Search This Blog

Saturday 3 March 2018

ಗಳಪುವರಗಿಳಿಯ ಕುಕಿಲುವ ಕಳ ಹಂಸೆಯ ಗಾವರಿಪ್ಪ ಪೆಣ್ದುಂಬಿಯ - ಎಂದು ಹೇಳಿದ ಅಜ್ಞಾತವಾಗುಳಿದ ಕಮಲಾದಿತ್ಯ.


ಬೆಳಗಾವಿ ಜಿಲ್ಲೆಯ ಪರಸಗಡ ತಾಲೂಕಿನಲ್ಲಿ ಸೊಗಲ್ ಎನ್ನುವ ಒಂದು ಊರಿದೆ. ಆ ಊರಿನಲ್ಲಿ ಸುಮಾರು 980ನೇ ಇಸವಿಯ ಸುಮಾರಿಗೆ ಕಲ್ಯಾಣ ಚಾಳುಕ್ಯವಂಶದ ಎರಡನೇ ತೈಲಪ ಒಂದು ಶಾಸನವನ್ನು ಬರೆಸಿ ಹಾಕುತ್ತಾನೆ. ಇದರಲ್ಲಿ ಸೋವಲ್, ಸೋಲು, ಸೋಲ್ ಎನ್ನುವುದಾಗಿ ಸೊಗಲ್ ಅನ್ನು ಕರೆಯಲಾಗಿದೆ. ಸಾಹಿತ್ಯದ ಅಂಶಗಳನ್ನು ಹೊಂದಿರುವ ಈ ಶಾಸನ ಕಂಚಿಕಬ್ಬೆ ಎನ್ನುವವಳು ಸುವರ್ಣಾಕ್ಷಿ ಎನ್ನುವ ತೀರ್ಥ ಕ್ಷೇತ್ರಕ್ಕೆ ದಾನ ಮಾಡಿದ ಕುರಿತಾದ ವಿವರವನ್ನು ಒಳಗೊಂಡಿದೆ.
ಭುವನಂ ವನನಿಧಿ ಸುರಗಿರಿ ದಿವಕುಳಮಿನಚಂದರುಳ್ಳಿನಂ ಧರ್ಮ್ಮಮಿದು ||
ದ್ಭವಮಾಗಿ ನಡೆಗೆ ಶಾಸನಕವಿ ಕಮಳಾದಿತ್ಯ ರಚಿತ ಕಾವ್ಯಾದೇಶಂ || ಎಂದು ಶಾಸನದ 66 ಮತ್ತು 67 ನೇ ಸಾಲಿನ ವಾಕ್ಯದಿಂದ ಈ ಶಾಸನವನ್ನು ಪ್ರಬುದ್ಧ ಕವಿ ಕಮಲಾದಿತ್ಯನು ರಚಿಸಿದನೆಂದು ತಿಳಿದು ಬರುತ್ತದೆ. ಇಡಿಯ ಶಾಸನ ಸಾಹಿತ್ಯದ ಅಂಶಗಳಿಂದ ಗಮನ ಸೆಳೆಯುತ್ತದೆ ದಾನ ಶಾಸನ ಎನ್ನುವುದು ಒಂದಂಶವಾದರೆ ಅದಕ್ಕೂ ಮಿಗಿಲಾಗಿ ಶಾಸನ ಕವಿ ತನ್ನ ಸಾಹಿತ್ಯದ ಅಭಿರುಚಿಯನ್ನು ವ್ಯಕ್ತ ಪಡಿಸಿದ್ದು ಕಂಡು ಬರುತ್ತದೆ. ಆದರೆ ಕಮಲಾದಿತ್ಯನ ಕುರಿತಾಗಿ ಯಾವ ವಿಚಾರವೂ ಶಾಸನಗಳಿಂದ ತಿಳಿದು ಬರುವುದಿಲ್ಲ. ಆದರೆ ಶಾಸನದ ನಾಲ್ಕು ಮತ್ತು ಐದನೇ ಸಾಲಿನಲ್ಲಿ
"ಶ್ರೀಮದನವರತ ದನುಜನರಾಮರ ಮಣಿಮಕುಟ ತಟಘಟಿತ ಪದ ಪದ್ಮೋದ್ದಾಮಯುಗಳಂ ತ್ರಿಳೋಕಸ್ವಾಮಿ ಸುವರ್ಣ್ಣಾಕ್ಷಿದೇವರೀಗೆಮಗೊಳ್ಪ" ಎಂದು ಹೇಳಿದರೆ, 16 ಮತ್ತು 17 ಸಾಲಿನಲ್ಲಿ "ಇನ್ತೆನಿಸುವ ಸಿದ್ಧಕ್ಷೇತ್ರಾಂತರ ತೀರ್ತ್ಥಕ್ಕೆ ಮುಖ್ಯನಾಶ್ರಿತ ಸುರಭೂಜಂ ತ್ರಿಭುವನಸಿಂಹಮುನೀಂದ್ರಂ ತಾಪಸಗೋತ್ರ ವೈರಿಕುಳಗಜಸಿಂಹ" ಎಂದು ಉಲ್ಲೇಖ ಬರುತ್ತದೆ.
21ನೇ ಸಾಲಿನಿಂದ
"ತಪಮಂಮಾಡುವ ತಾಪಸರಕ್ಕಳಳವಲ್ಲೋಹೋ ತನುಕ್ಲೇಶಮೆಂ
ಬುಪಸರ್ಗ್ಗಕ್ಕಿರದಾನ್ತು ಮೆಯ್ಯನಟವೀಶಾಖಂಗಳಂ ತಿನ್ದುಮಾ
ಧಿಪನಂ ಪೂಜಿಸಿ ಮುಕ್ತಿಯೊಳ್ ಧರೆಯಲೆಂದಿರ್ಪ್ಪಂ ಸುವರ್ಣ್ಣಾಕ್ಷಿದೇ
ವಪದಾಂಭೋಜ ಶಿಲೀಮುಖಾಭನೆನಿಪಂ ಶ್ರೀಗಂಗರಾಸಿ(ಶಿ)ವ್ರತಿ" ಎಂದು ಶಿವನನ್ನು, ಶೈವ ತಪಸ್ವಿಗಳನ್ನು ಮುಕ್ತಕಂಠದಿಂದ ಹಾಡಿ ಹೊಗಳಿ ಸ್ತುತಿಸಿರುವುದನ್ನು ಗಮನಿಸಿದರೆ ಕಮಲಾದಿತ್ಯ ಶೈವ ಪಂಥೀಯ ಕವಿಯಾಗಿರ ಬಹುದು ಅನ್ನಿಸುತ್ತದೆ.
ಕಲ್ಯಾಣ ಚಾಳುಕ್ಯದೊರೆ ಇಮ್ಮಡಿ ತೈಲನನ್ನು ಕುರಿತಾಗಿ 33ನೇ ಸಾಲಿನಲ್ಲಿ
"ಬಳವಚ್ಚೋಳ ಮಹೀಧರೇಂದ್ರಕುಳೀಶಂ ಲಾಳೇಭಪಂಚಾನನಂ
ಜಳಭೂಭ್ರಿ(ಭೃ)ದ್-ವನ ದುರ್ಗ್ಗಮಾರ್ಗ್ಗ ಜಳಧಿ ರ್ವ್ರಾತಕ್ಕೆಲೇ ಬಾಡವಾ
ನಳರೂಪಂ ರಣಕಂಭಕಕ್ಕಲಶಿರಚ್ಛೇದಂ ರಿಪೂಗ್ರಾವನೀ
ವಿಳಯೋತ್ಪಾತವಿಕೇತು ಚಕ್ರಿತಿಳಕಂ ಶ್ರೀತೈಲರಾಜಾಧಿಪಂ ಎಂದು ತದ್ಪಾದಪದ್ಮೋಪಜೀವಿಯಾಗಿ ಹೊಗಳುತ್ತಾನೆ.

ತತ್ಪಾದ ಪದ್ಮೋಪಜೀವಿಗಳ್ಜನಪತಿ ಚಕ್ರವರ್ತ್ತಿ ಪರಿರಕ್ಷಣ ದಕ್ಷ ಭುಜಾಸಿ ವೈರಿಸಾ
ಧನಲಯಕಾರಿ ರಟ್ಟಕುಳಭೂಷಣನನ್ಯನರೇಂದ್ರ ದರ್ಪ್ಪಭಂ
ಜನನವದಾತಕೀರ್ತ್ತಿ ವಿಭು ಕಣ್ಠೇಯಭಾರದ ನನ್ನಪಯ್ಯರಾ
ಣನತನೆ()ಯಂ ವಿವೇಕನಿಧಿಕತ್ತಮಹೀಭುಜನೆಂಬ ಪೆರ್ಮ್ಮಗಂ" ಎಂದು "ಕೂಣ್ಡಿಮಹೀವಳಯಾತಿಶಯಾಧಿ(ಧೀ)ಶ್ವರಂ"ನಾದ ಕತ್ತ (ಮೊದಲನೆಯ ಕಾರ್ತವೀರ್ಯ) ನನ್ನೂ ಹೊಗಳುವುದನ್ನು ನೋಡಿದರೆ ತೈಲನ ಸಮಕಾಲೀನ ದೊರೆ ಕಾರ್ತವೀರ್ಯನ ಆಸ್ಥಾನದ ಪ್ರಮುಖ ಕವಿಯಾಗಿ ಈತ ಇದ್ದಿರಬಹುದೆನ್ನಿಸುತ್ತದೆ. ಹೀಗೆ ಆಲೋಚಿಸಿದರೆ ಕಮಲಾದಿತ್ಯನ ಕಾಲದ ನಿರ್ಣಯದಲ್ಲಿ ಯಾವುದೇ ಸಂಶಯ ಬರುವುದಿಲ್ಲ.
ಈತನ ಕವಿತಾ ಸಾಮರ್ಥ್ಯವನ್ನು ಅವಲೋಕಿಸಿದರೆ: 5ನೇ ಸಾಲಿನಿಂದ

ಪಂಕಜ ಷಣ್ಡದಿಂದೆಸೆವ ನೆಯ್ದಲ ಪೂಗೊಳದಿಂ ತಳಿರ್ತ್ತಮಾ
ವಿಂ ಕುಸುಮೋದಿತಂ ಕೊಸಗು ಪಾದರಿ ನೇಱಿಲಶೋಕ ಬಾಳೆಯೆಂ
ಬಂಕದ ವ್ರಿ(ವೃ)ಕ್ಷಜಾತಿಗಳಿನ್ ಇಂಚರದಿಂ ಪುಗಲೆಂಬ ಕೋಕಿಳಾ
ಳಂಕ್ರಿ(ಕೃ)ತದಿಂದೆ ಸಾಲಬನಮೊಪ್ಪುವುದೀ ವಿಷಯಾಂತರಾಳದೊಳ್ || ಎಂದು ಮರಗಿಡ ಬಳ್ಳಿಗಳ ಕಮಲವೇ ಮೊದಲಾದ ಹೂವಿನ ಗಿಡಗಳಿಂದ ಕಂಗೊಳಿಸುವ ಕೆರೆ. ಮತ್ತು ಅದರ ಸುತ್ತ ಬೆಳೆದಿರುವ ಅಶೋಕ ಬಾಳೆ ಮುಂತಾದ ಮರಗಳ ಮೇಲೆ ಕುಳಿತು ಇಂಪಾದ ಧ್ವನಿಯನ್ನು ಕೂಗುವ ಕೋಗಿಲೆಯೇ ಮೊದಲಾದ ಹಕ್ಕಿಗಳ ಕಲರವವನ್ನು ಅತ್ಯಂತ ಮನೋಜ್ಞವಾಗಿ ಹೇಳುತ್ತಾ ಹೋಗುತ್ತಾನೆ.
ಮುಂದೆ 7ನೇ ಸಾಲಿನಿಂದ
ಅಲ್ಲಿಯ ನಿರ್ಜ್ಝರೋದಕದಿನೊಪ್ಪುವ ತೀರ್ತ್ಥಮಿದೀ ಜಗಕ್ಕೆ ಪೆಂ
ಪೆಲ್ಲಮನಾನ್ತ ಶಂಕರಶಯಂಭು ಸುವರ್ಣ್ಣಮಹಾಕ್ಷಿದೇವ ಪಾ
ದೋಲ್ಲಸಿತ ಅಂಬುಜಂಗಳನೆ ಪೂಜಿಪ ಭಕ್ತಿ(ಕ್ತ)ಜನಕ್ಕೆ ಮುಕ್ತಿ
ಳ್ವಿಲ್ಲದೆ ಕುಡುಗೆಂದು ಪೊಗರ್ದ್ದ(ೞ್ದ) ಕವಿತೇಸ() ಮದ ಪ್ರಭಂಜನ ಎಂಉ ಹೇಳುತ್ತಾ ಅಲ್ಲಿಯ ಆ ಕೆರೆ ಮತ್ಯಾವ ಕೆರೆಯೂ ಆಗಿರದೇ ಪೂಜಿಸುವ ಭಕ್ತ ಜನರಿಗೆ ಇದು ತೀರ್ಥವಾಗಿ ಜಗತ್ತಿನೆಲ್ಲೆಡೆ ಇದರ ಹೆಸರು ಪ್ರಸಿದ್ಧಿ ಹೊಂದಿದ ಸುವರ್ಣಾಕ್ಷಿ ಕೆರೆಯನ್ನು ಕುರಿತಾಗಿ ಹೇಳುತ್ತಾ ಸಾಗುತ್ತಾನೆ.
10ನೇ ಸಾಲಿನಿಂದ

ಪುಲಿಗಳೆ ಧರ್ಮ್ಮಶ್ರವಣಮನೆಲೆ ಮಿಡುಕದೆ ಕೇಳುತಿರ್ಪ್ಪುವರಗಿಳಿಗಳ್ ನಿ
ರ್ಮ್ಮಳ() ಮುನಿಪರ್ಶೋದುವೋದಂ ಚಳವಾದೆಡೆಯಱಿದು ಪೇದ್ವು(ಳ್ವು)ವಿರುಳುಂ ಪಗಲುಂ || ಎಂತಹ ಶಬ್ದ ಜೋಡಣೆ . ಉತ್ಪ್ರೇಕ್ಷೆಯನ್ನು ಮಾಡಿ ಬರೆದರೂ ಸಹ ಆತನ ಕವಿತಾ ಸಾಮರ್ಥ್ಯ ಅದ್ಭುತವೆನಿಸುತ್ತದೆ. ಧರ್ಮಬೋಧನೆಯನ್ನು ಕೇಳುತ್ತಿದ್ದ ಹುಲಿಗಳು ಹಾಗೇ ಕೇಳುತ್ತ ನಿಂತು ಬಿಡುತ್ತಿದ್ದವಂತೆ, ತಪಸ್ವಿಗಳು ಹೇಳುತ್ತಿದ್ದ ಮಂತ್ರಗಳನ್ನು ಕೇಳುತ್ತಿದ್ದ "ಅರಗಿಳಿ"ಗಳು ಪುನಃ ಪುನಃ ಹಗಲು ರಾತ್ರಿಯೆನ್ನದೆ ಉಚ್ಚರಿಸುತ್ತಿದ್ದವಂತೆ.
11 ಮತ್ತು 12 ನೇ ಸಾಲಿನಲ್ಲಿ
ವಾನರ ಸಂಹತಿ ದೇವಸ್ನಾನಂ ಮಾಡುವರ್ಗ್ಗೆ(ರ್ಗೆ) ಗದ್ದುಗೆಯ ನೀರಂ
ನ್ಮಾನದೆ ತನದೀವುವೆನಲ್ಕಾನಱಿಯೆಂ ಪೊಗಳಲವರ ತಪದುಗ್ರತೆಯ ಎನ್ನುತ್ತಾನೆ.
12 - 13ನೇ ಸಾಲಿನಲ್ಲಿ
ಪಾಪಿ ಪುಗಲು ಪುಗಲುಗ್ರದ ಕೋಪಿ ಪುಗಲು ಪುಗಲಶೇಷ ಧರ್ಮ್ಮದ್ರೋಹ
ವ್ಯಾಪಾರಿ ಪುಗಲ್ಪುಗಲೆನ್ದಾ ಪೊರ್ತ್ತುಂ ಕೋಕಿಳಂಗಳುಲಿಗುಂ ಬನದೊಳು

ಗಳಪುವರಗಿಳಿಯ ಕುಕಿಲುವ ಕಳ ಹಂಶೆ(ಸೆ) ಗಾವರಿಪ್ಪ ಪೆಣ್ಧು(ದುಂ)ಬಿಯ ಬಾ
ವಳಿಸುವ ಪುರುಳಿಯ ಕೊ[]ಡಂಗಳನಗಿಸುವ ರವಮೆ ನಗದ ನಾಲ್ಕುಂ ದೆಸೆಯೊಳು
ಇವೆರಡರ ಅರ್ಥವನ್ನು ವಿಮರ್ಶಕರಿಗೆ ಬಿಟ್ಟಿದ್ದೇನೆ. ಎಷ್ಟು ಬಣ್ಣಿಸಿದರೂ ಅದು ನನಗೆ ಅಪೂರ್ಣವೆನ್ನಿಸಿತು. ಕನ್ನಡ ಸಾಹಿತ್ಯಕ್ಕೆ ಇದೊಂದು ಅತ್ಯಮೋಘವಾದ ಶಾಸನವೆನ್ನಿಸಿತು.ಪ್ರತಿಯೊಂದು ಸಾಲು ಸಾಹಿತ್ಯದ ಆಕರವೆನ್ನಿಸುತ್ತದೆ.


No comments:

Post a Comment