Search This Blog

Tuesday 20 March 2018

ವೈದಿಕ ಆರ್ಯರ ಸರಸ್ವತೀ – “ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ”


ನಮ್ಮ ಎಲ್ಲಾ ಸಾಮ್ರಾಜ್ಯಗಳು ತಮ್ಮ ಅಸ್ತಿತ್ವವನ್ನು ಕಂಡುಕೊಂಡದ್ದು ನದಿಗಳ ತೀರದಲ್ಲಿಯೇ. ನದಿಯ ಒಡನಾಟ ನಮ್ಮನ್ನು ಅಷ್ಟು ಹಿಡಿದಿಡುತ್ತದೆ. ಇದು ಎಂದಿನದ್ದೋ ಕಥೆಯಲ್ಲ. ನಮ್ಮ ನಾಗರೀಕತೆ ಕಣ್ಣು ಬಿಟ್ಟದ್ದೇ ನದಿಗಳ ತೀರದಲ್ಲಿ. ಇದು ಪ್ರಬಲವಾಗಿ ನಮ್ಮ ಅಸ್ತಿತ್ವವನ್ನು ಪ್ರತಿಬಿಂಬಿಸುವ ದ್ಯೋತಕವಾಗಿದ್ದುದು ಮತ್ತು ಈಗ ಇರದೇ ಇರುವುದು ಸರಸ್ವತೀ ನದಿಯ ಕುರಿತಾಗಿರುವುದು. ಮೊತ್ತ ಮೊದಲಿಗೆ ನಮ್ಮ ದೇಶದ ನಾಗರೀಕತೆ ಬೆಳೆದು ಬಂದದ್ದೇ ಈ ನದಿಯ ಮುಖಜ ಭೂಮಿಯಲ್ಲಿ.
"ಗಂಗಾ" ಈ ಹೆಸರನ್ನು ಕೇಳಿದಾಕ್ಷಣ ನಮಗೆ ಪವಿತ್ರವಾದ ಭವನೆಯೊಂದು ಬಂದು ಹೋಗುತ್ತದೆ. ನಮ್ಮ ಪಾವಿತ್ರ್ಯತೆಯ ಸಂಕೇತ ಅದು. ಹೀಗೆ ಭಾವನೆ ಬೆಳೆದು ಬಂದದ್ದು ಪ್ರಾಯಶ ಸರಸ್ವತಿಯ ಕಣ್ಮರೆಯಾದಂದಿನಿಂದ ಎಂದು ಭಾವಿಸಬಹುದೇನೋ. ಋಗ್ವೇದದಿಂದ ಹಿಡಿದು ಅಥರ್ವದ ತನಕವೂ ಸರಸ್ವತೀ ತನ್ನ ಸ್ಥಾನವನ್ನು ಉಳಿಸಿಕೊಂಡು ಸಾಗುತ್ತಾಳೆ. ಋಗ್ವೇದದಲ್ಲಂತೂ ಎಲ್ಲಾ ಮಂಡಲಗಳಲ್ಲೂ ಕಾಣಿಸಿಕೊಳ್ಳುತ್ತಾಳೇನೋ. ಇಲ್ಲಿ ಆ ಕಾಲದಲ್ಲಿ ಗಂಗೆಗೆ ಅಂತಹ ಪಾವಿತ್ರ್ಯದ ಸ್ಥಾನವಿರಲಿಲ್ಲವೇನೋ ಅನ್ನಿಸಿ ಬಿಡುತ್ತದೆ. ಯಾಕೆಂದರೆ ತತ್ಕಾಲೀನ ನಾಗರೀಕ ಸಮಾಜ ಬೆಳೆದು ಬಂದದ್ದೇ ಸರಸ್ವತಿಯ ತೀರದಲ್ಲಿ. ಹಾಗಂತ ಈ ನದಿ ಗಂಗೆಯಂತೆ ಯಮುನೆಯಂತೆ ಅಥವಾ ಆ ಕಾಲದ ಸಿಂಧುವಿನಷ್ಟು ವಿಶಲವಾಗಿ ಹರಡಿಕೊಂಡಿರಲಿಲ್ಲ ಕಿರಿದಾದ ನದಿಯಾಗಿದ್ದರೂ ತುಂಬಿ ಹರಿಯುತ್ತಿದ್ದಳು ಎನ್ನುವುದು ಋಚೆಗಳಿಂದ ತಿಳಿದು ಬರುತ್ತದೆ.
ಮಹೋ ಅರ್ಣಃ ಸರಸ್ವತೀ ಪ್ರ ಚೇತಯತಿ ಕೇತುನಾ | ಧಿಯೋ ವಿಶ್ವಾ ವಿ ರಾಜತಿ || ೧ : ೩ : ೧೨ ||
ಸರಸ್ವತಿ ನದಿಯು ಬಹು ಅಗಾಧ ಪ್ರವಾಹದಿಂದ ಹರಿಯುತ್ತಿರುವುದರಿಂದ ಈ ನದಿಯಲ್ಲಿ ಬಹು ಹೆಚ್ಚಾಗಿ ನೀರಿರುವುದು ಈ ದೇವಿಯು ತನ್ನನ್ನು ಸ್ತೋತ್ರ ಮಾಡುವ ಅಥವಾ ಯಜ್ಞದಿಂದ ಆರಾಧಿಸುವ ಜನರ ಮನಸ್ಸನ್ನು ಪ್ರಕಾಶಗೊಳಿಸುವಳು, ಅಂದರೆ ಜನರ ಬುದ್ಧಿಯನ್ನು ಪ್ರಕಾಶಿಸುವಂತೆ ಮಾಡುವಳು. ಈ ಋಕ್ಕಿನ ಋಷಿ ಮಧುಚ್ಚಂದ್ರ ಎನ್ನುವವನು. ಈತ ಇದಕ್ಕಿಂತ ದೊಡ್ದದಾದ ಸಿಂಧು ಮತ್ತು ಉಳಿದ ನದಿಗಳನ್ನು ನೋಡಿರದೇ ಇರಬಹುದು ಅಥವಾ ತುಂಬಿ ಹರಿಯುತ್ತಿದ್ದ ಸರಸ್ವತಿಯೇ ಆತನಿಗೆ ದೊಡ್ದದಾಗಿ ಕಂಡಿರಲೂ ಬಹುದು.
ಗಂಗಾ ಮತ್ತು ಯಮುನಾ ನದಿಗಳ ಪಶ್ಚಿಮಕ್ಕೆ ಪಂಜಾಬಿನ ಪೂರ್ವಕ್ಕೆ ಈ ಸರಸ್ವತೀ ನದಿ ಹರಿಯುತ್ತಿತ್ತು. ಆದರೆ ಇದಕ್ಕಿದ್ದ ಮಹತ್ವ ಆ ಎರಡೂ ನದಿಗಳು ಆ ಕಾಲದಲ್ಲಿ ಪಡೆದುಕೊಂಡಿರಲಿಲ್ಲ.
ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ |
ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನ ಸ್ಕೃಧೀ || ೨ : ೪೧ : ೧೬ ||
ತಾಯಂದಿರಲ್ಲಿಯೂ, ನದಿಗಳಲ್ಲಿಯೂ ಹಾಗೂ ದೇವತಾತ್ಮರಲ್ಲಿಯೂ ಅತ್ಯಂತ ಪವಿತ್ರಳೂ ಶ್ರೇಷ್ಠಳೂ ಆದ ಸರಸ್ವತಿಯೇ, ಬಡತನದಿಂದ ನಾವು ಎಲ್ಲರಿಂದಲೂ ತಿರಸ್ಕೃತರಾಗಿದ್ದೇವೆ. ನಮಗೆ ಧನ ಸಮೃದ್ಧಿ ಸಿಗುವಂತೆ ಮಾಡು. ಎನ್ನುವ ಈ ಋಕ್ಕಿನಿಂದ ಸರಸ್ವತಿ ಆ ಕಾಲದ ಅತ್ಯಂತ ಪವಿತ್ರಳೂ ಹಾಗೂ ದೇವಸ್ವರೂಪಿ ನದಿಯೂ ಆಗಿದ್ದಳು ಎಂದು ತಿಳಿದು ಬರುತ್ತದೆ.
ಸಿಂಧೂ ನಾಗರೀಕತೆಯ ಕೇಂದ್ರಭಾಗ ಹರಡಿದ್ದುದು ಸಿಂಧೂ ನದಿಯ ತೀರಪ್ರದೇಶದಲ್ಲಿ ಅಲ್ಲ. ಈಗ ಬತ್ತಿಹೋಗಿ ಹೆಸರನ್ನು ಮಾತ್ರ ಉಳಿಸಿಕೊಂಡ ಸರಸ್ವತೀ ನದಿಯದಡದುದ್ದಕ್ಕೂ ಎನ್ನುವುದು ಇತ್ತಿಚೆಗಿನ ಪುರಾತತ್ವ ಸಂಶೋಧನೆಗಳಿಂದ ದೃಢಪಡುತ್ತಿದೆ. ಪುರಾತತ್ವ ಸಂಶೋಧನೆಗಳು ಗುರುತಿಸಿರು ಒಂದು ಸಾವಿರದಷ್ಟು ವಸತಿಗಳಿದ್ದದ್ದು ಇದೇ ಸರಸ್ವತಿಯ ದಡದಲ್ಲಿ. ವೇದ ಮಂತ್ರಗಳಲ್ಲಿ ವರ್ಣಿತವಾಗಿರುವುದು ಇದೇ ಸರಸ್ವತಿ ನದಿ. ಋಗ್ವೇದವೇ ಮೊದಲಾದವುಗಳಲ್ಲಿನ ಸರವತೀ ನದಿಯ ಉಲ್ಲೇಖಗಳ ಆಶಯ ಏನೇ ಇದ್ದರೂ ಸಹ ಅಂದಿನ ಜನವಸತಿ ತಮ್ಮ ನೆಲೆ ಕಂಡು ಕೊಂಡದ್ದು ಉಕ್ಕಿ ಹರಿಯುತ್ತಿದ್ದ ಪವಿತ್ರ ಸರಸ್ವತಿಯ ದಡದಲ್ಲಿಯೇ. ಸಮೃದ್ಧವಾದ ವಿಶಲವಾದ ನಾಗರೀಕತೆಯೊಂದು ಬೆಳೆದದ್ದು ಇದೇ ಸರಸ್ವತೀ ಮತ್ತು ದೃಷದ್ವತೀ ನದಿಗಳ ತೀರದಲ್ಲಿ ಎಂದು ತಿಳಿದು ಬರುತ್ತದೆ.
ನಿತ್ಯಾ ದಧೇ ವರ ಆ ಪೃಥಿವ್ಯಾ ಇಳಾಯಾಸ್ಪದೇ ಸುದಿನತ್ವೇ ಅಹ್ನಾಂ |
ದೃಷದ್ವತ್ಯಾಂ ಮಾನುಷ ಆಪಯಾಯಾಂ ಸರಸ್ವತ್ಯಾಂ ರೇವದಗ್ನೇ ದಿದೀಹಿ || ೩ : ೨೩ : ೪ ||
ಎಲೈ ಅಗ್ನಿಯೇ ಗೋ ರೂಪವನ್ನು ಧರಿಸಿರುವ ಭೂಮಿಯ ಉತ್ತಮವಾದ ವೇದಿಸ್ಥಾನದಲ್ಲಿ ಎಲ್ಲಾ ದಿನಗಳಿಗಿಂತಲೂ ಶ್ರೇಷ್ಠವಾದ ಯಜ್ಞದಿನದಲ್ಲಿ ನಿನ್ನನ್ನು ಸುತ್ತಲೂ ಸ್ಥಾಪಿಸುತ್ತೇನೆ. ಯಜ್ಞ ಕರ್ತೃರಾದ ಮಾನವರು ಸಂಚರಿಸತಕ್ಕ ದೃಷದ್ವತಿಯ ದಡದ ಮೇಲೆಯೂ "ಆಪಯಾ" ಮತ್ತು ಸರಸ್ವತೀ ನದೀ ದಡದಮೇಲೆಯೂ ಧನಯುಕ್ತನಾಗಿರುವಂತೆ ಪ್ರಜ್ವಲಿಸಿ ಪ್ರಕಾಶಿಸು. ಎಂದು ವೇದದಲ್ಲಿ ಹೇಳಲಾಗುತ್ತದೆ. ತಮ್ಮ ನಿತ್ಯದ ಜೀವನಕ್ಕೆ ಆಧಾರವಾಗಿದ್ದ ಬೇಸಾಯ ಮತ್ತು ಗೋಪಾಲನೆ ಇದೇ ಸರಸ್ವತಿಯಿಂದ ಆಗಿದ್ದು. ಈ ಸರಸ್ವತಿ ಅವರಿಗೆ ಧನ ಕನಕಗಳನ್ನು ಕೊಡುವ ಸಂಪತ್ಪ್ರದಾಯಿನೀ.
ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರ್ಸ್ವತೀ ಸಿಂಧುಭಿಃ ಪಿನ್ವಮಾನಾ || ೬ : ೫೨ ;೫ ||
ಇಂದ್ರನು ಅತ್ಯಂತ ಸಮೀಪಸ್ಥನಾಗಿ ನಮ್ಮ ರಕ್ಷಣೆಗೆ ಬರುವಂತವನಾಗಲಿ, ಪ್ರವಹಿಸುವ ನೀರಿನೊಂದಿಗೆ ಸರಸ್ವತಿಯೂ ಬರುವಂತಾಗಲಿ. ಇಂದ್ರ ಮತ್ತು ಸರಸ್ವತೀ ನದಿಯನ್ನು ತುಲನಾತ್ಮಕ ದೃಷ್ಟಿಯಿಂದ ನೋಡಿದ ಈ ಜನರು ಸರಸ್ವತೀ ಸದಾಕಾಲವೂ ತುಂಬಿಕೊಂಡಿರಲಿ ಎಂದು ಆಶಿಸುತ್ತಿದ್ದರು. ಈ ನದಿ ಅನೇಕ ಸಲ ತನ್ನ ಪಥವನ್ನು ಬದಲಾಯಿಸುತ್ತಿದ್ದುದು ಸಂಶೋಧನೆಯಿಂದ ತಿಳಿದು ಬರುತ್ತದೆ. ಸುಮಾರು ಇಂದಿಗೆ ೩೯೦೦ ವರ್ಷಗಳಿಗೂ ಪೂರ್ವದಲ್ಲಿ ಯಾವಾಗಲೋ ಈ ನದಿ ಸಂಪೂರ್ಣವಾಗಿ ಬತ್ತಿ ಹೋಯಿತು ಎನ್ನುವುದಾಗಿ ಖ್ಯಾತ ಸಂಶೋಧಕ ವಾಕಣಕರ್ ಹೇಳುತ್ತಾರೆ. ಈ ನದಿಯು ಬತ್ತಿ ಹೋಗಿದ್ದು ಸಹ ಇದರ ಉಪನದಿಗಳಾಗಿದ್ದ ಸಟ್ಲೇಜ್ ಮತ್ತು ಯಮುನಾ ನದಿಗಳು ತಮ್ಮ ಪಥ ಬದಲಿಸಿ ಗಂಗೆಯನ್ನು ಸೇರಿಕೊಂಡದ್ದರಿಂದ ಎನ್ನುವ ಅಭಿಪ್ರಾಯ ಇದೆ.
ಈ ಸ್ತಿಥ್ಯಂತರದ ನಂತರವೇ ಆರ್ಯರೆನ್ನಿಸಿಕೊಂಡವರು ಇಲ್ಲಿಂದ ವಲಸೆ ಪೂರ್ವದ ಕಡೆ ನಡೆಯಿತು.
ಗಂಗಾ ನದಿಯ ದಡದಲ್ಲಿಯೂ ಹಾಗೂ ಸಿಂಧೂ ನದಿಯ ದಡದಲ್ಲಿಯೂ ನೆಲೆ ಕಂಡುಕೊಂಡರು. ವೇದಗಗಳಲ್ಲಿ ಪಾವಿತ್ರ್ಯವನ್ನು ಪಡೆಯದೇ ಇದ್ದ ಗಂಗೆ ಈ ವಲಸೆಯ ಕಾರಣದಿಂದ ಪಾವಿತ್ರ್ಯವನ್ನು ಪಡೆದಳು. ಭರತವಂಶೀಯ ರಾಜರಿಗೆ ಸರಸ್ವತಿಯ ತೀರದಲ್ಲಿದ್ದ ಪ್ರಾಶಸ್ತ್ಯಹೋಗಿ ರಾಜಕೀಯ ಸ್ಥಿತ್ಯಂತರಗಳಿಗೂ ಕಾರಣಾವಾಗಿ ಮಗದವಂಶೀಯರ ಪ್ರಾಬಲ್ಯಕ್ಕೆ ಕಾರಣವಾಗಿದ್ದು ತಿಳಿದು ಬರುತ್ತದೆ. ಅಂತೂ ಸರಸ್ವತೀ ನದಿ ಒಂದು ಕಾಲದಲ್ಲಿ ಅತ್ಯಂತ ವಿಸ್ತಾರವಾಗಿತ್ತು ಅದರ ಅಗಲ ೬ ರಿಂದ ೮ ಕಿ.ಮಿ ಗಳಿದ್ದುವಂತೆ. ಇಷ್ಟು ಭವ್ಯವಾದ ನದಿ ಕಿರಿದಾಗಿ ನಶಿಸಿತು ಎನ್ನುವುದು ದೃಢಪಟ್ಟಿದೆ.
ಹೌದು ಇಂತಹ ಭವ್ಯ ನದಿಯೊಂದು ಅಗಾಧ ಸಂಪತ್ತನ್ನು ಕೊಟ್ಟು ಪೋಷಿಸಿದ್ದನ್ನು ಆರ್ಯರೆನ್ನುವವರು ಹೇಗೆ ವರ್ಣಿಸಲು ಸಾಧ್ಯವಾಯಿತು. ಅದೆಲ್ಲಿಂದಲೋ ಬಂದು ಇನ್ನೂ ಜೀವಂತ ವಾಗಿದ್ದು ಭವ್ಯವಾಗಿದ್ದ ಪವಿತ್ರಳಾಗಿದ್ದ ಸಿಂಧೂ ನದಿ ಮತ್ತು ಅದರ ಐದು ಉಪನದಿಗಳನ್ನು ದಾಟಿ ಬಂದು ನಿಸ್ತೇಜವಾಗಿದ್ದು ಬತ್ತಿಹೋಗಿದ್ದ ಸರಸ್ವತೀ ನದಿಯ ದಡದಲ್ಲಿ ಆರ್ಯರೆನ್ನುವವರು ವಾಸ ಮಾಡಿದ್ದು ಹೇಗೆ ? ಹಾಗಾದರೆ ಇಂತಹ ನದಿಯನ್ನು ಅವರು ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ | ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ಸ್ಕೃಧೀ || ಎಂದು ಹೇಗೆ ಪ್ರಾರ್ಥಿಸಿದರು ? ಋಗ್ವೇದದಲ್ಲಿ ವರ್ಣಿಸಲ್ಪಟ್ಟ ಸರಸ್ವತೀ ನದಿ ಬತ್ತಿಹೋಗುವುದಕ್ಕಿಂತ ಹಿಂದೆ ಸಮೃದ್ಧವಾಗಿ ಸಂಪದ್ಭರಿತವಾಗಿದ್ದ ಭೌಗೋಲಿಕ ಸ್ಥಿತಿಯು ಸುಮಾರು ಹದಿನೈದು ಲಕ್ಷ ಚದರ ಕಿಲೋಮೀಟರಿಗೂ ಹೆಚ್ಚು ಹರಡಿಕೊಂಡಿದ್ದ ಸಿಂಧೂ ಸರಸ್ವತೀ ನಾಗರೀಕತೆ ಅದು "ವೈದಿಕ ಆರ್ಯರದ್ದಾಗಿತ್ತು. ಇದೇ ಆರ್ಯರೇ ಅಂಬಿತಮೇ ನದೀತಮೇ ದೇವಿತಮೇ ಸರಸ್ವತಿ. ಋಗ್ವೇದದ ಆರನೇ ಮಂಡಲದ ಅರವತ್ತೊಂದನೆಯ ಸೂಕ್ತದಲ್ಲಿ ಬರುವ ಮಂತ್ರಗಳೆಲ್ಲವೂ ಇದೇ ಸರಸ್ವತಿಗೆ ಸಂಬಂಧಿಸಿವೆ. ಇವೆಲ್ಲದರ ಸಾಧ್ಯತೆ ಗಮನಿಸಬೇಕು.

No comments:

Post a Comment