Search This Blog

Monday 5 March 2018

ಕಟುಕ - ಕಟಕ - ಕಟು ಏನಿದು


ಕಟುಕ ಎನ್ನುವ ಪದ ಕ್ರೂರತೆಯನ್ನು ಅಥವಾ ನಿರ್ದಯತೆಯನ್ನು ಸೂಚಿಸುವ ಪದ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿಯೂ ಅದೇ ಅರ್ಥವನ್ನೇ ಕೊಡುತ್ತದೆ.ಮೋನಿಯರ್ ವಿಲ್ಲಿಯಂ ನಲ್ಲಿಯೂ ಅದೇ ಅರ್ಥ ಬರುವಂತೆ ಕೊಡಲಾಗಿದೆ. ಆ ಪದವನ್ನು ಕೇಳುವಾಗಲೇ ಹಿಂಸೆಯನ್ನು ನೆನಪಿಗೆ ತರುತ್ತದೆ. ಕಟುಕ ಎನ್ನುವ ಪದ ನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥ ಬರುವಂತೆ ಉಪಯೋಗಿಸಲಾಗಿದೆ. ಆದರೆ ತಾಲೇಶ್ವರದ ಕ್ರಿ. ಶ. ಸುಮಾರು ೫ನೇ ಶತಮಾನಕ್ಕೆ ಸರಿಹೊಂದುವ ಶಾಸನದಲ್ಲಿ ಮೊತ್ತ ಮೊದಲಿಗೆ ಬಳಕೆಗೊಂಡಿದೆ.
"ಪರಮ ಭಟ್ಟಾರಕ ಮಹಾರಾಜಾಧಿರಾಜ ಶ್ರೀ ದ್ಯುತಿವರ್ಮ್ಮಾ ಕುಶಲೀ ಪರ್ವ್ವತಾಕರ ರಾಜ್ಯೇ ಅಶ್ಮದ್ವಂಶ್ಯಾನ್ ಮಹಾರಾಜ ವಿಶೇಷಾನ್ ಪ್ರತಿಮಾನ್ಯ ದಂಡೋಪರಿಕ ಪ್ರಮಾತಾರ ಪ್ರತೀಹಾರ ಕುಮಾರಾಮಾತ್ಯ ಪೀಲುಪತ್ಯಶ್ವಪತಿ ಜಯನಪತಿ, ಗಂಜಪತಿ, ಸೂಪಕಾರಪತಿ, ತಗರಪತಿ, ವಿಷಯಪತಿ, ಭೋಗಿಕ, ಭಾಗಿಕ, ದಾಂಡ ವಾಶಿಕ, ಕಟುಕ ಪ್ರಭೃತ್ಯನುಜೀವಿ ವರ್ಗ್ಗಮ್" ಎಂದು ಬಂದಿದೆ.

ಪರಮ ಭಟ್ಟಾರಕ ಮಹಾರಾಜಾಧಿರಾಜ ದ್ಯುತಿವರ್ಮನು ತನ್ನ ರಾಜ್ಯದ ಪರ್ವತದಂತಿರುವ ತನ್ನ ರಾಜ್ಯದ ಮಂತ್ರಿಮಂಡಲ ಮತ್ತು ನ್ಯಾಯ, ಸೇನೆ, ದಂಡಾಧಿಕಾರಿಗಳು, ಪ್ರತೀಹಾರರು, ಕುದುರೆಯನ್ನು ನೋಡಿಕೊಳ್ಳುವವರು, ಗಜಪಡೆಯ ಮೇಲುಸ್ತುವಾರರು ಅಡುಗೆಯವರು, ಆರಕ್ಷಕರು, ಭೋಗಿಕರು, ಕಟುಕರು(ಇಲ್ಲಿ ಇದು ನ್ಯಾಯಾಧೀಶರ ಆಜ್ಞಾ ಪಾಲಕರು) ಇತ್ಯಾದಿ ರಾಜನ ಪರಿವಾರವನ್ನು ಸೂಚಿಸುತ್ತದೆ. ಆದರೆ ಈ ಕಟುಕ ಎನ್ನುವ ಪದ ವ್ಯಕ್ತಿಗಳ ಹೆಸರಾಗಿಯೂ ಗುರುತಿಸಿಕೊಂಡದ್ದು ಕಾಣಸಿಗುತ್ತದೆ. ಸುಮಾರು ೧೨ನೇ ಶತಮಾನದ ನಂತರದ ಚಹಮಾನ ರಾಜ ವಂಶದವರ ಶಾಸನಗಳಲ್ಲಿ ಕಟುಕರಾಜ ಮತ್ತು ಕಟುದೇವ ಎಂದು ಕಾಣಿಸಿಕೊಂಡರೆ. ಅಮ್ಮರಾಜನ ಕಾಲದಲ್ಲಿನ ಒಂದು ಶಾಸನದಲ್ಲಿ ಮಂತ್ರಿಯೊಬ್ಬನ ಹೆಸರು ಕಟಕರಾಜ ಎಂದು ಉಲ್ಲೇಖ ಗೊಂಡಿದೆ.
ತುರ್ಯವೃತ್ತಾತ್ ಸಮಾರಭ್ಯ ವೃತ್ತಾನ್ಯೇತಾನಿ ಷೋಡಶ |
ಆದ್ಯವೃತ್ತೇನ ಯುಕ್ತಾನಿ ಕೃತಾವಾನ್ ಕಟುಕೋ ಬುಧಃ || ಪರಮಾರ ರಾಜ ವಿಜಯರಾಜನ ಅರ್ಥೂಣ ಶಸನದಲ್ಲಿ ಒಬ್ಬ ಬ್ರಾಹ್ಮಣ ನ ಹೆಸರಾಗಿ ಕಟುಕ ಶಬ್ದ ಪ್ರಯೋಗಗೊಂಡಿದೆ. ಕಟುಕತ್ತಂಭ ಎನ್ನುವುದಾಗಿ ಇನ್ನೊಂದು ಶಾಸನದಲ್ಲಿ ಉಲ್ಲೇಖ ಸಿಗುತ್ತದೆ ಇದು ಒಬ್ಬ ರಾಜನ ಹೆಸರನ್ನು ಸೂಚಿಸುತ್ತದೆ. ದೇವಪ್ರಯಾಗದ ಸಮೀಪದ ಶಾಸನ. ಜೈನರಲ್ಲಿಯೂ ಕಟುಕ ಶಬ್ದ ಬಳಕೆಗೆ ಬಂದಿದ್ದರೂ ಸಹ ಅದು ಕ್ರೌರ್ಯವನ್ನು ಸೂಚಿಸುವುದಕ್ಕಾಗಿಯಲ್ಲ ಎನ್ನುವುದು ವಿಶೇಷವಾಗುತ್ತದೆ. ಧರ್ಮ ಶಸ್ತ್ರದ ಇತಿಹಾಸದ ಪುಸ್ತಕದಲ್ಲಿಯೂ ಕಟುಕಾನ್ನು ನಿರ್ಧರಿಸಲು ಅಷ್ಟು ಶಕ್ತರಾಗಿಲ್ಲ. ಇನ್ನು ತಾಲೇಶ್ವರದ ಶಾಸನದಲ್ಲಿ ಕಟುಕದ ಕುರಿತಾಗಿ ಸಿಗುವ ಉಲ್ಲೇಖ ರೂಢಿಯಲ್ಲಿರುವ ಶಬ್ದಕ್ಕು ಸಾಮ್ಯತೆ ಕಂಡು ಬರುತ್ತದೆ.
ಇನ್ನು ಸಾಹಿತ್ಯದ ಅಂಶವಾಗಿ ಗಮನಿಸಿದರೆ ಬಾಣ ಭಟ್ಟನ ಹರ್ಷಚರಿತದಲ್ಲಿ ಕಟುಕ ಶಬ್ದ ಪ್ರಯೋಗ ಬಂದಿದ್ದು ಅವುಗಳು ಆಸ್ಥಾನದ ಸೇವಕ ವರ್ಗವನ್ನು ಪ್ರತಿನಿಧಿಸುತ್ತವೆ. ಅಲ್ಲಿ ಹರ್ಷಚರಿತದಲ್ಲಿ ಆನೆಗಳ ಹಿಂಡುಗಳನ್ನು ಕಾಯುವ ಅಥವಾ ಆನೆಗಳ ನಿಯಂತ್ರಕ ಮಾವುತನನ್ನು ಕುರಿತಾಗಿ ಹೇಳಲ್ಪಟ್ಟಿದೆ. "ಕಟು ಕಟುಕ ನಿರ್ದೇಶ ನಶ್ಯನ್ನಿದ್ರೋನ್ಮಿಷನ್ ನಿಷಾದಿನಿ" ಎನ್ನುವುದಾಗಿ ಆನೆಯ ಕುರಿತಾಗಿ ಮತ್ತು ಅದರ ನಿಯಂತ್ರಣದ ಕುರಿತಾಗಿ ಹೇಳುತ್ತಾನೆ.
ಪಿ ವಿ ಕಾಣೆಯವರು "ಕಟುಕಾನಾಂ ಕಟು ನಿರ್ದೇಶೇನ ನಶ್ಯಂತೀ ನೀದ್ರಾ ತಯಾ ಉನ್ಮಿಷಂತಃ ನಿಷಾದಿನಃ" ಕಾಣೆಯವರು ಸಹ ಆನೆಗಳನ್ನು ನಿಯಂತ್ರಿಸುವವರ ಕುರಿತಾಗಿಯೇ ಉಲ್ಲೇಖಿಸಿದ್ದಾರೆ ಮಾವುತರ ನಿರ್ದೇಶನದಂತೆ ಎನ್ನುವ ಅರ್ಥವನ್ನು ಕೊಡಲಾಗಿದೆ. ಅಗರವಾಲ್ ಅವರು ಕಟುಕ ಮತ್ತು ಕಟಕ ಎರಡನ್ನು ಗ್ರಹಿಸಿ ಕಟುಕ ಅನ್ನುವ ಅರ್ಥ ಕಟಕ ಎನ್ನುವ ಪದಕ್ಕೆ ಹೊಡುವುದಿಲ್ಲ ಎಂದು ತೋರಿಸಿದ್ದಾರೆ. ಕಟಕ ಎನ್ನುವುದು ಸೈನಿಕರಿಗೆ ಮತ್ತು ರಾಜರ ದರ್ಬಾರಿನಲ್ಲಿರುವ ಶ್ರೀಮಂತ ನೌಕರ ವರ್ಗಕ್ಕೆ ಹೇಳುವ ಪದವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಬಾಣ ತನ್ನ ಹರ್ಷ ಚರಿತದಲ್ಲಿ ಕಟಕ ಕದಂಬಕ ಎಂದು ಉಲ್ಲೇಖಿಸುತ್ತಾನೆ. ಅಂದರೆ ಕಟಕ ಮತ್ತು ಕಟುಕ ಎನ್ನುವ ಪದಕ್ಕೆ ಇರುವ ವ್ಯತ್ಯಾಸ ಇಲ್ಲಿ ಕಂಡು ಬರುತ್ತದೆ. ಬಾಣ ತನ್ನ ಹರ್ಷಚರಿತದ ಇನ್ನೊಂದು ಕಡೆ " ಕಫ ವಿಕಾರಿಣ ಇವ ದಿನೇ ದಿನೇ ಕಟುಕೈರುದ್ವೇಜ್ಯಮಾನಸ್ಯ” ಕಟುಕ ಎನ್ನುವ ಪದವನ್ನು ಹರ್ಷ ಇನ್ನೊಂದು ಕಡೆ "ಕಟುಕೈಃ ಪ್ರತಿಹಾರೈಃ " "ತೀಕ್ಷ್ಣೈಶ್ಚ" ಎನ್ನುವ ಟೀಕಾಕಾರ ಕಟುಕ ಎನ್ನುವ ಶಬ್ದ ರಾಜನಿಗಿರುವ ಹದಿನೆಂಟು ವಿಧದ ಪರಿವಾರಗಳಲ್ಲಿ ಅತ್ಯಂತ ಜಾಗ್ರತ ಸ್ಥಿತಿಯಲ್ಲಿರುವವರು ಎನ್ನುತ್ತಾನೆ. ಕೋವೆಲ್ ಮತ್ತು ತಾಮಸ್ ಎನ್ನುವವರು ಕಟುಕ ಪದವು ದ್ವಾರಪಾಲಕರಿಗೆ ಹೇಳುವ ಶಬ್ದ ಎಂದು ಹೇಳುತ್ತಾರೆ.
ಆಯುರ್ವೇದದಲ್ಲಿ "ಕಟು ತಿಕ್ತ ಕಷಾಯ" ಕಾಳುಮೆಣಸು, ಶುಂಠಿಯ ಜೊತೆಗೆ ಕಹಿಯಾಗಿರುವುದನ್ನು ಹೇಳುತ್ತದೆ.
ಹೀಗೆ ಕಟುಕ ಎನ್ನುವ ಪದವು ಕೇಳಲು ಭೀಕರ ಭಯಂಕರವಾಗಿ, ಹಿಂಸಾತ್ಮಕ ಸ್ವರೂಪವನ್ನು ಕಣ್ನಮುಂದೆ ತಂದು ಕೊಟ್ಟರೂ ಸಹ ಕಟುಕ ವ್ಯಕ್ತಿಗಳ ಹೆಸರಾಗಿ, ದ್ವಾರಪಾಲಕರಾಗಿ, ಆಯುರ್ವೇದೀಯ ಔಷಧೀಯಗುಣವಾಗಿ, ಆನೆಗಳ ಮಾವುತನಾಗಿ, ರಾಜನಾಗಿ ಸಾಮಾನ್ಯಪ್ರಜೆಯಾಗಿ ಮತ್ತು ಮರಣದಂಡನೆಯಂತಹ ಕಾನೂನು ಪ್ರಕ್ರಿಯೆಯನ್ನು ಜಾರಿಗೆತರುವವನಾಗಿ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದ್ದಾನೆ.  

No comments:

Post a Comment