Search This Blog

Friday 3 November 2017

ಮಯೂರವರ್ಮನ ಸಾಮ್ರಾಜ್ಯದಲ್ಲಿ - ಸಂಗೀತ ವಲ್ಗು ನಿನಾದೇಷು ಗೃಹೇಷು

ಅದೊಂದು ಅಸದೃಶವಾದ ಅಗ್ರಹಾರ. ಸಂಜೆಯಾಯಿತೆಂದರೆ ಸಾಯಂ ಸಂಧ್ಯಾವಂದನೆಯ ಜೊತೆಗೆ ಸೂಕ್ತಾದಿಗಳನ್ನು ಉಚ್ಚ ಸ್ವರದಲ್ಲಿ ಕಂಠಸ್ಥಮಾಡಿಕೊಳ್ಳುತ್ತಿದ್ದ ಸ್ಥಳ. ಆ ಅಗ್ರಹಾರದ ಬೀದಿಯಲ್ಲಿ ನಡೆದರೆ ಅದು ಈ ಭೂಲೋಕದ ಸ್ವರ್ಗ ಎನ್ನಿಸುತ್ತಿತ್ತು. ಅಂತಹ ಅಗ್ರಹಾರದಲ್ಲಿ ಸಾಗುತ್ತಿದ್ದರೆ ಇಕ್ಕೆಲಗಳಲ್ಲಿ ಬೆಳಗಿನ ರಂಗೋಲಿ ಅಳಿಸದೇ ಹಾಗೆ ಅದು ಕಣ್ಣಿಗೆ ರಾಚುತ್ತಿತ್ತು. ಗಿಳಿವಿಂಡುಗಳ ಆತ್ಮೀಯ ಹಾರೈಕೆಗಳು ಒಂದೆಡೆಯಾದರೆ ವೇದಾದಿಗಳನ್ನು ಘಟಿಕಾಸ್ಥಾನಗಳಲ್ಲಿ ಕಲಿತು ಅವುಗಳನ್ನು ತಮ್ಮ ಮುಂದಿನ ಪೀಳೆಗೆಗೆ ಧಾರೆ ಎರೆಯುತ್ತಿರುವ ವೇದವಿದರ - ಶ್ರೋತ್ರೀಯರ ಮಂತ್ರಘೋಷಗಳು ಕಿವಿಗೆ ಮುದನೀಡುತ್ತಿರುವುದು ಇನ್ನೊಂದೆಡೆ. ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕಲಾ ಪ್ರಕಾರದ ಸಂಗೀತ ಮತ್ತು ನೃತ್ಯಕಲಾವಿದರು ನೃತ್ಯಾಸಕ್ತರಿಗೆ ತಮ್ಮ ವಿದ್ಯೆಗಳನ್ನು ಹೇಳಿಕೊಡುತ್ತಿರುವುದು ಮತ್ತು ಗೆಜ್ಜೆಯ ಮತ್ತು ಸಂಗೀತದ ನಾದ ಹರಿದು ಕಿವಿಯನ್ನು ತಂಪಾಗಿಸುತ್ತಿದ್ದವು. ಇನ್ನೊಂದು ಕಡೆ ಧನುರ್ವೇದವನ್ನು ಕಲಿಸುತ್ತಾ ಗರಡಿಯ ತಾಲೀಮು ನಡೆಯುತ್ತಿದ್ದುದು ಕಾನಿಸುತ್ತಿತ್ತು ಇದು ಬೇರೆಲ್ಲೋ ಅಲ್ಲ, ಕನ್ನಡ ನೆಲದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಕದಂಬರ ಕಾಲದಲ್ಲಿನ ಒಂದು ಚಿಕ್ಕದಾದ ನೋಟ. ಅದಕ್ಕೇ ಕುಬ್ಜನೆನ್ನುವ ಕವಿಯೊಬ್ಬ "ನಾನಾ ವಿಧ ದ್ರವಿಣ ಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರ ಮದವಾಸಿತ ಗೋಪುರೇಷು | ಸಂಗೀತ ವಲ್ಗು ನಿನಾದೇಷು ಗೃಹೇಷು" ಎನ್ನುವುದಾಗಿ ತಾನು ಬರೆದ ಶಾಂತಿವರ್ಮನ ತಾಳಗುಂದದ ಸ್ತಂಬ ಶಾಸನದಲ್ಲಿ ಬಣ್ಣಿಸಿದ್ದಾನೆ. ಕದಂಬರ ರಾಜಕೀಯ ಆಸಕ್ತಿಯ ಜೊತೆ ಅವರ ಧಾರ್ಮಿಕ ಮತ್ತು ಕಲಾಸಕ್ತಿಯನ್ನು ಬಿಂಬಿಸಿದ್ದಾನೆ. ಅಂದರೆ ಪ್ರಾಯಶಃ ತಾಳಗುಂದದ ಪಾವಿತ್ರ್ಯ ಮತ್ತು ಅಲ್ಲಿನ ಘಟಿಕಾಸ್ಥಾನದ ಮಹತ್ವವನ್ನು ಬಣ್ಣಿಸಿದ್ದಾನೆ.
ನಾನಾವಿಧ ದ್ರವಿಣ ಸಾರ ಸಮುಚ್ಚಯೇಷು ಮತ್ತದ್ವಿಪೇಂದ್ರ ಮದವಾಸಿತ ಮದವಾಸಿತ ಗೋಪುರೇಷುಸಂಗೀತ ವಲ್ಗು ನಿನದೇಷು ಗೃಹೇಷು ಯಸ್ಯ ಲಲ್ಕ್ಷ್ಮ್ಯಾಂಗನಾ ಧೃತಿಮತೀ ಸುಚಿರಂ ಚರೇಮೆ” || ಸಾಲು ಬಹಳ ಮಹತ್ವವನ್ನು ಪಡೆಯುತ್ತದೆ. ಕದಂಬರ ಕಾಲದಲ್ಲಾಗಲೇ ಸಂಗೀತ ಶಾಸ್ತ್ರವೂ ಕೂಡಾ ಪ್ರಚಲಿತಕ್ಕೆ ಬಂದು ದಕ್ಷಿಣದಲ್ಲಿ ತನ್ನ ಸ್ಥಾನ ಪಡೆದುಕೊಂಡಿತ್ತು. ಅಂದರೆ ಕದಂಬರು ಕೇವಲ ರಾಜ್ಯಾಡಳಿತಕ್ಕೆ ಸೀಮಿತರಾಗಿರದೇ ತಾವು ಸಾಂಸ್ಕೃತಿಕ ರಂಗದಲ್ಲಿಯೂ ಸಹ ಗುರುತಿಸಿಕೊಂಡಿದ್ದರು.
ಗುಪ್ತರೇ ಮೊದಲಾದ ಸಾಮ್ರಾಟರ ಸ್ನೇಹ ಈ ಹೊತ್ತಿಗೆ ಕದಂಬರಿಗೆ ಲಭಿಸಿಯಾಗಿತ್ತು. ಕದಂಬರನ್ನು ಅತ್ಯಂತ ಸ್ನೇಹ ಮತ್ತು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದರು. ಎಲ್ಲಾ ರಾಜರೂ ಸಹ ಅತ್ಯಾದರದಿಂದ ನೋಡುವಂತಹ ಒಂದು ಹಂತವನ್ನು ಕದಂಬರು ಸಂಪಾದಿಸಿದರು. ತಮ್ಮ ಮಗಳನ್ನು ಕೊಟ್ಟು ಉಳಿದ ರಾಜರುಗಳಲ್ಲಿ ಸಂಬಂಧವನ್ನು ಕಲ್ಪಿಸಿಕೊಂಡರು.
ಗುಪ್ತಾದಿ ಪಾರ್ಥಿವ ಕುಲಾಂಬುರುಹ ಸ್ಥಲಾನಿ ಸ್ನೇಹಾದರ ಪ್ರಣಯ ಸಂಭ್ರಮ ಕೇಸರಾಣಿ |
ಶ್ರೀಮಂತ್ಯನೇಕ ನೃಪ ಷಟ್ಪದ ಸೇವಿತಾನಿ ಯೋ ಬೋಧಯದ್ದುಹಿತೃದೀಧಿತಿಭಿರ್ನೃಪಾರ್ಕ್ಕಃ ||

ವಸಂತತಿಲಕಾ ವೃತ್ತದಲ್ಲಿ ಬರೆದ ಈ ಸಾಲುಗಳು ಶಾಸನದ ೧೨ನೇ ಸಾಲಿನಲ್ಲಿ ಕಾಣ ಸಿಗುತ್ತದೆ.


No comments:

Post a Comment