Search This Blog

Monday 27 November 2017

ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ – ಆಲಂಕಾರಿಕ ಶ್ರೀವಿಜಯ. - ಸದ್ಯೋಜಾತ ಭಟ್ಟ

 

ಸುಮಾರು ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ನಿತ್ಯವರ್ಷನು ಕಡಪ ಜಿಲ್ಲೆಯ ಜಮ್ಮಲಮಡುಗುವಿನ ದಾನವುಲಪಾಡು ಎನ್ನುವ ಊರಿನಲ್ಲಿ ಒಂದು ಕನ್ನಡ ಲಿಪಿಯಲ್ಲಿ, ಕನ್ನಡದ ಶಾಸನ ಬರೆಸುತ್ತಾನೆ. ಇದು ಆಲಂಕಾರಿಕ ಮಾರ್ಗಕಾರ ಕವಿರಾಜಮಾರ್ಗದ ಕರ್ತೃ ಶ್ರೀವಿಜಯನ ಕುರಿತಾಗಿ ಉಲ್ಲೇಖವಿರುವ ಇರುವ ಮೊದಲ ಕನ್ನಡಶಾಸನ. ಅನುಪಮ ಕವಿ, ಮಹಾದಂಡನಾಯಕ ಎಂದು ಶ್ರೀವಿಜಯನನ್ನು ಉಲ್ಲೇಖಿಸುವ ಈ ಶಾಸನ ಅನುಪಮಕವಿ ಶ್ರೀವಿಜಯನ ಸೇನಬೋವ ಗುಣವರ್ಮನು ಬರೆದದ್ದು, ಈ ಶಾಸನದ ಮಹತ್ವ ಎಂದರೆ ಸುಮಾರು 8 ಬಾರಿ ಶ್ರೀವಿಜಯನನ್ನು ಉಲ್ಲೇಖಿಸಲಾಗಿದೆ. 8 ಮತ್ತು 9ನೇ ಸಾಲಿನಲ್ಲಿ ಅನೂನ ಸುಖಾಸ್ಪದಮನೞ್ತಿಯೊಳ್ ಶ್ರೀವಿಜಯಂಎಂದು ಮೊದಲ ಉಲ್ಲೇಖ. 17 – 18 ನೇ ಸಾಲಿನಲ್ಲಿ, “ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ ಶ್ರೀವಿಜಯಂಎಂದು ಶ್ರೀ ವಿಜಯನನ್ನು ದಂಡನಾಯಕ ಎನ್ನಲಾಗಿದೆ. 22ನೇ ಸಾಲಿನಲ್ಲಿ ಶ್ರೀ ವಿಜಯನನ್ನು. ಶ್ರೀವಿಜಯಂ ಅನುಪಮ ಕವಿಎಂದು ಬಣ್ಣಿಸಲಾಗಿದೆ. ಪುನಃ 30 ಮತ್ತು 31ನೇ ಸಾಲಿನಲ್ಲಿ ದಣ್ಡನಾಯಕಂ ಶ್ರೀ ವಿಜಯಂಎನ್ನಲಾಗಿದೆ. 38ನೇ ಸಾಲಿನಿಂದ 41ರ ವರೆಗೆ ಕರಮರಿದು ರಣದೊಳನುಪಮಕವಿಯಾ ಕುಪಿತವತಿ ಶ್ರೀ ವಿಜಯೇಎಂದು ಅನುಪಮ ಕವಿಯಾಗಿ ವರ್ಣಿಸಿದ್ದಾರೆ. 59ನೇ ಸಾಲಿನಿಂದ 65ನೇ ಸಾಲಿನ ತನಕ 2 ಸಲ ಶ್ರೀವಿಜಯನನ್ನು ಸ್ಮರಿಸಲಾಗಿದೆ. ಶ್ರೀವಿಜಯಾ ಚತುರುದಧಿ ವಲಯವಲಯಿತ ವಸುನ್ಧರಾಮಿನ್ದ್ರಶಾಸನಾತ್ಸಂರಕ್ಷನ್ ಶ್ರೀವಿಜಯ ದಣ್ಡನಾಯಕ ಜೀವಚಿರಂಎಂದು ಶಾಸನ ವಾಕ್ಯವನ್ನು ಕೊನೆಗೊಳಿಸಲಾಗಿದೆ.
ಕನ್ನಡದೊಳು ಚಂಪೂಕಾವ್ಯವ ನೆಱೆ ಪೇೞ್ದ | ಸನ್ನುತ ಸತ್ಕವೀಶ್ವರರಹೆಸರನ್ನು ಹೇಳುತ್ತೇನೆ ಎಂದು ಆರಂಭಿಸಿ ದೇವಚಂದ್ರ ಪ್ರಭರನ್ನು ಕೊಂಡಾಡಿದ | ಶ್ರೀ ವಿಜಯರ . . .ಎನ್ನುವುದಾಗಿ ಸುಮಾರು 1508ನೇ ಇಸವಿಯಲ್ಲಿದ್ದ ಮಂಗರಸನು ತನ್ನ ನೇಮಿಜಿನೇಶ ಸಂಗತಿಯಲ್ಲಿ ಕನ್ನಡಭಾಷೆಯಲ್ಲಿ ಚಂದ್ರಪ್ರಭಪುರಾಣವನ್ನು ಚಂಪೂ ಶೈಲಿಯಲ್ಲಿ ಬರೆದ ಎಂದು ಹೇಳಿಕೊಂಡಿದ್ದಾನೆ.(ಈ ಮಂಗರಸನೇ ಸೂಪಶಾಸ್ತ್ರ(ಪಾಕ ಶಾಸ್ತ್ರ ಗ್ರಂಥ) ಬರೆದ ಎಂದು ಹೇಳಲಾಗುತ್ತದೆ.) ಶ್ರೀ ವಿಜಯ ಒಬ್ಬ ಜೈನ ಕವಿ. ಸುಮಾರು 1550 ಇಸವಿಯಲ್ಲಿ ಜೀವಿಸಿದ್ದ ಪಿರಿಯಾ ಪಟ್ಟಣದ ದೊಡ್ಡಯ್ಯನು ತನ್ನ ಚಂದ್ರಪ್ರಭಾಸಾಂಗತ್ಯದಲ್ಲಿ ಚಂದ್ರಪ್ರಭ ಪುರಾಣವ ಪೇೞ್ದ ವಿಜಯ ಕವೀಂದ್ರಎಂದು ಶ್ರೀ ವಿಜಯನನ್ನು ಸ್ಮರಿಸಿದ್ದಾನೆ.
ಶ್ರೀವಿಜಯ ಕವಿಮಾರ್ಗಂ | ಭಾವಿಪ ಕವಿಜನದ ಮನಕೆ ಕನ್ನಡಿಯುಂಕೆ | ಯ್ದೀವಿಗೆಯುಮಾದುವದಱಿಂ | ಶ್ರೀ ವಿಜಯರಂ ದೇವರವರನೇ ವಣ್ಣಿಪುದೋ ||” ಎನ್ನುವುದಾಗಿ ಶ್ರೀ ವಿಜಯನನ್ನು ದುರ್ಗಸಿಂಹನು ೧೦೨೫ರಲ್ಲಿ ತನ್ನ ಪಂಚತಂತ್ರದಲ್ಲಿ ಹೊಗಳುತ್ತಾನೆ. ವೈಯ್ಯಾಕರಣಿ ಕೇಶಿರಾಜನು ಶಬ್ದಮಣಿ ದರ್ಪಣದಲ್ಲಿ ಸುಮಾರ್ಗಮಿದಱೊಳೆ ಲಕ್ಷ್ಯಂಎಂದು ಹೇಳಿದ್ದಾನೆ. ಪ್ರಾಗಾಸೀತ್ ಸುಚಿರಾಭಿಯೋಗ ಬಲತೋ ನೀತಂ ಪರಾಮುನ್ನತಿಂ ಪ್ರಾಯಃ ಶ್ರೀ ವಿಜಯೇ ತದೇತದಖಿಲಂ ತತ್ವೀರಿಕಾಯಾಂ ಸ್ಥಿತೇ ಸಂಕ್ರಾನ್ತಂ ಕಥಮನ್ಯತಾನತಿ ಚರಾದ್ವಿದ್ಯೇದೃಗೀದೃಕ್ತಪಃ ||” ಎನ್ನುವುದಾಗಿ ಶ್ರವಣಬೆಳಗೊಳದಲ್ಲಿರುವ ಬಿ ಎಲ್ ರೈಸ್ ಸಂಗ್ರಹಿಸಿದ ಎಪಿಗ್ರಾಫಿಯಾ ಕರ್ನಾಟಕದ ಶ್ರವಣಬೆಳಗೊಳ 67ನೇ ಸಂಖ್ಯೆಯ ಶಾಸನದಲ್ಲಿ ಶ್ರೀವಿಜಯನೆನ್ನುವವನೊಬ್ಬ ಗಂಗರಾಜನಿಗೆ ಗುರುವಾಗಿದ್ದ. ಆತನಲ್ಲಿ ಹೇಮಸೇನ ಮುನಿಯ ತಪಸ್ಸಿನ ಫಲವು ಶ್ರೀವಿಜಯನಲ್ಲಿ ಸೇರಿಕೊಂಡಿತು ಎನ್ನುವುದಾಗಿಯೂ ಉಲ್ಲೇಖಿಸಿದ್ದಾರೆ. 

ಶ್ರೀವಿಜಯ ಕನ್ನಡಕ್ಕೊಬ್ಬ ಮಾರ್ಗಕಾರನಾಗಿ, ಅಲಂಕಾರ ಶಾಸ್ತ್ರಕ್ಕೆ ಮಾರ್ಗದರ್ಶಕನಾಗಿದ್ದದು ನಿಜ. ಈತನು ನೃಪತುಂಗನ ಆಸ್ಥಾನದಲ್ಲಿ ಸಭಾಸದನಾಗಿದ್ದಂತೆ ನೃಪತುಂಗ ರಾಜನ ಹೆಸರಿನಲ್ಲಿ ಅಲಂಕಾರ ಗ್ರಂಥವಾದ ಕವಿರಾಜ ಮಾರ್ಗವನ್ನು ರಚಿಸಿದ್ದನೆನ್ನಬಹುದಾಗಿದೆ. ದುರ್ಗಸಿಂಗ ಮತ್ತು ಕೇಶೀರಾಜನು ಶ್ರೀವಿಜಯನನ್ನು ಹೋಗಳಿರುವುದು ಗಮನಿಸಿದರೆ ಶ್ರೀವಿಜಯ ಪ್ರೌಢ ಕವಿಯಾಗಿದ್ದ ಎನ್ನ ಬಹುದಾಗಿದೆ. ಆದರೆ ಈತ ಬರೆದ ಚಂದ್ರಪ್ರಭ ಚಂಪೂ ಈ ವರೆಗೂ ಲಭ್ಯವಾಗದೇ ಇರುವುದು ಕನ್ನಡ ಭಾಷೆಗೆ ತುಂಬಲಾರದ ನಷ್ಟ ಎನ್ನಬಹುದು. ಅಲ್ಲದೇ ಈತನು ಚಂದ್ರಪ್ರಭಚಂಪು ವಲ್ಲದೇ ಮತ್ತಿನ್ನೇನಾದರೂ ಬರೆದಿದ್ದಾನೋ ಎನ್ನುವುದು ಎಲ್ಲಿಯೂ ತಿಳಿದು ಬರುವುದಿಲ್ಲ.
ಆದರೆ ಇದಕ್ಕೆ ಅಪವಾದ ವೆನ್ನುವಂತೆ ನೃಪತುಂಗನೇ ಈ ಅಲಂಕಾರ ಗ್ರಂಥವನ್ನು ಬರೆದ ಎನ್ನುವ ಮಾತುಗಳಿವೆ ಆದರೆ ಅದು ಎಷ್ಟು ಸತ್ಯವೋ ತಿಳಿಯುತ್ತಿಲ್ಲ. ನಾನಿಲ್ಲ ಶಾಸನಕ್ಕೆ ಪ್ರಾಧಾನ್ಯತೆ ಕೊ‌ಟ್ಟಿರುವುದರಿಂದ ಶ್ರೀವಿಜಯನೇ ಕವಿ ಎಂದು ಉಲ್ಲೇಖಿಸಿರುವೆ ಮತ್ತು ಕವಿರಾಜಮಾರ್ಗದಲ್ಲಿಯೂ ಕವಿಯ ಉಲ್ಲೇಖ ಇರುವುದು ಕಂಡುಬರುತ್ತದೆ.
ಪರಮ ಶ್ರೀವಿಜಯ ಕವೀ
ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ
ನಿರತಿಶಯ ವಸ್ತು ವಿಸ್ತರ
ವಿರಚನೆ ಲಕ್ಷ್ಯಂ ತತಾದ್ಯ ಕಾವ್ಯಕ್ಕೆ ಎಂದುಂ[1-32]

ಮತ್ಯೇಭವಿಕ್ರೀಡಿತವೃತ್ತಂ|| ಸಕಳಾಳಾಪ ಕಳಾಕಳಾಪ ಕಥಿತ ವ್ಯಾವೃತ್ತಿಯೊಳ್ ಕೂಡಿ ಚಿ
ತ್ರಕರಂಬೋಲ್ ಪರಭಾಗ ಭಾವ ವಿಲಸದ್ವರ್ಣ ಕ್ರಮಾವೃತ್ತಿಯಂ
ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಿಂ ವ್ಯಾವರ್ಣಿಸುತ್ತುಂ ಕವಿ
ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವದೀ ಮಾೞ್ಕೆಯಿಂ [1-150]

ಉತ್ಪಲಮಾಲಾವೃತ್ತಂ|| ಭಾವಿಸಿ ಶಬ್ದ ತತ್ತ್ವ ಸಮಯ ಸ್ಥಿತಿಯಂ ಕುಱಿತೊಂದು ಅಶೇಷ ಭಾಷಾ ವಿಷಯೋಕ್ತಿಯಂ ಬಗೆದು ನೋಡಿ ಪುರಾಣ ಕವಿ ಪ್ರಭು ಪ್ರಯೋಗಾ ವಿಳಸತ್ ಗುಣೋದಯಮನಾಯ್ದವಱಿಂ ಸಮೆದೊಂದು ಕಾವ್ಯದಿಂ ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ[2-155]
ಈ ರೀತಿಯಾಗಿ ಕವಿ ತನ್ನ ಹೆಸರನ್ನು ಅಲ್ಲಲ್ಲಿ ಹೇಳಿಕೊಂಡಿರುವುದು ಶ್ರೀವಿಜಯನೇ ಈ ಕಾವ್ಯದ ಕರ್ತೃ ಎಂದು ನಾವು ತಿಳಿಯಬಹುದಾಗಿದೆ.
ರಾಜ ನೃಪತುಂಗನ ಉಲ್ಲೇಖ ಇದೇ ಕವಿರಾಜಮಾರ್ಗದ
ಅದಱಿಂದ ಲಸದೆ ಪೀನಂ
ಪದೆಯದೆ ಪಾಂಗೞಿದು ದೋಷಮಂ ಪಿಂಗಿಸಿ
ಪ್ಪದೆ ಬಗೆದು ಪೇೞುವುದಾಗಮಂ
ಉದಾರ ನೃಪತುಂಗದೇವ ವಿದಿತಕ್ರಮದಿಂ[1-44] ಎನ್ನುವಲ್ಲಿ ದೊರಕುತ್ತದೆ.

ಅದು ಹೇಗೇ ಇರಲಿ ನಾನು ಶ್ರೀವಿಜಯ ಈ ಕೃತಿಯ ಕರ್ತೃ ಎಂದು ಭಾವಿಸಿದ್ದೇನೆ.   





No comments:

Post a Comment