Search This Blog

Sunday 18 March 2018

ಚರಕಾಚಾರ್ಯ - ಚರಕಾಧ್ವರ್ಯುಃ - ೨

ನಿನ್ನೆ ರಾಮಾಯಣ ಮತ್ತು ಮಹಾಭಾರತದಲ್ಲಿ "ಚರಕಾರ - ಚರಕಾಲ - ಚರಕಾಧ್ವರ್ಯು" ಎನ್ನುವುದಾಗಿ ಚರಕ ಎನ್ನುವ ಶಬ್ದದ ಕುರಿತು ಬರೆದಿದ್ದೆ. ಆಯುರ್ವೇದದಲ್ಲಿ ಸುಪ್ರಸಿದ್ಧ ವೈದ್ಯನೊಬ್ಬನ ಹೆಸರು ಚರಕ ಎನ್ನುವುದಾಗಿದೆ. ಈತ ರಚಿಸಿದ ವೈದ್ಯ ಶಾಸ್ತ್ರಗ್ರಂಥಕ್ಕೂ ಚರಕಸಂಹಿತೆ ಎಂದು ಕರೆಯಲಾಗುತ್ತದೆ. ಪ್ರಾಚೀನ ಭಾರತದಲ್ಲಿ "ಚರಕ" ಎಂಬ ಪದ ಅವರು ನಿರ್ವಹಿಸುತ್ತಿದ್ದ ವೃತ್ತಿಸೂಚಕವಾಗಿದ್ದಿತೆಂದು ತಿಳಿದು ಬರುತ್ತದೆ. ಕೃಷ್ಣ ಯಜುರ್ವೇದ ಶಾಖೆಯ ವೈದಿಕರನ್ನು ಸಹ ಅದೇ ಹೆಸರಿಂದ ಕರೆಯಲಾಗುತ್ತಿತ್ತು, ಪರಿವ್ರಾಜಕ ಸಂಚಾರಪ್ರವೃತ್ತಿಯ ಶಾಸ್ತ್ರಬೋಧಕರು, ಹಾಗೂ ವ್ಯಾಯಾಮ ನಿಪುಣರು, ಗೂಢಚಾರರು ಮುಂತಾದವರನ್ನು ಚರಕರೆಂದು ಕರೆಯಲಾಗುತ್ತಿತ್ತು. ಇವುಗಳಲ್ಲದೇ ವ್ಯಾಕರಣ, ಜ್ಯೋತಿಷ್ಯ, ಆಯುರ್ವೇದ, ಧನುರ್ವೇದ ಮುಂತಾದ ಶಾಸ್ತ್ರಗಳಲ್ಲಿ ನಿಷ್ಣಾತರಾಗಿ ಶಿಷ್ಯರಿಗೆ ಅವನ್ನು ಬೋಧಿಸುತ್ತ ಸಂಚರಿಸುತ್ತಿದ್ದ ಋಷಿ, ಮುನಿಗಳನ್ನು ಚರಕಾಚಾರ್ಯರೆಂದೇ ಕರೆಯುತ್ತಿದ್ದರೆಂದು ಊಹಿಸಲಾಗಿದೆ. ಇಂಥವರಲ್ಲಿ ಆಯುರ್ವೇದ ಶಾಸ್ತ್ರದ ಅತಿಮುಖ್ಯ ಗ್ರಂಥವನ್ನು ರಚಿಸಿದಾತ ಒಬ್ಬ ಚರಕಾಚಾರ್ಯ.
ವೈದ್ಯ ಶಾಸ್ತ್ರದ ಚರಕನ ಜನ್ಮಸ್ಥಳ, ಅವನ ಕುಲ, ಕಾಲ ಮುಂತಾದ ವಿವರಗಳಾವೂವೂ ನಿರ್ದಿಷ್ಟವಾಗಿ ತಿಳಿದಿಲ್ಲ. ವಾಗ್ಭಟಾಚಾರ್ಯ ಮತ್ತು ಭಾವಮಿಶ್ರರು ಇವನನ್ನು ಮುನಿ ಎಂದು ತಿಳಿಸುತ್ತಾರೆ. ಪಾಣಿನಿಯ ವ್ಯಾಕರಣದ ಮೇಲಿನ ಮಹಾಭಾಷ್ಯದ ಕರ್ತೃವಾದ ಪತಂಜಲಿ ಋಷಿಯೇ ಚರಕಾಚಾರ್ಯನೆಂದೂ ಪತಂಜಲಿ ಆದಿಶೇಷನ ಅವತಾರವೆಂದೂ ವಿಜ್ಞಾನಭಿಕ್ಷು ಮತ್ತು ಭೋಜ ಎಂಬುವರು ವರ್ಣಿಸಿದ್ದಾರೆ. ಚಕ್ರಪಾಣಿ ದತ್ತನೆಂಬ ವ್ಯಾಖ್ಯಾನಕಾರ ಚರಕ ಸಂಹಿತೆಗೆ ಪತಂಜಲಿಯೇ ಪ್ರಥಮ ಭಾಷ್ಯಕಾರನೆಂದು ಸ್ತುತಿಸಿದ್ದಾನೆ. ಚೀನಾದೇಶದಲ್ಲಿ ದೊರೆತ ಬೌದ್ಧ ತ್ರಿಪಟಿಕ ಗ್ರಂಥಗಳಲ್ಲಿ ಕಾನಿಷ್ಕನ ಆಸ್ಥಾನದಲ್ಲಿ ಚರಕನೆಂಬ ವೈದ್ಯಾಚಾರ್ಯನಿದ್ದನೆಂದು ತಿಳಿಸಲಾಗಿದೆ. ಚರಕಸಂಹಿತೆಯ ಆಂತರಿಕ ಲಕ್ಷಣ, ಭಾಷಾಶೈಲಿ, ಚಾರಿತ್ರಿಕ ಹಿನ್ನೆಲೆ ಮುಂತಾದ ಆಧಾರಗಳೆಲ್ಲವನ್ನೂ ವಿಮರ್ಶಿಸಿರುವ ಪ್ರಾಚ್ಯ ವಿದ್ಯಾ ಸಂಶೋಧಕರ ಅಭಿಪ್ರಾಯದಲ್ಲಿ ಅದರ ಕರ್ತೃವೂ ಮಹಾಭಾಷ್ಯದ ಕರ್ತೃ ಪತಂಜಲಿಯೂ ಭಿನ್ನವ್ಯಕ್ತಿಗಳು; ಕಾನಿಷ್ಕನ ಆಸ್ಥಾನದ ವಸುಮಿತ್ರ ಅಶ್ವಘೋಷ, ನಾಗಾರ್ಜುನ ಮೊದಲಾದವರ ಗ್ರಂಥಗಳಲ್ಲಿ ಕಂಡುಬರುವಂಥ ಬೌದ್ಧಮತೀಯ ವಿಷಯಗಳು ಚರಕಸಂಹಿತೆಯಲ್ಲಿ ಕಾಣದಿರುವುದು ಮತ್ತು ಚರಕ ಸಂಹಿತೆಯ ಶೈಲಿಯ ಭಿನ್ನತೆಗಳು ಚರಕ ಸಂಹಿತೆಯ ಕರ್ತೃವೂ ರಾಜವೈದ್ಯ ಚರಕನೂ ಭಿನ್ನ ವ್ಯಕ್ತಿಗಳೆಂದು ದೃಢಪಡಿಸುತ್ತವೆ. ಮತ್ತು ಚರಕಸಂಹಿತೆಯ ಕಾಲ ಕ್ರಿ.ಪೂ. ಎರಡನೆ ಶತಮಾನಕ್ಕೇ ಸರಿಯಾಗಬಲ್ಲುದು. ಚರಕ ಸಂಹಿತೆಯ ಕರ್ತೃ ಚರಕಾಚಾರ್ಯ ಕ್ರಿ.ಪೂ. ಎರಡನೆಯ ಶತಮಾನದಲ್ಲಿದ್ದ ಪ್ರಸಿದ್ಧ ಲೋಹಶಾಸ್ತ್ರಜ್ಞ. ಆದರೆ ನಮಗಿಂದು ದಕ್ಷಿಣಕ್ಕೆ ಲಿಪಿಯ ಉಪಯೋಗವನ್ನು ಪರಿಚಯಿಸಿದ ಅಶೋಕನ ಕಾಲದ ಚಪಡನ ಮೊಮ್ಮಗನೇ ಚರಕ ಎನ್ನುವುದಾಗಿ ಹೇಳಲಾಗುತ್ತದೆ ಹಾಗೇನಾದರೂ ಆಗಿದ್ದರೆ ಚರಕ ಗಾಂಧಾರದೇಶದವನು.
ಚರಕಸಂಹಿತೆಯ ಕುರಿತಾಗಿ : ಇದು ಚರ ಸ್ವತಂತ್ರಕೃತಿಯಲ್ಲ. ಕ್ರಿ.ಪೂ. ಏಳನೆಯ ಶತಮಾನದ ಮಹರ್ಷಿ ಕೃಷ್ಣಾತ್ರೇಯ ಬೋಧಿಸಿದ ಸಿದ್ಧಾಂತಗಳನ್ನು ಆತನ ಶಿಷ್ಯೋತ್ತಮವಾದ ಅಗ್ನಿವೇಷ ಎನ್ನುವ ಋಷಿ ಗ್ರಂಥವನ್ನಾಗಿ ರಚಿಸಿದ ಅದು ಅಗ್ನಿವೇಶ ಸಂಹಿತೆ ಎಂದು ಕರೆಯಲ್ಪಟ್ಟಿತು. ದೇವತೆಗಳಿಂದಲೂ ಶ್ಲಾಘಿಸಲ್ಪಟ್ಟ ಅಗ್ನಿವೇಶ ಸಂಹಿತೆ ಆಯುರ್ವೇದ ಅಧ್ಯಯನ ಆದ್ಯಾಪನಾದಿಗಳಿಗೆ ಆಧಾರಗ್ರಂಥವಾಗಿ ಮುಂದಿನ ಶತಮಾನಗಳಲ್ಲಿ ಮಾನ್ಯತೆ ಪಡೆಯಿತು. ದೇಶದಲ್ಲಿ ಉಂಟಾದ ರಾಜಕೀಯ ಕ್ಷೋಭೆ, ಪರಕೀಯರ ಆಕ್ರಮಣ ಮುಂತಾದ ಹಲವಾರು ಕಾರಣಗಳಿಂದ ಅಗ್ನಿವೇಶ ಸಂಹಿತೆ ಕ್ರಿ.ಪೂ. ಎರಡನೆಯ ಶತಮಾನದ ವೇಳೆಗೆ ಭಾಗಶಃ ನಾಶವಾಗಿ ಹೋಗಿದ್ದರಿಂದ ಅದನ್ನು ಪುನಃ ಸಂಪಾದಿಸಿ ಪರಿಷ್ಕರಿಸಿ ಅಧ್ಯಯನಯೋಗ್ಯವನ್ನಾಗಿ ಮಾಡಿದ ಕೀರ್ತಿ ಚರನಿಗೆ ಸಲ್ಲುತ್ತದೆ.ಮುಂದೆ ಗ್ರಂಥ ಚರಕಸಂಹಿತೆಯೆಂದೇ ಖ್ಯಾತಿ ಪಡೆಯಿತು. ಮುಂದಿನ ಮೂರು ಶತಮಾನಗಳು ಕಳೆಯುವುದರೊಳಗೆ ಇದು ಕೂಡ ನಾಶವಾಗುತ್ತ ಬಂದಿತು. ಆಗ ಕಾಶ್ಮೀರದ ಪಂಚನಪುರವೆಂಬಲ್ಲಿ ಕ್ರಿ.. ನಾಲ್ಕನೆಯ ಶತಮಾನದಲ್ಲಿದ್ದ ಕಪಿಲಬಲ ಎನ್ನುವವನ ಮಗನಾದ ದೃಢಬಲನೆಂಬಾತ ಚರಕಸಂಹಿತೆಯನ್ನು ಪುನಃ ಪರಿಷ್ಕರಿಸಿ ಕೊನೆಯ 41 ಅಧ್ಯಾಯಗಳನ್ನು ತಾನೇ ರಚಿಸಿ ಗ್ರಂಥಕ್ಕೆ ಸೇರಿಸಿ ಅದನ್ನು ಸಂಪೂರ್ಣಗೊಳಿಸಿದ. ಇದೇ ನಮಗೆ ಇಂದು ದೊರೆತಿರುವ ಚರಕಸಂಹಿತೆ.
ಮಹರ್ಷಿ ಕೃಷ್ಣಾತ್ರೇಯನ ಬೋಧನೆಗಳುಳ್ಳ, ಅಗ್ನಿವೇಶ ಋಷಿಪ್ರಣೀತವಾದ, ಚರಕಾಚಾರ್ಯನಿಂದ ಪ್ರತಿ ಸಂಸ್ಕರಿತವಾದ ದೃಢಬಲನಿಂದ ಸಂಪೂರ್ಣಗೊಳಿಸಲ್ಪಟ್ಟ ಆಯುರ್ವೇದ ಶಾಸ್ತ್ರದ ಅತ್ಯಮೂಲ್ಯ ಆಧಾರ ಗ್ರಂಥ.
ಚರಕಸಂಹಿತೆಯಲ್ಲಿ ಅನುಕ್ರಮವಾಗಿ 30 ಅಧ್ಯಾಯಗಳ ಸೂತ್ರಸ್ಥಾನ, ಪ್ರತ್ಯೇಕ 8 ಆಧ್ಯಾಯಗಳ ನಿದಾನ, ವಿಮಾನ ಮತ್ತು ಶಾರೀರಸ್ಥಾನಗಳು, 12 ಅಧ್ಯಾಯಗಳ ಇಂದ್ರಿಯಸ್ಥಾನ, 30 ಅಧ್ಯಾಯಗಳ ಚಿಕಿತ್ಸಾಸ್ಥಾನ, ಪ್ರತ್ಯೇಕ 12 ಅಧ್ಯಾಯಗಳ ಕಲ್ಪ ಮತ್ತು ಸಿದ್ದಿಸ್ಥಾನಗಳು ಹೀಗೆ 120 ಅಧ್ಯಾಯಗಳುಳ್ಳ ಎಂಟು ಸ್ಥಾನಗಳಿವೆ. ಆಯುರ್ವೇದದ ಮೂಲಸಿದ್ಧಾಂತಗಳು, ಔಷಧ ಹಾಗೂ ಆಹಾರದ್ರವ್ಯಗಳ ಗುಣಧರ್ಮ ಸ್ವಸ್ಥವೃತ್ತ ಮುಂತಾದವು ಸೂತ್ರಸ್ಥಾನದ ವಿಷಯ. ರೋಗಕಾರಣ ಮತ್ತು ಲಕ್ಷಣಗಳನ್ನು ನಿದಾನಸ್ಥಾನವೂ ಷಡ್ರಸಗಳ ಗುಣಕರ್ಮ, ರೋಗಿಪರೀಕ್ಷೆ, ವೈದ್ಯನೀತಿ ಮುಂತಾದವನ್ನು ವಿಮಾನಸ್ಥಾನವೂ ಸಾಂಖ್ಯದರ್ಶನಾನುಸಾರ ವಿಶ್ವಸೃಷ್ಟಿ, ಶರೀರ ರಚನೆ, ಅಂಗಾವಯವಗಳ ವಿವರಣೆಯನ್ನು ಶರೀರ ಸ್ಥಾನವೂ ಮರಣ ಸೂಚಕ ಲಕ್ಷಣಗಳ ವಿವರಣೆಯನ್ನು ಇಂದ್ರಿಯ ಸ್ಥಾನವೂ ಹೊಂದಿವೆ. ರೋಗಗಳ ಚಿಕಿತ್ಸಾಕ್ರಮ ಚಿಕಿತ್ಸಾಸ್ಥಾನದಲ್ಲಿದೆ. ಔಷಧಿಗಳನ್ನು ತಯಾರಿಸುವ ಕ್ರಮ ಕಲ್ಪಸ್ಥಾನದಲ್ಲಿದೆ. ಚಿಕಿತ್ಸಾಕಾಲದಲ್ಲಿ ಉಂಟಾಗಬಹುದಾದ ವೈಪರೀತ್ಯಗಳ ಜ್ಞಾನ ಮತ್ತು ನಿವಾರಣೋಪಾಯಗಳನ್ನು ಸಿದ್ಧಿಸ್ಥಾನದಲ್ಲಿ ವಿವರಿಸಲಾಗಿದೆ.
ಆಯುರ್ವೇದದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಕಾಯಚಿಕಿತ್ಸೆ ಎಂಬ ವಿಭಾಗಕ್ಕೆ ಚರಕಸಂಹಿತೆಯೇ ಆಧಾರಗ್ರಂಥ. ಬಾಹ್ಯ ಪ್ರಪಂಚದಲ್ಲಿರುವಂತೆಯೇ ಶರೀರದಲ್ಲಿಯೂ ಅಗ್ನಿ ಇದೆ. ಉದರದ ಒಳಭಾಗದಲ್ಲಿರುವ ಜಠರಾಗ್ನಿ, ಕೋಷ್ಠಾಗ್ನಿ, ಔದಾರ್ಯ ತೇಜಸ್, ಪಾಚಕಪಿತ್ತ ಎಂಬ ಬೇರೆ ಸಂಕೇತಗಳೂ ಇವೆ. ನಾವು ಸೇವಿಸಿದ ಆಹಾರವನ್ನು ಪಾಕ ಮಾಡುತ್ತದೆ. ರಸ, ರಕ್ತ ಮೊದಲಾದ ಸಪ್ತಧಾತುಗಳಲ್ಲಿರುವ ವಿಶಿಷ್ಟ ಅಗ್ನಿಗಳು ಜಠರಾಗ್ನಿಯಿಂದ ಬಲವನ್ನು ಪಡೆದು ತಮ್ಮ ಆಹಾರಾಂಶಗಳನ್ನು ಪಾತಮಾಡುತ್ತವೆ. ಕೋಷ್ಟಾಗ್ನಿ ಮತ್ತು ಧಾತ್ವಗ್ನಿಗಳು ಪ್ರಾಕೃತವಾಗಿರುವಾಗ ಶರೀರ ಅನೇಕ ರೋಗಗಳಿಗೆ ತುತ್ತಾಗುತ್ತದೆ. ಸಮಯದಲ್ಲಿ ಅಗ್ನಿಯನ್ನು ಪ್ರಾಕೃತ ಸ್ಥಿತಿಗೆ ತರುವುದೇ ರೋಗನಿವಾರಣೆಯ ಕ್ರಮ. ಕಾಯಚಿಕಿತ್ಸೆ ಎಂದರೆ ಕಾಯಾಗ್ನಿ ಚಿಕಿತ್ಸೆ ಎಂಬುದೇ ವಿಭಾಗದ ಮೂಲಸಿದ್ಧಾಂತ. ಚರಕಸಂಹಿತೆಯಲ್ಲಿರುವ ಇತರ ಸಿದ್ಧಾಂತಗಳೆಲ್ಲವೂ ಅಗ್ನಿತತ್ತ್ವವನ್ನೇ ಮುಖ್ಯವಾಗಿಟ್ಟುಕೊಂಡು ಬೆಳೆದಿವೆ. ಜಠರಾಗ್ನಿಯನ್ನು ದೀಪನ ಮಾಡುವುದಕ್ಕಾಗಿ ಬಾಯಿಯ ಮೂಲಕವೇ ಔಷಧಿಗಳ ಪ್ರಯೋಗ. ಔಷಧಿಗಳಲ್ಲಿ ಹೆಚ್ಚಿನವು ಗಿಡಮೂಲಿಕೆಗಳಿಂದ ತಯಾರಾದವು. ನಿರುಪದ್ರವಿಯೂ ಯಶಸ್ವಿಯೂ ಆದ ಕಾಯಚಿಕಿತ್ಸಾ ಕ್ರಮವನ್ನು ವಿವರಿಸುವ ಚರಕಸಂಹಿತೆಗೆ ಆಯುರ್ವೇದ ಸಾಹಿತ್ಯದಲ್ಲಿ ಅಗ್ರಸ್ಥಾನವೂ ಇದೆ.
ಚರಕ ಸಂಹಿತೆಗೆ ಸುಮಾರು ಐದನೆಯ ಶತಮಾನದ ಈಶಾನದೇವ ಮತ್ತು ಭಟ್ಟಾರ ಹರಿಶ್ಚಂದ್ರರಿಂದ ರಂಭಿಸಿ ವಾಪ್ಯಚಂದ್ರ, ಬತುಳತರ, ಭೀಮದತ್ತ, ನರದತ್ತ, ಜೇಜ್ಜಟ, ಗುಣಾಕಾರ, ಚಕ್ರಪಾಣಿದತ್ತ, ಸ್ವಾಮಿಕುಮಾರ, ಶಿವದಾಸಸೇನ, ಗಂಗಾಧರರಾಯ ಮತ್ತು ಇಪ್ಪತ್ತನೆಯ ಶತಮಾನದ ಯೋಗೇಂದ್ರನಾಥ ಸೇನರ ವರೆಗೆ ಅನೇಕ ಪಂಡಿತರ ವ್ಯಾಖ್ಯಾನಗಳಿವೆ. ಇವುಗಳ ಪೈಕಿ ಹನ್ನೊಂದನೆಯ ಶತಮಾನದಲ್ಲಿ ಬಂಗಾಳದ ಗೌಡದೇಶದ ರಾಜ ನಯಪಾಲನ ಆಸ್ಥಾನವೈದ್ಯನಾಗಿದ್ದ ಚಕ್ರಪಾಣಿದತ್ತ ರಚಿಸಿರುವ ಆಯುರ್ವೇದದ ದೀಪಿಕಾ ವ್ಯಾಖ್ಯಾನ ಅತ್ಯಂತ ವಿದ್ವತ್ಪೂರ್ಣವಾಗಿದ್ದು ಕರ್ತೃವಿಗೆ ಚರಕ ಚತುರಾನನ ಎಂಬ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಈಗ ಸಮುಗ್ರವಾಗಿ ಲಭ್ಯವಾಗಿರುವ ವ್ಯಾಖ್ಯಾನಗಳಲ್ಲಿ ಇದೇ ಪ್ರಾಚೀನವಾದುದಾಗಿದ್ದುದು ಇದರ ಮಹತ್ತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಈಗ ನಾನು ಇಲ್ಲಿ ಹಾಕಿರುವ ಶಾಸನದ ಸಾಲು ಅಜಂತಾದ ಗುಹೆಯಲ್ಲಿ ಖಂಡರಿಸಲ್ಪಟ್ಟ ಸುಮಾರು ೨ನೇ ಶತಮಾನದ ಶಾಸನ. ಬ್ರಾಹ್ಮಿ ಲಿಪಿಯಲ್ಲಿ ಅತ್ಯಂತ ಸುಂದರವಾಗಿ ಖಂಡರಿಸಲ್ಪಟ್ಟ ಶಾಸನವಿದು. ಇಲ್ಲಿ ಪ್ರಭಾಸ, ಗೋವರ್ಧನ, ಚರಕ "ಚರಕ ಪರ್ಶಭ್ಯಃ ಗ್ರಾಮೇ" ಎನ್ನುವ ಒಂದು ಪದಗಳ ಬಳಕೆಯಾಗಿವೆ.

No comments:

Post a Comment