Search This Blog

Friday 1 June 2018

ಲಿಪಿಯ ಪಿತಾಮಹ ಅಶೋಕ


ನಿನ್ನೆ ನಾನು ಚಪಡನ ಕುರಿತಾಗಿ ಬರೆದೆ ಚಪಡ ನಮ್ಮ ದಕ್ಷಿಣದ ಜನರಿಗೆ ಶಿಲಾಶಾಸನಗಳ ಮೂಲಕ ಲಿಪಿಯನ್ನು ಪರಿಚಯಿಸಿದುದರ ಕುರಿತು ಬರೆದಿದ್ದೆ. ನಮ್ಮ ಇತಿಹಾಸದಲ್ಲಿ ಶಾಸನಗಳ ಅಂದರೆ ಘಟಿತ ಘಟನೆಗಳ ದಾಖಲಾತಿ ಆರಂಭವಾಗುವುದೇ ಅಶೋಕನಿಂದ ಅವನ ಕಾಲದಿಂದ. ಅದಕ್ಕೂ ಹಿಂದೆ ಇತ್ತೋ ಇಲ್ಲವೋ ಅದನ್ನು ಗಮನಿಸಿಲ್ಲ. ಅಥವಾ ಬೇಡ. ಅದೇನೇ ಇರಲಿ ಒಮ್ಮಿಂದೊಮ್ಮೆಲೇ ಒಂದು ಪ್ರಕ್ರಿಯೆ ಆರಂಭವಾಗಿರಲಿಕ್ಕಿಲ್ಲ. ಕ್ರಮೇಣ ಬೆಳೆದು ಬಂದಿರಬೇಕು. ಲಿಪಿಯ ಪರಿಚಯ ಮತ್ತು ಅದನ್ನು ಶಿಲಾಲೇಖಗಳನ್ನಾಗಿ ಪರಿವರ್ತಿಸುವ ಕೆಲಸ ಮೊದಲೇ ಆರಂಭವಾಗಿರಲೇ ಬೇಕು. ಆದರೆ ನಮಗದು ಸಿಕ್ಕಿರಲಿಕ್ಕಿಲ್ಲ. ಅಥವಾ ಅಶೋಕನ ಕಾಲದ ನಿಷ್ಠುರ ನಡವಳಿಕೆಯಲ್ಲಿ ಹಿಂದಿನದೆಲ್ಲವೂ ನಾಶವಾಗಿರಲೂ ಬಹುದು. "ಧರ್ಮದಿಂದ ಕುರುಡಾಗಿರುವಾಗ ಮತ್ತು ತನ್ನ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುವ ಯಾರೇ ಆದರೂ ಅನ್ಯರ ಏಳಿಗೆಯನ್ನು ಬಯಸುವವರಲ್ಲ" ಹಾಗಿರುವಾಗ ಇವೆಲ್ಲ ಸಹಜವೇ. ಅದೇನೇ ಇರಲಿ ಆದರೆ ಶಾಸನಗಳ ಮಾಧ್ಯಮ ಇದ್ದಿರಬೇಕು ಅಂತ ನನಗನ್ನಿಸುತ್ತದೆ. ಅಥವಾ ಲಿಪಿ ಮಾಧ್ಯಮವಂತೂ ಇದ್ದಿರಬೇಕು. ಇಲ್ಲವಾದರೆ ಬರೆದದ್ದನ್ನು ಓದುವವರು ಬೇಕಿತ್ತು. ಕೆಲವು ದಾಖಲೆಗಳ ಪ್ರಕಾರ ವರ್ಷಕ್ಕೊಮ್ಮೆ "ತಿಸ್ಸ" - ಪುಷ್ಯ ನಕ್ಷತ್ರದಂದು ಎಲ್ಲಾ ಜನ ಸೇರುವಲ್ಲಿ ಈ ಶಾಸನಗಳ ಪಾಠವನ್ನು ಓದು ಹೇಳಲಾಗುತ್ತಿತ್ತಂತೆ. ಆದರೆ ಅದು ವರ್ಷವಲ್ಲ ತಿಂಗಳಿಗೊಮ್ಮೆ ಅನ್ನುವ ವಾದವೂ ಇತ್ತೀಚೆಗೆ ಕೇಳಿದ್ದೆ. ಅದೇನೇ ಇರಲಿ. ದೂರದ ಗಾಂಧಾರದ ಶಿಲ್ಪಿಯೊಬ್ಬನನ್ನು ಕರೆಸಿ ಇಲ್ಲಿ ಹೆಬ್ಬಂಡೆ ಮತ್ತು ಕಿರು ಬಂಡೆ ಶಾಸನಗಳನ್ನು ಬರೆಸ ಬೇಕಿದ್ದರೆ ಲಿಪಿ ಗೊತ್ತಿದ್ದ ಸಮಾಜವೂ ಇದ್ದಿರಲೇ ಬೇಕು. ಶಾಸನಗಳೂ ಇದ್ದಿರಬೇಕು. ಇದಕ್ಕೆ ಹಲವಾರು ಉದಾಹರಣೆಗಳು ನಿದರ್ಶನಗಳಿದ್ದರೂ ಅವು ಬೇಡ ಅನ್ನಿಸಿ ಬಿಡುತ್ತದೆ.
ಅಶೋಕನನ್ನು ನಾವು ಗುರುತಿಸುವಾಗ ಅವನು ಬೌದ್ಧಧರ್ಮಕ್ಕೆ ಬದ್ಧನಾಗಿದ್ದು ಶಾಂತಿ ಮತ್ತು ಅಹಿಂಸಾ ಸಂದೇಶದ ದೊಡ್ಡ ಪ್ರತಿಪಾದಕನಾಗಿದ್ದನ್ನು ಗುರುತಿಸಿ ಬಿಡುತ್ತೇವೆ, ಆದರೆ ಶಾಂತಿ ಮತ್ತು ಅಹಿಂಸೆಗಿಂತಲೂ ಮುಖ್ಯವಾದದ್ದು ಆತನು ನಮಗೆ ನೀಡಿರುವ ಲಿಪಿಯ ಕೊಡುಗೆ. ಅಶೋಕ ಕಟ್ಟಿದ ಸಾಮ್ರಾಜ್ಯ ಒಂದು ಶತಮಾನದೊಳಗೆ ಕುಸಿದು ಬೀಳುತ್ತದೆ. ಅವನು ಪ್ರಸಾರ ಮಾಡಿದ ಧರ್ಮ ನಮ್ಮ ನೆಲದಲ್ಲಿ ನೆಲೆ ಕಾಣಲೇ ಇಲ್ಲ. ಆದರೆ ಅವನು ಕೊಟ್ಟ ಅಕ್ಷರಗಳು ಅಜರಾಮರವಾಗಿ ಉಳಿದು ವಿಕಾಸಗೊಳ್ಳುತ್ತಲೇ ನಡೆದಿವೆ. ಮೌರ್ಯರಾಜ್ಯದ ವಾಯವ್ಯ ಭಾಗದ ಕೆಲವೆಡೆ ಪ್ರಸಾರದಲ್ಲಿದ್ದ ಗ್ರೀಕ್ ಮತ್ತು ಅರಾಮೈಕ್, ಮತ್ತು ಖರೋಷ್ಠೀ ಲಿಪಿಗಳನ್ನು ಅವಲೋಕಿಸಿ, ಕೆಲವೊಮ್ಮೆ ಅವನ್ನು ಪ್ರಯೋಗಿಸಿ, ಕೊನೆಗೆ ಬ್ರಾಹ್ಮೀಯನ್ನು ಲಿಪಿಯನ್ನಾಗಿಸಿಕೊಂಡು ಸಾರ್ವತ್ರಿಕವಾಗಿ ಆ ಲಿಪಿಯನ್ನು ಬಳಕೆಗೆ ತರುವಲ್ಲಿ ಅವನ ಪರಿಶ್ರಮ ಇದೆ. ಆದರೆ ಅವನಿಗೆ ಲಿಪಿ ಗೊತ್ತಿತ್ತೇ ? ಅದು ಇಂದು ಊಹಿಸುವುದು ಕಷ್ಟವೆನ್ನಿಸುತ್ತದೆ. ಆದರೆ ಅಶೋಕ ಆ ಕಾಲದಲ್ಲಿ ಛಂದೋಬದ್ದವಾದ ಸಂಸ್ಕೃತವಿದ್ದರೂ ಅದನ್ನು ತ್ಯಜಿಸಿ ಪ್ರಾಕೃತ ಬ್ರಾಹ್ಮಿಯನ್ನು ಆಯ್ದುಕೊಂಡದ್ದರ ಹಿಂದಿನ ಉದ್ದೇಶ? ನಾವೀಗ ಸುಲಭವಾಗಿ ಹೇಳುವುದು ಪ್ರಾಕೃತ ಕೇವಲ ಒಂದು ವರ್ಗದ ಭಾಷೆಯಾಗಿರಲಿಲ್ಲ ಅದು ಗ್ರಾಮೀಣರೂ ಸಹ ಯಾವುದೇ ವ್ಯಾಕರಣದ ಕಟ್ಟುಪಾಡುಗಳಿಲ್ಲದೇ ಉಪಯೋಗಿಸುತ್ತಿದ್ದ ಭಾಷೆ ಎನ್ನುವ ಸಮಜಾಯಿಷಿ ಅಷ್ಟೆ.
ಅಶೋಕನಿಗೂ ಪೂರ್ವದಲ್ಲಿ ಲಿಪಿಗಳ ಪರಿಚಯವಿತ್ತು ಆದರೆ ಲಿಪಿಯ ಬಳಕೆಗೆ ನಿಷೇಧವಿತ್ತು ಯಾಕೆಂದರೆ ಆಗಿದ್ದದ್ದು ವೈದಿಕ ಮತ ಎನ್ನುವ ವಾದವಿದೆ. ಹೌದು ವೈದಿಕಧರ್ಮವಿತ್ತು ಆಚರಣೆಯಲ್ಲೂ ಇತ್ತು ಉಚ್ಚ್ರಾಯವಾಗಿಯೂ ಇತ್ತು. ಆದರೆ ಲಿಪಿಗೆ ವಿರೋಧವಿದ್ದಿಲ್ಲ ಕಲೆಗೆ ವಿರೋಧವಿದ್ದಿಲ್ಲ. ನಮ್ಮ ಸಂಸ್ಕೃತಿ ವಿಚಾರ ವಿಮರ್ಶೆಗಳು ನಡೆಯುತ್ತಿದ್ದವು. ಇಲ್ಲವೆಂದರೆ ದಿಡೀರನೇ ಅಶೋಕನ ಕಾಲಕ್ಕೆ ಲಿಪಿಕಾರರು ಹುಟ್ಟಿಕೊಳ್ಳುತ್ತಿರಲಿಲ್ಲ. ಆದರೆ ಇದನ್ನು ವಿಮರ್ಶಿಸುವ ಮನಸ್ಸಿನವರಿರದೇ ಇದ್ದುದು ನಮ್ಮ ದೌರ್ಭಾಗ್ಯ. ಆದರೆ ಅಶೋಕನ ನಂತರ ಪ್ರಾಕೃತವೂ ನೆಲಕಚ್ಚಿತು. ಪ್ರಾಕೃತವೇ ಉಳಿದುಕೊಂಡಿದ್ದರೆ ಸುಂದರ ನುಡಿಮುತ್ತುಗಳ ಪ್ರಚಂಡ ಶಾಸನಗಳು ಸಿಗುತ್ತಲೇ ಇರಲಿಲ್ಲ. ಕಾವ್ಯಾತ್ಮಕ ಶಾಸನಗಳು ಸಿಗುತ್ತಲೇ ಇರಲಿಲ್ಲ.
ಅಲಹಾಬಾದ್ ಶಾಸನದಲ್ಲಿನ "ಸರ್ವ ಕರದಾನಾಜ್ಞಾಕರಣ ಪ್ರಣಾಮಾಗಮನ ಪರಿತೋಷಿತ ಪ್ರಚಂಡ ಶಾಸನಸ್ಯ  ಅನೇಕ ಭ್ರಷ್ಟ ರಾಜ್ಯೋತ್ಸನ್ನ ರಾಜವಂಶ ಪ್ರತಿಷ್ಠಾಪನೋದ್ಭೂತ ನಿಖಿಲ ಭುವನ ವಿಚಾರಣ ಶ್ರಾಂತ ಯಶಸಃ |" ಇಂತಹ ಸಾಲುಗಳು ಸಿಗುತ್ತಲೇ ಇರಲಿಲ್ಲ. ಆದರೂ ಅಶೋಕನೊಬ್ಬ ಹುಟ್ಟದೇ ಇದ್ದಿದ್ದರೆ ಅಥವಾ ಆತ ಧರ್ಮದ ಅನುಯಾಯಿ ಆಗದೇ ಇದ್ದಿದ್ದರೆ ಖಂಡಿತಾ ದಕ್ಷಿಣದಲ್ಲಿನ ಲಿಪಿ ಇತಿಹಾಸ ಅಥವಾ ಶಾಸನಗಳಲ್ಲಿನ ದಾಖಲೀಕರಣ ಇನ್ನೂ ವಿಳಂಬವಾಗುತ್ತಿತ್ತು. ನಮಗೆಲ್ಲಾ ಎರಡು ಸಾವಿರದಷ್ಟು ಮೊದಲೇ ಸಾಹಿತ್ಯದ ಅಭಿರುಚಿ ಹುಟ್ಟಿಸಿದವನೆಂದರೆ ತಪ್ಪಾಗಲಿಕ್ಕಿಲ್ಲ.
ಆದರೆ ಅಶೋಕನ ನಂತರ ಬಂದ ಯಾವುದೇ ರಾಜರೂ ಸಹ ಅವನಷ್ಟು ಕಠಿಣರಾಗಿರಲಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಕೆಲವರಂತೂ ಕಲಾವಿದರಿಗೆ ಸಾಹಿತಿಗಳಿಗೆ ಯಥೇಚ್ಚ ಸ್ವಾತಂತ್ರ್ಯ ಕೊಟ್ಟಿದ್ದಾರೆ.

No comments:

Post a Comment