Search This Blog

Saturday 30 June 2018

ಸಲಿಲಂ ವರ್ಷಯ ವರ್ಷಯ ವರ್ಷಯ... ಎನ್ನುವ ಗುರುಗುಹ ನುತ ........



ವೇಂಕಟಮಖಿ ಈ ಹೆಸರು ಸಾಮಾನ್ಯವಾಗಿ ಸಂಗೀತಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕೀ ಸಂಗೀತ ಪ್ರಿಯರಿಗೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಈ ವೇಂಕಟಮುಖಿ ವಂಶದ ವೇಂಕಟವೈದ್ಯನಾಥ ದೀಕ್ಷಿತರು ಪ್ರಮುಖರು. ಅವರ ಮಗ ರಾಮಸ್ವಾಮಿ ದೀಕ್ಷಿತರು. ಇವರೆಲ್ಲರೂ ಸಂಗೀತವನ್ನೇ ಉಸಿರಾಗಿ ಹಿಡಿದುಕೊಂಡು ಬಂದವರಾಗಿದ್ದರು. ೧೭೭೫ನೇ ಇಸವಿಯಲ್ಲಿ ಈ ವಂಶದಲ್ಲಿ ಅನರ್ಘ್ಯ ರತ್ನವೊಂದರ ಜನನವಾಗುತ್ತದೆ. ಸಾಕ್ಷಾತ್ ಸರಸ್ವತಿಯಂತಿದ್ದ ಸುಬ್ಬಲಕ್ಷ್ಮಿ ಅಮ್ಮಾಳ್ ಅವರು ರಾಮಸ್ವಾಮಿ ದೀಕ್ಷಿತರ ಮಡದಿ ಇವರ ಪುತ್ರನೇ ಈಗ ನಾನು ಹೇಳ ಹೊರಟಿರುವ ಮುತ್ತುಸ್ವಾಮಿ ದೀಕ್ಷಿತರು. ಹೌದು ವಾತಾಪಿ ಗಣಪತಿಂ ಭಜೇ ಹಂ ಎನ್ನುವ ಹಾಡನ್ನು ಕೇಳದವರ್ಯಾರು. ? ಅಷ್ಟರ ಮಟ್ಟಿಗೆ ಅವರು ಪ್ರಸಿದ್ಧರಾಗಿದ್ದರು.
ರಾಮಸ್ವಾಮಿ ದೀಕ್ಷಿತರ ಊರು ತಿರುವಾರೂರು. ರಾಮ ಸ್ವಾಮಿ ದೀಕ್ಷೀತರು ತಿರುವಾವೂರಿನಿಂದ ಮನಾಲಿಗೆ ತಮ್ಮ ವಾಸ್ತವ್ಯ ಬದಲಿಸುತ್ತಾರೆ. ಅಲ್ಲಿಂದ ಚಿದಂಬರನಾಥಯೋಗಿಗಳೆಂಬವರು ಬಾಲಕ ಮುತ್ತು ಸ್ವಾಮಿಯನ್ನು ಕಾಶಿಗೆ ಕರೆದುಕೊಂಡು ಹೋಗುತ್ತಾರೆ. ಕಾಶಿಯಲ್ಲಿ ಆರುವರ್ಷ ಉಳಿಯುತ್ತಾರೆ ಅಲ್ಲಿ ಶ್ರೀವಿದ್ಯಾ ಉಪಾಸನೆಯಲ್ಲದೇ ವೇದ ಮತ್ತು ವೇದಾಂಗದೊಂದಿಗೆ ಯೋಗಾಭ್ಯಾಸ ಮಾಡುತ್ತಾರೆ. ಹಾಗೂ ಇವಿಷ್ಟಲ್ಲದೆ ಹಿಂದುಸ್ಥಾನಿ ಸಂಗೀತದ ಪರಿಚಯವೂ ಆಗುತ್ತದೆ. ಹಲವು ಹಿಂದುಸ್ಥಾನಿ ಸಂಗೀತ ರಾಗಗಳನ್ನು ಕರ್ನಾಟಕ ಸಂಗೀತದ ಚೌಕಟ್ಟಿನೊಳಗೆ ಸೇರಿಸಿ ಕೃತಿಗಳ ರಚನೆ ಮಾಡಿದರು. ಶ್ರೀರಂಗಪುರವಿಹಾರ, ಅಖಿಲಾಂಡೇಶ್ವರಿಯೇ ಮೊದಲಾದ ರಚನೆ ಇವರದ್ದೇ.
ಚಿದಂಬರನಾಥ ಯೋಗಿಯವರಿ ನಿರ್ಯಾಣವಾದ ನಂತರ ತಮ್ಮ ಸ್ವಕ್ಷೇತ್ರ ತಿರುತ್ತಣಿ ಎನ್ನುವಲ್ಲಿಗೆ ಹೋಗಿ ಅಲ್ಲಿ ಸುಬ್ರಹ್ಮಣ್ಯನ ಸೇವೆಯಲ್ಲಿ ತೊಡಗುತ್ತಾರೆ. ಒಂದು ದಿನ ಸುಬ್ರಹ್ಮಣ್ಯನೇ ವೃದ್ಧನ ರೂಪದಲ್ಲಿ ಬಂದು ದೀಕ್ಷಿತರ ಬಾಯಿಗೆ ಕಲ್ಲು ಸಕ್ಕರೆ ಹಾಕುತ್ತಾನೆ. ಅಲ್ಲಿಂದ ಸಂಗೀತದ ಕೃತಿಗಳ ರಚನೆಗೆ ತೊಡಗಿಕೊಳ್ಳುತ್ತಾರೆ. ಮಾಯಾಮಾಳವ ರಾಗದ "ಶ್ರೀನಾಥಾದಿಗುರುಗುಹೋಜಯತಿ" ಎನ್ನುವ ಕೃತಿಯನ್ನು ಮೊತ್ತಮೊದಲಿಗೆ ರಚಿಸುತ್ತಾರೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸಂಗೀತದ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದ ಹೆಗ್ಗಳಿಕೆ ದೀಕ್ಷಿತರಿಗೆ ಸಲ್ಲುತ್ತಾದೆ. ಈ ವಾಗ್ಗೇಯಕಾರರು ಸುಮಾರು ೩೦೦ರಷ್ಟು ಸಂಸ್ಕೃತ ಕೃತಿಗಳನ್ನು ನಮಗೆ ನೀಡಿದ್ದಾರೆ. ಐದು ರಾಗಮಾಲಿಕೆ. ಒಂದು ಪದವರ್ಣ ಮತ್ತು ಒಂದು ದರು ರಚಿಸಿದ ದೀಕ್ಷಿತರು ಮಣಿಪ್ರವಾಳದ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ. ಇವರ ಸಂಸ್ಕೃತ ವಾಗ್ಮಯವೇ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ.
ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತಂತೆ. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದಲೇ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರ ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷವಾಗಿ ಕಾಣಿಸುತ್ತದೆ. ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ. ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ.
ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆನ್ನುತ್ತಾರೆ. ಇವರ ಇನ್ನೊಂದು ವಿಶೇಷವೆಂದರೆ ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ಕೃತಿಗಳನ್ನು ರಚಿಸಿರುವುದು. ದೀಕ್ಷೀತರ ಈ ಕೃತಿಯಂತೂ ನನಗೆ ಹುಚ್ಚು ಹಿಡಿಸಿದೆ. ಸಾಹಿತ್ಯ ಮತ್ತು ಶೈಲಿ ಅತ್ಯಮೋಘ.
ಇದರ ರಾಗ : ಅಮೃತವರ್ಷಿಣಿ; ಆದಿತಾಳದಲ್ಲಿದೆ.
ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||
ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದಯೇ ಸತ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||
ತಮ್ಮ ಶಿಷ್ಯನೊಬ್ಬನ ಉದರ ಸಂಬಂಧಿ ನೋವನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು ಮತ್ತು ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.
ದೀಕ್ಷಿತರು ಎಟ್ಟಿಯಾಪುರದಲ್ಲಿದ್ದಾಗ ಆಶ್ವಯುಜಮಾಸದ ದೀಪವಾಳಿಯ ಹಿಂದಿನ ದಿನ ನರಕ ಚತುರ್ದಶಿಯ ದಿನ ಕಾಶಿಯ ಅನ್ನಪೂರಣೇಶ್ವರಿಯ ಸ್ವರೂಪವನ್ನು ಕಾಣುತ್ತಾರೆ. ತಮ್ಮ ಅಂತಿಮ ಕಾಲ ಬಂತೆನ್ನುವುದು ಅವರ ಮನಸ್ಸಿಗೆ ಗೋಚರವಾಗಿ ತಮ್ಮ ಶಿಷ್ಯರಲ್ಲಿ "ಮೀನಾಕ್ಷಿ ಮೇ ಮುದಂ ದೇಹಿ" ಎನ್ನುವ ಕೃತಿಯ ಅನುಪಲ್ಲವಿಯ ಭಾಗವಾದ "ಮೀನಲೋಚನಿ ಪಾಶಮೋಚನೀ" ಎನ್ನುವ ಭಾಗವನ್ನು ಹೇಳುತ್ತಿರುವಾಗಲೇ ಜೀವನ್ಮುಕ್ತರಾದರು.
ದೀಕ್ಷಿತರ ಈ ರಚನೆ ಮೊದಲು ಎಂ ಎಲ್ ವಸಂತಕುಮಾರಿಯವರ ಕಂಠದಲ್ಲಿ. ಆ ನಂತರ ಈ ಗಾಯಕರು. ಶ್ರೀ ವಲ್ಸನ್ ಜೆ ಮೆನನ್ ರವರ ಕಂಠದಲ್ಲಿ. ನನಗೆ ತುಂಬಾ ಇಷ್ಟವಾಯಿತು.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment