Search This Blog

Thursday 1 March 2018

ಉದಯನ



ಪುರಾಣದಲ್ಲಿ ಬರುವ ಒಂದು ಕಥೆ "ಜನಮೇಜಯನ ಮರಿಮ ಎಂದು ತಿಳಿಯುತ್ತದೆ. ಸಹಸ್ರಾನೀಕ ಮತ್ತು ಮೃಗಾವತಿಯರ ಮಗ. ಗರ್ಭವತಿಯಾದ ಮೃಗಾವತಿ ರಕ್ತದ ಕುಂಡದಲ್ಲಿ ಸ್ನಾನಮಾಡಬೇಕೆಂದು ಬಯಯಸುತ್ತಾಳೆ. ಆಗ ಅರಸನು ರಕ್ತವರ್ಣದ ಕುಂಡವನ್ನು ನಿರ್ಮಿಸಿದ. ಮೃಗಾವತಿ ಮಿಂದು ಹೊರಬಂದಾಗ ಗರುಡ ಇವಳನ್ನು ಕಂಡು ಇದೊಂದು ಮಾಂಸದ ಮುದ್ದೆಯೆಂದು ಭ್ರಮಿಸಿ ಕೊಂಡೊಯ್ದು ಉದಯ ಪರ್ವತದ ಗವಿಯಲ್ಲಿಟ್ಟಿತು. ಚೇತರಿಸಿಕೊಂಡ ಮೃಗಾವತಿ ತನ್ನ ಸ್ಥಿತಿ ನೆನೆಸಿಕೊಂಡು ದುಃಖಿತಳಾಗುತ್ತಾಳೆ. ಸಮೀಪದ ಆಶ್ರಮದಲ್ಲಿದ್ದ ಜಮದಗ್ನಿಗೆ ಈಕೆಯ ಆಕ್ರಂದನದ ಧ್ವನಿ ಕೇಳಿಸುತ್ತದೆ ಜಮದಗ್ನಿ ಋಷಿ ಶಿಷ್ಯನ ಮೂಲಕ ಆಕೆಯನ್ನು ಕರೆಸಿ ಸಂತೈಸಿದ. ಕಾಲಕ್ರಮದಲ್ಲಿ ಮೃಗಾವತಿ ಮಗನನ್ನು ಹಡೆದಳು. ಉದಯಾಚಲದಲ್ಲಿ ಜನಿಸಿದವನಾದುದರಿಂದ ಉದಯನ ಎಂಬ ಹೆಸರಾಯಿತು. ಈತ ಪ್ರೌಢನಾಗಿ ಒಮ್ಮೆ ಬೇಟೆಗೆ ಹೋದಾಗ ಬೇಡನ ಕೈಗೆ ಸಿಕ್ಕಿದ್ದ ಹಾವೊಂದನ್ನು ತನ್ನ ಕೈಲಿದ್ದ ಕಡಗ ಕೊಟ್ಟು ಬಿಡಿಸಿದ. ಹಾವು ಮಾಯವಾಯಿತು. ಸರ್ಪರಾಜನ ಪುತ್ರನಾಗಿದ್ದ. ಸರ್ಪರಾಜ ಸಂತುಷ್ಟನಾಗಿ ಎದುರಿಗೆ ಬಂದು ಉದಯನನನ್ನು ಪಾತಾಳಕ್ಕೆ ಕರೆದೊಯ್ದು ತನ್ನ ಸಹೋದರಿ ಲಲಿತೆಯನ್ನು ಕೊಟ್ಟು ಮದುವೆ ಮಾಡಿಸಿದ. ಉದಯನನಿಂದ ಮಗನನ್ನು ಪಡೆದಮೇಲೆ "ಘೋಷವತಿ" ಎಂಬ ವೀಣೆ ಹಾಗೂ ಮುದುಡದೇ ಇರುವ ಹೂಮಾಲೆಯನ್ನು ಪುತ್ರನ ಸಮೇತ ಉದಯನನಿಗೆ ಕೊಟ್ಟು ಶಾಪಗ್ರಸ್ತಳಾಗಿದ್ದ ವಿದ್ಯಾಧರಿ ಅಥವಾ ಲಲಿತೆ ಮಾಯವಾದಳು. ಉದಯನನು ಪುತ್ರನ ಸಮೇತ ಜಮದಗ್ನಿ ಆಶ್ರಮದಲ್ಲಿದ್ದ ತಾಯಿಯನ್ನು ಕೂಡಿಕೊಂಡ. ಹೀಗಿರುತ್ತಾ ಉದಯನು ಬೇಡನಿಗೆ ಕೊಟ್ಟಿದ್ದ ಕಡಗವನ್ನು ನೋಡಿದ ಸಹಸ್ರಾನೀಕ ತನ್ನ ಪತ್ನಿ ಜಮದಗ್ನಿ ಆಶ್ರಮದಲ್ಲಿರುವುದನ್ನು ತಿಳಿದು ಪತ್ನಿ ಮತ್ತು ಪುತ್ರ ಮೊಮ್ಮಗನನ್ನು ಕೂಡಿದ" ಎಂದು ಸ್ಕಂದ ಹಾಗೂ ಬ್ರಹ್ಮವೈವರ್ತ ಪುರಾಣಗಳಲ್ಲಿ ರೋಚಕವಾಗಿ ಬರುತ್ತದೆ.

ಹೀಗೇ ಉದಯನ ಎನ್ನುವ ಹೆಸರು ಪುರಾಣಗಳಿಂದ ಹಿಡಿದು ಇತಿಹಾಸದುದ್ದಕ್ಕೂ ಬರುತ್ತದೆ. ವತ್ಸರಾಜನನ್ನೂ ಉದಯನ ಎಂದು ಕರೆಯಲಾಗಿದೆ. ಕ್ರಿಸ್ತ ಪೂರ್ವದಲ್ಲಿ 6ನೆಯ ಶತಮಾನದಲ್ಲಿ ಯಮುನಾ ತೀರದಲ್ಲಿದ್ದ ವತ್ಸದೇಶದ ಅರಸರಾಗಿ ಆಳಿದವರಲ್ಲಿ ಅತಿ ಪ್ರಸಿದ್ಧನಾಗಿದ್ದನಂತೆ. ಕೌಶಾಂಬಿ ಈತನ ರಾಜಧಾನಿಯಾಗಿತ್ತು. ಆತನಿಗೆ ಸಂಬಂಧಿಸಿದ ಅನೇಕ ದಂತಕಥೆಗಳು ಗುಪ್ತರ ಕಾಲದಲ್ಲೂ ಹಾಗೂ ಹರ್ಷವರ್ಧನನ ಕಾಲದಲ್ಲೂ ಬಹಳ ಪ್ರಚಲಿತವಾಗಿದ್ದವು. ಕಥಾಸರಿತ್ಸಾಗರದಲ್ಲಿ ಇವನನ್ನು ಕುರಿತ ಅನೇಕ ಕಥೆಗಳಿವೆ. ಭಾಸನ ಪ್ರತಿಜ್ಞಾ ಯೌಗಂಧರಾಯಣ ಮತ್ತು ಸ್ವಪ್ನವಾಸವದತ್ತ, ಮತ್ತು ಹರ್ಷನ ರತ್ನಾವಳಿ, ಪ್ರಿಯದರ್ಶಿಕಾ ನಾಟಕಗಳಿಗೆ ಉದಯನನೇ ನಾಯಕ. ಪ್ರದ್ಯೋತನ ಮಗಳಾದ ವಾಸವದತ್ತೆಯನ್ನು ಉದಯನ ಅಪಹರಿಸಿದ ವಿಷಯ ಪ್ರತಿಜ್ಞಾ ಯೌಗಂಧರಾಯಣದಲ್ಲಿ ಬಂದರೆ ಸ್ವಪ್ನವಾಸವದತ್ತಾದಲ್ಲಿ ಪದ್ಮಾವತಿಯನ್ನು ಈತ ಮದುವೆಯಾದ ಕಥೆ ಬರುತ್ತದೆ. ಹರ್ಷನ ಎರಡು ನಾಟಕಗಳ ಹೆಸರುಗಳಲ್ಲೇ ಉದಯನನನ್ನು ವರಿಸಿದ ಇಬ್ಬರು ನಾಯಕಿಯರ ನಾಮಧೇಯಗಳಿವೆ.
ಸಂಸ್ಕೃತ ನಾಟಕಕಾರ ಭಾಸ ಮತ್ತು ಹರ್ಷ ಇವರಿಬ್ಬರ ನಾಟಕಗಳು ಉದಯನನ ಹೆಸರನ್ನು ಶಾಶ್ವತವನ್ನಾಗಿ ಮಾಡಿವೆ. ಪಾಳೀ ಗ್ರಂಥಗಳಲ್ಲೂ ಉದಯನನಿಗೆ ಸಂಬಂಧಿಸಿದ ವಿಚಾರಗಳು ಕಂಡುಬರುತ್ತವೆ. ಬುದ್ಧ ನಿರ್ವಾಣದ ವೇಳೆಗೆ ಇನ್ನೂ ಯೌವ್ವನಾವಸ್ಥೆಯಲ್ಲಿದ್ದ ಉದಯನ ಬುದ್ಧನನ್ನಾಗಲೀ ಬೌದ್ಧಮತವನ್ನಾಗಲೀ ಪುರಸ್ಕರಿಸಲಿಲ್ಲ. ಬುದ್ಧನ ಮರಣಾನಂತರ ಉದಯನ ಪ್ರಮುಖ ಬೌದ್ಧ ಭಿಕ್ಷುಗಳಲ್ಲೊಬ್ಬನಾದ ಪಿಂಡೋಲ ಭರದ್ವಾಜ ಎಂಬಾತನನ್ನು ಹಿಂಸೆಗೆ ಗುರಿಮಾಡಿದ ಎಂದು ತಿಳಿದು ಬರುತ್ತದೆ ಆದರೆ ಕೊನೆಗೆ ಪಿಂಡೋಲನೊಡನೆ ನಡೆದ ಸಂಭಾಷಣೆಯಿಂದ ಸಂಪ್ರೀತನಾಗಿ ಬೌದ್ಧಮತಾವಲಂಬಿಯಾದ ಎಂದು ಹೇಲಲಾಗಿದೆ. ಉದಯನನಿಗೆ ಬೋಧಿ ಎಂಬ ಮಗನಿದ್ದ.
ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧನಾಗಿದ್ದ ಹರ್ಷವರ್ಧನ ಮಹಾರಾಜನೇ 'ರತ್ನಾವಳಿ' ಯನ್ನು ರಚಿಸಿರುವ ಶ್ರೀಹರ್ಷ ಕವಿ ಎಂದು ಹೇಳಲಾಗುತ್ತದೆ. ಶ್ರೀಹರ್ಷನ ಆಸ್ಥಾನದಲ್ಲಿ 'ಧಾವಕ' ನೆ೦ಬ ಕವಿ ಇದ್ದ. ಅವನೇ ಈ 'ರತ್ನಾವಳಿ' ನಾಟಕವನ್ನು ರಚಿಸಿ ಶ್ರೀಹರ್ಷನ ಹೆಸರಿನಲ್ಲಿ ಪ್ರಸಿದ್ಧಗೊಳಿಸಿದನೆನ್ನುವ ವಿದ್ವದ್ವಲಯದ ಅಭಿಪ್ರಾಯ ಇನ್ನೂ ಜೀವಂತವಾಗಿದೆ. ಆದರೆ ಸ್ವತಃ ಶ್ರೀಹರ್ಷನು ಸ್ವತಃ ಕವಿಯೂ, ವಿದ್ವಾ೦ಸನೂ ಆಗಿದ್ದನೆ೦ದು ಬಾಣನ 'ಹರ್ಷಚರಿತೆ' ಯಿಂದ ತಿಳಿದು ಬರುತ್ತದೆ.
'ಇತ್ಸಿ೦ಗ್' ಎ೦ಬ ಚೀನೀ ಯಾತ್ರಿಕ ೭ನೇ ಶತಮಾನದ ಪೂರ್ವ ಭಾಗದಲ್ಲಿ ಹರ್ಷವರ್ಧನ ಮಹಾರಾಜನ ಆಸ್ಥನಕ್ಕಾಗಮಿಸಿದನು. "ಅಹಿ೦ಸಾಧರ್ಮ, ಸ೦ಗೀತ, ನೃತ್ಯಾಭಿನಯ ಗಳನ್ನು ತಿಳಿದಿದ್ದ ಹರ್ಷನು ನಾಟಕಗಳಿ೦ದ ಪ್ರಸಿದ್ಧಿಗೆ ಬ೦ದನು" ಎಂದು ತನ್ನ ಗ್ರ೦ಥದಲ್ಲಿ ಉಲ್ಲೇಖಿಸಿದ್ದಾನೆ. ಈ ಎಲ್ಲ ವಿಷಯಗಳನ್ನು ಶ್ರೀಹರ್ಷನ 'ನಾಗಾನ೦ದ' ನಾಟಕವೇ ಪುಷ್ಠೀಕರಿಸುತ್ತದೆ. ಆದುದರಿ೦ದ ಶ್ರೀಹರ್ಷದೇವನೇ ಮೂರು ನಾಟಕಗಳ ಕರ್ತೃವೆ೦ಬುದು ನಿರ್ವಿವಾದವಾದುದು.
ಉತ್ತರಭಾರತದ ಉತ್ತರಾಪಥದ ಸಾರ್ವಭೌಮ ಪದವಿಗೇರಿದ ಹರ್ಷವರ್ಧನ ಮಹಾರಾಜನು ಪ್ರಭಾಕರವರ್ಧನ ಮಹಾರಾಜನ ಮಗ. ರಾಜ್ಯವರ್ಧನ, ರಾಜ್ಯಶ್ರೀಯರ ಸಹೋದರ. ಮೊದಲಿಗೆ ಸ್ಥಾಣವಿಶ್ವರ ಹಾಗೂ ನ೦ತರದಲ್ಲಿ ಕನ್ಯಕುಬ್ಜರನ್ನು ಅಲ೦ಕರಿಸಿದನು. ರಾಜ್ಯವರ್ಧನನ ಮರಣಾನ೦ತರ ಶತ್ರುಗಳನ್ನು ಗೆದ್ದು ಹರ್ಷನು ಸಾರ್ವಭೌಮನಾದನು. 'ಪ್ರಿಯದರ್ಶಿಕಾ', 'ರತ್ನಾವಳಿ' ಹಾಗೂ 'ನಾಗಾನ೦ದ' ಗಳೆ೦ಬ ಮೂರು ನಾಟಕಗಳು ಆತನ ಕೃತಿಗಳೆ೦ದು ತಿಳಿಯಲಾಗಿದೆ. ಅವುಗಳಲ್ಲಿ ರತ್ನಾವಳಿ ನಾಟಕವು ಕಾವ್ಯ ಸೌ೦ದರ್ಯ, ನಾಟಕದ ಸ೦ವಿಧಾನ ಚಾತುರ್ಯದಿ೦ದಲೂ, ಮನೋರ೦ಜನೀಯವಾದ ಕಥೆಯ ಪ್ರಭಾವದಿ೦ದಲೂ, ಮನೋಹರವಾದ ಶೈಲಿ ಹಾಗು ಮಾಧುರ್ಯಗಳಿ೦ದ ವಿದ್ವಾಂಸರ ಮನಸನ್ನಷ್ಟೇ ಅಲ್ಲದೇ ಸಾಮಾನ್ಯ ಮಾನವರಿಗೂ ಆನ೦ದದಾಯಕವಾಗಿದೆ ಎಂದು ಪ್ರಸಿದ್ಧಿಯನ್ನು ಹೊಂದಿದೆ.( ಶ್ರೀ ಹರ್ಷನ ಕುರಿತು ಈಗಾಗಲೇ ಬರೆದಿರುವುದರಿಂದ ಅದನ್ನು ಪುನಃ ಬರೆಯುವುದು ಚರ್ವಿತಚರ್ವಣವಾಗಬಹುದು)

No comments:

Post a Comment