Search This Blog

Monday 19 March 2018

ಆರ್ಯರೇಕೆ ಈ ನೆಲದಿಂದ ವಲಸೆ ಹೋಗಿರಲಾರರು ???


ಸುದಾಸ ಅತ್ಯಂತ ಬಲಿಷ್ಠನಾದ ರಾಜನಾಗಿದ್ದ ಸೂರ್ಯವಂಶದ ಸುದಾಸ ವೇದ ಮತ್ತು ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದವರಲ್ಲಿ ಒಬ್ಬ. ತನ್ನ ಪ್ರತಿಯೊಂದು ಕಾರ್ಯಕ್ಕೂ ವಿಶ್ವಾಮಿತ್ರನ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದ. ಒಮ್ಮೆ ಈತ ತನ್ನ ವಿರೋಧಿಗಳಾದ ಶಿಮ್ಯು, ತುರ್ವಶ, ದ್ರುಹ್ಯು, ಕವಶ, ಪೂರು, ಅನು, ಭೇದ, ಶಂಬರ, ವೈಕರ್ಣ ಮತ್ತು ಇನ್ನೊಬ್ಬ ವೈಕರ್ಣ ಹೀಗೆ ಹತ್ತು ರಾಜರೊಡನೆ ಯುದ್ಧ ಮಾಡಬೇಕಾಗುತ್ತದೆ. ಹತ್ತುಜನ ರಾಜರೊಡನೆ ಅವರ ಬಲದೊಡನೆ ಸೆಣಸುವಾಗ ಈತನ ಯುದ್ಧದ ಭೀಕರತೆ ಹಾಗಿರಲಿಕ್ಕೇ ಬೇಕು. ಈ ಯುದ್ಧದಲ್ಲಿ ತ್ರುತ್ಸು ಎನ್ನುವ ಜನಾಂಗದವರು ಸುದಾಸನಿಗೆ ನೆರವಾದರು ಎಂದು ತಿಳಿದು ಬರುತ್ತದೆ.
ನಿಗವ್ಯವೋ ನವೋ ದ್ರುಹ್ಯವಶ್ಚ ಷಷ್ಟಿಃ ಶತಾ ಶುಷುಪುಃ ಷಟ್ ಸಹಸ್ರಾ | ಷಷ್ಟಿರ್ವಿರಾಸೋ ಅಧಿ ಷಡ್ಡುವೋಯು ವಿಶ್ವೇದಿಂದ್ರಸ್ಯ ವೀರ್ಯಾ ಕೃತಾನಿ || ೭ : ೨ : ೧೮ ||( ಈ ಮಂತ್ರದ ಅರ್ಥ : ಸುದಾಸನ ಗೋವುಗಳನ್ನು ಅಪಹರಿಸಲು ಯತ್ನಿಸಿದ ಅನು, ದ್ರುಹ್ಯು ಮೊದಲಾದವರ ಗುಂಪಿಗೆ ಸೇರಿದ ೬೬೬೬೦ಜನ ಸೈನಿಕರೊಂದಿಗೆ ಹೋರಾಡಿ ಇಂದ್ರನಿಂದ ಹತರಾಗಿ ಮಲಗಿಸಲ್ಪಟ್ತರು. ಎಂದಾಗುತ್ತದೆ(ಈ ಯುದ್ಧಕ್ಕಾಗಿ ಇಂದ್ರ ಆಯುಧಗಳನ್ನು ಕೊಟ್ಟ ಎಂದು ಮೊದಲು ಬಂದಿದೆ)
ತೃತ್ಸುಗಳ ಸಹಾಯವನ್ನು ಪಡೆದು ನಡೆದ ಯುದ್ಧದಲ್ಲಿ ಹತ್ತು ಮಂದಿ ರಾಜರನ್ನೂ ಯುದ್ಧದಲ್ಲಿ ಸೋಲಿಸಿದನು. ಈ ಯುದ್ಧವು ಪರುಷ್ಣೀನದಿ(ಪಂಜಾಬ್)ದಡದಲ್ಲಿ ನಡೆಯಿತೆಂದು ತಿಳಿದು ಬರುತ್ತದೆ.
ಅರ್ಧಂ ವೀರಸ್ಯ ಶ್ರತಪಾಮನಿಂದ್ರಂ ಪರಾ ಶರ್ಧಂತಂ ನುನುಧೇ ಅಭಿ ಕ್ಷಾಂ |
ಇಂದ್ರೋ ಮನ್ಯುಂ ಮನ್ಯುಮ್ಯೋ ಮಿಮಾಯ ಭೇಜೇ ಪಥೋ ವರ್ತನಿಂ ಪತ್ಯಮಾನಃ || ೧೬ || ಬಹಳ ಪರಾಕ್ರಮಿಯಾದ ಸುದಾಸನಿಗೆ ಹಿಂಸಕನಾಗಿದ್ದ ದ್ರುಹ್ಯುವು ಇಂದ್ರನಿಗೆ ಅರ್ಪಿಸತಕ್ಕ ದ್ರವ್ಯಾದಿಗಳನ್ನೂ ಅಪಹರಿಸಿ ಇಂದ್ರನಿಗೂ ವಿರೋಧಿಯಾಗಿದ್ದ. ಆದುದರಿಂದ ಸುದಾಸನು ಪರಾಕ್ರಮದಿಂದ ಹೋರಾಡಿದಾಗ ಶತ್ರುವು ಪಲಾಯನ ಮಾಡಿದನಂತೆ. ಅದೇ ರೀತಿ ಋಗ್ವೇದ ೩೩ನೇ ಮಂಡಲದಲ್ಲಿಯೂ ಇದೇ ವರ್ಣನೆ ಬಂದಿದ್ದು. ಸುದಾಸನಿಗೆ ಯದು ಎನ್ನುವ ರಾಜನ ಬೆಂಬಲವೂ ಸಿಗುತ್ತದೆ ಎಂದು ಹೇಳಲಾಗಿದೆ ಯದುವಿನ ಸಂಗಡ ಅವನ ಅನುಯಾಯಿಗಳಾದ ಮತ್ಸ್ಯರು, ಸಕ್ಥರು, ಭಲಾನರು, ವಿಷಾಣಿಗಳು, ಅಲಿನರು, ಹೀಗೇ ಅನೇಕ ಜನಾಂಗದವರನ್ನು ಕರೆತಂದಿದ್ದ ಎಂದು ಹೇಳಲಾಗುತ್ತದೆ. ಇಲ್ಲಿ ಇನ್ನೊಂದು ಮುಖ್ಯವಾದ ಅಂಶವೆಂದರೆ ಈ ಮಂಡಲದ ದೃಷ್ಟಾರ ವಶಿಷ್ಟ. ಸುದಾಸನಿಗೆ ಪುರೋಹಿತ ಮತ್ತು ಮಾರ್ಗದರ್ಶಕ ವಿಶ್ವಾಮಿತ್ರನಾಗಿದ್ದ ಈ ಯುದ್ಧ ಸಹ ವಿಶ್ವಾಮಿತ್ರನ ಸಮ್ಮುಖದಲ್ಲೇ ನಡೆದಿರುವುದು. ಆದರೆ ಇಲ್ಲಿ ಸುದಾಸನ ಬೆಂಬಲಕ್ಕೆ ಬಂದಿದ್ದ ತೃತ್ಸು ಜನಾಂಗದವರ ಮಾರ್ಗದರ್ಶಕ ವಶಿಷ್ಟನಾಗಿದ್ದ ಎನ್ನುವುದು ತಿಳಿದು ಬರುತ್ತದೆ. ಮುಂದೆ ವಶಿಷ್ಟ ಮತ್ತು ವಿಶ್ವಾಮಿತ್ರರಿಗೂ ವೈರತ್ವ ಬೆಳೆಯುವುದು ತಿಳಿಯುತ್ತದೆ. ಸುದಾಸನು ವಿಪಾಶಾ ಮತ್ತುಶತದ್ರು ನದಿಗಳ ಮಧ್ಯದ ಪ್ರದೇಶದ ರಾಜನಾಗಿದ್ದ ಎಂದು ತಿಳಿದು ಬರುತ್ತದೆ.
ಯುವಾಂ ಹವಂತ ಉಭಯಾಸ ಆಜಿಷ್ವಿಂದ್ರಂ ಚ ವಸ್ವೋ ವರುಣಂ ಚ ಸಾತ ಯೇ |
ಯತ್ರ ರಾಜಭಿರ್ದಶಬಿರ್ನಿಬಾಧಿತಂ ಪ್ರ ಸುದಾಸ ಮಾವತಂ ತೃತ್ಸು ಭಿಃ ಸಹ || ಎಂದು ಋಗ್ವೇದದ ೭ನೇ ಮಂಡಲದ ೮೩ನೇ ಸೂಕ್ತದಲ್ಲಿ ಬರುತ್ತದೆ. ಇದು ಮೇಲೆ ವಿವರಿಸಿದ ಯುದ್ಧಕ್ಕೆ ಸಂಬಂಧಿಸಿದೆ.
ಇದೇ ಯುದ್ಧವನ್ನು ದಾಶರಾಜ್ಞ ಎಂದು ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ.        

ಮಹಾಭಾರತದ ಆದಿಪರ್ವದ ೭೫ನೇ ಅಧ್ಯಾಯದಲ್ಲಿನ ಕಥೆಯೊಂದನ್ನು ಗಮನಿಸೋಣ
ಇಂದ್ರಪದವಿಗೇರಿದ ನಹುಷನ ಎರಡನೆಯ ಮಗನಾದ ಯಯಾತಿಯು ಚಕ್ರವರ್ತಿಯಾದನು. ಅವನು ಸತ್ಯವಂತನೂ, ಪರಾಕ್ರಮಿಯೂ ಆಗಿದ್ದನಲ್ಲದೇ ರಾಜ್ಯವನ್ನು ಧರ್ಮದಿಂದಲೂ ಪರಿಪಾಲನೆಮಾಡುತ್ತಿದ್ದನು. ಅವನ ಪತ್ನಿಯರಾದ ದೇವಯಾನೀ ಮತ್ತು ಶರ್ಮಿಷ್ಠೆಯರಲ್ಲಿ ಅವನಿಗೆ ಗುಣವಂತರೂ ಪರಾಕ್ರಮಿಗಳೂ ಆದ ಮಕ್ಕಳು ಹುಟ್ಟಿದರು. ದೇವಯಾನಿಗೆ ಯದು, ತುರ್ವಸು ಎಂಬುವರೂಹುಟ್ಟಿದರೆ, ಶರ್ಮಿಷ್ಠೆಯಲ್ಲಿ ದ್ರುಹ್ಯು, ಅನು ಮತ್ತು ಪೂರು ಎಂಬುವರೂ ಹುಟ್ಟಿದರು. ಯಯಾತಿಯು ಅನೇಕ ವರ್ಷಗಳ ಕಾಲ ರಾಜ್ಯವನ್ನು ಪರಿಪಾಲಿಸುತ್ತಿದ್ದು ಆತನಿಗೆ ಮುಪ್ಪು ಆವರಿಸಿ ಕುರೂಪಿಯಾದ, ನೋಡಲು ಮಹಾಘೋರವಾಗಿದ್ದ ವೃದ್ಧಾಪ್ಯವನ್ನು ಅಕಾಲದಲ್ಲಿ ಪಡೆಯಬೇಕಾಯಿತು. ಆದರೆ ಆತನಿಗೆ ಇಂದ್ರಿಯದ ಸೆಳೆತದಿಂದ ನಿಗ್ರಹ ಪಡೆಯಲಾಗಲಿಲ್ಲ. ಆಗ ಯದು, ತುರ್ವಸು, ಪೂರು, ದ್ರುಹ್ಯು, ಮತ್ತು ಅನುಗಳನ್ನು ಕರೆದು ಯಯಾತಿಯು ಹೇಳಿದನು "ನನಗೆ ವೃದ್ಧಾಪ್ಯವು ಅಕಾಲಿಕವಾಗಿ ಪ್ರಾಪ್ತವಾಗಿದೆ. ಆದರೆ ನನ್ನ ಕಾಮನೆಗಳು ಪೂರ್ಣವಾಗಿಲ್ಲ. ಪುನಃ ಯುವಕನಾಗಿ ಕೆಲವು ಕಾಲ ಯುವತಿಯರೊಡನೆ ವಿಹರಿಸಿಕೊಂಡಿರಲು ಇಚ್ಛಿಸಿದ್ದೇನೆ. ಅದಕ್ಕಾಗಿ ನೀವು ನನಗೆ ಸಹಾಯಮಾಡಿ.” ತಂದೆಯು ಹೇಳಿದ ಮಾತುಗಳನ್ನು ಕೇಳಿ ದೇವಯಾನಿಯ ಮಗನಾದ ಮತ್ತು ಹಿರಿಯವನಾದ ಯದುವು ಸಾಧ್ಯವಿಲ್ಲ ಎಂದನು.
ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ಪ್ರಯಚ್ಛಸಿ |
ತಸ್ಮಾದರಾಜ್ಯಭಾಕ್ತಾತ ಪ್ರಜಾ ತವ ಭವಿಷ್ಯತಿ || ||
 “ನನ್ನ ಔರಸಪುತ್ರನಾಗಿಯೂ ನಾನು ಹೇಳಿದ ಕಾರ್ಯವನ್ನು ಮಾಡುವುದಿಲ್ಲ ಎಂದು ಹೇಳುತ್ತಿರುವೆ ನೀನು ನಿನ್ನ ಯೌವನವನ್ನು ಕೊಡಲು ನಿರಾಕರಿಸಿದುದರಿಂದ ನಿನ್ನ ಮಕ್ಕಳು ಯಾರೂ ಸಹ ರಾಜರಾಗದಿರಲಿ”–ಎಂದು ಶಪಿಸಿ ಎರಡನೆಯವನಾದ ತುರ್ವಸುವನ್ನು ಕರೆದು ಕೇಳಿದನು : “ತುರ್ವಸು! ನಿನ್ನ ಯೌವನವನ್ನು ಒಂದು ಸಾವಿರ ವರ್ಷಗಳವರೆಗೆ ಮಾತ್ರ ಕೊಟ್ಟುಬಿಡು ಅನಂತರ ನಾನೇ ನಿನಗೆ ಮತ್ತೆ ನಿನ್ನ ಯೌವನವನ್ನು ಕೊಡುವೆನು. ನಿನ್ನ ಯೌವನವನ್ನು ಪಡೆದುಕೊಂಡು ಇನ್ನೂ ಒಂದು ಸಾವಿರ ವರ್ಷಗಳ ಕಾಲ ಸುಖಪಡುವ ಅಭಿಲಾಷೆಯಿದೆ ಎಂದನು. ಅದಕ್ಕೆ ತುರ್ವಸುವು ಕಾಮೋಪಭೋಗಗಳನ್ನೇ ಹಾಳುಮಾಡುವ, ಶಕ್ತಿ- ಸಾಮರ್ಥ್ಯಗಳನ್ನೂ ಸೌಂದರ್ಯವನ್ನೂ ವಿನಾಶಮಾಡುವ, ಬುದ್ಧಿಶಕ್ತಿಯನ್ನೂ ಹಾಗೂ ಕೊನೆಗೆ ಪ್ರಾಣವನ್ನೂ ಕುಂಠಿತಗೊಳಿಸುವ ವೃದ್ಧಾಪ್ಯವನ್ನು ನಾನು ಅಪೇಕ್ಷಿಸುವುದಿಲ್ಲ. ನನಗದು ಬೇಡ ಎನ್ನುತ್ತಾನೆ.
ಇದರಿಂದ ಕುಪಿತನಾದ ಯಯಾತಿಯು
ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ಪ್ರಯಚ್ಛಸಿ |
ತಸ್ಮಾತ್ಪ್ರಜಾ ಸಮುಚ್ಛೇದಂ ತುರ್ವಸೋ ತವ ಯಾಸ್ಯತಿ || ೧೩ ||
ಸಂಕೀರ್ಣಾಚಾರಧರ್ಮೇಷು ಪ್ರತಿಲೋಕಚರೇಷು |
ಪಿಶಿತಾಶಿಷು ಚಾನ್ತ್ಯೇಷು ಮೂಢ ರಾಜಾ ಭವಿಷ್ಯಸಿ || ೧೪ ||
ಗುರುದಾರಪ್ರಸಕ್ತೇಷು ತಿರ್ಯಗ್ಯೋನಿಗತೇಷು |
ಪಶುಧರ್ಮೇಷು ಪಾಪೇಷು ಮ್ಲೇಚ್ಛೇಷು ತ್ವಂ ಭವಿಷ್ಯಸಿ || ೧೫ ||
ನನ್ನ ಮಗನಾಗಿ ಹುಟ್ಟಿಯೂ ನಿನ್ನ ಯೌವನವನ್ನು ಕೊಡದೇ ಇರುವುದಕ್ಕಾಗಿ ನಿನ್ನ ಸಂತಾನವು ನಶಿಸಲಿ. ಸಂಕೀರ್ಣಜಾತಿಯ, ದುರಾ ಚಾರಿಗಳ, ವಿಲೋಮಜಾತಿಯ, ಮಾಂಸಭಕ್ಷಕರ, ಗುರುಪತ್ನೀಸಮಾಗಮ ವನ್ನೂ ಸಹ ಮಾಡಲು ಹಿಂಜರಿಯದ, ಕೇವಲ ಪಶು-ಪಕ್ಷಿಗಳಂತೆ ಜೀವನ ನಡೆಸುವ ಮ್ಲೇಚ್ಛಜಾತಿಗೆ ನೀನು ರಾಜನಾಗು. ಎಂದು ಶಪಿಸುತ್ತಾನೆ.
ಯಯಾತಿಯು ದೇವಯಾನಿಯ ಮಕ್ಕಳಿಬ್ಬರಿಗೂ ಶಾಪಕೊಟ್ತ ನಂತರ ಶರ್ಮಿಷ್ಠೆಯ ಮಗನಾದ ದ್ರುಹ್ಯುವನ್ನು ಕರೆದು ಹೇಳಿದನು: “ದ್ರುಹ್ಯುವೇ ಒಂದೇ ಒಂದು ಸಾವಿರ ವರ್ಷಗಳ ಕಾಲ ನನ್ನ ಕಾಂತಿ ಮತ್ತು ರೂಪಗಳನ್ನು ವಿನಾಶಗೊಳಿಸುವ ವೃದ್ಧಾಪ್ಯವನ್ನು ನೀನು ತೆಗೆದುಕೋ. ನಿನ್ನ ಯೌವನವನ್ನು ನನಗೆ ಕೊಡು. ಸಾವಿರವರ್ಷಗಳು ಮುಗಿದೊಡನೆಯೇ ನಿನ್ನ ಯೌವನವನ್ನು ಪುನಃ ನಿನಗೇ ಕೊಟ್ಟು ನನ್ನ ವೃದ್ಧಾಪ್ಯವನ್ನು ದೋಷದೊಡನೆ ಹಿಂದಕ್ಕೆ ತೆಗೆದುಕೊಳ್ಳುವೆನು ಎನ್ನುತ್ತಾನೆ. ಅದಕ್ಕೆ ದ್ರುಹ್ಯುವು ಹೇಳುತ್ತಾನೆ
ಗಜಂ ರಥಂ ನಾಶ್ವಂ ಜೀರ್ಣೋ ಭುಙ್ಕ್ತೇ ವಾಕ್ಸಙ್ಗಶ್ಚಾಸ್ಯ
ಭವತಿ ತಾಂ ಜರಾಂ ನಾಭಿಕಾಮಯೇಅಪ್ಪಾ! ಸ್ತ್ರಿಯಮ್‍ | || ೧೯ ||
ಮುದಿತನದಲ್ಲಿ ಕುದುರೆಸವಾರಿ ಮಾಡಲು ಸಾಧ್ಯವಿಲ್ಲ.ಆನೆ, ರಥಾದಿಗಳ ಮೇಲೆ ಹತ್ತಲೂ ಸಾಧ್ಯವಾಗಲಾರದು. ಹೆಂಗಸರನ್ನೂ ಉಪಭೋಗಿಸಲು ಸಾಧ್ಯವಿಲ್ಲ. ಮುದಿತನದಲ್ಲಿ ಮಾತೂ ತೊದಲುತ್ತದೆ. ಇಂತಹ ನಿಷ್ಪ್ರಯೋಜಕವಾದ ಮುದಿತನವು ನನಗೆ ಬೇಡ. ಯಯಾತಿಗೆ ಇಂತಹ ಮಾತುಗಳನ್ನು ಕೇಳಿ ಸ್ಥಿಮಿತ ತಪ್ಪಿತು. ಕೋಪವು ಹೆಚ್ಚಿತು. “ಮಕ್ಕಳು, ಮಕ್ಕಳುಎಂದು ಹಂಬಲಿಸುವುದೇಕೆ? ಕೇವಲ ಒಂದು ಸಾವಿರ ವರ್ಷಗಳ ಕಾಲ ನಿನ್ನ ಯೌವನವನ್ನು ನನಗೆ ಕೊಡಲು ಸಾಧ್ಯವಿಲ್ಲವೆಂದರೆ ನೀನು ಮಗನಾಗಿ ಹುಟ್ಟಿದುದರ ಪ್ರಯೋಜನವಾದರೂ ಏನು? ಆನೆ, ರಥ, ಕುದುರೆ ಇತ್ಯಾದಿಗಳಿಂದ ಸುಖವನ್ನು ಅಭಿಲಾಷಿಸಿರುವೆಯಲ್ಲವೇ? ರಥಸಂಚಾರಕ್ಕೆ ಅಯೋಗ್ಯವಾದ, ಸರಿಯಾದ ದಾರಿಯಿಲ್ಲದ, ಹಳ್ಳ-ಕೊಳ್ಳಗಳೂ, ಬೆಟ್ಟ-ಗುಡ್ಡಗಳೂ ಇರುವ ಪ್ರದೇಶಕ್ಕೆ ನೀನು ರಾಜನಾಗುವೆ. ನೀನು ಹೆಸರಿಗೆ ಮಾತ್ರ ರಾಜನಾಗಿರುವೆಯೇ ಹೊರತು ನಿನ್ನ ಅಧಿಕಾರವೇನೂ ರಾಜ್ಯದಲ್ಲಿ ನಡೆಯದಿರಲಿ.” ಎಂದು ಶಪಿಸುತ್ತಾನೆ ದಾಶರಾಜ್ಞದಲ್ಲಿ ವಿವರಿಸಲ್ಪಟ್ಟ ಈ ದ್ರುಹ್ಯುವೇ ಮುಂದೆ ಪ್ರಾಚೀನ ಯುರೋಪಿನ ಕಡೆ ವಲಸೆ ಹೋಗುತ್ತಾರೆ. ಪ್ರಾಚೀನ ಯೂರೋಪಿಯನ್ನರು ಇವರನ್ನೇ ಡ್ರೂಯಿಡ್ಸ್ ಎಂದು ಕರೆದರು. ಇವರು ಐರ್ಲೆಂಡ್, ವೇಲ್ಸ್ ಮುಂತಾದೆಡೆಗಳಲ್ಲಿ ನೆಲೆಸಿದರು ಎಂದು ತಿಳಿದು ಬರುತ್ತದೆ. ( ದ್ರೂಯಿಡ್ಸ್ ಎಂದರೆ ಪುರೋಹಿತ ವರ್ಗ ಎಂದು ಅರ್ಥ ಸೂಚಿಸುತ್ತದೆ.)ಡ್ರೂಯಿಡ್ ದಾಖಲೆಗಳು ಸಹ ಕ್ರಿಸ್ತ ಪೂರ್ವ ೩೭೦೦ಕ್ಕೂ ಪೂರ್ವದಲ್ಲಿ ಮಧ್ಯ ಏಶಿಯಾದಿಂದ ವಲಸೆ ಬಂದವರು ಎಂದು ಸಾರುತ್ತವೆ. ದಾಶರಾಜ್ಞ ಸುದಾಸನಿಂದ ಪರಾಭವಹೊಂದಿ ವಲಸೆ ಹೋದ ಪಾರ್ಥಿವರು ಪಾರ್ತಿಯನ್ ಆದರು ಪರ್ಶುಗಳು ಪರ್ಶಿಯನ್ ಆದರು, ಅಲೀನರು ಪ್ರಾಚೀನ ಗೀಕ್ ನ ಹೆಲಿನ್ ಆದರು ಹೀಗೆ ಇಲ್ಲಿಂದ ವಲಸೆ ಹೋಗಿ ಇಲ್ಲಿನ ನಾಗರೀಕತೆಯ ಸಾಮ್ಯತೆ ಹೊಂದಿದರು ಆದರೆ ಕಾಲ ಕ್ರಮೇಣ ತಥಾ ಕಥಿತ ಬುದ್ಧಿ ಜೀವಿಗಳೆನ್ನಿಸಿಕೊಂಡವರನೇಕರಿಗೆ ಇದು ಹಿಡಿಸಲಿಲ್ಲ ಅಲ್ಲಿನಿಂದಲೇ ಇಲ್ಲಿ ಬಂದರು ಎನ್ನುವ ಹುಯಿಲೆಬ್ಬಿಸಿದರು. ಇಂತಹ ವಾದ ಸರಣಿಗೆ ತುಪ್ಪ ಸುರಿದದ್ದು ಮಾಕ್ಸ್ ಮುಲ್ಲರ್ ನಂತವರು, ಮೆಕಾಲೆಯಂತೂ ಅಲ್ಲಿಂದ ಇಲ್ಲಿಗೆ ವಲಸೆ ಬಂದದ್ದೇ ಮುಂದಿನ ಪೀಳಿಗೆ ಕಲಿಯ ಬೇಕೆನ್ನುವ ಹಠಕ್ಕೆ ಬಿದ್ದು ಸಾಧಿಸಿಕೊಂಡ ಪರಮಪಾಪಿ.



No comments:

Post a Comment