Search This Blog

Monday 12 March 2018

ಕೌಮುದೀ ಮಹೋತ್ಸವದ ವಿಜಯ ಭಟ್ಟಾರಿಕಾ ಕರ್ನಾಟಕದ ಮೊದಲ ಕವಯಿತ್ರಿ ??


ಕವೇರಭಿಪ್ರಾಯಮಶಬ್ದ ಗೋಚರಮ್|
ಸ್ಫುರಂತಮಾರ್ದ್ರೇಷು ಪದೇಷು ಕೋಮಲಮ್||
ಸ್ಫುರದ್ಭಿರಂಗೈಃ ಕೃತರೋಮವಿಕ್ರಿಯೈಃ|
ಜನಸ್ಯ ತೂಷ್ಣೀಂ ಭವತೋಯಮಂಜಲಿಃ||
ಸುಂದರವರ್ಮ ಎನ್ನುವವನು ಪಾಟಲೀಪುತ್ರವನ್ನು ಆಳುತ್ತಿದ್ದ ರಾಜ. ಆತ ಒಂದು ಮಗುವನ್ನು ಸಾಕುತ್ತಾನೆ. ಆ ಸಾಕುಮಗನೇ ಚಂಡಸೇನ ಎನ್ನುವವನು. ಇವನು ತನ್ನ ತಂದೆಯ ವಿರುದ್ಧವೇ ತಿರುಗಿಬಿದ್ದು ಲಿಚ್ಛವಿಗಳ ಸೈನ್ಯದ ಸಹಾಯದಿಂದ ಪಾಟಲೀಪುತ್ರಕ್ಕೆ ಮುತ್ತಿಗೆ ಹಾಕುತ್ತಾನೆ. ಯುದ್ಧದಲ್ಲಿ ಸುಂದರವರ್ಮ ಸೋತು ಸಾಯುತ್ತಾನೆ. ಆಗ ಸುಂದರ ವರ್ಮನ ರಾಣಿಯರು ಸುಂದರ ವರ್ಮನ ಚಿತೆಗೆ ಹಾರಿ ಸಜೀವ ದಹನವಾಗಿ ಸತಿಯರಾಗುತ್ತಾರೆ. ಸುಂದರವರ್ಮನ ಮಗ ಕಲ್ಯಾಣವರ್ಮ ಮಂತ್ರಿ ಮಂತ್ರಗುಪ್ತನೊಂದಿಗೆ ಕಾಡಿಗೆ ಓಡುತ್ತಾನೆ. ಮಂತ್ರಿ ಉಪಾಯದಿಂದ ಅಲ್ಲಿಯ ಶಬರ ಪುಲಿಂದರನ್ನು ಒಲಿಸಿಕೊಂಡು ಅವರು ದಂಗೆಯೇಳುವಂತೆ ಮಾಡುತ್ತಾನೆ. ಅವರ ದಂಗೆಯನ್ನು ಅಡಗಿಸಲು ಚಂಡಸೇನ ಹೋದಾಗ ಈ ಕಡೆಯಿಂದ ಪಾಟಲೀಪುತ್ರದ ಜನ ದಂಗೆಯೇಳುವಂತೆಯೂ ಮಾಡುತ್ತಾನೆ. ಕದನದಲ್ಲಿ ಚಂಡಸೇನ ಸತ್ತು ಅವನ ವಂಶ ನಿರ್ಮೂಲವಾಗುತ್ತದೆ. ಕಲ್ಯಾಣವರ್ಮ ರಾಜನಾಗುತ್ತಾನೆ; ಮಥುರೆಯ ರಾಜಕುಮಾರಿಯಾದ ಕೀರ್ತಿಸೇನೆಯನ್ನು ಮದುವೆಯಾಗುತ್ತಾನೆ. ಇದು ಕೌಮುದೀ ಮಹೋತ್ಸವ ಎನ್ನುವ ಐದು ಅಂಕಗಳುಳ್ಳ ಐತಿಹಾಸಿಕ ನಾಟಕವೊಂದರ ಸಂಕ್ಷಿಪ್ತ ಕಥೆ.
ಹೌದು ಈ ಕಥೆಯನ್ನು ಗಮನಿಸಿದಾಗ ಇದು ನಂದರ ಕಥೆಯನ್ನು ಹೋಲುತ್ತದೆ ಅದನ್ನೇ ಖ್ಯಾತ ಇತಿಹಾಸಕಾರ ಜೈಸ್ವಾಲ್ ಕೂಡಾ ಹೇಳುತ್ತಾರೆ. ಚಂಡಸೇನನೆಂದರೆ ಗುಪ್ತರಾಜನಾದ ಮೊದಲನೆಯ ಚಂದ್ರಗುಪ್ತನೆಂದೇ ಅವರು ತಿಳಿದು ಅವನ ಮಗಧ ವಿಜಯವನ್ನು ನಾಟಕ ಚಿತ್ರಿಸುತ್ತದೆಂದು ಹೇಳುತ್ತಾರೆ. ಎಡ್ವರ್ಡ್ ಪೈರ್ಸ್ ಹೇಳುವಂತೆ ಸುಂದರವರ್ಮ ಹಾಗೂ ಕಲ್ಯಾಣವರ್ಮರನ್ನು ಮೌಖರಿವಂಶದ ರಾಜರೆಂದು ನಿರೂಪಿಸುತ್ತಾರೆ. ಆದರೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿರುವುದರಿಂದ ಯಾವುದಕ್ಕೂ ಸಮನ್ವಯತೆ ಸಿಗುವುದಿಲ್ಲ.
ಬಾದಾಮಿ ಚಳುಕ್ಯರ ಕಾಲದಲ್ಲಿ ಆಗಿಹೋದ ಅನೇಕ ಸಂಸ್ಕೃತ ಕವಿಗಳಲ್ಲಿ ಮಂಗಲೇಶನ ಮಹಾಕೂಟದ ಸ್ತಂಭ ಶಾಸನದ ಕರ್ತೃ ದಾಟ ಒಬ್ಬನಾದರೆ ಆಮೇಲೆ ಐಹೊಳೆಯ ಮೇಗುಟಿ ಜಿನದೇವಾಲಯದಲ್ಲಿ ಶಾಸನ ಬರೆದ ರವಿಕೀರ್ತಿ ಇನ್ನೊಬ್ಬ ಅತ್ಯಂತ ಪ್ರಮುಖ ಸಂಸ್ಕೃತ ಕವಿ. ಸುಮಾರು ೬೮೫ರಲ್ಲಿ ನಾಸಿಕ್ ತಾಮ್ರಪಟದಲ್ಲಿ ಉಲ್ಲೇಖಿಸಲಾದ ಶಿವ ಭಟ್ಟ ಎನ್ನುವ ಕವಿ “ಹರಪಾರ್ವತೀಯ” ನಾಟಕ ಬರೆದಾತ. ಇನ್ನು ಎಂಟನೆ ಶತಮಾನಕ್ಕೆ ಬಂದರೆ ಕಪ್ಪೆ ಅರಭಟ್ಟನಶಾಸನ ಹೀಗೆ ಕವಿಗಳ ದಂಡು ಕಾಣಿಸಿಕೊಳ್ಳುತ್ತದೆ. ಇವರನ್ನಲ್ಲದೇ ಸಮಕಾಲೀನ ರಾಜ ವಂಶದವಿಜ್ಜಿಕೆ ಅಥವಾ ವಿಜಯ ಭಟ್ಟಾರಿಕಾ, ವಿಜಯಾಂಬಿಕಾ ಎನ್ನುವ ಹೆಸರುಗಳಿಂದ ಗುರುತಿಸಿಕೊಂಡಿದ್ದ ಈಕೆ ಬಾದಾಮಿ ಚಾಲುಕ್ಯರ ಎರಡನೇ ಪೊಲೆಕೇಶಿಯ ಮಗ ಚಂದ್ರಾದಿತ್ಯನ ಮಡದಿ. ಈಕೆ ಸು. 7ನೆಯ ಶತಮಾನದವಳು ಎಂದು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ನೇರೂರ್ ತಾಮ್ರಪಟದಿಂದ ತಿಳಿದು ಬರುತ್ತದೆ. ಈಕೆ ಹೆಸರಾಂತ ಸಂಸ್ಕೃತ ಕವಯಿತ್ರಿ.
ಸುಮಾರು ಕ್ರಿ . 855ರಲ್ಲಿದ್ದ ಕಾಶ್ಮೀರದ ಅರಸ ಆವಂತಿವರ್ಮನ ಸಮಕಾಲೀನ ಭಟ್ಟಕಲ್ಲಟನ ಮಗ ಮುಕುಲಭಟ್ಟನು ತಾನು ರಚಿಸಿದ "ಅಭಿಧಾವೃತ್ತಿ ಮಾತೃಕ" ಎಂಬ ವ್ಯಾಕರಣ ಗ್ರಂಥದಲ್ಲಿ ವಿಜಯ ಭಟ್ಟಾರಿಕೆಯದು ಎಂದು ಹೇಳಬಹುದಾದ ಒಂದು ಶ್ಲೋಕವನ್ನು ಉದಾಹರಣೆಗಾಗಿ ಆಯ್ದುಕೊಂಡಿದ್ದಾನೆ. ವಿಜಯ ಭಟ್ಟಾರಿಕೆಯದೇ ಎಂದು ಪ್ರಸಿದ್ಧವಾದ ಮತ್ತೊಂದು ಶ್ಲೋಕದಿಂದ ಈಕೆ ಪ್ರಸಿದ್ಧ ಸಂಸ್ಕೃತ ಆಲಂಕಾರಿಕ ಮತ್ತು ದಶಕುಮಾರ ಚರಿತೆಯ ದಂಡಿಗಿಂತ (7ನೆಯ ಶತಮಾನ) ನಂತರದವಳೆಂಬುದು ನಿರ್ವಿವಾದ. ಹತ್ತನೆಯ ಶತಮಾನದಲ್ಲಿದ್ದ ಕಾವ್ಯಮೀಮಾಂಸದ ಕರ್ತೃ ರಾಜಶೇಖರ ಈಕೆಯ ಕವಿತಾಶೈಲಿಯನ್ನು "ವೈದರ್ಭೀಶೈಲಿ"ಯೆಂದು ಹೊಗಳಿದ್ದಾನೆ.
ಕೌಮುದೀ ಮಹೋತ್ಸವ ನಾಟಕದಲ್ಲಿ ಉಳಿದೆಲ್ಲವುಗಳಂತೇ ರಾಜ, ಋತು, ರಸಿಕತೆ, ರಾಸಕ್ರೀಡೆ ಮುಂತಾದ ವರ್ಣನೆಗಳೂ ಬಂದಿದ್ದು ನವರಸಗಳಿಂದ ಕೂಡಿದಂತಿದೆ. ನಾಟಕದಲ್ಲಿ ಭಾಸಕವಿ ತನ್ನ ನಾಟಕದಲ್ಲಿ ಉಪಯೋಗಿಸಿದ ಸ್ಥಾಪನಾ ಎಂಬುದು ಪ್ರಸ್ತಾವನಾ ಬದಲು ಬಂದಿದೆ. ವಿಜ ಭಟ್ಟಾರಿಕೆಯದ್ದೇ ಎನ್ನುವ ಸುಮಾರು 30 ರಿಂದ 40 ಬಿಡಿ ಪದ್ಯಗಳನ್ನು ಪ್ರಾಯಶಃ ಎಲ್ಲ ಪ್ರಸಿದ್ಧ ಆಲಂಕಾರಿಕರೂ ಉದಾಹರಿಸಿದ್ದಾರೆ. ಪದ್ಯಗಳಿಂದ ಪದ್ಯಕರ್ತೃವನ್ನು ಅಳೆಯುವುದಾದರೆ ಈಕೆ ವಿಲಾಸಪ್ರಿಯಳಂತೆ ವಿನೋದ ಪ್ರಿಯಳೂ ಪ್ರತಿಭಾನ್ವಿತಳೂ ಆಗಿದ್ದಳು. ದಂಡಿಯು ತನ್ನನ್ನು ನೋಡಿದ್ದಲ್ಲಿ ಸರಸ್ವತಿಯನ್ನು "ಸರ್ವಶುಕ್ಲ"ಳೆನ್ನುತ್ತಿರಲಿಲ್ಲ ಎನ್ನುವಷ್ಟರಮಟ್ಟಿನ ಸ್ವಾಭಿಮಾನ ಇವಳದು. ವಿಜ್ಜಿಕೆ ಉತ್ತಮ ಕವಯಿತ್ರಿ. ಕುಟ್ಟುವುದು, ಕುಣಿಯುವುದು, ಹಾಡುವುದು ಮುಂತಾದ ನಿತ್ಯಜೀನವದ ಭೋಗವಿಲಾಸಗಳೇ ಈಕೆಯ ಕಾವ್ಯವಸ್ತುಗಳು.
ಕೌಮುದೀ ಮಹೋತ್ಸವದ ಕುರಿತು ಹೇಳುವುದಾದರೆ :
ಇದು ಐದೈದು ಅಂಕಗಳ ಸಂಸ್ಕೃತನಾಟಕ. ಮಲಯಾಳದಲ್ಲಿ ದೊರಕಿದ ಇದರ ಒಂದೇ ಒಂದು ಹಸ್ತಪ್ರತಿಯನ್ನು ಮದ್ರಾಸಿನ ರಾಮಕೃಷ್ಣ ಕವಿ ಮತ್ತು ರಾಮನಾಥಶಾಸ್ತ್ರೀ ಎಂಬ ಸಂಪಾದಕರು 1929ರಲ್ಲಿ ಮೊದಲಿಗೆ ಮುದ್ರಿಸಿದರು. ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ದೃಷ್ಟಿಗಳಿಂದ ಇದಕ್ಕೆ ಹೆಚ್ಚಿನ ಮಹತ್ವವಿದೆ. ಮೊದಲನೆಯದಾಗಿ, ಇದರ ಕರ್ತೃ ಒಬ್ಬ ಕವಯಿತ್ರಿ. ಆ ಕಾಲದಲ್ಲಿ ಕವಯಿತ್ರಿಯೊಬ್ಬಳು ರಾಜಮನೆತನದಿಂದ ಸಿಕ್ಕಿದ್ದು ಅಪರೂಪಗಳಲ್ಲಿ ಅಪರೂಪ ಎಂದರೆ ತಪ್ಪಾಗುವುದಿಲ್ಲ. ಈ ನಾಟಕದಲ್ಲಿ `. . . .ಯಾ ನಿಬದ್ಧಂ' ಎಂಬ ತೃಟಿತವಾಗಿರುವ ಪಾಠವನ್ನು ವಿಜ್ಜಿಕಯಾ ಎಂದು ಊಹಿಸಲಾಗಿದೆ. ಕ್ರಿ..7ನೆಯ ಶತಮಾನದ ಚಳುಕ್ಯ ಚಕ್ರವರ್ತಿ ಇಮ್ಮಡಿ ಪೊಲೆಕೇಶಿಯ ಸೊಸೆಯೂ ಚಂದ್ರಾದಿತ್ಯನ ರಾಣಿಯೂ ಆದ ವಿಜ್ಜಿಕೆ ಈಕೆಯೇ ಆಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧಳು. ದಂಡಿಯನ್ನು ಹಾಸ್ಯಮಾಡಿ ತನ್ನ ಸ್ವಾಭಿಮಾನವನ್ನು ಹೆಚ್ಚಿಸಿಕೊಂಡಿದ್ದಾಳೆ. ಈ ಹೆಸರಿನ ಕುರಿತಾಗಿ ಬೇರೆ ಬೇರೆ ಅಭಿಪ್ರಾಯಗಳ್:ಇದ್ದರೂ ಕವಯಿತ್ರಿ ಎನ್ನುವುದು ನಿರ್ವಿವಾದ.
ವಿಜ್ಜಿಕೆಯೇ ಹೇಳಿದ ಮಾತಿದು
ನಿಲೋತ್ಪಲದಲಶ್ಯಾಮಾಂ ವಿಜ್ಜಿಕಾ ಮಾಮಜಾನತಾ |
ವೈಥೈವ ದಂಡಿನಾ ಪ್ರೋಸರ್ವಶುಕ್ಲಾ ಸರಸ್ವತೀ||
ಶ್ಯಾಮಲವರ್ಣದ ವಿಜ್ಜಿಕೆಯನ್ನರಿಯದೇ, ದಂಡಿಯ ಸರಸ್ವತಿಯು ಗೌರವರ್ಣದವಳೆಂದು ಸುಮ್ಮನೆ ವರ್ಣಿಸಿದ್ದಾನೆ‘- ಅಂದರೆ ತಾನೇ ಸರಸ್ವತಿಯ ಅವತಾರವೆಂದು ಹೇಳಿಕೊಂಡಿದ್ದಾಳೆ.
ಎರಡನೆಯದಾಗಿ ಈಕೆಗೆ ಮತ್ತು ಈಕೆಯ ನಾಟಕಕ್ಕೆ ಮಹತ್ವ ಬರುವುದು ಸಂಸ್ಕೃತದ ಕೆಲವೇ ಐತಿಹಾಸಿಕ ನಾಟಕಗಳಲ್ಲಿ ಒಂದಾಗಿದೆ.
ಕೌಮುದಿ ಮಹೋತ್ಸವವೆಂಬ ನಾಟಕವನ್ನು ಬರೆದಿರುವಳೆಂಬ ಖ್ಯಾತಿಯಿರುವ ವಿಜಯಾಂಬಿಕೆ (ವಿಜ್ಜಿಕೆ) ಬಾದಾಮಿ ಚಳುಕ್ಯರ ಕಾಲದವಳೆನ್ನುವುದು ದೃಢಪಡುತ್ತದೆ.
ಹತ್ತನೆಯ ಶತಮಾನದ ರಾಜಶೇಖರನು ಹೇಳುವಂತೆ
ಸರಸ್ವತೀ ಕರ್ಣಾಟೀ "ವಿಜಯಾಂಕಾ" ಜಯತ್ಯಸೌ |
ಯಾ ವೈದರ್ಭಗಿರಾಂ ವಾಸಃ ಕಾಲಿದಾಸಾದನಂತರಮ್||
ಕಾಳಿದಾಸನ ನಂತರ ವೈದರ್ಭೀ ಶೈಲಿಯಲ್ಲಿ ಬರೆದ ಕರ್ಣಾಟ ದೇಶದ ವಿಜಯಾ ಸರಸ್ವತಿಯಂತೆ ರಾಜಿಸುತ್ತಾಳೆಎಂದು ವಿಜಯಿಕೆಯನ್ನು ವರ್ಣಿಸಿದ್ದಾನೆ. ಇವಳು ಕರ್ಣಾಟ ದೇಶದವಳೆಂಬುದು ಇದರಿಂದ ಸಿದ್ಧವಾಗುತ್ತದೆ ಮತ್ತು ರಾಜಶೇಖರನಿಗಿಂತ ಪ್ರಾಚೀನಳೆಂಬುದು ಇದರಿಂದ ಕಂಡುಬರುತ್ತದೆ.
ದಂಡಿಯ ಕಾಲವು ಏಳನೆಯ ಶತಮಾನವಿರುವುದರಿಂದ ಇವಳು ಆ ತರುವಾಯದವಳಿರಬೇಕು.
ಏಕೋsಭೂತ್ ನಲಿನಾತ್ ತತಶ್ಚಪುಲಿನಾತ್ ಪದ್ಮೀಕೃತಶ್ಚಾಪರ|
ತೇ ಸರ್ವೆ ಭವಂತಿ ಕವಯಸ್ತೇಭ್ಯೋ ನಮಸ್ಕುರ್ಮಹೇ||
ಆರ್ವಾಂಚೋ ಯದಿ ಗದ್ಯಪದ್ಯರಚನೈಶ್ಚೇಶ್ಚಮತ್ಕುರ್ವತೆ|
ತೇಷಾಂ ಮೂರ್ಧ್ನಿ ದದಾಮಿ ವಾಮಚರಣಂ ಕರ್ಣಾಟರಾಜಪ್ರಿಯಾ||
ಕಮಲದಿಂದ ಹುಟ್ಟಿದ ಬ್ರಹ್ಮ, ಮರಳಿನಿಂದ ಹುಟ್ಟಿದ ವ್ಯಾಸ, ಹುತ್ತದಿಂದ ಹುಟ್ಟಿದ ವಾಲ್ಮೀಕಿ, ಇವರೇ ಕವಿಗಳು  ಅವರಿಗೆ ನಮ್ಮ ವಂದನೆ; ಉಳಿದವರು ಗದ್ಯ ಪದ್ಯ ರಚನಾ ಚಾತುರ್ಯವನ್ನು ತೋರಿಸಹೋದರೆ, ಕರ್ಣಾಟ ರಾಜಪ್ರಿಯೆಯಾದ ನಾನು ಅವರ ತಲೆಯ ಮೇಲೆ ಎಡಗಾಲನ್ನಿರಿಸುತ್ತೇನೆ.ಎಂದು ಅತ್ಯಂತ ಆತ್ಮ ವಿಶ್ವಾಸದಿಂದ ನುಡಿಯುತ್ತಾಳೆ.
ಎಲ್ಲವನ್ನೂ ಗಮನಿಸಿದರೆ ದಂಡಿಯ ಏಳನೇ ಶತಮಾನ ಮತ್ತು ರಾಜಶೇಖರನ ಹತ್ತನೆಯ ಶತಮಾನಗಳ ಮಧ್ಯದಲ್ಲಿ ವಿಜಯ ಭಟ್ಟಾರಿಕಾ ಇದ್ದಿರಬೇಕೆಂಬುದು ಸ್ಪಷ್ಟವಾಗುತ್ತದೆ. ಈಕೆಯಿಂದ ರಚಿತವಾದ ಪದ್ಯಗಳನ್ನು ಲಾಕ್ಷಣಿಕರಾದ ನೇ ಶತಮಾನದ ಮುಕುಲಭಟ್ಟ, ಮಮ್ಮಟ, ಭೋಜ, ವಿಶ್ವನಾಥ ಮೊದಲಾದವರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿರುವರು.
ಕೌಮುದೀ ಮಹೋತ್ಸವದ ಒಂದು ಶ್ಲೋಕದ ಅಳಿದುಳಿದ ಭಾಗದಲ್ಲಿ, ‘. . . . ಕ ಯಾನಿಬದ್ದಂಎಂಬುದರ ಆಧಾರದಿಂದ ಹಾಗೂಜಯಂತಿ ಪ್ರಥಮಂ ವಿಜಯಾಎಂಬ ನಾಟಕ ವಾಕ್ಯದಿಂದ ಎಂಟನೆಯ ಶತಮಾನದ ನಾಟಕ ಎಂದು ನಿರ್ಧರಿಸಬಹುದು.
ಕರ್ನಾಟಕದಲ್ಲಿ ಆಳಿದ ರಾಜಮನೆತನಗಳಲ್ಲಿ ಮೊದಲನೆಯದಾಗಿ ಪರಿಗಣಿಸುವುದಾದರೆ ಚಲುಕ್ಯ ವಂಶದ ವಿಷ್ಣುವರ್ಧನನ ತಾಯಿಯ ಹೆಸರು, ವಿಜಯಾದಿತ್ಯನ ಹೆಂಡತಿಯ ಹೆಸರು ವಿಜಯಾ ಹಾಗೂ ಪೂರ್ವ ಚಾಲುಕ್ಯ ಮನೆತನದಲ್ಲಿ ವಿಜಯಾದಿತ್ಯನೆಂಬ ವನ ಹೆಂಡತಿ ವಿಜಯಮಹಾದೇವಿ. ಬಾದಾಮಿಯ ಚಲುಕ್ಯ ಮನೆತನದಲ್ಲಿ ಎರಡನೆಯ ಪೊಲೆಕೇಶಿಯ ಸೊಸೆ, ಚಂದ್ರಾದಿತ್ಯನ ಹೆಂಡತಿ ವಿಜಯಾ ಎನ್ನುವುದಾಗಿ ನೆರೂರು ಶಾಸನದಿಂದ ತಿಳಿದು ಬರುತ್ತದೆ.
ವಿಜಯ ಭಟ್ಟಾರಿಕಾ ತನ್ನನ್ನು ತಾನು "ಕರ್ಣಾಟ ರಾಜ ಪ್ರಿಯಾ" ಎಂದು ಕರೆದುಕೊಳ್ಳುತ್ತಾಳೆ.
ಶಾಸನದಲ್ಲಿ ಇವಳು ಕಲಿಕಾಲಪತಿಕ್ಷಭೂತಾಎಂದು ತನ್ನ ಧಾರ್ಮಿಕ ಮನೋಭಾವನೆಯಿಂದಾ ಹೊಗಳಲ್ಪಟ್ಟಿದ್ದಾಳೆ. ಡಾ.ಫ್ಲೀಟ್ ಅವರು ಹೇಳುವಂತೆ ಈಕೆ ಪತಿಯ ಮರಣಾನಂತರ ರಾಜ್ಯಭಾರ ಮಾಡಿದ್ದಾಳೆ.
ಕೌಮುದೀ ಮಹೋತ್ಸವಐದಂಕರ ನಾಟಕ: ಭಾಸ-ಕಾಲಿದಾಸರ ಪ್ರಭಾವವು ನಾಟಕದ ಮೇಲೆ ಬಹಳವಾದಂತಿದೆ. ನಾಟಕದ ಮೇಲೆ ರತ್ನಾವಳಿ ಪ್ರಭಾವವೂ ಇದೆ.
ಕೌಮುದೀ ಮಹೋತ್ಸವದ ಕಲ್ಪನೆ ಮುದ್ರಾರಾಕ್ಷಸದಿಂದ ಬಂದಂತಿದೆ. ಒಟ್ಟಿನಲ್ಲಿ ಆ ಕಾಲದಲ್ಲಿ ಲಭ್ಯವಿದ್ದ ನಾಟಕಗಳಲ್ಲಿಯ ಎಲ್ಲ ಒಳ್ಳೆಯ ಅಂಶಗಳನ್ನೂ ತೆಗೆದುಕೊಂಡು ನಾಟಕವನ್ನು ರಸಭರಿತವನ್ನಾಗಿಸಿದ್ದಾಳೆ. ಅದೂ ಅಲ್ಲದೇ ತನ್ನದೇ ಆದ ಪ್ರತಿಭೆಯ ಮೆರಗನ್ನೂ ಕೊಟ್ಟು, ನಾಟಕಕ್ಕೆ ಹೊಸ ಕಳೆಯನ್ನು ತಂದಿದ್ದಾಳೆ.
ನಾಟಕದ ನಿಯಮಗಳನ್ನೆಲ್ಲ ಕೌಮುದೀ ಮಹೋತ್ವದಲ್ಲಿ ಅನುಸರಿಸಲಾಗಿದೆ. ಪಾತ್ರಗಳ ರಚನೆ, ರಸನಿರೂಪಣೆ ಆಕರ್ಷಕವಾಗಿದೆ. ಅನುಭವದ ಆಣಿಮುತ್ತುಗಳು ಅಲ್ಲಲ್ಲಿ ಇವೆ. ನಾಟಕವು ಸಂಪ್ರದಾಯವನ್ನನುಸರಿಸಿದ್ದರೂ ನಾಟಕದ ಕೊನೆ ಮಾತ್ರ ಸಂಪ್ರದಾಯಕ್ಕೆ ಒಳಗಾಗಿಲ್ಲ.
ನಾಟಕದ ಜೊತೆಗೆ ವಿಜ್ಜಿಕೆಯವೆಂದು ಹೇಳಲ್ಪಡುವ ಮೂವತ್ತು ಬಿಡಿ ಪದ್ಯಗಳು ಅಲಂಕಾರವಿನ್ಯಾಸದಿಂದಲೂ, ಅರ್ಥವತ್ತಾಗಿರುವುದರಿಂದಲೂ ತುಂಬ ಆಕರ್ಷಕವಾಗಿವೆ, ಮಮ್ಮಟ, ಭೋಜ, ವಿಶ್ವನಾಥರು ಇವಳ ಪದ್ಯಗಳನ್ನು ತಮ್ಮಗ್ರಂಥಗಳಲ್ಲಿ ಉದಾಹರಿಸಿಕೊಂಡಿದ್ದಾರೆ.
ಪ್ರಕೃತಿ ವರ್ಣನೆಯಲ್ಲಿ ವಿಜ್ಜಿಕೆಯದು ಎತ್ತಿದ ಕೈ: ಕಿಂಶುಕ ಪುಷ್ಪವೊಂದನ್ನು ಅವಳು ರೀತಿಯಾಗಿ ವರ್ಣಿಸಿದ್ದಾಳೆ.
ಕಿಂಶುಕ ಕಲಿಕಾಂತರ್ಗರ್ತಂ ಇಂದುಕಲಾಸ್ಪರ್ಧಿ ಕೇಸರಂ ಭಾತಿ|
ರಕ್ತನಿಚೋಲಕವಿಹಿತಂ ಧನುರಿವ ಜಾತಮುದ್ರಿತಂ ವಿತನೋಃ||
ಚಂದ್ರನ ಕಲೆಯೊಂದಿಗೆ ಸ್ಪರ್ಧಿಸುತ್ತಿರುವಂತೆ ಕಿಂಶುಕದ ಕೇಸರ ಕಾಣಿಸಿತಂತೆ ಕವಯತ್ರಿಗೆ!
ಬತ್ತ ಕುಟ್ಟುವ ನಾರಿಯರ ಒಂದು ಚಿತ್ರವನ್ನು ಕವಯಿತ್ರಿ ಚಿತ್ರಿಸಿದ್ದಾಳೆ. ನಾರಿಯರು ಬತ್ತ ಕಟ್ಟುವಾಗ ತೋಳುಗಳನ್ನು ಮೇಲೆ ಕೆಳಗೆ ಎತ್ತಿದಾಗ ಉಂಟಾದ ಬಳೆಗಳ ನಿನಾದ, ಹುಂಕಾರ, ಒನಕೆಯ ಸಪ್ಪಳ ಎಲ್ಲವೂ ತಾಳ,ಲಯ ಬದ್ಧ
ವಿಲಾಸಮಸೃಣೋಲ್ಲಸನ್ಮುಸಲ ಲೋಕದೋಃ ಕಂದಲೀ ಪರಸ್ಪರಪರಿಸ್ಖಲದ್ವಲಯನಿಸ್ವನೋದ್ಬಂಧುರಾಃ|
ಲಸಂತಿ ಕಲಹುಂಕೃತಿ ಪ್ರಸಭಕಂಪಿತೋರಸ್ಥಲತೃಟದ್ಗಲದ್ಗಮಕಸಂಕುಲಾಃ ಕಲಮಕಂಡಿನೀಗೀತಯಃ||
ಕಥಾವಸ್ತುವೇ ಪ್ರೇಮ, ಅದೂ ಅಲ್ಲದೇ ಸುಖಾಂತವಾಗಿಯೆ ಕಾಣತಕ್ಕದ್ದು. ಹಾಗಿದ್ದ ಮೇಲೆ ನಾಯಕ ನಾಯಿಕೆಯರ ವರ್ಣನೆ, ಪರಿಚಯ ಕೆಲವು ವಿಶಿಷ್ಟ ಸನ್ನಿವೇಶಗಳು ಅನಿವಾರ್ಯವೋ ಎನ್ನುವಂತೆ ಇಲ್ಲಿಯೂ ಬಂದಿವೆ, ಬಲಭುಜ ಹಾರುವುದು, ನಾಯಕಿಯರು ಸೀರೆಯ ಸೆರಗು ಬಳ್ಳಿಗೆ ತೊಡಕಿ ನಾಯಕನನ್ನು ಓರೆಗಣ್ಣಿನಿಂದ ನೋಡುವುದು, ಇವೆಲ್ಲವೂ ಉಳಿದೆಲ್ಲ ನಾಟಕಗಳಲ್ಲಿ ಬರುವಂತೆ ಇಲ್ಲಿಯೂ ಬಂದಿವೆ.

No comments:

Post a Comment