ ಭೀತಿಗೊಂಡು, ಸರಹದ್ದಿನ ಸಮತಟ, ಡವಾಕ, ಕಾಮರೂಪ, ನೇಪಾಳ ಮತ್ತು ಕರ್ತೃಪುರದ ಅರಸರು ಶರಣಾದರೆಂದು ಶಾಸನ ಹೇಳುತ್ತದೆ. ಡವಾಕ ಮತ್ತು ಕರ್ತೃಪುರಗಳನ್ನು ಇನ್ನೂ ಸಹ ಗುರುತಿಸಲಾಗಿಲ್ಲ. ಉಳಿದ ಪ್ರದೇಶಗಳು ಈಗಿನ ಬಂಗಾಳ, ಅಸ್ಸಾಮಿನ ಉತ್ತರಭಾಗ ಮತ್ತು ನೇಪಾಳ ಪ್ರದೇಶಗಳನ್ನೊಳಗೊಂಡಿದ್ದುವು. ಇವಲ್ಲದೆ ಮಾಲದ, ಅರ್ಜುನಾಯನ, ಯೌಧೇಯ, ಮುದ್ರಕ, ಅಭೀರ, ಪ್ರಾರ್ಜುನ, ಸನಕಾನೀಕ, ಕಾಕ ಮತ್ತು ಖರಪಲಿಕ ಎಂಬ ಜನಾಂಗಗಳ ಅಧಿಪತಿಗಳು ಸಹ ತಮ್ಮ ವಿಧೇಯತೆಯನ್ನು ಸೂಚಿಸಿದರು. ಇವುಗಳಿಂದೆಲ್ಲ ನಮಗೆ ಸಮುದ್ರಗುಪ್ತನ ರಾಜ್ಯದ ವಿಸ್ತಾರ ತಿಳಿದುಬರುತ್ತದೆ. ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ ಉತ್ತರದ ಹಿಮಾಲಯದಿಂದ ದಕ್ಷಿಣದ ವಿಂಧ್ಯ ಪರ್ವತದವರೆಗೂ ಉತ್ತರಾಪಥ ಸಮುದ್ರಗುಪ್ತನ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಅಳಿದುಳಿದ ಕುಷಾಣ, ಶಕ, ಮುರುಂಡ ಮುಂತಾದ ಜನಾಂಗಗಳಿಗೆ ಸೇರಿದವರೂ ಸಿಂಹಳದ ಅರಸರೂ ತಮ್ಮ ಕಪ್ಪಕಾಣಿಕೆಗಳನ್ನು ಸಲ್ಲಿಸಿದರು.
ಶಾಸನವನ್ನು ಕಾವ್ಯವೆಂದು ವರ್ಣಿಸಲಾಗಿದೆ. ಇದರ ಕರ್ತೃ ಮಹಾದಂಡನಾಯಕ ಧ್ರುವಭೂತಿಯ ಮಗ ಸಂಧಿವಿಗ್ರಹಿ ಕುಮಾರಾಮಾತ್ಯ, ಮಹಾದಂಡನಾಯಕ ಹರಿಷೇಣ. ಸಮುದ್ರಗುಪ್ತ ಸ್ವತಃ ಅನೇಕ ಕಾವ್ಯಗಳನ್ನು ರಚಿಸುವುದರ ಮೂಲಕ "ಕವಿರಾಜ"ನೆಂಬ ಪ್ರಶಸ್ತಿಗೆ ಅರ್ಹನಾಗಿದ್ದನೆಂದೂ ಸಂಗೀತಶಾಸ್ತ್ರದಲ್ಲಿ ತುಂಬುರುವನ್ನು ಮೀರಿಸಿದ್ದನೆಂದೂ ಶಾಸನದಲ್ಲಿ ಹೇಳಿದೆ. ಅವನ ಯಾವ ಕಾವ್ಯಗಳು ಲಭ್ಯವಾಗಿಲ್ಲ. ಆದರೆ ಅವನು ಸಂಗೀತ ಶಾಸ್ತ್ರಜ್ಞನೆಂಬ ವಿಷಯವನ್ನು ಅವನು ಅಚ್ಚು ಹಾಕಿಸಿದ ಕೆಲವು ನಾಣ್ಯಗಳು ಸಮರ್ಥಿಸುತ್ತವೆ. ಸಮುದ್ರಗುಪ್ತ ತಾನೇ ವೀಣೆಯನ್ನು ನುಡಿಸುತ್ತಿರುವಂತೆ ನಾಣ್ಯಗಳಲ್ಲಿ ಚಿತ್ರಿಸಲಾಗಿದೆ.

ಭಾರತ ಕಂಡ ರಾಜ, ಕವಿ ಮತ್ತು ಸಂಗೀತಜ್ಞನ ಜೊತೆಗೆ ಸಮರ್ಥ ಆಡಳಿತಗಾರನೊಬ್ಬನನ್ನು ಇತಿಹಾಸಕಾರರು ನೆಪೋಲಿಯನ್ ನಿಗೆ ಹೋಲಿಸುವುದನ್ನು ನಾನಂತೂ ಸಮರ್ಥಿಸುವುದಿಲ್ಲ.
ಧರ್ಮ ಪ್ರಾಚೀರ ಬಂಧಃ ಶಶಿಕರ ಸುಚಯಃ ಕೀರ್ತಯಃ ಸ ಪ್ರತಾನಾ ವೈದುಷ್ಯಂ ತತ್ವ ಭೇದಿ ಪ್ರಶಮ . . . ಉಕು . ಯ್ ; ಕ ಮು ತ್ . . . ಆರ್ಥಮ್ |

ಅಧ್ಯೇಯಃ ಸೂಕ್ತ ಮಾರ್ಗಃ ಕವಿಮತಿವಿಭವೋತ್ಸಾರಣಂ ಚಾಪಿ ಕಾವ್ಯಂ ಕೋನು ಸ್ಯಾದ್ಯೋಸ್ಯನಸ್ಯಾದ್ ಗುಣ ಇತಿ ವಿದುಷಾಂ ದ್ಯಾನ ಪಾತ್ರಂ ಯ ಏಕಃ ||


No comments:

Post a Comment