Search This Blog

Saturday 17 March 2018

ಚರಕಾರ - ಚರಕಾಲ - ಚರಕಾಧ್ವರ್ಯು

ವಾಲ್ಮೀಕಿ ರಾಮಾಯಣದ ಅಯೋಧ್ಯಾಕಾಂಡದಲ್ಲಿ
ಪ್ರಸಾದಯನ್ನರವೃಷಭಃ ಸ್ವಮಾತರಂ ಪರಾಕ್ರಮಾಜ್ಜಿಗಮಿಷುರೇವ ದಣ್ಡಕಾನ್ |
ಅಥಾನುಜಂ ಭೃಶಮನುಶಾಸ್ಯ ದರ್ಶನಂ "ಚರಕಾರ" ತಾಂ ಹೃದಿ ಜನನೀಂ ಪ್ರದಕ್ಷಿಣಮ್ || ೬೪ || ಎಂದು ಚರಕ ಎನ್ನುವ ಶಬ್ದದ ಮೊದಲ ಪ್ರಯೋಗ ಕಾಣಿಸಿಕೊಳ್ಳುತ್ತದೆ. ಇಲ್ಲಿ ಚರಕಾರ ಎನ್ನುವ ಪದ ಪ್ರಯೋಗ ಕಾಣಿಸಿಕೊಳ್ಳುತ್ತದೆ.
ವಾಲ್ಮೀಕಿ ರಾಮಾಯಣದ ಉತ್ತರಕಾಂಡದ ಎಂಟನೇ ಸರ್ಗದಲ್ಲಿ
ತೇ ವಾರ್ಯಮಾಣಾ ಹರಿಬಾಣಜಾಲೈಃ ಸ್ವಬಾಣಜಾಲಾನಿ ಸಮುತ್ಸೃಜನ್ತಃ |
ಧಾವನ್ತಿ ನಕ್ತಂ"ಚರಕಾಲ"ಮೇಘಾ ವಾಯುಪ್ರಣುನ್ನಾ ಇವ ಕಾಲಮೇಘಾಃ ||೫೩|| ಚರಕ ಎನ್ನುವುದು ಚರಕಾಲ ಎನ್ನುವ ಪ್ರಯೋಗವನ್ನು ಹೊಂದಿ ಕಾಣಿಸಿಕೊಳ್ಳುತ್ತದೆ.
ಭಾಗವತಪುರಾಣದ ಹನ್ನೆರಡನೇ ಸ್ಕಂದದ ಆರನೇ ಅಧ್ಯಾಯದಲ್ಲಿ
ವೈಶಮ್ಪಾಯನಶಿಷ್ಯಾ ವೈ "ಚರಕಾಧ್ವರ್ಯ"ವೋಽಭವನ್ |
ಯಚ್ಚೇರುರ್ಬ್ರಹ್ಮಹತ್ಯಾಂಹಃಕ್ಷಪಣಂ ಸ್ವಗುರೋರ್ವತಮ್ || ೬೧ ||
ಯಾಜ್ಞವಲ್ಕ್ಯಶ್ಚ ತಚ್ಛಿಷ್ಯ ಆಹಾಹೋ ಭಗವನ್ಕಿಯತ್ |
ಚರಿತೇನಾಲ್ಪಸಾರಾಣಾಂ ಚರಿಷ್ಯೇಽಹಂ ಸುದುಶ್ಚರಮ್ || ೬೨ ||
ವೇದವ್ಯಾಸ ಮಹರ್ಷಿಗಳು ತಮ್ಮ ನಾಲ್ಕು ಮಂದಿ ಶಿಷ್ಯರನ್ನು ಕರೆಸಿ ವೇದ ಸಂಹಿತೆಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದನ್ನು ದಯಪಾಲಿಸಿದರು. ಪೈಲ ಎನ್ನುವ ಶಿಷ್ಯನಿಗೆ ‘ಬಹ್ವೃಚ’ ಎಂದು ಕರೆಯಲ್ಪಡುವ ಮೊದಲನೆಯದಾದ ಋಕ್‍ ಸಂಹಿತೆಯನ್ನೂ, ವೈಶಂಪಾಯನ ಎಂಬ ಶಿಷ್ಯನಿಗೆ ‘ನಿಗದ’ ಎಂದು ಕರೆಯಲ್ಪಡುವ ಎರಡನೆಯದಾದ ಯಜುಸ್ಸಂಹಿತೆಯನ್ನೂ, ಜೈಮಿನಿ ಎನ್ನುವ ಶಿಷ್ಯನಿಗೆ ಸಾಮಶ್ರುತಿಗಳ ‘ಛಂದೋಗ’ ಸಂಹಿತೆಯನ್ನೂ ಮತ್ತು ಸುಮಂತು ಎನ್ನುವ ಶಿಷ್ಯನಿಗೆ ಅಥರ್ವಾಙ್ಗಿರಸಎಂಬ ಸಂಹಿತೆಯನ್ನೂ ಅಧ್ಯಯನಮಾಡಿಸಿದರು.
ಋಗ್ವೇದ ವಿಭಾಗಗಳು ಪೈಲಮಹರ್ಷಿಗಳು ತಾವು ಕಲಿ ಋಗ್ವೇದಸಂಹಿತೆಯನ್ನು ಎರಡು ವಿಧವಾಗಿ ವಿಂಗಡಿಸಿ ಅವುಗಳಲ್ಲಿ ಒಂದನ್ನು ಇಂದ್ರಪ್ರಮಿತಿಗೂ ಮತ್ತೊಂದನ್ನು ಬಾಷ್ಕಲನಿಗೂ ಅಧ್ಯಯನಮಾಡಿಸಿದರು.
ಬಾಷ್ಕಲ ಮಹರ್ಷಿಗಳೂ ತಾವು ಅಧ್ಯಯನಮಾಡಿದ್ದ ವೇದಶಾಖೆಯನ್ನು ನಾಲ್ಕಾಗಿ ವಿಭಾಗಿಸಿ ಅವುಗಳನ್ನು ತಮ್ಮ ಶಿಷ್ಯರಾದ ಬೋಧ್ಯ, ಯಾಜ್ಞವಲ್ಕ್ಯ, ಪರಾಶರ ಮತ್ತು ಅಗ್ನಿಮಿತ್ರರಿಗೆ ಅಧ್ಯಯನಮಾಡಿಸಿದರು. ಆತ್ಮಸಂಯಮಿ ಯಾದ ಇಂದ್ರಪ್ರಮಿತಿಯು ಪ್ರತಿಭಾಶಾಲಿ ಶಿಷ್ಯರಿಂದ ಮಾಂಡೂಕೇಯ ಋಷಿಗೆ ತನ್ನ ಸಂಹಿತೆಯನ್ನು ಉಪದೇಶಿಸಿದನು. ಮಾಂಡೂಕೇಯರ ಶಿಷ್ಯರು ದೇವಮಿತ್ರರು. ಆ ದೇವಮಿತ್ರರು ಸೌಭರಿ ಎನ್ನುವ ತನ್ನ ಶಿಷ್ಯರಿಗೆ ವೇದಗಳನ್ನು ಅಧ್ಯಯನಮಾಡಿಸಿದರು. ಮಾಂಡೂಕೇಯರ ಪುತ್ರರು ಶಾಕಲ್ಯರು. ಅವರು ತಮ್ಮ ಸಂಹಿತೆಯನ್ನು ಐದು ವಿಭಾಗಮಾಡಿ ಅವುಗಳನ್ನು ವಾತ್ಸ್ಯ, ಮುದ್ಗಲ, ಶಾಲೀಯ, ಗೌಖಲ್ಯ ಮತ್ತು ಶಿಶಿರರೆಂಬ ಶಿಷ್ಯರಿಗೆ ಹೇಳಿಕೊಟ್ಟರು. ಶಾಕಲ್ಯರಿಗೆ ಜಾತೂಕರ್ಣ್ಯ ಎಂಬ ಮತ್ತೊಬ್ಬ ಶಿಷ್ಯರಿದ್ದರು. ಅವರು ತಮ್ಮ ಸಂಹಿತೆಯನ್ನು ಮತ್ತೆ ಮೂರಾಗಿ ವಿಭಾಗಿಸಿ ಅವುಗಳಿಗೆ ಸಂಬಂಧಪಟ್ಟ ನಿರುಕ್ತಸಹಿತವಾದ ಅವುಗಳನ್ನು ತಮ್ಮ ಶಿಷ್ಯರಾದ ಬಲಾಕ, ಪೈಜ, ವೈತಾಲ ಮತ್ತು ವಿರಜರಿಗೆ ಉಪದೇಶಿಸಿದರು. ಬಾಷ್ಕಲರ ಪುತ್ರ ಬಾಷ್ಕಲಿಯು ಎಲ್ಲ ಶಾಖೆಗಳಿಂದಲೂ ಸಂಗ್ರಹಿಸಿ ವಾಲಖಿಲ್ಯವೆಂಬ ಶಾಖೆಯನ್ನು ರಚಿಸಿದನು. ಅದನ್ನು ಪೈಲಾಯನಿ, ಭಜ್ಯ ಮತ್ತು ಕಾಸಾರಮುನಿಗಳು ಗ್ರಹಣಮಾಡಿದರು. ಈ ಬ್ರಹ್ಮರ್ಷಿಗಳು ಮೇಲೆ ಹೇಳಿದ ಸಂಪ್ರದಾಯಾನುಸಾರವಾಗಿ ಸೇರಿದ ಬಹ್ವೃಚ ಶಾಖೆಗಳನ್ನು ಧರಿಸಿದರು.
ಯಜುರ್ವೇದ ವಿಭಾಗ :
ವೈಶಂಪಾಯನಮಹರ್ಷಿಗಳ ಕೆಲವು ಶಿಷ್ಯರಿಗೆ ಚರಕಾಧ್ವರ್ಯುಗಳು ಎಂದು ಹೆಸರಾಯಿತು. ಅಧ್ವರ್ಯುವೇದ ಎಂದರೆ ಯಜುರ್ವೇದ. ವೈಶಂಪಾಯನರಿಂದ ಈ ಅಧ್ವರ್ಯು ವೇದವನ್ನು ಕಲಿತ ಕೆಲವರು ತಮ್ಮ ಗುರುಗಳಿಗೆ ಒದಗಿದ್ದ ಬ್ರಹ್ಮಹತ್ಯಾದೋಷಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವ್ರತವನ್ನು ಆಚರಿಸಿದರು. ಆದುದರಿಂದ ಇವರು ಚರಕಾಧ್ವರ್ಯುಗಳು ಎನಿಸಿದರು. ಯಾಜ್ಞಲ್ಕ್ಯ ಎಂಬುವರೂ ವೈಶಂಪಾಯನರ ಶಿಷ್ಯರಲ್ಲಿ ಒಬ್ಬರು. ಇವರು ಒಮ್ಮೆ ವೈಶಂಪಾಯನರ ಬಳಿಗೆ ಹೋಗಿ, “"ಆಚಾರ್ಯರೇ ಈ "ಚರಕಾಧ್ವರ್ಯು"ಗಳು ಅಲ್ಪಶಕ್ತಿಯುಳ್ಳವರು. ಇವರು ವ್ರತವನ್ನು ಆಚರಿಸಿದ್ದರಿಂದ ಏನು ಮಹಾಲಾಭ? ನಾನೊಬ್ಬನೇ ತಮ್ಮ ಪ್ರಾಯಶ್ಚಿತ್ತಕ್ಕಾಗಿ ದುಷ್ಕರವಾದ ವ್ರತವನ್ನು ಹಿಡಿಯುತ್ತೇನೆಎಂದು ವಿಜ್ಞಾಪಿಸಿದರು. ಶಿಷ್ಯನ ಈ ಮಾತನ್ನು ಕೇಳಿ ವೈಶಂಪಾಯನರಿಗೆ ತುಂಬಾ ಕೋಪಬಂದಿತು. ಅವರು ಯಾಜ್ಞವಲ್ಕ್ಯ ನಿನ್ನ ಅಹಂಕಾರದ ಮಾತನ್ನು ಬಿಡು. ಬ್ರಾಹ್ಮಣರನ್ನು ಅವಮಾನ ಮಾಡಿದ ನಿನ್ನಂತಹ ಶಿಷ್ಯನ ಆವಶ್ಯಕತೆಯೇನೂ ನನಗೆ ಇಲ್ಲ. ನನ್ನಿಂದ ಕಲಿತಿರುವ ವೇದವನ್ನೆಲ್ಲಾ ಇಲ್ಲಿಯೇ ಬಿಟ್ಟು ಇಲ್ಲಿಂದ ಹೊರಟುಹೋಗು.ಎಂದು ಆಜ್ಞಾಪಿಸಿದರು. ಅಂತೆಯೇ ಆ ದೇವರಾತರ ಮಗನಾದ ಯಾಜ್ಞ ವಲ್ಕ್ಯನು ಗುರುಗಳಿಂದ ಕಲಿತಿದ್ದ ಯಜುರ್ವೇದಮಂತ್ರಸಮೂಹವನ್ನು ಅಲ್ಲಿಯೇ ಕಕ್ಕಿಬಿಟ್ಟು ಅಲ್ಲಿಂದ ಹೊರಟುಹೋದರು. ಅನಂತರ ಅಲ್ಲಿದ್ದ ಕೆಲವು ಋಷಿಗಳಿಗೆ ಹಾಗೆ ಕಕ್ಕಲ್ಪಟ್ಟ ಯಜುರ್ವೇದಮಂತ್ರ ಸಮೂಹವನ್ನು ಕಂಡು ಹೇಗಾದರೂ ಅದನ್ನು ಗ್ರಹಿಸಿಬಿಡಬೇಕೆಂಬ ಆಸೆಯುಂಟಾಯಿತು. ಆಗ ಅವರು ತಿತ್ತಿರಿಪಕ್ಷಿಗಳ ರೂಪವನ್ನು ತಾಳಿ ಅದನ್ನು ಸೇವಿಸಿಬಿಟ್ಟರು. ಹಾಗೆ ಅವರು ಗ್ರಹಿಸಿದ ಯಜುರ್ವೇದ ತೈತ್ತಿರೀಯಎಂಬ ವೇದಶಾಖೆಯಾಯಿತು. ಅನಂತರ ಯಾಜ್ಞವಲ್ಕ್ಯರಿಗೆ, ತಮ್ಮ ಗುರುಗಳ ಬಳಿಯಲ್ಲೂ ಇಲ್ಲದೇ ಇದ್ದಂತಹ ಶ್ರುತಿಗಳನ್ನು ಸಂಪಾದಿಸಬೇಕೆಂಬ ಉತ್ಕಟವಾದ ಆಸೆಯುಂಟಾಯಿತು. ಅದಕ್ಕಾಗಿ ಅವರು ಈ ಮಂತ್ರದಿಂದ ಸೂರ್ಯಭಗವಂತನನ್ನು ಸ್ತುತಿಸಿ ಆರಾಧಿಸಿದರು. ಯಾಜ್ಞವಲ್ಕ್ಯಮುನಿಗಳು ಮಾಡಿದ ಈ ಸ್ತುತಿಯನ್ನು ಕೇಳಿ ಪ್ರಸನ್ನನಾದ ಸೂರ್ಯಭಗವಂತನು ಅವರ ಮುಂದೆ ಒಂದು ಕುದುರೆಯ ರೂಪದಲ್ಲಿ ಪ್ರಕಟಗೊಂಡು ಅವರಿಗೆ, ಅಲ್ಲಿಯವರೆಗೂ ಯಾರಿಗೂ ದೊರೆಯದೇ ಇದ್ದಂತಹ ಮಂತ್ರಗಳನ್ನು ಉಪದೇಶಮಾಡಿದನು. ಆಗ ಯಾಜ್ಞವಲ್ಕ್ಯರು ತಾವು ಕಲಿತ ಯಜುರ್ವೇದಮಂತ್ರಗಳಿಂದ ಯಜುರ್ವೇದದ ಹದಿನೈದು ಶಾಖೆಗಳನ್ನು ರಚಿಸಿದರು. ಇವೇ ವಾಜಸನೇಯ ಸಂಹಿತೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಇವನ್ನು ಕಾಣ್ವ, ಮತ್ತು ಮಾಧ್ಯಂದಿನರೇ ಮುಂತಾದ ಋಷಿಗಳು ಗ್ರಹಣಮಾಡಿದರು. ಹೀಗೆ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಚರಕ ಎನ್ನುವ ಪದ ಸಿಗುತ್ತದೆ ಮತ್ತು ಬೇರೆ ಬೇರೆ ಅರ್ಥವನ್ನೂ ಕೊಡುತ್ತದೆ.(ಮುಂದುವರೆಯುತ್ತದೆ).


No comments:

Post a Comment