Search This Blog

Wednesday 13 June 2018

ವಾಮದೇವ ಮಹರ್ಷಿಯ - ಒಪ್ಪಂದ ಮುರಿಯಬಾರದೆನ್ನುವ ದಂಡಸಂಹಿತೆ.

ಗೌತಮನ ಮಗನಾದ ವಾಮದೇವ ಋಷಿಯ ಕುರಿತಾದ ಕಥೆಯೊಂದು ಋಗ್ವೇದ, ಅಥರ್ವವೇದ ಹಾಗೂ ಐತರೇಯ ಬ್ರಾಹ್ಮಣದಲ್ಲಿ ಬರುತ್ತದೆ. ಈತನ ಹುಟ್ಟಿನ ಕುರಿತಾಗಿ ಒಂದು ಕಥೆ ವೇದದಲ್ಲಿ ಹೀಗೆ ಬರುತ್ತದೆ. ಆತನ ತಾಯಿ ಗರ್ಭಧರಿಸಿದಾಗ ಈ ವಾಮದೇವ ತಾನು ಎಲ್ಲರಂತೆ ಸಹಜವಾಗಿ ಮಾತೃ ಯೋನಿಯಿಂದ ಜನಿಸುವುದಿಲ್ಲವೆಂದು ಹಠ ಹಿಡಿಯುತ್ತಾನೆ. ಆಗ ಆತನ ತಾಯಿ ಆಕೆಯ ಗೆಳತಿಯಾದ ಅದಿತಿಯಲ್ಲಿ ಆ ವಿಷಯವನ್ನು ಹೇಳುತ್ತಾಳೆ, ಅನೈಸರ್ಗಿಕವಾದ ಹುಟ್ಟು ಒಳ್ಲೆಯದಲ್ಲವೆಂದು ಪರಿ ಪರಿಯಾಗಿ ವಿನಂತಿಸುತ್ತಾಳೆ. ಆದರೆ ಗರ್ಭಸ್ಥ ವಾಮದೇವ ತಾನು ಯೋನಿಜನಾಗಲು ಸಾಧ್ಯವಿಲ್ಲವೆಂದು ಹಠ ಹಿಡಿದು ಕುಳಿತುಕೊಳ್ಳುತ್ತಾನೆ. ಅದಿತಿ ವಾಮದೇವನ ತಾಯಿಗೆ ಹಿತವನ್ನು ಬಯಸಿ ಇಂದ್ರನಲ್ಲಿ ಆತನನ್ನು ಸಂಹರಿಸುವಂತೆ ಕೇಳಿಕೊಳ್ಳುತ್ತಾಳೆ. ಇಂದ್ರ ಅದೇ ರೀತಿ ಆತ ಹೊರಬರುತ್ತಲೇ ಆತನೊಡನೆ ಹೋರಾಡುತ್ತಾನೆ ಹತ್ತು ದಿನ ಹಗಲೂ ಮತ್ತು ಹತ್ತುದಿನ ರಾತ್ರಿ ಹೋರಾಡುತ್ತಾನೆ. ವಾಮದೇವ ತಾನು ಹುಟ್ಟುತ್ತಲೇ ಅಧಿಕವಾದ ಶಕ್ತಿಯನ್ನು ಹೊಂದಿ ಇಂದ್ರನನ್ನೇ ಸೋಲಿಸಿಬಿಡುತ್ತಾನೆ. ಇದೇ ವಾಮದೇವ ಮುಂದೆ ಇಂದ್ರನ ಸಖನಾಗುತ್ತಾನೆ. ಇಂದ್ರನನ್ನೇ ಸ್ತುತಿಸಿ ಅವನ ಕೋಪವನ್ನು ಶಮನ ಗೊಳಿಸುತ್ತಾನೆ ಅದಿತಿಯನ್ನೂ ಸಹ ಇಂದ್ರನ ನಾನಾ ವಿಧವಾದ ಕಾರ್ಯಗಳನ್ನು ತಿಳಿಸಿ ಸಂತೈಸುತ್ತಾನೆ.
ಕ ಇಮಂ ದಶಭಿರ್ಮಮೇಂದ್ರಂ ಕ್ರೀಣಾತಿ ಧೇನುಭಿಃ |
ಯದಾ ವೃತ್ರಾಣಿ ಜಂಘನದೈಥನಂ ಮೇ ಪುನರ್ದದತ್ || ೧೦ ||
ಸ್ತುತಿಗಳಿಂದ ತನ್ನವನನ್ನಾಗಿಯೇ ಮಾಡಿಕೊಂಡ ಈ ಇಂದ್ರನನ್ನು ಪ್ರೀತಿಯಿಂದ ಹತ್ತು ವಿಧವಾದ ಸ್ತುತಿಗಳಿಂದ ಯಾವ ಭಕ್ತನು ಸಹಾಯಾರ್ಥವಾಗಿ ಕೊಂಡುಕೊಳ್ಳುವನೋ ಅಂತವನೊಂದಿಗೆ ನಾನು ಈ ರೀತಿ ಸಮಯದ ಒಪ್ಪಂದ ಮಾಡಿಕೊಳ್ಳುವೆನು. ಎನ್ನುವುದು ಈ ಋಕ್ಕಿನ ಸಾಮಾನ್ಯ ಆರ್ಥ.
"ಭೂಯಸಾ ವಚ್ನ ಮಚರತ್ ಕನೀಯೋ ವಿಕ್ರೀತೋ" ಎಂದು ನಾಲ್ಕನೇ ಮಂಡಲದಲ್ಲಿನ ಒಂದು ಋಕ್ಕಿನಲ್ಲಿ ಹೇಳಲ್ಪಟ್ಟಿದೆ. ಅಂದರೆ ಯಾರೇ ಆಗಲಿ ಒಬ್ಬ ಸಾಧಾರಣ ವ್ಯಕ್ತಿ ಅಥವಾ ವ್ಯಾಪಾರಸ್ಥನಾಗಿದ್ದರೂ ಸಹ ಇನ್ನೊಬ್ಬನಿಗೆ ಒಂದು ವಸ್ತುವನ್ನು ಮಾರುವನು . ವಸ್ತುವನ್ನು ಕೊಂಡುಕೊಳ್ಳುವ ಗ್ರಾಹಕನು ವಸ್ತುವಿನ ಮೌಲ್ಯದ ಕುರಿತಾಗಿ ಕೂಲಂಕುಷವಾಗಿ ಅದರ ಬೆಲೆಯನ್ನು ತಿಳಿದುಕೊಂಡು ನಿಷ್ಕರ್ಷೆ ಮಾಡಿ, ಮಾರುವವನು ಹೇಳಿದ ಬೆಲೆಯನ್ನು ತಾಳೆ ಮಾಡಿ ಕೊಂಡುಕೊಳ್ಳುವನು. ವಸ್ತುವನ್ನು ಮಾರಿದಾತನಿಗೆ ಸ್ವಲ್ಪಸಮಯದಲ್ಲಿ ತಾನು ಮಾರಿದ್ದು ಕಡಿಮೆ ಬೆಲೆಯಾಯಿತು ಎಂದು ಪುನಃ ಕೊಂಡಾತನಲ್ಲಿಗೆ ಹೋಗಿ ಅದಕ್ಕೆ ಅಷ್ಟು ಬೆಲೆಯಲ್ಲ ನಾನಗೆ ಅಧಿಕ ಮೌಲ್ಯ ಕೊಡು ಅಂತ ಕೇಳಿದಾಗ ಕೊಂಡಾತ ಸಾಧ್ಯವಿಲ್ಲ ಕೊಡುವಾಗಲೇ ನೀನು ಆಲೋಚಿಸಬೇಕಿತ್ತು ಎನ್ನುವನು ಆಗ ವ್ಯಾಪಾರ ಮಾಡಿದಾತ ನಾನು ಮಾರಿಯೇ ಇಲ್ಲ. ಆದುದರಿಂದ ಅದು ನನ್ನದೇ ಸ್ವತ್ತು ಎನ್ನುತ್ತಾನೆ. ಆಗ ತೆಗೆದುಕೊಂಡಾತ ಒಮ್ಮೆ ವ್ಯಾಪಾರದಲ್ಲಿಯಾಗಲೀ, ಯಾವುದೇ ಕಾರ್ಯದಲ್ಲಿಯಾಗಲೀ ಒಪ್ಪಂದವೇರ್ಪಟ್ಟರೆ ಅದನ್ನು ಮುರಿಯಲಾಗದು. ಆ ಒಪ್ಪಂದವೇ ಒಂದು ಸಮಯ ಎಂದು ಪ್ರತಿಪಾದಿಸುತ್ತಾನೆ. ಇಂತಹ ಸಮಯ ಅಥವಾ ಒಪ್ಪಂದವನ್ನು ಇಬ್ಬರೂ ಪಾಲಿಸಲೇ ಬೇಕು. ಯಾರೂ ಸಹ ಅತಿಕ್ರಮಿಸಲಾಗದು ಎನ್ನುತ್ತಾನೆ. ಒಪ್ಪಂದದ ಷರತ್ತನ್ನು ಅನುಭವಿಸಬೇಕು ಎನ್ನುವುದು ಈ ಋಕ್ಕಿನ ಅರ್ಥ.
ಒಮ್ಮೆ ಋಷಿಗಳೆಲ್ಲಾ ಸಭೆ ಸೇರಿ ಚರ್ಚಿಸುತ್ತಿದ್ದಾಗ, ಆ ಸಭೆಯಲ್ಲಿ ಇಂದ್ರನನ್ನು ಸ್ತುತಿಸಿ ತನ್ನ ಪರವಾಗಿರುವಂತೆ ಮಾಡಿಕೊಂಡನು.
ನಕಿರಿಂದ್ರ ತ್ವದುತ್ತರೋ ನ ಜ್ಯಾಯಾ ಅಸ್ತಿ ವೃತ್ರಹನ್ |
ನ ಕಿರೇವ ಯಥಾ ತ್ವಂ ||೧|| ಎಂದು ನಾಲ್ಕನೇ ಮಂಡಲದ ೩೦ನೇ ಋಕ್ಕಿನಲ್ಲಿ ಇಂದ್ರನನ್ನು ವಾಮದೇವ ಋಷಿ ಕೊಂಡಾಡುತ್ತಾನೆ. ಹೀಗೇ ಆತ ಸ್ತುತಿ ಕರ್ತನಾಗುತ್ತಾನೆ. ಇಲ್ಲಿ ಈ ಸ್ತುತಿಸುವುದೇ ಆ ಸಮಯದ ಕ್ರಾಯ ವಿಕ್ರಯವಾಗಿ ಪರಿಣಮಿಸುತ್ತದೆ. ಮೊದಲು ಸ್ತುತಿಸಿದ ವಾಮದೇವ ಋಷಿಯ ಯಾಗಕ್ಕೆ ಇಂದ್ರ ಹೋಗಲು ಒಪ್ಪಿಕೊಳ್ಳುತ್ತಾನೆ. ಆಗ ಉಳಿದ ಋಷಿಗಳೂ ಇನ್ನೂ ಹೆಚ್ಚಿನ ಸ್ತುತಿಗಳಿಂದ ಇಂದ್ರನನ್ನು ಕರೆಯುವರು ಆಗ ವಾಮದೇವನು ಮೊದಲು ಸ್ತುತಿಸಿದ ಸ್ತುತಿಕರ್ತನ ಜೊತೆ ಆದ ಒಪ್ಪಂದವನ್ನು ಮುರಿದರೆ ಅದು ಅಧರ್ಮವೆನ್ನಿಸುತ್ತದೆ ಆದುದರಿಂದ ಒಮ್ಮೆ ಮಾಡಿಕೊಂಡ ಒಪ್ಪಂದವನ್ನು ಮುರಿಯಬಾರದು ಎನ್ನುವುದಾಗಿ ವಾಮದೇವನು ಸಮರ್ಥಿಸುತ್ತಾನೆ.


ವಾಮದೇವನ ಕುರಿತಾಗಿ ರಾಮಾಯಣದಲ್ಲಿ ಹೆಚ್ಚಿನ ಕಡೆಗಳಲ್ಲಿ ಸಿಗುತ್ತದೆ. ಮಹಾಭಾರತದಲ್ಲಿಯೂ ಕೂಡಾ ಕಂಡು ಬರುತ್ತದೆ. ಮಹಾಭಾರತದ ವನಪರ್ವದಲ್ಲಿ ಆತ್ರೇಯ ಮಹರ್ಷಿ ಈತನ ಶಿಷ್ಯ ಎನ್ನುವ ಉಲ್ಲೇಖ ಸಿಗುತ್ತದೆ. ಮಹಾಭಾರತದ ಶಾಂತಿಪರವದಲ್ಲಿ ದಂದ ಸಂಹಿತೆಯ ಕುರಿತಾಗಿ ರಾಜನೊಬ್ಬನಲ್ಲಿ ಚರ್ಚಿಸಿದ್ದ ಎನ್ನುವುದು ತಿಳಿದು ಬರುತ್ತದೆ. ಶಂಕರಮೊಕಾಶಿ ಪುಣೇಕರರಂತೂ ತಮ್ಮ ಕಾದಂಬರಿ ಅವಧೇಶ್ವರಿಯಲ್ಲಿ ವಾಮದೇವ ಮಹರ್ಷಿಗಳನ್ನು ಹಿಡಿದಿಟ್ಟು ಅಮರುಕವನವನ್ನೇ ಸೃಷ್ಟಿಸಿದ್ದಾರೆ.

No comments:

Post a Comment