Search This Blog

Saturday 24 March 2018

ಶಿಷ್ಟಾನಾಂತು ಸುದರ್ಶನಃ - ಕದಂಬ ಕಾಕುಸ್ಥವರ್ಮ


ಇದು ಹಾಸನ ಜಿಲ್ಲೆಯ ಬೇಲೂರಿನ ಹಲ್ಮಿಡಿಯಲ್ಲಿರುವ ವೀರಭದ್ರ ದೇವಾಲಯದ ಎದುರಿಗಿದ್ದ ಶಿಲಾ ಶಾಸನ. ಕದಂಬ ಕಾಕುಸ್ಥವರ್ಮನ ಶಾಸನ ಸುಮಾರು 450ನೇ ಇಸವಿಯದ್ದು. ಪೂರ್ವದ ಕದಂಬರ ಕಾಲದ ಶಾಸನಗಳು ಹೆಚ್ಚಿನವು ಸಂಸ್ಕೃತದಲ್ಲಿವೆ. ಮತ್ತು ಕಾಕುಸ್ಥವರ್ಮನ ಹಲಸಿಯ ಶಾಸನ ಕನ್ನಡದ ನೆಲಕ್ಕೆ ಋ ಅಕ್ಷರವನ್ನು ಪರಿಚಯಿಸಿದ ಮೊದಲ ಶಾಸನ. ಆಮೇಲೆ ಚಿಕ್ಕಬೆಟ್ಟದ ಶಾಸನದಲ್ಲಿ ಬಳಸಿದ್ದು ಬಿಟ್ಟರೆ ಮಧ್ಯದ ಶತಮಾನಗಳಲ್ಲಿ ಋ ಕಾರ ಪ್ರಾಯಶಃ ಬಳಕೆ ಆಗಿರಲಿಕ್ಕಿಲ್ಲ. ಆದರೂ ಸಹ ಸಂಪೂರ್ಣ ಸಂಸ್ಕೃತ ಭಾಷೆಯಿಂದ ಕನ್ನದಕ್ಕೆ ಬಂದಿರುವುದು ಸೋಜಿಗವೆನ್ನಿಸುತ್ತದೆ. ಬಹುಶಃ ಉತ್ತರದಲ್ಲಿ ನಮ್ಮ ನಾಡಿನ ಉತ್ತರದಲ್ಲಿ ಸಂಸ್ಕೃತ ಹೆಚ್ಚು ಪ್ರಚಲಿತವಿದ್ದು ದಕ್ಷಿಣಕ್ಕೆ ಕನ್ನಡ ಹೆಚ್ಚು ಪ್ರಚಲಿತವಿದ್ದಿರಬಹುದು. ಭಟ, ನಾಡು, ಬಟರಿ ಕುಲ, ದಕ್ಷಿಣಾಪಥ, ಪೊಗಳೆಪ್ಪೊಟ್ಟಣ, ಕೆಲ್ಲ, ಸೇಂದ್ರಕ, ಅರಸ, ಬಾಳ್ಗಳ್ಚು, ಕುರುಂಬಿಡಿ, ಪತ್ತೊಂದಿ. ಮುಂತಾದುವು ಬಳಕೆಗೊಂಡದ್ದು ಗಮನಿಸಿದರೆ ಅದಕ್ಕೂ ಮೊದಲೇ ಕನ್ನಡ ಹಂತ ಹಂತವಾಗಿ ಬೆಳೆದು ಬಂದಿದೆ. ಒಮ್ಮೆಲೇ ಇಂತಹ ಪದಗುಚ್ಚಗಳು ಬಂದದ್ದು ಗಮನಿಸಿದರೆ ಇದಕ್ಕೂ ಮೊದಲೇ ಶಿಲಾಶಾಸನಗಳು ಅಥವಾ ತಾಮ್ರಪಟಗಳು ಬಂದಿರಬಹುದು.
ಇಲ್ಲಿ ದಾನವಕ್ಷ್ಣೋರ್ = ದಾನವರ ಕಣ್ಣುಗಳಿಗೆ. ಶಿಷ್ಟಾನಾಂತು ಸುದರ್ಶನಃ ಎನ್ನುವಲ್ಲಿ ಸಜ್ಜನರಿಗೆ ಅಭಯದಾಯಕ. (ಸುದರ್ಶನ ಚಕ್ರಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ಶಾಸನದ ರಂಭದಲ್ಲಿಯೇ ಸುದರ್ಶನ ಚಕ್ರವನ್ನು ಕೆತ್ತಿಸಿದ್ದು ಈ ಆಯುಧ ಮೂರ್ತಿಯ ಶಕ್ತಿಯನ್ನು ಸಾರಲಾಗಿದೆ. ಚಕ್ರಮೂರ್ತಿಯನ್ನು ಆಯುಧ ಮೂರ್ತಿಯಾಗಿ ಪೂಜಿಸುವುದಲ್ಲದೆ ಮಂತ್ರ, ಅಭಿಚಾರ ಕ್ರಿಯೆಗಳಲ್ಲೂ ಬಳಸಲಾಗುವುದು. ಇಂತಹ ಚಕ್ರಮೂರ್ತಿಗಳ ಹಿಂದೆ ನರಸಿಂಹ ಮೂರ್ತಿಯೂ ಇರುವ ನಿದರ್ಶನಗಳು ಇವೆ.) ಕದಂಬಪನ್ ಎನ್ನುವುದು ಸಂಸ್ಕೃತದಲ್ಲಿ ಭಾವನಾಮದ ಪ್ರತ್ಯಯವಾಗಿ '' ರೂಢಿಯಲ್ಲಿದ್ದು. ಅದರ ಕನ್ನಡ ಅನುಕರಣೆ ಇದು, ಉದಾಹರಣೆಗೆ ಧರಣಿಪ ಎನ್ನುವ ಪದ ಸಂಸ್ಕೃತವಾಗಿದ್ದು ಕನ್ನಡದಲ್ಲಿ ಪೊಡವಿಪ ಎನ್ನಿಸಿಕೊಳ್ಳುತ್ತದ. ಭಟ್ಟಾರಕ ಎನ್ನುವುದು ಗೌರವವಾಚಕ ಶಬ್ದ. ಬಹುಶತಹವನದುಳ್ ಎನ್ನುವುದರ ಸರಿಯಾದ ಪಾಠವು ಬಹುಶತವಹ ಎನ್ನಲಾಗಿದೆ. ಬಹುಶತಹವನದುಳ್ ಅಂದರೆ ಪಶುಪ್ರದಾನ ಎನ್ನುವುದು ಬಹುಶತಹವನದ ನಂತರದಲ್ಲಿ ಬರುವುದರಿಂದ ಪ್ರಾಣಿಗಳನ್ನು ಅರ್ಪಿಸುವ ಯಾಗವೆಂದಾದರೆ ಅದು ಯುದ್ಧವೇ ಇರಬಹುದು. ಪ್ಪಟ್ಟಣ ಅನ್ನುವುದನ್ನು ಪೊಟ್ಟಣ ಎನ್ನಲಾಗಿದೆ. ಆಸರಕ್ಕೆಲ್ಲ ಬಟರಿಯಾ ಎಂದು ತೆಗೆದುಕೊಂಡರೆ ಆಶ್ರಯನಾಗಿರುವ ಎಲ್ಲ ಭಟರಿಯಾ ಎಂದು ಅರ್ಥವಾಗುತ್ತದೆ. ಆದರೆ ಆಸರ ಕೆಲ್ಲ ಎಂದು ಪದ ವಿಭಾಗಿಸಿಕೊಂಡರೆ ಕೆಲ್ಲ ಎನ್ನುವ ಜನಾಂಗದ ಕುರಿತು ಹೇಳಲಾಗಿದೆ ಎನ್ನುವ ಅಭಿಪ್ರಾಯ ಕೂಡ ಇದೆ. ಭಟರಿಯಾ ಎನ್ನುವುದು ಸಂಸ್ಕೃತ ಪದ ಭೃಟಧಾತುವಿನಿಂದ ಬಂದ ಪದ ಭಟ. ಇದರಿಂದ ಭಟಾರ್ಕ ಶಬ್ದ ರೂಪುಗೊಂಡಿದ್ದು ಈ ಶಬ್ದದ ಪ್ರಯೋಗ ಸಂಸ್ಕೃತ ಶಾಸನಗಳಲ್ಲಿ ಕಾಣಸಿಗುತ್ತವೆ. "ಪ್ರೇಮಾಲಯ" ಎನ್ನುವಲ್ಲಿ ಮೊದಲಿಗೆ ಪ್ರೇಮಾಯ ಎಂದು ಕಂಡರಿಸಿದ್ದು ಆಮೇಲೆ ಅಕ್ಷರವನ್ನು ಸೇರಿಸಲಾಗಿದೆ. ಆದ್ದರಿಂದ ಶಾಸನದಲ್ಲಿ " ಸ್ವಲ್ಪ ಕೆಳಕ್ಕೆ ಕಾಣಿಸಿಕೊಂಡಿದೆ.
ಈ ಶಾಸನದ ಪ್ರಮುಖ ಅಂಶವಾಗಿ ಕುಱುಮ್ಬಿಡಿ(ಕುಱುಂ+ಪಿಡಿ) - ಕುಮ್ಬಿಡಿ ಎಂದರೆ ರಾಜ್ಯದ ಒಂದು ತೆರಿಗೆ. ಕುಱುಮ್ಬಿಡಿ>ಕುಮ್ಬಿಡಿ>ಕುಱುದೆರೆ. ಮಾಂಡಲೀಕರು ತಾವು ಸಾಮಾನ್ಯವಾಗಿ ಅನುಭೋಗಿಸುತ್ತಿದ್ದ ಆದಾಯವನ್ನು (ಕುಮ್ಬಿಡಿಯನ್ನು) ದೇವಾಲಯಗಳಿಗೆ ಬಿಟ್ಟುಕೊಡುತ್ತಿದ್ದರು. ಇವನ್ನು ಕಿಱುದೆರೆಗಳು ಎಂದು ಹೇಳಲಾಗುತ್ತಿತ್ತು. ಕಿರು ತೆರಿಗೆಗಳು - ಮೊದಲನೆಯದಾಗಿ ಮನೆಗಳ ಮೇಲೆ ಕೊಡಬೇಕಾಗಿರುವ ತೆರಿಗೆಯನ್ನು ಮನೆವಣಂ ಎನ್ನಲಾಗುತ್ತಿತ್ತು, ದೊಡ್ಡ ದೊಡ್ಡ ಜೂಜುಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಪಿರಿಯರವಣಂ, ಹಣ ಮತ್ತು ಬಡ್ಡಿ ವ್ಯವಹಾರದ ಮೇಲಿನ ತೆರಿಗೆ ಧನಬಳಂ, ಅಳತೆಗಳ ಮೇಲಿನ ತೆರಿಗೆ ಕಾಳಗೊಲ್ಚು, ರಾಶಿಯ ಮೇಲೆ ಹಾಕುತ್ತಿದ್ದ ತೆರಿಗೆ ಮೇಂಟಿಗಣ್ಡುಗ ಎನ್ನಲಾಗುತ್ತಿತ್ತು, ಸಣ್ಣ ಸಣ್ಣ ಅಂಗಡಿಗಳವರು ಕೊಡಬೇಕಾಗಿದ್ದ ತೆರಿಗೆ ಅಂಗಡಿಯ ತಿಂಗಳಿನ ಬೇಳೆ, ಪಟ್ಟಣಗಳನ್ನು ಉಂಬಳಿಯಾಗಿ ಪಡೆದವರು ಕೊಡುತ್ತಿದ್ದ ತೆರಿಗೆ ಪೊಳಲ ಮನ್ನೆಯ ದಾನಿಕೆ. ಜ್ಞಾತಿಗಳು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದಾಗ ಕೊಡುತ್ತಿದ್ದ ತೆರಿಗೆ ದಾಯ ದ್ರಮ್ಮ. ಹೀಗೆ ತೆರೆಇಗೆಯ ವ್ಯವಸ್ಥೆ ಹಲವಾರು ರೀತಿಯಲ್ಲಿದ್ದು ಎಲವನ್ನೂ ನಾನಿಲ್ಲಿ ತರುತ್ತಿಲ್ಲ. ಪತ್ತೊನ್ದಿ ಎಂದರೆ ನಾವು ಬೆಳೆದ ಧಾನ್ಯದ 1/10 ಭಾಗ ರಾಜ ಪ್ರಭುತ್ವಕ್ಕೆ ಸಲ್ಲಿಸಬೇಕೆಂಬ ತೆರಿಗೆ ನಿಯಮ. ಹೀಗೆ ಈ ಶಸನ ಬಹಳ ಮಹತ್ವದ ಶಾಸನವೆನ್ನಿಸಿಕೊಂಡಿದ್ದು. ಈ ಶಾಸನದ ಅಂತ್ಯಭಾಗದಲ್ಲಿ ಎರೆಡೆರಡು ಸಲ ಅಂದರೆ 13ನೇ ಸಾಲಿನ ಕೊನೆಗೆ ಮಹಾಪಾತಕನ್ ಎಂದು ಬಂದಿದ್ದು 15ನೇ ಸಾಲಿನಲ್ಲಿ ಪುನಃ ಮಹಾಪಾತಕಂ ಎನ್ನುವುದಾಗಿ ಬಂದಿದ್ದು ಕೊನೆಯ ಸಾಲು ಆಮೇಲೆ ಬರೆಯಲಾಗಿದೆ ಎನ್ನುವ ಅಭಿಪ್ರಾಯವೂ ಸಹ ಇದೆ.

1 ಜಯತಿ ಶ್ರೀ ಪರಿಷ್ವಙ್ಗಶ್ಯಾರ್ಙ್ಗ[ವ್ಯಾ]ನತಿರಚ್ಯುತಃ ದಾನವಕ್ಷ್ಣೋರ್ಯುಗಾನ್ತಾಗ್ನಿಃ  [ಶಿಷ್ಟಾನಾನ್ತು] ಸುದರ್ಶನಃ 
2 ನಮಃ ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ[ನಾ] ಅರಿ ಕ
3 ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ 
4 ಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ
5 ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ 
6 ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
7 ಹವದು[ಳ್] ಪಶುಪ್ರದಾನ ಶೌಯ್ರ್ಯೋದ್ಯಮಭರಿತೋ[ನ್ದಾನ]ಪ 
8 ಶುಪತಿಯೆನ್ದು ಪೊಗಳೆಪ್ಪೊಟ್ಟಣ ಪಶುಪತಿ 
9 ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ 
10 ಸುತನ್ಗೆ ಸೇನ್ದ್ರಕಬಣೋಭಯದೇಶದಾ ವೀರಪುರುಷ ಸಮಕ್ಷ
11 ದೆ ಕೇಕಯ ಪಲ್ಲವರಂ ಕಾದೆರೆದು ಪೆತ್ತಜಯನಾ ವಿಜ 
12 ಅರಸನ್ಗೆ ಬಾಳ್ಗಳ್ಚು ಪಲ್ಮಡಿಉಂ ಮೂಳವಳ್ಳಿಉಂ ಕೊ
13 ಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ 
14 ಇರ್ವ್ವರುಂ ಸಳ್ಪಙ್ಗದರ್ ವಿಜಾರಸರುಂ ಪಲ್ಮಡಿಗೆ ಕುರು
15 ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ 
16 ಭಟ್ಟರ್ಗ್ಗೀಗಳ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

No comments:

Post a Comment