Search This Blog

Wednesday 7 March 2018

ಷೋಡಶ ಸಂಸ್ಕಾರಗಳನ್ನು ಪರಿಚಯಿಸುವ – ಆರ್ಯಪುರ

ಶಾಸನಗಳ ಅಧ್ಯಯನವೇ ಒಂದು ರೋಚಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಅಂತಹ ಶಾಸನಗಳಲ್ಲಿ ಈ ಶಾಸನವೂ ಒಂದು. ಇಲ್ಲಿನ ಆಧಾನ ಎನ್ನುವ ಪದ ಮೊತ್ತ ಮೊದಲು ನಮ್ಮ ನೆಲದಲ್ಲಿ ಕಾಣ ಸಿಗುತ್ತದೆ. ಕನ್ನಡ ಶಾಸನವೊಂದರಲ್ಲಿ ೧೬ ವಿಧದ ಸಂಸ್ಕಾರಗಳಲ್ಲಿ ಕೆಲವನ್ನು ಐಹೊಳೆಯ ಶಾಸನವೊಂದು ನಮಗೆ ಪರಿಚಯಿಸುತ್ತಿದೆ. ಅದಕ್ಕೂ ಮೊದಲು ಪುರಾಣಗಳನ್ನು ಮೆಲುಕು ಹಾಕಿದರೆ
ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ....
ಆಚಾರಃ ಪ್ರಥಮೋ ಧರ್ಮೋ ಹ್ಯಹಿಂಸಾ ಸತ್ಯಮೇವ ಚ |
ದಾನಂ ಚೈವ ಯಥಾಶಕ್ತಿ ನಿಯಮಾಶ್ಚ ಯಮೈಃ ಸಹ || ೯೦೩ ||
ಸದಾಚಾರ, ಅಹಿಂಸೆ, ಸತ್ಯನಿಷ್ಠೆ, ಯಥಾಶಕ್ತಿ ದಾನಮಾಡುವುದು, ಯಮ ನಿಯಮಾದಿಗಳ ಪಾಲನೆ ಇವು ಮುಖ್ಯಧರ್ಮಗಳಾಗಿವೆ.
ವೈದಿಕೈಃ ಕರ್ಮಭಿಃ ಪುಣ್ಯೈರ್ನಿಷೇಕಾದಿರ್ದ್ವಿಜನ್ಮನಾಮ್ |
ಕಾರ್ಯಃ ಶರೀರಸಂಸ್ಕಾರಃ ಪಾವನಃ ಪ್ರೇತ್ಯ ಚೇಹ ಚ || ೯೦೪ ||
ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಗರ್ಭಾಧಾನದಿಂದ ಹಿಡಿದು ಅಂತ್ಯೇಷ್ಟಿಯವರೆಗಿನ ಎಲ್ಲ ಕರ್ಮಗಳನ್ನೂ ವೇದೋಕ್ತವಾದ ವಿಧಿಮಂತ್ರಗಳಿಂದ ಮಾಡಬೇಕು. ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ವೇದವಿಹಿತವಾದ ಶರೀರಸಂಸ್ಕಾರವು ಮನುಷ್ಯನನ್ನು ಪಾವನಗೊಳಿಸುತ್ತದೆ.
ಗರ್ಭಹೋಮೈರ್ಜಾತಕರ್ಮನಾಮಚೌಲೋಪನಾಯನೈಃ |
ಸ್ವಾಧ್ಯಾಯೈಸ್ತದ್ವ್ರತೈಶ್ಚೈವ ವಿವಾಹಸ್ನಾತಕವ್ರತೈಃ |
ಮಹಾಯಜ್ಞೈಶ್ಚ ಯಜ್ಞೈಶ್ಚ ಬ್ರಾಹ್ಮೀಯಂ ಕ್ರಿಯತೇ ತನುಃ || ೯೦೫ ||
ಗರ್ಭದಲ್ಲಿರುವಾಗ ಮಾಡುವ ಪುಂಸವನ, ಸೀಮಂತಹೋಮಗಳು, ಜಾತಕರ್ಮ, ನಾಮಕರಣ, ಚೂಡಾಕರ್ಮ, ಉಪನಯನ, ವೇದಾಧ್ಯಯನ, ವೇದಮಂತ್ರಗಳು, ಸ್ನಾತಕವ್ರತ, ವಿವಾಹ, ಪಂಚಮಹಾಯಜ್ಞಗಳ ಅನುಷ್ಠಾನ ಮತ್ತು ಇತರ ಯಜ್ಞಾನುಷ್ಠಾನ, ಈ ಶುಭಕರ್ಮಗಳಿಂದ ಉಂಟಾದ ಸಂಸ್ಕಾರದಿಂದ ಕರ್ತೃವಿನ ಶರೀರವು ಪರಬ್ರಹ್ಮನನ್ನು ಹೊಂದಲು ಯೋಗ್ಯವಾಗುತ್ತದೆ.
ಷೋಡಶ ಸಂಸ್ಕಾರಗಳು: ಗರ್ಭಾಧಾನ, ಪುಂಸವನ, ಸೀಮಂತ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನ, ಪ್ರಾಜಾಪತ್ಯ, ಸೌಮ್ಯ, ಆಗ್ನೇಯ, ವೈಶ್ವದೇವ, ಗೋದಾನ, ಸಮಾವರ್ತನ, ವಿವಾಹ ಮತ್ತು ಅಂತ್ಯೇಷ್ಟಿ.
ಅಪರೂಪದಲ್ಲಿ ಅಪರೂಪದ ಮತ್ತು ಅಷ್ಟೇ ಸ್ಪಷ್ಟವಾಗಿ ಸಂಸ್ಕಾರಾದಿಗಳ ಕುರಿತಾಗಿ ನಮಗೆ ಕನ್ನಡ ಶಾಸನವೊಂದರಲ್ಲಿ ದಾಖಲೆ ಸಿಗುವುದು ಐಹೊಳೆಯ ಲಾಡಖಾನ್ ದೇವಾಲಯದ ಹೊರಗೋಡೆಯ ಮೇಲಿರುವ ಶಾಸನದಿಂದ. ಸುಮಾರು ೮ನೇ ಶತಮಾನದ ಅಂಚಿಗೆ ಸರಿಹೊಂದುವ ಈ ಶಾಸನದಲ್ಲಿ ದಾನವನ್ನು ಹೇಳುತ್ತಾ ಹೋಗಲಾಗಿದೆ.

೧. ಸ್ವಸ್ತಿ ಆರ್ಯ್ಯಜನ ಸಮುದಯೋದಿತ ವರಾರ್ಯ್ಯಪುರಾಧಿ
೨. ಷ್ಠಾನದಾ ಶ್ರೀ ಮಹಾಚಾತುರ್ವ್ವಿದ್ಯ ಸಮುದಯಮೈನೂರ್ವ್ವರ್ಕಂ
೩. ಬೆಣ್ಣಮ್ಮ ಸೋಮಯಾಜಿಗಳ ಕೊಟ್ಟ ದಾನಂ ಅನ್ನಪ್ರಾಶನಕ್ಕಂ
೪. ಪೂಸವಣಕ್ಕಂ ಚೌಲಕ್ಕಂ ಧರಣಕ್ಕಂ ಉಪನಯ[ನಕ್ಕಂ] ಸಮಾ
೫. ವರ್ತ್ತನಕ್ಕಂ ಗದ್ಯಣಂ ಮದುವೆಗಂ ಆಧಾನಕ್ಕಂ ಪಶು[ವಿ*]ಧಿಗ
೬. ಮೆರಡು ಗದ್ಯಣಂ ಚಾತುರ್ಮ್ಮಾಸ್ಯಕ್ಕೆ ಮೂಱು ಗ[ದ್ಯ]ಣಂ ಅಗ್ನಿ
೭. ಷ್ಟೋಮಕ್ಕೆ ವೆಂಟು ಗದ್ಯಣಂ ಅವಳಿ*ಮಿರ್ಪ್ಪವರ್ಗ್ಗೆ ಕೊಟ್ಟುದು
೧. ಅನ್ನಪ್ರಾಶನ: ಮಗುವಿಗೆ ಎಂಟನೆಯ ತಿಂಗಳಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಅನ್ನವನ್ನು ಉಣಿಸುವುದು (ಷಷ್ಠೇsನ್ನಪ್ರಾಶನಂ ಮಾಸಿ ಯದ್ವೇಷ್ಟಂ ಮಂಗಲಂ ಕುಲೇ | - ಮನುಸ್ಮೃತಿ 2:34
೨. ಪುಂಸವನ : ಸ್ತ್ರೀಯು ಗರ್ಭಧರಿಸಿರುವುದು ಸ್ಪಷ್ಟವಾಗಿ ತೋರಿದಾಗ ಮೂರನೆಯ ತಿಂಗಳಲ್ಲಿ ಪುತ್ರ ಸಂತಾನಾಪೇಕ್ಷೆಯಿಂದ ನಡೆಸಲಾಗುವ ಒಂದು ಸಂಸ್ಕಾರ (ಯಥಾಕ್ರಮಂ ಪುಂಸವನಾದಿಕಾಃ ಕ್ರಿಯಾಃ ಧೃತೇಶ್ಚ ಧೀರಃ ಸದೃಶೀರ್ವ್ಯಧತ್ತಸಃ | ರಘುವಂಶ ೩:೧೦).
೩. ಚೌಲ ಅಥವಾ ಚೂಡಾಕರ್ಮ : ಮಕ್ಕಳಿಗೆ ಮೂರು, ಐದು ಅಥವಾ ಏಳನೆಯ ವರ್ಷದಲ್ಲಿ ಶಿಖೆ ಸಹಿತವಾಗಿ ಕೇಶ ಕರ್ತನ ಮಾಡಿಸುವ ವಿಧಿ. ಹದಿನಾರು ಸಂಸ್ಕಾರಗಳಲ್ಲಿ ಒಂದು.
೪. ಜಾತಕರ್ಮ : ಮಗು ಹುಟ್ಟಿದ ನಂತರ ಹತ್ತನೆಯ ದಿನದಲ್ಲಿ ಮಾಡುವುದು ಜಾತಕರ್ಮ. ಬಂಗಾರದಿಂದ ಸೂಜಿಯಂತಹ ಕಡ್ಡಿಯನ್ನು ತಯಾರಿಸಿ ಅದರಿಂದ ಜೇನನ್ನು ಮಗುವಿಗೆ ತಿನ್ನಿಸುತ್ತಾರೆ. ಇದೇ ಸೂಜಿಯಿಂದಲೇ ಮುಂದೆ ಮಗುವಿಗೆ ಕಿವಿ ಚುಚ್ಚುತ್ತಾರೆ. ಕಿವಿ ಚುಚ್ಚುವುದು ಮಗುವಿನ ನೆನಪಿನ ಶಕ್ತಿ (ಧಾರಣಾಶಕ್ತಿ) ವರ್ಧಿಸಲಿ ಎಂದು. ಆದ್ದರಿಂದ ಕಿವಿ ಚುಚ್ಚುವುದನ್ನು ಧರಣಕ್ಕಂ (ಧಾರಣಕ್ಕಂ) ಎಂದು ಇಲ್ಲಿ E°è ಶಾಸನದ ನಾಲ್ಕನೇ ಸಾಲಿನಲ್ಲಿ ಹೇಳಲಾಗಿದೆ.
೫. ಉಪನಯನ : ಮಗುವು ಹುಟ್ಟಿದ (ಗರ್ಭಾಷ್ಟಮ) ೮ನೇ ವಯಸ್ಸಿಗೆ ಯಜ್ಞೋಪವೀತವನ್ನು ಹಾಕಿ ಗಾಯತ್ರೀ ಮಂತ್ರೋಪದೇಶದೊಡನೆ ಸೂರ್ಯಾರಾಧನೆ ಮಾಡಿಸುವ ಒಂದು ಸಂಸ್ಕಾರ. ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ವರ್ಣಗಳಿಗೆ ಹೇಳಿರುವ ಹದಿನಾರು ಸಂಸ್ಕಾರಗಳಲ್ಲಿ ಒಂದು.
೬. ಸಮಾವರ್ತನ: ಬ್ರಹ್ಮಚಾರಿಯು ವೇದಾಧ್ಯಯನದ ನಂತರ ಗುರುಕುಲದಿಂದ ಹೊರಬರುವ ಸಮಾರಂಭ. ಗೃಹಸ್ಥಾಶ್ರಮ ಸ್ವೀಕಾರಕ್ಕಾಗಿ ವಿವಾಹಕ್ಕೆ ಮೊದಲು ನಡೆಯುವ ಒಂದು ಸಂಸ್ಕಾರ.
೭. ವಿವಾಹ : ಷೋಡಶ ಸಂಸ್ಕಾರಗಳಲ್ಲಿ ಒಂದು. ಬ್ರಹ್ಮಚಾರಿಯು ಗೃಹಸ್ಥಾಶ್ರಮವನ್ನುಪ್ರವೇಶಿಸುವ ಸಂಸ್ಕಾರ.
೮. ಆಧಾನ: ಗೃಹಸ್ಥನಾದವನು ತ್ರೇತಾಗ್ನಿಗಳಲ್ಲಿ (ದಕ್ಷಿಣಾಗ್ನಿ, ಗಾರ್ಹ್ಯಪತ್ಯ ಮತ್ತು ಆಹವನೀಯ ಎಂಬ ಮೂರು ಅಗ್ನಿಗಳಲ್ಲಿ) ಅಗ್ನಿಕಾರ್ಯವನ್ನು ನೆರವೇರಿಸಲು ಅಗ್ನಿಯನ್ನು ಸಂಸ್ಕಾರ ಪೂರ್ವಕವಾಗಿ ಉತ್ಪನ್ನ ಮಾಡಿ ಪ್ರತಿಷ್ಠಿಸುವ ಕ್ರಮ.
೯. ಪಶುವಿಧಿ : ಯಜ್ಞಾಂಗ ಕ್ರಿಯೆಯಲ್ಲಿ ಪಶು ಅರ್ಪಣೆಗೆ ಸಂಬಂಧಿಸಿರುವ ವಿಧಾನ.
೧೦. ಚಾತುರ್ಮಾಸ್ಯ : ಆಷಾಢ ಶುಕ್ಲ ದ್ವಾದಶಿಯಿಂದ (ಗೃಹಸ್ಥರೂ), ಪೌರ್ಣಮಿಯಿಂದ (ಯತಿಗಳು) (ವರ್ಷ ಋತು), ನಾಲ್ಕು ತಿಂಗಳ ಕಾಲ ಕಾರ್ತಿಕ ದ್ವಾದಶಿಯ ತನಕ (ಗೃಹಸ್ಥರು), ಕಾರ್ತೀಕ/ಪೌರ್ಣಮಿಯವರೆಗೆ (ಯತಿಗಳು) ಆಚರಿಸುವ ಒಂದು ವ್ರತ. ಗೃಹಸ್ಥರು ಬ್ರಹ್ಮಚರ್ಯವನ್ನು ಪಾಲಿಸುತ್ತಾ ಈ ವ್ರತವನ್ನು ನಿರ್ವಹಿಸಬೇಕು. ಅಗ್ನಿಷ್ಟೋಮ, ದರ್ಶಪೂರ್ಣಮಾಸ, ಸೋಮಾದಿ ಯಾಗಗಳನ್ನು ಈ ವ್ರತದಲ್ಲಿ ಆಚರಿಸುತ್ತಾರೆ.
೧೧. ಅಗ್ನಿಷ್ಟೋಮ : ಅಗ್ನಿಯನ್ನು ಆರಾಧಿಸಲು ನಡೆಸುವ ಒಂದು ಯಜ್ಞ. ಇದನ್ನು ಜ್ಯೋತಿಷ್ಟೋಮ ಮುಂತಾದ ಯಜ್ಞಗಳ ಅಂಗವಾಗಿಯೂ ನಡೆಸುತ್ತಾರೆ.
ಈ ದಾನದ ಉದ್ದೇಶವು ಚತುರ್ವೇದ ವಿದರಾಗಿರುವ ವೈದಿಕರಿಗೆ ವೈದಿಕ ಸಂಸ್ಕಾರಗಳ ನಿರ್ವಹಣೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವುದು. ಆದ್ದರಿಂದ ಈ ಕುಟುಂಬಗಳಲ್ಲಿ ಐಕ್ಯತೆಯೂ ಮುಖ್ಯವಾದದ್ದು ಎಂಬುದಾಗಿ ದಾನ ಕೊಟ್ಟವರ ಆಶಯ ಸೂಚಿತವಾಗಿದೆ.

No comments:

Post a Comment