Search This Blog

Wednesday 21 March 2018

ನಾಲಂದಾ ಹಸತೀವ ಸರ್ವನಗರೀಃ - ನಕ್ಕು ನಲಿಯುತ್ತಿದ್ದ ನಾಲಂದದ ಕಣ್ಣಾಲಿಗಳು........


ನಾಲಂದ ವಿಶ್ವವಿದ್ಯಾಲಯವು ಗುಪ್ತ ದೊರೆ ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತಗೊಂಡಿತೆಂದು ತಿಳಿದು ಬರುತ್ತದೆ. ನಾಲಂದಾದಲ್ಲಿ ಸಮುದ್ರಗುಪ್ತನ ಮುದ್ರೆಯು ದೊರೆತಿದ್ದರಿಂದ ಆತನ ಕಾಲದಲ್ಲಿ ಅಥವಾ ಆತನಿಗಿಂತಲೂ ಪೂರ್ವದಲ್ಲಿಯೇ ಸ್ಥಾಪನೆ ಗೊಂಡಿದ್ದಿರಬಹುದು. ಅದೇನೇ ಇರಲಿ ಇದೊಂದು ಭವ್ಯ ಭಾರತದ ಕುರುಹಂತೂ ಹೌದು.
ಒಮ್ಮೆ ಇಂದ್ರ ತನ್ನ ದೇವಲೋಕದ ಆಸ್ಥಾನದಲ್ಲಿ ಕುಳಿತಿರುವಾಗ, ದೇವತೆಗಳೆಲ್ಲಾ ಬಂದು ಇಂದ್ರನಲ್ಲಿ ಒಂದು ಆಶ್ಚರ್ಯಕರವಾದ ವಿಷಯವಿದೆ ಎಂದು ಹೇಳುತ್ತಾರೆ. ಆಗ ಇಂದ್ರ ಅದೇನೆಂದು ಕೇಳಿದಾಗ ಸ್ವರ್ಗಕ್ಕೆ ಸಮನಾದ ಪ್ರತಿಸ್ವರ್ಗ ಒಂದು ಭೂಲೋಕದಲ್ಲಿದೆ ಎಂದು ಹೇಳುತ್ತಾರೆ. ಇಂದ್ರ ಸ್ವಭಾವತಃ ಅಸೂಯಾಪರ ಆತನಿಗೆ ತನ್ನ ಲೋಕದಂತೆ ಇನ್ನೊಂದು ಇರಬಾರದು ಎನ್ನುವ ಹಠ ಮತ್ತು ಈಗಿನವರಿಗಿರುವಂತೆ "ಈಗೋ" ಹುಟ್ಟಿಕೊಳ್ಳುತ್ತದೆ. ಇಂದ್ರ ನೇರವಾಗಿ ಭೂಲೋಕಕ್ಕೆ ಬರುತ್ತಾನೆ. ಹೌದು ಆತನಿಗೆ ಎಲ್ಲೆಲ್ಲೂ ಯಜ್ಞದ ಆಹುತಿಗಳ ಪರಿಮಳ ಮೂಗಿಗೆ ಹೊಡೆಯುತ್ತದೆ. ಕಿವಿಗೆ ಸಸ್ವರವಾದ ವೇದ ಘೋಷಗಳು, ನರ್ತನ ಗೀತನ ವಾದನಾದಿಗಳು ಗಮನಕ್ಕೆ ಬರುತ್ತವೆ. ಇಂದ್ರ ಭ್ರಮಾಧೀನನಾಗುತ್ತಾನೆ. ಇದೇ ಸ್ವರ್ಗ ಎಂದು ಅದೇ ಸಮಯಕ್ಕೆ ಆತನಿಗೆ ಎದುರಾಗಿ ಬ್ರಾಹ್ಮಣ ವಟುಗಳು ಮಂತ್ರಗಳನ್ನು ಉರು ಹೊಡೆದುಕೊಳ್ಳುತ್ತಾ ಬರುತ್ತಿರುವುದು ಕಾಣಿಸುತ್ತದೆ ಅವರಲ್ಲಿಯೇ ಕೇಳುತ್ತಾನೆ. ಇದು ಯಾವ ನಗರ ? ಈ ಭವನ ಏನು ? ಎಂದು. ವಟುಗಳು ಹೇಳುತ್ತಾರೆ ಇದು ಭೂ ಲೋಕದ ಸ್ವರ್ಗ. ಇಲ್ಲಿರುವವರೆಲ್ಲಾ ಇಂದ್ರರೇ. ಎಂದು.
ಹೌದು ಭೂಲೋಕದ ಸ್ವರ್ಗವಾಗಿದ್ದು ನಮಗೀಗ ಕಾಣಸಿಗದಿರುವುದು ಬೇರಾವುದೂ ಅಲ್ಲ ಅದು ನಲಂದಾ !! ನಲಂದಾ ವಿಶ್ವವಿದ್ಯಾಲಯ ನಾವಂದು ಕೊಂಡತೇ ಕೇವಲ ಬೌದ್ಧ ಧರ್ಮದ ಅಧ್ಯಯನ ಕೇಂದ್ರವಾಗಿರಲಿಲ್ಲ. ಅದು ವಿಶ್ವದ ಬೇರೆ ಬೇರೆ ಪ್ರದೇಶದ ಜನರನ್ನು ತನ್ನೆಡೆಗೆ ಸೆಳೆದ ಅದ್ಭುತ ಪ್ರಪಂಚವಾಗಿತ್ತು. ಇಲ್ಲಿ ಪ್ರವೇಶ ಪಡೆಯಬೇಕಿದ್ದರೆ ಈಗಿನ ನಡಿಯಾ ಜಿಲ್ಲೆಯ ನವದ್ವೀಪದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಿತ್ತು. ಈ ನವದ್ವೀಪ ಇಂದಿಗೂ ಪ್ರಾಚೀನ ನಗರವೊಂದಕ್ಕೆ ಹೋದ ಅನುಭವ ಕೊಡುತ್ತದೆ. ಗಂಗಾ ಮತ್ತು ಪದ್ಮಾ ಎನ್ನುವ (ಗಂಗೆಯ ಕವಲು ನದಿ ಪದ್ಮಾ) ಒಂದೆಡೆ ಸೇರುವ ಪ್ರದೇಶ(ಇಲ್ಲಿಯೇ ಕೆಲವುವರ್ಷ ನಾನು ಇದ್ದೆ). ಈ ಗಂಗೆಯನ್ನು ದಾಟಿದರೆ ಭಕ್ತಿ ಪಂಥದ ಹರಿಕಾರ ಚೈತನ್ಯ ಮಹಾಪ್ರಭು ಜನಿಸಿದ ಊರು ಸಿಗುತ್ತದೆ. ಜೀವ, ರೂಪ ಮತ್ತು ಸನಾತನ ಗೋಸ್ವಾಮಿಯರ ಜನ್ಮ ಸ್ಥಳವದು. ಅಂತಹ ಪ್ರದೇಶದಲ್ಲಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಿತ್ತು. ಅಂತಹ ನಲಂದಾ ಕುರಿತಾದ ಒಂದು ಶಾಸನದಲ್ಲಿ ವರ್ಣನೆ ಹೀಗೆ ಬರುತ್ತದೆ :
ಬಿಳಿಯ ಧೋತ್ರವನ್ನು ಧರಿಸಿ ದೇಹವನ್ನು ಮುಚ್ಚುವಂತೆ ಉತ್ತರೀಯದೊಂದಿಗೆ ಶೋಭಿಸುತ್ತಾ ಕೈಯಲ್ಲಿ ಧರ್ಭೆಯ ಚಾಪೆಯನ್ನು ಹಿಡಿದು ತಲೆಯಲ್ಲಿ ಗೋಪಾದದಷ್ಟಿರುವ ಶಿಖೆಯನ್ನು ಧರಿಸಿ, ವೇದಾದಿಗಳ ಪದಕ್ರಮ, ಘನ ಪಾಠಗಳ ಉದ್ಘೋಷದೊಂದಿಗೆ ನಡೆದು ಬರುತ್ತಿರುವ ವಿದ್ಯಾರ್ಥಿಗಳ ಸಮೂಹವನ್ನು ನೋಡುತ್ತಿದ್ದರೆ ಅದು ಕೈಲಾಸದಲ್ಲಿರುವ ಶಿವನ ಮಂದಿರದಲ್ಲಿ ಸಾಕ್ಷಾತ್ ಶಿವನನ್ನೇ ಕಂಡಂತಹ ಭಾವ ಮನಸ್ಸಿನಲ್ಲಿ ಮೂಡುತ್ತಿತ್ತು. ಶುಭ್ರವಾದ ಸ್ವಚ್ಚವಾದ ಮನಸ್ಸು ಮತ್ತು ಕಲಿಕೆಯನ್ನು ನೋಡುತ್ತಿದ್ದರೆ ಇಡೀ ನಾಲಂದಾ ನಗರಿಯೇ ಮಂದ ಹಾಸದೊಂದಿಗೆ ವಿಜ್ರಂಭಿಸುತ್ತಿರುವಂತಿತ್ತು ಅಂತಹ ಪ್ರದೇಶಕ್ಕೆ ಎಲ್ಲಿಯಾದರೂ ಶತ್ರು ಸೈನ್ಯ ನುಗ್ಗಿದರೆ ಎದುರಿಸಬಲ್ಲ ಧನುರ್ವೇದದೊಂದಿಗೆ ಸಾಮರ್ಥ್ಯದ ತರಬೇತಿಯೂ ನಡೆಯುತ್ತಿತ್ತು. ಗೋಡೆಗಳಮೇಲೆ ಅಲ್ಲಲ್ಲಿ ಚಿತ್ತಾರಗಳ ಆಕರ್ಷಕ ಜೋಡಣೆ ಇತ್ತು. ಎಲ್ಲಾ ವಿಧದ ವಿದ್ವಜ್ಜನರ ಸಂದೋಹವೇ ಅಲ್ಲಿತ್ತು. ಒಂದೆಡೆ ದೇವವಾಣಿಯ ಕಲರವವಾದರೆ ಇನ್ನೊಂದೆಡೆ ಕಲಾವಿದರ ಕಲಾ ಪ್ರಕಾರಗಳ ಪ್ರದರ್ಶನ, ಛಾತ್ರ ಸಮೂಹಗಳ ದಂಡು ನೋಡಿದರೆ ಛಾತ್ರಾಲಯವು ದೇವಾಲಯ ಎನ್ನುವಂತಿತ್ತು. ಇದು ಬೇರೆಲ್ಲೂ ಅಲ್ಲ ನಮ್ಮ ನೆಲದಲ್ಲಿನ ಪ್ರಾಚೀನ ವಿದ್ಯಾಪೀಠ ನಾಲಂದಾದ ವರ್ಣನೆ. ಇದು ಯಶೋವರ್ಮದೇವನು ಹಾಕಿಸಿದ ನಾಲಂದಾದಲ್ಲಿರುವ ಶಿಲಾಶಾಸನದಲ್ಲಿರುವ ಸಾಲುಗಳು.
ಯಾಸಾವೂರ್ಜಿತ ವೈರಿ ಭೂ ಪ್ರವಿಗಲದ್ದಾನಾಂಬುಪಾನೋಲ್ಲಸನ್ಮಾದ್ಯೋದ್ಭೃಂಗಕರೀಂದ್ರಕುಂಭದಲನಪ್ರಾಪ್ತಶ್ರಿಯಾಂ ಭೂಭುಜಾಮ್ |
ನಾಲಂದಾ ಹಸತೀವ ಸರ್ವನಗರೀಃ ಶುಭ್ರಾಭ್ರಗೌರಸ್ಫುರಚ್ಚೈತ್ಯಾಂಶುಪ್ರಕಾರೈಃ ಸದಾಗಮಕಲಾವಿಖ್ಯಾತ ವಿದ್ವಜ್ಜನಾ || ||
ಯಸ್ಯಾಮಂಬುಧರಾ ವಲೇಹಿ ಶಿಖರ ಶ್ರೇಣೀ ವಿಹಾರವಲೀ ಮಾಲೇವೋರ್ಧ್ವವಿರಾಜಿನೀ ವಿರಚಿತಾ ಛಾತ್ರಾ ಮನೋಜ್ಞಾ ಭುವಃ |

ನಾನಾರತ್ನ ಮಯೂಖಜಾಲಖಚಿತ ಪ್ರಾಸಾದ ದೇವಾಲಯಾ ಸದ್ವಿದ್ಯಾಧರಸಂಘರಮ್ಯವಸತಿರ್ಧತ್ತೇ ಸುಮೇರೋಃ ಶ್ರಿಯಮ್ || ||
ಇಂತಹ ನಾಲಂದ ೧೦ನೇ ಶತಮಾನದ ತರುವಾಯ ನಾಶಹೊಂದಿತು. ಅದಕ್ಕೆ ಒಂದು ಬಲವಾದ ಕಾರಣವಿದೆ. ಭುಕ್ತಿಯಾರ ಖಿಲ್ಜಿ ಎಂಬ ಓರ್ವ ಮತಾಂಧರಾಜ ಆತ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ತಾನು ಸಾಕಿಕೊಂಡಿದ್ದ 400 ಕ್ಕೂ ಅಧಿಕ ವೈದ್ಯರಿಗೆ ಈತನ ರೋಗ ಪತ್ತೆ ಹಚ್ಚಿ ಗುಣಪಡಿಸಲಾಗಲಿಲ್ಲವಂತೆ. ಕೊನೆಗೆ ಯಾರೋ ಅವನಿಗೆ ನಲಂದಾ ವಿಶ್ವವಿದ್ಯಾಲಯದ ಕುಲಪತಿಗಳಾದ ಶೀಲಭದ್ರ ಎನ್ನುವವರ ಹೆಸರನ್ನು ಸೂಚಿಸುತ್ತಾರೆ. ಅಲ್ಲಿ ಹೋಗಿ ಗುಣ ಪಡಿಸಿಕೋ ಎಂದು. ಆತನಿಗಾದರೂ ಬೇರೆ ಧರ್ಮೀಯರಿಂದ ಚಿಕಿತ್ಸೆ ಪಡೆದುಕೊಳ್ಲಲು ಮನಸ್ಸಿರಲಿಲ್ಲ. ಹಾಗೆಯೇ ನಿರಾಕರಿಸುತ್ತಾನೆ. ಆದರೆ ದಿನದಿಂದ ದಿನಕ್ಕೆ ರೋಗದಿಂದ ತನ್ನ ದೇಹ ಕ್ಷೀಣಿಸುತ್ತಾ ಹೋದಾಗ ಅನಿವಾರ್ಯವಾಗಿ ಭದ್ರ ಅವರನ್ನು ಕರೆಸುತ್ತಾನೆ. ಆದರೆ ಅಲ್ಲಿಯೂ ಅವರೊಡನೆ ಸಹ ತನ್ನದೊಂದು ಷರತ್ತು ಮುಂದಿಡುತ್ತಾನೆ, ಅದೇನೆಂದರೆ ಯಾವುದೇ ರೀತಿಯ ಔಷಧಿಗಳಿಲ್ಲದೆ ಆತನನ್ನು ಗುಣಪಡಿಸಬೇಕೆಂದು. ಅದಕ್ಕೆ ಶೀಲಭದ್ರ ಸರಿ ಎಂದು ನಾಳೆ ಬರುವುದಾಗಿ ಹೇಳಿ ಹೊರಡುತ್ತಾರೆ. ಮರುದಿನ ಶೀಲಭದ್ರ ಅವರು ಕೈಯಲ್ಲಿ ಒಂದು ಖುರಾನ್ ಹಿಡಿದುಕೊಂಡು ಬಂದು ಅದನ್ನು ಭಕ್ತಿಯಾರ್ ಖಿಲ್ಜಿಯ ಕೈಗಿಟ್ಟು ದಿನಾ ಪುಟದಿಂದ ಪುಟದವರೆಗೆ ಓದು ಎಂದು ಹೇಳುತ್ತಾರೆ. ಆಶ್ಚರ್ಯವೆಂದರೆ ಕೆಲವೆ ದಿನಗಳಲ್ಲಿ ಖಿಲ್ಜಿ ಗುಣಮುಖನಾಗುತ್ತಾನೆ. ಆದರೆ ಓರ್ವ ಅನ್ಯಧರ್ಮದವಿನಿಂದ ಗುಣಮುಖನಾದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆತನಿಂದ ಸಾಧ್ಯವಾಗಲಿಲ್ಲ. ಕೂಡಲೇ ತನ್ನ ಸೈನ್ಯವನ್ನು ಕರೆದು ನಲಂದಾದಲ್ಲಿ ಖುರಾನ್ ಪುಸ್ತಕಗಳಿಗಾಗಿ ಹುಡುಕುವಂತೆ ಹೇಳುತ್ತಾನೆ, ಒಂದು ವೇಳೆ ಅದು ಸಿಗದೇ ಹೋದಲ್ಲಿ ಇಡೀ ವಿಶ್ವವಿಶ್ವವಿದ್ಯಾಲಯವನ್ನೇ ಸುಟ್ಟು ಭಸ್ಮ ಮಾಡುವಂತೆ ಆಜ್ಞೆ ಮಾಡುತ್ತಾನೆ. ಮುಂದೆ ನಡೆದದ್ದು ಕರಾಳ ಇತಿಹಾಸ. ಒಂಭತ್ತು ಮಹಡಿಗಳಲ್ಲಿ ಹರಡಿಕೊಂಡಿದ್ದ ಗ್ರಂಥಾಲಯ ಹೊತ್ತಿ ಉರಿಯುತ್ತದೆ. ಅದೆಷ್ಟೋ ಅಮೂಲ್ಯ ಗ್ರಂಥಗಳು ನಮ್ಮ ಕಣ್ಣಿನಿಂದ ಮರೆಯಾಗುತ್ತವೆ. ಭಾರತ ಮಾತ್ರವಲ್ಲ ಜಗತ್ತಿನ ಭವ್ಯ ಇತಿಹಾಸವನ್ನೇ ಕೊನೆಗಾಣಿಸುತ್ತಾನೆ ಪಾಪಿ ಮತಾಂಧ. ಆದರೆ ಭಕ್ತಿಯಾರ್ ಖಿಲ್ಜಿಗೆ ಶೀಲಭದ್ರ ಕೊಟ್ಟ ಚಿಕಿತ್ಸೆ ಏನು ಅಂತ ಉತ್ಸುಕರಾಗಿರಬಹುದು. ಒಂದು ಖುರಾನ್ ಅವನ ಆರೋಗ್ಯವನ್ನು ಸುಧಾರಿಸಿತೇ? ಇಲ್ಲ. ಆತ ಆಯುರ್ವೇದದ ಕೆಲ ಔಷಧಿಗಳ ಲೇಪನವನ್ನು ಖುರಾನಿನ ಪುಟಗಳ ಮೇಲೆ ಲೇಪನ ಮಾಡಿದ್ದ . ಖುರಾನ್ ಓದುವಾಗ ದ್ರವ್ಯಗಳ ವಾಸನೆ ಮೂಗಿನ ಮುಖಾಂತರ ಹಾಗೂ ಪ್ರತಿಬಾರಿ ಪುಟ ತಿರುಗಿಸುವಾಗ ಆತ ನಾಲಿಗೆಗೆ ಎಂಜಲಿಗೆಂದು ಬೆರಳು ತಾಗಿಸಿ ಪುಟ ತಿರುಗಿಸುತ್ತಿದ್ದಾಗ ಬಾಯಿಯಮುಖಾಂತರ ಆತನ ದೇಹ ಸೇರುತಿತ್ತು. ಭಕ್ತಿಯಾರ್ ಖಿಲ್ಜಿ ಔಷಧವಿಲ್ಲದೇ ಗುಣಮುಖನಾಗಿದ್ದ. ಆದರೆ ಗುಣಪಡಿಸಿದ ಕಾರಣಕ್ಕೆ ಪ್ರತ್ಯುಪಕಾರ ಮಾಡಬೇಕಿತ್ತಲ್ಲ ಅದನ್ನೂ ಮಾಡಿಬಿಟ್ಟ



No comments:

Post a Comment